ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 32

ಯುವಜನರೇ, ದೀಕ್ಷಾಸ್ನಾನ ಆದಮೇಲೂ ಆಧ್ಯಾತ್ಮಿಕವಾಗಿ ಬೆಳಿತಾ ಇರಿ

ಯುವಜನರೇ, ದೀಕ್ಷಾಸ್ನಾನ ಆದಮೇಲೂ ಆಧ್ಯಾತ್ಮಿಕವಾಗಿ ಬೆಳಿತಾ ಇರಿ

“ಎಲ್ಲ ವಿಷ್ಯಗಳಲ್ಲೂ ಪ್ರೀತಿಯಿಂದ ಬೆಳೀತಾ ಹೋಗೋಣ.”—ಎಫೆ. 4:15.

ಗೀತೆ 64 ಸತ್ಯವನ್ನು ನಿನ್ನದ್ದಾಗಿಸಿಕೊ

ಕಿರುನೋಟ a

1. ಇವತ್ತು ಯುವಜನರು ಏನೆಲ್ಲಾ ಮಾಡಿದ್ದಾರೆ?

 ಪ್ರತೀ ವರ್ಷ ಸಾವಿರಾರು ಯುವಜನರು ದೀಕ್ಷಾಸ್ನಾನ ತಗೊಳ್ತಿದ್ದಾರೆ. ಅವರಲ್ಲಿ ನೀವೂ ಒಬ್ಬರಾಗಿರಬಹುದು. ನಿಮ್ಮನ್ನ ನೋಡಿದಾಗ ನಮ್ಮೆಲ್ಲರಿಗೂ ತುಂಬ ಖುಷಿಯಾಗುತ್ತೆ, ಯೆಹೋವನಿಗೂ ಖುಷಿಯಾಗುತ್ತೆ! (ಜ್ಞಾನೋ. 27:11) ಇಲ್ಲಿವರೆಗೂ ನೀವು ಏನೆಲ್ಲ ಮಾಡಿದ್ದೀರ ಅಂತ ಸ್ವಲ್ಪ ನೆನಪಿಸಿಕೊಳ್ಳಿ. ನೀವು ತುಂಬ ಸಮಯ ತಗೊಂಡು ಬೈಬಲ್‌ನ ಓದಿ ಚೆನ್ನಾಗಿ ಅರ್ಥ ಮಾಡಿಕೊಂಡ್ರಿ. ಬೈಬಲ್‌ನ ಓದ್ತಾ ಓದ್ತಾ ಇದನ್ನ ದೇವರೇ ಬರೆಸಿರೋದು ಅಂತ ನಿಮಗೆ ಗೊತ್ತಾಯ್ತು, ಈ ಪವಿತ್ರ ಪುಸ್ತಕನ ಬರೆಸಿದ ಯೆಹೋವನ ಮೇಲೆ ನೀವು ಪ್ರೀತಿ ಬೆಳೆಸಿಕೊಂಡ್ರಿ. ನಿಮ್ಮನ್ನೇ ಆತನಿಗೆ ಸಮರ್ಪಿಸಿಕೊಂಡು ಆತನ ಸೇವೆ ಮಾಡೋಕೆ ದೀಕ್ಷಾಸ್ನಾನ ತಗೊಂಡ್ರಿ. ನೀವು ನಿಮ್ಮ ಜೀವನದಲ್ಲಿ ಸರಿಯಾದ ನಿರ್ಧಾರನೇ ತೆಗೆದುಕೊಂಡಿದ್ದೀರಿ!

2. ಈ ಲೇಖನದಲ್ಲಿ ನಾವೇನು ಕಲಿತೀವಿ?

 2 ನೀವು ದೀಕ್ಷಾಸ್ನಾನ ತಗೊಳ್ಳೋಕೂ ಮುಂಚೆ ನಿಮಗೆ ಕೆಲವು ಸಮಸ್ಯೆಗಳು ಬಂದಿರಬಹುದು. ಇದ್ರಿಂದ ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ನಿಮಗೆ ಕಷ್ಟ ಆಗಿರಬಹುದು. ಆದ್ರೆ ನೀವು ದೊಡ್ಡವರಾಗ್ತಾ ಹೋದ ಹಾಗೆ ಇನ್ನೂ ಬೇರೆಬೇರೆ ತರದ ಪರೀಕ್ಷೆಗಳು ಬರುತ್ತೆ. ಯೆಹೋವ ದೇವರ ಮೇಲಿರೋ ನಿಮ್ಮ ಪ್ರೀತಿನ ಕಡಿಮೆ ಮಾಡೋಕೆ ಸೈತಾನ ಪ್ರಯತ್ನ ಮಾಡ್ತಾನೆ. ನಿಮ್ಮನ್ನ ಆತನಿಂದ ದೂರ ಮಾಡೋಕೆ ಕಾಯ್ತಾ ಇರ್ತಾನೆ. (ಎಫೆ. 4:14) ಆದ್ರೆ ಹಾಗೆ ಆಗೋಕೆ ನೀವು ಬಿಡಬಾರದು. ಏನೇ ಕಷ್ಟ ಬಂದ್ರೂ ಯೆಹೋವನನ್ನು ಬಿಟ್ಟು ಹೋಗದೆ ಇರೋಕೆ ಮತ್ತು ನೀವು ಆತನಿಗೆ ಕೊಟ್ಟಿರೋ ಮಾತನ್ನ ಉಳಿಸಿಕೊಳ್ಳೋಕೆ ಏನು ಮಾಡಬೇಕು? “ಪ್ರೌಢರಾಗೋಕೆ ಪ್ರಗತಿ ಮಾಡ್ತಾ” ಇರಬೇಕು. (ಇಬ್ರಿ. 6:1) ಅದನ್ನ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೊಡೋಣ.

ಪ್ರೌಢ ಕ್ರೈಸ್ತರಾಗೋಕೆ ನೀವೇನು ಮಾಡಬೇಕು?

3. ಕ್ರೈಸ್ತರು ದೀಕ್ಷಾಸ್ನಾನ ಆದ್ಮೇಲೆ ಏನು ಮಾಡಬೇಕು?

3 ಅಪೊಸ್ತಲ ಪೌಲ ಎಫೆಸದ ಕ್ರೈಸ್ತರಿಗೆ ಏನು ಹೇಳಿದನೋ ಅದನ್ನ ನಾವು ದೀಕ್ಷಾಸ್ನಾನ ಆದ್ಮೇಲೆ ಮಾಡಬೇಕು. ಪೌಲ ಅವರಿಗೆ “ಪೂರ್ತಿ ಬೆಳೆದಿರೋ” ಕ್ರೈಸ್ತರಾಗೋಕೆ ಅಂದ್ರೆ ಪ್ರೌಢರಾಗೋಕೆ ಹೇಳಿದ. (ಎಫೆ. 4:13, ಪಾದಟಿಪ್ಪಣಿ) ಪೌಲ ಇಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನ ಒಂದು ಮಗುವಿನ ಬೆಳವಣಿಗೆಗೆ ಹೋಲಿಸ್ತಿದ್ದಾನೆ. ಅಪ್ಪ ಅಮ್ಮನಿಗೆ ಅವರ ಮಗು ಅಂದ್ರೆ ತುಂಬ ಇಷ್ಟ ಇರುತ್ತೆ. ಹಾಗಂತ ಆ ಮಗು, ಜೀವನ ಪೂರ್ತಿ ಮಗು ತರ ಇರೋಕಾಗಲ್ಲ. ಬೆಳಿತಾ ಬೆಳಿತಾ ಅದು “ಮಗು ತರ” ನಡಕೊಳ್ಳೋದನ್ನ ಬಿಟ್ಟುಬಿಡಬೇಕು. (1 ಕೊರಿಂ. 13:11) ಅದೇ ತರ ಕ್ರೈಸ್ತರು ದೀಕ್ಷಾಸ್ನಾನ ಆದ್ಮೇಲೆ ಪ್ರಗತಿ ಮಾಡೋದನ್ನ ಮುಂದುವರಿಸಬೇಕು. ಆ ತರ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ ಅಂತ ಈಗ ನೊಡೋಣ.

4. ನಾವು ಆಧ್ಯಾತ್ಮಿಕವಾಗಿ ಬೆಳೆಯೋಕೆ ಏನು ಮಾಡಬೇಕು? ವಿವರಿಸಿ. (ಫಿಲಿಪ್ಪಿ 1:9)

4 ಯೆಹೋವ ದೇವರ ಮೇಲೆ ನಿಮಗಿರೋ ಪ್ರೀತಿನ ಇನ್ನೂ ಜಾಸ್ತಿ ಮಾಡಿಕೊಳ್ಳಿ. ಈಗಾಗಲೇ ನೀವು ಯೆಹೋವನನ್ನು ಪ್ರೀತಿಸ್ತಿದ್ದೀರ. ಆದ್ರೆ ಆ ಪ್ರೀತಿನ ಇನ್ನೂ ಜಾಸ್ತಿ ಮಾಡಿಕೊಳ್ಳಬೇಕು. ಅಪೊಸ್ತಲ ಪೌಲ ಫಿಲಿಪ್ಪಿ ಸಭೆಯವರಿಗೆ ಯೆಹೋವನ ಮೇಲಿರೋ “ನಿಮ್ಮ ಪ್ರೀತಿ ಇನ್ನೂ ಜಾಸ್ತಿಯಾಗಲಿ” ಅಂತ ಹೇಳಿದ. ಅದನ್ನ ಹೇಗೆ ಮಾಡೋದು ಅಂತ ಫಿಲಿಪ್ಪಿ 1:9ರಲ್ಲಿ ಹೇಳಿದ್ದಾನೆ. (ಓದಿ.) ಯೆಹೋವನ ಮೇಲಿರೋ ಪ್ರೀತಿ ಜಾಸ್ತಿಯಾಗಬೇಕಾದ್ರೆ “ಸರಿಯಾದ ಜ್ಞಾನ, ಪೂರ್ತಿ ತಿಳುವಳಿಕೆ” ಬೇಕು ಅಂತ ಅವನು ಹೇಳಿದ. ನಾವು ಯೆಹೋವನ ಬಗ್ಗೆ ಎಷ್ಟು ತಿಳಿದುಕೊಳ್ತೀವೋ ಅಷ್ಟು ಆತನ ಮೇಲಿರೋ ನಮ್ಮ ಪ್ರೀತಿ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ, ಆತನು ನಮ್ಮ ಜೊತೆ ನಡೆದುಕೊಳ್ಳೋ ರೀತಿಯನ್ನ, ಆತನ ಗುಣಗಳನ್ನ ತಿಳಿದುಕೊಳ್ತೀವಿ. ಇದ್ರಿಂದ ಆತನಿಗೆ ಇಷ್ಟ ಆಗೋ ತರ ನಡೆದುಕೊಳ್ಳಬೇಕು ಅನ್ನೋ ನಮ್ಮ ಆಸೆ ಜಾಸ್ತಿಯಾಗುತ್ತೆ ಮತ್ತು ಆತನ ಮನಸ್ಸಿಗೆ ನೋವಾಗೋ ಯಾವ ವಿಷಯವನ್ನೂ ನಾವು ಮಾಡಲ್ಲ. ಅಷ್ಟೇ ಅಲ್ಲ, ನಾವೇನು ಮಾಡಬೇಕು ಅಂತ ಆತನು ಇಷ್ಟಪಡ್ತಾನೆ ಮತ್ತು ಅದನ್ನ ಮಾಡೋದು ಹೇಗೆ ಅಂತ ತಿಳುಕೊಳ್ಳೋಕೆ ಪ್ರಯತ್ನ ಮಾಡ್ತೀವಿ.

5-6. ಯೆಹೋವನ ಮೇಲೆ ಇನ್ನೂ ಜಾಸ್ತಿ ಪ್ರೀತಿ ಬೆಳೆಸಿಕೊಳ್ಳೋಕೆ ನಾವೇನು ಮಾಡಬೇಕು? ವಿವರಿಸಿ.

5 ಯೇಸು, ಯೆಹೋವ ದೇವರ ತರನೇ ನಡೆದುಕೊಳ್ತಿದ್ದನು. ಹಾಗಾಗಿ ನಾವು ಯೇಸು ಬಗ್ಗೆ ಚೆನ್ನಾಗಿ ತಿಳುಕೊಂಡ್ರೆ ಯೆಹೋವನನ್ನು ಪ್ರೀತಿಸೋಕೆ ಇನ್ನೂ ಸುಲಭ ಆಗುತ್ತೆ. (ಇಬ್ರಿ. 1:3) ಯೇಸು ಬಗ್ಗೆ ತಿಳುಕೊಳ್ಳೋಕೆ 4 ಸುವಾರ್ತಾ ಪುಸ್ತಕಗಳು ಸಹಾಯ ಮಾಡುತ್ತೆ. ನೀವು ಬೈಬಲ್‌ ಓದೋ ರೂಢಿನ ಇನ್ನೂ ಬೆಳೆಸಿಕೊಂಡಿಲ್ಲಾಂದ್ರೆ ಈಗಿಂದಾನೇ ಶುರು ಮಾಡಿ. ಯೇಸು ಬಗ್ಗೆ ಓದುವಾಗ ಆತನಲ್ಲಿರೋ ಗುಣಗಳನ್ನ ಒಂದು ಕಡೆ ಬರೀತಾ ಹೋಗಿ. ಜನ್ರು ಯಾವಾಗ್ಲೂ ಆತನ ಜೊತೆ ಇರೋಕೆ ಇಷ್ಟಪಡ್ತಿದ್ರು. ಆತನ ಜೊತೆ ಮಾತಾಡೋಕೆ ಆತನ ಶಿಷ್ಯರು ಹೆದರಿಕೊಳ್ತಿರಲಿಲ್ಲ. ಅವರ ಮನಸ್ಸಲ್ಲಿ ಇರೋದನ್ನೆಲ್ಲ ಹೇಳಿಕೊಳ್ತಿದ್ರು. (ಮತ್ತಾ. 16:22) ಅಷ್ಟೇ ಅಲ್ಲ, ಯೇಸುಗೆ ಚಿಕ್ಕ ಮಕ್ಕಳಂದ್ರೆ ತುಂಬ ಇಷ್ಟ. ಆತನು ಅವರನ್ನ ಎತ್ತಿಕೊಳ್ತಿದ್ದನು, ಪ್ರೀತಿಯಿಂದ ಮಾತಾಡಿಸ್ತಿದ್ದನು. (ಮಾರ್ಕ 10:13-16) ಯೆಹೋವ ದೇವರು ಕೂಡ ಹಾಗೆನೇ. ನಾವು ಯಾವಾಗ ಬೇಕಾದ್ರೂ ಎಷ್ಟು ಹೊತ್ತು ಬೇಕಾದ್ರೂ ಆತನ ಹತ್ರ ಮಾತಾಡಬಹುದು. ಆತನಿಗೆ ಪ್ರಾರ್ಥನೆ ಮಾಡಬಹುದು, ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಹೇಳಿಕೊಳ್ಳಬಹುದು. ಆತನು ನಮ್ಮ ಮೇಲೆ ಬೇಜಾರು ಮಾಡಿಕೊಳ್ಳಲ್ಲ. ನಮ್ಮನ್ನ ತುಂಬ ಪ್ರೀತಿಸ್ತಾನೆ, ನಮಗೆ ಸಹಾಯ ಮಾಡ್ತಾನೆ.—1 ಪೇತ್ರ 5:7.

6 ಯೇಸುಗೆ ಜನರ ಮೇಲೆ ಅನುಕಂಪ ಇತ್ತು. “ಆತನು ಜನ್ರ ಗುಂಪನ್ನ ನೋಡಿದಾಗ ತುಂಬ ಕನಿಕರಪಟ್ಟನು. ಯಾಕಂದ್ರೆ ಅವರು ಕುರುಬನಿಲ್ಲದ ಕುರಿಗಳ ತರ ಇದ್ರು” ಅಂತ ಅಪೊಸ್ತಲ ಮತ್ತಾಯ ಬರೆದ. (ಮತ್ತಾ. 9:36) ಯೆಹೋವನಿಗೂ ಹೀಗೇ ಅನಿಸುತ್ತೆ. “ಚಿಕ್ಕ ಮಕ್ಕಳ ತರ ಇರೋ ಒಬ್ಬನೂ ನಾಶ ಆಗೋದು ಸ್ವರ್ಗದಲ್ಲಿರೋ ನನ್ನ ಅಪ್ಪನಿಗೆ ಇಷ್ಟ ಇಲ್ಲ” ಅಂತ ಯೇಸು ಹೇಳಿದನು. (ಮತ್ತಾ. 18:14) ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಗೊತ್ತಾದಾಗ ನಮಗೆ ತುಂಬ ಖುಷಿಯಾಗುತ್ತೆ. ಯೇಸು ಬಗ್ಗೆ ಜಾಸ್ತಿ ಕಲಿತಾ ಹೋದ ಹಾಗೆ ಯೆಹೋವನ ಮೇಲಿರೋ ನಮ್ಮ ಪ್ರೀತಿನೂ ಜಾಸ್ತಿಯಾಗುತ್ತೆ.

7. ಪ್ರೌಢ ಕ್ರೈಸ್ತರ ಜೊತೆ ಸಮಯ ಕಳೆಯೋದ್ರಿಂದ ಏನು ಪ್ರಯೋಜನ?

7 ನೀವಿನ್ನೂ ಯೆಹೋವನ ಮೇಲೆ ಜಾಸ್ತಿ ಪ್ರೀತಿ ಬೆಳೆಸಿಕೊಳ್ಳೋಕೆ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿ ಮಾಡೋಕೆ ನಿಮ್ಮ ಸಭೆಯಲ್ಲಿರೋ ಪ್ರೌಢ ಕ್ರೈಸ್ತರ ಜೊತೆ ಸಮಯ ಕಳೆಯಿರಿ. ಖುಷಿಖುಷಿಯಾಗಿ ಸೇವೆ ಮಾಡೋಕೆ ಯೆಹೋವ ಅವರಿಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಮತ್ತು ಅವರಿಗೆ ಯಾವೆಲ್ಲ ಅನುಭವಗಳು ಸಿಕ್ಕಿದೆ ಅಂತ ಕೇಳಿ ತಿಳಿದುಕೊಳ್ಳಿ. ನಿಮ್ಮ ಜೀವನದಲ್ಲಿ ದೊಡ್ಡ ನಿರ್ಧಾರಗಳನ್ನ ಮಾಡೋ ಮುಂಚೆ ಅವರ ಹತ್ರ ಸಲಹೆ ಕೇಳಿ. ಯಾಕಂದ್ರೆ “ತುಂಬ ಸಲಹೆಗಾರರು ಇದ್ರೆ ಯಶಸ್ಸು ಖಂಡಿತ” ಅಂತ ದೇವರ ವಾಕ್ಯ ಹೇಳುತ್ತೆ.—ಜ್ಞಾನೋ. 11:14.

ಶಾಲೆಯಲ್ಲಿ ವಿಕಾಸವಾದ ತಪ್ಪು ಅಂತ ಸಾಬೀತು ಮಾಡೋಕೆ ನೀವು ತಯಾರಾಗಿದ್ದೀರಾ? (ಪ್ಯಾರ 8-9 ನೋಡಿ)

8. ಬೈಬಲ್‌ ಕಲಿಸೋ ವಿಷಯಗಳ ಬಗ್ಗೆ ನಿಮಗೇನಾದ್ರೂ ಸಂಶಯಗಳಿದ್ರೆ ನೀವೇನು ಮಾಡಬೇಕು?

8 ಸಂಶಯ ಅನ್ನೋ ವಿಷದ ಬೀಜನ ತೆಗೆದುಹಾಕಿ.  ಪ್ಯಾರ 2ರಲ್ಲಿ ನೋಡಿದ ಹಾಗೆ ಸೈತಾನ, ಯೆಹೋವ ದೇವರ ಮೇಲೆ ನಮಗಿರೋ ನಂಬಿಕೆನ ಕಮ್ಮಿ ಮಾಡೋಕೆ ಮತ್ತು ಆತನಿಂದ ನಮ್ಮನ್ನ ದೂರ ಮಾಡೋಕೆ ಕಾಯ್ತಾ ಇದ್ದಾನೆ. ಅವನು ಇದನ್ನ ಮಾಡೋ ಒಂದು ವಿಧ, ಬೈಬಲ್‌ ಕಲಿಸೋ ವಿಷಯಗಳನ್ನ ಸುಳ್ಳು ಅಂತ ನಾವು ನಂಬೋ ಹಾಗೆ ಮಾಡೋದು. ಅದಕ್ಕೆ ಒಂದು ಉದಾಹರಣೆ ವಿಕಾಸವಾದ. ನೀವು ಚಿಕ್ಕವರಿದ್ದಾಗ ಇದರ ಬಗ್ಗೆ ಯೋಚನೆನೇ ಮಾಡಿರಲ್ಲ. ಆದ್ರೆ ನೀವು ದೊಡ್ಡವರಾದಾಗ ಸ್ಕೂಲಲ್ಲಿ ವಿಕಾಸವಾದದ ಬಗ್ಗೆ ನಿಮ್ಮ ಟೀಚರ್‌ ಕಲಿಸಬಹುದು. ಆಗ ಅದೇ ನಿಜ ಅಂತ ನಿಮಗೆ ಅನಿಸಬಹುದು. ಆದ್ರೆ ಆ ರೀತಿ ಕಲಿಸುವವರು ಒಬ್ಬ ಸೃಷ್ಟಿಕರ್ತ ಇದ್ದಾನೆ ಅನ್ನೋಕೆ ಆಧಾರಗಳನ್ನ ಹುಡುಕೋ ಪ್ರಯತ್ನನೂ ಮಾಡಿರಲ್ಲ. ಅದಕ್ಕೇ ತಾವು ಹೇಳೋದೇ ಸರಿ ಅಂತ ಅವರು ಅಂದುಕೊಳ್ತಾರೆ. ಇದರ ಬಗ್ಗೆ ಜ್ಞಾನೋಕ್ತಿ 18:17ರಲ್ಲಿ ಹೀಗೆ ಹೇಳುತ್ತೆ: “ಮೊದ್ಲು ಮಾತಾಡುವವನೇ ಸರಿ ಅಂತ ಅನಿಸುತ್ತೆ, ಆದ್ರೆ ಪ್ರತಿವಾದಿ ಎದ್ದು ಪ್ರಶ್ನೆ ಮಾಡಿದಾಗ ನಿಜ ಗೊತ್ತಾಗುತ್ತೆ.” ಹಾಗಾಗಿ ನೀವು ಅವರು ಹೇಳೋದನ್ನ ಕಣ್ಣು ಮುಚ್ಚಿಕೊಂಡು ನಂಬಬೇಡಿ. ಅದರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ಹುಡುಕಿ ನೋಡಿ, ನಮ್ಮ ಪತ್ರಿಕೆಗಳಲ್ಲಿ ಇದರ ಬಗ್ಗೆ ಸಂಶೋಧನೆ ಮಾಡಿ. ಈ ಹಿಂದೆ ವಿಕಾಸವಾದವನ್ನ ನಂಬುತ್ತಿದ್ದ ಸಹೋದರ ಸಹೋದರಿಯರ ಹತ್ರ ಮಾತಾಡಿ. ಆದ್ರೆ ಈಗ ತಮ್ಮನ್ನ ಪ್ರೀತಿಸೋ ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ಅವರು ಯಾಕೆ ನಂಬ್ತಾರೆ ಅಂತ ಕೇಳಿ ತಿಳುಕೊಳ್ಳಿ. ಈ ತರ ಮಾಡಿದಾಗ ನಿಜ ಏನು ಅಂತ ನಿಮಗೇ ಗೊತ್ತಾಗುತ್ತೆ.

9. ಸಹೋದರಿ ಮೆಲಿಸಾ ಅವರಿಂದ ನೀವೇನು ಕಲಿತ್ರಿ?

9 ಸಹೋದರಿ ಮೆಲಿಸಾ ಸೃಷ್ಟಿ ಬಗ್ಗೆ ಸಂಶೋಧನೆ ಮಾಡಿದಾಗ ಅವರಿಗಿದ್ದ ಪ್ರಶ್ನೆಗಳಿಗೆ ಉತ್ರ ಸಿಕ್ತು. b “ನಮ್ಮ ಸ್ಕೂಲಲ್ಲಿ ವಿಕಾಸವಾದದ ಬಗ್ಗೆ ಹೇಳಿಕೊಡ್ತಿದ್ರು. ಇದನ್ನ ಕೇಳಿದಾಗ ಅವರು ಹೇಳ್ತಿರೋದೆಲ್ಲ ನಿಜ ಇರಬಹುದು ಅಂತ ನನಗೆ ಅನಿಸ್ತು. ಆದ್ರೆ ನಾನು ಇದರ ಬಗ್ಗೆ ಸಂಶೋಧನೆ ಮಾಡೋಕೆ ಹಿಂದೇಟು ಹಾಕ್ತಿದ್ದೆ. ಯಾಕಂದ್ರೆ ಹೀಗೆ ಮಾಡಿದ್ರೆ ವಿಕಾಸವಾದನೇ ನಿಜ ಅಂತ ನನಗೆ ಅನಿಸಿಬಿಡಬಹುದು ಅಂತ ಅಂದುಕೊಳ್ತಿದ್ದೆ. ಆದ್ರೆ ನಾವು ಎಲ್ಲಾನೂ ಕಣ್ಮುಚ್ಚಿ ನಂಬಬೇಕು ಅಂತ ಯೆಹೋವ ಯಾವತ್ತೂ ಹೇಳಲ್ಲ. ಅದಕ್ಕೆ ನಾನು ಸಂಶೋಧನೆ ಮಾಡೋಕೆ ಶುರು ಮಾಡಿದೆ. ನಿಮ್ಮ ಬಗ್ಗೆ ಚಿಂತಿಸುವ ಒಬ್ಬ ಸೃಷ್ಟಿಕರ್ತ ಇದ್ದಾನಾ? (ಇಂಗ್ಲಿಷ್‌) ಅನ್ನೋ ಪುಸ್ತಕ ಓದಿದೆ. ಜೀವ ಸೃಷ್ಟಿಯಾಯಿತಾ? ಮತ್ತು ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ (ಇಂಗ್ಲಿಷ್‌) ಅನ್ನೋ ಕಿರುಹೊತ್ತಗೆಗಳನ್ನೂ ಓದಿದೆ. ಆಗ ನನಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ತು. ಈ ಕೆಲಸನ ನಾನು ಮೊದಲೇ ಮಾಡಿದ್ರೆ ಚೆನ್ನಾಗಿರುತ್ತಿತ್ತು” ಅಂತ ಮೆಲಿಸಾ ಹೇಳ್ತಾರೆ.

10-11. ನೈತಿಕವಾಗಿ ಶುದ್ಧರಾಗಿರೋಕೆ ನೀವೇನು ಮಾಡಬೇಕು? (1 ಥೆಸಲೊನೀಕ 4:3, 4)

10 ಲೈಂಗಿಕ ಅನೈತಿಕತೆಯಿಂದ ದೂರ ಇರಿ. ಯೌವನದಲ್ಲಿ ಲೈಂಗಿಕ ಆಸೆಗಳು ಜಾಸ್ತಿ ಇರುತ್ತೆ. ಆ ವಯಸ್ಸಲ್ಲಿರೋ ಕೆಲವು ಯುವಜನ್ರು ಮದುವೆಗೆ ಮುಂಚೆನೇ ಆ ಆಸೆಗಳನ್ನ ಪೂರೈಸಿಕೊಳ್ಳೋದ್ರಲ್ಲಿ ತಪ್ಪಿಲ್ಲ ಅಂತ ಹೇಳ್ತಾರೆ. ಆಗ ಅಂಥ ಆಸೆಗಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳೋಕೆ ನಿಮಗೆ ಕಷ್ಟ ಆಗಬಹುದು. ಆದ್ರೆ ನೀವು ನೈತಿಕವಾಗಿ ಶುದ್ಧರಾಗಿರೋಕೆ ಏನು ಮಾಡಬೇಕು? (1 ಥೆಸಲೊನೀಕ 4:3, 4 ಓದಿ.) ಪ್ರಾರ್ಥನೆ ಮಾಡಬೇಕು. ಯೆಹೋವ ದೇವರ ಹತ್ರ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಹೇಳಿಕೊಳ್ಳಿ. ಅಂಥ ಆಸೆಗಳಿಗೆ ಬಲಿ ಬೀಳದೆ ಇರೋಕೆ ನನಗೆ ಬಲ ಕೊಡಪ್ಪಾ, ಶಕ್ತಿ ಕೊಡಪ್ಪಾ ಅಂತ ಬೇಡಿಕೊಳ್ಳಿ. (ಮತ್ತಾ. 6:13) ಹೀಗೆ ಬೇಡಿಕೊಂಡಾಗ ಯೆಹೋವ ನಿಮ್ಮ ಬಗ್ಗೆ ತಪ್ಪು ತಿಳುಕೊಳ್ಳಲ್ಲ ಅಥವಾ ಶಿಕ್ಷೆ ಕೊಡಲ್ಲ, ನಿಮಗೆ ಸಹಾಯ ಮಾಡೋಕೆ ತುಂಬ ಇಷ್ಟಪಡ್ತಾನೆ. (ಕೀರ್ತ. 103:13, 14) ಅಷ್ಟೇ ಅಲ್ಲ, ಅಂಥ ಸಮಯದಲ್ಲಿ ಬೈಬಲ್‌ ಓದೋದ್ರಿಂದನೂ ನಿಮಗೆ ಸಹಾಯ ಸಿಗುತ್ತೆ. ಸಹೋದರಿ ಮೆಲಿಸಾಗೂ ಈ ರೀತಿ ತಪ್ಪಾದ ಯೋಚನೆಗಳು ಬರ್ತಿತ್ತು. ಆಗ ಅವರು ಏನು ಮಾಡ್ತಿದ್ರು ಅಂತ ಅವರ ಮಾತಲ್ಲೇ ಕೇಳಿ. “ನಾನು ಪ್ರತೀ ದಿನ ಬೈಬಲ್‌ ಓದ್ತಾ ಇದ್ದೆ. ಇದ್ರಿಂದ ‘ನಾನು ನನ್ನನ್ನ ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀನಿ. ಹಾಗಾಗಿ ಆತನಿಗೆ ಏನು ಇಷ್ಟನೋ ಅದನ್ನೇ ಮಾಡಬೇಕು’ ಅಂತ ನನಗೆ ನೆನಪಾಗುತ್ತಿತ್ತು.”—ಕೀರ್ತ. 119:9.

11 ಈ ತರ ಸಮಸ್ಯೆಗಳು ಬಂದಾಗ ನಿಮಗೆ ಏನು ಅನಿಸುತ್ತೋ ಅದನ್ನ ಮಾಡೋಕೆ ಹೋಗಬೇಡಿ. ಇದರ ಬಗ್ಗೆ ನಿಮ್ಮ ಅಪ್ಪ ಅಮ್ಮ ಹತ್ರ ಮಾತಾಡಿ. ‘ಈ ವಿಷಯದ ಬಗ್ಗೆ ಅವರ ಹತ್ರ ಹೇಗೆ ಮಾತಾಡೋದು?’ ಅಂತ ನಿಮಗೆ ಅನಿಸಬಹುದು. ಆದ್ರೂ ನೀವು ಮಾತಾಡಲೇಬೇಕು. ಮೆಲಿಸಾನೂ ಇದನ್ನೇ ಮಾಡಿದಳು. “ನಾನು ಮೊದಲು ಧೈರ್ಯಕ್ಕೋಸ್ಕರ ಯೆಹೋವನಿಗೆ ಪ್ರಾರ್ಥಿಸಿದೆ. ಆಮೇಲೆ ಅಪ್ಪನ ಹತ್ರ ಮಾತಾಡಿದೆ. ಆಗ ನನ್ನ ಮನಸ್ಸಲ್ಲಿದ್ದ ದೊಡ್ಡ ಭಾರ ಇಳಿದ ಹಾಗಾಯ್ತು. ನಾನು ಹೀಗೆ ಮಾಡಿದ್ರಿಂದ ಯೆಹೋವ ದೇವರಿಗೆ ತುಂಬ ಖುಷಿಯಾಗಿರುತ್ತೆ ಅನ್ನೋ ನಂಬಿಕೆನೂ ನನಗಿದೆ.”

12. ನೀವು ಹೇಗೆ ಒಳ್ಳೇ ನಿರ್ಣಯಗಳನ್ನ ಮಾಡಬಹುದು?

12 ಬೈಬಲ್‌ ತತ್ವಗಳನ್ನ ಹುಡುಕಿ. ನೀವು ದೊಡ್ಡವರಾಗ್ತಾ ಹೋದ ಹಾಗೆ ಕೆಲವು ನಿರ್ಧಾರಗಳನ್ನ ನೀವೇ ಮಾಡಬೇಕಾಗಬಹುದು. ಆದ್ರೆ ನಿಮಗೆ ಜೀವನದಲ್ಲಿ ಅನುಭವ ಇಲ್ಲ ಅನ್ನೋದನ್ನ ಮರೆಯಬೇಡಿ. ಯಾಕಂದ್ರೆ ತಪ್ಪು ನಿರ್ಧಾರಗಳನ್ನ ಮಾಡಿದ್ರೆ ಯೆಹೋವನ ಜೊತೆಗಿರೋ ನಿಮ್ಮ ಸಂಬಂಧ ಹಾಳಾಗುತ್ತೆ. ಹಾಗಾಗಬಾರದು ಅಂದ್ರೆ ನೀವೇನು ಮಾಡಬೇಕು? (ಜ್ಞಾನೋ. 22:3) ಸರಿಯಾದ ನಿರ್ಧಾರಗಳನ್ನ ಮಾಡೋಕೆ ಸಹೋದರಿ ಕೇರೆನ್‌ಗೆ ಯಾವುದು ಸಹಾಯ ಮಾಡ್ತು ಅಂತ ಅವರು ಹೇಳ್ತಾರೆ. “ನಾನು ಒಂದು ತೀರ್ಮಾನ ತಗೊಳ್ಳೋ ಮುಂಚೆ ಅದರ ಬಗ್ಗೆ ಬೈಬಲಲ್ಲಿ ನೇರವಾದ ನಿಯಮ ಇದೆಯಾ ಅಂತ ಹುಡುಕಲ್ಲ ಬದಲಿಗೆ ಅದರಲ್ಲಿರೋ ಮೂಲತತ್ವಗಳನ್ನ ಹೇಗೆ ಪಾಲಿಸೋದು ಅಂತ ಯೋಚನೆ ಮಾಡ್ತೀನಿ.” ನೀವು ಬೈಬಲ್‌ ಓದುವಾಗ ‘ಯೆಹೋವ ಹೇಗೆ ಯೋಚನೆ ಮಾಡ್ತಾನೆ? ನಾನು ಹೇಗೆ ನಡೆದುಕೊಳ್ಳಬೇಕು ಅಂತ ತಿಳಿಸೋ ತತ್ವಗಳು ಈ ಅಧ್ಯಾಯದಲ್ಲಿ ಇದೆಯಾ? ಇದನ್ನ ಅನ್ವಯಿಸಿಕೊಳ್ಳೋದ್ರಿಂದ ನನಗೇನು ಒಳ್ಳೇದಾಗುತ್ತೆ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. (ಕೀರ್ತ. 19:7; ಯೆಶಾ. 48:17, 18) ನಾವು ಬೈಬಲನ್ನ ಓದಿ ಅದರಲ್ಲಿರೋ ತತ್ವಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡಿದಾಗ ಯೆಹೋವನಿಗೆ ಇಷ್ಟ ಆಗೋ ತರ ನಿರ್ಧಾರಗಳನ್ನ ಮಾಡೋಕಾಗುತ್ತೆ.

ಒಬ್ಬ ಯುವ ಸಹೋದರಿ ಎಂಥ ಸ್ನೇಹಿತರನ್ನ ಮಾಡಿಕೊಂಡ್ರು? (ಪ್ಯಾರ 13 ನೋಡಿ)

13. ಒಳ್ಳೇ ಫ್ರೆಂಡ್ಸ್‌ ಹೇಗೆ ಸಹಾಯ ಮಾಡ್ತಾರೆ? (ಜ್ಞಾನೋಕ್ತಿ 13:20)

13 ಯೆಹೋವನನ್ನು ಪ್ರೀತಿಸುವವ್ರನ್ನ ಫ್ರೆಂಡ್ಸ್‌ ಮಾಡ್ಕೊಳ್ಳಿ. ನೀವು ಪ್ರೌಢರಾಗೋಕೆ ನಿಮ್ಮ ಸ್ನೇಹಿತರು ಸಹಾಯ ಮಾಡ್ತಾರೆ. (ಜ್ಞಾನೋಕ್ತಿ 13:20 ಓದಿ.) ಸಹೋದರಿ ಸಾರಾ ತಮ್ಮ ಜೀವನದಲ್ಲಿ ಕಳೆದುಕೊಂಡಿದ್ದ ಖುಷಿಯನ್ನ ಮತ್ತೆ ಹೇಗೆ ಪಡೆದುಕೊಂಡ್ರು ಅಂತ ಅವರ ಮಾತಲ್ಲೇ ಕೇಳಿ: “ನನಗೆ ಸರಿಯಾದ ಸಮಯಕ್ಕೆ ಒಳ್ಳೇ ಫ್ರೆಂಡ್ಸ್‌ ಸಿಕ್ಕಿದ್ರು. ಒಬ್ಬ ಯುವ ಸಹೋದರಿ ಜೊತೆ ಪ್ರತೀ ವಾರ ನಾನು ಕಾವಲಿನಬುರುಜು ತಯಾರಿ ಮಾಡ್ತಿದ್ದೆ. ಕೂಟಗಳಲ್ಲಿ ಉತ್ತರ ಹೇಳೋಕೆ ನನಗೆ ಇನ್ನೊಬ್ಬ ಫ್ರೆಂಡ್‌ ಸಹಾಯ ಮಾಡಿದ್ರು. ವೈಯಕ್ತಿಕ ಅಧ್ಯಯನ ಮತ್ತು ಪ್ರಾರ್ಥನೆ ಮಾಡೋದು ಎಷ್ಟು ಮುಖ್ಯ ಅಂತ ನಾನು ಇವರಿಂದ ಕಲಿತೆ. ಹೀಗೆ ಮಾಡಿದ್ರಿಂದ ಯೆಹೋವ ದೇವರ ಜೊತೆಗಿದ್ದ ನನ್ನ ಸಂಬಂಧ ಗಟ್ಟಿಯಾಯ್ತು, ಜೀವನದಲ್ಲಿ ಮತ್ತೆ ಖುಷಿ ಪಡ್ಕೊಂಡೆ.”

14. ಜೂಲಿಯನ್‌ ಹೇಗೆ ಒಳ್ಳೇ ಸ್ನೇಹಿತರನ್ನ ಮಾಡಿಕೊಂಡ್ರು?

14 ನಾವು ಹೇಗೆ ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಬಹುದು? ಈಗ ಹಿರಿಯರಾಗಿರೋ ಸಹೋದರ ಜೂಲಿಯನ್‌ ಏನು ಹೇಳ್ತಾರಂದ್ರೆ, “ನಾನು ಚಿಕ್ಕವನಾಗಿದ್ದಾಗ ನನ್ನ ಜೊತೆ ಸೇವೆ ಮಾಡೋಕೆ ಬರ್ತಿದ್ದ ಸಹೋದರ ಸಹೋದರಿಯರನ್ನ ಫ್ರೆಂಡ್ಸ್‌ ಮಾಡಿಕೊಂಡೆ. ಸೇವೆ ಮಾಡೋದ್ರಿಂದ ಎಷ್ಟು ಖುಷಿ ಸಿಗುತ್ತೆ ಮತ್ತೆ ಸೇವೆನ ಹುರುಪಿಂದ ಮಾಡೋದು ಹೇಗೆ ಅಂತ ಅವರು ನನಗೆ ಕಲಿಸಿಕೊಟ್ರು. ಇದ್ರಿಂದ ನಾನು ಪೂರ್ಣ ಸಮಯದ ಸೇವೆ ಮಾಡೋ ಗುರಿಯಿಟ್ಟೆ. ಮುಂಚೆ ನಾನು ಬರೀ ನನ್ನ ವಯಸ್ಸಿನವರನ್ನ ಮಾತ್ರ ಫ್ರೆಂಡ್ಸಾಗಿ ಮಾಡಿಕೊಳ್ತಿದ್ದೆ. ಆದ್ರೆ ನನಗಿಂತ ವಯಸ್ಸಲ್ಲಿ ದೊಡ್ಡವರನ್ನ ಫ್ರೆಂಡ್ಸ್‌ ಮಾಡಿಕೊಳ್ಳೋದ್ರಿಂದ ಎಷ್ಟೆಲ್ಲ ಉತ್ತೇಜನ ಮತ್ತು ಪ್ರಯೋಜನ ಸಿಗುತ್ತೆ ಅಂತ ಆಮೇಲೆ ನನಗೆ ಗೊತ್ತಾಯ್ತು. ಬೆತೆಲ್‌ನಲ್ಲೂ ನನಗೆ ಒಳ್ಳೇ ಫ್ರೆಂಡ್ಸ್‌ ಸಿಕ್ಕಿದ್ರು. ಇವರಿಂದ ನಾನು ಒಳ್ಳೇ ಮನರಂಜನೆಯನ್ನ ಆರಿಸಿಕೊಳ್ಳೋದು ಹೇಗೆ ಮತ್ತು ಯೆಹೋವನ ಜೊತೆಗಿರೋ ನನ್ನ ಸಂಬಂಧನ ಇನ್ನೂ ಗಟ್ಟಿ ಮಾಡಿಕೊಳ್ಳೋಕೆ ಏನು ಮಾಡಬೇಕು ಅಂತ ಕಲಿತುಕೊಂಡೆ.”

15. ಪೌಲ ತಿಮೊತಿಗೆ ಯಾವ ಎಚ್ಚರಿಕೆ ಕೊಟ್ಟ? (2 ತಿಮೊತಿ 2:20-22)

15 ಸಭೆಯಲ್ಲಿ ಯಾರ ಜೊತೆಗಾದರೂ ಸಹವಾಸ ಮಾಡೋದು ಒಳ್ಳೇದಲ್ಲ ಅಂತ ಅನಿಸಿದಾಗ ನೀವೇನು ಮಾಡ್ತೀರಾ? ಅವರಿಂದ ದೂರ ಇರಬೇಕು. ಇದನ್ನೇ ಪೌಲ ತಿಮೊತಿಗೂ ಹೇಳಿದ. ಯಾಕಂದ್ರೆ ಒಂದನೇ ಶತಮಾನದಲ್ಲೂ ಕೆಲವು ಕ್ರೈಸ್ತರು ಯೆಹೋವನ ಜೊತೆ ಒಳ್ಳೇ ಸಂಬಂಧ ಇಟ್ಟುಕೊಂಡಿರಲಿಲ್ಲ. (2 ತಿಮೊತಿ 2:20-22 ಓದಿ.) ಯೆಹೋವನ ಜೊತೆಗಿರೋ ಸ್ನೇಹ ನಮಗೆ ತುಂಬ ಅಮೂಲ್ಯ. ಇಷ್ಟು ವರ್ಷದಿಂದ ನಾವು ಉಳಿಸಿಕೊಂಡು ಬಂದಿರೋ ಈ ಸ್ನೇಹವನ್ನ ಯಾರೂ ಹಾಳುಮಾಡೋಕೆ ಬಿಟ್ಟು ಕೊಡಬಾರದು.—ಕೀರ್ತ. 26:4.

ಆಧ್ಯಾತ್ಮಿಕವಾಗಿ ಬೆಳೆಯೋಕೆ ಒಳ್ಳೇ ಗುರಿಗಳನ್ನ ಇಡಿ

16. ನೀವು ಎಂಥ ಗುರಿಗಳನ್ನ ಇಡಬೇಕು?

16 ಒಳ್ಳೇ ಗುರಿಗಳನ್ನ ಇಡಿ. ನಿಮ್ಮ ನಂಬಿಕೆನ ಜಾಸ್ತಿ ಮಾಡಿಕೊಳ್ಳೋಕೆ ಮತ್ತು ಪ್ರೌಢ ಕ್ರೈಸ್ತರಾಗೋಕೆ ಸಹಾಯ ಮಾಡೋ ಗುರಿಗಳನ್ನ ಇಡಿ. (ಎಫೆ. 3:16) ಉದಾಹರಣೆಗೆ, ಪ್ರತೀ ದಿನ ಬೈಬಲ್‌ ಓದಿ, ವೈಯಕ್ತಿಕ ಅಧ್ಯಯನ ಮಾಡಿ. (ಕೀರ್ತ. 1:2, 3) ಯೆಹೋವನಿಗೆ ಆಗಾಗ ಮತ್ತು ಮನಸಾರೆ ಪ್ರಾರ್ಥನೆ ಮಾಡಿ. ಒಳ್ಳೇ ಮನರಂಜನೆಯನ್ನ ಆಯ್ಕೆ ಮಾಡಿಕೊಳ್ಳಿ. ಆದ್ರೆ ಅದ್ರಲ್ಲೇ ಮುಳುಗಿ ಹೋಗಬೇಡಿ. (ಎಫೆ. 5:15, 16) ಇಂಥ ಗುರಿಗಳನ್ನ ಇಟ್ಟು ಅದನ್ನ ಮುಟ್ಟೋಕೆ ಪ್ರಯತ್ನ ಮಾಡುವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ.

ಈ ಯುವ ಸಹೋದರಿ ಯಾವ ಗುರಿಗಳನ್ನ ಇಟ್ರು? (ಪ್ಯಾರ 17 ನೋಡಿ)

17. ನಾವು ಯಾಕೆ ಬೇರೆಯವರಿಗೆ ಸಹಾಯ ಮಾಡಬೇಕು?

17 ನೀವು ಬೇರೆಯವರಿಗೆ ಸಹಾಯ ಮಾಡಿದಾಗ ಪ್ರೌಢ ಕ್ರೈಸ್ತರಾಗ್ತೀರ. ಯಾಕಂದ್ರೆ “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಯೇಸು ಹೇಳಿದ್ದಾನೆ. (ಅ. ಕಾ. 20:35) ಯುವಜನರೇ ನೀವು ನಿಮ್ಮ ಸಮಯ ಮತ್ತು ಶಕ್ತಿನ ಬೇರೆಯವರಿಗೆ ಸಹಾಯ ಮಾಡೋಕೆ ಉಪಯೋಗಿಸಿ. ಉದಾಹರಣೆಗೆ, ನಿಮ್ಮ ಸಭೇಲಿ ಯಾರಿಗಾದ್ರೂ ವಯಸ್ಸಾಗಿದ್ರೆ ಅಥವಾ ಹುಷಾರಿಲ್ಲದಿದ್ರೆ ಸಹಾಯ ಮಾಡಿ. ಅವರಿಗೆ ಏನಾದ್ರೂ ಬೇಕಿದ್ರೆ ಅಂಗಡಿಯಿಂದ ತಂದುಕೊಡಿ. ಅವರಿಗೆ ಮೊಬೈಲ್‌ ಅಥವಾ ಕಂಪ್ಯೂಟರ್‌ನ ಬಳಸೋದು ಹೇಗೆ ಅಂತ ಹೇಳಿಕೊಡಿ. ನೀವು ಒಂದುವೇಳೆ ಸಹೋದರನಾಗಿದ್ರೆ ಸಭೆಯವರ ಸೇವೆ ಮಾಡೋಕೋಸ್ಕರ ಸಹಾಯಕ ಸೇವಕನಾಗೋ ಗುರಿಯಿಡಿ. (ಫಿಲಿ. 2:4) ಸಭೆಯವರಿಗಷ್ಟೇ ಅಲ್ಲ ಹೊರಗಿನವರಿಗೂ ನೀವು ಪ್ರೀತಿ ತೋರಿಸಬೇಕು. ಅದಕ್ಕೆ ಅವರಿಗೆ ಸಿಹಿಸುದ್ದಿ ಸಾರೋ ಗುರಿಯಿಡಿ. (ಮತ್ತಾ. 9:36, 37) ಒಂದುವೇಳೆ ಪರಿಸ್ಥಿತಿ ಅನುಮತಿಸಿದ್ರೆ ನೀವು ಪೂರ್ಣ ಸಮಯದ ಸೇವೆ ಮಾಡೋ ಗುರಿಯಿಡಬಹುದು.

18. ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳೋಕೆ ಪೂರ್ಣ ಸಮಯದ ಸೇವೆ ಹೇಗೆ ಸಹಾಯ ಮಾಡುತ್ತೆ?

18 ಪೂರ್ಣ ಸಮಯದ ಸೇವೆ ಯೆಹೋವನ ಜೊತೆಗಿರೋ ನಮ್ಮ ಸಂಬಂಧನ ಇನ್ನೂ ಗಟ್ಟಿ ಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ. ನೀವು ಪಯನೀಯರ್‌ ಆಗಿದ್ರೆ ರಾಜ್ಯ ಪ್ರಚಾರಕರ ಶಾಲೆಗೆ ಹೋಗಬಹುದು. ಬೆತೆಲ್‌ಗೆ ಹೋಗಬಹುದು ಅಥವಾ ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳಲ್ಲೂ ಕೆಲಸ ಮಾಡಬಹುದು. ಕೇಟಲಿನ್‌ ಅನ್ನೋ ಒಬ್ಬ ಯುವ ಪಯನೀಯರ್‌ ಸಹೋದರಿ ಹೀಗೆ ಹೇಳಿದ್ರು: “ದೀಕ್ಷಾಸ್ನಾನ ಆದಮೇಲೆ, ಸಹೋದರ ಸಹೋದರಿಯರ ಜೊತೆ ಸೇವೆ ಮಾಡಿದ್ರಿಂದ ನನಗೆ ಆಧ್ಯಾತ್ಮಿಕವಾಗಿ ಪ್ರಗತಿ ಮಾಡೋಕಾಯ್ತು. ಇನ್ನೂ ಚೆನ್ನಾಗಿ ವೈಯಕ್ತಿಕ ಅಧ್ಯಯನ ಮಾಡೋಕೆ ಮತ್ತು ಬೇರೆಯವರಿಗೆ ಸಹಾಯ ಮಾಡೋಕೆ ನಾನು ಅವರಿಂದ ಕಲಿತೆ.”

19. ಆಧ್ಯಾತ್ಮಿಕವಾಗಿ ಬೆಳಿತಾ ಇದ್ರೆ ನಿಮಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

19 ನೀವು ಆಧ್ಯಾತ್ಮಿಕವಾಗಿ ಬೆಳಿತಾ ಹೋದ್ರೆ ತುಂಬ ಆಶೀರ್ವಾದಗಳು ಸಿಗುತ್ತೆ. ನೀವು ಬೇಡವಾದ ವಿಷಯಗಳನ್ನ ಮಾಡ್ತಾ ನಿಮ್ಮ ಯೌವನವನ್ನ ವ್ಯರ್ಥವಾಗಿ ಕಳಿಯಲ್ಲ. (1 ಯೋಹಾನ 2:17) ತಪ್ಪಾದ ನಿರ್ಣಯಗಳನ್ನ ಮಾಡಿ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳೋದು ತಪ್ಪುತ್ತೆ. ನಿಮ್ಮ ಜೀವನಕ್ಕೊಂದು ಅರ್ಥ ಇರುತ್ತೆ ಮತ್ತು ಸಂತೋಷವಾಗಿ ಇರ್ತೀರ. (ಜ್ಞಾನೋ. 16:3) ನಿಮ್ಮನ್ನ ನೋಡಿ ಸಭೆಯಲ್ಲಿರೋ ದೊಡ್ಡವರು, ಚಿಕ್ಕವರು ಎಲ್ರೂ ಕಲಿತಾರೆ. (1 ತಿಮೊ. 4:12) ಎಲ್ಲಕ್ಕಿಂತ ಮುಖ್ಯವಾಗಿ ನೀವು ಯೆಹೋವನಿಗೆ ಇಷ್ಟ ಆಗೋ ತರ ನಡಕೊಂಡ್ರೆ ಜೀವನದಲ್ಲಿ ನೆಮ್ಮದಿ, ಸಂತೋಷದಿಂದ ಇರ್ತೀರ ಮತ್ತು ಯೆಹೋವನ ಜೊತೆಗಿರೋ ನಿಮ್ಮ ಸಂಬಂಧನೂ ಗಟ್ಟಿಯಾಗಿರುತ್ತೆ.—ಜ್ಞಾನೋ. 23:15, 16.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

a ಯುವಜನ್ರು ದೀಕ್ಷಾಸ್ನಾನ ತಗೊಂಡಾಗ ನಮ್ಮೆಲ್ಲರಿಗೂ ತುಂಬ ಖುಷಿಯಾಗುತ್ತೆ. ಆದ್ರೆ ಅವರು ದೀಕ್ಷಾಸ್ನಾನ ಆದಮೇಲೂ ಯೆಹೋವನ ಜೊತೆಗಿರೋ ತಮ್ಮ ಸಂಬಂಧನ ಗಟ್ಟಿ ಮಾಡಿಕೊಳ್ತಾ ಹೋಗಬೇಕು. ಅಂದ್ರೆ ಆಧ್ಯಾತ್ಮಿಕವಾಗಿ ಪ್ರೌಢರಾಗ್ತಾ ಹೋಗಬೇಕು. ಇದನ್ನ ಮಾಡೋ ಕೆಲವು ವಿಧಗಳನ್ನ ಈ ಲೇಖನದಲ್ಲಿ ನೊಡೋಣ. ಇದರಲ್ಲಿರೋ ವಿಷಯಗಳು ಇತ್ತೀಚಿಗೆ ದೀಕ್ಷಾಸ್ನಾನ ಆಗಿರೋ ಯುವಜನರಿಗೆ ಇರೋದಾದ್ರೂ ನಮ್ಮೆಲ್ಲರಿಗೂ ಅನ್ವಯಿಸುತ್ತೆ.

b ಕೆಲವು ಹೆಸರುಗಳು ಬದಲಾಗಿವೆ.