ಪಾಠ 2 ದೀನತೆ
ದೀನತೆ
ದೀನ ಜನರು ಇತರರಿಗೆ ಗೌರವ ತೋರಿಸುತ್ತಾರೆ, ಅಹಂಕಾರದಿಂದ ನಡೆದುಕೊಳ್ಳುವುದಿಲ್ಲ, ಇತರರು ತಮಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂದು ಬಯಸುವುದಿಲ್ಲ. ಬದಲಿಗೆ, ಇತರರ ಬಗ್ಗೆ ನಿಜವಾದ ಆಸಕ್ತಿ ತೋರಿಸುತ್ತಾರೆ ಮತ್ತು ಅವರಿಂದ ಕಲಿಯಲು ಸಿದ್ಧರಿರುತ್ತಾರೆ.
ಕೆಲವರು ದೀನತೆ ಒಂದು ಬಲಹೀನತೆ ಎಂದು ಎಣಿಸುತ್ತಾರೆ. ಆದರೆ, ಅದೊಂದು ಬಲವಾದ ಗುಣವೇ ಹೊರತು ಬಲಹೀನತೆ ಅಲ್ಲ. ಒಬ್ಬ ವ್ಯಕ್ತಿ ತನ್ನ ತಪ್ಪುಗಳನ್ನು ಮತ್ತು ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಲು ಈ ಗುಣ ಸಹಾಯ ಮಾಡುತ್ತದೆ.
ದೀನತೆ ಯಾಕೆ ಮುಖ್ಯ?
-
ದೀನರಾಗಿದ್ದರೆ ಸಂಬಂಧಗಳು ಚೆನ್ನಾಗಿರುತ್ತವೆ. ದ ನಾಸಿಸಿಸಮ್ ಎಪಿಡಮಿಕ್ ಎಂಬ ಪುಸ್ತಕದ ಪ್ರಕಾರ, “ದೀನರು ಬೇರೆಲ್ಲರಿಗಿಂತ ಬೇಗ ಇತರರಿಗೆ ಹತ್ತಿರವಾಗುತ್ತಾರೆ. ಇಂಥವರಿಗೆ ಇತರರೊಂದಿಗೆ ಮಾತಾಡಲು, ಬೆರೆಯಲು ಸುಲಭವಾಗುತ್ತದೆ.”
-
ಮಕ್ಕಳು ದೀನರಾಗಿದ್ದರೆ ಅವರ ಜೀವನ ಚೆನ್ನಾಗಿರುತ್ತದೆ. ಮಕ್ಕಳು ದೀನರಾಗಿರಲು ಕಲಿತರೆ ಈಗಲೂ ಮುಂದೆಯೂ ಅವರಿಗೆ ಪ್ರಯೋಜನವಾಗುತ್ತದೆ. ಉದಾಹರಣೆಗೆ, ಕೆಲಸ ಹುಡುಕುವಾಗ ಸಹಾಯವಾಗುತ್ತದೆ. “ಅತಿಯಾದ ಸ್ವ-ಗೌರವ ಇರುವ ಒಬ್ಬ ವ್ಯಕ್ತಿಗೆ ತನ್ನ ಬಲಹೀನತೆಗಳ ಬಗ್ಗೆ ಗೊತ್ತಿರುವುದಿಲ್ಲ. ಅವರಿಗೆ ಕೆಲಸದ ಇಂಟರ್‌ವ್ಯೂನಲ್ಲಿ ಒಳ್ಳೇ ಫಲಿತಾಂಶ ಸಿಗುವುದು ಕಡಿಮೆ. ಆದರೆ, ಇಂಟರ್‌ವ್ಯೂ ಮಾಡುತ್ತಿರುವವನು ಏನನ್ನು ನಿರೀಕ್ಷಿಸುತ್ತಾನೆ ಎಂದು ನಿಜವಾಗಿಯೂ ತಿಳಿದುಕೊಳ್ಳಲು ಬಯಸುವವರಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು” ಎಂದು ಡಾ. ಲೀನಾರ್ಡ್ ಸ್ಯಾಕ್ಸ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. *
ದೀನರಾಗಿರಲು ಕಲಿಸುವುದು ಹೇಗೆ?
ತಾವೇ ಶ್ರೇಷ್ಠರು ಎಂದು ಭಾವಿಸದಿರಲು ಮಕ್ಕಳಿಗೆ ಸಹಾಯಮಾಡಿ.
ಬೈಬಲ್ ತತ್ವ: “ಏನೂ ಅಲ್ಲದವನೊಬ್ಬನು ತಾನು ಏನೊ ಆಗಿದ್ದೇನೆಂದು ನೆನಸುವುದಾದರೆ ಅವನು ತನ್ನ ಮನಸ್ಸನ್ನೇ ಮೋಸಗೊಳಿಸಿಕೊಳ್ಳುತ್ತಿದ್ದಾನೆ.”—ಗಲಾತ್ಯ 6:3.
-
ಎಲ್ಲವೂ ಸಾಧ್ಯವೆಂಬಂತೆ ಮಾತಾಡದೆ ನಿಜತ್ವಗಳನ್ನು ತಿಳಿಸಿ. “ನಿನ್ನ ಎಲ್ಲಾ ಕನಸುಗಳೂ ನನಸಾಗುತ್ತವೆ” ಮತ್ತು “ನೀನು ಜೀವನದಲ್ಲಿ ಏನು ಬೇಕಾದ್ರೂ ಸಾಧಿಸಬಹುದು” ಎಂಬ ಮಾತುಗಳಿಂದ ಮಕ್ಕಳಿಗೆ ಉತ್ತೇಜನ ಸಿಗುತ್ತದೆಂದು ನಾವು ನೆನಸಬಹುದು. ಆದರೆ, ನಿಜ ಜೀವನದಲ್ಲಿ ಆ ರೀತಿ ಆಗುವುದಿಲ್ಲ. ಹಾಗಾಗಿ, ಮಕ್ಕಳು ತಲುಪಲು ಸಾಧ್ಯವಾಗುವಂಥ ಗುರಿಗಳನ್ನಿಟ್ಟು, ಅವುಗಳನ್ನು ತಲುಪಲು ಪ್ರಯತ್ನಿಸಲು ಸಹಾಯ ಮಾಡಿ. ಆಗ ಜೀವನದಲ್ಲಿ ಹೆಚ್ಚು ಯಶಸ್ಸು ಪಡೆಯುವ ಸಾಧ್ಯತೆ ಇದೆ.
-
ಮಕ್ಕಳನ್ನು ಪ್ರಶಂಸಿಸುವಾಗ ಕಾರಣ ತಿಳಿಸಿ. ಹೆತ್ತವರು ತಮ್ಮ ಮಕ್ಕಳನ್ನು ಸುಮ್ಮಸುಮ್ಮನೆ ಹೊಗಳುವುದರಿಂದ ಅವರಲ್ಲಿ ದೀನತೆ ಬೆಳೆಯುವುದಿಲ್ಲ. ಆದ್ದರಿಂದ, ಅವರೇನು ಒಳ್ಳೇದು ಮಾಡಿದ್ದಾರೆಂದು ನಿರ್ದಿಷ್ಟವಾಗಿ ಹೇಳಿ, ಹೊಗಳಿ.
-
ಮಕ್ಕಳು ಸಾಮಾಜಿಕ ಜಾಲತಾಣವನ್ನು ಮಿತವಾಗಿ ಬಳಸುವಂತೆ ನೋಡಿಕೊಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಜನರು ಹೆಚ್ಚಾಗಿ ತಾವೆಷ್ಟು ಒಳ್ಳೆಯವರೆಂದು ಮತ್ತು ತಮಗೆಷ್ಟು ಒಳ್ಳೇ ಪ್ರತಿಭೆ ಇದೆ ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಇದರಿಂದ ದೀನತೆ ಅಲ್ಲ, ಅಹಂಕಾರ ಬೆಳೆಯುತ್ತದೆ.
-
ತಪ್ಪಾದ ಕೂಡಲೆ ಕ್ಷಮೆ ಕೇಳಲು ಕಲಿಸಿ. ಮಕ್ಕಳು ತಮ್ಮ ತಪ್ಪುಗಳನ್ನು ಗುರುತಿಸಿ, ಒಪ್ಪಿಕೊಳ್ಳಲು ಅವರಿಗೆ ಸಹಾಯ ಮಾಡಿ.
ಮಕ್ಕಳಲ್ಲಿ ಕೃತಜ್ಞತಾಭಾವ ಬೆಳೆಸಿ.
ಬೈಬಲ್ ತತ್ವ: “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ.”—ಕೊಲೊಸ್ಸೆ 3:15.
-
ಸೃಷ್ಟಿಯ ಕಡೆಗೆ ಕೃತಜ್ಞತಾಭಾವ. ಮಕ್ಕಳು ಸೃಷ್ಟಿಯಲ್ಲಿರುವ ಎಲ್ಲಾ ವಿಷಯಗಳಿಗಾಗಿ ಕೃತಜ್ಞತೆ ತೋರಿಸಲು ಕಲಿಯಬೇಕು ಮತ್ತು ನಮ್ಮ ಜೀವನಕ್ಕೆ ಅವುಗಳಲ್ಲಿ ಅನೇಕ ವಿಷಯಗಳು ಅತ್ಯಗತ್ಯ ಎಂದು ಅರ್ಥಮಾಡಿಕೊಂಡಿರಬೇಕು. ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು, ತಿನ್ನಲು ಆಹಾರ ಬೇಕು. ಈ ಉದಾಹರಣೆಗಳನ್ನು ಉಪಯೋಗಿಸುತ್ತಾ ಸೃಷ್ಟಿಯಲ್ಲಿರುವ ಅದ್ಭುತಕರ ವಿಷಯಗಳ ಕಡೆಗೆ ಮಕ್ಕಳಲ್ಲಿ ಕೃತಜ್ಞತೆ ಮತ್ತು ಗಣ್ಯತೆ ಮೂಡಿಸಬೇಕು.
-
ಜನರ ಕಡೆಗೆ ಕೃತಜ್ಞತಾಭಾವ. ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ವಿಷಯದಲ್ಲಿ ನಮಗಿಂತ ಶ್ರೇಷ್ಠರಾಗಿದ್ದಾರೆ. ಆದ್ದರಿಂದ, ನಾವು ಇತರರಲ್ಲಿರುವ ಒಳ್ಳೇ ಸಾಮರ್ಥ್ಯಗಳ ಬಗ್ಗೆ ಹೊಟ್ಟೆಕಿಚ್ಚುಪಡದೆ ಅವುಗಳನ್ನು ನೋಡಿ ಕಲಿಯಬಹುದು ಎಂದು ಮಕ್ಕಳಿಗೆ ಮನಗಾಣಿಸಿ.
-
ಕೃತಜ್ಞತೆ ಹೇಳಲು ಕಲಿಸಿ. ಧನ್ಯವಾದವನ್ನು ಬರೀ ಮಾತಿನಲ್ಲಿ ಹೇಳದೆ ಮನದಾಳದಿಂದ ಹೇಳಲು ಮಕ್ಕಳಿಗೆ ಕಲಿಸಿ. ಯಾಕೆಂದರೆ, ಕೃತಜ್ಞತಾಭಾವವು ದೀನತೆಯ ಗುರುತು.
ಇತರರಿಗೆ ಸಹಾಯ ಮಾಡುವುದು ಒಳ್ಳೇದೆಂದು ಮಕ್ಕಳಿಗೆ ಕಲಿಸಿ.
ಬೈಬಲ್ ತತ್ವ: “ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ. ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿಪ್ಪಿ 2:3, 4.
-
ಮಕ್ಕಳಿಗೆ ಮನೆಯಲ್ಲಿ ಕೆಲಸ ಕೊಡಿ. ಮಕ್ಕಳಿಗೆ ಮನೆಯಲ್ಲಿ ಯಾವುದೇ ಕೆಲಸ ಕೊಡದಿದ್ದರೆ ಅವರಿಗೆ, ‘ನಾನು, ನನ್ನ ಕೆಲಸಗಳೇ ಎಲ್ಲದಕ್ಕಿಂತ ಮುಖ್ಯ’ ಎಂಬ ಭಾವನೆ ಮೂಡುತ್ತದೆ. ಹಾಗಾಗಿ, ಮನೆಯ ಕೆಲಸಕ್ಕೆ ಮೊದಲ ಸ್ಥಾನ, ಆಟಕ್ಕೆ ನಂತರದ ಸ್ಥಾನ ಕೊಡಬೇಕೆಂದು ಕಲಿಸಿ. ಮನೆಯಲ್ಲಿ ಕೆಲಸ ಮಾಡುವುದರಿಂದ ಇತರರಿಗೆ ತುಂಬ ಪ್ರಯೋಜನವಾಗುತ್ತದೆ, ಅವರು ಅದನ್ನು ತುಂಬ ಗಣ್ಯ ಮಾಡುತ್ತಾರೆ ಮತ್ತು ಅದನ್ನು ಮಾಡಿದ್ದಕ್ಕಾಗಿ ತುಂಬ ಗೌರವಿಸುತ್ತಾರೆ ಎಂದು ಮಕ್ಕಳಿಗೆ ಅರ್ಥಮಾಡಿಸಿ.
-
ಇತರರಿಗೆ ಸಹಾಯ ಮಾಡುವುದು ಒಳ್ಳೇದೆಂದು ಅರ್ಥಮಾಡಿಸಿ. ಇತರರಿಗೆ ಸಹಾಯ ಮಾಡುವುದು ಮಕ್ಕಳಿಗೆ ಪ್ರೌಢರಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಯಾರಿಗೆ ಸಹಾಯದ ಅಗತ್ಯವಿದೆಯೆಂದು ಮಕ್ಕಳೇ ಕಂಡುಹಿಡಿಯುವಂತೆ ಪ್ರೋತ್ಸಾಹಿಸಿ. ಹೇಗೆಲ್ಲಾ ಸಹಾಯ ಮಾಡಬಹುದೆಂದು ಅವರೊಂದಿಗೆ ಚರ್ಚಿಸಿ. ಇತರರಿಗೆ ಸಹಾಯ ಮಾಡುವಾಗ ಮಕ್ಕಳ ಬೆನ್ನುತಟ್ಟಿ, ಬೆಂಬಲಿಸಿ.
^ ಪ್ಯಾರ. 7 ದ ಕೊಲ್ಯಾಪ್ಸ್ ಆಫ್ ಪೇರೆಂಟಿಂಗ್ ಎಂಬ ಪುಸ್ತಕ.