ದಂಪತಿಗಳಿಗಾಗಿ
1: ಬದ್ಧತೆ
ಅರ್ಥವೇನು?
ಪರಸ್ಪರ ಬದ್ಧರಾಗಿರುವ ಗಂಡ-ಹೆಂಡತಿ ತಮ್ಮ ಮದುವೆಯನ್ನು ಶಾಶ್ವತ ಬಂಧ ಎಂದು ಎಣಿಸುತ್ತಾರೆ. ಇದರಿಂದ ಅವರಲ್ಲಿ ಸುರಕ್ಷಿತ ಭಾವನೆ ಇರುತ್ತದೆ. ಯಾವುದೇ ಕಷ್ಟ ಬಂದರೂ ತನ್ನ ಸಂಗಾತಿಯು ಮದುವೆಯ ಬಂಧವನ್ನು ಮುರಿಯುವುದಿಲ್ಲ ಎಂಬ ಭರವಸೆ ಇಬ್ಬರಿಗೂ ಇರುತ್ತದೆ.
ಕೆಲವು ದಂಪತಿಗಳಿಗೆ ಒಟ್ಟಿಗಿರಲು ಇಷ್ಟವಿಲ್ಲದಿದ್ದರೂ ಸಮಾಜದ ಅಥವಾ ಕುಟುಂಬದ ಒತ್ತಡದಿಂದಾಗಿ ಒಟ್ಟಿಗೆ ಜೀವಿಸುತ್ತಾರೆ. ಇದರ ಬದಲು ಒಬ್ಬರಿಗೊಬ್ಬರ ಮೇಲಿರುವ ಪ್ರೀತಿ ಮತ್ತು ಗೌರವದ ಕಾರಣ ಸಂಗಾತಿಗೆ ಬದ್ಧರಾಗಿರಬೇಕು ಎಂಬ ಪ್ರಜ್ಞೆಯಿಂದ ಒಟ್ಟಿಗಿರುವುದೇ ಎಷ್ಟೋ ಮೇಲು.
ಬೈಬಲ್ ತತ್ವ: “ಗಂಡನು ತನ್ನ ಹೆಂಡತಿಯನ್ನು ಬಿಡಬಾರದು.”—1 ಕೊರಿಂಥ 7:11.
“ನೀವು ನಿಮ್ಮ ಮದುವೆಗೆ ಬದ್ಧರಾಗಿದ್ದರೆ ಎಲ್ಲದಕ್ಕೂ ಕೂಡಲೇ ಕೋಪ ಮಾಡಿಕೊಳ್ಳುವುದಿಲ್ಲ. ಬೇಗನೇ ಕ್ಷಮಿಸುತ್ತೀರಿ ಮಾತ್ರವಲ್ಲ, ಬೇಗನೇ ಕ್ಷಮೆ ಕೇಳುತ್ತೀರಿ ಸಹ. ಸಮಸ್ಯೆಗಳನ್ನು ಮೆಟ್ಟಿನಿಲ್ಲಬಹುದಾದ ಅಡ್ಡಿತಡೆಗಳಾಗಿ ಎಣಿಸುತ್ತೀರೇ ಹೊರತು ಮದುವೆ ಮುರಿಯಲು ಕಾರಣಗಳೆಂದಲ್ಲ.”—ಮೈಕಾ.
ಯಾಕೆ ಮುಖ್ಯ?
ಬದ್ಧತೆ ಇಲ್ಲದ ಗಂಡ-ಹೆಂಡತಿ ಸಮಸ್ಯೆಗಳು ಎದುರಾದಾಗ ಹೆಚ್ಚಾಗಿ, ‘ನಾವು ಒಬ್ಬರಿಗೊಬ್ಬರು ತಕ್ಕ ಜೋಡಿಯಲ್ಲ’ ಎನ್ನುತ್ತಾ ಮದುವೆಯ ಬಂಧದಿಂದ ಬಿಡುಗಡೆ ಪಡೆಯುವ ಅವಕಾಶಕ್ಕಾಗಿ ನೋಡುತ್ತಾರೆ.
“ವಿಚ್ಛೇದನ ಎಂಬ ‘ಬದಲಿ ಯೋಜನೆ’ ಇದೆಯೆಂದು ತಿಳಿದು ಅನೇಕರು ಮದುವೆ ಜೀವನಕ್ಕೆ ಕಾಲಿಡುತ್ತಾರೆ. ಹೀಗೆ ವಿಚ್ಛೇದನದ ಯೋಚನೆಯನ್ನು ಮನಸ್ಸಿನಲ್ಲಿಟ್ಟು ಮದುವೆಯಾಗುವವರಿಗೆ ಆರಂಭದಿಂದಲೇ ಬದ್ಧತೆ ಇರುವುದಿಲ್ಲ.”—ಜೀನ್.
ನೀವೇನು ಮಾಡಬಹುದು?
ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ
ಜಗಳ ನಡೆದಾಗ . . .
-
‘ಇವನನ್ನು/ಳನ್ನು ಯಾಕಪ್ಪಾ ಮದುವೆಯಾದೆ’ ಅಂತ ವಿಷಾದಿಸುತ್ತೀರಾ?
-
ಬೇರೆ ಯಾರನ್ನೋ ಮದುವೆಯಾಗಿದ್ದರೆ ಜೀವನ ಹೇಗಿರುತ್ತಿತ್ತು ಎಂದು ಹಗಲುಗನಸು ಕಾಣುತ್ತೀರಾ?
-
‘ಸಾಕಾಯ್ತು, ಇನ್ನು ಮುಂದೆ ನಿನ್ನೊಟ್ಟಿಗೆ ಇರಲ್ಲ’ ಅಂತನೋ, ‘ನಂಗೆ ಗೌರವ ಕೊಡುವವ್ರು ಯಾರಾದ್ರೂ ಸಿಗ್ತಾರೆ ಬಿಡು’ ಅಂತನೋ ಹೇಳುತ್ತೀರಾ?
ಇವುಗಳಲ್ಲಿ ಒಂದು ಅಥವಾ ಹೆಚ್ಚಿನ ಪ್ರಶ್ನೆಗಳಿಗೆ ‘ಹೌದು’ ಎಂದು ನೀವು ಉತ್ತರಿಸಿರುವಲ್ಲಿ ಬದ್ಧತೆಯನ್ನು ಬಲಗೊಳಿಸಲು ಈಗಲೇ ಕ್ರಮ ಕೈಗೊಳ್ಳಿ.
ಸಂಗಾತಿಯೊಂದಿಗೆ ಇದನ್ನು ಚರ್ಚಿಸಿ:
-
ನಮ್ಮ ವಿವಾಹ ಜೀವನದಲ್ಲಿ ಬದ್ಧತೆ ಕಡಿಮೆಯಾಗುತ್ತಿದೆಯಾ? ಹೌದಾದರೆ ಯಾಕಿರಬಹುದು?
-
ಬದ್ಧತೆಯನ್ನು ಬಲಗೊಳಿಸಲು ನಾವೀಗ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?
ಕಿವಿಮಾತು
-
ನಿಮ್ಮ ಸಂಗಾತಿಗೆ ಪ್ರೀತಿಯ ಮಾತುಗಳನ್ನು ಆಗಾಗ್ಗೆ ಚಿಕ್ಕ ಚೀಟಿಯಲ್ಲಿ ಬರೆದುಕೊಡಿ
-
ಕೆಲಸದ ಸ್ಥಳದಲ್ಲಿ ಸಂಗಾತಿಯ ಫೋಟೋಗಳನ್ನು ಇಡುವ ಮೂಲಕ ನೀವು ಅವರಿಗೆ ಬದ್ಧರಾಗಿದ್ದೀರೆಂದು ತೋರಿಸಿ
-
ಕೆಲಸದ ಸ್ಥಳದಲ್ಲಿರುವಾಗ ಅಥವಾ ಸಂಗಾತಿಯಿಂದ ದೂರದಲ್ಲಿ ಇರುವಾಗೆಲ್ಲಾ ಪ್ರತಿದಿನ ನಿಮ್ಮ ಸಂಗಾತಿಗೆ ಫೋನ್ ಮಾಡಿ
ಬೈಬಲ್ ತತ್ವ: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮತ್ತಾಯ 19:6.