ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಕಾಸವೇ? ವಿನ್ಯಾಸವೇ?

ನೀರುನಾಯಿಯ ಕೂದಲು

ನೀರುನಾಯಿಯ ಕೂದಲು

ನೀರಿನಲ್ಲಿ ಬದುಕುವ ಅನೇಕ ಪ್ರಾಣಿಗಳ ಚರ್ಮದ ಕೆಳಗೆ ಕೊಬ್ಬಿನ ದಪ್ಪ ಪದರ ಇರುತ್ತದೆ. ಇದರಿಂದ ನೀರು ಎಷ್ಟೇ ತಣ್ಣಗಿದ್ದರೂ ಅವುಗಳ ದೇಹ ಬೆಚ್ಚಗಿರಲು ಸಾಧ್ಯವಾಗುತ್ತದೆ. ಆದರೆ ನೀರುನಾಯಿಗೆ ಹಾಗಿಲ್ಲ. ಅವುಗಳಿಗೆ ಚಳಿಯಿಂದ ರಕ್ಷಿಸಲು ಅದರ ಮೈ ತುಂಬಾ ಒತ್ತೊತ್ತಾದ ಕೂದಲಿದೆ.

ಪರಿಗಣಿಸಿ: ನೀರುನಾಯಿಯ ಕೂದಲು ಬೇರೆ ಯಾವುದೇ ಪ್ರಾಣಿಯ ಕೂದಲಿಗಿಂತ ತುಂಬಾ ಒತ್ತೊತ್ತಾಗಿರುತ್ತದೆ. ಅದರ ಚರ್ಮದ ಒಂದು ಚದರ ಇಂಚಿನಲ್ಲಿ ಸುಮಾರು ಹತ್ತು ಲಕ್ಷದಷ್ಟು ಕೂದಲುಗಳಿರುತ್ತವೆ (ಒಂದು ಚದರ ಸೆಂ.ಮೀ.ಗೆ 1,55,000). ನೀರುನಾಯಿ ನೀರಿಗೆ ಇಳಿದಾಗ ಅದರ ಕೂದಲು ಮತ್ತು ದೇಹದ ಮಧ್ಯದಲ್ಲಿ ಗಾಳಿ ಉಳಿದುಕೊಳ್ಳುತ್ತದೆ. ಈ ಗಾಳಿ ಅದರ ಚರ್ಮಕ್ಕೆ ನೀರು ತಾಗದಂತೆ ತಡೆಯುತ್ತದೆ. ಹೀಗೆ ಅದರ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ನೀರುನಾಯಿಯ ಕೂದಲಿನಿಂದ ವಿಜ್ಞಾನಿಗಳು ಒಂದು ವಿಷಯವನ್ನು ಕಲಿಯುತ್ತಿದ್ದಾರೆ. ಅವರು ಈ ವಿಧಾನವನ್ನು ಬಟ್ಟೆ ತಯಾರಿಕೆಯಲ್ಲಿ ಬಳಸಲು ಪ್ರಯತ್ನಿಸಿದ್ದಾರೆ. ಬಟ್ಟೆಗಳಲ್ಲಿನ ಕೂದಲಿನ ಉದ್ದ ಮತ್ತು ಅವುಗಳ ಮಧ್ಯೆ ಇರುವ ಅಂತರವನ್ನು ಬದಲಾಯಿಸುತ್ತಾ ಬೇರೆ ಬೇರೆ ರೀತಿಯಲ್ಲಿ ಕೃತಕ ಕೂದಲಿನ ಬಟ್ಟೆಗಳನ್ನು ತಯಾರಿಸಿದ್ದಾರೆ. “ಬಟ್ಟೆಯಲ್ಲಿನ ಕೂದಲು ಎಷ್ಟು ಹೆಚ್ಚು ಒತ್ತೊತ್ತಾಗಿ ಮತ್ತು ಉದ್ದುದ್ದವಾಗಿ ಇರುತ್ತದೋ ಅಂಥ ಬಟ್ಟೆಯು ನೀರಿನಿಂದ ಅಷ್ಟೇ ಹೆಚ್ಚು ಸಂರಕ್ಷಣೆ ನೀಡುತ್ತದೆ” ಎಂದು ಅವರಿಗೆ ತಿಳಿದುಬಂದಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನೀರುನಾಯಿಯ ಕೂದಲ ಹೊದಿಕೆ ಪ್ರಪಂಚದಲ್ಲೇ ಅತಿ ಉತ್ತಮವಾದದ್ದಾಗಿದೆ.

ಈ ಅಧ್ಯಯನದಿಂದ ತಂತ್ರಜ್ಞಾನದಲ್ಲಿ ಪ್ರಗತಿ ಮಾಡಿ ನೀರಿನಿಂದ ಸಂರಕ್ಷಣೆ ಪಡೆಯುವ ವಿಶೇಷ ಬಟ್ಟೆಯನ್ನು ತಯಾರಿಸಬಹುದು ಎಂದು ಸಂಶೋಧಕರು ಅಂದುಕೊಂಡಿದ್ದಾರೆ. ಹಾಗಾಗಿ, ಕೊರೆಯುವಷ್ಟು ತಣ್ಣಗಿರುವ ನೀರಿನಲ್ಲಿ ಹೋಗುವವರು ನೀರುನಾಯಿ ಕೂದಲಿನಂತೆ ಇರುವ ಈಜು ಬಟ್ಟೆಯನ್ನು ಹಾಕಿಕೊಳ್ಳುವುದು ಉತ್ತಮ ಎಂದು ಕೆಲವರು ಯೋಚಿಸುತ್ತಾರೆ.

ನೀವೇನು ನೆನಸುತ್ತೀರಿ? ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ನೀರುನಾಯಿಯ ಕೂದಲು ವಿಕಾಸವಾಗಿ ಬಂತಾ? ಅಥವಾ ಒಬ್ಬ ಸೃಷ್ಟಿಕರ್ತ ಇದನ್ನು ವಿನ್ಯಾಸಿಸಿದನಾ? ◼