ವಿಕಾಸವೇ? ವಿನ್ಯಾಸವೇ?
ಬಾರ್ನಕಲ್ಗಳ ಅಂಟು
ಬಾರ್ನಕಲ್ಗಳು (ಚಿಪ್ಪುಜೀವಿ) ಕಲ್ಲುಗಳ ಮೇಲೆ, ಸಮುದ್ರ ತೀರದಲ್ಲಿರುವ ಸೇತುವೆಗಳಲ್ಲಿ ಮತ್ತು ಹಡಗುಗಳ ತಳಭಾಗದಲ್ಲಿ ಅಂಟಿಕೊಳ್ಳುತ್ತವೆ. ಅವಕ್ಕಿರುವ ಈ ಸಾಮರ್ಥ್ಯದ ಬಗ್ಗೆ ಅನೇಕ ವರ್ಷಗಳಿಂದ ಪ್ರಾಣಿ ಶಾಸ್ತ್ರಜ್ಞರಿಗೆ ಪ್ರಶ್ನೆ ಇತ್ತು. ಈ ಬಾರ್ನಕಲ್ಗಳ ಅಂಟು ಮನುಷ್ಯರು ತಯಾರಿಸಿರುವ ಯಾವುದೇ ಕೃತಕ ಅಂಟುಗಳಿಗಿಂತ ಎಷ್ಟೋ ಉತ್ತಮ ಗುಣಮಟ್ಟದ್ದಾಗಿದೆ. ಒದ್ದೆಯಾಗಿರೋ ವಸ್ತುಗಳ ಮೇಲೂ ಬಾರ್ನಕಲ್ಗಳು ಹೇಗೆ ಅಂಟಿಕೊಳ್ಳುತ್ತವೆ ಅನ್ನೋ ರಹಸ್ಯ ಇತ್ತೀಚೆಗಷ್ಟೇ ಬೆಳಕಿಗೆ ಬಂತು.
ಪರಿಗಣಿಸಿ: ಸಂಶೋಧನೆಗಳು ತಿಳಿಸುವಂತೆ, ಬಾರ್ನಕಲ್ನ ಲಾರ್ವಗಳು (ಮರಿಗಳು) ಈಜುವಷ್ಟು ದೊಡ್ಡದಾದ ಮೇಲೆ ಅಂಟಿಕೊಳ್ಳುವುದಕ್ಕೆ ಸೂಕ್ತ ಜಾಗವನ್ನು ಹುಡುಕುತ್ತವೆ. ಅವಕ್ಕೆ ಒಳ್ಳೇ ಜಾಗ ಸಿಕ್ಕಿದ ಮೇಲೆ ಎರಡು ಪದಾರ್ಥಗಳನ್ನು ಆ ಜಾಗದಲ್ಲಿ ಸ್ರವಿಸುತ್ತವೆ. ಮೊದಲು ಎಣ್ಣೆ-ಎಣ್ಣೆ ತರ ಇರುವ ದ್ರವವನ್ನು ಸ್ರವಿಸುತ್ತವೆ. ಈ ದ್ರವ ಆ ಜಾಗದಲ್ಲಿರುವ ನೀರನ್ನೆಲ್ಲಾ ತೆಗೆದು ಬಿಡುತ್ತದೆ. ಅಷ್ಟೇ ಅಲ್ಲ, ಎರಡನೇ ಪದಾರ್ಥ ಆ ಜಾಗಕ್ಕೆ ಅಂಟಿಕೊಳ್ಳುವಂಥ ವ್ಯವಸ್ಥೆಯನ್ನೂ ಈ ದ್ರವ ಮಾಡಿಕೊಡುತ್ತೆ. ಈ ಎರಡನೇ ಪದಾರ್ಥ ಪ್ರೊಟೀನ್ನಿಂದ ಕೂಡಿರುವಂಥದ್ದಾಗಿದೆ. ಇದನ್ನು ಫಾಸ್ಫೋಪ್ರೊಟೀನ್ ಎನ್ನುತ್ತಾರೆ.
ಈ ಎರಡೂ ಪದಾರ್ಥಗಳು ಸೇರಿ ಒಂದು ಗಟ್ಟಿಯಾದ ಅಂಟಿನ ಬಿಲ್ಲೆಯನ್ನು ರಚಿಸುತ್ತವೆ. ಈ ಬಿಲ್ಲೆ ಎಷ್ಟು ಗಟ್ಟಿಯಾಗಿ ಅಂಟಿಕೊಂಡಿರುತ್ತೆ ಅಂದರೆ ಬ್ಯಾಕ್ಟೀರಿಯಾಗಳಿಗೂ ಅದನ್ನು ತೆಗೆಯೋಕಾಗಲ್ಲ. ಬಾರ್ನಕಲ್ಗಳು ಜೀವನ ಪೂರ್ತಿ ಆ ಜಾಗದಲ್ಲೇ ಇರಬೇಕಾಗಿರೋದರಿಂದ ಅಷ್ಟು ಗಟ್ಟಿಯಾಗಿ ಅಂಟಿಕೊಳ್ಳೋದು ಅವುಗಳಿಗೆ ತುಂಬ ಮುಖ್ಯ.
ಈ ಬಾರ್ನಕಲ್ಗಳು ಅಂಟನ್ನು ತಯಾರಿಸುವ ವಿಧಾನ ತಾವು ಮುಂಚೆ ಅಂದುಕೊಂಡಷ್ಟು ಸುಲಭ ಆಗಿಲ್ಲ ಅಂತ ವಿಜ್ಞಾನಿಗಳು ಅರ್ಥಮಾಡಿಕೊಂಡರು. ಈ ವಿಧಾನವನ್ನು ಕಂಡುಹಿಡಿದ ತಂಡದಲ್ಲಿರುವ ಒಬ್ಬರು ಹೀಗೆ ಹೇಳಿದರು: “ನೀರಿರುವಂಥ ಜಾಗದಲ್ಲೂ ಅಂಟನ್ನು ತಯಾರಿಸುವ ವಿಧಾನ ಇದೆಯಲ್ಲಾ, ಅದು ಪ್ರಕೃತಿಯಲ್ಲಿರುವ ಒಂದು ಅದ್ಭುತ ಅಂತನೇ ಹೇಳಬಹುದು.” ಈ ವಿಧಾನವು ಸಂಶೋಧಕರಿಗೆ, ನೀರಿನೊಳಗಡೆ ಬಳಸುವ ಅಂಟನ್ನು ತಯಾರಿಸಲು ಸಹಾಯ ಮಾಡಬಹುದು. ಎಲೆಕ್ಟ್ರಾನಿಕ್ ವಸ್ತುಗಳನ್ನು ಜೋಡಿಸಲಿಕ್ಕಾಗಿ, ಮೆಡಿಕಲ್ ಇಂಪ್ಲ್ಯಾಂಟ್ಗಳಿಗಾಗಿ (ದೇಹದಲ್ಲಿ ಅಳವಡಿಸುವ ಉಪಕರಣಗಳಿಗಾಗಿ) ಬಳಸುವ ನೈಸರ್ಗಿಕ (ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಮಾತ್ರ ಉಪಯೋಗಿಸಿ) ಅಂಟನ್ನು ತಯಾರಿಸಲು ಸಂಶೋಧಕರಿಗೆ ಸಹಾಯ ಮಾಡಬಹುದು.
ನೀವೇನು ನೆನಸುತ್ತೀರಿ? ಬಾರ್ನಕಲ್ಗಿರುವ ಅಂಟುವ ಸಾಮರ್ಥ್ಯ ವಿಕಾಸವಾಗಿ ಬಂತಾ ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ?