ಅಧ್ಯಯನ ಲೇಖನ 33
ಪುನರುತ್ಥಾನ—ದೇವರ ಪ್ರೀತಿ ವಿವೇಕ ತಾಳ್ಮೆಯ ಪುರಾವೆ
“ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.”—ಅ. ಕಾ. 24:15.
ಗೀತೆ 111 ಆತ ಕರೆಯುವ
ಕಿರುನೋಟ *
1. ಯೆಹೋವ ಒಬ್ಬನೇ ಇರೋ ಬದ್ಲು ಯಾಕೆ ಬೇರೆಯವ್ರನ್ನೂ ಸೃಷ್ಟಿ ಮಾಡಿದ?
ಒಂದು ಕಾಲ ಇತ್ತು, ಇಡೀ ವಿಶ್ವದಲ್ಲಿ ಯೆಹೋವ ದೇವರು ಬಿಟ್ರೆ ಬೇರೆ ಯಾರೂ ಇರ್ಲಿಲ್ಲ. ಆಗ ಆತನಿಗೆ ಒಂಟಿತನ ಕಾಡ್ಲಿಲ್ಲ. ಆತ ಖುಷಿಯಾಗಿರೋಕೆ ಜೊತೇಲಿ ಬೇರೆಯವ್ರು ಇರಬೇಕು ಅಂತೇನಿರಲಿಲ್ಲ. ಆದ್ರೂ ಪ್ರೀತಿಯಿಂದ ಪ್ರೇರಿತನಾಗಿ ಬೇರೆ ಜೀವಿಗಳನ್ನ ಸೃಷ್ಟಿ ಮಾಡಿದ.—ಅ. ಕಾ. 17:24, 25; 1 ಯೋಹಾ. 4:19.
2. ಯೇಸುಗೆ ಮತ್ತು ದೇವದೂತರಿಗೆ ಯೆಹೋವನ ಸೃಷ್ಟಿ ಕಾರ್ಯದ ಬಗ್ಗೆ ಹೇಗನಿಸ್ತು?
2 ಯೆಹೋವ ಮೊದ್ಲು ಯೇಸುನ ಸೃಷ್ಟಿ ಮಾಡಿದ. ಆಮೇಲೆ ‘ಯೇಸು ಮೂಲಕ ಇತರ ಎಲ್ಲವನ್ನು ಸೃಷ್ಟಿ ಮಾಡಿದ.’ ಅದ್ರಲ್ಲಿ ಕೋಟಿಗಟ್ಟಲೆ ದೇವದೂತರೂ ಸೇರಿದ್ದಾರೆ. (ಕೊಲೊ. 1:16) ಯೆಹೋವನ ಜೊತೆ ಕೆಲ್ಸ ಮಾಡಕ್ಕೆ ಯೇಸುಗೆ ತುಂಬ ಖುಷಿಯಾಗ್ತಿತ್ತು. (ಜ್ಞಾನೋ. 8:30) ಯೆಹೋವ ಮತ್ತು ಯೇಸು ಭೂಮಿ, ಆಕಾಶವನ್ನು ಸೃಷ್ಟಿ ಮಾಡ್ದಾಗ ಅದನ್ನ ನೋಡಿ ದೇವದೂತರೂ ಆನಂದಿಸಿದ್ರು. ಭೂಮಿ ಸೃಷ್ಟಿಯಾದಾಗ ದೇವದೂತರು “ಆನಂದಘೋಷ” ಮಾಡಿದ್ರು ಅಂತ ಬೈಬಲ್ ಹೇಳುತ್ತೆ. ಹಾಗಂದ ಮೇಲೆ ವಿಶ್ವದಲ್ಲಿರೋ ಪ್ರತಿಯೊಂದನ್ನು ಸೃಷ್ಟಿ ಮಾಡ್ದಾಗ ಅದ್ರಲ್ಲೂ ವಿಶೇಷವಾಗಿ ಮನುಷ್ಯರನ್ನು ಸೃಷ್ಟಿ ಮಾಡ್ದಾಗ ದೇವದೂತರು ಖಂಡಿತ ಯೆಹೋವನನ್ನ ಸ್ತುತಿಸಿರ್ತಾರೆ. (ಯೋಬ 38:6; ಜ್ಞಾನೋ. 8:31) ಯೆಹೋವ ದೇವ್ರು ಸೃಷ್ಟಿಸಿದ್ದೆಲ್ಲವೂ ಆತನ ಪ್ರೀತಿ, ವಿವೇಕವನ್ನು ಸಾರಿಹೇಳ್ತಿದ್ವು.—ಕೀರ್ತ. 104:24; ರೋಮ. 1:20.
3. ಒಂದನೇ ಕೊರಿಂಥ 15:21, 22 ರ ಪ್ರಕಾರ ವಿಮೋಚನಾ ಮೌಲ್ಯದಿಂದ ನಮಗೇನು ಪ್ರಯೋಜನ ಸಿಗುತ್ತೆ?
3 ಈ ಸುಂದರ ಭೂಮಿಯಲ್ಲಿ ಮನುಷ್ಯರು ಸದಾ ಕಾಲ ಬದುಕಬೇಕು ಅಂತ ಯೆಹೋವ ಬಯಸಿದ. ಆದ್ರೆ ಆದಾಮ ಹವ್ವ ಆತನ ವಿರುದ್ಧ ದಂಗೆ ಎದ್ದು ಮನುಷ್ಯರೆಲ್ಲರಿಗೆ ಪಾಪ ದಾಟಿಸಿ ಸಾವು ತಂದ್ರು. (ರೋಮ. 5:12) ಆಗ ಯೆಹೋವ ಏನು ಮಾಡಿದ? ಇಡೀ ಮಾನವಕುಲನ ರಕ್ಷಿಸೋಕೆ ಬೇಕಾದಂಥ ಏರ್ಪಾಡನ್ನು ತಕ್ಷಣ ಮಾಡಿದ. (ಆದಿ. 3:15) ಮನುಷ್ಯರನ್ನು ಪಾಪ ಮರಣದಿಂದ ಬಿಡಿಸಕ್ಕೆ ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಡಲು ಏರ್ಪಾಡು ಮಾಡಿದ. ಹೀಗೆ ಪ್ರತಿಯೊಬ್ರು ತನ್ನನ್ನ ಆರಾಧಿಸಲು ಮತ್ತು ಶಾಶ್ವತ ಜೀವ ಪಡೆಯಲು ಅವಕಾಶ ಮಾಡಿದ.—ಯೋಹಾ. 3:16; ರೋಮ. 6:23; 1 ಕೊರಿಂಥ 15:21, 22 ಓದಿ.
4. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳಲಿದ್ದೇವೆ?
4 ದೇವ್ರು, ಸತ್ತವರಿಗೆ ಪುನಃ ಜೀವ ಕೊಡ್ತೀನಿ ಅಂತ ಹೇಳಿರೋ ಮಾತು ನಮ್ಮಲ್ಲಿ ಕೆಲ್ವು ಪ್ರಶ್ನೆಗಳನ್ನು ಎಬ್ಬಿಸುತ್ತೆ. ಉದಾಹರಣೆಗೆ, ಎಲ್ಲರಿಗೂ ಪುನರುತ್ಥಾನ ಒಂದೇ ಸಮ್ಯದಲ್ಲಿ ಆಗುತ್ತಾ? ನಮ್ಮ ಆಪ್ತರಿಗೆ ಪುನರುತ್ಥಾನ ಆದಾಗ ಅವ್ರನ್ನು ಗುರುತಿಸೋಕೆ ಆಗುತ್ತಾ? ಪುನರುತ್ಥಾನದಿಂದ ನಮ್ಮ ಖುಷಿ ಹೇಗೆ ಹೆಚ್ಚಾಗುತ್ತೆ? ಪುನರುತ್ಥಾನದ ಏರ್ಪಾಡಿನಿಂದ ಯೆಹೋವನ ಪ್ರೀತಿ, ತಾಳ್ಮೆ, ವಿವೇಕದ ಬಗ್ಗೆ ನಾವೇನು ಕಲಿಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಣ.
ಎಲ್ಲರಿಗೂ ಪುನರುತ್ಥಾನ ಒಂದೇ ಸಮ್ಯದಲ್ಲಿ ಆಗುತ್ತಾ?
5. ಹಂತ ಹಂತವಾಗಿ ಸ್ವಲ್ಪನೂ ಗಲಿಬಿಲಿ ಇಲ್ಲದೆ ಪುನರುತ್ಥಾನ ಮಾಡಲಾಗುತ್ತೆ ಅಂತ ಯಾಕೆ ಹೇಳಬಹುದು?
5 ಯೆಹೋವ ತನ್ನ ಮಗ ಯೇಸು ಮೂಲಕ ಲಕ್ಷಾಂತರ ಮೃತಜನ್ರನ್ನು ಪುನಃ ಜೀವಂತ ಎಬ್ಬಿಸಲಿದ್ದಾನೆ. ಅವ್ರೆಲ್ಲರನ್ನ ಒಟ್ಟಿಗೆ ಪುನರುತ್ಥಾನ ಮಾಡ್ತಾನಾ? ಇಲ್ಲ ಅನ್ಸುತ್ತೆ. ಯಾಕಂದ್ರೆ ಹಾಗೆ ಮಾಡಿದ್ರೆ ಒಮ್ಮೆಲೆ ಭೂಮಿ ಜನ್ರಿಂದ ಕಿಕ್ಕಿರಿದು ತುಂಬ ಗಲಿಬಿಲಿಯಾಗುತ್ತೆ. ಯೆಹೋವ ಗಲಿಬಿಲಿಯ ದೇವ್ರಲ್ಲ. ಆತ ಎಲ್ಲವನ್ನ ವ್ಯವಸ್ಥಿತವಾಗಿ ಮಾಡ್ತಾನೆ. ಭೂಮಿಯಲ್ಲಿ ಶಾಂತಿ, ಸಮಾಧಾನ ಇರಬೇಕಂದ್ರೆ ಎಲ್ಲ ಕೆಲ್ಸ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೀಬೇಕು ಅಂತ ಆತನಿಗೆ ಗೊತ್ತು. (1 ಕೊರಿಂ. 14:33) ಮನುಷ್ಯರು ಜೀವಿಸೋದಕ್ಕಾಗಿ ಭೂಮಿಯನ್ನ ಸಿದ್ಧ ಮಾಡಿದಾಗ್ಲೂ ಯೆಹೋವ ಪ್ರತಿಯೊಂದನ್ನೂ ಹಂತ ಹಂತವಾಗಿ ವ್ಯವಸ್ಥಿತವಾಗಿ ಮಾಡಿದ. ಸಾವಿರ ವರ್ಷದ ಆಳ್ವಿಕೆಯಲ್ಲಿ ಯೇಸು ಸಹ ತಾಳ್ಮೆ, ವಿವೇಕದಿಂದ ಕೆಲ್ಸ ಮಾಡ್ತಾನೆ. ಪುನರುತ್ಥಾನ ಆಗಿ ಬರುವವ್ರಿಗೆ ಮನೆ, ಊಟ, ಬಟ್ಟೆ ಮತ್ತು ಇನ್ನಿತರ ಅಗತ್ಯಗಳ ವ್ಯವಸ್ಥೆ ಹೇಗೆ ಮಾಡ್ಬೇಕು ಅಂತ ಅರ್ಮಗೆದ್ದೋನಿನಲ್ಲಿ ಪಾರಾದವ್ರಿಗೆ ನಿರ್ದೇಶನ ಕೊಡ್ತಾನೆ.
6. ಅಪೊಸ್ತಲರ ಕಾರ್ಯಗಳು 24:15 ರ ಪ್ರಕಾರ ಯೆಹೋವನು ಯಾರನ್ನೂ ಪುನರುತ್ಥಾನ ಮಾಡ್ತಾನೆ?
6 ಪುನರುತ್ಥಾನ ಆದವ್ರಿಗೆ ದೇವ್ರ ರಾಜ್ಯದ ಬಗ್ಗೆ ಮತ್ತು ಆತನ ನೀತಿ ನಿಯಮಗಳ ಬಗ್ಗೆ ಕಲಿಸಬೇಕಾಗುತ್ತೆ. ಅದು ತುಂಬ ಪ್ರಾಮುಖ್ಯ ಕೆಲ್ಸವಾಗಿದೆ. ಯಾಕಂದ್ರೆ ಪುನತ್ಥಾನವಾದವ್ರಲ್ಲಿ ಹೆಚ್ಚಿನವ್ರು ‘ಅನೀತಿವಂತರಾಗಿರ್ತಾರೆ.’ (ಅಪೊಸ್ತಲರ ಕಾರ್ಯಗಳು 24:15 ಓದಿ.) ಅವ್ರು ಯೇಸುವಿನ ವಿಮೋಚನಾ ಮೌಲ್ಯದಿಂದ ಪ್ರಯೋಜನ ಪಡ್ಕೋಬೇಕಂದ್ರೆ ಜೀವನದಲ್ಲಿ ತುಂಬ ಬದಲಾವಣೆಗಳನ್ನ ಮಾಡಬೇಕಾಗುತ್ತೆ. ಯೆಹೋವ ದೇವ್ರ ಬಗ್ಗೆ ಗೊತ್ತಿಲ್ಲದ ಕೋಟಿಗಟ್ಟಲೆ ಜನ್ರಿಗೆ ಸತ್ಯವನ್ನ ಕಲಿಸೋ ಜವಾಬ್ದಾರಿ ನಮಗಿದೆ. ಆಗ ನಾವೆಷ್ಟು ಬಿಝಿಯಾಗಿರ್ತೇವೆ ಅಲ್ವಾ? ನಾವು ಅವ್ರಿಗೆ ಸತ್ಯ ಹೇಗೆ ಕಲಿಸ್ತೇವೆ? ಈಗ ನಾವು ಬೈಬಲ್ ಸ್ಟಡಿ ಮಾಡೋ ತರ ಅಲ್ಲೂ ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಬೈಬಲ್ ಸ್ಟಡಿ ಮಾಡ್ತೇವಾ? ಪುನರುತ್ಥಾನ ಆಗಿ ಬಂದವ್ರನ್ನ ಸಭೆಗಳಿಗೆ ನೇಮಿಸಲಾಗುತ್ತಾ? ಸಭೆಯಲ್ಲಿ ಇವ್ರಿಗೆ ತರಬೇತಿ ನೀಡಲಾಗುತ್ತಾ? ಮುಂದೆ ಪುನರುತ್ಥಾನ ಆಗಿ ಬರೋವ್ರಿಗೆ ಇವ್ರು ಸತ್ಯ ಕಲಿಸ್ತಾರಾ? ಈ ಎಲ್ಲಾ ಏರ್ಪಾಡು ಹೇಗಿರುತ್ತೆ ಅಂತ ನಮ್ಗೆ ಗೊತ್ತಿಲ್ಲ, ಕಾದುನೋಡಬೇಕಷ್ಟೆ. ಆದ್ರೆ ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು” ಅನ್ನೋದಂತೂ ನಮ್ಗೆ ಚೆನ್ನಾಗಿ ಗೊತ್ತು. (ಯೆಶಾ. 11:9) ನಿಜಕ್ಕೂ ಸಾವಿರ ವರ್ಷದ ಆಳ್ವಿಕೆಯಲ್ಲಿ ನಮ್ಗೆ ತುಂಬ ಕೆಲ್ಸಗಳಿರುತ್ತೆ. ಆದ್ರೆ ಆ ಕೆಲ್ಸದಿಂದ ನಮ್ಗೆ ತುಂಬ ಸಂತೋಷ ಸಿಗುತ್ತೆ!
7. ಪುನರುತ್ಥಾನ ಆದವ್ರಿಗೆ ಕಲಿಸುವಾಗ ದೇವ ಜನ್ರು ಯಾಕೆ ಅನುಕಂಪ ತೋರಿಸ್ಬೇಕು?
7 ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯಲ್ಲಿ ದೇವ್ರ ಸೇವಕರು ಯೆಹೋವನನ್ನು ಮೆಚ್ಚಿಸಲು ಬದಲಾವಣೆಗಳನ್ನ ಮಾಡ್ತಾ ಇರಬೇಕು. ಆಗಲೇ ಅವ್ರಿಗೆ ಪುನರುತ್ಥಾನ ಆದವ್ರ ಬಲಹೀನತೆಗಳನ್ನ ಅರ್ಥಮಾಡಿಕೊಳ್ಳೋಕೆ ಆಗುತ್ತೆ. ಪುನರುತ್ಥಾನ ಆದವ್ರಿಗೆ ಕೆಟ್ಟ ಯೋಚನೆಗಳನ್ನು ನಿಯಂತ್ರಣದಲ್ಲಿ ಇಡೋಕೆ ಮತ್ತು ಯೆಹೋವನ ನೀತಿನಿಯಮಗಳಿಗೆ ಅನುಸಾರ ಜೀವಸೋದಕ್ಕೆ ಸಹಾಯ ಮಾಡಲು ಆಗುತ್ತೆ. (1 ಪೇತ್ರ 3:8) ಯೆಹೋವನ ಜನ್ರು ದೀನತೆ ತೋರಿಸ್ತಾ ಮತ್ತು ಯೆಹೋವನನ್ನ ಮೆಚ್ಚಿಸೋಕೆ ಇನ್ನೂ ಬದಲಾವಣೆಗಳನ್ನ ಮಾಡ್ತಾ ಇರೋದನ್ನ ನೋಡ್ವಾಗ ಪುನರುತ್ಥಾನವಾದವ್ರು ಸಹ ಯೆಹೋವನ ಆರಾಧನೆ ಮಾಡ್ತಾರೆ.—ಫಿಲಿ. 2:12.
ಪುನರುತ್ಥಾನವಾಗಿ ಬಂದವ್ರನ್ನ ಗುರುತಿಸೋಕಾಗುತ್ತಾ?
8. ಪುನರುತ್ಥಾನ ಆಗಿ ಬರುವವ್ರನ್ನ ಗುರುತಿಸಕ್ಕೆ ಆಗುತ್ತೆ ಅಂತ ಹೇಗೆ ಹೇಳ್ಬಹುದು?
8 ಪುನರುತ್ಥಾನವಾಗಿ ಬರುವ ನಮ್ಮ ಆಪ್ತರನ್ನ ಗುರುತಿಸೋಕಾಗುತ್ತೆ ಅಂತ ಹೇಳೋಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ಹಿಂದೆ ಯೆಹೋವನು ತೀರಿ ಹೋದ ಜನ್ರನ್ನು ಪುನರುತ್ಥಾನ ಮಾಡಿದಾಗ ಅವ್ರ ರೂಪ, ಯೋಚನೆ, ಭಾವನೆ, ನಡತೆ ಯಾವ್ದೂ ಬದ್ಲಾಗಿರಲಿಲ್ಲ. ಅದೇ ರೀತಿ ಮುಂದೆಯೂ ಪುನರುತ್ಥಾನ ಆದಾಗ ಜನ್ರು ಹಾಗೇ ಇರ್ತಾರೆ, ಬದ್ಲಾಗಲ್ಲ ಅಂತ ಹೇಳ್ಬಹುದು. ಯೇಸು ಸಾವನ್ನ ನಿದ್ರೆಗೆ ಹೋಲಿಸಿ, ಪುನರುತ್ಥಾನವನ್ನ ನಿದ್ರೆಯಿಂದ ಎದ್ದೇಳೋದಕ್ಕೆ ಹೋಲಿಸಿದ್ದಾನೆ. (ಮತ್ತಾ. 9:18, 24; ಯೋಹಾ. 11:11-13) ಒಬ್ಬ ವ್ಯಕ್ತಿಯನ್ನು ನಿದ್ರೆಯಿಂದ ಎಬ್ಬಿಸುವಾಗ ಅವ್ನು ನಿದ್ರೆ ಮಾಡೋದಕ್ಕೆ ಮುಂಚೆ ಹೇಗಿದ್ದನೋ ಹಾಗೇ ಇರ್ತಾನೆ. ಅವ್ನ ಮಾತು, ನಡತೆ, ಯೋಚನೆ, ನೆನಪುಗಳು ಹಾಗೇ ಇರುತ್ತೆ. ಲಾಜರನ ಉದಾಹರಣೆ ನೋಡಿ. ಅವ್ನು ಸತ್ತು ನಾಲ್ಕು ದಿನಗಳಾಗಿತ್ತು. ಅವ್ನ ಶರೀರ ಕೊಳೆಯೋಕೆ ಶುರುವಾಗಿತ್ತು. ಆದ್ರೂ ಯೇಸು ಅವನನ್ನು ಪುನರುತ್ಥಾನ ಮಾಡ್ದಾಗ ಅವ್ನ ಸಹೋದರಿಯರು ಅವ್ನನ್ನು ಕೂಡ್ಲೇ ಗುರುತಿಸಿದ್ರು, ಅವ್ನೂ ಅವ್ರನ್ನು ಗುರುತಿಸಿದ.—ಯೋಹಾ. 11:38-44; 12:1, 2.
9. ಪುನರುತ್ಥಾನವಾಗಿ ಬಂದವ್ರು ಪರಿಪೂರ್ಣರಾಗಿರಲ್ಲ ಯಾಕೆ?
9 ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗೆ ಯಾರೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ. ಯಾಕಂದ್ರೆ ಯಾರಿಗೂ ಕಾಯಿಲೆ ಬರಲ್ಲ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಯೆಶಾ. 33:24; ರೋಮ. 6:7) ಇದ್ರ ಅರ್ಥ ಪುನರುತ್ಥಾನ ಆಗುವವವ್ರು ಆರೋಗ್ಯವಂತರಾಗಿ ಇರ್ತಾರೆ. ಆದ್ರೆ ಅವ್ರಿಗಿನ್ನೂ ಪರಿಪೂರ್ಣತೆ ಬಂದಿರಲ್ಲ. ದಿಢೀರನೆ ಅವ್ರು ಪರಿಪೂರ್ಣತೆಗೆ ಬಂದ್ರೆ ಅವ್ರ ಸ್ನೇಹಿತರಿಗೆ, ಕುಟುಂಬದವ್ರಿಗೆ ಗುರುತಿಸೋಕೆ ಕಷ್ಟ ಆಗ್ಬಹುದು. ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೆಳಗೆ ಮನುಷ್ಯರು ಹಂತ ಹಂತವಾಗಿ ಪರಿಪೂರ್ಣರಾಗ್ತಾರೆ. ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಯೇಸು ಕ್ರಿಸ್ತ ತನ್ನ ರಾಜ್ಯವನ್ನು ಯೆಹೋವ ದೇವ್ರಿಗೆ ಒಪ್ಪಿಸಿಕೊಡ್ತಾನೆ. ಅಷ್ಟರೊಳಗೆ ಯೆಹೋವನ ಎಲ್ಲಾ ಉದ್ದೇಶಗಳು ನೆರವೇರಿರುತ್ತವೆ. ಜೊತೆಗೆ ಮನುಷ್ಯರೆಲ್ಲಾ ಪರಿಪೂರ್ಣರಾಗ್ತಾರೆ.—1 ಕೊರಿಂ. 15:24-28; ಪ್ರಕ. 20:1-3.
ಪುನರುತ್ಥಾನದಿಂದ ನಮ್ಮ ಖುಷಿ ಹೇಗೆ ಹೆಚ್ಚಾಗುತ್ತೆ?
10. ನಿಮ್ಮ ಆಪ್ತರಿಗೆ ಪುನರುತ್ಥಾನ ಆದಾಗ ನಿಮ್ಗೆ ಹೇಗನಿಸುತ್ತೆ?
10 ಆಪ್ತರು ಪುನರುತ್ಥಾನವಾಗಿ ಎದ್ದು ಬಂದು ನಿಮ್ಮ ಮುಂದೆ ನಿಂತರೆ ನೀವೇನು ಮಾಡ್ತೀರಾ? ಸಂತೋಷದಿಂದ ಕುಣಿದು ಕುಪ್ಪಳಿಸ್ತೀರಾ? ನಿಮ್ಮ ಕಣ್ಣಲ್ಲಿ ಆನಂದಭಾಷ್ಪ ತುಂಬಿರುತ್ತಾ? ಖುಷಿಯಿಂದ ಯೆಹೋವನನ್ನು ಹಾಡಿ ಹೊಗಳ್ತೀರಾ? ನಮ್ಮಲ್ಲಿ ಯಾವುದೇ ಭಾವನೆ ಉಕ್ಕಲಿ ಒಂದಂತೂ ನಿಜ, ಪುನರುತ್ಥಾನ ಅನ್ನೋ ಅದ್ಭುತ ಉಡುಗೊರೆ ಕೊಟ್ಟಿರೋದಕ್ಕಾಗಿ
ಪ್ರೀತಿಯ ತಂದೆಯಾದ ಯೆಹೋವನ ಮೇಲೆ ಮತ್ತು ಯೇಸು ಕ್ರಿಸ್ತನ ಮೇಲೆ ನಮ್ಗೆ ಪ್ರೀತಿ ಉಕ್ಕಿ ಬರುತ್ತೆ ಮತ್ತು ಅವ್ರಿಗೆ ಚಿರಋಣಿಗಳಾಗಿರ್ತೇವೆ.11. ಯೋಹಾನ 5:28, 29 ರಲ್ಲಿ ಯೇಸು ಹೇಳಿದ ಪ್ರಕಾರ ಯೆಹೋವನ ನೀತಿ ನಿಯಮಗಳಿಗೆ ಅನುಸಾರವಾಗಿ ಜೀವಿಸುವವ್ರಿಗೆ ಯಾವ ಅವಕಾಶ ಇದೆ?
11 ಪುನರುತ್ಥಾನ ಆಗಿ ಬರೋವ್ರಿಗೆ ಹೇಗನಿಸುತ್ತೆ ಅನ್ನೋದ್ರ ಬಗ್ಗೆ ಸ್ವಲ್ಪ ಯೋಚ್ಸಿ. ತಮ್ಮ ಜೀವ್ನದಲ್ಲಿ ಬದಲಾವಣೆಗಳನ್ನ ಮಾಡ್ಕೊಂಡು ಯೆಹೋವನ ನೀತಿ ನಿಯಮಗಳಿಗನುಸಾರ ಜೀವಿಸುವಾಗ ಅವ್ರಿಗೆ ತುಂಬ ಖುಷಿಯಾಗುತ್ತೆ. ಅವ್ರಿಗೆ ಪರದೈಸಲ್ಲಿ ಶಾಶ್ವತವಾಗಿ ಜೀವಿಸುವ ಅವಕಾಶ ಸಿಗುತ್ತೆ. ಆದ್ರೆ ಯಾರು ಯೆಹೋವನ ವಿರುದ್ಧ ದಂಗೆ ಏಳ್ತಾರೋ, ಪರದೈಸಿನಲ್ಲಿರೋ ಶಾಂತಿಯನ್ನ ಹಾಳುಮಾಡ್ತಾರೋ ಅಂಥವ್ರಿಗೆ ಪರದೈಸಲ್ಲಿ ಜೀವಿಸೋ ಅವಕಾಶ ಇರಲ್ಲ.—ಯೆಶಾ. 65:20; ಯೋಹಾನ 5:28, 29 ಓದಿ.
12. ಹೊಸಲೋಕದಲ್ಲಿ ಜೀವಿಸುವ ದೇವರ ಸೇವಕರಿಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತವೆ?
12 ದೇವರ ರಾಜ್ಯದ ಆಳ್ವಿಕೆಯ ಕೆಳಗೆ ದೇವಜನ್ರು ಜ್ಞಾನೋಕ್ತಿ 10:22 ರಲ್ಲಿರುವ ಮಾತುಗಳು ಸತ್ಯ ಅನ್ನೋದನ್ನ ಅರ್ಥ ಮಾಡ್ಕೊಳ್ತಾರೆ. ಅಲ್ಲಿ ಹೀಗಿದೆ: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.” ಯೆಹೋವನ ಪವಿತ್ರಾತ್ಮದ ಸಹಾಯದಿಂದ ದೇವಜನ್ರು ದಿನೇದಿನೇ ಯೇಸುವಿನಲ್ಲಿರುವ ಗುಣಗಳನ್ನ ಬೆಳೆಸಿಕೊಳ್ತಾರೆ ಮತ್ತು ಪರಿಪೂರ್ಣರಾಗುತ್ತಾ ಹೋಗ್ತಾರೆ. (ಯೋಹಾ. 13:15-17; ಎಫೆ. 4:23, 24) ದಿನ ಕಳೆದಂತೆ ಅವ್ರು ಹೆಚ್ಚು ಆರೋಗ್ಯವಂತರಾಗ್ತಾ ಹೋಗ್ತಾರೆ ಮತ್ತು ಉತ್ತಮ ವ್ಯಕ್ತಿಗಳೂ ಆಗ್ತಾರೆ. ಆಗ ಜೀವ್ನ ಎಷ್ಟು ಚೆನ್ನಾಗಿರುತ್ತೆ ಅಲ್ವಾ! (ಯೋಬ 33:25) ಪುನರುತ್ಥಾನದ ಬಗ್ಗೆ ಧ್ಯಾನಿಸೋದಾದ್ರೆ ಏನು ಪ್ರಯೋಜ್ನ ಇದೆ ಅಂತ ನಾವೀಗ ನೋಡೋಣ.
ಯೆಹೋವನ ಪ್ರೀತಿ
13. (ಎ) ಕೀರ್ತನೆ 139:1-4 ರಿಂದ ಯೆಹೋವನು ನಮ್ಮನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ ಅನ್ನೋದು ಹೇಗೆ ಗೊತ್ತಾಗುತ್ತೆ? (ಬಿ) ಈ ಮಾತನ್ನ ಪುನರುತ್ಥಾನ ಹೇಗೆ ರುಜುಪಡಿಸುತ್ತೆ?
13 ನಾವು ಈಗಾಗ್ಲೇ ಕಲಿತಂತೆ ಯೆಹೋವನು ಜನ್ರನ್ನು ಪುನರುತ್ಥಾನ ಮಾಡ್ವಾಗ ಅವ್ರ ನೆನಪು, ವ್ಯಕ್ತಿತ್ವ ಬದ್ಲಾಗಲ್ಲ. ಅವ್ರು ಮುಂಚೆ ಹೇಗಿದ್ರೋ ಹಾಗೇ ಇರ್ತಾರೆ. ಇದ್ರಿಂದ ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಅನ್ನೋದು ಗೊತ್ತಾಗುತ್ತೆ. ನಮ್ಮ ಯೋಚ್ನೆ, ಭಾವನೆ, ನಮ್ಮ ಪ್ರತಿಯೊಂದು ಚಲನವಲನಗಳನ್ನು ಆತನು ಗಮಸಿಸುತ್ತಾನೆ ಮತ್ತು ಅದನ್ನ ನೆನಪಿಟ್ಟುಕೊಳ್ತಾನೆ. ನಮ್ಮ ಬಗ್ಗೆ ಇಷ್ಟು ಚೆನ್ನಾಗಿ ತಿಳ್ಕೊಂಡಿರೋ ಯೆಹೋವ ದೇವ್ರಿಗೆ ನಮ್ಮನ್ನ ಅದೇ ರೀತಿ ಪುನರುತ್ಥಾನ ಮಾಡಕ್ಕೆ ಕಷ್ಟನೇ ಆಗಲ್ಲ. ಯೆಹೋವ ನಮ್ಮಲ್ಲಿ ಪ್ರತಿಯೊಬ್ಬರನ್ನೂ ತುಂಬ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ ಅಂತ ದಾವೀದನಿಗೆ ಗೊತ್ತಿತ್ತು. (ಕೀರ್ತನೆ 139:1-4 ಓದಿ.) ಯೆಹೋವನಿಗೆ ನಮ್ಮ ಬಗ್ಗೆ ಎಲ್ಲಾ ಗೊತ್ತಿದೆ ಅನ್ನೋ ವಿಷ್ಯ ನಮ್ಗೆ ಖುಷಿ ತರಲ್ವ?
14. ಯೆಹೋವ ನಮ್ಮ ಬಗ್ಗೆ ಎಲ್ಲ ತಿಳ್ಕೊಂಡಿದ್ದಾನೆ ಅನ್ನೋ ವಿಷ್ಯ ನಮ್ಮಲ್ಲಿ ಭಯ ಹುಟ್ಟಿಸಬೇಕಾಗಿಲ್ಲ ಯಾಕೆ?
14 ಯೆಹೋವ ನಮ್ಮ ಬಗ್ಗೆ ಎಲ್ಲ ತಿಳ್ಕೊಂಡಿದ್ದಾನೆ ಅನ್ನೋ ವಿಷ್ಯ ನಮ್ಮಲ್ಲಿ ಭಯ ಹುಟ್ಟಿಸಬೇಕಾಗಿಲ್ಲ. ಯಾಕಂದ್ರೆ ಯೆಹೋವ ನಮ್ಮಲ್ಲಿರೋ ಬಲಹೀನತೆಯನ್ನ ನೋಡಲ್ಲ, ನಮ್ಮನ್ನ ಅಮೂಲ್ಯವಾಗಿ ನೋಡ್ತಾನೆ. ನಮ್ಮ ಜೀವ್ನದ ಪ್ರತಿ ಕ್ಷಣದಲ್ಲೂ ಏನಾಗ್ತಿದೆ ಅನ್ನೋದು ಆತನಿಗೆ ಗೊತ್ತಿದೆ. ಈ ಮಾತು ನಮ್ಗೆ ಸಾಂತ್ವನ ಕೊಡುತ್ತೆ ಅಲ್ವಾ! ನಾವ್ಯಾರೂ ಒಂಟಿಯಲ್ಲ. ದಿನದ ಪ್ರತಿ ಕ್ಷಣನೂ ಯೆಹೋವ ನಮ್ಮ ಜೊತೆನೇ ಇರ್ತಾನೆ. ನಮ್ಗೆ ಸಹಾಯ ಮಾಡೋಕೆ ಯಾವಾಗ್ಲೂ ಕಾಯ್ತಾ ಇರ್ತಾನೆ.—2 ಪೂರ್ವ. 16:9.
ಯೆಹೋವನ ವಿವೇಕ
15. ಪುನರುತ್ಥಾನದ ನಿರೀಕ್ಷೆ ಹಿಂದೆ ಯೆಹೋವನ ಅಪಾರ ವಿವೇಕ ಇದೆ ಅನ್ನೋದನ್ನ ಹೇಗೆ ವಿವರಿಸ್ತೀರಾ?
15 ಸಾವಿನ ಭಯದಿಂದ ಜನ ಏನು ಬೇಕಾದ್ರೂ ಮಾಡ್ತಾರೆ. ಅದಕ್ಕೆ ಲೋಕದವ್ರು ಈ ಭಯವನ್ನ ಒಂದು ಅಸ್ತ್ರವಾಗಿ ಬಳಸ್ತಾರೆ. ಅವ್ರು ನಮ್ಮಲ್ಲಿ ಸಾವಿನ ಭಯ ಹುಟ್ಟಿಸಿ ನಮ್ಮ ಸ್ನೇಹಿತರಿಗೆ ನಂಬಿಕೆ ದ್ರೋಹ ಮಾಡುವಂತೆ ಮತ್ತು ನಮ್ಮ ನಂಬಿಕೆನ ಬಿಟ್ಟುಕೊಡುವಂತೆ ಬೆದರಿಸ್ತಾರೆ, ಒತ್ತಡ ಹಾಕ್ತಾರೆ. ಆದ್ರೆ ನಾವು ಅಂಥ ಬೆದರಿಕೆಗಳಿಗೆ ಹೆದರೋರಲ್ಲ. ಯಾಕಂದ್ರೆ ವಿರೋಧಿಗಳು ನಮ್ಮನ್ನ ಕೊಂದ್ರೂ ಯೆಹೋವ ನಮ್ಮನ್ನ ಜೀವಂತ ಎಬ್ಬಿಸ್ತಾನೆ. (ಪ್ರಕ. 2:10) ಯಾರು ಏನೇ ಮಾಡಿದ್ರೂ ನಮ್ಮನ್ನು ಯೆಹೋವನ ಪ್ರೀತಿಯಿಂದ ದೂರ ಮಾಡೋಕೆ ಆಗಲ್ಲ. (ರೋಮ. 8:35-39) ಯೆಹೋವ ಪುನರುತ್ಥಾನ ಮಾಡ್ತೇನೆ ಅಂತ ಕೊಟ್ಟ ಮಾತಿನ ಹಿಂದೆ ಆತನ ಅಪಾರ ವಿವೇಕ ಅಡಗಿದೆ. ಸೈತಾನನ ಬೆಂಬಲಿಗರು ನಮ್ಗೆ ಎಷ್ಟೇ ಬೆದರಿಕೆ ಹಾಕ್ಲಿ, ನಮ್ಮನ್ನ ಸಾಯಿಸ್ತೀವಿ ಅಂತನೇ ಹೇಳ್ಲಿ ನಾವು ಹೆದರದೆ ಯೆಹೋವನಿಗೆ ನಿಷ್ಠರಾಗಿ ಉಳಿಯೋದಕ್ಕೆ ಪುನರುತ್ಥಾನದ ನಿರೀಕ್ಷೆ ಸಹಾಯ ಮಾಡುತ್ತೆ.
16. (ಎ) ನೀವು ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು? (ಬಿ) ಆ ಪ್ರಶ್ನೆಗಳಿಗೆ ನೀವು ಕೊಡೋ ಉತ್ರ ಯೆಹೋವನ ಮೇಲೆ ಭರವಸೆ ಇದ್ಯಾ ಇಲ್ವಾ ಅನ್ನೋದನ್ನ ಹೇಗೆ ತೋರಿಸಿಕೊಡುತ್ತೆ?
ಲೂಕ 16:10) ‘ದೇವರ ರಾಜ್ಯಕ್ಕೆ ಮೊದ್ಲ ಸ್ಥಾನ ಕೊಟ್ಟಾಗ ಯೆಹೋವ ನನ್ನ ಅಗತ್ಯಗಳನ್ನ ಪೂರೈಸ್ತಾನೆ ಅಂತ ನನ್ನ ಜೀವ್ನ ರೀತಿ ತೋರಿಸಿಕೊಡುತ್ತಾ?’ (ಮತ್ತಾ. 6:31-33) ಈ ಪ್ರಶ್ನೆಗಳಿಗೆ ನಿಮ್ಮ ಉತ್ರ ಹೌದಾದ್ರೆ ನೀವು ಯೆಹೋವನ ಮೇಲೆ ಭರವಸೆಯಿಟ್ಟಿದ್ದೀರಿ ಮತ್ತು ಮುಂದೆ ಏನೇ ಸಮಸ್ಯೆ ಬಂದ್ರೂ ಅದನ್ನ ಎದುರಿಸೋಕೆ ತಯಾರಾಗಿದ್ದೀರಿ ಅಂತ ಅರ್ಥ.—ಜ್ಞಾನೋ. 3:5, 6.
16 ಒಂದು ವೇಳೆ ಯೆಹೋವನ ವಿರೋಧಿಗಳು ನಿಮ್ಮನ್ನ ಸಾಯಿಸ್ತೇವೆ ಅಂತ ಬೆದರಿಕೆ ಹಾಕಿದ್ರೆ ಏನು ಮಾಡ್ತೀರಾ? ಯೆಹೋವನ ಮೇಲೆ ಭರವಸೆಯಿಡ್ತೀರಾ? ಆತ ಪುನರುತ್ಥಾನ ಮಾಡ್ತಾನೆ ಅಂತ ನಂಬ್ತೀರಾ? ನಮ್ಮ ಈಗಿನ ಜೀವನ ರೀತಿ ಮತ್ತು ನಾವು ಮಾಡುವ ನಿರ್ಣಯಗಳು ಮುಂದಕ್ಕೂ ನಾವು ಯೆಹೋವನ ಮೇಲೆ ಭರವಸೆ ಇಡ್ತೀವಾ ಇಲ್ಲವಾ ಅನ್ನೋದನ್ನ ತೋರಿಸಿಕೊಡುತ್ತೆ. ಹಾಗಾಗಿ ಈ ಪ್ರಶ್ನೆಗಳನ್ನ ಕೇಳಿಕೊಳ್ಳೋಣ: ‘ಪ್ರತಿ ದಿನ ನಾನು ಮಾಡುವ ಚಿಕ್ಕಚಿಕ್ಕ ನಿರ್ಣಯಗಳು ಯೆಹೋವನ ಮೇಲೆ ಭರವಸೆ ಇಟ್ಟಿದ್ದೇನೆ ಅನ್ನೋದನ್ನ ತೋರಿಸಿಕೊಡುತ್ತಾ?’ (ಯೆಹೋವನ ತಾಳ್ಮೆ
17. (ಎ) ಪುನರುತ್ಥಾನದ ನಿರೀಕ್ಷೆ ಯೆಹೋವನ ತಾಳ್ಮೆಯನ್ನ ಹೇಗೆ ತೋರಿಸಿಕೊಡುತ್ತೆ? (ಬಿ) ಯೆಹೋವನು ತೋರಿಸಿರೋ ತಾಳ್ಮೆಗೆ ನಾವು ಹೇಗೆ ಕೃತಜ್ಞತೆ ತೋರಿಸಬೇಕು?
17 ಯೆಹೋವ ಈ ದುಷ್ಟ ಲೋಕವನ್ನು ನಾಶಮಾಡಲು ಒಂದು ಸಮಯವನ್ನು ನಿಗದಿಪಡಿಸಿದ್ದಾನೆ. (ಮತ್ತಾ. 24:36) ಆದ್ರೆ ಯೆಹೋವ ತಾಳ್ಮೆಗೆಟ್ಟು ಆ ಸಮ್ಯ ಬರೋದಕ್ಕಿಂತ ಮುಂಚೆನೇ ಏನೂ ಮಾಡಕ್ಕೆ ಹೋಗಲ್ಲ. ಸತ್ತವರನ್ನ ಪುನರುತ್ಥಾನ ಮಾಡಕ್ಕೆ ಆತನಿಗೆ ಹಂಬಲಿಕೆ ಇದೆ, ಆದ್ರೆ ಅದನ್ನ ಮಾಡಕ್ಕೆ ಸರಿಯಾದ ಸಮಯಕ್ಕಾಗಿ ತಾಳ್ಮೆಯಿಂದ ಕಾಯ್ತಾ ಇದ್ದಾನೆ. (ಯೋಬ 14:14, 15; ಯೋಹಾ. 5:28) ಯೆಹೋವನ ತಾಳ್ಮೆಯಿಂದ ನಮ್ಗೆ ತುಂಬ ಪ್ರಯೋಜ್ನ ಸಿಕ್ಕಿದೆ. ಹೇಗಂದ್ರೆ, ಯೆಹೋವ ತಾಳ್ಮೆ ತೋರಿಸಿದ್ರಿಂದ ನಮ್ಮನ್ನೂ ಸೇರಿಸಿ ಅನೇಕರಿಗೆ ‘ಪಶ್ಚಾತ್ತಾಪ ಹೊಂದುವ’ ಅವಕಾಶ ಸಿಕ್ಕಿದೆ. (2 ಪೇತ್ರ 3:9) ಆದಷ್ಟು ಹೆಚ್ಚು ಜನ ಈ ಭೂಮಿ ಮೇಲೆ ಶಾಶ್ವತವಾಗಿ ಬದುಕಬೇಕು ಅನ್ನೋದು ಯೆಹೋವನ ಆಸೆ. ಹಾಗಾಗಿ ಆತನು ತೋರಿಸಿರೋ ತಾಳ್ಮೆಗೆ ಕೃತಜ್ಞತೆ ತೋರಿಸೋಣ. ಹೇಗಂದ್ರೆ, “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರೋರನ್ನು ಹುಡುಕೋಣ ಮತ್ತು ಅವ್ರು ಯೆಹೋವನನ್ನು ಪ್ರೀತಿಸೋಕೆ, ಆತನನ್ನು ಆರಾಧಿಸೋಕೆ ಸಹಾಯ ಮಾಡೋಣ. (ಅ. ಕಾ. 13:48) ಆಗ ಅವ್ರು ಸಹ ನಮ್ಮಂತೆ ಯೆಹೋವನ ತಾಳ್ಮೆಯಿಂದ ಪ್ರಯೋಜ್ನ ಪಡ್ಕೊಳ್ಳೋಕಾಗುತ್ತೆ.
18. ನಾವ್ಯಾಕೆ ಬೇರೆಯವ್ರ ಜೊತೆ ತಾಳ್ಮೆಯಿಂದ ನಡ್ಕೊಬೇಕು?
18 ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲೇ ನಾವು ಪರಿಪೂರ್ಣರಾಗೋದು ಅಂತ ಯೆಹೋವನಿಗೆ ಗೊತ್ತಿದೆ. ಅಲ್ಲಿವರೆಗೂ ತಾಳ್ಮೆಯಿಂದ ಕಾಯ್ತಾ ಇರ್ತಾನೆ. ಜೊತೆಗೆ ನಮ್ಮ ತಪ್ಪನ್ನೂ ಕ್ಷಮಿಸ್ತಾನೆ. ನಾವೂ ಯೆಹೋವನಂತೆ ತಾಳ್ಮೆ ತೋರಿಸಬೇಕು. ನಮ್ಮ ಸಹೋದರ ಸಹೋದರಿಯರ ತಪ್ಪನ್ನ ಕ್ಷಮಿಸಬೇಕು. ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು. ಒಬ್ಬ ಸಹೋದರಿಯ ಅನುಭವ ನೋಡಿ. ಆಕೆಯ ಗಂಡನಿಗೆ
ಇದ್ದಕ್ಕಿದ್ದಂತೆ ಚಿಂತೆ, ಮಾನಸಿಕ ಒತ್ತಡ ಆಗ್ತಿತ್ತು. ಇದ್ರಿಂದ ಅವ್ರು ಕೂಟಗಳಿಗೆ ಹೋಗೋದನ್ನ ನಿಲ್ಲಿಸಿಬಿಟ್ರು. ಆಗ ಆಕೆಗಾದ ಅನಿಸಿಕೆ ಬಗ್ಗೆ ಹೀಗೆ ಹೇಳ್ತಾಳೆ: “ನಂಗೆ ತುಂಬ ಕಷ್ಟ ಆಯ್ತು. ಜೀವ್ನದಲ್ಲಿ ಮುಂದೆ ಏನೆಲ್ಲಾ ಮಾಡಬೇಕು ಅಂತ ಅಂದ್ಕೊಂಡಿದ್ದೆವೋ ಅದೆಲ್ಲಾ ತಲೆಕೆಳಗಾಗಿ ಹೋಯ್ತು.” ಇಷ್ಟೆಲ್ಲಾ ಆದ್ರೂ ಆ ಸಹೋದರಿ ತನ್ನ ಗಂಡನ ಜೊತೆ ಪ್ರೀತಿ, ತಾಳ್ಮೆಯಿಂದ ನಡ್ಕೊಂಡಳು. ಇಂಥ ಸಂದರ್ಭದಲ್ಲಿ ಕೈಚೆಲ್ಲಿ ಕೂರದೆ ಯೆಹೋವನ ಮೇಲೆ ಭರವಸೆ ಇಟ್ಟಳು. ಯೆಹೋವನ ತರ ಆಕೆನೂ ತನ್ನ ಗಂಡನಲ್ಲಿರೋ ಒಳ್ಳೇತನವನ್ನ ನೋಡಿದ್ಳು. “ನನ್ನ ಗಂಡನಲ್ಲಿ ಒಳ್ಳೇ ಗುಣಗಳಿವೆ ಮತ್ತು ಅವ್ರು ಚಿಂತೆಯಿಂದ ಹೊರಬರೋಕೆ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತಿದ್ದಾರೆ” ಅಂತ ಹೇಳ್ತಾಳೆ. ಇದ್ರಿಂದ ನಾವೇನು ಕಲಿಯಬಹುದು? ಕಷ್ಟ ಸಮಸ್ಯೆಗಳನ್ನ ಅನುಭವಿಸ್ತಿರೋ ಕುಟುಂಬ ಸದಸ್ಯರ ಜೊತೆ ಮತ್ತು ನಮ್ಮ ಸಹೋದರ ಸಹೋದರಿಯರ ಜೊತೆ ತಾಳ್ಮೆಯಿಂದ ನಡ್ಕೊಬೇಕು.19. ನಮ್ಮ ದೃಢ ನಿರ್ಧಾರ ಏನಾಗಿರಬೇಕು?
19 ಭೂಮಿಯನ್ನ ಸೃಷ್ಟಿಸಿದಾಗ ಯೇಸು, ದೇವದೂತರು ತುಂಬ ಆನಂದಿಸಿದ್ರು. ಹಾಗಿರುವಾಗ ಇಡೀ ಭೂಮಿಯಲ್ಲಿ ಯೆಹೋವನನ್ನು ಆರಾಧಿಸುವ ಪರಿಪೂರ್ಣ ಜನ್ರು ತುಂಬಿರೋದನ್ನ ನೋಡುವಾಗ ಅವ್ರಿಗೆ ಇನ್ನೂ ಖುಷಿಯಾಗಬಹುದಲ್ವಾ? ಭೂಮಿಯಿಂದ ಸ್ವರ್ಗಕ್ಕೆ ಹೋಗಿ ಯೇಸುವಿನ ಜೊತೆ ಆಳ್ವಿಕೆ ನಡೆಸಲಿರೋ ಅಭಿಷಿಕ್ತರ ಬಗ್ಗೆ ಸ್ವಲ್ಪ ಯೋಚಿಸಿ. ಅವ್ರ ಕೆಲ್ಸದಿಂದ ನಾವು ಪ್ರಯೋಜ್ನ ಪಡೆದುಕೊಳ್ಳೋದನ್ನ ನೋಡ್ವಾಗ ಅವ್ರಿಗೂ ತುಂಬ ಖುಷಿಯಾಗುತ್ತೆ. (ಪ್ರಕ. 4:4, 9-11; 5:9,10) ಕಷ್ಟ-ಕಾಯಿಲೆ, ಸಾವು-ನೋವಿಲ್ಲದ, ಎಲ್ಲಿ ನೋಡಿದ್ರೂ ಸಂತೋಷ ತುಂಬಿರೋ ಪರಿಸ್ಥಿತಿನ ಊಹಿಸಿ! (ಪ್ರಕ. 21:4) ಅಲ್ಲಿವರೆಗೆ ಪ್ರೀತಿ, ವಿವೇಕ, ತಾಳ್ಮೆಯಿರೋ ನಮ್ಮ ಯೆಹೋವ ದೇವರನ್ನ ಅನುಕರಿಸೋಣ. ಹಾಗೆ ಮಾಡೋದಾದ್ರೆ ಎಂಥ ಸನ್ನಿವೇಶ ಬಂದ್ರೂ ನಮ್ಮ ಸಂತೋಷನ ಕಳೆದುಕೊಳ್ಳಲ್ಲ. (ಯಾಕೋ. 1:2-4) ಪುನರುತ್ಥಾನ ಮಾಡ್ತೇನೆ ಅಂತ ಮಾತು ಕೊಟ್ಟಿರೋ ಯೆಹೋವ ದೇವ್ರಿಗೆ ನಾವು ಚಿರಋಣಿಗಳಾಗಿ ಇರೋಣ—ಅ. ಕಾ. 24:15.
ಗೀತೆ 130 ಜೀವವೆಂಬ ಅದ್ಭುತ
^ ಪ್ಯಾರ. 5 ನಮ್ಮ ತಂದೆಯಾಗಿರುವ ಯೆಹೋವ ಪ್ರೀತಿ, ವಿವೇಕ, ತಾಳ್ಮೆ ಇರೋ ದೇವ್ರು. ಆತನ ಸೃಷ್ಟಿಯಿಂದ ಮತ್ತು ಸತ್ತವರಿಗೆ ಮತ್ತೆ ಜೀವ ಕೊಡ್ತೇನೆ ಅಂತ ಹೇಳಿದ ಮಾತಿನಿಂದ ಆ ಗುಣಗಳ ಬಗ್ಗೆ ತಿಳ್ಕೊಳ್ಳಬಹುದು. ಈ ಲೇಖನದಲ್ಲಿ ಪುನರುತ್ಥಾನಕ್ಕೆ ಸಂಬಂಧಪಟ್ಟ ಕೆಲ್ವು ಪ್ರಶ್ನೆಗಳಿಗೆ ಉತ್ರ ತಿಳಿಯಲಿದ್ದೇವೆ. ಜೊತೆಗೆ ಯೆಹೋವ ತೋರಿಸಿರೋ ಪ್ರೀತಿ, ವಿವೇಕ, ತಾಳ್ಮೆಗೆ ನಾವು ಹೇಗೆ ಕೃತಜ್ಞರಾಗಿರಬೇಕು ಅನ್ನೋದನ್ನೂ ಕಲಿಯಲಿದ್ದೇವೆ.
^ ಪ್ಯಾರ. 59 ಚಿತ್ರ ವಿವರಣೆ: ನೂರಾರು ವರ್ಷಗಳ ಹಿಂದೆ ತೀರಿಹೋದ ಅಮೆರಿಕದ ಆದಿವಾಸಿಯೊಬ್ಬ ಹೊಸಲೋಕದಲ್ಲಿ ಪುನರುತ್ಥಾನವಾಗಿ ಬಂದಿದ್ದಾನೆ. ಅರ್ಮಗೆದ್ದೋನ್ ಪಾರಾಗಿರುವ ಒಬ್ಬ ಸಹೋದರ ಅವ್ನಿಗೆ ವಿಮೋಚನಾ ಮೌಲ್ಯದಿಂದ ಪ್ರಯೋಜ್ನ ಪಡ್ಕೊಳ್ಳಬೇಕಾದ್ರೆ ಏನು ಮಾಡಬೇಕು ಅನ್ನೋದನ್ನ ಕಲಿಸ್ತಿದ್ದಾನೆ.
^ ಪ್ಯಾರ. 61 ಚಿತ್ರ ವಿವರಣೆ: ಸಹೋದರ ತನ್ನ ಬಾಸ್ಗೆ ವಾರದ ಕೆಲ್ವು ದಿನ ತನಗೆ ಓವರ್ ಟೈಮ್ ಮಾಡೋಕೆ ಆಗಲ್ಲ ಅಂತ ಹೇಳ್ತಿದ್ದಾನೆ. ಆ ದಿನಗಳಲ್ಲಿ ಕುಟುಂಬ ಆರಾಧನೆ, ಮೀಟಿಂಗ್, ಸೇವೆ ಇರುತ್ತೆ ಆದ್ರೆ ಬೇರೆ ದಿನಗಳಲ್ಲಿ ಅರ್ಜೆಂಟಿದ್ರೆ ಓವರ್ ಟೈಮ್ ಮಾಡ್ತೀನಿ ಅಂತ ಹೇಳ್ತಿದ್ದಾನೆ.