ಹಿತ ಮಿತ ಆಹಾರ ಆರೋಗ್ಯಕ್ಕೆ ಆಧಾರ
ಯುವ ಜನರ ಪ್ರಶ್ನೆಗಳು
‘ಆರೋಗ್ಯವೇ ಭಾಗ್ಯ’ ಅನ್ನೋ ಮಾತು ನಮ್ಮೆಲ್ಲರಿಗೂ ಗೊತ್ತಿರೋ ವಿಷ್ಯ. ಅದಕ್ಕೆ ತಿನ್ನೋದ್ರಲ್ಲಿ ಇತಿಮಿತಿ ಇದ್ರೆ ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ಯುವಜನರೇ, ಈಗ ನೀವು ನಿಮ್ಮ ಆರೋಗ್ಯನಾ ಕಾಪಾಡ್ಕೊಂಡಿಲ್ಲ ಅಂದ್ರೆ ಮುಂದೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ, ಕಾಯಿಲೆಗೆ ತುತ್ತಾಗಬೇಕಾಗುತ್ತೆ.
ಹಿತ ಮಿತ ಆಹಾರ ಅಂದ್ರೇನು?
“ಎಲ್ಲಾ ವಿಷ್ಯಗಳಲ್ಲಿ ಇತಿಮಿತಿ ಇರಬೇಕು” ಅಂತ ಬೈಬಲ್ ಹೇಳುತ್ತೆ, ಅದ್ರಲ್ಲಿ ತಿನ್ನೋ ರೂಢಿ ಕೂಡ ಸೇರಿದೆ. (1 ತಿಮೊತಿ 3:11) ಈ ವಿಷ್ಯನಾ ನಾವು ಮನಸ್ಸಲ್ಲಿಟ್ಟು ಈ ಮುಂದಿನ ವಿಚಾರಗಳಿಗೆ ಗಮನ ಕೊಡೋಣ.
ಹಿತವಾದ ಅಥ್ವಾ ಸಮತೋಲನ ಆಹಾರದಲ್ಲಿ ಎಲ್ಲಾ ರೀತಿಯ ಆಹಾರ ಸೇರಿದೆ. ಹಾಲಿನ ಉತ್ಪನ್ನಗಳು, ಪ್ರೊಟೀನ್‌ಗಳು, ಹಣ್ಣುಗಳು, ತರಕಾರಿ ಮತ್ತು ಕಾಳುಗಳು ಈ 5 ಅಂಶಗಳು ಸಮತೋಲನ ಆಹಾರದಲ್ಲಿ ಸೇರಿದೆ. ಸ್ವಲ್ಪ ಜನ ಈ 5 ಅಂಶಗಳಲ್ಲಿ ಕೆಲವನ್ನ ತಿನ್ನೋದು ಬಿಟ್ರೆ ನಾವು ಸಣ್ಣ ಆಗ್ತೀವಿ ಅಂತ ಅಂದ್ಕೊತಾರೆ. ಆದ್ರೆ ಹೀಗೆ ಮಾಡಿದ್ರೆ ಅವ್ರ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಸಿಗಲ್ಲ.
ಹೀಗೆ ಮಾಡಿ ನೋಡಿ: ಆಹಾರದಲ್ಲಿರೋ ಬೇರೆ ಬೇರೆ ಪೋಷಕಾಂಶಗಳ ಬಗ್ಗೆ ಮತ್ತು ಅದ್ರಿಂದ ನಿಮ್ಗೆ ಏನೆಲ್ಲಾ ಪ್ರಯೋಜ್ನ ಇದೆ ಅನ್ನೋದ್ರ ಬಗ್ಗೆ ನಿಮ್ಮ ಡಾಕ್ಟರ್ ಹತ್ರ ಕೇಳಿ ತಿಳ್ಕೊಳ್ಳಿ, ಇಲ್ಲಾಂದ್ರೆ ಅದ್ರ ಬಗ್ಗೆ ಸಂಶೋಧನೆ ಮಾಡಿ. ಉದಾಹರಣೆಗೆ,
ಕಾರ್ಬೋಹೈಡ್ರೇಟ್‌ಗಳು ನಿಮಗೆ ಶಕ್ತಿ ಕೊಡುತ್ತೆ. ಪ್ರೊಟೀನ್‌ಗಳು ನಿಮ್ಮ ದೇಹ ಸೋಂಕಿನ ವಿರುದ್ಧ ಹೋರಾಡೋಕೆ, ಅಂಗಾಂಶಗಳು ಬೆಳೆಯೋಕೆ ಮತ್ತು ರಿಪೇರಿ ಮಾಡೋಕೆ ಸಹಾಯ ಮಾಡುತ್ತೆ. ಕೆಲವು ರೀತಿಯ ಕೊಬ್ಬನ್ನ ಸರಿಯಾದ ಪ್ರಮಾಣದಲ್ಲಿ ತಗೊಳ್ಳೋದಾದ್ರೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಂದ ಸಾಧ್ಯವಾದಷ್ಟು ದೂರ ಇರಬಹುದು. ನಿಮ್ಮ ಆರೋಗ್ಯನೂ ಚೆನ್ನಾಗಿರುತ್ತೆ.
“ನಾನು ಎಲ್ಲಾ ತರದ ಆಹಾರನ ತಿಂತೀನಿ. ಅಪರೂಪಕ್ಕೆ ಒಂದ್ಸಲ ಚಾಕ್ಲೇಟ್ ಮತ್ತೆ ಕುರುಕಲು ತಿಂಡಿ ತಿನ್ನೋದ್ರಲ್ಲಿ ತಪ್ಪಿಲ್ಲ ಅನ್ಸುತ್ತೆ. ಆದ್ರೆ ಇದೇ ರೂಢಿ ಆಗಬಾರದು. ಎಲ್ಲಾನೂ ಬ್ಯಾಲೆನ್ಸಾಗಿ ಇರಬೇಕು.”—ಬ್ರೆಂಡಾ.
ಹಿತಮಿತ ಆಹಾರ ಅಂದ್ರೆ ಉಪವಾಸ ಇರೋದು ಅಂತಲ್ಲ. ಹೊಟ್ಟೆ ತುಂಬಾ ಊಟ ಮಾಡದೇ ಇರೋದು ಅಥ್ವಾ ಉಪವಾಸ ಇದ್ದು ಒಂದೇ ಸಲ ಜಾಸ್ತಿ ತಿನ್ನೋದು ಅಥ್ವಾ ನಿಮ್ಗೆ ಇಷ್ಟವಾದ ಊಟನಾ ಅಪರೂಪಕ್ಕೊಂದು ಸಲನೂ ತಿನ್ನದೇ ಇರೋದು ಇದ್ಯಾವುದೂ ಒಳ್ಳೇ ರೂಢಿ ಅಲ್ಲ.
ಹೀಗೆ ಮಾಡಿ ನೋಡಿ: ಒಂದು ತಿಂಗಳು, ನೀವು ಏನೆಲ್ಲಾ ತಿಂತೀರಾ ಅಂತ ಬರೆದಿಡಿ. ಯಾವಾಗ ಜಾಸ್ತಿ ತಿಂತೀರ, ಯಾವಾಗ ಉಪವಾಸ ಇರ್ತೀರ ಅಂತ ಗಮನಿಸಿ. ಇದ್ರಲ್ಲಿ ಏನಾದ್ರೂ ಬದಲಾವಣೆ ಮಾಡ್ಕೊಬೇಕಾ ಅಂತ ನೋಡಿ.
“ನಾನು ಕೆಲ್ವು ದಿನ ಜಾಸ್ತಿ ಕ್ಯಾಲೋರಿ ಇರೋ ಊಟನಾ ತಿಂತಿದ್ದೆ, ಇನ್ನೂ ಕೆಲ್ವು ದಿನ ಇದನ್ನ ಬ್ಯಾಲೆನ್ಸ್ ಮಾಡಬೇಕು ಅಂತ ಕಮ್ಮಿ ಕ್ಯಾಲೋರಿ ಇರೋ ಊಟನಾ ತಿಂತಿದ್ದೆ. ಆದ್ರೆ ಇದು ಒಳ್ಳೇ ಡಯಟ್ ಅಲ್ಲ ಅಂತ ಗೊತ್ತಾಯ್ತು. ಇದ್ರಲ್ಲಿ ಇಷ್ಟು ಕ್ಯಾಲೋರಿ ಇದೆ ಅಷ್ಟು ಕ್ಯಾಲೋರಿ ಇದೆ ಅಂತ ಲೆಕ್ಕ ಹಾಕೋದನ್ನ ಬಿಟ್ಟೆ. ಹಸಿವಾದಾಗ ಮಾತ್ರ ತಿಂದು, ಹೊಟ್ಟೆ ತುಂಬಿದ ಮೇಲೆ ಅದು ಇದು ತಿನ್ನೋದನ್ನ ಬಿಟ್ಟುಬಿಟ್ಟೆ. ಹೀಗೆ ಮಾಡೋದು ಪ್ರಾರಂಭದಲ್ಲಿ ಸ್ವಲ್ಪ ಕಷ್ಟ ಆಯ್ತು. ಆದ್ರೆ ಈಗ ನಂಗೆ ಒಳ್ಳೇ ತಿನ್ನೋ ರೂಢಿ ಇದೆ.”—ಹೈಲಿ.
ಅದನ್ನ ನಾವು ಹೇಗೆ ಮಾಡಬಹುದು?
ಮೊದಲೇ ಯೋಚ್ನೆ ಮಾಡಿ. “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 21:5) ಒಳ್ಳೇ ಆರೋಗ್ಯ ಪಡ್ಕೊಬೇಕು ಅಂದ್ರೆ ಒಳ್ಳೇ ತಿನ್ನೋ ರೂಢಿ ಇರಬೇಕು. ಅದಕ್ಕೆ ನೀವು ಏನು ತಿಂತೀರ ಅನ್ನೋದ್ರ ಬಗ್ಗೆ ಗಮನ ಕೊಡಬೇಕು.
“ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಅಂದ್ರೆ ನಾವು ಏನು ತಿಂತೀವಿ ಅನ್ನೋದನ್ನ ಪ್ಲಾನ್ ಮಾಡ್ಕೊಬೇಕು. ಮನೆ ಊಟ ಆರೋಗ್ಯಕ್ಕೆ ತುಂಬಾ ಒಳ್ಳೇದು. ಕೆಲವು ಸಲ ಹೀಗೆ ಮಾಡೋಕೆ ಕಷ್ಟ ಆಗಬಹುದು, ಆದ್ರೆ ಹೀಗೆ ಮಾಡಿದ್ರೆ ನಮ್ಮ ಆರೋಗ್ಯನೂ ಚೆನ್ನಾಗಿರುತ್ತೆ, ಕಾಸೂ ಉಳಿತಾಯ ಆಗುತ್ತೆ.”—ಥಾಮಸ್.
ಕೆಟ್ಟ ರೂಢಿಗಳನ್ನ ಬಿಟ್ಟುಬಿಡಿ. “ವಿವೇಕವನ್ನ . . . ಕಾಪಾಡ್ಕೊ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 3:21) ಯಾವುದು ತಿಂದ್ರೆ ಒಳ್ಳೇದು ಯಾವುದು ತಿಂದ್ರೆ ಕೆಟ್ಟದು ಅಂತ ನಿಮ್ಗೇ ಗೊತ್ತು. ಅದಕ್ಕೆ ವಿವೇಕ ಉಪಯೋಗಿಸಿ ಆರೋಗ್ಯಕರ ಆಹಾರನ ರುಚಿಯಾಗಿ ಹೇಗೆ ಮಾಡ್ಕೊಂಡು ತಿನ್ನೋದು ಅನ್ನೋದಕ್ಕೆ ಐಡಿಯ ಹುಡುಕಿ.
“ನಾನು ಕುರುಕಲು ತಿಂಡಿ ತಿನ್ನೋ ಬದಲು ಆರೋಗ್ಯಕ್ಕೆ ಯಾವುದು ಒಳ್ಳೇದೋ ಅದನ್ನ ತಿನ್ನೋಕೆ ಶುರು ಮಾಡ್ದೆ. ಉದಾಹರಣೆಗೆ, ಒಂದು ಚಾಕ್ಲೇಟ್ ತಿನ್ನೋ ಬದಲು ಒಂದು ಆ್ಯಪಲ್ ತಿನ್ನೋದನ್ನ ರೂಢಿ ಮಾಡ್ಕೊಂಡೆ. ಒಂದೊಂದೇ ಬದಲಾವಣೆ ಮಾಡ್ಕೊಂಡೆ. ಹೀಗೆ ಮಾಡ್ತಾ ಮಾಡ್ತಾ ನಂಗೆ ಗೊತ್ತಿಲ್ಲದೇ ಒಳ್ಳೇ ಆರೋಗ್ಯಕರ ರೂಢಿ ಬೆಳೆಸಿಕೊಂಡೆ.”—ಕಿಯಾ.
ಅತಿಯಾಗಿ ಯಾವುದನ್ನೂ ಮಾಡಬೇಡಿ. “ನಿನ್ನ ಊಟವನ್ನ ಸಂತೋಷದಿಂದ ತಿನ್ನು” ಅಂತ ಬೈಬಲ್ ಹೇಳುತ್ತೆ. (ಪ್ರಸಂಗಿ 9:7) ಡಯಟ್ ಮಾಡಬೇಕು ಅಂತ ಊಟ ಮಾಡೋದ್ರಲ್ಲಿ ಸಿಗೋ ಸಂತೋಷನಾ ಕಳ್ಕೊಬೇಡಿ ಅಥ್ವಾ ಒಂದೊಂದು ಅಗಳನ್ನ ತಿನ್ನೋವಾಗಲೂ ಅಯ್ಯೋ ಎಲ್ಲಿ ದಪ್ಪ ಆಗ್ಬಿಡ್ತೀನೋ’ ಅನ್ನೋ ಯೋಚ್ನೆನ ದೂರ ಇಡಿ. ಯಾಕಂದ್ರೆ ನೀವು ಸಣ್ಣ ಆಗಿ ನಿಮ್ಮ ಆರೋಗ್ಯ ಹಾಳಾದ್ರೆ ಅದ್ರಿಂದ ಏನು ಪ್ರಯೋಜ್ನ? ಅದಕ್ಕೆ ನಿಮ್ಮ ಕೈಲಿ ಎಷ್ಟು ಆಗುತ್ತೋ ಅಷ್ಟು ಮಾಡಿ. ಯಾವುದನ್ನೂ ಅತಿಯಾಗಿ ಮಾಡೋಕೆ ಹೋಗಬೇಡಿ.
“ನಾನು ಇತ್ತೀಚೆಗೆ ಹತ್ರ ಹತ್ರ 14 ಕೆಜಿ ಸಣ್ಣ ಆಗಿದ್ದೀನಿ. ಇದಕ್ಕೆ ನಾನು ಯಾವತ್ತೂ ಊಟ ಬಿಟ್ಟಿಲ್ಲ. ಅಪರೂಪಕ್ಕೆ ನಂಗೆ ಇಷ್ಟವಾದ ಕೇಕನ್ನೂ ತಿಂತಿದ್ದೆ, ಆದ್ರೆ ಅತಿಯಾಗಿ ತಿಂತಿರಲಿಲ್ಲ. ದಿಢೀರಂತ ನಾನು ಸಣ್ಣ ಆಗಬೇಕು ಅಂತ ಯಾವತ್ತೂ ಅಂದ್ಕೊಳ್ಳಲಿಲ್ಲ, ಯಾಕಂದ್ರೆ ಇದಕ್ಕೆ ಟೈಂ ಹಿಡಿಯುತ್ತೆ ಮತ್ತೆ ನನ್ನ ರೂಢಿನ ಬದಲಾಯಿಸಿಕೊಳ್ಳಬೇಕು ಅಂತ ನಂಗೆ ಗೊತ್ತಿತ್ತು.”—ಮೆಲಾನಿ.