ಸವಾಲನ್ನು ಎದುರಿಸಲು ಉಪಾಯ
ನೈತಿಕ ಶಿಕ್ಷಣ
ಶಾಲೆಯಿಂದ ಪ್ರವಾಸ ಹೋದಾಗ ಒಮ್ಮೆ ಕೆಲವು ಹುಡುಗರು ಒಬ್ಬ ಹುಡುಗನಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದರೆಂದು ವರದಿಯಾಯಿತು. ಅವರೆಲ್ಲರೂ ಕೆನಡಾದ ಒಂದು ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಇದಾಗಿ ಸ್ವಲ್ಪ ಸಮಯದ ನಂತರ ಆಠವ ಸಿಟಿಝನ್ ದಿನಪತ್ರಿಕೆಯಲ್ಲಿ ಲೆನ್ನರ್ಡ್ ಸ್ಟರ್ನ್ ಎಂಬ ಪತ್ರಕರ್ತನೊಬ್ಬನು ಹೀಗೆ ಬರೆದನು: “ಬುದ್ಧಿ, ವಿದ್ಯೆ ಮತ್ತು ಶ್ರೀಮಂತಿಕೆಯು ಮಕ್ಕಳನ್ನು ನೈತಿಕವಾಗಿ ಕೆಟ್ಟ ನಿರ್ಣಯಗಳನ್ನು ಮಾಡುವುದರಿಂದ ತಡೆಯುವುದಿಲ್ಲ.”
“ಹೆತ್ತವರ ಅತಿ ಮುಖ್ಯ ಗುರಿ ತಮ್ಮ ಮಕ್ಕಳಿಗೆ ನೈತಿಕವಾಗಿ ಒಳ್ಳೇ ನಿರ್ಣಯಗಳನ್ನು ಮಾಡಲು ಕಲಿಸುವುದೇ ಆಗಿದೆ ಎಂದು ನಿಮಗನಿಸಬಹುದು. ಆದರೆ, ಅನೇಕ ಹೆತ್ತವರು ತಮ್ಮ ಮಕ್ಕಳು ಶಾಲೆಯಲ್ಲಿ ಒಳ್ಳೇ ಅಂಕ ಗಳಿಸಿ, ಕೈತುಂಬ ಸಂಬಳ ಸಿಗುವ ಹುದ್ದೆಯನ್ನು ಪಡೆಯಬೇಕು ಎನ್ನುವುದಕ್ಕೇ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ” ಎಂದು ಸ್ಟರ್ನ್ ಬರೆದನು.
ಶಾಲೆಯ ಶಿಕ್ಷಣ ತುಂಬ ಮುಖ್ಯ ಅನ್ನುವುದು ನಿಜ. ಆದರೆ ಯಾವುದೇ ಉನ್ನತ ವಿದ್ಯಾಭ್ಯಾಸವು ಒಬ್ಬ ವ್ಯಕ್ತಿಗೆ ತನ್ನ ಕೆಟ್ಟ ಆಸೆ ಅಥವಾ ಯೋಚನೆಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದಿಲ್ಲ. ಹಾಗಾದರೆ, ಇಂಥ ನೈತಿಕ ಮಾರ್ಗದರ್ಶನ ನೀಡುವ ಶಿಕ್ಷಣ ಎಲ್ಲಿ ಸಿಗುತ್ತದೆ?
ಸೃಷ್ಟಿಕರ್ತ ನೀಡುವ ನೈತಿಕ ಶಿಕ್ಷಣ
ಬೈಬಲ್ ಒಂದು ಕನ್ನಡಿಯಂತಿದೆ. ಕನ್ನಡಿಯಲ್ಲಿ ನಮ್ಮ ಕುಂದು-ಕೊರತೆಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತವೆ. (ಯಾಕೋಬ 1:23-25) ಆದರೆ, ಬೈಬಲ್ ನಮ್ಮಲ್ಲಿರುವ ಕುಂದು-ಕೊರತೆಗಳನ್ನು ತೋರಿಸಿಕೊಡುವುದಲ್ಲದೆ ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ, ಶಾಂತಿ-ಐಕ್ಯತೆಯನ್ನು ಕಾಪಾಡಲು ಬೇಕಾದ ಒಳ್ಳೇತನ, ದಯೆ, ತಾಳ್ಮೆ, ಸ್ವನಿಯಂತ್ರಣ ಮತ್ತು ಪ್ರೀತಿ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಬೈಬಲಿನಲ್ಲಿ ಪ್ರೀತಿಯನ್ನು “ಐಕ್ಯದ ಪರಿಪೂರ್ಣ ಬಂಧ” ಎಂದು ಕರೆಯಲಾಗಿದೆ. (ಕೊಲೊಸ್ಸೆ 3:14) ಪ್ರೀತಿ ಯಾಕಷ್ಟು ವಿಶೇಷವಾದದ್ದು? ಈ ಗುಣದ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ನೋಡಿ.
-
“ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅದು ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಅದು ಅನೀತಿಯನ್ನು [ಕೆಟ್ಟದ್ದನ್ನು] ಕಂಡು ಹರ್ಷಿಸುವುದಿಲ್ಲ, ಆದರೆ ಸತ್ಯದಲ್ಲಿ ಹರ್ಷಿಸುತ್ತದೆ. ಅದು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, . . . ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.”—1 ಕೊರಿಂಥ 13:4-8.
-
“ಪ್ರೀತಿಯು ಒಬ್ಬನ ನೆರೆಯವನಿಗೆ ಕೆಡುಕನ್ನು ಮಾಡುವುದಿಲ್ಲ.”—ರೋಮನ್ನರಿಗೆ 13:10.
-
“ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8.
ನಿಮ್ಮನ್ನು ಪ್ರೀತಿಸುವಂಥ ಜನರೊಟ್ಟಿಗೆ ಇರುವಾಗ ನಿಮಗೆ ಹೇಗನಿಸುತ್ತದೆ? ಭಯ ಆಗುತ್ತಾ? ಕಷ್ಟ ಅನಿಸುತ್ತಾ? ಇಲ್ಲ ಅಲ್ವಾ? ಯಾಕೆಂದರೆ, ಅವರು ನಿಮಗೆ ಒಳ್ಳೇದನ್ನೇ ಬಯಸುತ್ತಾರೆ, ಯಾವತ್ತೂ ಬೇಕುಬೇಕಂತ ನಿಮಗೆ ನೋವಾಗುವಂತೆ ನಡೆದುಕೊಳ್ಳುವುದಿಲ್ಲ.
ಪ್ರೀತಿಯು ಇತರರಿಗಾಗಿ ತ್ಯಾಗಗಳನ್ನು ಮಾಡುವಂತೆ, ತಮ್ಮ ಜೀವನ ರೀತಿಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಜನರನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ, ಜಾರ್ಜ್‌ಗೆ a ಮೊಮ್ಮಗ ಹುಟ್ಟಿದಾಗ ಅವನೊಂದಿಗೆ ಸಮಯ ಕಳೆಯಲು ತುಂಬ ಹಂಬಲಿಸುತ್ತಿದ್ದರು. ಆದರೆ ಒಂದು ಸಮಸ್ಯೆ ಇತ್ತು. ಜಾರ್ಜ್ ತುಂಬ ಸಿಗರೇಟು ಸೇದುತ್ತಿದ್ದರು. ಅವನ ಅಳಿಯನಿಗೆ ತನ್ನ ಮಾವ ಮಗುವಿನ ಜೊತೆಯಲ್ಲಿರುವಾಗ ಸಿಗರೇಟು ಸೇದುವುದು ಇಷ್ಟ ಇರಲಿಲ್ಲ. ಹಾಗಾಗಿ, ಜಾರ್ಜ್ ಏನು ಮಾಡಿದರು ಗೊತ್ತಾ? 50 ವರ್ಷಗಳಿಂದ ಇದ್ದ ಈ ದುಶ್ಚಟವನ್ನು ತನ್ನ ಮೊಮ್ಮಗನಿಗಾಗಿ ಬಿಟ್ಟುಬಿಟ್ಟರು. ಇದೇ ಪ್ರೀತಿಗಿರುವ ಶಕ್ತಿ!
ಒಳ್ಳೇತನ, ದಯೆ ಮತ್ತು ಪ್ರೀತಿ ಮುಂತಾದ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಬೈಬಲ್ ಸಹಾಯ ಮಾಡುತ್ತದೆ
ಪ್ರೀತಿ ಎಂಬ ಗುಣ ತನ್ನಿಂದ ತಾನೇ ಬರುವುದಿಲ್ಲ, ಅದನ್ನು ಬೆಳೆಸಿಕೊಳ್ಳಬೇಕು. ಪ್ರೀತಿ ತೋರಿಸುವುದು ಹೇಗೆ ಎಂದು ಮಕ್ಕಳಿಗೆ ಕಲಿಸುವುದರಲ್ಲಿ ಹೆತ್ತವರ ಪಾತ್ರ ತುಂಬ ಮುಖ್ಯ. ಹೆತ್ತವರು ತಮ್ಮ ಮಕ್ಕಳನ್ನು
ಪೋಷಿಸಿ ಅವರನ್ನು ಸಂರಕ್ಷಿಸುತ್ತಾರೆ. ಅವರಿಗೆ ನೋವಾದಾಗ ಅಥವಾ ಕಾಯಿಲೆ ಬಂದಾಗ ಅವರ ಆರೈಕೆಮಾಡುತ್ತಾರೆ. ಒಳ್ಳೇ ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತಾಡಲು ಸಮಯ ಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಕಲಿಸುತ್ತಾರೆ. ಅವರು ಮಕ್ಕಳಿಗೆ ಶಿಸ್ತು ಸಹ ನೀಡುತ್ತಾರೆ ಅಂದರೆ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಲು ಬೇಕಾದ ಒಳ್ಳೇ ತತ್ವಗಳನ್ನು ಕಲಿಸುತ್ತಾರೆ. ಅಷ್ಟೇ ಅಲ್ಲ, ಅವರು ಉತ್ತಮ ಮಾದರಿ ಇಡುತ್ತಾ ತಮ್ಮ ಮಕ್ಕಳಿಗೆ ಆದರ್ಶ ವ್ಯಕ್ತಿಗಳಾಗುತ್ತಾರೆ.ಆದರೆ, ಕೆಲವು ಹೆತ್ತವರು ತಮ್ಮ ಜವಾಬ್ದಾರಿಯನ್ನು ಪೂರೈಸಲು ತಪ್ಪಿಹೋಗುತ್ತಾರೆ. ಇಂಥವರ ಮಕ್ಕಳು ಒಳ್ಳೆಯವರಾಗಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾ? ಖಂಡಿತ ಇಲ್ಲ. ಕೆಲವರು ಒಳ್ಳೇ ಕುಟುಂಬದಲ್ಲಿ ಬೆಳೆಯದಿದ್ದರೂ ದೊಡ್ಡವರಾದ ಮೇಲೆ ತಮ್ಮ ಜೀವನದಲ್ಲಿ ಎಷ್ಟೋ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಪ್ರೀತಿಯ, ಭರವಸಾರ್ಹ ನಾಗರಿಕರಾಗಿದ್ದಾರೆ. ಅವರಲ್ಲಿ ಕೆಲವರ ಬಗ್ಗೆ ಜನರು, ‘ಇವರು ಬದಲಾಗಲು ಸಾಧ್ಯವೇ ಇಲ್ಲ’ ಎಂದು ನೆನಸಿದ್ದರು. ಹೀಗೆ ಬದಲಾದವರ ಬಗ್ಗೆ ನಾವು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ.
[ಪಾದಟಿಪ್ಪಣಿ]
a ಹೆಸರನ್ನು ಬದಲಾಯಿಸಲಾಗಿದೆ.