ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಜೊತೆ ಪ್ರತಿ ದಿನ ಕೆಲಸ ಮಾಡಿ

ಯೆಹೋವನ ಜೊತೆ ಪ್ರತಿ ದಿನ ಕೆಲಸ ಮಾಡಿ

“ನಾವು ದೇವರ ಜೊತೆಕೆಲಸಗಾರರಾಗಿದ್ದೇವೆ.”—1 ಕೊರಿಂ. 3:9.

ಗೀತೆಗಳು: 44, 75

1. ನಾವು ಯಾವ ವಿಧಗಳಲ್ಲಿ ಯೆಹೋವನ ಜೊತೆ ಕೆಲಸ ಮಾಡಬಹುದು?

ಯೆಹೋವನು ಮಾನವರನ್ನು ಸೃಷ್ಟಿಮಾಡಿದಾಗ ಅವರು ತನ್ನ ಜೊತೆ ಸೇರಿ ಕೆಲಸ ಮಾಡಬೇಕೆಂದು ಆತನು ಬಯಸಿದನು. ಇಂದು ಮಾನವರು ಅಪರಿಪೂರ್ಣರು ಆಗಿರುವುದಾದರೂ ನಂಬಿಗಸ್ತ ವ್ಯಕ್ತಿಗಳು ಯೆಹೋವನ ಜೊತೆ ಸೇರಿ ಪ್ರತಿ ದಿನ ಕೆಲಸ ಮಾಡಬಹುದು. ಉದಾಹರಣೆಗೆ, ನಾವು ದೇವರ ರಾಜ್ಯದ ಕುರಿತ ಸಂದೇಶವನ್ನು ಸಾರುವಾಗ ಮತ್ತು ಶಿಷ್ಯರನ್ನಾಗಿ ಮಾಡುವಾಗ “ದೇವರ ಜೊತೆಕೆಲಸಗಾರರಾಗಿ” ಕೆಲಸ ಮಾಡುತ್ತೇವೆ. (1 ಕೊರಿಂ. 3:5-9) ಇಷ್ಟು ಪ್ರಾಮುಖ್ಯವಾದ ಕೆಲಸವನ್ನು ಸರ್ವಶಕ್ತನಾದ ಸೃಷ್ಟಿಕರ್ತನು ನಮಗೆ ಕೊಟ್ಟಿರುವುದು ದೊಡ್ಡ ಗೌರವನೇ! ಆದರೆ ಯೆಹೋವನ ಜೊತೆ ಕೆಲಸ ಮಾಡಲು ನಮಗೆ ಸಾರುವ ಕೆಲಸ ಮಾತ್ರ ಇದೆ ಎಂದಲ್ಲ. ನಮ್ಮ ಕುಟುಂಬದವರಿಗೆ ಮತ್ತು ಸಭೆಯಲ್ಲಿರುವವರಿಗೆ ನಾವು ಸಹಾಯ ಮಾಡಬಹುದು. ಅತಿಥಿಸತ್ಕಾರ ಮಾಡಬಹುದು. ಲೋಕವ್ಯಾಪಕವಾಗಿ ನಮ್ಮ ಸಂಘಟನೆ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್‌ಗಳಿಗೆ ನಾವು ನೆರವು ನೀಡಬಹುದು. ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಪ್ರಯತ್ನಿಸಬಹುದು. ಇದನ್ನೆಲ್ಲಾ ಮಾಡುವಾಗ ನಾವು ಯೆಹೋವನ ಜೊತೆ ಕೆಲಸ ಮಾಡಿದಂತೆ ಆಗುತ್ತದೆ. ಇದು ಹೇಗೆ ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.—ಕೊಲೊ. 3:23.

2. ನಾವು ನಮ್ಮನ್ನು ಬೇರೆಯವರೊಂದಿಗೆ ಯಾಕೆ ಹೋಲಿಸಿ ನೋಡಬಾರದು?

2 ಈ ಲೇಖನವನ್ನು ಅಧ್ಯಯನ ಮಾಡುವಾಗ ನಾವೆಲ್ಲರೂ ಒಂದೇ ತರ ಇಲ್ಲ ಅನ್ನುವುದನ್ನು ಮನಸ್ಸಲ್ಲಿ ಇಟ್ಟುಕೊಳ್ಳುವುದು ಒಳ್ಳೇದು. ನಮ್ಮ ವಯಸ್ಸು, ಆರೋಗ್ಯ, ಸನ್ನಿವೇಶ, ಸಾಮರ್ಥ್ಯ ಎಲ್ಲ ಬೇರೆ ಬೇರೆ ಆಗಿರುತ್ತದೆ. ಆದ್ದರಿಂದ ಯೆಹೋವನಿಗಾಗಿ ನಿಮ್ಮಿಂದ ಏನು ಮಾಡಕ್ಕಾಗುತ್ತಿದೆಯೋ ಅದನ್ನು ಬೇರೆಯವರು ಏನು ಮಾಡುತ್ತಿದ್ದಾರೋ ಅದರೊಂದಿಗೆ ಹೋಲಿಸಿ ನೋಡಬೇಡಿ. ಅಪೊಸ್ತಲ ಪೌಲನು ಇದರ ಬಗ್ಗೆ ಹೀಗಂದಿದ್ದಾನೆ: “ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣವಿರುವುದೇ ಹೊರತು ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆಯಲ್ಲಿ ಅಲ್ಲ.”—ಗಲಾ. 6:4.

ನಿಮ್ಮ ಕುಟುಂಬದಲ್ಲಿರುವವರಿಗೆ ಮತ್ತು ಸಭೆಯಲ್ಲಿರುವವರಿಗೆ ಸಹಾಯ ಮಾಡಿ

3. ಕುಟುಂಬವನ್ನು ನೋಡಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿ ದೇವರ ಜೊತೆ ಕೆಲಸ ಮಾಡುತ್ತಿದ್ದಾನೆ ಎಂದು ಹೇಗೆ ಹೇಳಬಹುದು?

3 ನಾವು ನಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ಉದಾಹರಣೆಗೆ, ನಿಮ್ಮ ಕುಟುಂಬಕ್ಕೆ ಬೇಕಾದದ್ದನ್ನು ತಂದುಹಾಕಲು ನೀವು ದುಡಿಯಬೇಕಾಗಿರಬಹುದು. ಎಷ್ಟೋ ಅಮ್ಮಂದಿರು ತಮ್ಮ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಬೇಕಾಗುತ್ತದೆ. ನಮ್ಮ ಹೆತ್ತವರಿಗೆ ವಯಸ್ಸಾಗಿ ಸಹಾಯ ಬೇಕಾಗಿರುವಾಗ ನಾವು ಅವರನ್ನು ನೋಡಿಕೊಳ್ಳಬೇಕಾಗುತ್ತದೆ. ಇದನ್ನೆಲ್ಲ ನಾವು ಮಾಡಲೇಬೇಕು. ಯಾಕೆಂದರೆ “ಯಾವನಾದರೂ ತನ್ನ ಸ್ವಂತದವರಿಗೆ, ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸದಿದ್ದರೆ ಅವನು ನಂಬಿಕೆಯನ್ನು ನಿರಾಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ. (1 ತಿಮೊ. 5:8) ನಿಮಗೆ ಕುಟುಂಬದ ಜವಾಬ್ದಾರಿಗಳಿರುವುದಾದರೆ ಯೆಹೋವನ ಸೇವೆಯನ್ನು ನೀವು ಬಯಸಿದಷ್ಟು ಮಾಡಕ್ಕಾಗದೆ ಇರಬಹುದು. ಆದರೆ ನಿರುತ್ಸಾಹಗೊಳ್ಳಬೇಡಿ! ನೀವು ನಿಮ್ಮ ಕುಟುಂಬವನ್ನು ನೋಡಿಕೊಂಡರೆ ಯೆಹೋವನಿಗೆ ಸಂತೋಷವಾಗುತ್ತದೆ.—1 ಕೊರಿಂ. 10:31.

4. (ಎ) ಹೆತ್ತವರು ಹೇಗೆ ಆಧ್ಯಾತ್ಮಿಕ ವಿಷಯಗಳಿಗೆ ಮೊದಲ ಸ್ಥಾನ ಕೊಡಬಹುದು? (ಬಿ) ಇದರಿಂದ ಸಿಗುವ ಫಲಿತಾಂಶ ಏನು?

4 ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಗುರಿಗಳನ್ನು ಇಡಲು ಸಹಾಯ ಮಾಡುವಾಗ ಯೆಹೋವನ ಜೊತೆ ಕೆಲಸ ಮಾಡುತ್ತಾರೆ. ಎಷ್ಟೋ ಹೆತ್ತವರು ಇದನ್ನು ಮಾಡಿದ್ದಾರೆ. ಇದರಿಂದ ಅವರ ಮಕ್ಕಳು ಪೂರ್ಣ ಸಮಯದ ಸೇವೆಯನ್ನು ಆರಿಸಿಕೊಂಡಿದ್ದಾರೆ. ದೂರದೂರದ ಸ್ಥಳಗಳಿಗೂ ಹೋಗಿ ಸೇವೆ ಮಾಡುತ್ತಿದ್ದಾರೆ. ಕೆಲವರು ಮಿಷನರಿಗಳಾಗಿ ಸೇವೆ ಮಾಡುತ್ತಿದ್ದಾರೆ. ಇತರರು ಪ್ರಚಾರಕರ ಅಗತ್ಯವಿರುವ ಸ್ಥಳಗಳಲ್ಲಿ ಪಯನೀಯರರಾಗಿ ಸೇವೆ ಮಾಡುತ್ತಿದ್ದಾರೆ. ಇನ್ನು ಕೆಲವರು ಬೆತೆಲಿನಲ್ಲಿ ಸೇವೆ ಮಾಡುತ್ತಿದ್ದಾರೆ. ಮಕ್ಕಳು ಮನೆಯಿಂದ ದೂರ ಹೋಗಿ ಸೇವೆ ಮಾಡುತ್ತಿರುವಾಗ ಹೆತ್ತವರಿಗೆ ಅವರ ಜೊತೆ ಹೆಚ್ಚು ಸಮಯ ಕಳೆಯಲು ಆಗುವುದಿಲ್ಲ. ಆದರೂ ಮಕ್ಕಳು ಎಲ್ಲೇ ಇದ್ದರೂ ಯೆಹೋವನ ಸೇವೆಯನ್ನು ಮುಂದುವರಿಸುವಂತೆ ಹೆತ್ತವರು ಮನಸಾರೆ ಪ್ರೋತ್ಸಾಹಿಸುತ್ತಾರೆ. ಯಾಕೆ? ಯಾಕೆಂದರೆ ಮಕ್ಕಳು ತಮ್ಮ ಜೀವನದಲ್ಲಿ ಯೆಹೋವನಿಗೆ ಮೊದಲ ಸ್ಥಾನ ಕೊಟ್ಟಿರುವುದು ಅವರಿಗೆ ತುಂಬ ಸಂತೋಷ ಕೊಡುತ್ತದೆ. (3 ಯೋಹಾ. 4) ಈ ಹೆತ್ತವರಲ್ಲಿ ಅನೇಕರಿಗೆ ಹನ್ನಳ ತರ ಅನಿಸುತ್ತದೆ. ಅವಳು ತನ್ನ ಮಗನಾದ ಸಮುವೇಲನನ್ನು ಯೆಹೋವನಿಗೆ “ಒಪ್ಪಿಸಿಬಿಟ್ಟಿದ್ದೇನೆ” ಎಂದಳು. ತಾವು ಯೆಹೋವನ ಜೊತೆ ಈ ರೀತಿಯಲ್ಲಿ ಕೆಲಸ ಮಾಡುವುದು ಒಂದು ದೊಡ್ಡ ಸುಯೋಗ ಎಂದು ಈ ಹೆತ್ತವರಿಗೆ ಅನಿಸುತ್ತದೆ.—1 ಸಮು. 1:28.

5. ನಿಮ್ಮ ಸಭೆಯಲ್ಲಿರುವ ಸಹೋದರ ಸಹೋದರಿಯರಿಗೆ ನೀವು ಹೇಗೆ ನೆರವು ನೀಡಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

5 ನಿಮಗೆ ಸದ್ಯಕ್ಕೆ ಕುಟುಂಬದ ಜವಾಬ್ದಾರಿಗಳು ಅಷ್ಟು ಇಲ್ಲದಿದ್ದರೆ ಕಾಯಿಲೆ ಬಿದ್ದಿರುವ ಅಥವಾ ವಯಸ್ಸಾಗಿರುವ ಅಥವಾ ಬೇರೆ ಆವಶ್ಯಕತೆಗಳಿರುವ ಸಹೋದರ ಸಹೋದರಿಯರಿಗೆ ಸಹಾಯ ಮಾಡಲು ಸಾಧ್ಯನಾ? ಇಂಥವರನ್ನು ನೋಡಿಕೊಳ್ಳುತ್ತಿರುವವರಿಗೆ ನೆರವು ನೀಡಲು ಸಾಧ್ಯನಾ? ನಿಮ್ಮ ಸಭೆಯಲ್ಲಿ ಯಾರಿಗೆ ಇಂಥ ಸಹಾಯದ ಅಗತ್ಯವಿದೆ ಎಂದು ನೋಡಿ. ಉದಾಹರಣೆಗೆ, ನಿಮ್ಮ ಸಭೆಯಲ್ಲಿರುವ ಒಬ್ಬ ಸಹೋದರಿ ತನ್ನ ವಯಸ್ಸಾದ ತಂದೆಯನ್ನು ನೋಡಿಕೊಳ್ಳುತ್ತಿರಬಹುದು. ನೀವು ಅವಳ ತಂದೆಯೊಂದಿಗೆ ಸಮಯ ಕಳೆದರೆ ಅವಳು ಬೇರೆ ಕೆಲಸಗಳಿಗೆ ಗಮನ ಕೊಡಲು ಸಾಧ್ಯವಾಗಬಹುದು. ಅಥವಾ ಸಭೆಯಲ್ಲಿರುವ ಇನ್ಯಾರಿಗಾದರೂ ಕೂಟಗಳಿಗೆ ಹೋಗಲು, ಶಾಪಿಂಗ್‌ ಮಾಡಲು ಅಥವಾ ಆಸ್ಪತ್ರೆಯಲ್ಲಿರುವವರನ್ನು ನೋಡಿಕೊಂಡು ಬರಲು ಸಹಾಯ ಬೇಕಾಗಿರಬಹುದು. ನೀವು ಇಂಥವರಿಗೆ ನೆರವು ನೀಡುವಾಗ ಅವರು ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರ ಕೊಡಲು ಸಹಾಯ ಮಾಡುತ್ತಿದ್ದೀರಿ. ಹೀಗೆ ಯೆಹೋವನ ಜೊತೆ ಕೆಲಸ ಮಾಡುತ್ತಿದ್ದೀರಿ.—1 ಕೊರಿಂಥ 10:24 ಓದಿ.

ಅತಿಥಿಸತ್ಕಾರ ಮಾಡಿ

6. ನಾವು ಹೇಗೆ ಅತಿಥಿಸತ್ಕಾರ ಮಾಡಬಹುದು?

6 ದೇವರ ಜೊತೆ ಕೆಲಸಮಾಡುವವರು ಅತಿಥಿಸತ್ಕಾರ ಮಾಡುವುದರಲ್ಲಿ ಹೆಸರುವಾಸಿ. ಬೈಬಲಿನಲ್ಲಿ “ಅತಿಥಿಸತ್ಕಾರ” ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದಕ್ಕೆ “ಅಪರಿಚಿತರಿಗೆ ದಯೆ ತೋರಿಸುವುದು” ಎಂಬ ಅರ್ಥ ಇದೆ. (ಇಬ್ರಿ. 13:2) ನಾವು ಹೇಗೆ ದಯೆ ತೋರಿಸಬಹುದೆಂದು ಬೈಬಲಿನಲ್ಲಿ ದಾಖಲಾಗಿರುವ ಕೆಲವು ಘಟನೆಗಳಿಂದ ತಿಳಿದುಕೊಳ್ಳಬಹುದು. (ಆದಿ. 18:1-5) ನಮಗೆ ಅವಕಾಶ ಸಿಕ್ಕಿದಾಗೆಲ್ಲಾ ಬೇರೆಯವರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಅವರು ‘ನಂಬಿಕೆಯಲ್ಲಿ ನಮ್ಮ ಸಂಬಂಧಿಕರಲ್ಲದಿದ್ದರೂ’ ಸಹಾಯ ಮಾಡಬೇಕು.—ಗಲಾ. 6:10.

7. ಪೂರ್ಣ ಸಮಯದ ಸೇವಕರಿಗೆ ಅತಿಥಿಸತ್ಕಾರ ಮಾಡಿದಾಗ ಯಾವ ಪ್ರಯೋಜನ ಸಿಗುತ್ತದೆ?

7 ಪೂರ್ಣ ಸಮಯದ ಸೇವೆಯಲ್ಲಿರುವವರಿಗೆ ಉಳುಕೊಳ್ಳಲು ಸ್ಥಳ ಕೊಡುವ ಮೂಲಕ ನೀವು ಯೆಹೋವನ ಜೊತೆ ಕೆಲಸ ಮಾಡಲು ಆಗುತ್ತಾ? (3 ಯೋಹಾನ 5, 8 ಓದಿ.) ಸ್ಥಳ ಕೊಡುವುದಾದರೆ ಅವರಿಗೂ ಪ್ರಯೋಜನ, ನಿಮಗೂ ಪ್ರಯೋಜನ. ಇದನ್ನೇ ‘ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು’ ಎಂದು ಬೈಬಲ್‌ ಕರೆಯುತ್ತದೆ. (ರೋಮ. 1:11, 12) ಓಲಾಫ್‌ ಎಂಬ ಸಹೋದರನ ಅನುಭವ ನೋಡಿ. ಅವರು ಚಿಕ್ಕವರಿದ್ದಾಗ ಅವರ ಸಭೆಗೆ ಒಬ್ಬ ಅವಿವಾಹಿತ ಸಂಚರಣ ಮೇಲ್ವಿಚಾರಕರು ಭೇಟಿಕೊಟ್ಟರು. ಅವರಿಗೆ ಉಳುಕೊಳ್ಳಲು ಸಭೆಯಲ್ಲಿರುವ ಯಾರಿಂದಲೂ ಸ್ಥಳ ಕೊಡಲು ಆಗಲಿಲ್ಲ. ಓಲಾಫ್‌ ಸತ್ಯದಲ್ಲಿ ಇಲ್ಲದಿದ್ದ ತನ್ನ ಹೆತ್ತವರ ಹತ್ತಿರ ಸಂಚರಣ ಮೇಲ್ವಿಚಾರಕರನ್ನು ಮನೆಯಲ್ಲಿ ಉಳಿಸಿಕೊಳ್ಳಬಹುದಾ ಎಂದು ಕೇಳಿದರು. ಅವರ ಹೆತ್ತವರು ಒಪ್ಪಿದರು, ಆದರೆ ಓಲಾಫ್‌ ಸೋಫಾ ಮೇಲೆ ಮಲಗಬೇಕಾಗುತ್ತದೆ ಎಂದು ಹೇಳಿದರು. ಓಲಾಫ್‌ ಅದನ್ನೇ ಮಾಡಿದರು. ಇದರಿಂದ ಅವರಿಗೇನು ಕಷ್ಟ ಅನಿಸಲಿಲ್ಲ. ಇಡೀ ವಾರ ಸಂಚರಣ ಮೇಲ್ವಿಚಾರಕರ ಜೊತೆ ತುಂಬ ಆನಂದಿಸಿದರು. ಪ್ರತಿ ದಿನ ಬೆಳಗ್ಗೆ ಬೇಗ ಎದ್ದು ತಿಂಡಿ ತಿನ್ನುತ್ತಿದ್ದಾಗ ಎಷ್ಟೋ ಆಸಕ್ತಿಕರ ವಿಷಯಗಳ ಬಗ್ಗೆ ಮಾತಾಡಿದರು. ಸಂಚರಣ ಮೇಲ್ವಿಚಾರಕರಿಂದ ಓಲಾಫ್‌ಗೆ ಎಷ್ಟು ಪ್ರೋತ್ಸಾಹ ಸಿಕ್ಕಿತೆಂದರೆ ಅವರು ಪೂರ್ಣ ಸಮಯದ ಸೇವೆಯನ್ನು ಆರಂಭಿಸಬೇಕೆಂದು ತೀರ್ಮಾನಿಸಿದರು. ಕಳೆದ 40 ವರ್ಷಗಳಿಂದ ಓಲಾಫ್‌ ಒಬ್ಬ ಮಿಷನರಿಯಾಗಿ ಅನೇಕ ದೇಶಗಳಲ್ಲಿ ಸೇವೆ ಮಾಡಿದ್ದಾರೆ.

8. ಬೇರೆಯವರು ನಮಗೆ ಆರಂಭದಲ್ಲಿ ಕೃತಜ್ಞತೆ ತೋರಿಸದಿದ್ದರೂ ನಾವು ಯಾಕೆ ದಯೆ ತೋರಿಸಬೇಕು? ಒಂದು ಉದಾಹರಣೆ ಕೊಡಿ.

8 ನಾವು ಅಪರಿಚಿತರಿಗೆ ಅನೇಕ ವಿಧಗಳಲ್ಲಿ ದಯೆ ತೋರಿಸಬಹುದು. ಅವರು ನಮಗೆ ಆರಂಭದಲ್ಲಿ ಕೃತಜ್ಞತೆ ತೋರಿಸದಿದ್ದರೂ ನಾವು ಪ್ರೀತಿ ತೋರಿಸಬೇಕು. ಉದಾಹರಣೆಗೆ, ಸ್ಪೇನ್‌ನಲ್ಲಿರುವ ಒಬ್ಬ ಸಹೋದರಿ ಈಕ್ವಡಾರ್‌ನಿಂದ ಬಂದಿದ್ದ ಯೆಸಿಕ ಎಂಬ ಸ್ತ್ರೀಯೊಟ್ಟಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದರು. ಒಂದು ದಿನ ಅಧ್ಯಯನ ಮಾಡುತ್ತಿದ್ದಾಗ ಯೆಸಿಕ ಅಳಲು ಆರಂಭಿಸಿದಳು. ಆಗ ನಮ್ಮ ಸಹೋದರಿ ಯಾಕೆ ಏನಾಯಿತೆಂದು ಕೇಳಿದರು. ಸ್ಪೇನ್‌ಗೆ ಬರುವ ಮುಂಚೆ ತಾನು ತುಂಬ ಬಡವಳಾಗಿದ್ದೆ ಎಂದು ಯೆಸಿಕ ಹೇಳಿದಳು. ಒಂದು ದಿನ ಮನೆಯಲ್ಲಿ ಊಟಕ್ಕೆಂದು ಏನೂ ಇರಲಿಲ್ಲ, ತನ್ನ ಮಗಳಿಗೆ ಕೊಡಲು ನೀರು ಬಿಟ್ಟು ಬೇರೇನೂ ಇರಲಿಲ್ಲ ಎಂದು ಯೆಸಿಕ ಹೇಳಿದಳು. ಯೆಸಿಕ ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ತನ್ನ ಪುಟ್ಟ ಮಗುವನ್ನು ಮಲಗಿಸಲು ಪ್ರಯತ್ನಿಸಿದಳು. ಹೆಚ್ಚುಕಡಿಮೆ ಅದೇ ಸಮಯಕ್ಕೆ ಇಬ್ಬರು ಸಾಕ್ಷಿಗಳು ಬಂದು ಅವಳಿಗೆ ಒಂದು ಪತ್ರಿಕೆಯನ್ನು ಕೊಟ್ಟರು. ಆದರೆ ಯೆಸಿಕ ಅವರ ಜೊತೆ ಒರಟಾಗಿ ಮಾತಾಡುತ್ತಾ “ನನ್ನ ಮಗಳಿಗೆ ಇದನ್ನು ತಿನ್ನಲು ಕೊಡಲಾ” ಎಂದು ಹೇಳಿ ಪತ್ರಿಕೆಯನ್ನು ಹರಿದುಹಾಕಿದಳು. ಬಂದಿದ್ದ ಸಹೋದರಿಯರು ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ನಂತರ ಸಹೋದರಿಯರು ಅವಳ ಬಾಗಿಲ ಹತ್ತಿರ ಒಂದು ಚೀಲದಲ್ಲಿ ಆಹಾರವನ್ನು ತಂದಿಟ್ಟು ಹೋದರು. ಇದನ್ನು ನೆನಸಿ ಯೆಸಿಕ ಅಳುತ್ತಿದ್ದಳು. ಯಾಕೆಂದರೆ ತನ್ನ ಪ್ರಾರ್ಥನೆಗೆ ದೇವರು ಈ ರೀತಿ ಉತ್ತರ ಕೊಟ್ಟದ್ದನ್ನು ಅವತ್ತು ತಾನು ಗುರುತಿಸಲಿಲ್ಲ ಅಂತ ಬೇಜಾರಾಯಿತು. ಆದರೆ ಈಗ ಯೆಸಿಕ ಯೆಹೋವನ ಸೇವೆಯನ್ನು ಮಾಡಲು ತೀರ್ಮಾನ ಮಾಡಿಕೊಂಡಿದ್ದಳು. ಆ ಸಹೋದರಿಯರು ತೋರಿಸಿದ ಉದಾರತೆಯಿಂದ ಒಳ್ಳೇ ಫಲಿತಾಂಶ ಸಿಕ್ಕಿತು.—ಪ್ರಸಂ. 11:1, 6.

ಸಂಘಟನೆಯ ಪ್ರಾಜೆಕ್ಟ್‌ಗಳಲ್ಲಿ ಕೈಜೋಡಿಸಲು ಮುಂದೆ ಬನ್ನಿ

9, 10. (ಎ) ಇಸ್ರಾಯೇಲ್ಯರಿಗೆ ಯಾವೆಲ್ಲ ವಿಷಯಗಳಿಗೆ ಕೈಜೋಡಿಸಲು ಅವಕಾಶ ಸಿಕ್ಕಿತು? (ಬಿ) ಇಂದು ಸಭೆಯಲ್ಲಿರುವ ಸಹೋದರರು ಹೇಗೆಲ್ಲಾ ಸಹಾಯ ಮಾಡಬಹುದು?

9 ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರಿಗೆ ಅನೇಕ ವಿಷಯಗಳಿಗೆ ಕೈಜೋಡಿಸಲು ಅವಕಾಶ ಸಿಕ್ಕಿತು. (ವಿಮೋ. 36:2; 1 ಪೂರ್ವ. 29:5; ನೆಹೆ. 11:2) ಇಂದು ಸಹ ನೀವು ನಿಮ್ಮ ಸಮಯ, ಹಣ, ವಸ್ತುಗಳು ಮತ್ತು ಕೌಶಲ್ಯವನ್ನು ನಿಮ್ಮ ಸಹೋದರ ಸಹೋದರಿಯರಿಗೆ ಸಹಾಯವಾಗಲಿಕ್ಕಾಗಿ ಉಪಯೋಗಿಸಲು ಅನೇಕ ಅವಕಾಶಗಳು ಸಿಗುತ್ತವೆ. ನೀವು ಸಹಾಯ ಮಾಡಲು ಮುಂದೆ ಬಂದರೆ ತುಂಬ ಸಂತೋಷ ಮತ್ತು ಯೆಹೋವನಿಂದ ಅನೇಕ ಆಶೀರ್ವಾದಗಳು ಸಿಗುತ್ತವೆ.

10 ಸಭೆಯಲ್ಲಿರುವ ಪುರುಷರು ಸಹಾಯಕ ಸೇವಕರಾಗಿ ಮತ್ತು ಹಿರಿಯರಾಗಿ ಬೇರೆಯವರ ಸೇವೆ ಮಾಡಲು ಮುಂದೆ ಬಂದು ಯೆಹೋವನೊಟ್ಟಿಗೆ ಕೆಲಸ ಮಾಡುವಂತೆ ಬೈಬಲ್‌ ಪ್ರೋತ್ಸಾಹಿಸುತ್ತದೆ. (1 ತಿಮೊ. 3:1, 8, 9; 1 ಪೇತ್ರ 5:2, 3) ಇದನ್ನು ಮಾಡಲು ಮುಂದೆ ಬರುವವರು ಆರಾಧನೆಯ ವಿಷಯದಲ್ಲಿ ಮಾತ್ರವಲ್ಲ ಪ್ರಾಯೋಗಿಕ ವಿಧಗಳಲ್ಲೂ ಬೇರೆಯವರಿಗೆ ಸಹಾಯ ಮಾಡಲು ಬಯಸುತ್ತಾರೆ. (ಅ. ಕಾ. 6:1-4) ಹಿರಿಯರು ನಿಮ್ಮನ್ನು ಸಭೆಯಲ್ಲಿ ಅಟೆಂಡೆಂಟ್‌ ಆಗಿ ಸೇವೆ ಮಾಡುವಂತೆ ಅಥವಾ ಸಾಹಿತ್ಯ, ಸೇವಾಕ್ಷೇತ್ರ, ರಿಪೇರಿ ಅಥವಾ ಬೇರೆ ವಿಷಯಗಳಲ್ಲಿ ಸಹಾಯ ಮಾಡುವಂತೆ ಕೇಳಿದ್ದಾರಾ? ಈ ರೀತಿಯಲ್ಲಿ ಬೇರೆಯವರಿಗೆ ಸಹಾಯ ಮಾಡುವುದರಿಂದ ತುಂಬ ಸಂತೋಷ ಸಿಗುತ್ತದೆ ಎಂದು ಸಹಾಯಹಸ್ತ ಚಾಚಿರುವ ಸಹೋದರರು ಹೇಳುತ್ತಾರೆ.

ಸಂಘಟನೆಯ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಕೈಜೋಡಿಸಲು ಮುಂದೆ ಬರುವವರಿಗೆ ಹೊಸ ಸ್ನೇಹಿತರು ಸಿಗುತ್ತಾರೆ (ಪ್ಯಾರ 11 ನೋಡಿ)

11. ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡಿದ್ದರಿಂದ ಒಬ್ಬ ಸಹೋದರಿಗೆ ಯಾವ ಪ್ರಯೋಜನ ಸಿಕ್ಕಿದೆ?

11 ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡಲು ಮುಂದೆ ಬರುವವರು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಮಾರ್ಜೀ ಎಂಬ ಸಹೋದರಿ 18 ವರ್ಷ ರಾಜ್ಯ ಸಭಾಗೃಹ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಈ ಪ್ರಾಜೆಕ್ಟ್‌ಗಳಿಗೆ ಕೈಜೋಡಿಸಲು ಬಂದ ಯುವ ಸಹೋದರಿಯರಲ್ಲಿ ಇವರು ಆಸಕ್ತಿ ತೋರಿಸುತ್ತಾ ತರಬೇತಿ ಕೊಡಲು ಸಹಾಯ ಮಾಡುತ್ತಿದ್ದರು. ಹೀಗೆ ಸ್ವಯಂಸೇವಕರಿಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಒಳ್ಳೇ ಅವಕಾಶ ಸಿಗುತ್ತದೆ ಎಂದವರು ಹೇಳುತ್ತಾರೆ. (ರೋಮ. 1:12) ಮಾರ್ಜೀ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದಾಗ ಅವರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಮಾಡಿಕೊಂಡ ಸ್ನೇಹಿತರು ಅವರಿಗೆ ಪ್ರೋತ್ಸಾಹ ಕೊಟ್ಟರು. ನೀವು ಯಾವುದಾದರೂ ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿದ್ದೀರಾ? ನಿಮಗೆ ನಿರ್ದಿಷ್ಟವಾಗಿ ಯಾವುದೇ ಕೆಲಸ ಗೊತ್ತಿಲ್ಲದಿದ್ದರೂ ಯಾವುದಾದರೊಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಮುಂದೆ ಬರಬಹುದು.

12. ವಿಪತ್ತು ಸಂಭವಿಸಿದಾಗ ನೀವು ಹೇಗೆ ಸಹಾಯ ಮಾಡಬಹುದು?

12 ಒಂದು ವಿಪತ್ತು ಸಂಭವಿಸಿದಾಗಲೂ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡುವ ಮೂಲಕ ನಾವು ಯೆಹೋವನ ಜೊತೆ ಕೆಲಸ ಮಾಡಬಹುದು. ಉದಾಹರಣೆಗೆ ನಾವು ಹಣ ಕೊಟ್ಟು ಸಹಾಯ ಮಾಡಬಹುದು. (ಯೋಹಾ. 13:34, 35; ಅ. ಕಾ. 11:27-30) ವಿಪತ್ತು ಸಂಭವಿಸಿದ ಮೇಲೆ ಶುಚಿಮಾಡಲು ಅಥವಾ ರಿಪೇರಿ ಮಾಡಲು ಸಹ ನಾವು ಮುಂದೆ ಬರಬಹುದು. ಪೋಲೆಂಡಿನ ಗಬ್ರೀಯೆಲ ಎಂಬ ಸಹೋದರಿಯ ಅನುಭವ ನೋಡಿ. ಒಂದು ಪ್ರವಾಹದಿಂದ ಅವರ ಮನೆಗೆ ತುಂಬ ಹಾನಿಯಾಯಿತು. ಹತ್ತಿರದ ಸಭೆಗಳಲ್ಲಿದ್ದ ಸಹೋದರರು ಬಂದು ಸಹಾಯ ಮಾಡಿದ್ದನ್ನು ನೋಡಿ ಅವರಿಗೆ ತುಂಬ ಸಂತೋಷವಾಯಿತು. ಆ ಘಟನೆಯ ಬಗ್ಗೆ ಯೋಚಿಸುವಾಗೆಲ್ಲಾ ತಾನು ಯಾವೆಲ್ಲಾ ವಸ್ತುಗಳನ್ನು ಕಳಕೊಂಡೆ ಎಂದು ಅವರು ಯೋಚನೆ ಮಾಡುವುದಿಲ್ಲ, ಏನೆಲ್ಲಾ ಪಡಕೊಂಡೆ ಎಂದು ಯೋಚನೆ ಮಾಡುತ್ತಾರಂತೆ. “ಕ್ರೈಸ್ತ ಸಭೆಯ ಭಾಗವಾಗಿರುವುದು ಒಂದು ಅದ್ವಿತೀಯ ಸುಯೋಗ ಎಂದು ಈ ಘಟನೆಯಿಂದ ಅರ್ಥಮಾಡಿಕೊಂಡಿದ್ದೇನೆ. ಸಭೆಯ ಭಾಗವಾಗಿರುವುದರಿಂದ ನನಗೆ ತುಂಬ ಸಂತೋಷ ಸಿಕ್ಕಿದೆ” ಎಂದವರು ಹೇಳುತ್ತಾರೆ. ವಿಪತ್ತುಗಳು ಸಂಭವಿಸಿದಾಗ ಸಹಾಯ ಪಡೆದುಕೊಂಡಿರುವ ಅನೇಕರ ಮನದಾಳದ ಮಾತು ಇದೇ ತರ ಇರುತ್ತದೆ. ಇಂಥವರಿಗೆ ಸಹಾಯ ಮಾಡುವ ಮೂಲಕ ಯೆಹೋವನ ಜೊತೆ ಕೆಲಸ ಮಾಡಿದ ಸಹೋದರರಿಗೂ ತುಂಬ ಸಂತೋಷ, ಸಂತೃಪ್ತಿ ಸಿಕ್ಕಿದೆ.—ಅ. ಕಾರ್ಯಗಳು 20:35; 2 ಕೊರಿಂಥ 9:6, 7 ಓದಿ.

13. ಸ್ವಯಂಸೇವೆ ಮಾಡುವ ಮೂಲಕ ಯೆಹೋವನ ಮೇಲಿರುವ ನಮ್ಮ ಪ್ರೀತಿ ಹೇಗೆ ಹೆಚ್ಚಾಗುತ್ತದೆ? ಒಂದು ಉದಾಹರಣೆ ಕೊಡಿ.

13 ಸ್ಟೆಫನೀ ಎಂಬ ಸಹೋದರಿ ಮತ್ತು ಅವರ ಸ್ಥಳದಲ್ಲಿರುವ ಬೇರೆ ಪ್ರಚಾರಕರು ನಿರಾಶ್ರಿತರಾಗಿ ಬಂದ ಅನೇಕ ಸಾಕ್ಷಿಗಳಿಗೆ ಸಹಾಯ ಮಾಡುವ ಮೂಲಕ ದೇವರೊಂದಿಗೆ ಕೆಲಸ ಮಾಡಿದರು. ಈ ನಿರಾಶ್ರಿತರು ತಮ್ಮ ದೇಶದಲ್ಲಾಗುತ್ತಿರುವ ಯುದ್ಧದಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಪಲಾಯನ ಮಾಡಿದ್ದರು. ಸ್ಟೆಫನೀ ಮತ್ತು ಇತರ ಪ್ರಚಾರಕರು ಈ ನಿರಾಶ್ರಿತರಿಗೆ ಮನೆ ಕಂಡುಕೊಳ್ಳಲು ಮತ್ತು ಮನೆಗೆ ಬೇಕಾದ ವಸ್ತುಗಳನ್ನು ಪಡೆಯಲು ಸಹಾಯ ಮಾಡಿದರು. “ತಮ್ಮ ಲೋಕವ್ಯಾಪಕ ಸಹೋದರರ ಪ್ರೀತಿಯಿಂದಾಗಿ ನಿರಾಶ್ರಿತರಿಗೆ ಆಗುತ್ತಿದ್ದ ಸಂತೋಷ, ಗಣ್ಯತಾಭಾವ ನೋಡಿ ನಮಗೆ ತುಂಬ ಪ್ರೋತ್ಸಾಹ ಸಿಕ್ಕಿತು. ನಾವು ಅವರಿಗೆ ಸಹಾಯ ಮಾಡಿದ್ದೇವೆಂದು ಆ ಸಹೋದರ ಸಹೋದರಿಯರು ನೆನಸುತ್ತಾರೆ, ಆದರೆ ನಿಜ ಹೇಳಬೇಕೆಂದರೆ ಅವರು ನಮಗೆ ತುಂಬ ಸಹಾಯ ಮಾಡಿದ್ದಾರೆ. ಅವರಲ್ಲಿರುವ ಪ್ರೀತಿ, ಒಗ್ಗಟ್ಟು, ನಂಬಿಕೆ ಮತ್ತು ಯೆಹೋವನ ಮೇಲೆ ಅವರಿಟ್ಟಿರುವ ಭರವಸೆಯನ್ನು ನೋಡಿ ಯೆಹೋವನ ಮೇಲಿರುವ ನಮ್ಮ ಪ್ರೀತಿ ಹೆಚ್ಚಾಗಿದೆ. ಸಂಘಟನೆಯಿಂದ ನಮಗೆ ಸಿಗುವಂಥ ಎಲ್ಲವನ್ನು ಇನ್ನಷ್ಟು ಮಾನ್ಯಮಾಡಲು ಕಲಿತಿದ್ದೇವೆ” ಎಂದು ಸ್ಟೆಫನೀ ಹೇಳುತ್ತಾರೆ.

ಇನ್ನೂ ಹೆಚ್ಚು ಯೆಹೋವನ ಸೇವೆ ಮಾಡಿ

14, 15. (ಎ) ಪ್ರವಾದಿಯಾದ ಯೆಶಾಯನು ಯಾವ ಮನೋಭಾವ ತೋರಿಸಿದನು? (ಬಿ) ಕ್ರೈಸ್ತರು ಹೇಗೆ ಯೆಶಾಯನ ಮನೋಭಾವವನ್ನು ತೋರಿಸಬಹುದು?

14 ನೀವು ಯೆಹೋವನ ಜೊತೆ ಹೆಚ್ಚು ಕೆಲಸ ಮಾಡಲು ಬಯಸುತ್ತೀರಾ? ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಲು ನಿಮಗೆ ಮನಸ್ಸಿದೆಯಾ? ದೂರದ ಕ್ಷೇತ್ರಗಳಿಗೆ ಹೋಗಿ ಸೇವೆ ಮಾಡಿದರೆನೇ ಉದಾರತೆ ತೋರಿಸಕ್ಕಾಗುವುದು ಎಂದೇನಿಲ್ಲ. ಆದರೆ ಕೆಲವು ಸಹೋದರ ಸಹೋದರಿಯರು ದೂರ ಹೋಗಿ ಸೇವೆ ಮಾಡುತ್ತಿದ್ದಾರೆ. ಇವರು ಪ್ರವಾದಿ ಯೆಶಾಯನಿಗಿದ್ದ ಮನೋಭಾವವನ್ನು ತೋರಿಸುತ್ತಾರೆ. ಯೆಹೋವನು “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂದು ಕೇಳಿದಾಗ, ಯೆಶಾಯನು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದಿದ್ದನು. (ಯೆಶಾ. 6:8) ಯೆಹೋವನ ಸಂಘಟನೆಗೆ ಸಹಾಯ ಮಾಡಲು ನಿಮಗೆ ಮನಸ್ಸಿದೆಯಾ, ಸಾಧ್ಯವಿದೆಯಾ? ನೀವು ಸಹಾಯ ಮಾಡಬಹುದಾದ ಕೆಲವು ವಿಧಗಳು ಯಾವುವು?

15 ಸಾರುವ ಮತ್ತು ಶಿಷ್ಯರನ್ನು ಮಾಡುವ ಕೆಲಸದ ಬಗ್ಗೆ ಯೇಸು ಮಾತಾಡುತ್ತಾ, “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು. (ಮತ್ತಾ. 9:37, 38) ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳದಲ್ಲಿ ನೀವು ಪಯನೀಯರರಾಗಿ ಸೇವೆ ಮಾಡಲು ಸಾಧ್ಯನಾ? ಅಥವಾ ಬೇರೆ ಯಾರಾದರೂ ಇದನ್ನು ಮಾಡಲು ನೀವು ಸಹಾಯ ಮಾಡಬಹುದಾ? ಅನೇಕ ಸಹೋದರ ಸಹೋದರಿಯರು ಹೇಳುವುದೇನೆಂದರೆ, ದೇವರ ಮೇಲೆ ಮತ್ತು ನೆರೆಯವರ ಮೇಲಿರುವ ಪ್ರೀತಿಯನ್ನು ತೋರಿಸುವ ಅತ್ಯುತ್ತಮ ವಿಧ ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ಪಯನೀಯರರಾಗಿ ಸೇವೆ ಮಾಡುವುದೇ ಆಗಿದೆ. ನಿಮ್ಮ ಸೇವೆಯನ್ನು ಹೆಚ್ಚು ಮಾಡಲು ಬೇರೆ ವಿಧಗಳ ಬಗ್ಗೆ ನೀವು ಯೋಚಿಸಬಹುದಾ? ಇದನ್ನು ಮಾಡುವುದರಿಂದ ನಿಮಗೆ ತುಂಬ ಸಂತೋಷ ಸಿಗುತ್ತದೆ.

16, 17. ನೀವು ಬೇರೆ ಯಾವ ವಿಧಗಳಲ್ಲಿ ಯೆಹೋವನ ಸೇವೆಯನ್ನು ಹೆಚ್ಚು ಮಾಡಬಹುದು?

16 ನೀವು ಬೆತೆಲಿನಲ್ಲಿ ಸೇವೆ ಮಾಡಲು ಅಥವಾ ಕಟ್ಟಡ ನಿರ್ಮಾಣ ಕೆಲಸದಲ್ಲಿ ಕೈಜೋಡಿಸಲು ಬಯಸುತ್ತೀರಾ? ನೀವು ಈ ಕೆಲಸವನ್ನು ತಾತ್ಕಾಲಿಕವಾಗಿ ಮಾಡಬಹುದು ಅಥವಾ ವಾರದಲ್ಲಿ ಇಂತಿಷ್ಟು ದಿನ ಮಾಡಬಹುದು. ಎಲ್ಲೇ ನೇಮಿಸಿದರೂ, ಯಾವುದೇ ಕೆಲಸ ಕೊಟ್ಟರೂ ಅದನ್ನು ಮಾಡುವವರು ಯೆಹೋವನ ಸಂಘಟನೆಗೆ ಬೇಕು. ಇಂಥವರು ಯಾವುದೇ ಕೆಲಸವನ್ನು ಕಲಿತಿರುವುದಾದರೂ ಕೊಡಲ್ಪಡುವ ಕೆಲಸವನ್ನು ಮಾಡಲು ಸಿದ್ಧರಿರಬೇಕು. ತ್ಯಾಗಮಾಡಿ ಅಗತ್ಯ ಎಲ್ಲೇ ಇದ್ದರೂ ಅಲ್ಲಿ ಹೋಗಿ ಸೇವೆ ಮಾಡಲು ಮನಸ್ಸಿರುವ ವ್ಯಕ್ತಿಗಳನ್ನು ಕಂಡರೆ ಯೆಹೋವನಿಗೆ ತುಂಬ ಇಷ್ಟ.—ಕೀರ್ತ. 110:3.

17 ಯೆಹೋವನ ಸೇವೆಯನ್ನು ಇನ್ನೂ ಹೆಚ್ಚು ಮಾಡಲಿಕ್ಕಾಗಿ ಹೆಚ್ಚು ತರಬೇತಿ ಪಡೆಯಲು ಬಯಸುತ್ತೀರಾ? ರಾಜ್ಯ ಪ್ರಚಾರಕರ ಶಾಲೆಗೆ ನೀವು ಅರ್ಜಿ ಹಾಕಬಹುದು. ಈ ಶಾಲೆ ಪೂರ್ಣ ಸಮಯದ ಸೇವೆಯನ್ನು ಈಗಾಗಲೇ ಮಾಡುತ್ತಿರುವ ಪ್ರೌಢ ಸಹೋದರ ಸಹೋದರಿಯರಿಗೆ ತರಬೇತಿ ಕೊಡುತ್ತದೆ. ನಂತರ ಯೆಹೋವನ ಸಂಘಟನೆ ಅವರನ್ನು ಹೆಚ್ಚು ವಿಧಗಳಲ್ಲಿ ಉಪಯೋಗಿಸಲಿಕ್ಕಾಗುತ್ತದೆ. ಈ ಶಾಲೆಗೆ ಹಾಜರಾಗುವವರು ಸಂಘಟನೆ ಅವರನ್ನು ಎಲ್ಲಿ ಕಳುಹಿಸುತ್ತದೋ ಅಲ್ಲಿ ಹೋಗಿ ಸೇವೆ ಮಾಡಲು ಸಿದ್ಧರಿರಬೇಕು. ನೀವು ಯೆಹೋವನಿಗೆ ಈ ರೀತಿಯಲ್ಲಿ ಹೆಚ್ಚನ್ನು ಮಾಡಲು ಬಯಸುತ್ತೀರಾ?—1 ಕೊರಿಂ. 9:23.

18. ಪ್ರತಿ ದಿನ ಯೆಹೋವನ ಜೊತೆ ಕೆಲಸ ಮಾಡುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?

18 ನಾವು ಯೆಹೋವನ ಜನರಾಗಿರುವುದರಿಂದ ಉದಾರತೆ, ಒಳ್ಳೇತನ, ದಯೆ ಮತ್ತು ಪ್ರೀತಿ ತೋರಿಸುತ್ತೇವೆ. ಪ್ರತಿ ದಿನ, ಪ್ರತಿ ಕ್ಷಣ ಬೇರೆಯವರ ಬಗ್ಗೆ ಚಿಂತಿಸುತ್ತಾ ಸಹಾಯ ಮಾಡಲು ನೋಡುತ್ತೇವೆ. ಇದರಿಂದ ನಮಗೆ ಆನಂದ, ಶಾಂತಿ ಮತ್ತು ಸಂತೋಷ ಸಿಗುತ್ತದೆ. (ಗಲಾ. 5:22, 23) ಜೀವನದಲ್ಲಿ ನಿಮ್ಮ ಸನ್ನಿವೇಶ ಏನೇ ಆಗಿರಲಿ, ಯೆಹೋವನ ತರ ಉದಾರತೆ ತೋರಿಸುವಾಗ ಮತ್ತು ಆತನ ಅಮೂಲ್ಯ ಕೆಲಸಗಾರರಲ್ಲಿ ಒಬ್ಬರಾಗಿ ಇರುವಾಗ ನೀವು ಖಂಡಿತ ಸಂತೋಷವಾಗಿರುತ್ತೀರಿ!—ಜ್ಞಾನೋ. 3:9, 10.