ಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಲಿ?
ಯುವ ಜನರ ಪ್ರಶ್ನೆಗಳು
ನಿಮ್ಮ ಮನಸ್ಸಾಕ್ಷಿಯನ್ನ ಯಾವುದಕ್ಕೆ ಹೋಲಿಸಬಹುದು?
ಜಿಪಿಎಸ್ (GPS—ಮ್ಯಾಪ್)
ಕನ್ನಡಿ
ಫ್ರೆಂಡ್
ಜಡ್ಜ್
ಸರಿಯಾದ ಉತ್ತರ ಏನಂದ್ರೆ ನಾಲ್ಕಕ್ಕೂ ಹೋಲಿಸಬಹುದು. ಯಾಕೆ ಅಂತ ಈ ಲೇಖನದಲ್ಲಿ ಉತ್ತರ ಇದೆ.
ಮನಸ್ಸಾಕ್ಷಿ ಅಂದರೇನು?
ಮನಸ್ಸಾಕ್ಷಿ ಅಂದ್ರೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿಸೋ ನಿಮ್ಮ ಒಳಗಿನ ಭಾವನೆ. ‘ಹೃದಯದಲ್ಲಿ ಬರೆದಿರೋ ಧರ್ಮಶಾಸ್ತ್ರದ’ ತರ ಮನಸ್ಸಾಕ್ಷಿ ಇದೆ ಅಂತ ಬೈಬಲ್ ಹೇಳುತ್ತೆ. (ರೋಮನ್ನರಿಗೆ 2:15) ನಾವು ಮಾಡಲಿಕ್ಕಿರೋ ನಿರ್ಣಯಗಳು ಅಥವಾ ಈಗಾಗಲೇ ಮಾಡಿದ ನಿರ್ಣಯಗಳು ಸರಿನಾ ತಪ್ಪಾ ಅಂತ ಮತ್ತೆ ಯೋಚಿಸಿ ನೋಡೋಕೆ ಮನಸ್ಸಾಕ್ಷಿ ಸಹಾಯ ಮಾಡುತ್ತೆ.
ನಿಮ್ಮ ಮನಸ್ಸಾಕ್ಷಿ ಜಿಪಿಎಸ್ ತರ ಇದೆ. ಸಮಸ್ಯೆಗೆ ಸಿಕ್ಕಿಕೊಳ್ಳದೆ ಸರಿ ದಾರಿಯಲ್ಲಿ ನಡಿಯೋಕೆ ಅದು ನಿಮಗೆ ಸಹಾಯ ಮಾಡುತ್ತೆ.
ನಿಮ್ಮ ಮನಸ್ಸಾಕ್ಷಿ ಕನ್ನಡಿ ತರ ಇದೆ. ನಿಮ್ಮ ನಡತೆ ಹೇಗಿದೆ, ನೀವು ಒಳಗೆ ಎಂಥ ವ್ಯಕ್ತಿಯಾಗಿದ್ದೀರಾ ಅಂತ ಅದು ನಿಮಗೆ ತೋರಿಸಿ ಕೊಡುತ್ತೆ.
ನಿಮ್ಮ ಮನಸ್ಸಾಕ್ಷಿ ಫ್ರೆಂಡ್ ತರ ಇದೆ. ನೀವು ಅದ್ರ ಮಾತು ಕೇಳಿದ್ರೆ ಅದು ಒಳ್ಳೇ ಸಲಹೆ ಕೊಡುತ್ತೆ ಮತ್ತು ಯಶಸ್ಸು ಸಿಗೋಕೆ ಸಹಾಯ ಮಾಡುತ್ತೆ.
ನಿಮ್ಮ ಮನಸ್ಸಾಕ್ಷಿ ಜಡ್ಜ್ ತರ ಇದೆ. ನೀವೇನಾದ್ರು ತಪ್ಪು ಮಾಡಿದ್ರೆ ಅದು ನಿಮಗೆ ಹೇಳುತ್ತೆ.
ಸಾರಾಂಶ: (1) ಸರಿಯಾದ ನಿರ್ಣಯ ಮಾಡೋಕೆ (2) ನೀವು ಮಾಡಿರೋ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಡೋಕೆ, ತಿದ್ದಿಕೊಳ್ಳೋಕೆ ಮುಖ್ಯವಾಗಿ ಬೇಕಾಗಿರೋದು ಮನಸ್ಸಾಕ್ಷಿ.
ಮನಸ್ಸಾಕ್ಷಿಗೆ ಯಾಕೆ ತರಬೇತಿ ಕೊಡಬೇಕು?
ನಿಮಗೆ ಯಾವಾಗಲೂ “ಒಳ್ಳೇ ಮನಸ್ಸಾಕ್ಷಿ” ಇರಲಿ ಅಂತ ಬೈಬಲ್ ಹೇಳುತ್ತೆ. (1 ಪೇತ್ರ 3:16) ಮನಸ್ಸಾಕ್ಷಿಗೆ ತರಬೇತಿ ಕೊಡಲಿಲ್ಲ ಅಂದ್ರೆ ನಿಮಗೆ ಒಳ್ಳೇ ಮನಸ್ಸಾಕ್ಷಿ ಇರಲ್ಲ.
“ಎಲ್ಲಿ ಹೋಗಿದ್ದೆ, ಏನ್ ಮಾಡ್ತಿದ್ದೆ ಅಂತ ಅಪ್ಪ-ಅಮ್ಮ ಕೇಳಿದಾಗ ನಾನು ಬಾಯಿ ಬಿಡ್ತಿರಲಿಲ್ಲ, ಏನಾದ್ರೂ ಸುಳ್ಳು ಹೇಳ್ತಿದ್ದೆ. ಮೊದಮೊದಲು ನನ್ನ ಮನಸ್ಸಾಕ್ಷಿ ‘ಹಾಗೆ ಮಾಡಬಾರದಿತ್ತು’ ಅಂತ ಹೇಳ್ತಿತ್ತು. ಆದ್ರೆ ದಿನಗಳು ಹೋಗ್ತಾ-ಹೋಗ್ತಾ ನಾನೇನು ದೊಡ್ಡ ತಪ್ಪು ಮಾಡ್ತಿಲ್ಲ ಅಂತ ಅನಿಸ್ತು.”—ಜೆನ್ನಿಫರ್.
ಆದ್ರೆ ದಿನಗಳು ಕಳೆದಂತೆ, ಜೆನ್ನಿಫರ್ ಅಪ್ಪ-ಅಮ್ಮನಿಂದ ಏನೂ ಮುಚ್ಚಿಡದೆ ಎಲ್ಲಿ ಹೋಗ್ತಿದ್ದೀನಿ, ಏನ್ ಮಾಡ್ತಿದ್ದೀನಿ ಅಂತ ಸತ್ಯ ಹೇಳೋಕೆ ಮನಸ್ಸಾಕ್ಷಿ ಅವಳಿಗೆ ಸಹಾಯ ಮಾಡ್ತು.
ಯೋಚಿಸಿ: ಜೆನ್ನಿಫರ್ ಮನಸ್ಸಾಕ್ಷಿ ಅವಳನ್ನ ಯಾವಾಗಿಂದ ಎಚ್ಚರಿಸಲಿಕ್ಕೆ ಶುರು ಮಾಡ್ತು?
“ಹೊರಗೊಂದು ತರ ಒಳಗೊಂದು ತರ ಇರೋದು ತುಂಬ ಕಷ್ಟ, ಟೆನ್ಶನ್ ಜಾಸ್ತಿ. ನಿಮ್ಮ ಮನಸ್ಸಾಕ್ಷಿ ತಪ್ಪು ನಿರ್ಣಯ ಮಾಡೋಕೆ ನೀವು ಒಂದ್ಸಲ ಬಿಟ್ರೆ ಮತ್ತೆಮತ್ತೆ ತಪ್ಪು ನಿರ್ಣಯ ಮಾಡ್ತಾ ಇರ್ತಿರ.”—ಮ್ಯಾಥ್ಯೂ.
ಕೆಲವರು ತಮ್ಮ ಮನಸ್ಸಾಕ್ಷಿ ಹೇಳೋದನ್ನ ಒಂಚೂರು ಕೇಳಲ್ಲ. ಅಂಥವರು ತಮ್ಮ ‘ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳಕೊಂಡಿದ್ದಾರೆ’ ಅಂತ ಬೈಬಲ್ ಹೇಳುತ್ತೆ. (ಎಫೆಸ 4:19) ಈ ವಚನವನ್ನ ಪರಿಶುದ್ಧ ಬೈಬಲ್ “ಅವರಿಗೆ ನಾಚಿಕೆಯೇ ಇಲ್ಲ” ಅಂತ ಹೇಳುತ್ತೆ.
ಯೋಚಿಸಿ: ತಪ್ಪು ಮಾಡಿದ ಮೇಲೂ ಮನಸ್ಸಾಕ್ಷಿ ಚುಚ್ಚುತ್ತಿಲ್ಲ ಅಂದ್ರೆ ಅವರು ತಮ್ಮ ಜೀವನದಲ್ಲಿ ಖುಷಿಯಾಗಿ ಇದ್ದಾರೆ ಅಂತನಾ? ಅವ್ರಿಗೆ ಯಾವ ಸಮಸ್ಯೆ ಇರಬಹುದು?
ಸಾರಾಂಶ: ಒಳ್ಳೇ ಮನಸ್ಸಾಕ್ಷಿ ಇರಬೇಕಂದ್ರೆ ನೀವು ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಗ್ರಹಣ ಶಕ್ತಿಗಳನ್ನು ತರಬೇತಿಗೊಳಿಸಬೇಕು.’—ಇಬ್ರಿಯ 5:14.
ಮನಸ್ಸಾಕ್ಷಿಗೆ ನೀವು ಹೇಗೆ ತರಬೇತಿ ಕೊಡಬಹುದು?
ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಬೇಕಂದ್ರೆ ಹೇಗೆ ನಡ್ಕೊಳ್ಳಬೇಕು ಅಂತ ತೋರಿಸೋ ಒಂದು ಮಾದರಿ ಅಥವಾ ಸ್ಟ್ಯಾಂಡರ್ಡ್ ಬೇಕು. ನಿಮ್ಮ ನಡತೆಯನ್ನ ಆ ಮಾದರಿಗೆ ಅಥವಾ ಸ್ಟ್ಯಾಂಡರ್ಡ್‌ಗೆ ಹೋಲಿಸಿ ನೋಡಬೇಕು. ಕೆಲವರು ಬೇರೆ-ಬೇರೆ ಮಾದರಿಯನ್ನ ಅಥವಾ ಸ್ಟ್ಯಾಂಡರ್ಡ್‌ನ್ನ ಅನುಸರಿಸ್ತಾರೆ. ಉದಾಹರಣೆಗೆ,
ಕುಟುಂಬದವ್ರನ್ನ ಮತ್ತು ಸಂಸ್ಕೃತಿಯನ್ನ
ತಮ್ಮ ವಯಸ್ಸಿನವ್ರನ್ನ
ಫೇಮಸ್ ಸ್ಟಾರ್‌ಗಳನ್ನ
ಆದ್ರೆ ನಾವು ಹೇಗೆ ಜೀವನ ಮಾಡಬೇಕಂತ ಬೈಬಲ್ ಹೇಳೋ ಸಲಹೆ ಇದೆಲ್ಲದಕ್ಕಿಂತ ತುಂಬ ಶ್ರೇಷ್ಠ. ಯಾಕಂದ್ರೆ ನಮ್ಮನ್ನ ಸೃಷ್ಟಿ ಮಾಡಿದ ದೇವರೇ ಬೈಬಲನ್ನ ಬರೆಸಿದ್ದು. ನಮಗೆ ಯಾವುದು ಒಳ್ಳೇದು ಅಂತ ಆತನಿಗೆ ಚೆನ್ನಾಗಿ ಗೊತ್ತಿದೆ.—2 ತಿಮೊತಿ 3:16.
ಕೆಲವು ಉದಾಹರಣೆಗಳನ್ನ ನೋಡಿ.
ಬೈಬಲ್ ಹೇಳೋ ಸಲಹೆ: ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’—ಇಬ್ರಿಯ 13:18.
ಪರೀಕ್ಷೆಯಲ್ಲಿ ಕಾಪಿ ಹೊಡಿಯೋಕೆ, ಅಪ್ಪ-ಅಮ್ಮಗೆ ಸುಳ್ಳು ಹೇಳೋಕೆ ಅಥವಾ ಕಳ್ಳತನ ಮಾಡೋಕೆ ಮನಸ್ಸಾದ್ರೆ ಈ ಸಲಹೆ ನಿಮ್ಮ ಮನಸ್ಸಾಕ್ಷಿಗೆ ಹೇಗೆ ಸಹಾಯ ಮಾಡುತ್ತೆ?
ನಿಮ್ಮ ಮನಸ್ಸಾಕ್ಷಿ ನೀವು ಎಲ್ಲಾ ವಿಷ್ಯಗಳಲ್ಲಿ ಪ್ರಾಮಾಣಿಕರಾಗಿ ಇರೋಕೆ ಹೇಳಿದ್ರೆ ಈಗ ಮತ್ತು ಮುಂದಕ್ಕೆ ನಿಮಗೆ ಪ್ರಯೋಜನ ಆಗುತ್ತೆ ಅಂತ ನೀವು ನೆನಸ್ತೀರಾ?
ಬೈಬಲ್ ಹೇಳೋ ಸಲಹೆ: “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.”—1 ಕೊರಿಂಥ 6:18.
ಪೋರ್ನೋಗ್ರಾಫಿ ನೋಡೋಕೆ ಅಥವಾ ಮದುವೆಗೆ ಮುಂಚೆ ಲೈಂಗಿಕ ಸಂಬಂಧ ಇಟ್ಕೊಳ್ಳೋಕೆ ಮನಸ್ಸಾದ್ರೆ ಈ ಸಲಹೆ ನಿಮ್ಮ ಮನಸ್ಸಾಕ್ಷಿಗೆ ಹೇಗೆ ಸಹಾಯ ಮಾಡುತ್ತೆ?
ಲೈಂಗಿಕ ಅನೈತಿಕತೆಯಿಂದ ದೂರ ಇರೋಕೆ ನಿಮ್ಮ ಮನಸ್ಸಾಕ್ಷಿ ಹೇಳಿದ್ರೆ ಈಗ ಮತ್ತು ಮುಂದಕ್ಕೆ ನಿಮಗೆ ಪ್ರಯೋಜನ ಆಗುತ್ತೆ ಅಂತ ನೀವು ನೆನಸ್ತೀರಾ?
Tಬೈಬಲ್ ಹೇಳೋ ಸಲಹೆ: ‘ಒಬ್ಬರಿಗೊಬ್ಬರು ದಯೆ ತೋರಿಸಿ, ಕೋಮಲ ಸಹಾನುಭೂತಿ ತೋರಿಸಿ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿ.’—ಎಫೆಸ 4:32
ನಿಮ್ಮ ಒಡಹುಟ್ಟಿದವ್ರಲ್ಲಿ ಒಬ್ರ ಅಥವಾ ಫ್ರೆಂಡ್‌ನ ಅಭಿಪ್ರಾಯ ನಿಮಗಿಂತ ಬೇರೆ ಇದ್ರೆ ಈ ಸಲಹೆ ನಿಮಗೆ ಹೇಗೆ ಸಹಾಯ ಮಾಡುತ್ತೆ?
ಕ್ಷಮಿಸೋಕೆ ಮತ್ತು ಕರುಣೆ ತೋರಿಸೋಕೆ ನಿಮ್ಮ ಮನಸ್ಸಾಕ್ಷಿ ಹೇಳಿದ್ರೆ ಈಗ ಮತ್ತು ಮುಂದಕ್ಕೆ ನಿಮಗೆ ಪ್ರಯೋಜನ ಆಗುತ್ತೆ ಅಂತ ನೀವು ನೆನಸ್ತೀರಾ?
ಬೈಬಲ್ ಹೇಳೋ ಸಲಹೆ: ‘ಯೆಹೋವನು ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.’—ಕೀರ್ತನೆ 11:5.
ಮೂವೀಗಳನ್ನ, ಟಿವಿ ಪ್ರೋಗ್ರಮ್‌ಗಳನ್ನ, ವಿಡಿಯೋ ಗೇಮ್ಸ್‌ಗಳನ್ನ ಆರಿಸುವಾಗ ಈ ಸಲಹೆ ನಿಮಗೆ ಹೇಗೆ ಸಹಾಯ ಮಾಡುತ್ತೆ?
ಒಂದುವೇಳೆ ನಿಮ್ಮ ಮನಸ್ಸಾಕ್ಷಿ ಹಿಂಸೆ ಇರೋ ಮನರಂಜನೆಯನ್ನ ನೋಡೋದು ಬೇಡ ಅಂತ ಹೇಳಿದ್ರೆ ಈಗ ಮತ್ತು ಮುಂದಕ್ಕೆ ನಿಮಗೆ ಪ್ರಯೋಜನ ಆಗುತ್ತೆ ಅಂತ ನೀವು ನೆನಸ್ತೀರಾ?
ನಿಜ ಕಥೆ: “ನಾನು ಮತ್ತು ನನ್ನ ಫ್ರೆಂಡ್ಸ್ ಹಿಂಸೆ ಇರೋ ವಿಡಿಯೋ ಗೇಮ್‌ಗಳನ್ನ ಆಡ್ತಿದ್ವಿ. ಆಗ ನನ್ನ ಡ್ಯಾಡಿ ನೋಡಿ ಈ ತರದ ಗೇಮ್‌ಗಳನ್ನ ಆಡಬಾರದು ಅಂತ ನನ್ಗೆ ಹೇಳಿದ್ರು. ಆದ್ರೆ ನಾನು ನನ್ನ ಫ್ರೆಂಡ್ಸ್ ಹತ್ರ ಹೋಗ್ತಿದ್ದಾಗ ಆಡ್ತಿದ್ದೆ. ಮನೆಗೆ ಬಂದಾಗ ಅದ್ರ ಬಗ್ಗೆ ಏನೂ ಹೇಳ್ತಿರಲಿಲ್ಲ. ಆಗ ನನ್ನ ಡ್ಯಾಡಿ ‘ಏನಾಯ್ತು ನಿಂಗೆ, ಯಾಕೆ ಹೀಗೆ ಇದ್ದೀಯಾ’ ಅಂತ ಕೇಳ್ತಿದ್ರು. ಆಗ ನಾನು ‘ಏನಾಗಿಲ್ಲ ಚೆನ್ನಾಗಿದ್ದೀನಿ’ ಅಂತ ಹೇಳ್ತಿದ್ದೆ. ಒಂದಿನ ನಾನು ಕೀರ್ತನೆ 11:5 ನ್ನು ಓದಿದೆ. ಆಗ ನನ್ನ ನೋಡಿ ನನ್ಗೆ ಅಸಹ್ಯ ಆಯ್ತು. ಇನ್ನು ಆ ತರದ ವಿಡಿಯೋ ಗೇಮ್‌ಗಳನ್ನ ಆಡಬಾರದು ಅಂತ ಅಂದ್ಕೊಂಡೆ. ಕೊನೆಗೂ ನಿಲ್ಲಿಸಿಬಿಟ್ಟೆ. ನನ್ನ ನೋಡಿ ನನ್ನ ಒಬ್ಬ ಫ್ರೆಂಡ್ ಕೂಡ ಹಿಂಸೆಯ ವಿಡಿಯೋ ಗೇಮ್ ಆಡೋದನ್ನ ನಿಲ್ಲಿಸಿಬಿಟ್ಟ.”—ಜೆರೆಮಿ.
ಯೋಚಿಸಿ: ಜೆರೆಮಿ ಮನಸ್ಸಾಕ್ಷಿ ಯಾವಾಗಿಂದ ಕೆಲಸ ಮಾಡೋಕೆ ಶುರು ಮಾಡಿತು, ಯಾವಾಗಿಂದ ಮನಸ್ಸಾಕ್ಷಿಗೆ ಕಿವಿಗೊಡೋಕೆ ಶುರು ಮಾಡಿದ? ಜೆರೆಮಿ ಕಥೆಯಿಂದ ನೀವೇನು ಪಾಠ ಕಲಿತ್ತೀರಿ?
ಸಾರಾಂಶ: ನೀವು ಎಂಥ ವ್ಯಕ್ತಿ, ನಿಮಗೆ ಯಾವುದು ಮುಖ್ಯ ಅಂತ ನಿಮ್ಮ ಮನಸ್ಸಾಕ್ಷಿ ತೋರಿಸ್ಕೊಡುತ್ತೆ. ನಿಮ್ಮ ಮನಸ್ಸಾಕ್ಷಿ ನಿಮ್ಮ ಬಗ್ಗೆ ಏನು ಹೇಳ್ತಿದ್ದೆ?