ಚೆನ್ನಾಗಿ ಗಮನ ಕೊಡೋದು ಹೇಗೆ?
ಯುವ ಜನರ ಪ್ರಶ್ನೆಗಳು
ಯಾಕೆ ಗಮನ ಕೊಡಕಾಗಲ್ಲ?
“ಮುಂಚೆ ನಾನು ತುಂಬ ಬುಕ್ಸ್ ಓದ್ತಿದ್ದೆ. ಆದ್ರೆ ಈಗ ಪ್ಯಾರಗ್ರಾಫ್ ಸ್ವಲ್ಪ ದೊಡ್ಡದಿದ್ರೂ ಓದೋಕೆ ಕಷ್ಟ.”—ಈಲೇನ್.
“ವಿಡಿಯೋ ನಿಧಾನವಾಗಿದೆ ಅಂತ ಅನ್ಸಿದ್ರೆ ಅದನ್ನ ಪೂರ್ತಿ ನೋಡ್ದೆ ತುಂಬ ಬೇಗ ಬೇಗ ನೋಡ್ತೀನಿ.”—ಮೀರಾಂಡ.
“ಮುಖ್ಯವಾದ ಕೆಲ್ಸ ಮಾಡ್ತಿದ್ದಾಗ ನನ್ನ ಫೋನ್ ಏನಾದ್ರೂ ಆಫ್ ಆಗ್ಬಿಟ್ರೆ ನನ್ನ ಯೋಚ್ನೆ ಪೂರ್ತಿ ‘ನನ್ಗೆ ಯಾರು ಮೆಸೇಜ್ ಮಾಡ್ತಿರ್ತಾರೆ?’ ಅನ್ನೋದ್ರ ಬಗ್ಗೆನೇ ಇರುತ್ತೆ.”—ಜೇನ್.
ಗಮನ ಕೊಡೋದಿಕ್ಕೆ ಕಷ್ಟ ಆಗ್ತಿರೋದು ಇವತ್ತಿನ ತಂತ್ರಜ್ಞಾನದಿಂದನಾ? ಕೆಲವರು ಇದನ್ನ ಹೌದು ಅಂತ ಒಪ್ಕೊತ್ತಾರೆ. “ನಾವು ಇಂಟರ್ನೆಟ್ನ ಎಷ್ಟು ಉಪಯೋಗಿಸ್ತೀವೋ ಅಷ್ಟೇ ನಮ್ಮ ಮೆದುಳಿಗೆ ಗಮನ ಕೊಡೋದಕ್ಕೆ ಆಗದ ಹಾಗೆ ಮಾಡ್ತೀವಿ. ಇಂಟರ್ನೆಟ್ ಸಹಾಯದಿಂದ ನಾವು ವಿಷ್ಯಗಳನ್ನ ತುಂಬ ಬೇಗ ಮತ್ತು ಚೆನ್ನಾಗಿ ಗ್ರಹಿಸ್ತೀವಿ, ಆದ್ರೆ ಗಮನ ಕೊಡಕಾಗಲ್ಲ” ಅಂತ ಬರಹಗಾರ ಮತ್ತು ವ್ಯವಸ್ಥಾಪಕ ಸಲಹೆಗಾರ ನಿಕಲಸ್ ಕಾರ್ ಹೇಳ್ತಾರೆ. a
ತಂತ್ರಜ್ಞಾನದಿಂದ ಯಾವ ಮೂರು ಸಂದರ್ಭಗಳಲ್ಲಿ ನಿಮ್ಮ ಗಮನ ಹಾಳಾಗುತ್ತೆ ಅಂತ ನೋಡೋಣ.
ಮಾತಾಡೋವಾಗ. “ಜನ ನೇರವಾಗಿ ಮಾತಾಡುವಾಗ್ಲೂ ಕೆಲವ್ರು ಮೊಬೈಲ್ನಲ್ಲಿ ಮೆಸೇಜ್ಗಳನ್ನ ನೊಡ್ತಿರ್ತಾರೆ, ವಿಡಿಯೋ ಗೇಮ್ಸ್ ಆಡ್ತಿರ್ತಾರೆ ಅಥ್ವಾ ಸೋಶಿಯಲ್ ಮೀಡಿಯಾದಲ್ಲಿ ಏನಾದ್ರೂ ಹುಡುಕ್ತಿರ್ತಾರೆ. ಬೇರೆಯವರು ಮಾತಾಡ್ವಾಗ ಸ್ವಲ್ಪಾನೂ ಗಮನ ಕೊಡಲ್ಲ” ಅಂತ ಮರಿಯಾ ಅನ್ನೋ ಯುವ ಸ್ತ್ರೀ ಹೇಳ್ತಾಳೆ.
ಕ್ಲಾಸಲ್ಲಿ ಇರೋವಾಗ. “ತುಂಬ ಮಕ್ಕಳು ಕ್ಲಾಸಲ್ಲಿ ಪಾಠ ಮಾಡುವಾಗ ಮೊಬೈಲಲ್ಲಿ ಬೇರೆಯವರಿಗೆ ಮೆಸೇಜ್ ಕಳಿಸ್ತಿರ್ತಾರೆ ಅಥ್ವಾ ಪಾಠಕ್ಕೆ ಸಂಬಂಧಪಡದೆ ಇರೋ ಬೇರೆ ವಿಷ್ಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಓದ್ತಿರ್ತಾರೆ ಅಥ್ವಾ ನೋಡ್ತಿರ್ತಾರೆ” ಅಂತ ಡಿಜಿಟಲ್ ಕಿಡ್ಸ್ ಅನ್ನೋ ಪುಸ್ತಕ ಹೇಳುತ್ತೆ.
ಓದೋವಾಗ. “ಮೊಬೈಲ್ನಲ್ಲಿ ಮೆಸೆಜ್ ಶಬ್ದ ಕೇಳಿದಾಗ ಏನ್ ಮೆಸೆಜ್ ಬಂತು ಅಂತ ನೋಡ್ದೆ ಇರೋಕೆ ನಂಗೆ ಆಗಲ್ಲ” ಅಂತ 22 ವರ್ಷದ ಕ್ರಿಸ್ ಹೇಳ್ತಾನೆ. ನೀವು ಸ್ಕೂಲಲ್ಲಿ ಓದ್ತಿದ್ರೆ ಈ ತರ ಮೊಬೈಲಿಂದ ನಿಮ್ಮ ಗಮನ ಆಕಡೆ ಈಕಡೆ ಹೋಗ್ತಿದ್ರೆ ಒಂದು ಗಂಟೆಲಿ ಮಾಡಿ ಮುಗಿಸೋ ಹೋಂ ವರ್ಕ್ನ ಮುಗಿಸೋಕೆ ಮೂರು ಗಂಟೆ ಬೇಕಾಗುತ್ತೆ.
ಪಾಠ: ಮೊಬೈಲಿನ ಕೈಗೊಂಬೆ ನೀವಾಗಿದ್ರೆ ಅಥ್ವಾ ಅದ್ರಿಂದ ನಿಮ್ಮ ಗಮನ ಆಕಡೆ ಈಕಡೆ ಹೋಗ್ತಿದ್ರೆ ನೀವು ಯಾವ ವಿಷ್ಯಕ್ಕೂ ಗಮನ ಕೊಡೋಕೆ ಆಗಲ್ಲ.
ಗಮನ ಕೊಡೋಕೆ ಏನು ಮಾಡಬೇಕು?
ಮಾತಾಡೋವಾಗ. “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ” ಅಂತ ಬೈಬಲ್ ಹೇಳುತ್ತೆ. (ಫಿಲಿಪ್ಪಿ 2:4) ಆದ್ರಿಂದ ಬೇರೆವ್ರು ಮಾತಾಡೋವಾಗ ಗಮನ ಕೊಟ್ಟು ಕೇಳಿಸಿಕೊಳ್ಳಿ. ಹೀಗೆ ನೀವು ಅವ್ರ ಕಾಳಜಿ ವಹಿಸ್ತೀರ ಅಂತ ತೋರಿಸಬಹುದು. ಮಾತಾಡೋವಾಗ ಮುಖ ನೋಡಿ ಮಾತಾಡಿ. ಮೊಬೈಲ್ ಬೇರೆವ್ರ ಜೊತೆ ಮಾತಾಡೋಕೆ ಅಡ್ಡಿ ಆಗದಿರಲಿ.
“ಬೇರೆವ್ರು ನಿಮ್ಮ ಹತ್ರ ಮಾತಾಡೋವಾಗ ಮೊಬೈಲ್ ಚೆಕ್ ಮಾಡ್ದೆ ಅವ್ರು ಹೇಳೋದಕ್ಕೆ ಪೂರ್ತಿ ಗಮನ ಕೊಡಿ.”—ಥಾಮಸ್.
ಕಿವಿಮಾತು: ಬೇರೆವ್ರ ಹತ್ರ ಮಾತಾಡೋವಾಗ ಮೊಬೈಲ್ ಪಕ್ಕಕ್ಕಿಡಿ. ನೀವು ಫೋನ್ ನೋಡ್ತಾ ಇದ್ರೆ ಬೇಡದೆ ಇರೋ ವಿಷ್ಯಗಳು ನಿಮ್ಮ ಮನಸ್ಸಿಗೆ ಬರುತ್ತೆ. ಆಗ ನಿಮಗೆ ಗಮನ ಕೊಡೋಕೆ ಆಗಲ್ಲ ಅಂತ ಸಂಶೋಧಕರು ಹೇಳ್ತಾರೆ.
ಕ್ಲಾಸಲ್ಲಿ ಇರೋವಾಗ. “ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಿರಿ” ಅಂತ ಬೈಬಲ್ ಸಲಹೆ ಕೊಡುತ್ತೆ. (ಲೂಕ 8:18) ನಿಮ್ಮ ಸ್ಕೂಲಲ್ಲಿ ಇಂಟರ್ನೆಟ್ ಸೌಲಭ್ಯ ಇದ್ರೆ ಸುಮ್ನೆ ಮೆಸೆಜ್ ಮಾಡ್ದೆ, ಗೇಮ್ ಆಡ್ದೆ, ಆನ್ಲೈನ್ ಚಾಟ್ ಮಾಡ್ದೆ ಇದ್ರೆ ಪಾಠದ ಕಡೆ ಗಮನ ಕೊಡೋಕೆ ಆಗುತ್ತೆ.
“ಕ್ಲಾಸಲ್ಲಿ ಚೆನ್ನಾಗಿ ಗಮನಕೊಡಿ. ನೋಟ್ಸ್ ತಗೊಳ್ಳಿ. ಸಾಧ್ಯ ಆದ್ರೆ ಫಸ್ಟ್ ಬೆಂಚಲ್ಲಿ ಕೂತ್ಕೊಳ್ಳಿ. ಆಗ ಚೆನ್ನಾಗಿ ಗಮನ ಕೊಡೋಕಾಗುತ್ತೆ.”—ಕೇರನ್.
ಕಿವಿಮಾತು: ಕೈಯಲ್ಲಿ ನೋಟ್ಸ್ ಬರ್ಕೊಳ್ಳಿ. ಆಗ ನಿಮ್ಮ ಗಮನ ಆಕಡೆ ಈಕಡೆ ಹೋಗಲ್ಲ, ಪಾಠನಾ ಚೆನ್ನಾಗಿ ನೆನಪಿಟ್ಟುಕೊಳ್ಳೋಕೆ ಆಗುತ್ತೆ ಅಂತ ಸಂಶೋಧನೆ ತೋರಿಸುತ್ತೆ.
ಓದೋವಾಗ. “ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 4:5) ಟೆಸ್ಟಲ್ಲಿ ಪಾಸ್ ಆಗಬೇಕು ಅಂತ ಮೇಲ್ ಮೇಲೆ ಓದುಕೊಂಡು ಹೋಗದೇ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಬೇಕು.
“ನಾನು ಓದೋವಾಗ ನನ್ನ ಮೊಬೈಲನ್ನ ಸೈಲೆಂಟ್ ಮೋಡಲ್ಲಿ ಹಾಕಿಬಿಡ್ತೀನಿ. ಇದ್ರಿಂದ ನಾನು ಚೆನ್ನಾಗಿ ಗಮನ ಕೊಡೋಕೆ ಆಗುತ್ತೆ. ಮೆಸೇಜ್ ಬಂದ್ರೆ ಅದನ್ನ ನೋಡೋಕೆ ಹೋಗಲ್ಲ. ಏನಾದ್ರೂ ನಂಗೆ ನೆನಪಿಟ್ಕೊಬೇಕು ಅಂತ ಅನಿಸಿದ್ರೆ ಅದನ್ನ ಬರೆದಿಟ್ಕೊಳ್ತೀನಿ.”—ಕ್ರಿಸ್.
ಕಿವಿಮಾತು: ನೀವು ಓದೋ ಜಾಗ ಗಮನ ಕೊಡೋಕೆ ಸಹಾಯ ಮಾಡೋ ತರ ಇರಲಿ. ಶುದ್ಧವಾಗಿ ನೀಟಾಗಿ ಇರಲಿ.
a ದಿ ಶಾಲ್ಲೋಸ್—ವಾಟ್ ದ ಇಂಟರ್ನೆಟ್ ಇಸ್ ಡೂಯಿಂಗ್ ಟು ಅವರ್ ಬ್ರೈನ್ಸ್ ಪುಸ್ತಕದಿಂದ.