ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರಿಗೆ ವಿಧೇಯರಾಗುವುದು ಬ್ಯಾಂಕಿನ ಸಾಲ ತೀರಿಸಿದಂತಿದೆ. ನೀವು ಎಷ್ಟು ಹೆಚ್ಚು ವಿಶ್ವಾಸಾರ್ಹರು ಆಗಿರುತ್ತೀರೋ ಅಷ್ಟೇ ಹೆಚ್ಚು ನಂಬಿಕೆ ಗಳಿಸಬಲ್ಲಿರಿ (ಸಾಲ ಪಡೆಯಬಲ್ಲಿರಿ)

ಯುವಜನರಿಗಾಗಿ

10: ವಿಶ್ವಾಸಾರ್ಹತೆ

10: ವಿಶ್ವಾಸಾರ್ಹತೆ

ಅರ್ಥವೇನು?

ವಿಶ್ವಾಸಾರ್ಹ ಜನರು ತಮ್ಮ ಹೆತ್ತವರ, ಸ್ನೇಹಿತರ, ಯಜಮಾನರ ನಂಬಿಕೆಯನ್ನು ಗಳಿಸುತ್ತಾರೆ. ಅವರು ನಿಯಮಗಳನ್ನು ಪಾಲಿಸುತ್ತಾರೆ, ಕೊಟ್ಟ ಮಾತಿನಂತೆ ನಡೆಯುತ್ತಾರೆ ಮತ್ತು ಯಾವಾಗಲೂ ಸತ್ಯವನ್ನಾಡುತ್ತಾರೆ.

ಯಾಕೆ ಮುಖ್ಯ?

ಬಹುಮಟ್ಟಿಗೆ ಯಾವುದೇ ವಿಷಯದಲ್ಲಿ ನಿಮಗೆಷ್ಟು ಸ್ವಾತಂತ್ರ್ಯ ಕೊಡಲಾಗುತ್ತದೆ ಎನ್ನುವುದು ನೀವೆಷ್ಟು ನಂಬಿಕೆ ಗಳಿಸಿದ್ದೀರಿ ಎನ್ನುವುದರ ಮೇಲೆ ಹೊಂದಿಕೊಂಡಿದೆ.

“ಹೆತ್ತವರ ನಂಬಿಕೆ ಗಳಿಸುವ ಅತ್ಯುತ್ತಮ ವಿಧ ನೀವು ಪ್ರೌಢ, ಜವಾಬ್ದಾರಿಯುತ ವ್ಯಕ್ತಿ ಆಗಿದ್ದೀರೆಂದು ರುಜುಪಡಿಸುವುದೇ ಆಗಿದೆ. ಇದನ್ನು ಅವರಿದ್ದಾಗ ಮಾತ್ರವಲ್ಲ, ಇಲ್ಲದಿದ್ದಾಗಲೂ ಮಾಡಬೇಕು.”—ಸೆರಯಿ.

ಬೈಬಲ್‌ ತತ್ವ: “ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ.”—2 ಕೊರಿಂಥ 13:5.

ನೀವೇನು ಮಾಡಬಹುದು?

ಹೆಚ್ಚು ನಂಬಿಕೆ ಗಳಿಸಲು ಅಥವಾ ಕಳೆದುಕೊಂಡ ನಂಬಿಕೆಯನ್ನು ಮತ್ತೆ ಪಡೆಯಲು ಈ ಕೆಳಗಿನ ಹೆಜ್ಜೆಗಳು ಸಹಾಯ ಮಾಡುತ್ತವೆ:

ಪ್ರಾಮಾಣಿಕರಾಗಿರಿ. ಸುಳ್ಳು ಹೇಳಿದರೆ ಜನರಿಗೆ ನಿಮ್ಮ ಮೇಲಿನ ನಂಬಿಕೆ ಹೋಗಿಬಿಡುತ್ತದೆ. ಆದರೆ ಏನೂ ಮುಚ್ಚಿಡದೆ, ಮುಖ್ಯವಾಗಿ ನಿಮ್ಮ ತಪ್ಪುಗಳನ್ನೂ ಮುಚ್ಚಿಡದೆ ಪ್ರಾಮಾಣಿಕರಾಗಿದ್ದರೆ ಅವರ ನಂಬಿಕೆ ಗಳಿಸಬಹುದು.

“ಎಲ್ಲಾ ಚೆನ್ನಾಗಿರುವಾಗ ಪ್ರಾಮಾಣಿಕರಾಗಿರುವುದು ಸುಲಭ. ಆದರೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬಹುದೆಂದು ಗೊತ್ತಿದ್ದೂ ಪ್ರಾಮಾಣಿಕರಾಗಿದ್ದರೆ ಜನರಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ.”—ಕೇಮನ್‌.

ಬೈಬಲ್‌ ತತ್ವ: ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’—ಇಬ್ರಿಯ 13:18.

ನಂಬಿಕೆಗೆ ಅರ್ಹರಾಗಿರಿ. ಅಮೆರಿಕದಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ, “ಒಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದರೆ ಅವರಲ್ಲಿ ಇರಬೇಕಾದ ಮೂರು ಮುಖ್ಯ ಕೌಶಲಗಳಲ್ಲಿ ಒಂದು” ವಿಶ್ವಾಸಾರ್ಹತೆ ಆಗಿದೆ ಎಂದು ಮಾನವ ಸಂಪನ್ಮೂಲ ವೃತ್ತಿಯಲ್ಲಿರುವವರಲ್ಲಿ ಶೇಕಡಾ 78 ಮಂದಿ ಸೂಚಿಸಿದರು. ಹಾಗಾಗಿ ನೀವು ಈಗಲೇ ನಂಬಿಕೆಗೆ ಅರ್ಹರಾಗಿ ನಡೆದುಕೊಳ್ಳಲು ಕಲಿತರೆ ದೊಡ್ಡವರಾದಾಗ ಪ್ರಯೋಜನವಾಗುತ್ತದೆ.

“ನಾನು ಮನೆಕೆಲಸವನ್ನು ಜವಾಬ್ದಾರಿಯುತವಾಗಿ, ಪುನಃಪುನಃ ಹೇಳುವ ಅಗತ್ಯ ಇಲ್ಲದೆ ಮಾಡಿದರೆ ನನ್ನ ಹೆತ್ತವರು ಗಮನಿಸುತ್ತಾರೆ. ಹೀಗೆ ನಾನೇ ಮುಂದೆ ಬಂದು ಎಷ್ಟು ಕೆಲಸ ಮಾಡುತ್ತೇನೋ ಅವರು ನನ್ನ ಮೇಲೆ ಅಷ್ಟೇ ಹೆಚ್ಚು ಭರವಸೆ ಇಡುತ್ತಾರೆ.”—ಸಾರಾ.

ಬೈಬಲ್‌ ತತ್ವ: ‘ನೀನು ನನ್ನ ಮಾತನ್ನು ಕೇಳುವಿ ಎಂಬ ಭರವಸೆ ನನಗಿದೆ. ನಾನು ಹೇಳುವುದಕ್ಕಿಂತಲೂ ಹೆಚ್ಚನ್ನೇ ಮಾಡುವಿ ಎಂದು ನನಗೆ ಗೊತ್ತು.’—ಫಿಲೆಮೋನ 21.

ತಾಳ್ಮೆಯಿಂದಿರಿ. ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯು ಶಾರೀರಿಕ ಬೆಳವಣಿಗೆಯಂತೆ ನೋಡಿದಾಕ್ಷಣ ಕಣ್ಣಿಗೆ ಬೀಳುವುದಿಲ್ಲ. ಇತರರು ಅದನ್ನು ಗುರುತಿಸಲು ಸಮಯ ಹಿಡಿಯುತ್ತದೆ.

“ಒಂದೇ ಒಂದು ಸಲ ಯಾವುದೊ ಕೆಲಸ ಮಾಡಿ ಹೆತ್ತವರ ಮತ್ತು ಇತರರ ನಂಬಿಕೆ ಗಳಿಸಲಿಕ್ಕಾಗುವುದಿಲ್ಲ. ಆದರೆ ಯಾವಾಗಲೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾ ಇದ್ದರೆ ಸ್ವಲ್ಪಸ್ವಲ್ಪವಾಗಿ ಅವರ ನಂಬಿಕೆ ಗಳಿಸಬಹುದು.”—ಬ್ರಾಂಡನ್‌.

ಬೈಬಲ್‌ ತತ್ವ: ‘ನೀವು ದೀರ್ಘ ಸಹನೆಯನ್ನು [ತಾಳ್ಮೆಯನ್ನು] ಧರಿಸಿಕೊಳ್ಳಿರಿ.’—ಕೊಲೊಸ್ಸೆ 3:12.