ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 35

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ಅವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?

ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ಅವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?

“ಪಶ್ಚಾತ್ತಾಪಪಡೋ ಅಗತ್ಯ ಇಲ್ಲದಿರೋ 99 ಜನ ನೀತಿವಂತರಿಗಿಂತ ಪಶ್ಚಾತ್ತಾಪಪಡೋ ಒಬ್ಬ ಪಾಪಿ ಬಗ್ಗೆ ಸ್ವರ್ಗದಲ್ಲಿ ಇರೋರು ತುಂಬ ಸಂತೋಷ ಪಡ್ತಾರೆ.”ಲೂಕ 15:7.

ಈ ಲೇಖನದಲ್ಲಿ ಏನಿದೆ?

ಕೆಲವ್ರನ್ನ ಯಾಕೆ ಸಭೆಯಿಂದ ಹೊರಗೆ ಹಾಕಲಾಗುತ್ತೆ? ಅವರು ಪಶ್ಚಾತ್ತಾಪ ಪಡೋಕೆ, ಯೆಹೋವನ ಜೊತೆ ಮತ್ತೆ ಸ್ನೇಹ ಬೆಳೆಸ್ಕೊಳ್ಳೋಕೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ? ಇದಕ್ಕೆ ಉತ್ರ ನೋಡೋಣ.

1-2. (ಎ) ಬೇಕುಬೇಕಂತ ಪಾಪ ಮಾಡೋರನ್ನ ನೋಡಿದ್ರೆ ಯೆಹೋವನಿಗೆ ಹೇಗನಿಸುತ್ತೆ? (ಬಿ) ಪಾಪ ಮಾಡಿದವರು ಏನು ಮಾಡಬೇಕಂತ ಯೆಹೋವ ಇಷ್ಟ ಪಡ್ತಾನೆ?

 ಯೆಹೋವ ದೇವರು ಕೆಟ್ಟದನ್ನ ಸಹಿಸೋದೇ ಇಲ್ಲ. (ಕೀರ್ತ. 5:4-6) ಜನ್ರು ಪಾಪ ಮಾಡಿದ್ರೆ ಆತನಿಗೆ ಒಂಚೂರೂ ಇಷ್ಟ ಆಗಲ್ಲ. ಅದಕ್ಕೆ ಬೈಬಲಿನಲ್ಲಿ ನಾವೆಲ್ರೂ ಪಾಲಿಸಬೇಕಾಗಿರೋ ನೀತಿ ನಿಯಮಗಳನ್ನ ಕೊಟ್ಟಿದ್ದಾನೆ. ಆದ್ರೆ ನಾವು ಅಪರಿಪೂರ್ಣರಾಗಿರೋದ್ರಿಂದ ಈ ಎಲ್ಲಾ ನಿಯಮನ ಪರಿಪೂರ್ಣವಾಗಿ ಪಾಲಿಸೋಕೆ ಆಗಲ್ಲ ಅಂತ ಆತನಿಗೆ ಚೆನ್ನಾಗಿ ಗೊತ್ತು. (ಕೀರ್ತ. 130:3, 4) ಹಾಗಂತ ‘ದೇವರ ಅಪಾರ ಕೃಪೆಯನ್ನ ನೆಪ ಮಾಡ್ಕೊಂಡು ನಾಚಿಕೆ ಬಿಟ್ಟು ಕೆಟ್ಟ ಕೆಲಸಗಳನ್ನ ಮಾಡ್ತಾ ಇದ್ರೆ’ ದೇವರು ಅದನ್ನ ನೋಡ್ಕೊಂಡು ಸಹಿಸ್ತಾನೂ ಇರಲ್ಲ. (ಯೂದ 4) ಅದಕ್ಕೇ “ದೇವರ ಮೇಲೆ ಭಕ್ತಿ ಇಲ್ಲದಿರೋ” ಜನ್ರನ್ನ ಹರ್ಮಗೆದೋನ್‌ ಯುದ್ಧದಲ್ಲಿ ನಾಶ ಮಾಡ್ತಾನೆ ಅಂತ ಬೈಬಲ್‌ ಹೇಳುತ್ತೆ.—2 ಪೇತ್ರ 3:7; ಪ್ರಕ. 16:16.

2 ಆದ್ರೆ ಯಾರೂ ನಾಶ ಆಗಬಾರದು ಅಂತ ಯೆಹೋವ ಇಷ್ಟ ಪಡ್ತಾನೆ. ನಾವು ಕಳೆದ ಲೇಖನಗಳಲ್ಲಿ ನೋಡಿದ ಹಾಗೆ “ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ” ಅಥವಾ ಪಶ್ಚಾತ್ತಾಪ ಪಡೋಕೆ “ಅವಕಾಶ ಸಿಗಬೇಕು” ಅನ್ನೋದೇ ಯೆಹೋವನ ಆಸೆ. (2 ಪೇತ್ರ 3:9) ಹಾಗಾಗಿ ಪಾಪ ಮಾಡಿದವರು ಬದಲಾಗೋಕೆ ಮತ್ತು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೆ ಹಿರಿಯರು ಯೆಹೋವನ ತರ ತಾಳ್ಮೆಯಿಂದ ಸಹಾಯ ಮಾಡ್ತಾರೆ. ಆದ್ರೂ ಕೆಲವರು ಪಶ್ಚಾತ್ತಾಪ ಪಡಲ್ಲ. (ಯೆಶಾ. 6:9) ಪಶ್ಚಾತ್ತಾಪ ಪಡೋಕೆ ಹಿರಿಯರು ಎಷ್ಟೇ ಸಹಾಯ ಮಾಡಿದ್ರೂ ಅವರು ಕೆಟ್ಟ ದಾರಿ ಬಿಟ್ಟು ಬರೋದೇ ಇಲ್ಲ. ಆಗ ಹಿರಿಯರು ಏನು ಮಾಡಬೇಕು?

“ಆ ಕೆಟ್ಟವನನ್ನ ಸಭೆಯಿಂದ ಹೊರಗೆ ಹಾಕಿ”

3. (ಎ) ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಟ್ಟಿಲ್ಲ ಅಂದ್ರೆ ಅವನನ್ನ ಏನು ಮಾಡಬೇಕು ಅಂತ ಬೈಬಲ್‌ ಹೇಳುತ್ತೆ? (ಬಿ) ಅವನನ್ನ ಸಭೆಯಿಂದ ಹೊರಗೆ ಹಾಕೋಕೆ ಅವನೇ ಕಾರಣ ಅಂತ ಯಾಕೆ ಹೇಳಬಹುದು?

3 ಪಾಪ ಮಾಡಿದ ವ್ಯಕ್ತಿಗೆ ಎಷ್ಟೇ ಸಹಾಯ ಮಾಡಿದ್ರೂ ಅವನು ಪಶ್ಚಾತ್ತಾಪ ಪಡೋಕೆ ರೆಡಿ ಇಲ್ಲಾಂದ್ರೆ ಹಿರಿಯರಿಗೆ ಬೇರೆ ದಾರಿ ಇರಲ್ಲ. 1 ಕೊರಿಂಥ 5:13ರಲ್ಲಿ ಹೇಳೋ ಹಾಗೆ “ಆ ಕೆಟ್ಟವನನ್ನ ಸಭೆಯಿಂದ ಹೊರಗೆ ಹಾಕಿ” ಅನ್ನೋ ನಿಯಮನ ಅವರು ಪಾಲಿಸ್ಲೇಬೇಕಾಗುತ್ತೆ. ಅವನ ಈ ಪರಿಸ್ಥಿತಿಗೆ ಯಾರು ಕಾರಣ? ಅವನೇ ಕಾರಣ. ಯಾಕಂದ್ರೆ ‘ಅವನು a ಏನನ್ನ ಬಿತ್ತಿದ್ದಾನೋ ಅದನ್ನೇ ಕೊಯ್ದಿದ್ದಾನೆ.’ (ಗಲಾ. 6:7) ನಾವು ಯಾಕೆ ಹಾಗೆ ಹೇಳಬಹುದು? ಯಾಕಂದ್ರೆ ಹಿರಿಯರು ಪದೇಪದೇ ಅವನಿಗೆ ಸಹಾಯ ಮಾಡಿದ್ರೂ ಅವನು ಬದಲಾಗೋಕೆ ತಯಾರಾಗಲಿಲ್ಲ. (2 ಅರ. 17:12-15) ಹೀಗೆ ಅವನು ಯೆಹೋವನ ನಿಯಮನ ಪಾಲಿಸೋಕೆ ಇಷ್ಟ ಇಲ್ಲ ಅಂತ ಅವನೇ ತೋರಿಸ್ಕೊಟ್ಟ.—ಧರ್ಮೋ. 30:19, 20.

4. ಪಶ್ಚಾತ್ತಾಪ ಪಡದವನನ್ನ ಸಭೆಯಿಂದ ಹೊರಗೆ ಹಾಕಿದಾಗ ಯಾಕೆ ಪ್ರಕಟಣೆ ಮಾಡ್ತಾರೆ?

4 ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡ್ಲೇ ಇಲ್ಲಾಂದ್ರೆ ಅವನನ್ನ ಸಭೆಯಿಂದ ಹೊರಗೆ ಹಾಕಲಾಗುತ್ತೆ. ಆಗ ಒಂದು ಪ್ರಕಟಣೆ ಮಾಡ್ತಾರೆ. ಆ ಪ್ರಕಟಣೆಯಲ್ಲಿ, ಇನ್ಮುಂದೆ ಇವನು ಯೆಹೋವನ ಸಾಕ್ಷಿಯಾಗಿರಲ್ಲ ಅಂತ ಹೇಳ್ತಾರೆ. b ಈ ಪ್ರಕಟಣೆ ಮಾಡೋದ್ರ ಉದ್ದೇಶ ಏನು? ಅವನಿಗೆ ಅವಮಾನ ಮಾಡ್ಬೇಕು ಅಂತಾನಾ? ಅಲ್ಲ. ಅದ್ರ ಬದ್ಲು “ಅವನ ಜೊತೆ ಸೇರೋದನ್ನ ಬಿಟ್ಟುಬಿಡಿ. ಅಷ್ಟೇ ಅಲ್ಲ ಅಂಥವನ ಜೊತೆ ಊಟನೂ ಮಾಡಬೇಡಿ” ಅಂತ ಬೈಬಲ್‌ ಹೇಳೋದನ್ನ ಸಭೆಯವರು ಪಾಲಿಸೋಕೆ. (1 ಕೊರಿಂ. 5:9-11) ಈ ನಿಯಮನ ಸಭೆಯವರು ಪಾಲಿಸೋದ್ರಿಂದ ಒಳ್ಳೇದೇ ಆಗುತ್ತೆ. ಯಾಕಂದ್ರೆ “ಸ್ವಲ್ಪ ಹುಳಿ ನಾದಿದ ಹಿಟ್ಟನ್ನೆಲ್ಲ ಹುಳಿಮಾಡುತ್ತೆ” ಅಂತ ಪೌಲ ಹೇಳಿದ. (1 ಕೊರಿಂ. 5:6) ಹಾಗಾಗಿ ಪಶ್ಚಾತ್ತಾಪ ಪಡದಿರೋ ವ್ಯಕ್ತಿನ ಸಭೆಯಿಂದ ಹೊರಗೆ ಹಾಕ್ಲಿಲ್ಲ ಅಂದ್ರೆ ಸಭೆಯವರು ತಪ್ಪಾಗಿ ಅರ್ಥ ಮಾಡ್ಕೊಂಡುಬಿಡ್ತಾರೆ. ‘ಯೆಹೋವನ ನಿಯಮನ ನಾವೂ ಪಾಲಿಸ್ಲಿಲ್ಲ ಅಂದ್ರೂ ಪರ್ವಾಗಿಲ್ಲ’ ಅಂತ ಅಂದ್ಕೊಂಡು ಬಿಡ್ತಾರೆ.—ಜ್ಞಾನೋ. 13:20; 1 ಕೊರಿಂ. 15:33.

5. ಸಭೆಯಿಂದ ಹೊರಗೆ ಹಾಕಿದ ವ್ಯಕ್ತಿನ ನಾವು ಹೇಗೆ ನೋಡಬೇಕು ಮತ್ತು ಯಾಕೆ?

5 ಸಭೆಯಿಂದ ಯಾರನ್ನಾದ್ರೂ ಹೊರಗೆ ಹಾಕಿದಾಗ ನಾವು ಅವ್ರನ್ನ ಹೇಗೆ ನೋಡಬೇಕು? ನಾವು ಅವ್ರ ಜೊತೆ ಸೇರೋದಿಲ್ಲ ಅನ್ನೋದು ನಿಜಾನೇ. ಆದ್ರೆ ನಾವು ಅವ್ರನ್ನ ಸಂಪೂರ್ಣವಾಗಿ ಮರೆತುಬಿಡಬಾರದು! ಅವರು ಬರೀ ಕಳೆದುಹೋಗಿರೋ ಕುರಿ ಅಷ್ಟೇ! ಆದ್ರೆ ಕಳೆದುಹೋಗಿರೋ ಕುರಿ ಮತ್ತೆ ಯಾವಾಗಾದ್ರೂ ವಾಪಸ್‌ ಬರಬಹುದು ಅನ್ನೋದನ್ನ ನೆನಪಿಡಬೇಕು. ಅವನೂ ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಿರೋ ವ್ಯಕ್ತಿನೇ. ಆದ್ರೆ ಈಗ ಅವನು ಆ ಸಮರ್ಪಣೆಗೆ ತಕ್ಕ ಹಾಗೆ ನಡಕೊಳ್ತಾ ಇಲ್ಲ ಅಷ್ಟೇ. ಅದಕ್ಕೇ ಅವನ ಜೊತೆ ಈಗ ಸಹವಾಸ ಮಾಡಿದ್ರೆ ಅದ್ರಿಂದ ನಮಗೆ ಅಪಾಯ ಆಗುತ್ತೆ. (ಯೆಹೆ. 18:31) ಇನ್ನೂ ಸಮಯ ಇದೆ, ಯೆಹೋವ ಎಲ್ಲಿವರೆಗೂ ಕರುಣೆ ತೋರಿಸ್ತಾನೋ ಅಲ್ಲಿವರೆಗೂ ಆ ವ್ಯಕ್ತಿಗೆ ವಾಪಸ್‌ ಬರೋಕೆ ಅವಕಾಶ ಇದೆ. ಇದನ್ನ ಮನಸ್ಸಲ್ಲಿಟ್ಟು ಹಿರಿಯರು ಆ ವ್ಯಕ್ತಿಗೆ ಹೇಗೆಲ್ಲಾ ಸಹಾಯ ಮಾಡ್ತಾರೆ?

ಹಿರಿಯರು ಹೇಗೆ ಸಹಾಯ ಮಾಡ್ತಾರೆ?

6. ಪಶ್ಚಾತ್ತಾಪ ಪಡದೇ ಇರೋ ವ್ಯಕ್ತಿಯನ್ನ ಸಭೆಯಿಂದ ಹೊರಗೆ ಹಾಕಿದ ಮೇಲೆ ಅವ್ರಿಗೆ ಸಹಾಯ ಮಾಡೋಕೆ ಹಿರಿಯರು ಏನೆಲ್ಲ ಮಾಡ್ತಾರೆ?

6 ಪಶ್ಚಾತ್ತಾಪ ಪಡದೇ ಇರೋರನ್ನ ಸಭೆಯಿಂದ ಹೊರಗೆ ಹಾಕಿದ್ಮೇಲೆ ಆ ವ್ಯಕ್ತಿ ಸಭೆಗೆ ವಾಪಸ್‌ ಬರೋವರೆಗೂ ಅವನನ್ನ ಅವನಷ್ಟಕ್ಕೇ ಬಿಟ್ಟುಬಿಡ್ತಾರಾ? ಇಲ್ಲ. ಅವನಿಗೆ ಸಹಾಯ ಮಾಡ್ತಾನೇ ಇರ್ತಾರೆ. ಅವನನ್ನ ಸಭೆಯಿಂದ ಹೊರಗೆ ಹಾಕುವಾಗ ಮತ್ತೆ ವಾಪಸ್‌ ಬರೋಕೆ ಅವನು ಏನೆಲ್ಲಾ ಮಾಡಬೇಕು ಅಂತ ಹಿರಿಯರ ಕಮಿಟಿ ಅವನಿಗೆ ಹೇಳುತ್ತೆ. ಅಷ್ಟೇ ಅಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ‘ನೀವು ಬದಲಾಗೋಕೆ ಮನಸ್ಸು ಮಾಡ್ತೀರ ಅಂತ ತಿಳ್ಕೊಳ್ಳೋಕೆ ಕೆಲವು ತಿಂಗಳ ನಂತರ ಪುನಃ ಭೇಟಿ ಮಾಡ್ತೀವಿ’ ಅಂತ ಹಿರಿಯರು ಆ ವ್ಯಕ್ತಿಗೆ ಹೇಳ್ತಾರೆ. ಕೆಲವು ತಿಂಗಳುಗಳು ಆದ್ಮೇಲೆ ಆ ವ್ಯಕ್ತಿ ಹಿರಿಯರು ಭೇಟಿ ಮಾಡೋಕೆ ಒಪ್ಕೊಂಡ್ರೆ ಅವನು ಪಶ್ಚಾತ್ತಾಪ ಪಡೋಕೆ ಮತ್ತು ಸಭೆಗೆ ವಾಪಸ್‌ ಬರೋಕೆ ಹಿರಿಯರು ಆ ವ್ಯಕ್ತಿಗೆ ಸಹಾಯ ಮಾಡ್ತಾರೆ. ಆದ್ರೆ ಆಗ್ಲೂ ಅವನು ಪಶ್ಚಾತ್ತಾಪ ಪಟ್ಟಿಲ್ಲ ಅಂದ್ರೆ ಸ್ವಲ್ಪ ಸಮಯ ಆದ್ಮೇಲೆ ಅವರು ಮತ್ತೆ ಅವನನ್ನ ಭೇಟಿ ಮಾಡ್ತಾರೆ. ಅವನಿಗೆ ಪಶ್ಚಾತ್ತಾಪ ಪಡೋಕೆ ಸಹಾಯನೂ ಮಾಡ್ತಾರೆ. ಈ ತರ ಅವರು ಆಗಾಗ ಅವನನ್ನ ಭೇಟಿ ಮಾಡ್ತಾ ಇರ್ತಾರೆ.

7. ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ಅವ್ರಿಗೆ ಹಿರಿಯರು ಹೇಗೆ ಯೆಹೋವನ ತರ ಕರುಣೆ ತೋರಿಸ್ತಾರೆ? (ಯೆರೆಮೀಯ 3:12)

7 ಸಭೆಯಿಂದ ಹೊರಗೆ ಹಾಕಿದ ಮೇಲೂ ಆ ವ್ಯಕ್ತಿಗೆ ಹಿರಿಯರು ಯೆಹೋವನ ತರ ಕರುಣೆ ತೋರಿಸಬೇಕು. ಯೆಹೋವ ದೇವರು ದಾರಿ ತಪ್ಪಿದ ಇಸ್ರಾಯೇಲ್ಯರಿಗೆ ತುಂಬ ಕರುಣೆ ತೋರಿಸಿದನು. ಆತನು ‘ಅವ್ರೇ ನನ್ನತ್ರ ವಾಪಸ್‌ ಬರಲಿ’ ಅಂತ ಸುಮ್ನೆ ಕಾಯ್ತಾ ಕೂರಲಿಲ್ಲ. ಅವರು ಪಶ್ಚಾತ್ತಾಪ ಪಟ್ಟಿಲ್ಲ ಅಂದ್ರೂ ಅವ್ರಿಗೆ ಸಹಾಯ ಮಾಡೋಕೆ ಯೆಹೋವನೇ ಮೊದಲ ಹೆಜ್ಜೆ ತಗೊಂಡನು. ಎರಡನೇ ಲೇಖನದಲ್ಲಿ ಇದಕ್ಕೊಂದು ಉದಾಹರಣೆನ ನಾವು ನೋಡಿದ್ವಿ. ಹೋಶೇಯನ ಹೆಂಡತಿ ಇನ್ನೂ ಪಾಪ ಮಾಡ್ತಿರುವಾಗ್ಲೇ ಅವಳನ್ನ ಕ್ಷಮಿಸಿ ಕರ್ಕೊಂಡು ಬರೋಕೆ ಯೆಹೋವ ಹೇಳಿದನು. (ಹೋಶೇ. 3:1; ಮಲಾ. 3:7) ಇವತ್ತು ಪಾಪ ಮಾಡಿದವರು ಮತ್ತೆ ಸಭೆಗೆ ಬರಲಿ ಅಂತ ಯೆಹೋವನ ತರಾನೇ ಹಿರಿಯರು ತುಂಬ ಆಸೆಪಡ್ತಾರೆ. ಅದಕ್ಕೆ ಅವ್ರಿಗೆ ಮನಸಾರೆ ಸಹಾಯ ಮಾಡ್ತಾರೆ. ಅವನನ್ನ ಸಭೆಯೊಳಗೆ ಕರ್ಕೊಳ್ಳಬೇಕು ಅಂತ ತಮ್ಮಿಂದಾದ ಎಲ್ಲವನ್ನ ಮಾಡ್ತಾರೆ.ಯೆರೆಮೀಯ 3:12 ಓದಿ.

8. ತನ್ನನ್ನ ಬಿಟ್ಟುಹೋದವ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ಯೇಸು ಕೊಟ್ಟ ಉದಾಹರಣೆಯಿಂದ ಗೊತ್ತಾಗುತ್ತೆ? (ಲೂಕ 15:7)

8 ಎರಡನೇ ಲೇಖನದಲ್ಲಿ ಮನೆಬಿಟ್ಟು ಹೋದ ಮಗನ ಬಗ್ಗೆ ನೋಡಿದ್ವಿ ನೆನಪಿದ್ಯಾ? ಆ ಮಗ ಇನ್ನೂ ದೂರದಲ್ಲಿ ಬರ್ತಿರೋದನ್ನ ನೋಡಿದಾಗ ಅವನ “ಅಪ್ಪ ಓಡೋಡಿ ಬಂದು ಅವನನ್ನ ಅಪ್ಕೊಂಡು ಮುತ್ತು ಕೊಟ್ಟ.” (ಲೂಕ 15:20) ನೋಡಿದ್ರಾ, ಮಗನೇ ಬಂದು ಕ್ಷಮೆ ಕೇಳಲಿ ಅಂತ ಅಪ್ಪ ಕಾಯ್ತಾ ಕೂರಲಿಲ್ಲ. ಅವನನ್ನ ಕ್ಷಮಿಸೋಕೆ ತಾನೇ ಮುಂದೆ ಬಂದ. ಮಗನನ್ನ ಅಪ್ಪ ಅಷ್ಟು ಪ್ರೀತಿಸಿದ್ರಿಂದಾನೇ ಅವನ ಹತ್ರ ಓಡಿ ಹೋದ. ಈ ಅಪ್ಪನ ತರಾನೇ ಹಿರಿಯರು ಯೆಹೋವನಿಂದ ದೂರ ಹೋದವ್ರ ಜೊತೆ ನಡಕೊಳ್ತಾರೆ. ಕಳೆದುಹೋದ ಕುರಿ ಮತ್ತೆ ಸಭೆಗೆ ಬರಬೇಕು ಅಂತ ಅವರು ಆಸೆಪಡ್ತಾರೆ. (ಲೂಕ 15:22-24, 32) ಈ ತರ ಅವರು ಸಭೆಗೆ ವಾಪಸ್‌ ಬಂದಾಗ ಸಭೆಲಿರೋರು ಅಷ್ಟೇ ಅಲ್ಲ, ಸ್ವರ್ಗದಲ್ಲಿರೋ ಯೆಹೋವ, ಯೇಸು ಮತ್ತು ದೇವದೂತರೆಲ್ರೂ ತುಂಬ ಖುಷಿಪಡ್ತಾರೆ.ಲೂಕ 15:7 ಓದಿ.

9. ಪಾಪ ಮಾಡಿದವರು ಏನು ಮಾಡಬೇಕು ಅಂತ ಯೆಹೋವ ಇಷ್ಟಪಡ್ತಾನೆ?

9 ಪಾಪ ಮಾಡಿದವರು ಪಶ್ಚಾತ್ತಾಪ ಪಟ್ಟಿಲ್ಲ ಅಂದ್ರೆ ಅವ್ರನ್ನ ಸಭೆಲಿ ಇಟ್ಕೊಳ್ಳೋಕೆ ಯೆಹೋವ ಇಷ್ಟ ಪಡಲ್ಲ ಅಂತ ನಾವು ಇಷ್ಟೊತ್ತು ಕಲಿತ್ವಿ. ಹಾಗಂತ ಪಾಪ ಮಾಡಿದವ್ರನ್ನ ಆತನು ಬಿಟ್ಟು ಬಿಡಲ್ಲ ಅಥವಾ ಮರೆತು ಹೋಗಲ್ಲ. ಅವರು ಮತ್ತೆ ವಾಪಸ್‌ ಬರೋಕೆ ಆತನು ಖಂಡಿತ ಸಹಾಯ ಮಾಡ್ತಾನೆ. ಪಾಪ ಮಾಡಿದವರು ಪಶ್ಚಾತ್ತಾಪ ಪಟ್ಟಾಗ ಆತನಿಗೆ ಹೇಗನಿಸುತ್ತೆ ಅಂತ ಹೋಶೇಯ 14:4ರಲ್ಲಿ ಆತನು ಹೇಳಿದ್ದಾನೆ: “ಅವ್ರ ನಂಬಿಕೆ ದ್ರೋಹ ಅನ್ನೋ ಕಾಯಿಲೆಯನ್ನ ನಾನು ವಾಸಿ ಮಾಡ್ತೀನಿ. ನಾನು ಸ್ವಇಷ್ಟದಿಂದ ಅವ್ರನ್ನ ಪ್ರೀತಿಸ್ತೀನಿ, ಯಾಕಂದ್ರೆ ನನಗೆ ಅವ್ರ ಮೇಲಿದ್ದ ಕೋಪ ಹೋಗಿದೆ.” ಯೆಹೋವ ಎಂಥ ಒಳ್ಳೇ ಮಾದರಿ ಇಟ್ಟಿದ್ದಾನಲ್ವಾ? ಪಾಪ ಮಾಡಿದವರು ಪಶ್ಚಾತ್ತಾಪದ ಚಿಕ್ಕ ಸುಳಿವು ಕೊಟ್ರೂ ಅವ್ರಿಗೆ ಸಹಾಯ ಮಾಡೋಕೆ ಹಿರಿಯರಿಗೆ ಈ ಮಾತಿಂದ ತುಂಬ ಪ್ರೋತ್ಸಾಹ ಸಿಗುತ್ತೆ. ಅಷ್ಟೇ ಅಲ್ಲ, ಯೆಹೋವನನ್ನ ಬಿಟ್ಟು ಹೋದವ್ರಿಗೂ ತಕ್ಷಣ ವಾಪಸ್‌ ಬರೋದಿಕ್ಕೆ ಈ ಮಾತುಗಳಿಂದ ಪ್ರೋತ್ಸಾಹ ಸಿಗುತ್ತೆ.

10-11. ಪಾಪ ಮಾಡಿದವನನ್ನ ತುಂಬ ವರ್ಷಗಳ ಹಿಂದೆ ಹೊರಗೆ ಹಾಕಿದ್ರೆ ಅಂಥವ್ರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ?

10 ಕೆಲವ್ರನ್ನ ತುಂಬಾ ವರ್ಷಗಳ ಹಿಂದೆ ಸಭೆಯಿಂದ ಹೊರಗೆ ಹಾಕಿರಬಹುದು. ಅಂಥವ್ರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ? ಅವರು ಆಗ ಮಾಡ್ತಿದ್ದ ಪಾಪನ ಈಗ ಬಿಟ್ಟಿರಬಹುದು ಅಥವಾ ಅವ್ರನ್ನ ಯಾಕೆ ಸಭೆಯಿಂದ ಹೊರಗೆ ಹಾಕಿದ್ರು ಅನ್ನೋ ಕಾರಣನೇ ಅವರೀಗ ಮರೆತಿರಬಹುದು. ಆದ್ರೆ ಕಾರಣ ಏನೇ ಆಗಿದ್ರೂ ಅಂಥವ್ರನ್ನ ಹಿರಿಯರು ಹುಡುಕಬೇಕು ಮತ್ತು ಅವ್ರನ್ನ ಭೇಟಿ ಮಾಡಬೇಕು. ಹೀಗೆ ಭೇಟಿ ಮಾಡಿದಾಗ ಹಿರಿಯರು ಅವ್ರ ಜೊತೆ ಪ್ರಾರ್ಥನೆ ಮಾಡ್ತಾರೆ, ಅಷ್ಟೇ ಅಲ್ಲ ಸಭೆಗೆ ವಾಪಸ್‌ ಬರೋಕೆ ಪ್ರೀತಿಯಿಂದ ಅವ್ರಿಗೆ ಪ್ರೋತ್ಸಾಹ ಕೊಡ್ತಾರೆ. ಅವರು ಸಭೆನ ಬಿಟ್ಟುಹೋಗಿ ತುಂಬ ವರ್ಷಗಳು ಆಗಿರೋದ್ರಿಂದ ಅವ್ರಿಗೆ ಯೆಹೋವನ ಜೊತೆಗಿರೋ ಸಂಬಂಧ ತುಂಬ ಬಲಹೀನ ಆಗಿರುತ್ತೆ. ಅದಕ್ಕೆ ಅವ್ರಿಗೆ ಯೆಹೋವನ ಬಗ್ಗೆ, ಸತ್ಯದ ಬಗ್ಗೆ ತಿಳ್ಕೊಳ್ಳೋ ಅಗತ್ಯ ಇರುತ್ತೆ. ಹಾಗಾಗಿ ಅವ್ರಿಗೆ ಮತ್ತೇ ಸಭೆಗೆ ಬರೋ ಆಸೆ ಇದೆ ಅಂತ ಗೊತ್ತಾದ್ರೆ ಹಿರಿಯರು ಅವ್ರ ಜೊತೆ ಬೈಬಲ್‌ ಅಧ್ಯಯನ ಮಾಡೋಕೆ ಯಾರನ್ನಾದ್ರೂ ನೇಮಿಸ್ತಾರೆ. ಅವರು ಇನ್ನೂ ಪುನಃಸ್ಥಾಪನೆ ಆಗಿಲ್ಲ ಅಂದ್ರೂ ಪರ್ವಾಗಿಲ್ಲ, ಹಿರಿಯರು ಈ ಏರ್ಪಾಡು ಮಾಡ್ತಾರೆ. ಆದ್ರೆ ನಾವು ನೆನಪಿಡಬೇಕು, ಇಂಥವ್ರಿಗೆ ಯಾರು ಬೈಬಲ್‌ ಅಧ್ಯಯನ ಮಾಡಬೇಕು ಅಂತ ಹಿರಿಯರೇ ಎಲ್ಲಾ ಸಂದರ್ಭದಲ್ಲೂ ನಿರ್ಧಾರ ಮಾಡ್ತಾರೆ.

11 ಹಿರಿಯರು ಯೆಹೋವನ ತರ ಪ್ರೀತಿ ಕರುಣೆ ತೋರಿಸ್ತಾರೆ. ಹಾಗಾಗಿ ಯಾರೆಲ್ಲಾ ಯೆಹೋವನನ್ನ ಬಿಟ್ಟುಹೋಗಿದ್ದಾರೋ ಅವ್ರನ್ನೆಲ್ಲಾ ಇವರು ಹುಡುಕ್ತಾರೆ. ಅವರು ಮತ್ತೆ ಯೆಹೋವನ ಹತ್ರ ವಾಪಸ್‌ ಬರೋಕೆ ಪ್ರೋತ್ಸಾಹ ಕೊಡ್ತಾರೆ. ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟಿದ್ರೆ ಮತ್ತು ತಾನು ಮಾಡ್ತಿದ್ದ ಪಾಪನ ಬಿಟ್ಟುಬಿಟ್ಟಿದ್ರೆ ಅವನನ್ನ ತಡಮಾಡದೇ ಪುನಃಸ್ಥಾಪನೆ ಮಾಡಬಹುದು.—2 ಕೊರಿಂ. 2:6-8.

12. (ಎ) ಯಾವ ಸಂದರ್ಭಗಳಲ್ಲಿ ಹಿರಿಯರು ತುಂಬ ಹುಷಾರಾಗಿರಬೇಕು? (ಬಿ) ಪಾಪ ಮಾಡಿದ ಕೆಲವ್ರಿಗೆ ಯೆಹೋವನ ಕರುಣೆ ಸಿಗೋದೇ ಇಲ್ಲ ಅಂತ ನಾವು ಯಾಕೆ ಅಂದ್ಕೊಬಾರದು? (ಪಾದಟಿಪ್ಪಣಿ ನೋಡಿ.)

12 ಕೆಲವು ಸಂದರ್ಭಗಳಲ್ಲಿ ಪಾಪ ಮಾಡಿದ ವ್ಯಕ್ತಿನ ಪುನಃಸ್ಥಾಪನೆ ಮಾಡುವಾಗ ಹಿರಿಯರು ತುಂಬ ಹುಷಾರಾಗಿರಬೇಕು. ಉದಾಹರಣೆಗೆ ಮಕ್ಕಳ ಮೇಲಿನ ದೌರ್ಜನ್ಯ, ಧರ್ಮಭ್ರಷ್ಟತೆ, ಮದುವೆ ಮುರಿಯೋಕೆ ಕುತಂತ್ರ ಇಂಥ ಪಾಪಗಳನ್ನ ಮಾಡಿದವರು ನಿಜವಾಗ್ಲೂ ಪಶ್ಚಾತ್ತಾಪ ಪಟ್ಟಿದ್ದಾರಾ ಅಂತ ಹಿರಿಯರು ಚೆನ್ನಾಗಿ ಗಮನಿಸಬೇಕು. (ಮಲಾ. 2:14; 2 ತಿಮೊ. 3:6) ಯಾಕಂದ್ರೆ ಸಭೆಯನ್ನ ಕಾಪಾಡೋ ಜವಾಬ್ದಾರಿ ಹಿರಿಯರಿಗಿದೆ. ಆದ್ರೆ ನಾವೆಲ್ರೂ ಒಂದು ವಿಷ್ಯ ಮನಸ್ಸಲ್ಲಿಡಬೇಕು. ಅದೇನಂದ್ರೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಪಾಪ ಮಾಡಿದ್ರೂ ಅವನು ನಿಜವಾಗ್ಲೂ ಪಶ್ಚಾತ್ತಾಪ ಪಟ್ರೆ ಮತ್ತು ಆ ತಪ್ಪನ್ನ ಬಿಟ್ಟುಬಿಟ್ರೆ ಯೆಹೋವ ಅವನನ್ನ ಮತ್ತೆ ಸಭೆಗೆ ಕರ್ಕೊಳ್ತಾನೆ. ಹಾಗಾಗಿ ಕುಯುಕ್ತಿ ಅಥವಾ ವಂಚನೆ ಮಾಡಿದ ವ್ಯಕ್ತಿ ನಿಜವಾಗ್ಲೂ ಪಶ್ಚಾತ್ತಾಪ ಪಟ್ಟಿದ್ದಾನಾ ಅಂತ ಹಿರಿಯರು ಚೆನ್ನಾಗಿ ಗಮನಿಸ್ತಾರೆ ನಿಜ, ಹಾಗಂತ ಯಾವತ್ತೂ ಇಂಥ ವ್ಯಕ್ತಿಗೆ ಯೆಹೋವನ ಕರುಣೆ ಸಿಗಲ್ಲ ಅಂತ ಅಂದ್ಕೊಳ್ಳಲ್ಲ. c1 ಪೇತ್ರ 2:10.

ಸಭೆಯವರು ಏನು ಮಾಡಬೇಕು?

13. (ಎ) ತಿದ್ದುಪಾಟು ಕೊಡಲಾಗಿರೋ ವ್ಯಕ್ತಿ ಜೊತೆ ನಾವು ಹೇಗೆ ನಡ್ಕೊಳ್ತೀವಿ? (ಬಿ) ಸಭೆಯಿಂದ ಹೊರಗೆ ಹಾಕಿದ ವ್ಯಕ್ತಿ ಜೊತೆ ನಾವು ಹೇಗೆ ನಡ್ಕೊಳ್ತೀವಿ?

13 ನಾವು ಕಳೆದ ಲೇಖನದಲ್ಲಿ ನೋಡಿದ ಹಾಗೆ, ಕೆಲವೊಮ್ಮೆ ಒಬ್ಬ ವ್ಯಕ್ತಿಗೆ ತಿದ್ದುಪಾಟು ಕೊಡಲಾಗಿದೆ ಅಂತ ಸಭೇಲಿ ಪ್ರಕಟಣೆ ಮಾಡ್ತಾರೆ. ಆಗ ನಾವು ಆ ವ್ಯಕ್ತಿ ಜೊತೆ ಸಹವಾಸ ಮಾಡೋದನ್ನ ನಿಲ್ಲಿಸಿಬಿಡಲ್ಲ. ಯಾಕಂದ್ರೆ ಅವನು ಪಶ್ಚಾತ್ತಾಪ ಪಟ್ಟಿರ್ತಾನೆ, ತಾನು ಮಾಡ್ತಿದ್ದ ತಪ್ಪನ್ನ ಬಿಟ್ಟುಬಿಟ್ಟಿರ್ತಾನೆ. (1 ತಿಮೊ. 5:20) ಅಷ್ಟೇ ಅಲ್ಲ, ಅವನಿನ್ನೂ ಸಭೆಯ ಭಾಗವಾಗಿದ್ದಾನೆ ಮತ್ತು ಅವನಿಗೆ ಸರಿಯಾಗಿರೋದನ್ನ ಮಾಡ್ತಾ ಇರೋಕೆ ನಮ್ಮ ಪ್ರೋತ್ಸಾಹನೂ ಬೇಕಿರುತ್ತೆ. (ಇಬ್ರಿ. 10:24, 25) ಅದಕ್ಕೆ ನಾವು ಅವನ ಜೊತೆ ಸಹವಾಸ ಮಾಡ್ತೀವಿ. ಆದ್ರೆ ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ‘ಅವ್ರ ಜೊತೆ ನಾವು ಸೇರೋದೂ ಇಲ್ಲ, ಊಟನೂ ಮಾಡಲ್ಲ.’—1 ಕೊರಿಂ. 5:11.

14. ಒಬ್ಬ ವ್ಯಕ್ತಿನ ಸಭೆಯಿಂದ ಹೊರಗೆ ಹಾಕಿದಾಗ ಅವ್ರ ವಿಷ್ಯದಲ್ಲಿ ನಾವು ಕ್ರೈಸ್ತ ಮನಸ್ಸಾಕ್ಷಿ ಬಳಸಿ ಯಾವ ತೀರ್ಮಾನ ಮಾಡಬಹುದು? (ಚಿತ್ರ ನೋಡಿ.)

14 ಸಭೆಯಿಂದ ಒಬ್ಬ ವ್ಯಕ್ತಿನ ಹೊರಗೆ ಹಾಕಿದಾಗ ನಾವು ಅವನನ್ನ ನೋಡಿನೂ ನೋಡದ ಹಾಗೆ ಇರಬೇಕು ಅಂತ ಇದ್ರ ಅರ್ಥನಾ? ಹಾಗೇನಿಲ್ಲ. ನಾವು ಅವನ ಜೊತೆ ಸೇರೋದಿಲ್ಲ ಅನ್ನೋದು ನಿಜಾನೇ. ಆದ್ರೆ ನಾವು ಆ ವ್ಯಕ್ತಿನ ಕೂಟಕ್ಕೆ ಕರಿಬೇಕಾ ಬೇಡ್ವಾ ಅನ್ನೋ ತೀರ್ಮಾನವನ್ನ ನಮ್ಮ ಕ್ರೈಸ್ತ ಮನಸಾಕ್ಷಿ ಬಳಸಿ ಮಾಡಬಹುದು. ಅವನು ನಿಮ್ಮ ಸಂಬಂಧಿಕ ಆಗಿರಬಹುದು ಅಥವಾ ಈ ಹಿಂದೆ ನಿಮ್ಮ ಸ್ನೇಹಿತ ಆಗಿರಬಹುದು. ಅಂಥವರು ಸಭೆಗೆ ಬಂದಾಗ ಸಭೆಯವರು ಅವ್ರ ಜೊತೆ ಹೇಗೆ ನಡ್ಕೊಳ್ತಾರೆ? ಈ ಹಿಂದೆ ನಾವು ಅವ್ರಿಗೆ ‘ನಮಸ್ಕಾರ’ ಅಂತಾನೂ ಹೇಳ್ತಿರಲಿಲ್ಲ. ಆದ್ರೆ ಈಗ ಈ ವಿಷ್ಯದಲ್ಲೂ ನಾವು ನಮ್ಮ ಕ್ರೈಸ್ತ ಮನಸಾಕ್ಷಿ ಬಳಸಿ ತೀರ್ಮಾನ ಮಾಡಬಹುದು. ಆ ವ್ಯಕ್ತಿಗೆ ‘ನಮಸ್ಕಾರ’ ಹೇಳೋಕೆ ಅಥವಾ ಅವನನ್ನ ಸ್ವಾಗತಿಸೋಕೆ ಕೆಲವ್ರಿಗೆ ಮನಸ್ಸಾಗಬಹುದು. ಹಾಗಂತ ಅವ್ರ ಜೊತೆ ನಾವು ಜಾಸ್ತಿ ಮಾತಾಡಲ್ಲ, ಸೇರಲ್ಲ ಅನ್ನೋದನ್ನ ಮರಿಬಾರದು.

ಸಭೆಯಿಂದ ಯಾರನ್ನ ಹೊರಗೆ ಹಾಕಿದ್ದಾರೋ ಅಂಥವ್ರನ್ನ ಕೂಟಕ್ಕೆ ಕರಿಯೋಕೆ ಅಥವಾ ಕೂಟಕ್ಕೆ ಬಂದಾಗ ಅವ್ರಿಗೆ ನಮಸ್ಕಾರ ಹೇಳೋಕೆ ಸಭೆಯವರು ತಮ್ಮ ಕ್ರೈಸ್ತ ಮನಸ್ಸಾಕ್ಷಿ ಬಳಸಿ ತೀರ್ಮಾನ ಮಾಡಬಹುದು (ಪ್ಯಾರ 14 ನೋಡಿ)


15. ಎರಡನೇ ಯೋಹಾನ 9-11ರಲ್ಲಿ ಯಾರ ಬಗ್ಗೆ ಹೇಳಲಾಗಿದೆ? (“ ಯೋಹಾನ ಮತ್ತು ಪೌಲ ಹೇಳಿದ್ದು ಒಂದೇ ರೀತಿಯ ಪಾಪದ ಬಗ್ಗೆನಾ?” ಅನ್ನೋ ಚೌಕ ನೋಡಿ.)

15 ‘ಪಾಪ ಮಾಡ್ತಿರುವವನಿಗೆ ನಮಸ್ಕಾರ ಹೇಳಿದ್ರೆ ನಾವು ಅವನ “ಕೆಟ್ಟ ಕೆಲಸದಲ್ಲಿ ಪಾಲು ತಗೊಂಡ ಹಾಗೆ ಆಗುತ್ತೆ” ಅಂತ ಬೈಬಲ್‌ ಹೇಳುತ್ತಲ್ವಾ? ಅಂದ್ಮೇಲೆ ನಾವು “ನಮಸ್ಕಾರ” ಹೇಳೋದು ಸರಿನಾ’ ಅಂತ ಕೆಲವ್ರಿಗೆ ಪ್ರಶ್ನೆ ಬರಬಹುದು. (2 ಯೋಹಾನ 9-11 ಓದಿ.) ಈ ವಚನಗಳ ಹಿನ್ನೆಲೆ ನೋಡಿದ್ರೆ ಅಪೊಸ್ತಲ ಯೋಹಾನ ಈ ಮಾತುಗಳನ್ನ ಆಗಿನ ಕಾಲದ ಧರ್ಮಭ್ರಷ್ಟರ ಬಗ್ಗೆ ಮತ್ತು ಕೆಟ್ಟದ್ದನ್ನ ಪ್ರೋತ್ಸಾಹಿಸ್ತಾ ಇದ್ದವ್ರ ಬಗ್ಗೆ ಮಾತ್ರ ಹೇಳಿದ ಅಂತ ಗೊತ್ತಾಗುತ್ತೆ. (ಪ್ರಕ. 2:20) ಹಾಗಾಗಿ ಧರ್ಮಭ್ರಷ್ಟ ಬೋಧನೆಗಳನ್ನ ಕಲಿಸ್ತಾ ಇರೋರನ್ನ ಮತ್ತು ಕೆಟ್ಟತನ ಮಾಡೋಕೆ ಬೇರೆಯವ್ರನ್ನ ಪುಸಲಾಯಿಸ್ತಾ ಇರೋರನ್ನ ಹಿರಿಯರು ಭೇಟಿ ಮಾಡಲ್ಲ. ಆದ್ರೆ ನೆನಪಿಡಿ, ಅಂಥವರು ಮುಂದೆ ಪಶ್ಚಾತ್ತಾಪ ಪಟ್ಟು ಬದಲಾಗಲೂಬಹುದು. ಆದ್ರೆ ಅವರು ಬದಲಾಗೋ ತನಕ ನಾವು ಅವ್ರಿಗೆ ನಮಸ್ಕಾರ ಹೇಳೋದಿಲ್ಲ, ಅವ್ರನ್ನ ಕೂಟಗಳಿಗೂ ಕರೆಯಲ್ಲ.

ಯೆಹೋವನ ತರ ಕೋಮಲ ಕರುಣೆ ತೋರಿಸೋಣ

16-17. (ಎ) ಪಾಪ ಮಾಡಿದವರು ಏನು ಮಾಡಬೇಕು ಅಂತ ಯೆಹೋವ ಆಸೆ ಪಡ್ತಾನೆ? (ಯೆಹೆಜ್ಕೇಲ 18:32) (ಬಿ) ಹಿರಿಯರು ಯೆಹೋವನ ಜೊತೆ ಕೆಲ್ಸ ಮಾಡ್ತಾರೆ ಅಂತ ಹೇಗೆ ತೋರಿಸ್ತಾರೆ?

16 ನಾವು ಈ ಸಂಚಿಕೆಯ ಐದು ಲೇಖನಗಳಲ್ಲಿ ಏನು ಕಲಿತ್ವಿ? ಯೆಹೋವ ದೇವರಿಗೆ ಯಾರೂ ನಾಶ ಆಗೋದು ಇಷ್ಟ ಇಲ್ಲ ಅಂತ ಕಲಿತ್ವಿ. (ಯೆಹೆಜ್ಕೇಲ 18:32 ಓದಿ.) ಪಾಪ ಮಾಡಿದವರು ತನ್ನ ಜೊತೆ ಸಂಬಂಧನ ಮತ್ತೆ ಸರಿ ಮಾಡ್ಕೋಬೇಕು ಅನ್ನೋದೇ ಆತನ ಆಸೆ ಅಂತನೂ ತಿಳ್ಕೊಂಡ್ವಿ. (2 ಕೊರಿಂ. 5:20) ಅದಕ್ಕೇ ತನ್ನ ಜನ್ರು, ಸೇವಕರು ಕೆಟ್ಟ ದಾರಿ ಹಿಡಿದಾಗ ಅವರು ಪಶ್ಚಾತ್ತಾಪ ಪಡೋಕೆ ಮತ್ತು ತನ್ನ ಹತ್ರ ವಾಪಸ್‌ ಬರೋಕೆ ಆತನು ಅವತ್ತಿಂದ ಇವತ್ತಿನವರೆಗೂ ಸಹಾಯ ಮಾಡ್ತಾ ಬಂದಿದ್ದಾನೆ. ಇವತ್ತು ಪಾಪ ಮಾಡಿದವರು ಪಶ್ಚಾತ್ತಾಪ ಪಡೋಕೆ ಹಿರಿಯರು ಯೆಹೋವನ ಜೊತೆ ಸೇರಿ ಕೆಲ್ಸ ಮಾಡ್ತಿದ್ದಾರೆ. ಇದು ಅವರಿಗೆ ಸಿಕ್ಕಿರೋ ದೊಡ್ಡ ಸುಯೋಗ ಅಲ್ವಾ?—ರೋಮ. 2:4; 1 ಕೊರಿಂ. 3:9.

17 ಪಾಪ ಮಾಡಿದವರು ಪಶ್ಚಾತ್ತಾಪ ಪಟ್ಟು ಸಭೆಗೆ ವಾಪಸ್‌ ಬಂದಾಗ ಸ್ವರ್ಗದಲ್ಲಿ ಎಷ್ಟು ಖುಷಿಯಾಗುತ್ತೆ ಅಂತ ಯೋಚಿಸಿ! ಕಳೆದುಹೋಗಿರೋ ಒಂದೊಂದು ಕುರಿನೂ ಸಭೆಗೆ ವಾಪಸ್‌ ಬರ್ತಾ ಇರೋದನ್ನ ನೋಡಿದಾಗ ಯೆಹೋವ ದೇವರಿಗಂತೂ ತುಂಬಾನೇ ಖುಷಿಯಾಗುತ್ತೆ. ಇದಕ್ಕೆಲ್ಲಾ ಕಾರಣ ಯೆಹೋವ ದೇವರ ಕೋಮಲ ಕರುಣೆ ಮತ್ತು ಅಪಾರ ಕೃಪೆ. ಇದನ್ನ ತಿಳ್ಕೊಂಡಾಗ ನಮಗೆ ಯೆಹೋವನ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತಲ್ವಾ?—ಲೂಕ 1:78.

ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು

a ಈ ಲೇಖನದಲ್ಲಿ ಪಾಪ ಮಾಡಿದವನು ಅಂತ ಸಹೋದರರ ಬಗ್ಗೆ ಹೇಳಿದ್ರೂ ಇದ್ರಲ್ಲಿರೋ ಮಾಹಿತಿ ಸಹೋದರಿಯರಿಗೂ ಅನ್ವಯಿಸುತ್ತೆ.

b ಇನ್ಮುಂದೆ ಬಹಿಷ್ಕಾರ ಅನ್ನೋ ಪದವನ್ನ ನಾವು ಬಳಸಲ್ಲ. ಅದ್ರ ಬದ್ಲು 1 ಕೊರಿಂಥ 5:13ರಲ್ಲಿ ಪೌಲ ಹೇಳಿದ ಹಾಗೆ ‘ಅವ್ರನ್ನ ಸಭೆಯಿಂದ ಹೊರಗೆ ಹಾಕಿದ್ದಾರೆ’ ಅಂತ ಹೇಳ್ತೀವಿ.

c ಪಾಪ ಮಾಡಿದ ಕೆಲವ್ರನ್ನ ಕ್ಷಮಿಸೋಕೆ ಆಗೋದೇ ಇಲ್ಲ ಅಂತ ಬೈಬಲ್‌ ಹೇಳುತ್ತೆ. ಯಾಕಂದ್ರೆ ಅವರು ಯಾವಾಗ್ಲೂ ಯೆಹೋವನ ವಿರುದ್ಧ ನಡ್ಕೊಬೇಕು ಅಂತ ತೀರ್ಮಾನ ಮಾಡಿದ್ದಾರೆ. ಇಂಥವ್ರನ್ನ ಕ್ಷಮಿಸಬೇಕಾ ಬೇಡ್ವಾ ಅನ್ನೋ ತೀರ್ಪನ್ನ ಯೆಹೋವ ಮತ್ತು ಯೇಸು ಮಾತ್ರ ಮಾಡ್ತಾರೆ.—ಮಾರ್ಕ 3:29; ಇಬ್ರಿ. 10:26, 27.