ಅಧ್ಯಯನ ಲೇಖನ 17
ಯೆಹೋವ ದೇವರು ನಿಮ್ಮನ್ನ ತುಂಬ ಪ್ರೀತಿಸ್ತಾನೆ!
“ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ.”—ಕೀರ್ತ. 149:4.
ಗೀತೆ 18 ದೇವರ ನಿಷ್ಠಾ ಪ್ರೀತಿ
ಕಿರುನೋಟ *
1. ಯೆಹೋವ ನಮ್ಮಲ್ಲಿ ಯಾವ ಗುಣಗಳನ್ನ ನೋಡ್ತಾನೆ?
ಯೆಹೋವ ದೇವರು “ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ.” (ಕೀರ್ತ. 149:4) ಇದನ್ನ ಕೇಳಿದಾಗ ನಮಗೆ ತುಂಬ ಖುಷಿ ಆಗುತ್ತಲ್ವಾ? ಯೆಹೋವ ದೇವರು ನಮ್ಮಲ್ಲಿರೋ ಒಳ್ಳೇ ಗುಣಗಳನ್ನ ನೋಡ್ತಾನೆ. ಅಷ್ಟೇ ಅಲ್ಲ, ಮುಂದಕ್ಕೆ ನಾವು ಒಳ್ಳೇ ವ್ಯಕ್ತಿಗಳಾಗಬಹುದು ಅನ್ನೋ ಭರವಸೆಯಿಟ್ಟು ನಾವಾತನ ಸ್ನೇಹಿತರಾಗೋಕೆ ಸಹಾಯ ಮಾಡ್ತಾನೆ. ನಾವು ದೇವರಿಗೆ ನಿಷ್ಠೆಯಿಂದ ಇರುವಾಗ ಆತ ನಮ್ಮನ್ನ ತನ್ನ ಹತ್ರ ಸೇರಿಸಿಕೊಳ್ಳದೇ ಇರ್ತಾನಾ?—ಯೋಹಾ. 6:44.
2. ಯೆಹೋವ ತಮ್ಮನ್ನ ಪ್ರೀತಿಸಲ್ಲ ಅಂತ ಕೆಲವ್ರಿಗೆ ಅನಿಸೋಕೆ ಕಾರಣ ಏನು?
2 ‘ಯೆಹೋವ ತನ್ನ ಜನ್ರನ್ನ ಪ್ರೀತಿಸ್ತಾನೆ ಅಂತ ನನಗೆ ಗೊತ್ತು. ಆದ್ರೆ ನನ್ನನ್ನ ಪ್ರೀತಿಸ್ತಾನೆ ಅಂತ ನಂಬೋದು ಹೇಗೆ?’ ಅಂತ ಕೆಲವರು ಯೋಚಿಸ್ತಾರೆ. ಯಾಕೆ? ಒಕ್ಸಾನಾ * ಅನ್ನೋ ಸಹೋದರಿ ಚಿಕ್ಕ ವಯಸ್ಸಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ್ರು. ಅವರು ಹೀಗೆ ಹೇಳ್ತಾರೆ: “ನಾನು ದೀಕ್ಷಾಸ್ನಾನ ಪಡಕೊಂಡಾಗ ತುಂಬ ಖುಷಿಯಾಗಿದ್ದೆ. ಪಯನೀಯರಿಂಗ್ ಸೇವೆನೂ ಶುರು ಮಾಡಿದೆ. ಆದ್ರೆ 15 ವರ್ಷಗಳಾದ ಮೇಲೆ ನನ್ನ ಚಿಕ್ಕ ವಯಸ್ಸಲ್ಲಿ ನಡೆದ ಕಹಿ ಘಟನೆಗಳ ನೆನಪು ಕಾಡೋಕೆ ಶುರುವಾಯ್ತು. ಯೆಹೋವ ನನ್ನ ಕೈಬಿಟ್ಟಿದ್ದಾನೆ, ನನ್ನನ್ನ ಪ್ರೀತಿಸೋದೇ ಇಲ್ಲ” ಅಂತ ಅಂದುಕೊಂಡೆ. ಯೂವ ಅನ್ನೋ ಪಯನೀಯರ್ ಸಹೋದರಿಯ ಬಾಲ್ಯ ಕೂಡ ಅಷ್ಟು ಚೆನ್ನಾಗಿರಲಿಲ್ಲ. ಅವರು ಹೇಳೋದು: “ಯೆಹೋವನ ಮನಸ್ಸನ್ನ ಖುಷಿಪಡಿಸಬೇಕು ಅನ್ನೋ ಆಸೆಯಿಂದ ನನ್ನ ಜೀವನವನ್ನ ಆತನಿಗೆ ಸಮರ್ಪಿಸಿಕೊಂಡೆ. ಆದ್ರೆ ಯೆಹೋವ ನನ್ನನ್ನು ಯಾವತ್ತೂ ಪ್ರೀತಿಸಲ್ವೇನೋ ಅನ್ನೋ ಸಂಶಯ ಮನಸ್ಸಲ್ಲಿ ಕೂತುಬಿಡ್ತು.”
3. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸ್ತೀವಿ?
3 ಈ ಸಹೋದರಿಯರ ತರ ನೀವೂ ಯೆಹೋವ ದೇವರನ್ನ ತುಂಬ ಪ್ರೀತಿಸ್ತೀರಿ. ಆದ್ರೆ ಯೆಹೋವ ನಿಮ್ಮನ್ನ ಪ್ರೀತಿಸ್ತಾನಾ ಅಂತ ನಿಮಗೂ ಕೆಲವೊಮ್ಮೆ ಸಂಶಯ ಬಂದಿರಬಹುದು. ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ನೀವು ನಂಬೋದು ತುಂಬ
ಮುಖ್ಯ ಯಾಕೆ? ಇಂಥ ಯೋಚನೆಗಳಿಂದ ಹೊರಗೆ ಬರೋಕೆ ಯಾವುದು ಸಹಾಯ ಮಾಡುತ್ತೆ? ಈ ಎರಡು ಪ್ರಶ್ನೆಗಳಿಗೆ ಉತ್ತರ ನೋಡೋಣ.ಯೆಹೋವನ ಪ್ರೀತಿ ಬಗ್ಗೆ ಸಂಶಯಪಟ್ಟರೆ ಯಾವ ಅಪಾಯ ಇದೆ?
4. ಯೆಹೋವ ನಮ್ಮನ್ನ ಪ್ರೀತಿಸ್ತಾನಾ ಅಂತ ಸಂಶಯಪಟ್ಟರೆ ಯಾವ ಅಪಾಯ ಇದೆ?
4 ಪ್ರೀತಿಗೆ ತುಂಬ ಶಕ್ತಿ ಇದೆ. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಪೂರ್ತಿ ನಂಬೋದಾದ್ರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಯೆಹೋವನ ಸೇವೆ ಮಾಡೋಕೆ ಆಗುತ್ತೆ. ಒಂದುವೇಳೆ ಯೆಹೋವ ನಮ್ಮನ್ನ ಪ್ರೀತಿಸ್ತಾನಾ ಅಂತ ಸಂಶಯಪಟ್ಟರೆ ನಮ್ಮ ಮನಸ್ಸು ಕುಗ್ಗಿಹೋಗುತ್ತೆ, “ಇರೋ ಬಲನೂ ಹೋಗುತ್ತೆ.” (ಜ್ಞಾನೋ. 24:10) ಹೀಗಾದರೆ ಸೈತಾನನಿಗೆ ನಮ್ಮನ್ನ ಹಿಡಿಯೋಕೆ ಸುಲಭ ಆಗುತ್ತೆ.—ಎಫೆ. 6:16.
5. ಯೆಹೋವ ಪ್ರೀತಿಸ್ತಾನಾ ಅಂತ ಸಂಶಯಪಟ್ಟರೆ ಏನಾಗುತ್ತೆ ಅಂತ ಕೆಲವರ ಅನುಭವದಿಂದ ಗೊತ್ತಾಗುತ್ತೆ?
5 ನಮ್ಮ ಕೆಲವು ಸಹೋದರ ಸಹೋದರಿಯರಿಗೂ ಯೆಹೋವ ತಮ್ಮನ್ನ ಪ್ರೀತಿಸ್ತಿಲ್ಲ, ಕಾಳಜಿ ವಹಿಸ್ತಿಲ್ಲ ಅಂತ ಅನಿಸಿದೆ. ಇದ್ರಿಂದಾಗಿ ಅವರ ನಂಬಿಕೆನೂ ಕಡಿಮೆಯಾಗಿದೆ. ಜೇಮ್ಸ್ ಅನ್ನೋ ಹಿರಿಯ ಹೀಗೆ ಹೇಳ್ತಾರೆ: “ನಾನು ಬೆತೆಲ್ನಲ್ಲಿ ಸೇವೆ ಮಾಡ್ತಿದ್ದೀನಿ, ಬೇರೆ ಭಾಷೆಯ ಸಭೆಗೆ ಹೋಗ್ತಿದ್ದೀನಿ. ಅಲ್ಲಿ ಸೇವೆ ಮಾಡೋಕೆ ತುಂಬ ಖುಷಿ ಆಗುತ್ತೆ. ಆದ್ರೆ ಯೆಹೋವ ನನ್ನ ಸೇವೆನಾ ಸ್ವೀಕರಿಸ್ತಾನಾ ಅನ್ನೋ ಸಂಶಯ ಶುರುವಾಯ್ತು. ಅಷ್ಟೇ ಅಲ್ಲ, ಆತನು ನನ್ನ ಪ್ರಾರ್ಥನೆಗಳನ್ನ ಕೇಳೋದಿಲ್ವೇನೋ ಅಂತನೂ ಅನಿಸುತ್ತಿತ್ತು.” ಪೂರ್ಣ ಸಮಯದ ಸೇವೆ ಮಾಡ್ತಿರೋ ಈವಾ ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ಯೆಹೋವ ನಮ್ಮನ್ನ ಪ್ರೀತಿಸಲ್ಲ ಅಂತ ನಾವು ಅಂದುಕೊಂಡ್ರೆ ಅದ್ರಿಂದ ನಮ್ಮ ಮೇಲೆನೇ ಕೆಟ್ಟ ಪರಿಣಾಮ ಆಗುತ್ತೆ. ಅಂದ್ರೆ ಯೆಹೋವನ ಸೇವೆ ಮಾಡೋಕೆ ನಮಗೆ ಮನಸ್ಸಾಗಲ್ಲ, ಇದ್ರಿಂದ ನಮ್ಮ ಸಂತೋಷವೆಲ್ಲಾ ಹಾಳಾಗಿಬಿಡುತ್ತೆ.” ರೆಗ್ಯುಲರ್ ಪಯನೀಯರ್ ಮತ್ತು ಹಿರಿಯ ಆಗಿ ಸೇವೆ ಮಾಡ್ತಿರೋ ಮೈಕಲ್ ಹೀಗೆ ಹೇಳ್ತಾರೆ: “ದೇವರು ನಿಮ್ಮನ್ನ ಪ್ರೀತಿಸ್ತಾನಾ ಅಂತ ಸಂಶಯಪಟ್ಟರೆ ಆತನಿಂದ ನೀವು ದೂರ ಹೋಗ್ತೀರಿ.”
6. ‘ಯೆಹೋವ ನನ್ನನ್ನ ಪ್ರೀತಿಸಲ್ಲ’ ಅನ್ನೋ ಯೋಚನೆ ನಮ್ಮ ಮನಸ್ಸಲ್ಲಿ ಬೇರೂರದೆ ಇರೋಕೆ ನಾವೇನು ಮಾಡಬೇಕು?
6 ‘ಯೆಹೋವ ನನ್ನನ್ನ ಪ್ರೀತಿಸಲ್ಲ’ ಅನ್ನೋ ಯೋಚನೆ ಯೆಹೋವನ ಮೇಲಿರೋ ನಮ್ಮ ಪ್ರೀತಿಯನ್ನ ಕಡಿಮೆ ಮಾಡಿಬಿಡುತ್ತೆ ಅಂತ ಈ ಮೇಲಿನ ಉದಾಹರಣೆಗಳಿಂದ ತಿಳುಕೊಂಡ್ವಿ. ಆ ಯೋಚನೆ ನಮ್ಮ ಮನಸ್ಸಲ್ಲಿ ಬೇರೂರದ ಹಾಗೆ ನೋಡಿಕೊಳ್ಳೋಕೆ ನಾವೇನು ಮಾಡಬೇಕು? ಅಂಥ ಯೋಚನೆಯನ್ನ ನಮ್ಮ ಮನಸ್ಸಿಂದ ಕಿತ್ತು ಬಿಸಾಡಬೇಕು. ‘ಇಂಥ ಕಳವಳದ ಯೋಚನೆಯನ್ನ ತೆಗೆದುಹಾಕೋಕೆ ಸಹಾಯ ಮಾಡಪ್ಪಾ ಮತ್ತು ಹೃದಯನ, ಯೋಚ್ನೆನ ಕಾಯೋ ಶಾಂತಿಯನ್ನ ಕೊಡಪ್ಪಾ’ ಅಂತ ಯೆಹೋವನನ್ನು ಬೇಡಿಕೊಳ್ಳಬೇಕು. (ಕೀರ್ತ. 139:23; ಪಾದಟಿಪ್ಪಣಿ; ಫಿಲಿ. 4:6, 7) ಈ ಯೋಚನೆ ನಿಮ್ಮೊಬ್ಬರಿಗೇ ಬಂದಿದೆ ಅಂತ ಅಂದುಕೊಳ್ಳಬೇಡಿ. ನಮ್ಮ ಎಷ್ಟೋ ಸಹೋದರ ಸಹೋದರಿಯರಿಗೂ ಇಂಥ ಯೋಚನೆಗಳು ಬಂದಿದೆ. ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ಇಂಥ ಯೋಚನೆ ಬಂದಿತ್ತು. ಅವರಲ್ಲೊಬ್ಬ ಅಪೊಸ್ತಲ ಪೌಲ. ಅವನಿಂದ ನಾವೇನು ಕಲಿಬಹುದು ಅಂತ ಈಗ ನೋಡೋಣ.
ಪೌಲನಿಂದ ನಾವೇನು ಕಲಿಯುತ್ತೇವೆ?
7. ಪೌಲನಿಗೆ ಯಾವ ಸಮಸ್ಯೆಗಳಿದ್ದವು?
7 ತುಂಬ ಜವಾಬ್ದಾರಿಗಳಿದ್ದಾಗ ಅದನ್ನೆಲ್ಲಾ ಮಾಡೋಕೆ ಆಗ್ತಿಲ್ಲ ಅಂತ ನಿಮಗೆ ಅನಿಸ್ತಿದ್ಯಾ? ಪೌಲನಿಗೂ ತುಂಬ ಜವಾಬ್ದಾರಿಗಳಿದ್ದವು. ಅವನಿಗೆ ಕೇವಲ ಒಂದು ಸಭೆ ಬಗ್ಗೆ ಅಲ್ಲ “ಎಲ್ಲ ಸಭೆಗಳ ಬಗ್ಗೆ ಚಿಂತೆ” ಕಾಡ್ತಾ ಇತ್ತು. (2 ಕೊರಿಂ. 11:23-28) ನಿಮಗೆ ಆರೋಗ್ಯದ ಸಮಸ್ಯೆಯಿಂದಾಗಿ ಜೀವನದಲ್ಲಿ ಸಂತೋಷನೇ ಇಲ್ಲದ ಹಾಗೆ ಆಗಿದ್ಯಾ? “ನನ್ನ ದೇಹದಲ್ಲಿ ಒಂದು ಮುಳ್ಳು ಚುಚ್ತಾ ಇದೆ” ಅಂತ ಪೌಲ ಹೇಳಿದನು. ಬಹುಶಃ ಅದು ಅವನಿಗಿದ್ದ ಯಾವುದೋ ಆರೋಗ್ಯ ಸಮಸ್ಯೆ ಆಗಿರಬಹುದು. ಅದು ವಾಸಿ ಆಗಬೇಕು ಅಂತ ಅವನು ಹಂಬಲಿಸ್ತಿದ್ದ. (2 ಕೊರಿಂ. 12:7-10) ನಿಮ್ಮ ಕುಂದು ಕೊರತೆಗಳಿಂದನೇ ನೀವು ಕುಗ್ಗಿ ಹೋಗಿದ್ದೀರಾ? ಪೌಲನೂ ಕೆಲವೊಮ್ಮೆ ಕುಗ್ಗಿ ಹೋಗಿದ್ದನು. “ಛೆ! ನಂಗೆ ಎಂಥ ಗತಿ ಬಂತು!” ಅಂತ ತನ್ನ ಬಗ್ಗೆನೇ ಅವನು ಹೇಳಿಕೊಂಡಿದ್ದಾನೆ. ಯಾಕಂದ್ರೆ ಸರಿಯಾದ ವಿಷಯ ಮಾಡೋಕೆ ಅವನು ಯಾವಾಗಲೂ ಹೋರಾಡ್ತಾ ಇರಬೇಕಾಗಿತ್ತು.—ರೋಮ. 7:21-24.
8. ಪೌಲನಿಗೆ ಕಷ್ಟಗಳಿದ್ದರೂ ಯೆಹೋವನ ಸೇವೆ ಮಾಡೋಕೆ ಎಲ್ಲಿಂದ ಶಕ್ತಿ ಸಿಕ್ಕಿತು?
8 ಪೌಲನಿಗೆ ಇಷ್ಟೆಲ್ಲಾ ಕಷ್ಟ ಬಂದರೂ, ಕುಗ್ಗಿ ಹೋಗಿದ್ದರೂ ಯೆಹೋವನ ಸೇವೆಯನ್ನ ಯಾವತ್ತಿಗೂ ನಿಲ್ಲಿಸಲಿಲ್ಲ. ಇದಕ್ಕೆ ಅವನಿಗೆ ಎಲ್ಲಿಂದ ಶಕ್ತಿ ಸಿಕ್ಕಿತು? ಪೌಲನಿಗೆ ಬಿಡುಗಡೆಯ ಬೆಲೆ ಮೇಲೆ ಪೂರ್ಣ ನಂಬಿಕೆ ಇತ್ತು. ‘ನನ್ನಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬರು ಶಾಶ್ವತ ಜೀವ ಪಡ್ಕೊಳ್ಳುತ್ತಾರೆ’ ಅಂತ ಯೇಸು ಕೊಟ್ಟ ಮಾತಿನ ಬಗ್ಗೆ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (ಯೋಹಾ. 3:15; ರೋಮ. 6:23) ಪೌಲನಿಗೂ ಬೇರೆ ನಂಬಿಗಸ್ತ ಸೇವಕರ ತರ ಬಿಡುಗಡೆ ಬೆಲೆ ಮೇಲೆ ತುಂಬ ನಂಬಿಕೆ ಇತ್ತು. ಎಷ್ಟೇ ದೊಡ್ಡ ಪಾಪ ಮಾಡಿದ್ರೂ ಪಶ್ಚಾತ್ತಾಪ ಪಡೋದಾದ್ರೆ ಯೆಹೋವ ದೇವರು ಖಂಡಿತ ಕ್ಷಮಿಸ್ತಾನೆ ಅಂತ ಅವನು ಅರ್ಥ ಮಾಡಿಕೊಂಡಿದ್ದನು.—ಕೀರ್ತ. 86:5.
9. ಗಲಾತ್ಯ 2:20ರಲ್ಲಿ ಪೌಲ ಹೇಳಿರೋ ಮಾತಿಂದ ನಮಗೇನು ಗೊತ್ತಾಗುತ್ತೆ?
9 ಯೇಸು ಕ್ರಿಸ್ತನನ್ನು ಕಳಿಸಿ ದೇವರು ತೋರಿಸಿದ ಪ್ರೀತಿ ಬಗ್ಗೆನೂ ಪೌಲನಿಗೆ ಗೊತ್ತಿತ್ತು. ದೇವರು ತನ್ನನ್ನ ಪ್ರೀತಿಸ್ತಾನೆ ಅಂತ ಪೂರ್ತಿ ನಂಬಿಕೆ ಅವನಿಗಿತ್ತು. (ಗಲಾತ್ಯ 2:20 ಓದಿ.) ಅದಕ್ಕೇ ಪೌಲ ‘ದೇವರ ಮಗ ನನ್ನನ್ನ ಪ್ರೀತಿಸಿ ನನಗೋಸ್ಕರ ತನ್ನ ಜೀವವನ್ನೇ ಕೊಟ್ಟ’ ಅಂತ ಆ ವಚನದಲ್ಲಿ ಹೇಳಿದ್ದಾನೆ. “ನನ್ನನ್ನ,” “ನನಗೋಸ್ಕರ” ಅಂತ ಪೌಲ ಹೇಳಿದ್ದರಿಂದ ಏನು ಗೊತ್ತಾಗುತ್ತೆ? ‘ಯೆಹೋವ ನನ್ನ ಸಹೋದರರನ್ನ ಖಂಡಿತ ಪ್ರೀತಿಸ್ತಾನೆ, ಆದ್ರೆ ನನ್ನನ್ನು ಮಾತ್ರ ಪ್ರೀತಿಸಲ್ಲ ಅನಿಸುತ್ತೆ’ ಅಂತ ಪೌಲ ಯೋಚಿಸಲಿಲ್ಲ ಅನ್ನೋದು ಇದ್ರಿಂದ ಗೊತ್ತಾಗುತ್ತೆ. “ನಾವು ಪಾಪಿಗಳಾಗಿ ಇದ್ದಾಗ್ಲೇ ಕ್ರಿಸ್ತ ನಮಗೋಸ್ಕರ ಸತ್ತನು” ಅಂತ ಅವನು ರೋಮನ್ನರಿಗೆ ಹೇಳಿದನು. (ರೋಮ. 5:8) ದೇವರು ಒಬ್ಬರನ್ನ ಪ್ರೀತಿಸಿ, ಇನ್ನೊಬ್ಬರನ್ನ ದ್ವೇಷಿಸಲ್ಲ, ತನ್ನ ಎಲ್ಲಾ ಸೇವಕರನ್ನೂ ಒಂದೇ ತರ ಪ್ರೀತಿಸ್ತಾನೆ!
10. ರೋಮನ್ನರಿಗೆ 8:38, 39ರಿಂದ ನಾವೇನು ಕಲಿಬಹುದು?
10 ರೋಮನ್ನರಿಗೆ 8:38, 39 ಓದಿ. ದೇವರು ತನ್ನನ್ನ ಪ್ರೀತಿಸ್ತಾನೆ ಅನ್ನೋದರಲ್ಲಿ ಪೌಲನಿಗೆ ಒಂಚೂರು ಸಂಶಯ ಇರಲಿಲ್ಲ. ‘ಯಾವುದು ನಮ್ಮನ್ನ ದೇವರ ಪ್ರೀತಿಯಿಂದ ದೂರ ಮಾಡಕ್ಕಾಗಲ್ಲ’ ಅಂತ ಅವನು ಬರೆದನು. ಯೆಹೋವ ದೇವರು ಇಸ್ರಾಯೇಲ್ಯರ ಜೊತೆ ತಾಳ್ಮೆಯಿಂದ ನಡಕೊಂಡನು ಅಂತ ಅವನಿಗೆ ಗೊತ್ತಿತ್ತು. ದೇವರು ತನಗೂ ಕರುಣೆ ತೋರಿಸಿದ್ದಾನೆ ಅಂತ ಪೌಲ ಅರ್ಥ ಮಾಡಿಕೊಂಡನು. ‘ನನಗೋಸ್ಕರ ತನ್ನ ಮಗನನ್ನೇ ಕೊಟ್ಟಿರೋ ಯೆಹೋವ ನನ್ನನ್ನ ಪ್ರೀತಿಸದೆ ಇರುತ್ತಾನಾ?’ ಅಂತ ಪೌಲ ಯೋಚಿಸಿರಬಹುದು.—ರೋಮ. 8:32.
11. (ಎ) 1 ತಿಮೊತಿ 1:12-15ರ ಪ್ರಕಾರ ಪೌಲ ಯಾವ ಪಾಪಗಳನ್ನ ಮಾಡಿದ? (ಬಿ) ಹಾಗಿದ್ರೂ ಯೆಹೋವ ತನ್ನನ್ನ ಪ್ರೀತಿಸ್ತಾನೆ ಅಂತ ಪೌಲ ಯಾಕೆ ನಂಬಿದ?
11 1 ತಿಮೊತಿ 1:12-15 ಓದಿ. ಪೌಲ ಹಿಂದೆ ಮಾಡಿದ ತಪ್ಪುಗಳನ್ನ ನೆನಸಿಕೊಂಡು ಖಂಡಿತ ಕೊರಗಿರಬಹುದು. ಅವನು ತನ್ನನ್ನೇ “ದೊಡ್ಡ ಪಾಪಿ” ಅಂತ ಹೇಳಿಕೊಂಡಿದ್ದಾನೆ. ಇದಕ್ಕೆ ಕಾರಣನೂ ಇತ್ತು. ಅವನು ಸತ್ಯಕ್ಕೆ ಬರೋ ಮುಂಚೆ ಊರೂರು ಅಲೆದು ಕ್ರೈಸ್ತರನ್ನು ಹುಡುಕಿ ಅವರಿಗೆ ಹಿಂಸೆ ಕೊಟ್ಟ, ಅವರಲ್ಲಿ ಕೆಲವರನ್ನ ಜೈಲಿಗೆ ಹಾಕಿಸಿದ, ಇನ್ನೂ ಕೆಲವರನ್ನ ಕೊಲ್ಲಿಸೋಕೆ ಬೆಂಬಲ ಕೊಟ್ಟ. (ಅ. ಕಾ. 26:10, 11) ಸ್ವಲ್ಪ ಯೋಚಿಸಿ, ತನ್ನಿಂದಾಗಿ ಪ್ರಾಣ ಕಳಕೊಂಡ ವ್ಯಕ್ತಿಯ ಮಗನನ್ನು ಸಭೆಯಲ್ಲಿ ಭೇಟಿ ಆದಾಗ ಪೌಲನಿಗೆ ಹೇಗಾಗಿರಬೇಕು? ಹಿಂದೆ ಮಾಡಿದ್ದು ತಪ್ಪು ಅಂತ ಪೌಲನಿಗೆ ಅರಿವಾಯ್ತು, ಆದ್ರೆ ಆ ತಪ್ಪುಗಳನ್ನೆಲ್ಲಾ ಹಿಂದೆ ಹೋಗಿ ಸರಿ ಮಾಡಕ್ಕಾಗಲ್ಲ ಅಂತನೂ ಗೊತ್ತಿತ್ತು. ಯೇಸು ತನಗೋಸ್ಕರನೇ ಪ್ರಾಣ ಕೊಟ್ಟಿದ್ದಾನೆ ಅಂತ ಅವನು ಅರ್ಥಮಾಡಿಕೊಂಡ. ಅದಕ್ಕೆ “ದೇವರ ಅಪಾರ ಕೃಪೆಯಿಂದಾನೇ ನಾನು ಅಪೊಸ್ತಲನಾಗಿದ್ದೀನಿ” ಅಂತ ಬರೆದ. (1 ಕೊರಿಂ. 15:3, 10) ಇದ್ರಿಂದ ನಾವೇನು ಕಲಿಬಹುದು? ಯೇಸು ನನಗೋಸ್ಕರ ಪ್ರಾಣ ಕೊಟ್ಟಿದ್ದಾನೆ, ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳೋಕೆ ದಾರಿ ಮಾಡಿಕೊಟ್ಟಿದ್ದಾನೆ ಅಂತ ಒಪ್ಪಿಕೊಳ್ಳಬೇಕು. (ಅ. ಕಾ. 3:19) ಹಿಂದೆ ನಾವು ಯೆಹೋವನ ಸಾಕ್ಷಿ ಆಗಿರಲಿ ಆಗದಿರಲಿ ಆಗ ನಾವು ಮಾಡಿದ ತಪ್ಪುಗಳು ದೇವರಿಗೆ ಮುಖ್ಯ ಅಲ್ಲ, ಈಗ ನಾವೇನು ಮಾಡ್ತಿದ್ದೇವೆ, ಮುಂದೆ ನಾವೇನು ಮಾಡ್ತೇವೆ ಅನ್ನೋದು ದೇವರಿಗೆ ಮುಖ್ಯ.—ಯೆಶಾ. 1:18.
12. ದೇವರ ಪ್ರೀತಿ ಪಡೆಯೋಕೆ ನಮಗೆ ಯೋಗ್ಯತೆ ಇಲ್ಲ ಅಂತ ಅನಿಸಿದರೆ 1 ಯೋಹಾನ 3:19, 20ರಲ್ಲಿರೋ ಯಾವ ಮಾತನ್ನ ನಾವು ನೆನಪಲ್ಲಿಡಬೇಕು?
12 ‘ನಮ್ಮ ಪಾಪಗಳನ್ನ ಮುಚ್ಚೋಕೆ ಯೇಸು ಪ್ರಾಣ ಕೊಟ್ಟಿದ್ದಾನೆ. ಆದ್ರೆ ಅದನ್ನ ಪಡಕೊಳ್ಳೋಕೆ ನಮಗೆ ಯೋಗ್ಯತೆ ಇಲ್ಲ’ ಅಂತ ನಿಮಗೆ ಅನಿಸ್ತಿದ್ಯಾ? ನಿಮಗೆ ಯಾಕೆ ಹಾಗೆ ಅನಿಸುತ್ತೆ? ನಮ್ಮ ಹೃದಯ ನಮ್ಮನ್ನ ವಂಚಿಸುತ್ತೆ, ಬೇರೆಯವರ ಪ್ರೀತಿ ಪಡೆಯೋಕೆ ನಮಗೆ ಯೋಗ್ಯತೆ ಇಲ್ಲ ಅಂತ ಯೋಚಿಸೋ ಹಾಗೆ ಮಾಡುತ್ತೆ. (1 ಯೋಹಾನ 3:19, 20 ಓದಿ.) ಹೀಗೆ ಅನಿಸಿದಾಗ ಏನು ಮಾಡಬೇಕು? “ದೇವರು ನಮ್ಮ ಹೃದಯಕ್ಕಿಂತ ತುಂಬ ದೊಡ್ಡವನು” ಅನ್ನೋದನ್ನ ನೆನಪಿಸಿಕೊಳ್ಳಬೇಕು. ನಮ್ಮ ಮನಸ್ಸು ‘ದೇವರು ನಮ್ಮನ್ನ ಪ್ರೀತಿಸಲ್ಲ’ ಅಂತ ಹೇಳಬಹುದು. ಆದ್ರೆ ನಿಜ ಏನಂದ್ರೆ ದೇವರು ನಮ್ಮ ತಪ್ಪುಗಳನ್ನ ಕ್ಷಮಿಸ್ತಾನೆ, ನಮ್ಮನ್ನ ಪ್ರೀತಿಸ್ತಾನೆ. ಇದನ್ನ ನಾವು ನಂಬಬೇಕು. ಇಂಥ ನಂಬಿಕೆ ಬೆಳೆಸಿಕೊಳ್ಳೋಕೆ ಬೈಬಲನ್ನು ಓದಿ ಅಧ್ಯಯನ ಮಾಡ್ತಾ ಇರಬೇಕು, ಪ್ರಾರ್ಥನೆ ಮಾಡ್ತಾ ಇರಬೇಕು ಮತ್ತು ಸಹೋದರ ಸಹೋದರಿಯರ ಜೊತೆ ಯಾವಾಗಲೂ ಬೆರೆಯಬೇಕು. ಇದು ತುಂಬ ಮುಖ್ಯ. ಯಾಕೆ?
ಬೈಬಲ್ ಅಧ್ಯಯನ, ಪ್ರಾರ್ಥನೆ ಮತ್ತು ಸಭೆಯವರ ಸ್ನೇಹದಿಂದ ಸಿಗೋ ಸಹಾಯ
13. ಬೈಬಲನ್ನು ಓದಿ ಅಧ್ಯಯನ ಮಾಡೋದ್ರಿಂದ ನಮಗೆ ಯಾವ ಸಹಾಯ ಸಿಗುತ್ತೆ? (“ ಬೈಬಲ್ ಹೇಗೆ ಸಹಾಯ ಮಾಡುತ್ತೆ?” ಚೌಕ ಸಹ ನೋಡಿ.)
13 ಪ್ರತಿದಿನ ಬೈಬಲನ್ನು ಓದಿ ಅಧ್ಯಯನ ಮಾಡಿ. ಆಗ ಯೆಹೋವ ದೇವರ ಒಳ್ಳೊಳ್ಳೆ ಗುಣಗಳ ಬಗ್ಗೆ ತಿಳುಕೊಳ್ಳೋಕೆ ಆಗುತ್ತೆ. ಯೆಹೋವ ನಿಮ್ಮನ್ನ ಎಷ್ಟು ಪ್ರೀತಿ ಮಾಡ್ತಾನೆ ಅಂತ ಅರ್ಥ ಮಾಡಿಕೊಳ್ಳೋಕೆ ಆಗುತ್ತೆ. ಬೈಬಲಿನ ಕೆಲವು ವಚನಗಳನ್ನ ಪ್ರತಿದಿನ ಓದಿ ಧ್ಯಾನಿಸೋದರಿಂದ ಸರಿಯಾದ ರೀತಿಯಲ್ಲಿ ಯೋಚನೆ ಮಾಡೋಕೆ ಹಾಗೂ ಮನಸ್ಸು ಮತ್ತು ಹೃದಯದಲ್ಲಿರೋ “ವಿಷ್ಯವನ್ನ ಸರಿಮಾಡೋಕೆ” ಸಹಾಯ ಆಗುತ್ತೆ. (2 ತಿಮೊ. 3:16) ಕೆವಿನ್ ಅನ್ನೋ ಹಿರಿಯನಿಗೆ ತಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸುತ್ತಿತ್ತು. ಅವರು ಹೀಗೆ ಹೇಳ್ತಾರೆ: “ಕೀರ್ತನೆ 103ನ್ನ ಓದಿ ಧ್ಯಾನಿಸಿದ್ದರಿಂದ ನನ್ನ ಯೋಚನೆಗಳನ್ನ ಸರಿ ಮಾಡಿಕೊಳ್ಳೋಕೆ ಮತ್ತು ಯೆಹೋವ ನಿಜವಾಗ್ಲೂ ಏನು ಯೋಚಿಸ್ತಾರೆ ಅಂತ ಅರ್ಥ ಮಾಡಿಕೊಳ್ಳೋಕೆ ಸಹಾಯ ಆಯ್ತು.” ಈವಾ ಹೀಗೆ ಹೇಳ್ತಾಳೆ: “ದಿನದ ಕೊನೆಯಲ್ಲಿ ನಾನು ಯೆಹೋವನ ಯೋಚನೆಗಳೇನು ಅಂತ ಯೋಚಿಸ್ತೀನಿ. ಇದ್ರಿಂದ ನೆಮ್ಮದಿ ಪಡಕೊಳ್ಳೋಕೆ ಮತ್ತು ನಂಬಿಕೆ ಹೆಚ್ಚಿಸಿಕೊಳ್ಳೋಕೆ ಸಹಾಯ ಆಗಿದೆ.”
14. ಪ್ರಾರ್ಥನೆಯಿಂದ ನಮಗೆ ಯಾವ ಸಹಾಯ ಸಿಗುತ್ತೆ?
14 ಪ್ರಾರ್ಥನೆ ಮಾಡ್ತಾ ಇರಿ. (1 ಥೆಸ. 5:17) ಒಬ್ಬರ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ನಾವು ಯಾವಾಗಲೂ ಅವರ ಹತ್ರ ಮಾತಾಡ್ತಾ ಇರಬೇಕು. ನಮಗೆ ಅನಿಸಿದ್ದನ್ನೆಲ್ಲಾ ಅವರ ಹತ್ರ ಹೇಳಿಕೊಳ್ಳಬೇಕು. ಯೆಹೋವ ದೇವರ ಹತ್ರನೂ ಇದನ್ನೇ ಮಾಡಬೇಕು. ಆತನ ಹತ್ರ ನಮ್ಮ ಭಾವನೆಗಳನ್ನ, ಯೋಚನೆಗಳನ್ನ, ಚಿಂತೆಗಳನ್ನ ಹೇಳಿಕೊಳ್ಳಬೇಕು. ಆಗ ನಮಗೆ ಆತನ ಮೇಲೆ ನಂಬಿಕೆ ಇದೆ, ಆತ ನಮ್ಮನ್ನ ಪ್ರೀತಿಸ್ತಾನೆ ಅನ್ನೋದು ನಮಗೆ ಗೊತ್ತು ಅಂತ ತೋರಿಸಿಕೊಡ್ತೀವಿ. (ಕೀರ್ತ. 94:17-19; 1 ಯೋಹಾ. 5:14, 15) ಯೂವ ಹೀಗೆ ಹೇಳ್ತಾರೆ: “ನಾನು ಪ್ರಾರ್ಥನೆ ಮಾಡುವಾಗ ಆ ದಿನ ಏನು ನಡಿತು ಅಂತ ಹೇಳೋದ್ರ ಜೊತೆಗೆ ನನಗೆ ಅನಿಸ್ತಿದ್ದ ಭಾವನೆಗಳನ್ನೂ ಯೆಹೋವನ ಹತ್ರ ಹೇಳಿಕೊಂಡೆ. ಇದ್ರಿಂದ ಯೆಹೋವ ಒಂದು ಕಂಪನಿಯ ಬಾಸ್ ತರ ಅಲ್ಲ, ತನ್ನ ಮಕ್ಕಳನ್ನ ನಿಜವಾಗ್ಲೂ ಪ್ರೀತಿಸೋ ತಂದೆ ತರ ಇದ್ದಾನೆ ಅನ್ನೋದನ್ನ ನಿಧಾನವಾಗಿ ಅರ್ಥಮಾಡಿಕೊಂಡೆ.”—“ ನೀವಿದನ್ನ ಓದಿದ್ದೀರಾ?” ಚೌಕ ನೋಡಿ.
15. ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ ಅಂತ ಯೆಹೋವ ಹೇಗೆ ತೋರಿಸಿಕೊಟ್ಟಿದ್ದಾನೆ?
15 ಸಭೆಯವರ ಜೊತೆ ಸ್ನೇಹ ಮಾಡಿಕೊಳ್ಳಿ. ಅವರು ಯೆಹೋವ ನಮಗೆ ಕೊಟ್ಟಿರೋ ಉಡುಗೊರೆ. (ಯಾಕೋ. 1:17) ‘ಎಲ್ಲ ಸಮಯದಲ್ಲೂ ಪ್ರೀತಿಸುವಂಥ’ ಸಹೋದರ ಸಹೋದರಿಯರನ್ನು ದೇವರು ನಮಗೆ ಕೊಟ್ಟಿದ್ದಾನೆ. (ಜ್ಞಾನೋ. 17:17) ಇದ್ರಿಂದ ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ ಅಂತ ತೋರಿಸಿಕೊಟ್ಟಿದ್ದಾನೆ. ಪೌಲನಿಗೂ ಸಹೋದರ ಸಹೋದರಿಯರಿಂದ ಸಹಾಯ ಸಿಕ್ಕಿತು. ಅಂಥವ್ರಲ್ಲಿ ಕೆಲವರ ಬಗ್ಗೆ ಕೊಲೊಸ್ಸೆ ಸಭೆಯವರಿಗೆ ಬರೆದ ಪತ್ರದಲ್ಲಿ ತಿಳಿಸ್ತಾ “ಇವರು ನನ್ನನ್ನ ಬಲಪಡಿಸ್ತಾ ಸಹಾಯ ಮಾಡಿದ್ದಾರೆ” ಅಂತ ಹೇಳಿದ್ದಾನೆ. (ಕೊಲೊ. 4:10, 11) ಯೇಸುಗೂ ಸಹಾಯ ಬೇಕಿತ್ತು. ಆಗ ಶಿಷ್ಯರಿಂದ ಮತ್ತು ದೇವದೂತರಿಂದ ಅವನು ಸಹಾಯ ಪಡಕೊಂಡನು.—ಲೂಕ 22:28, 43.
16. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಅರ್ಥ ಮಾಡಿಕೊಳ್ಳೋಕೆ ಸ್ನೇಹಿತರು ಹೇಗೆ ಸಹಾಯ ಮಾಡ್ತಾರೆ?
16 ಸಭೆಯಲ್ಲಿರೋ ಸ್ನೇಹಿತರಿಂದ ನೀವು ಸಹಾಯ ಪಡಕೊಳ್ತಿದ್ದೀರಾ? ಯೆಹೋವನ ಜೊತೆ ಒಳ್ಳೇ ಸಂಬಂಧ ಇರೋ ಒಬ್ಬ ಫ್ರೆಂಡ್ ಹತ್ರ ನಿಮ್ಮ ಚಿಂತೆಗಳನ್ನ ಹೇಳಿಕೊಂಡ್ರೆ ನಿಮ್ಮಲ್ಲಿ ನಂಬಿಕೆ ಕಮ್ಮಿ ಇದೆ ಅಂತ ಅರ್ಥ ಅಲ್ಲ. ನಿಜ ಹೇಳಬೇಕಂದ್ರೆ ಇದ್ರಿಂದ ನಿಮ್ಮ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. ಇದು ಹೇಗೆ ಅಂತ ಜೇಮ್ಸ್ ಅವರ ಮಾತಿಂದ ಗೊತ್ತಾಗುತ್ತೆ. ಅವರು ಹೇಳೋದು: “ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಂಡಿರೋ ಕ್ರೈಸ್ತರಿಂದ ನನಗೆ ತುಂಬ ಸಹಾಯ ಆಗಿದೆ. ಯೆಹೋವ ನನ್ನನ್ನ ಪ್ರೀತಿಸುವಷ್ಟು ಯೋಗ್ಯತೆ ನನಗಿಲ್ಲ ಅಂತ ಅನಿಸಿದಾಗೆಲ್ಲ ಅದನ್ನ ಅವರ ಹತ್ರ ಹಂಚಿಕೊಳ್ತೀನಿ. ಅವರು ತಾಳ್ಮೆಯಿಂದ ನನ್ನ ಮಾತುಗಳನ್ನ ಕೇಳಿಸಿಕೊಳ್ತಾರೆ, ಅವರು ನನ್ನನ್ನ ತುಂಬ ಪ್ರೀತಿಸ್ತಾರೆ ಅಂತನೂ ಹೇಳ್ತಾರೆ. ಇದ್ರಿಂದಾಗಿ ಯೆಹೋವನಿಗೆ ನನ್ನ ಮೇಲೆ ತುಂಬ ಪ್ರೀತಿ ಇದೆ, ಕಾಳಜಿ ಇದೆ ಅಂತ ಅರ್ಥ ಮಾಡಿಕೊಳ್ಳೋಕೆ ಆಗಿದೆ.” ಹಾಗಾದ್ರೆ ಸಹೋದರ ಸಹೋದರಿಯರ ಜೊತೆ ಸ್ನೇಹ ಮಾಡಿಕೊಂಡು ಅದನ್ನ ಕಾಪಾಡಿಕೊಳ್ಳೋದು ಎಷ್ಟು ಒಳ್ಳೇದಲ್ವಾ?
ಯೆಹೋವನ ಪ್ರೀತಿಯನ್ನ ಉಳಿಸ್ಕೊಳ್ಳಿ
17-18. (ಎ) ನಾವು ಯಾರ ಮಾತನ್ನ ಕೇಳಬೇಕು? (ಬಿ) ಯಾಕೆ?
17 ಸರಿಯಾದದ್ದನ್ನ ಮಾಡಬೇಕು ಅನ್ನೋ ಹೋರಾಟದಲ್ಲಿ ನಾವು ಸೋತು ಹೋಗಬೇಕು ಅಂತ ಸೈತಾನ ಬಯಸ್ತಾನೆ. ನಮಗೆ ಯೋಗ್ಯತೆ ಇಲ್ಲ ಯೆಹೋವ ನಮ್ಮನ್ನ ಪ್ರೀತಿಸಲ್ಲ, ಕಾಪಾಡಲ್ಲ ಅಂತ ನಾವು ನಂಬಬೇಕು ಅನ್ನೋದೇ ಅವನ ಆಸೆ. ಆದ್ರೆ ಅದು ಸತ್ಯ ಅಲ್ಲ. ಇದನ್ನೇ ನಾವು ಈ ಲೇಖನದಲ್ಲಿ ಕಲಿತ್ವಿ.
18 ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ. ನೀವು ಆತನ ಸೊತ್ತು. ಯೇಸು ತರ ನೀವು ಕೂಡ ಆತನ ಮಾತನ್ನ ಕೇಳಿದ್ರೆ ‘ಆತನ ಪ್ರೀತಿಯನ್ನ ಉಳಿಸಿಕೊಳ್ತೀರ.’ (ಯೋಹಾ. 15:10) ಹಾಗಾಗಿ ಸೈತಾನ ಹೇಳೋ ಮಾತನ್ನ ಕಿವಿಗೆ ಹಾಕೊಳ್ಳಬೇಡಿ. ನಿಮ್ಮ ಹೃದಯ ಹೇಳೋದನ್ನ ನಂಬಬೇಡಿ. ಬದಲಿಗೆ ಪ್ರತಿಯೊಬ್ಬರಲ್ಲೂ ಒಳ್ಳೇದನ್ನ ಹುಡುಕೋ ಯೆಹೋವನ ಮಾತನ್ನು ಕೇಳಿ. ಆತ “ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ,” ನಿಮ್ಮನ್ನೂ ನೋಡಿ ಖುಷಿಪಡ್ತಾನೆ! ಅನ್ನೋದನ್ನ ನಂಬಿ.
ಗೀತೆ 130 ಜೀವವೆಂಬ ಅದ್ಭುತ
^ ಪ್ಯಾರ. 5 ಕೆಲವು ಸಹೋದರ ಸಹೋದರಿಯರಿಗೆ ಕಷ್ಟಗಳಿಂದಾಗಿ ಯೆಹೋವ ದೇವರು ನಿಜವಾಗಲೂ ಅವರನ್ನ ಪ್ರೀತಿಸ್ತಾನಾ ಅನ್ನೋ ಪ್ರಶ್ನೆ ಬರುತ್ತೆ. ಈ ಲೇಖನದಲ್ಲಿ ನಾವು ಯೆಹೋವ ದೇವರಿಗೆ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ ಅಂತ ನಂಬೋದಕ್ಕೆ ಇರೋ ಕಾರಣಗಳ ಬಗ್ಗೆ ಚರ್ಚಿಸ್ತೇವೆ. ಅಷ್ಟೇ ಅಲ್ಲ, ದೇವರು ತಮ್ಮನ್ನ ಪ್ರೀತಿಸಲ್ವೇನೋ ಅಂತ ಸಂಶಯ ಇದ್ರೆ ಅದನ್ನ ಬಗೆಹರಿಸಿಕೊಳ್ಳೋಕೆ ಏನು ಮಾಡಬೇಕು ಅಂತನೂ ಕಲಿಯುತ್ತೇವೆ.
^ ಪ್ಯಾರ. 2 ಕೆಲವು ಹೆಸರುಗಳು ಬದಲಾಗಿದೆ.
^ ಪ್ಯಾರ. 67 ಚಿತ್ರ ವಿವರಣೆ: ಪೌಲ ಸತ್ಯಕ್ಕೆ ಬರೋ ಮುಂಚೆ ಕ್ರೈಸ್ತರಿಗೆ ಹಿಂಸೆ ಕೊಟ್ಟು ಜೈಲಿಗೆ ಹಾಕಿಸ್ತಿದ್ದ. ಆದ್ರೆ ಯೇಸು ತನಗೋಸ್ಕರ ಜೀವ ಕೊಟ್ಟನು ಅಂತ ನಂಬಿದ ಮೇಲೆ ಬದಲಾದ. ಅಷ್ಟೇ ಅಲ್ಲ, ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಿದ. ಅವರಲ್ಲಿ ಪೌಲ ಮುಂಚೆ ಹಿಂಸೆ ಕೊಟ್ಟ ಕ್ರೈಸ್ತರ ಸಂಬಂಧಿಕರೂ ಇದ್ದಿರಬಹುದು.