ಸವಾಲು
ಸಮಸ್ಯೆಗಳ ಮೂಲವನ್ನು ಕಂಡುಹಿಡಿಯುವುದು
ನಮ್ಮ ನೆಮ್ಮದಿ, ಭದ್ರತೆಯನ್ನು ಹಾಳುಮಾಡುವ ಹಾಗೂ ನಮ್ಮ ಭವಿಷ್ಯಕ್ಕೆ ಕುತ್ತಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮನುಷ್ಯರಿಂದ ಆಗುತ್ತದಾ? ನಿಮ್ಮ ಅಭಿಪ್ರಾಯವೇನು? ಮಾನವ ಸಮಾಜದಲ್ಲಿರುವ ಈ ಸಮಸ್ಯೆಗಳೆಂಬ ಕಾಯಿಲೆಗಳನ್ನು ಗುಣಪಡಿಸಲು ಮೇಲ್ಮೇಲೆ ತೋರುವ ರೋಗಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ಮಾಡಿದರೆ ಸಾಕಾಗಲ್ಲ, ಅದರ ಮೂಲ ಕಾರಣಗಳನ್ನು ಗುರುತಿಸಬೇಕು.
ಇದಕ್ಕೊಂದು ಉದಾಹರಣೆ, ಕಾಯಿಲೆ ಬಂದು ತೀರಿಕೊಂಡ ಟಾಮ್ ಎಂಬ ವ್ಯಕ್ತಿ. ಅವನ ಸಾವಿಗೆ ಕಾರಣವೇನು? ಅವನು ಸಾಯುವುದಕ್ಕೆ ಸ್ವಲ್ಪ ಮುಂಚೆ ದಾಖಲಾಗಿದ್ದ ಆಸ್ಪತ್ರೆಯ ವೈದ್ಯ ಹೀಗನ್ನುತ್ತಾನೆ: “ಅವನಿಗೆ ರೋಗಲಕ್ಷಣಗಳು ತೋರಿಬಂದ ಆರಂಭದಲ್ಲೇ ಅದರ ಮೂಲ ಕಾರಣವನ್ನು ತಿಳಿಯಲು ತಪಾಸಣೆ ಮಾಡಬೇಕೆಂದು ಯಾರಿಗೂ ಅನಿಸಲಿಲ್ಲ.” ಈ ಮುಂಚೆ ಟಾಮ್‌ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬರೀ ಹೊರಗೆ ತೋರುತ್ತಿದ್ದ ರೋಗಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಿ ಅವನನ್ನು ಉಪಶಮನಗೊಳಿಸಲು ಪ್ರಯತ್ನಿಸಿದ್ದರು.
ಮಾನವರು ಸಹ ಈ ಲೋಕದಲ್ಲಿರುವ ಸಮಸ್ಯೆಗಳೆಂಬ ಕಾಯಿಲೆಗಳನ್ನು ಇದೇ ರೀತಿಯಲ್ಲಿ ವಾಸಿಮಾಡಲು ಪ್ರಯತ್ನಿಸುತ್ತಿದ್ದಾರಲ್ಲವೇ? ಉದಾಹರಣೆಗೆ, ಅಪರಾಧಗಳನ್ನು ತಡೆಗಟ್ಟಲು ಸರಕಾರವು ನಿಯಮಗಳನ್ನು ಜಾರಿಗೆ ತರುತ್ತದೆ, ಕ್ಯಾಮರಾಗಳನ್ನು ಅಳವಡಿಸುತ್ತದೆ, ಮತ್ತು ಪೊಲೀಸರನ್ನು ಹೆಚ್ಚಿಸುತ್ತದೆ. ಇವುಗಳಿಂದ ಸ್ವಲ್ಪಮಟ್ಟಿಗೆ ಪ್ರಯೋಜನ ಆಗಬಹುದಾದರೂ ಇವು ಸಮಸ್ಯೆಯ ಮೂಲ ಕಾರಣವನ್ನು ಸರಿಪಡಿಸುತ್ತಿಲ್ಲ. ಅಂದರೆ ಇಂತಹ ವರ್ತನೆಗೆ ಮೂಲ ಕಾರಣವಾದ ಜನರ ಮನೋಭಾವ, ನಂಬಿಕೆ ಮತ್ತು ಆಸೆಗಳನ್ನು ಸರಿಪಡಿಸುತ್ತಿಲ್ಲ.
ದಕ್ಷಿಣ ಅಮೆರಿಕದ ಒಂದು ದೇಶ ಆರ್ಥಿಕ ಕುಸಿತ ಎದುರಿಸಿತು. ಅಲ್ಲಿನ ಡ್ಯಾನಿಯಲ್ ಹೀಗೆ ಹೇಳುತ್ತಾನೆ: “ಹಿಂದೆ ನಾವು ಆರಾಮಾಗಿ ಇರುತ್ತಿದ್ದೆವು, ಆಯುಧಗಳನ್ನು ತೋರಿಸಿ ಕಳವು ಮಾಡುವವರ ಭಯವೇ ಇರಲಿಲ್ಲ, ಆದರೆ ಈಗ ಶಾಂತಿ ಇರುವ ಒಂದು ಹಳ್ಳಿಯಾಗಲಿ ನಗರವಾಗಲಿ ಇಲ್ಲ. ಜನರು ಬೇರೆಯವರ ಮೇಲಾಗಲಿ ಅವರ ಆಸ್ತಿ-ಪಾಸ್ತಿಯ ಮೇಲಾಗಲಿ ಯಾವುದೇ ಗೌರವ ಇಲ್ಲದವರು ಎಂಬ ಅವರ ನಿಜ ರೂಪ ಆರ್ಥಿಕ ಕುಸಿತದಿಂದಾಗಿ ಬಯಲಾಗಿದೆ.”
ಮಧ್ಯ ಪೂರ್ವ ದೇಶದಲ್ಲಿ ಆದ ಒಂದು ಗಲಭೆಯಿಂದ ಓಡಿಹೋದ ಎಲಿಯಾಸ್ a ಎಂಬ ವ್ಯಕ್ತಿಯೊಬ್ಬನು ಆಮೇಲೆ ಬೈಬಲ್ ಕಲಿತನು. ಅವನು ಹೇಳುತ್ತಾನೆ: “ನಮ್ಮ ಊರಿನಲ್ಲಿ ಅನೇಕ ಯುವಕರಿಗೆ ಯುದ್ಧದಲ್ಲಿ ಹೋರಾಡಿ ವೀರರೆಂಬ ಹೆಸರು ಪಡೆಯುವಂತೆ ಅವರ ಕುಟುಂಬದವರು, ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಗಳು ಉತ್ತೇಜಿಸುತ್ತಿದ್ದರು. ವಿಪರ್ಯಾಸವೆಂದರೆ, ವಿರೋಧ ಪಕ್ಷದ ಯೋಧರಿಗೂ ಇದನ್ನೇ ಹೇಳಲಾಗುತ್ತಿತ್ತು. ಮಾನವ ಅಧಿಕಾರಿಗಳಲ್ಲಿ ನಂಬಿಕೆಯಿಡುವುದು ಎಷ್ಟು ವ್ಯರ್ಥವೆಂದು ನಾನು ಇದರಿಂದ ಕಲಿತೆ.”
ವಿವೇಕದ ಖಜಾನೆಯಾಗಿರುವ ಒಂದು ಪುರಾತನ ಗ್ರಂಥ ಹೀಗೆ ಹೇಳುತ್ತದೆ:
-
“ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು.” —ಆದಿಕಾಂಡ 8:21.
-
“ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” —ಯೆರೆಮೀಯ 17:9.
-
“ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ . . . ಹೊರಬರುತ್ತವೆ.”—ಮತ್ತಾಯ 15:19.
ತಮ್ಮೊಳಗಿನ ಕೆಟ್ಟ ಗುಣಗಳೆಂಬ ಕಾಯಿಲೆಯನ್ನು ಮಾನವರಿಂದ ವಾಸಿಮಾಡಲು ಆಗುತ್ತಿಲ್ಲ. ಮಾತ್ರವಲ್ಲ, ಈ ದುರ್ಗುಣಗಳು ಇನ್ನೂ ಹರಡುತ್ತಿವೆ. (2 ತಿಮೊಥೆಯ 3:1-5) ಇಂದು ಹಿಂದೆಂದಿಗಿಂತಲೂ ಹೆಚ್ಚು ಮಾಹಿತಿ ಲಭ್ಯ ಇದೆ ಮತ್ತು ಇತರರೊಂದಿಗೆ ಸಂಪರ್ಕಿಸುವುದು ಸುಲಭವಾಗಿದೆ. ಆದರೂ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಹಾಗಾದರೆ ಈ ಲೋಕದಲ್ಲಿ ಶಾಂತಿ ಸುರಕ್ಷತೆ ತರಲು ನಮ್ಮಿಂದ ಯಾಕೆ ಸಾಧ್ಯ ಆಗುತ್ತಿಲ್ಲ? ನಾವು ಅಸಾಧ್ಯವಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇವಾ?
ಗಾಳಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವಾ?
ಒಂದುವೇಳೆ, ನಾವು ಏನೋ ಒಂದು ಅತ್ಭುತವನ್ನು ಮಾಡಿ ಮಾನವರ ಕೆಟ್ಟ ಗುಣಗಳನ್ನು ಬದಲಾಯಿಸಲಿಕ್ಕಾದರೂ, ಈ ಲೋಕವನ್ನು ಶಾಂತಿ
ತುಂಬಿರುವ ಸ್ಥಳವಾಗಿ ಮಾರ್ಪಡಿಸುವುದು ನಮ್ಮಿಂದ ಅಸಾಧ್ಯ. ನಮ್ಮ ಇತಿಮಿತಿಗಳೇ ಇದಕ್ಕೆ ಕಾರಣ.ನಿಜವೇನೆಂದರೆ, “ಮನುಷ್ಯನು . . . ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಅಂದರೆ ನಾವೇ ನಮ್ಮನ್ನು ಆಳುವಂತೆ ನಾವು ಸೃಷ್ಟಿಸಲ್ಪಟ್ಟಿಲ್ಲ. ಅದರರ್ಥ, ನಾವು ಹೇಗೆ ನೀರಿನಲ್ಲಿ ಜೀವಿಸುವಂತೆ ಸೃಷ್ಟಿಸಲ್ಪಡಲಿಲ್ಲವೋ ಹಾಗೇ ಜೊತೆಮಾನವರನ್ನು ಆಳುವಂತೆ ಸೃಷ್ಟಿಸಲ್ಪಡಲಿಲ್ಲ!
ಸ್ವಲ್ಪ ಯೋಚಿಸಿ: ತಾವು ಹೇಗೆ ಜೀವನ ಮಾಡಬೇಕು, ನೈತಿಕವಾಗಿ ಹೇಗಿರಬೇಕು ಅಂತ ಇತರರು ಹೇಳುವುದಾದರೆ ಅದನ್ನು ಯಾರಾದರೂ ಇಷ್ಟಪಡುತ್ತಾರಾ? ಗರ್ಭಪಾತದ ಬಗ್ಗೆ ಅಥವಾ ಮಕ್ಕಳನ್ನು ಬೆಳೆಸುವುದರ ಬಗ್ಗೆ ನನ್ನ ಅಭಿಪ್ರಾಯವನ್ನೇ ಒಪ್ಪಿಕೊಳ್ಳಬೇಕು ಎಂದು ಯಾರಾದರೂ ಹೇಳುವುದಾದರೆ ಜನರಿಗದು ಇಷ್ಟ ಆಗುತ್ತಾ? ಇವು, ಜನರೆಲ್ಲರ ಅಭಿಪ್ರಾಯಗಳು ಒಂದೇ ಆಗಿಲ್ಲ ಎಂದು ತೋರಿಸುವ ಕೆಲವೇ ಕೆಲವು ವಿಷಯಗಳು. ಬೈಬಲ್ ಹೇಳುವಂತೆ ನಮ್ಮನ್ನು ನಾವೇ ಆಳುವಂಥ ಶಕ್ತಿಯಾಗಲಿ ಅಧಿಕಾರವಾಗಲಿ ನಮಗೆ ಇಲ್ಲ ಎಂದು ಇದು ತೋರಿಸಿಕೊಡುತ್ತದೆ. ಇದನ್ನು ಒಪ್ಪಿಕೊಳ್ಳಲು ಕಷ್ಟವಾದರೂ ಇದೇ ನಿಜ. ಹಾಗಾದರೆ ನಮಗೆ ಸಹಾಯ ಯಾರಿಂದ ಸಿಗುತ್ತದೆ?
ಸೃಷ್ಟಿಕರ್ತನಿಂದ ಸಹಾಯ ಪಡೆದುಕೊಳ್ಳುವುದೇ ಸೂಕ್ತ. ಏಕೆಂದರೆ, ನಮ್ಮನ್ನು ಸೃಷ್ಟಿಮಾಡಿದಾತನು ಆತನೇ ಅಲ್ಲವೇ? ಅಷ್ಟೇ ಅಲ್ಲ, ತುಂಬ ಜನರು ನೆನಸುವ ಹಾಗೆ ದೇವರು ನಮ್ಮನ್ನು ಮರೆತು ಬಿಟ್ಟಿಲ್ಲ. ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆ ಎಂದು ಬೈಬಲಿನಲ್ಲಿರುವ ವಿವೇಕದ ಮಾತುಗಳಿಂದ ತಿಳಿದುಕೊಳ್ಳಬಹುದು. ಈ ವಿಶೇಷ ಗ್ರಂಥದಿಂದ ಕಲಿಯುವಾಗ ನಾವು ನಮ್ಮ ಇತಿಮಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ. ಮಾನವನ ಇತಿಹಾಸವು ಯಾಕೆ ಇಷ್ಟು ನೋವಿನಿಂದ ತುಂಬಿದೆ ಅಂತ ಅರಿತುಕೊಳ್ಳುತ್ತೇವೆ. ಒಬ್ಬ ಜರ್ಮನ್ ತತ್ವಜ್ಞಾನಿ ಹೇಳಿದ್ದು: “ಜನರಾಗಲಿ ಸರಕಾರಗಳಾಗಲಿ ಇತಿಹಾಸದಿಂದ ಏನೂ ಕಲಿತಿಲ್ಲ, ಅದನ್ನು ನೋಡಿ ತಮ್ಮ ನಡತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.”
ಬೈಬಲ್ ಜ್ಞಾನವು ನಮ್ಮನ್ನು ಸಂರಕ್ಷಿಸುತ್ತದೆ
“ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು” ಎಂದು ಒಬ್ಬ ವಿವೇಕಿ ರಾಜ ಸೊಲೊಮೋನ ಹೇಳಿದನು. (ಜ್ಞಾನೋಕ್ತಿ 2:11) ನಾವು ಬುದ್ಧಿ ಮತ್ತು ವಿವೇಕವನ್ನು ಪಡೆಯಲು ಬೈಬಲ್ ಸಹಾಯ ಮಾಡುತ್ತದೆ. ಇದಕ್ಕೊಂದು ಉದಾಹರಣೆ ಕೀರ್ತನೆ 146:3. ಅಲ್ಲಿ, “ಮಾನವನನ್ನು ನೆಚ್ಚಬೇಡಿರಿ” ಎಂದು ಹೇಳಲಾಗಿದೆ. ಈ ಸಲಹೆಯು ನಮ್ಮನ್ನು ಸುಳ್ಳು ಆಶ್ವಾಸನೆ ಮತ್ತು ನಿರೀಕ್ಷೆಗಳಿಂದ ಕಾಪಾಡುತ್ತದೆ. ಉತ್ತರ ಅಮೆರಿಕದ ಒಂದು ನಗರದಲ್ಲಿ ತುಂಬ ಗಲಭೆ ನಡೆಯುತ್ತಿತ್ತು. ಆ ನಗರದಲ್ಲಿ ಜೀವಿಸುತ್ತಿರುವ ಕೆನ್ನತ್ ಹೀಗೆ ಹೇಳುತ್ತಾನೆ: “ಒಬ್ಬರ ನಂತರ ಇನ್ನೊಬ್ಬ ರಾಜಕಾರಣಿ ಅಧಿಕಾರಕ್ಕೆ ಬಂದು ಶಾಂತಿ ತರುತ್ತೇವೆ ಎಂದು ಮಾತು ಕೊಡುತ್ತಾರೆ, ಆದರೆ ಅದನ್ನು ಪೂರೈಸಲು ಆಗಲ್ಲ. ಇದು ಬೈಬಲ್ ಹೇಳುವ ಮಾತು ನಿಜ ಎಂದು ಸಾಬೀತುಪಡಿಸುತ್ತದೆ.”
ಹಿಂದಿನ ಲೇಖನದಲ್ಲಿ ನಾವು ನೋಡಿದ ಡ್ಯಾನಿಯಲ್ ಹೀಗೆ ಹೇಳುತ್ತಾನೆ: “ಮನುಷ್ಯರಿಂದ ಸರಿಯಾಗಿ ಆಳ್ವಿಕೆ ಮಾಡಲು ಆಗಲ್ಲ ಅಂತ ಪ್ರತಿದಿನದ ಘಟನೆಗಳು ಪುರಾವೆ ಕೊಡುತ್ತಾ ಇವೆ. ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಪಿಂಚಣಿಯು ವೃದ್ಧಾಪ್ಯದಲ್ಲಿ ಸಹಾಯಮಾಡುತ್ತದೆ ಎಂದು ಭರವಸೆಯಿಡುವುದು ವ್ಯರ್ಥ. ಇದರ ಹಿಂದೆ ಹೋಗಿ ಅನೇಕ ಜನರು ಹತಾಶರಾಗಿದ್ದನ್ನು ನಾನು ನೋಡಿದ್ದೇನೆ.”
ಬೈಬಲ್ ನಮ್ಮನ್ನು ಸುಳ್ಳು ನಿರೀಕ್ಷೆಗಳಿಂದ ಕಾಪಾಡುತ್ತದೆ. ಅಷ್ಟೇ ಅಲ್ಲ, ಅದು ನಮಗೆ ನಿಜ ನಿರೀಕ್ಷೆಯನ್ನೂ ಕೊಡುತ್ತದೆ. ಅದರ ಬಗ್ಗೆ ಮುಂದೆ ನೋಡಲಿದ್ದೇವೆ.
[ಪಾದಟಿಪ್ಪಣಿ]
a ಹೆಸರನ್ನು ಬದಲಾಯಿಸಲಾಗಿದೆ.