ಸ್ಪ್ಯಾನಿಷ್-ಭಾಷಾಂತರ ತಂಡ ಸ್ಪೇನ್‌ಗೆ ಸ್ಥಳಾಂತರಿಸಿತು
ಭೂಮಿಯಾದ್ಯಂತ ಇರುವ ಎಲ್ಲಾ ಜನರಿಗೆ ದೇವರ ರಾಜ್ಯದ ಸುವಾರ್ತೆ ಸಾರಲಾಗುವುದು ಎಂದು ಯೇಸು ತಿಳಿಸಿದನು. (ಮತ್ತಾಯ 24:14) ಇಸವಿ 1909ರಿಂದ ಯೆಹೋವನ ಸಾಕ್ಷಿಗಳು ಬೈಬಲಾಧಾರಿತ ಪ್ರಕಾಶನಗಳನ್ನು ಸ್ಪ್ಯಾನಿಷ್ ಭಾಷೆಗೆ ಭಾಷಾಂತರಿಸುತ್ತಿದ್ದಾರೆ. ಹೀಗೆ ಜನರು ತಮ್ಮ ಮಾತೃ ಭಾಷೆಯಲ್ಲಿ ದೇವರ ರಾಜ್ಯದ ಸಂದೇಶವನ್ನು ತಿಳಿಯುವಂತೆ ಸಾಕ್ಷಿಗಳು ನೆರವು ನೀಡುತ್ತಿದ್ದಾರೆ. ತಮ್ಮ ಮಾತೃ ಭಾಷೆಯಲ್ಲೇ ಮಾತಾಡುವಂಥ ಜನರನ್ನು ಹೊಂದಿರುವ ದೇಶಗಳಲ್ಲಿ ಮೊದಲನೇ ಸ್ಥಾನ ಚೀನಾ ದೇಶಕ್ಕಾದರೆ, ಎರಡನೇ ಸ್ಥಾನ ಸ್ಪೇನಿಗೆ. ಲೋಕವ್ಯಾಪಕವಾಗಿ ಸುಮಾರು 50 ಕೋಟಿ ಜನರು ಸ್ಪ್ಯಾನಿಷ್ ಭಾಷೆಯನ್ನು ಮಾತಾಡುತ್ತಾರೆ.
ಸ್ಪ್ಯಾನಿಷ್ ಭಾಷಾಂತರ ತಂಡದ ಸದಸ್ಯರಾಗಿರುವ ವಿಲಿಯಮ್ ಹೇಳುವುದು, “ಸ್ಪ್ಯಾನಿಷ್ ಒಂದು ಅಂತರಾಷ್ಟ್ರೀಯ ಭಾಷೆ. ಹಲವಾರು ದೇಶಗಳಲ್ಲಿರುವ ವಿಭಿನ್ನ ಸಂಸ್ಕೃತಿಯ ಜನರು ಈ ಭಾಷೆಯನ್ನು ಮಾತಾಡುತ್ತಾರೆ. ಹಾಗಾಗಿ ಬೇರೆ ಬೇರೆ ಹಿನ್ನಲೆಯ, ವಿದ್ಯಾಭ್ಯಾಸದ ಮತ್ತು ಅಂತಸ್ತಿನ ಜನರಿಗೆ ಮನಮುಟ್ಟುವಂಥ ರೀತಿಯಲ್ಲಿ ಭಾಷಾಂತರಿಸಬೇಕೆನ್ನುವುದು ನಮ್ಮ ಗುರಿಯಾಗಿದೆ.” ಇಂಥ ಎಲ್ಲಾ ಓದುಗರ ಹೃದಯವನ್ನು ತಲುಪುವುದು ನಿಜವಾಗಿಯೂ ಒಂದು ಸವಾಲಾಗಿತ್ತು. ಹಾಗಾಗಿ ಭಾಷಾಂತರ ತಂಡದಲ್ಲಿ ಅಮೆರಿಕ, ಅರ್ಜೆಂಟೀನ, ಉರುಗ್ವೆ, ಎಲ್‌ಸಾಲ್ವಡಾರ್, ಕೊಲಂಬಿಯ, ಗ್ವಾಟೆಮಾಲ, ಪೋರ್ಟರಿಕೊ, ಮೆಕ್ಸಿಕೊ, ವೆನಿಸ್ವೇಲ ಮತ್ತು ಸ್ಪೇನ್ ಈ ಎಲ್ಲಾ ದೇಶಗಳ ಸದಸ್ಯರಿದ್ದರು.
ಅನೇಕ ದಶಕಗಳವರೆಗೆ ಯೆಹೋವನ ಸಾಕ್ಷಿಗಳು ಸ್ಪ್ಯಾನಿಷ್ ಭಾಷಾಂತರವನ್ನು ಅಮೆರಿಕದಲ್ಲಿದ್ದುಕೊಂಡು ಮಾಡುತ್ತಿದ್ದರು. ಇದಕ್ಕಾಗಿ ಅರ್ಜೆಂಟೀನಾ, ಮೆಕ್ಸಿಕೊ ಮತ್ತು ಸ್ಪೇನ್ ದೇಶಗಳಲ್ಲಿದ್ದ ಸಾಕ್ಷಿಗಳ ನೆರವನ್ನು ಪಡೆಯುತ್ತಿದ್ದರು. 1993ರಲ್ಲಿ ಸ್ಪ್ಯಾನಿಷ್ ಭಾಷಾಂತರ ತಂಡವನ್ನು ಪೋರ್ಟರಿಕೊಗೆ ಸ್ಥಳಾಂತರಿಸಲಾಯಿತು. ಇದರಿಂದ ಬೇರೆ ಬೇರೆ ಕಡೆಗಳಲ್ಲಿರುವ ಎಲ್ಲಾ ಭಾಷಾಂತರಗಾರರು ಒಂದೇ ಸ್ಥಳದಲ್ಲಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಯಿತು.
ಮಾರ್ಚ್ 2012ರಲ್ಲಿ ಸ್ಪ್ಯಾನಿಷ್ ಭಾಷಾಂತರ ತಂಡವನ್ನು ಮತ್ತೇ ಸ್ಥಳಾಂತರಿಸಬೇಕೆಂದು ನಿರ್ಧರಿಸಲಾಯಿತು. ಈ ಬಾರಿ ಸ್ಪೇನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಅದನ್ನು ಕಳುಹಿಸಲಾಯಿತು. ಅದರ ಕುರಿತು ಎಡ್ವರ್ಡ್ ಹೇಳುವುದು, “ಸ್ಥಳಾಂತರವಾಗ ಬೇಕಾಗಿದ್ದು ಕೇವಲ ನಾವು, ನಮ್ಮ ವಸ್ತುಗಳು, ಸಲಕರಣೆಗಳು ಮಾತ್ರವಲ್ಲ ನಮ್ಮ ಜೊತೆ ಮತ್ತೊಬ್ಬ ಪ್ರಾಮುಖ್ಯ ‘ಸದಸ್ಯನನ್ನು’ ಸ್ಥಳಾಂತರಿಸಬೇಕಾಗಿತ್ತು. ಅದೇನೆಂದರೆ ನಮ್ಮ ಭಾಷಾಂತರ ತಂಡದ ಗ್ರಂಥಾಲಯ.” ಇದು ಅಷ್ಟು ಸುಲಭವಾಗಿರಲಿಲ್ಲ. ಕಾರಣ, ಈ ಗ್ರಂಥಾಲಯದಲ್ಲಿ ಸುಮಾರು 2,500 ರೆಫೆರೆನ್ಸ್‌ಗಳಿದ್ದವು, ಅವುಗಳಲ್ಲಿ ಸ್ಪ್ಯಾನಿಷ್ ಭಾಷಾಂತರಗಳ ನೂರಾರು ಬೈಬಲ್‌ಗಳಿದ್ದವು.
2013, ಮೇ 29ರಂದು ಸ್ಪ್ಯಾನಿಷ್ ಭಾಷಾಂತರ ತಂಡ ತಮ್ಮ ಹೊಸ ಸ್ಥಳಕ್ಕೆ ಆಗಮಿಸಿತು. ಅಲ್ಲಿ ಅವರನ್ನು ಸ್ಪೇನಿನ ಬೆತೆಲ್ ಕುಟುಂಬ ಆದರದಿಂದ ಸ್ವಾಗತಿಸಿತು. ಜಾಗರೂಕತೆಯಿಂದ ಯೋಜನೆ ಮಾಡಿ ಸಾಕಷ್ಟು ಶ್ರಮ ವಹಿಸಿ ಅಟ್ಲಾಂಟಿಕ್ ಸಾಗರದ ಮೂಲಕ ಭಾಷಾಂತರಗಾರರನ್ನು, ರೆಫರೆನ್ಸ್‌ಗಳನ್ನು ಮತ್ತು ಸಲಕರಣೆಗಳನ್ನು ಸಾಗಿಸಲಾಯಿತು. ಈ ಸ್ಥಳಾಂತರವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಲೇಬೇಕು. ಈ ಕೆಲಸಗಳ ನಡುವೆ ಸಾಹಿತ್ಯವನ್ನು ಉತ್ಪಾದಿಸುವ ವಿಷಯದಲ್ಲಿ ಯಾವುದೇ ಕೊರತೆ ಉಂಟಾಗಲಿಲ್ಲ. “ಇದು ದೇವರ ರಾಜ್ಯದ ಸಂದೇಶವಾಗಿದೆ ಮತ್ತು ಸಾಧ್ಯವಾದಷ್ಟು ಸ್ಪ್ಯಾನಿಷ್ ಭಾಷೆಯನ್ನು ಮಾತಾಡುವ ಜನರು ಅದನ್ನು ಓದಬೇಕೆಂಬುದೇ ನಮ್ಮ ಬಯಕೆ” ಎಂದು ಎಡ್ವರ್ಡ್ ಹೇಳುತ್ತಾರೆ.