ಯುವ ಜನರ ಪ್ರಶ್ನೆಗಳು
ಸೆಕ್ಸ್ ಮಾಡುವ ಒತ್ತಡ ಜಯಿಸಲು ನಾನು ಏನು ಮಾಡಲಿ?
“‘ನಾನು ಸೆಕ್ಸ್ ಮಾಡ್ದೆ’ ಅಂತ ಯಾರಾದ್ರೂ ಸ್ಕೂಲಲ್ಲಿ ಹೇಳಿದಾಗ ಬೇರೆಯವರಿಗೂ ಹಾಗೆ ಮಾಡಬೇಕೆಂದು ಅನಿಸ್ತಿತ್ತು. ಇಲ್ಲಾಂದ್ರೆ ಎಲ್ಲಿ ನನ್ನನ್ನು ಮಾತ್ರ ವಿಚಿತ್ರವಾಗಿ ನೋಡ್ತಾರೋ ಅನ್ನೋ ಭಯ ಎಲ್ಲರಲ್ಲೂ ಇತ್ತು.”—ಈಲೇನ್, ವಯಸ್ಸು 21.
ಬೇರೆಯವರು ಸೆಕ್ಸ್ ಮಾಡುತ್ತಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ನೀವು ಸೆಕ್ಸ್ ಮಾಡಬೇಕು ಅಂತ ಅನಿಸಿದೆಯಾ?
ನೀವು ಪ್ರೀತಿಸ್ತಾ ಇರುವ ವ್ಯಕ್ತಿ ಸೆಕ್ಸ್‌ಗೆ ಒತ್ತಾಯ ಮಾಡಿದ್ದಾರಾ?
ಆ ಆಸೆ ನಿಮ್ಮಲ್ಲೇ ಬರಲಿ ಅಥವಾ ಬೇರೆಯವರು ಅದಕ್ಕೆ ಒತ್ತಾಯಿಸಲಿ ಆಗ ನೀವು ಏನು ಮಾಡಬೇಕು? ಸರಿಯಾದದ್ದನ್ನು ಮಾಡಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.
ತಪ್ಪು ಮತ್ತು ಸರಿ
ತಪ್ಪು: ನನ್ನನ್ನು ಬಿಟ್ಟು ಎಲ್ಲರೂ ಸೆಕ್ಸ್ ಮಾಡ್ತಿದ್ದಾರೆ.
ಸರಿ: 18 ವಯಸ್ಸಿನವರನ್ನು ಸರ್ವೆ ಮಾಡಿದಾಗ ಸೆಕ್ಸ್ ಮಾಡಿದ್ದೇವೆ ಅಂತ ಹೇಳಿದ್ದು ಮೂವರಲ್ಲಿ ಇಬ್ಬರು. ತುಂಬ ಹುಡುಗ ಹುಡುಗಿಯರು ಸೆಕ್ಸ್ ಮಾಡಿದ್ದರು ನಿಜ, ಆದರೆ 30%ಗಿಂತ ಹೆಚ್ಚು ಮಂದಿ ಸೆಕ್ಸ್ ಮಾಡಿರಲಿಲ್ಲ. ಹಾಗಾದರೆ ಎಲ್ಲರೂ ಸೆಕ್ಸ್ ಮಾಡಿಲ್ಲ ತಾನೇ?
ತಪ್ಪು: ಸೆಕ್ಸಿಂದ ಸಂಬಂಧ ತುಂಬ ಗಟ್ಟಿಯಾಗುತ್ತೆ.
ಸರಿ: ‘ಸೆಕ್ಸ್ ಮಾಡಿದ್ರೆ ನಾನು ನಿನ್ನ ಬಿಟ್ಟುಹೋಗಲ್ಲ’ ಅಂತ ಹುಡುಗರು ಹೇಳಬಹುದು. ಆದರೆ ಎಷ್ಟೋ ಹುಡುಗರು ಸೆಕ್ಸ್ ಮಾಡಿದ ಮೇಲೆ ಹುಡುಗಿಯರನ್ನು ಬಿಟ್ಟು ಹೋಗುತ್ತಾರೆ. ನಂಬಿದವನೇ ಮೋಸಮಾಡಿ ಕೈಕೊಟ್ಟು ಹೋದಾಗ ಹುಡುಗಿಗೆ ದೊಡ್ಡ ಶಾಕ್ ಆಗುತ್ತೆ. a
ತಪ್ಪು: ಸೆಕ್ಸ್ ಮಾಡುವುದು ತಪ್ಪು ಅಂತ ಬೈಬಲ್ ಹೇಳುತ್ತದೆ.
ಸರಿ: ಬೈಬಲ್ ಆ ತರ ಹೇಳಲ್ಲ. ಆದ್ರೆ ಮದುವೆಯಾದ ಗಂಡು-ಹೆಣ್ಣು ಮಾತ್ರ ದೈಹಿಕ ಸಂಬಂಧ ಇಟ್ಟುಕೊಳ್ಳಬೇಕು ಅಂತ ಬೈಬಲ್ ಹೇಳುತ್ತದೆ.—ಆದಿಕಾಂಡ 1:28; 1 ಕೊರಿಂಥ 7:3.
ತಪ್ಪು: ಬೈಬಲ್ ಹೇಳುವ ಹಾಗೆ ನಡೆದ್ರೆ ಜೀವನ ಎನ್‌ಜಾಯ್ ಮಾಡಲಿಕ್ಕೇ ಆಗಲ್ಲ.
ಸರಿ: ಮದುವೆ ಆದ ಮೇಲೆ ನೀವು ಸೆಕ್ಸ್ ಅನುಭವಿಸಿದ್ರೆ ನಿಮಗೆ ಸಂತೋಷ ಇರುತ್ತೆ. ಮದುವೆಗೆ ಮುಂಚೆ ಸೆಕ್ಸ್ ಮಾಡಿದವರಿಗೆ ಕಾಡುವ ಸಂಶಯ, ನೋವು, ಪಶ್ಚಾತ್ತಾಪ ನಿಮಗೆ ಇರಲ್ಲ.
ಮರೆಯಬೇಡಿ: ಮದುವೆ ಆಗುವ ವರೆಗೂ ಸೆಕ್ಸ್ ಮಾಡದೇ ಇದ್ದದರಿಂದ ಯಾರ ಜೀವನವೂ ಹಾಳಾಗಿಲ್ಲ. ಆದರೆ ಮದುವೆ ಮುಂಚೆ ಸೆಕ್ಸ್ ಮಾಡಿದವರ ಜೀವನ ಹಾಳಾಗಿದೆ.
ಸೆಕ್ಸ್ ಮಾಡುವ ಒತ್ತಡ ಜಯಿಸಲು ನಾನು ಏನು ಮಾಡಬೇಕು?
ನೀವು ನಂಬಿರೊದೇ ಸರಿ ಅಂತ ದೃಢ ಮಾಡಿಕೊಳ್ಳಿ. ಪ್ರೌಢ ವ್ಯಕ್ತಿಗಳು ಒಂದು ವಿಷ್ಯದ ಬಗ್ಗೆ ತುಂಬ ಯೋಚಿಸುತ್ತಾರೆ, ಹೀಗೆ ಸರಿ ಯಾವುದು, ತಪ್ಪು ಯಾವುದು ಅನ್ನೋ ವ್ಯತ್ಯಾಸ ತಿಳ್ಕೊಳ್ಳಲು ಅವರಿಗೆ ಅವರೇ ತರಬೇತಿ ಕೊಡುತ್ತಾರೆ ಅಂತ ಬೈಬಲ್ ಹೇಳುತ್ತದೆ. (ಇಬ್ರಿಯ 5:14) ಅಂಥವರು ಸರಿತಪ್ಪಿನ ಬಗ್ಗೆ ಬೈಬಲ್ ಹೇಳುವುದನ್ನು ದೃಢವಾಗಿ ನಂಬುತ್ತಾರೆ. ಹಾಗಾಗಿ ಬೇರೆಯವರು ಎಷ್ಟೇ ಒತ್ತಡ ಹಾಕಿದ್ರೂ ಅದಕ್ಕೆ ಮಣಿಯುವುದಿಲ್ಲ.
“ಸರಿಯಾದ ವಿಷ್ಯ ಮಾಡಲು ನಾನು ತುಂಬ ಪ್ರಯತ್ನ ಮಾಡ್ತೇನೆ. ಇದ್ರಿಂದ ನನಗೆ ಒಳ್ಳೇ ಹೆಸರಿದೆ. ಅದನ್ನ ಹಾಳು ಮಾಡೋ ಯಾವುದನ್ನೂ ನಾನು ಮಾಡಲ್ಲ.” —ಆಲಿಶ, ವಯಸ್ಸು 16.
ಸ್ವಲ್ಪ ಯೋಚಿಸಿ: ಒಳ್ಳೇ ಹೆಸರು ಮಾಡಬೇಕು ಅಂತ ನಿಮಗೆ ಇಷ್ಟ ಇದ್ಯಾ? ಒಬ್ಬರು ನಿಮ್ಮನ್ನು ಇಷ್ಟಪಡಬೇಕು ಅನ್ನೋ ಒಂದೇ ಕಾರಣಕ್ಕೆ ನಿಮಗಿರುವ ಒಳ್ಳೇ ಹೆಸರನ್ನು ಹಾಳು ಮಾಡಿಕೊಳ್ತೀರಾ?
ತಪ್ಪು ಮಾಡಿದರೆ ಮುಂದೆ ಏನಾಗುತ್ತೆ ಅಂತ ಯೋಚಿಸಿ. “ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ” ಅಂತ ಬೈಬಲ್ ಹೇಳುತ್ತದೆ. (ಗಲಾತ್ಯ 6:7) ಸೆಕ್ಸ್ ಮಾಡುವ ಒತ್ತಡಕ್ಕೆ ಈಗ ನೀವು ಮಣಿದರೆ ಇದರಿಂದ ಮುಂದೆ ನಿಮ್ಮ ಜೀವನದಲ್ಲಿ, ಇನ್ನೊಬ್ಬರ ಜೀವನದಲ್ಲಿ ಏನೆಲ್ಲ ಅನಾಹುತ ಆಗುತ್ತೆ ಅಂತ ಯೋಚನೆ ಮಾಡಿ. b
“ಮದುವೆಗೆ ಮುಂಚೆ ಸೆಕ್ಸ್ ಮಾಡಿದವರಿಗೆ ಮನಸ್ಸು ಚುಚ್ಚುತ್ತಾ ಇರುತ್ತೆ, ಪಶ್ಚಾತ್ತಾಪ ಆಗುತ್ತೆ, ಪ್ರೀತಿ ಸಿಗ್ತಿಲ್ಲ ಅಂತ ಅನಿಸುತ್ತೆ. ಬೇಡದ ಗರ್ಭ, ಲೈಂಗಿಕವಾಗಿ ಹರಡುವ ರೋಗಗಳು ಸಹ ಬರುತ್ತೆ.”—ಸೆಯಿನಾ, ವಯಸ್ಸು 16.
ಸ್ವಲ್ಪ ಯೋಚಿಸಿ: “ನಿಮ್ಮ ಜೀವನ ಹಾಳು ಮಾಡುವಂಥ ಕೆಲಸಗಳನ್ನು ಮಾಡಲಿಕ್ಕೆ ನಿಮ್ಮ ಫ್ರೆಂಡ್ಸ್ ಒತ್ತಾಯ ಮಾಡ್ತಿದ್ರೆ ಅಂಥ ಫ್ರೆಂಡ್ಸ್ ನಿಮಗೆ ಬೇಕಾ? ಅಂಥವರ ಮಾತು ನೀವು ಕೇಳೋದು ಸರಿನಾ?” ಎಂದು ಸೆಕ್ಸ್ ಸ್ಮಾರ್ಟ್ ಪುಸ್ತಕ ಕೇಳುತ್ತದೆ.
ಸಮತೋಲನ ನೋಟ ಇರಲಿ. ಸೆಕ್ಸ್ ಅನ್ನೋದು ಕೆಟ್ಟ ವಿಷಯ ಅಲ್ಲ. ಮದುವೆ ಬಂಧದಲ್ಲಿ ಗಂಡ-ಹೆಂಡತಿ ಇದನ್ನು ಆನಂದಿಸಬೇಕು ಅಂತ ಬೈಬಲ್ ಹೇಳುತ್ತದೆ.—ಜ್ಞಾನೋಕ್ತಿ 5:18, 19.
“ಸೆಕ್ಸ್ ದೇವರು ಕೊಟ್ಟಿರುವ ಒಂದು ಒಳ್ಳೇ ಉಡುಗೊರೆ. ಮದುವೆ ಆದವರು ಮಾತ್ರ ಸೆಕ್ಸನ ಆನಂದಿಸಬೇಕು ಅನ್ನೋದು ದೇವರ ಇಷ್ಟ. ಅದಕ್ಕೇ ಅಲ್ಲವಾ ಆತನು ಮದುವೆ ಏರ್ಪಾಡು ಮಾಡಿರೋದು.” —ಜೆರೆಮಿ, ವಯಸ್ಸು 17.
ಸ್ವಲ್ಪ ಯೋಚಿಸಿ: ಮುಂದೆ ಒಂದು ದಿನ ನೀವು ಮದುವೆ ಆದಾಗ ನಿಮ್ಮ ಬಾಳ ಸಂಗಾತಿಯೊಟ್ಟಿಗೆ ದೈಹಿಕ ಸಂಬಂಧವನ್ನು ಖಂಡಿತ ಆನಂದಿಸುತ್ತೀರ. ಈಗಾಗಲೇ ಹೇಳಿದ ಯಾವ ಕೆಟ್ಟ ಪರಿಣಾಮಗಳನ್ನು ನೀವು ಅನುಭವಿಸುವುದಿಲ್ಲ.