ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಮೆಫೀಬೋಶೆತನಿಗೆ ಸಹಾನುಭೂತಿ ತೋರಿಸಿದ” ದಾವೀದ, ಆಮೇಲೆ ಮೆಫೀಬೋಶೆತನನ್ನ ಸಾಯಿಸೋಕೆ ಗಿಬ್ಯೋನ್ಯರ ಕೈಗೆ ಯಾಕೆ ಒಪ್ಪಿಸಿದ? (2 ಸಮುವೇಲ 21:7-9)

ಈ ಘಟನೆಯನ್ನ ಮೇಲೆ-ಮೇಲೆ ಓದಿದರೆ ಹಾಗೆ ಅನಿಸಬಹುದು. ಆದ್ರೆ ಈ ವಚನದಲ್ಲಿ ಇಬ್ಬರು ಮೆಫೀಬೋಶೆತರ ಬಗ್ಗೆ ಮಾತಾಡುತ್ತೆ. ಬನ್ನಿ, ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳೊಣ.

ರಾಜ ಸೌಲನಿಗೆ ಏಳು ಗಂಡುಮಕ್ಕಳು ಇಬ್ಬರು ಹೆಣ್ಣುಮಕ್ಕಳಿದ್ದರು. ಮೊದಲನೇ ಮಗನ ಹೆಸರು ಯೋನಾತಾನ. ಆಮೇಲೆ ಸೌಲನಿಗೆ ಮತ್ತು ರಿಚ್ಪಳಿಗೆ ಒಂದು ಮಗ ಹುಟ್ಟಿದ. ಅವನ ಹೆಸರು ಮೆಫೀಬೋಶೆತ್‌. ಆದ್ರೆ ನಾವು ಗಮನಿಸಬೇಕಾದ ಇನ್ನೊಂದು ವಿಷಯ ಏನಂದ್ರೆ, ಯೋನಾತಾನನ ಮಗನ ಹೆಸರೂ ಮೆಫೀಬೋಶೆತ್‌. ಹಾಗಾದ್ರೆ ಸೌಲನಿಗೆ ಮೆಫೀಬೋಶೆತ್‌ ಅನ್ನೋ ಮಗನೂ ಇದ್ದ ಮತ್ತು ಮೊಮ್ಮಗನೂ ಇದ್ದ.

ರಾಜ ಸೌಲ ಇಸ್ರಾಯೇಲ್ಯರ ಜೊತೆ ವಾಸಿಸುತ್ತಿದ್ದ ಗಿಬ್ಯೋನ್ಯರ ಹೆಸರೇ ಇಲ್ಲದ ಹಾಗೆ ಮಾಡಬೇಕು ಅಂದುಕೊಂಡ. ಅದಕ್ಕೆ ಅವರಲ್ಲಿ ತುಂಬ ಜನರನ್ನ ಸಾಯಿಸಿಬಿಟ್ಟ. ಆದ್ರೆ ಇದು ತಪ್ಪಾಗಿತ್ತು. ಯಾಕಂದ್ರೆ ಯೆಹೋಶುವನ ಕಾಲದಲ್ಲಿ ಇಸ್ರಾಯೇಲ್ಯರು ಗಿಬ್ಯೋನ್ಯರ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು.—ಯೆಹೋ. 9:3-27.

ಸೌಲನ ಕಾಲದಲ್ಲೂ ಆ ಒಪ್ಪಂದ ಜಾರಿಯಲ್ಲಿತ್ತು. ಆದ್ರೆ ಸೌಲ ಅದನ್ನ ಮೀರಿದ, ಗಿಬ್ಯೋನ್ಯರನ್ನು ಪೂರ್ತಿಯಾಗಿ ಸಂಹಾರ ಮಾಡೋಕೆ ಅವನು ಪ್ರಯತ್ನ ಮಾಡಿದ. ಇದ್ರಿಂದ “ಸೌಲನ ಮೇಲೆ, ಅವನ ಕುಟುಂಬದವ್ರ ಮೇಲೆ ರಕ್ತಾಪರಾಧ” ಬಂತು. (2 ಸಮು. 21:1) ಈಗ ದಾವೀದ ರಾಜನಾಗಿದ್ದಾನೆ. ಗಿಬ್ಯೋನ್ಯರು ಅವನ ಹತ್ತಿರ ಬಂದು ಸೌಲ ತಮಗೆ ಮಾಡಿದ ಅನ್ಯಾಯದ ಬಗ್ಗೆ ಹೇಳಿದರು. ಈಗ ಯೆಹೋವ ತನ್ನ ಜನರನ್ನ ಆಶೀರ್ವದಿಸಬೇಕಂದ್ರೆ ಆಗಿರೋ ತಪ್ಪಿಗೆ ಪ್ರಾಯಶ್ಚಿತ್ತ ಆಗಬೇಕು. ಅದಕ್ಕೆ ಏನು ಮಾಡಬೇಕು ಅಂತ ಅವರ ಹತ್ತಿರ ಕೇಳಿದ. ಅದಕ್ಕೆ ಅವರು ದುಡ್ಡು ಕೇಳದೇ “ನಮ್ಮನ್ನ ಸರ್ವನಾಶ ಮಾಡೋಕೆ ಸಂಚು ಹೂಡಿದ್ದವನ” ಏಳು ಗಂಡು ಮಕ್ಕಳನ್ನ ನಮ್ಮ ಕೈಗೆ ಒಪ್ಪಿಸು ಅವರನ್ನ ಕೊಂದು ಹಾಕ್ತೀವಿ ಅಂತ ಹೇಳಿದ್ರು. (ಅರ. 35:30, 31) ಆಗ ದಾವೀದ, ಅವರು ಕೇಳಿದ ತರಾನೇ ಮಾಡಿದ.—2 ಸಮು. 21:2-6.

ಈಗಾಗಲೇ ಸೌಲ ಮತ್ತು ಯೋನಾತಾನ ಯುದ್ಧದಲ್ಲಿ ಸತ್ತು ಹೋಗಿದ್ದರು, ಆದ್ರೆ ಯೋನಾತಾನನ ಮಗ ಮೆಫೀಬೋಶೆತ್‌ ಇನ್ನೂ ಬದುಕಿದ್ದ. ಅವನು ಚಿಕ್ಕವನಾಗಿ ಇದ್ದಾಗಲಿಂದಾನೇ ಕುಂಟನಾಗಿದ್ದ. ಅಷ್ಟೇ ಅಲ್ಲ, ಸೌಲ ಗಿಬ್ಯೋನ್ಯರ ಮೇಲೆ ಆಕ್ರಮಣ ಮಾಡಿದಾಗ ಈ ಮೆಫೀಬೋಶೆತ್‌ ಅವನ ಜೊತೆ ಶಾಮೀಲಾಗಿರಲಿಲ್ಲ. ದಾವೀದ ಯೋನಾತಾನನಿಗೆ ಮತ್ತು ಅವನ ಸಂತತಿಗೆ ಒಳ್ಳೇದು ಮಾಡ್ತೀನಿ ಅಂತ ಮಾತು ಕೊಟ್ಟಿದ್ದ. (1 ಸಮು. 18:1; 20:42) “ರಾಜ ದಾವೀದ ಯೋನಾತಾನನ ಮಗ ಸೌಲನ ಮೊಮ್ಮಗ ಮೆಫೀಬೋಶೆತನಿಗೆ ಸಹಾನುಭೂತಿ ತೋರಿಸಿದ. ಯಾಕಂದ್ರೆ ದಾವೀದ, ಯೋನಾತಾನ ಯೆಹೋವನ ಮುಂದೆ ಒಬ್ರಿಗೊಬ್ರು ಮಾತು ಕೊಟ್ಟಿದ್ರು” ಅಂತ ಬೈಬಲ್‌ ಹೇಳುತ್ತೆ.—2 ಸಮು. 21:7.

ದಾವೀದ ಗಿಬ್ಯೋನ್ಯರು ಕೇಳಿಕೊಂಡ ತರಾನೇ ಸೌಲನ ಮಗ ಮೆಫೀಬೋಶೆತನನ್ನು ಮತ್ತು ಇನ್ನೊಬ್ಬ ಮಗನನ್ನು ಹಾಗೂ ಸೌಲನ ಐದು ಮೊಮ್ಮಕ್ಕಳನ್ನು ಅವರ ಕೈಗೆ ಒಪ್ಪಿಸಿದ. (2 ಸಮು. 21:8, 9) ಹೀಗೆ ಇಸ್ರಾಯೇಲ್ಯರ ದೇಶದ ಮೇಲೆ ಇದ್ದ ರಕ್ತಾಪರಾಧವನ್ನು ದಾವೀದ ತೆಗೆದು ಹಾಕಿದ.

ಇದು ಬರೀ ಒಂದು ಕಥೆ ಅಲ್ಲ. ಇದ್ರಿಂದ ಒಂದು ವಿಷಯ ಕಲಿಯಬಹುದು. ಅದೇನಂದ್ರೆ “ತಂದೆ ಮಾಡಿದ ಪಾಪಕ್ಕೆ ಮಕ್ಕಳಿಗೆ ಮರಣಶಿಕ್ಷೆ ಆಗಬಾರದು” ಅಂತ ಯೆಹೋವ ನಿಯಮ ಕೊಟ್ಟಿದ್ದನು. (ಧರ್ಮೋ. 24:16) ಒಂದುವೇಳೆ ಸೌಲನ ಇಬ್ಬರು ಗಂಡು ಮಕ್ಕಳು ಐದು ಮೊಮ್ಮಕ್ಕಳು ನಿರಪರಾಧಿಗಳಾಗಿದಿದ್ರೆ ಯೆಹೋವ ಅವರಿಗೆ ಆ ತರ ಆಗೋಕೆ ಬಿಡುತ್ತಿರಲಿಲ್ಲ. ಆದ್ರೆ ಸೌಲ ಗಿಬ್ಯೋನ್ಯರನ್ನು ಕೊಲ್ಲೋಕೆ ಪ್ರಯತ್ನ ಮಾಡಿದಾಗ ಇವರೂ ಅವನ ಜೊತೆ ಸೇರಿಕೊಂಡಿದ್ದಿರಬೇಕು. ಅದಕ್ಕೆ ಇವರೂ ಮರಣ ಶಿಕ್ಷೆ ಅನುಭವಿಸಿದ್ರು. ಯಾಕಂದ್ರೆ “ಪಾಪ ಮಾಡಿದವ್ರಿಗೇ ಮರಣಶಿಕ್ಷೆ ಆಗಬೇಕು” ಅಂತ ನಿಯಮದಲ್ಲಿ ಇತ್ತು.

ಈ ಘಟನೆಯಿಂದ ನಮಗಿರುವ ಪಾಠ ಏನಂದ್ರೆ, ನಾವು ಬೇರೆಯವರ ಮಾತು ಕೇಳಿಕೊಂಡು ಕೆಟ್ಟ ಕೆಲಸ ಮಾಡೋಕೆ ಹೋಗಬಾರದು. ಆಮೇಲೆ ಮಾಡೋದು ಮಾಡಿಬಿಟ್ಟು ‘ನಾನು ಏನೂ ತಪ್ಪು ಮಾಡಿಲ್ಲ, ಅವರು ಹೀಗೆ ಹೇಳಿದ್ದಕ್ಕೆ ನಾನು ಅದನ್ನ ಮಾಡಿದೆ’ ಅಂತ ಹೇಳೋಕೆ ಆಗಲ್ಲ. ಹಾಗಾಗಿ “ನಿನ್ನ ದಾರಿಯಲ್ಲಿರೋ ಅಡೆತಡೆಗಳನ್ನ ತೆಗೆದುಹಾಕು, ಧೈರ್ಯವಾಗಿ ಹೆಜ್ಜೆ ಇಡ್ತಾ ಮುಂದೆ ಹೋಗು. ಎಡಕ್ಕೆ, ಬಲಕ್ಕೆ ತಿರುಗಬೇಡ. ಕೆಟ್ಟ ದಾರಿಯಲ್ಲಿ ಕಾಲು ಇಡಬೇಡ” ಅನ್ನೋ ಬುದ್ಧಿಮಾತನ್ನು ನಾವು ಯಾವಾಗಲೂ ನೆನಪಲ್ಲಿ ಇಡಬೇಕು.—ಜ್ಞಾನೋ. 4:24-27; ಎಫೆ. 5:15.