ಯುವಜನರ ಪ್ರಶ್ನೆಗಳು
ನಾನು ಸೋಶಿಯಲ್ ಮೀಡಿಯಾಗೆ ದಾಸನಾಗಿದ್ದೀನಾ?
ಸೋಶಿಯಲ್ ಮೀಡಿಯಾ ಬಳಸೋಕೆ ನಿಮ್ಮ ಅಪ್ಪಅಮ್ಮ ಬಿಡ್ತಾರಾ? ಅವರು ಬಿಡೋದಾದರೆ ಅದನ್ನ ಹೇಗೆ ಬಳಸೋದು ಅಂತ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.
ಈ ಲೇಖನದಲ್ಲಿ
ಸೋಶಿಯಲ್ ಮೀಡಿಯಾ ನನ್ನ ಸಮಯವನ್ನ ಹೇಗೆ ಕದಿಯುತ್ತಿದೆ?
ಸೋಶಿಯಲ್ ಮೀಡಿಯಾ ಬಳಸೋದು ಒಂದು ರೀತಿಯಲ್ಲಿ ಹುಚ್ಚು ಕುದುರೆ ಓಡಿಸೋ ತರ. ಒಂದೋ ನೀವು ಅದನ್ನ ನಿಯಂತ್ರಿಸಬೇಕು, ಇಲ್ಲಾಂದ್ರೆ ಅದು ನಿಮ್ಮನ್ನ ನಿಯಂತ್ರಿಸುತ್ತೆ.
“ಸೋಶಿಯಲ್ ಮೀಡಿಯಾ ಸ್ವಲ್ಪ ಸಮಯ ನೋಡೋಣ ಅಂದುಕೊಳ್ತೀನಿ. ಆದ್ರೆ ಕಣ್ಣುಮುಚ್ಚಿ ತೆಗೆಯೋದ್ರೊಳಗೆ ತಾಸುಗಳೇ ಕಳೆದು ಹೋಗಿರುತ್ತೆ! ಸೋಶಿಯಲ್ ಮೀಡಿಯಾ ಅನ್ನೋದು ಹೋಗ್ತಾಹೋಗ್ತಾ ಚಟವಾಗಿಬಿಡುತ್ತೆ. ನಮ್ಮ ಸಮಯವೆಲ್ಲಾ ಹಾಳಾಗುತ್ತೆ.”—ಜೊಯನ್ನಾ.
ನಿಮಗೆ ಗೊತ್ತಿತ್ತಾ? ಸೋಶಿಯಲ್ ಮೀಡಿಯಾ ಚಟವಾಗೋ ತರ ಡಿಸೈನ್ ಮಾಡಿದ್ದಾರೆ. ಯಾಕಂದ್ರೆ ಒಂದು ಸೋಶಿಯಲ್ ಮೀಡಿಯಾ ವೆಬ್‌ಸೈಟ್ ಜನಪ್ರಿಯವಾದಾಗ ಜನರು ಅದನ್ನ ಬಳಸ್ತಾ ತುಂಬ ಸಮಯ ಕಳೀತಾರೆ. ಆಗ ಅದರಲ್ಲಿ ಹೆಸರಾಂತ ಕಂಪೆನಿಗಳು ತಮ್ಮ ಜಾಹಿರಾತುಗಳನ್ನ ಹಾಕೋಕೆ ತುಂಬ ದುಡ್ಡು ಸುರಿತಾರೆ.
ನಿಮ್ಮನ್ನೇ ಕೇಳಿಕೊಳ್ಳಿ: ‘ಸೋಶಿಯಲ್ ಮೀಡಿಯಾ ಬಳಸ್ತಾ ಸಮಯ ಹೋಗೋದೇ ನಂಗೆ ಗೊತ್ತಾಗುತ್ತಿಲ್ವಾ? ಇದಕ್ಕೆ ಕೊಡ್ತಿರೋ ಸಮಯವನ್ನ ಬೇರೆ ಯಾವುದಾದ್ರೂ ಒಳ್ಳೇ ಕೆಲಸ ಮಾಡೋಕೆ ಬಳಸಬಹುದಾ?’
ನೀವೇನು ಮಾಡಬಹುದು? ಸೋಶಿಯಲ್ ಮೀಡಿಯಾಗೆ ಎಷ್ಟು ಸಮಯ ಕೊಡಬೇಕಂತ ಮುಂಚೆನೇ ತೀರ್ಮಾನ ಮಾಡಿ. ಅಷ್ಟು ಸಮಯ ಮಾತ್ರ ಕೊಡಿ.
“ಕೆಲವೊಂದು ಆ್ಯಪ್‌ಗಳನ್ನ ಎಷ್ಟು ಸಮಯ ಬಳಸಬೇಕು ಅಂತ ಮೊಬೈಲ್‌ನಲ್ಲಿ ಮುಂಚೆನೇ ಟೈಮರ್ ಸೆಟ್ ಮಾಡಿ ಇಡ್ತೀನಿ. ಹೀಗೆ ಮಾಡಿದ್ರಿಂದ ನಾನು ಸೋಶಿಯಲ್ ಮೀಡಿಯಾ ಬಳಸೋದ್ರಲ್ಲೇ ಮುಳುಗಿ ಹೋಗ್ಲಿಲ್ಲ. ನನಗಿರೋ ಸಮಯವನ್ನ ಚೆನ್ನಾಗಿ ಉಪಯೋಗಿಸಿಕೊಂಡೆ.”—ಟೀನಾ.
ಬೈಬಲ್ ತತ್ವ: “ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:16.
ಸೋಶಿಯಲ್ ಮೀಡಿಯಾ ನನ್ನ ನಿದ್ದೆಯನ್ನ ಹೇಗೆ ಹಾಳುಮಾಡ್ತಿದೆ?
ಯುವಜನರು ಪ್ರತಿದಿನ ಎಂಟು ತಾಸು ನಿದ್ದೆ ಮಾಡಬೇಕು ಅಂತ ತುಂಬ ತಜ್ಞರು ಹೇಳ್ತಾರೆ. ಆದ್ರೆ ಎಷ್ಟೋ ಯುವಜನರು ನಿದ್ದೆ ಮಾಡೋದನ್ನ ಬಿಟ್ಟು ಸೋಶಿಯಲ್ ಮೀಡಿಯಾದಲ್ಲೇ ಕಾಲ ಕಳೀತಾರೆ.
“ಮಲಗೋ ಮುಂಚೆ ಯಾವುದಾದ್ರೂ ಮುಖ್ಯವಾದ ಮೆಸೇಜ್ ಬಂದಿದ್ಯಾ ಅಂತ ನೋಡೋಕೆ ಫೋನ್ ತಗೊಳ್ತೀನಿ. ಆಮೇಲೆ ಸೋಶಿಯಲ್ ಮೀಡಿಯಾ ಓಪನ್ ಮಾಡಿ ಯಾರು ಯಾವ್ಯಾವ ಫೋಟೋಗಳನ್ನ ಹಾಕಿದ್ದಾರೆ ಅಂತ ನೋಡ್ತಾನೋಡ್ತಾ ಸಮಯ ಹೋಗೋದೇ ಗೊತ್ತಾಗಲ್ಲ. ಈ ಕೆಟ್ಟ ಚಟವನ್ನ ಬಿಡೋಕೆ ಪ್ರಯತ್ನಿಸ್ತಾ ಇದ್ದೀನಿ.”—ಮರಿಯ.
ನಿಮಗೆ ಗೊತ್ತಿತ್ತಾ? ಒಬ್ಬ ವ್ಯಕ್ತಿ ಸರಿಯಾಗಿ ನಿದ್ದೆ ಮಾಡಿಲ್ಲಾಂದ್ರೆ ಅವನಿಗೆ ಚಿಂತೆ ಮತ್ತು ಖಿನ್ನತೆ ಕಾಯಿಲೆ ಬರುತ್ತೆ. ಜೆನ್ ಟ್ವೆಂಗೆ ಅನ್ನೋ ಸೈಕಾಲಜಿ ಪ್ರೊಫೆಸರ್ ಅದರ ಬಗ್ಗೆ ಹೀಗೆ ಹೇಳ್ತಾರೆ: “ಇವತ್ತು ತುಂಬ ಜನ ಖುಷಿಯಾಗಿ ಇಲ್ಲದೇ ಇರೋಕೆ ಕಾರಣ ಅವರು ಸರಿಯಾಗಿ ನಿದ್ದೆ ಮಾಡಲ್ಲ. ಒಬ್ಬ ವ್ಯಕ್ತಿ ಎಷ್ಟೋ ದಿನಗಳವರೆಗೆ ಸರಿಯಾಗಿ ನಿದ್ದೆ ಮಾಡಿಲ್ಲಾಂದ್ರೆ ಅವನ ಮಾನಸಿಕ ಆರೋಗ್ಯ ಹಾಳಾಗುತ್ತೆ. a ಇದ್ರಿಂದ ಅವನು ಸರಿಯಾಗಿ ಯೋಚನೆ ಮಾಡೋಕೂ ಆಗಲ್ಲ, ಖುಷಿಯಾಗಿ ಇರೋಕೂ ಆಗಲ್ಲ.”
ನಿಮ್ಮನ್ನೇ ಕೇಳಿಕೊಳ್ಳಿ: ‘ಪ್ರತಿ ದಿನ ನಾನು ಎಷ್ಟು ಹೊತ್ತು ನಿದ್ದೆ ಮಾಡ್ತಿದ್ದೀನಿ?’ ‘ಹಾಯಾಗಿ ಮಲಗೋ ಟೈಮಲ್ಲಿ ಸೋಶಿಯಲ್ ಮೀಡಿಯಾ ನೋಡ್ತಾ ಸಮಯ ಕಳೀತಿದ್ದೀನಾ?’
ನೀವೇನು ಮಾಡಬಹುದು? ಮಲಗೋ ಮುಂಚೆ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನ ನಿಮ್ಮ ರೂಮಿಂದ ಹೊರಗಿಡಿ. ಸಾಧ್ಯವಾದ್ರೆ ನೀವು ಮಲಗೋ ಎರಡು ತಾಸಿನ ಮುಂಚೆ ನಿಮ್ಮ ಮೊಬೈಲ್ ಫೋನ್ ನೋಡಬೇಡಿ. ಒಂದುವೇಳೆ ನಿಮಗೆ ಎದ್ದೇಳೋಕೆ ಅಲಾರ್ಮ್ ಬೇಕಂದ್ರೆ ಮೊಬೈಲ್ ಅಥವಾ ಟ್ಯಾಬ್‌ನಲ್ಲಿ ಇಡದೆ ಬೇರೆ ಯಾವುದ್ರಲ್ಲಾದ್ರೂ ಇಡಿ.
“ರಾತ್ರಿ ಫೋನ್ ನೋಡ್ತಾನೋಡ್ತಾ ಸಮಯ ಹೋಗೋದೇ ನಂಗೆ ಗೊತ್ತಾಗಲ್ಲ. ಆದ್ರೆ ಈಗ ಇದನ್ನ ನಿಲ್ಲಿಸೋಕೆ ಮತ್ತು ಜವಾಬ್ದಾರಿಯಿರೋ ವ್ಯಕ್ತಿಯಾಗೋಕೆ ಪ್ರಯತ್ನಿಸ್ತಾ ಇದ್ದೀನಿ. ನಾನು ಪ್ರತಿದಿನ ಬೇಗ ಮಲಗಿ ಮಾರನೇ ದಿನ ಬೇಗ ಎದ್ದು ಒಳ್ಳೇ ಕೆಲಸಗಳನ್ನ ಮಾಡೋಕೆ ಗುರಿ ಇಟ್ಟಿದ್ದೀನಿ.”—ಜೆರೆಮಿ.
ಬೈಬಲ್ ತತ್ವ: “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”—ಫಿಲಿಪ್ಪಿ 1:10.
ಸೋಶಿಯಲ್ ಮೀಡಿಯಾ ನನ್ನ ಭಾವನೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತೆ?
ಒಂದು ಸರ್ವೇ ಮಾಡಿದಾಗ ಅಲ್ಲಿದ್ದ ಅರ್ಧದಷ್ಟು ಹೈಸ್ಕೂಲ್ ಹುಡುಗಿಯರು “ನಮ್ಮ ಜೀವನಕ್ಕೆ ಅರ್ಥನೇ ಇಲ್ಲ, ಯಾವಾಗ್ಲೂ ಬೇಜಾರಲ್ಲೇ ಇರ್ತೀವಿ” ಅಂತ ಹೇಳಿದ್ರು. ಸೋಶಿಯಲ್ ಮೀಡಿಯಾವನ್ನ ಜಾಸ್ತಿ ಬಳಸೋದೇ ಇಂಥ ಭಾವನೆಗಳು ಬರೋಕೆ ಒಂದು ಕಾರಣ. “ಸೋಶಿಯಲ್ ಮೀಡಿಯಾದಲ್ಲಿ ನೀವು ಸಮಯ ಕಳೀತಾ ನಿಮ್ಮನ್ನ ಬೇರೆಯವರಿಗೆ ಎಷ್ಟು ಹೋಲಿಸಿಕೊಳ್ತೀರೋ ಅಷ್ಟು ನಿಮಗೆ ಖಿನ್ನತೆ ಬರುತ್ತೆ” ಅಂತ ಡಾಕ್ಟರ್ ಲೆನಾರ್ಡ್ ಸ್ಯಾಕ್ಸ್ b ಹೇಳ್ತಾರೆ.
“ಸಾಮಾನ್ಯವಾಗಿ ಯುವಜನರು ತಮ್ಮನ್ನ ಬೇರೆಯವರಿಗೆ ಹೋಲಿಸಿಕೊಳ್ತಾರೆ. ಸೋಶಿಯಲ್ ಮೀಡಿಯಾದಿಂದ ಇದಿನ್ನೂ ಜಾಸ್ತಿಯಾಗ್ತಿದೆ. ಬೇರೆಯವರು ಹಾಕಿರೋ ಫೋಟೋಗಳನ್ನ, ಫೋಸ್ಟ್‌ಗಳನ್ನ ನೋಡ್ತಾ ‘ಅವರು ಜೀವನದಲ್ಲಿ ನನಗಿಂತ ಮಜಾ ಮಾಡ್ತಾ ಖುಷಿಯಾಗಿದ್ದಾರೆ’ ಅಂತ ಅಂದುಕೊಂಡು ನಿಮಗೆ ಬೇಜಾರಾಗುತ್ತೆ.”—ಫಿಬಿ.
ನಿಮಗೆ ಗೊತ್ತಿತ್ತಾ? ಸೋಶಿಯಲ್ ಮೀಡಿಯಾದಿಂದ ನಿಮ್ಮ ಫ್ರೆಂಡ್ಸ್ ಜೊತೆ ಮಾತಾಡಬಹುದು. ಆದ್ರೆ ನೇರವಾಗಿ ಮಾತಾಡೋವಾಗ ಸಿಗೋ ಮಜಾ ಅದರಲ್ಲಿ ಸಿಗಲ್ಲ. “ಎಲೆಕ್ಟ್ರಾನಿಕ್ ಸಾಧನಗಳನ್ನ ಬಳಸಿ ನಾವು ಬೇರೆಯವರತ್ರ ಮಾತಾಡ್ತೀವಿ ನಿಜ. ಆದ್ರೆ ಒಬ್ಬ ವ್ಯಕ್ತಿ ಜೊತೆ ನೇರವಾಗಿ ಮಾತಾಡುವಾಗ ಸಿಗೋ ಖುಷಿ ಸೋಶಿಯಲ್ ಮೀಡಿಯಾದಲ್ಲಿ ಸಿಗಲ್ಲ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾ ಮೂಲಕ ಜನರ ಜೊತೆ ನಿಜವಾದ ಆಪ್ತ ಸಂಬಂಧ ಬೆಳೆಸೋಕೂ ಆಗಲ್ಲ” ಅಂತ ಡಾಕ್ಟರ್ ನಿಕೋಲಸ್ ಕಾರ್ಡರಾಸ್ c ಹೇಳ್ತಾರೆ.
ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಫ್ರೆಂಡ್ಸ್ ಹಾಕೋ ಪೋಸ್ಟ್‌ಗಳನ್ನ ನೋಡ್ದಾಗ ನನಗೆ ಒಂಟಿ ಭಾವನೆ ಕಾಡುತ್ತಾ?’ ‘ಬೇರೆಯವರು ಹಾಕೋ ಫೋಟೋಗಳನ್ನ ನೋಡ್ದಾಗ ಅವರಷ್ಟು ನಾನು ಮಜಾ ಮಾಡ್ತಿಲ್ಲವಲ್ಲಾ ಅಂತ ಬೇಜಾರಾಗುತ್ತಾ?’ ‘ನಾನು ಹಾಕಿರೋ ಯಾವುದಾದ್ರೂ ಪೋಸ್ಟ್‌ಗೆ “ಲೈಕ್” ಬರದೇ ಇದ್ದಾಗ ಕುಗ್ಗಿ ಹೋಗ್ತೀನಾ?’
ನೀವೇನು ಮಾಡಬಹುದು? ಕೆಲವು ದಿನಗಳು, ವಾರಗಳು ಅಥವಾ ತಿಂಗಳುಗಳು “ಸೋಶಿಯಲ್ ಮೀಡಿಯಾದಿಂದ ದೂರ ಇರೋಕೆ” ಪ್ರಯತ್ನ ಮಾಡಿ. ಫೋನ್ ಮಾಡಿ ಅಥವಾ ನೇರವಾಗಿ ಭೇಟಿ ಮಾಡೋ ಮೂಲಕ ನಿಮ್ಮ ಫ್ರೆಂಡ್ಸ್ ಜೊತೆ ಜಾಸ್ತಿ ಸಮಯ ಕಳೀರಿ. ಇದ್ರಿಂದ ನಿಮ್ಮ ಚಿಂತೆ ಕಮ್ಮಿ ಆಗುತ್ತೆ ಮತ್ತು ನೀವು ಖುಷಿಯಾಗಿರ್ತೀರ.
“ನಾನು ಸೋಶಿಯಲ್ ಮೀಡಿಯಾವನ್ನ ಬಳಸುವಾಗ ಬೇರೆಯವರು ಏನು ಮಾಡ್ತಿದ್ದಾರೆ ಅಂತ ನೋಡೋದ್ರಲ್ಲೇ ಸಮಯ ಹೋಗ್ತಿತ್ತು. ಆದ್ರೆ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನ ಡಿಲೀಟ್ ಮಾಡಿದಾಗ ನನ್ನ ಹೆಗಲ ಮೇಲಿದ್ದ ಭಾರನೇ ಇಳಿದಂಗಾಯ್ತು. ಇದ್ರಿಂದ ನನಗೆ ಸಾಕಷ್ಟು ಸಮಯ ಉಳಿಸೋಕಾಯ್ತು ಮತ್ತು ತುಂಬ ಕೆಲಸಗಳನ್ನ ಮಾಡೋಕಾಯ್ತು.”—ಬ್ರಿಯಾನ.
ಬೈಬಲ್ ತತ್ವ: “ಆದ್ರೆ ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ. ಆಗ ಅವನು ಬೇರೆಯವ್ರ ಜೊತೆ ತನ್ನನ್ನ ಹೋಲಿಸ್ಕೊಳ್ಳೋ ಬದ್ಲು ತನ್ನ ಕೆಲಸದ ಬಗ್ಗೆ ಮಾತ್ರ ಖುಷಿಪಡ್ತಾನೆ.”—ಗಲಾತ್ಯ 6:4.