ಅಧ್ಯಯನ ಲೇಖನ 3
ಯೆಹೋವ ನಿಮ್ಮನ್ನ ಆಶೀರ್ವದಿಸ್ತಾ ಇದ್ದಾನೆ!
‘ಯೆಹೋವ ಯೋಸೇಫನ ಜೊತೆಯಲ್ಲಿ ಇದ್ದದ್ರಿಂದ ಅವನ ಪ್ರತಿಯೊಂದು ಕೆಲಸವನ್ನ ಆಶೀರ್ವದಿಸ್ತಾ ಇದ್ದನು.’—ಆದಿ. 39:2, 3.
ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ
ಈ ಲೇಖನದಲ್ಲಿ ಏನಿದೆ? a
1-2. (ಎ) ನಮಗೆ ಬರೋ ಕಷ್ಟಗಳ ಬಗ್ಗೆ ಬೈಬಲ್ ಏನು ಹೇಳುತ್ತೆ? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?
ಯೆಹೋವನ ಜನರಿಗೆ ಕಷ್ಟಗಳು ಕಟ್ಟಿಟ್ಟ ಬತ್ತಿ. “ತುಂಬ ಕಷ್ಟಗಳನ್ನ ಎದುರಿಸಿ ನಾವು ದೇವ್ರ ಆಳ್ವಿಕೆಯಲ್ಲಿ ಸೇರಬೇಕು” ಅಂತ ಬೈಬಲೇ ಹೇಳುತ್ತೆ. (ಅ. ಕಾ. 14:22) ಹಾಗಾಗಿ ಇದಕ್ಕೆಲ್ಲಾ ಪರಿಹಾರ ಸಿಗೋದು ಹೊಸ ಲೋಕದಲ್ಲೇ. ಅಲ್ಲಿ “ಸಾವೇ ಇರಲ್ಲ, ದುಃಖ, ನೋವು, ಕಷ್ಟ ಇರಲ್ಲ.” (ಪ್ರಕ. 21:4) ಅಲ್ಲಿ ತನಕ ನಮಗೆ ಬರೋ ಕಷ್ಟಗಳನ್ನ ನಾವು ತಾಳಿಕೊಳ್ಳಬೇಕಾಗುತ್ತೆ.
2 ನಮಗೆ ಕಷ್ಟಗಳೇ ಬರದ ಹಾಗೆ ಯೆಹೋವ ದೇವರು ತಡೆಯಲ್ಲ. ಆದ್ರೆ ಏನೇ ಕಷ್ಟ ಬಂದ್ರೂ ಅದನ್ನ ಸಹಿಸಿಕೊಳ್ಳೋಕೆ ಸಹಾಯ ಮಾಡ್ತಾನೆ. ಅಪೊಸ್ತಲ ಪೌಲ ರೋಮ್ನಲ್ಲಿದ್ದ ಕ್ರೈಸ್ತರಿಗೆ ಇದನ್ನೇ ಹೇಳಿದ. ಅವನಿಗೆ ಮತ್ತು ಬೇರೆ ಸಹೋದರ ಸಹೋದರಿಯರಿಗೆ ಏನೆಲ್ಲಾ ಕಷ್ಟ ಬಂತು ಅಂತ ಹೇಳಿದ ಮೇಲೆ ಏನು ಹೇಳಿದ ಅಂತ ನೋಡಿ. “ನಮ್ಮನ್ನ ಪ್ರೀತಿಸಿದವನ ಸಹಾಯದಿಂದ ಅದೆಲ್ಲದ್ರ ಮೇಲೆ ನಾವು ಪೂರ್ತಿ ಗೆಲ್ತಿದ್ದೀವಿ” ಅಂದ. (ರೋಮ. 8:35-37) ಇದ್ರಿಂದ ನಮಗೇನು ಗೊತ್ತಾಗುತ್ತೆ? ಕಷ್ಟಗಳು ಬಂದಿದೆ ಅಂದ್ರೆ ಅದರ ಅರ್ಥ ಯೆಹೋವ ನಮ್ಮ ಕೈಬಿಟ್ಟಿದ್ದಾನೆ, ನಾವು ಸೋತು ಹೋದ್ವಿ ಅಂತ ಅಲ್ಲ. ಬದಲಿಗೆ ಕಷ್ಟಗಳಿದ್ದಾಗ ಯೆಹೋವ ನಮ್ಮ ಜೊತೆನೇ ಇದ್ದು ನಮ್ಮನ್ನ ಗೆಲ್ಲಿಸ್ತಾನೆ. ಯೋಸೇಫನಿಗೆ ಕಷ್ಟ ಬಂದಾಗ ಆತನು ಹೇಗೆ ಸಹಾಯ ಮಾಡಿದನು? ನಮಗೂ ಹೇಗೆ ಸಹಾಯ ಮಾಡ್ತಿದ್ದಾನೆ? ಅನ್ನೋದನ್ನ ಈಗ ನೋಡೋಣ.
ಇದ್ದಕ್ಕಿದ್ದ ಹಾಗೆ ಪರಿಸ್ಥಿತಿ ತಲೆಕೆಳಗಾದಾಗ
3. ಇದ್ದಕ್ಕಿದ್ದ ಹಾಗೆ ಯೋಸೇಫನ ಜೀವನದಲ್ಲಿ ಏನಾಯ್ತು?
3 ಯಾಕೋಬನಿಗೆ ಯೋಸೇಫ ಅಂದ್ರೆ ಪಂಚಪ್ರಾಣ. (ಆದಿ. 37:3, 4) ಯೋಸೇಫನಿಗೆ ಸಿಕ್ತಿದ್ದ ಆ ಪ್ರೀತಿ ನೋಡಿ ಅವನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚಾಯ್ತು. ಅವನಿಗೆ ಏನಾದ್ರೂ ಕೆಟ್ಟದ್ದು ಮಾಡಬೇಕು ಅಂತ ಕಾಯ್ತಾ ಇದ್ರು. ಒಂದಿನ ಮಿದ್ಯಾನ್ಯ ವ್ಯಾಪಾರಿಗಳಿಗೆ ಅವನನ್ನ ಮಾರಿಬಿಟ್ರು. ಆ ವ್ಯಾಪಾರಿಗಳು ಯೋಸೇಫನನ್ನ ನೂರಾರು ಕಿಲೋಮೀಟರ್ ದೂರ ಇರೋ ಈಜಿಪ್ಟಿಗೆ ಕರ್ಕೊಂಡು ಹೋದ್ರು. ಅಲ್ಲಿ ಫರೋಹನ ಕಾವಲುಗಾರರ ಮುಖ್ಯಸ್ಥನಾಗಿದ್ದ ಪೋಟೀಫರನಿಗೆ ಮಾರಿಬಿಟ್ರು. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಯೋಸೇಫನ ಜೀವನ ತಲೆಕೆಳಗಾಗಿ ಹೋಯ್ತು. ಅಪ್ಪನ ಮುದ್ದಿನ ಮಗನಾಗಿದ್ದ ಯೋಸೇಫ, ಈಗ ಈಜಿಪ್ಟ್ನಲ್ಲಿ ಗುಲಾಮನಾದ.—ಆದಿ. 39:1.
4. ನಮಗೆ ಯಾವ ಕಷ್ಟಗಳು ಬರಬಹುದು?
4 “ಒಂದಲ್ಲಾ ಒಂದು ರೀತಿಯಲ್ಲಿ ಎಲ್ರಿಗೂ ಕಷ್ಟಗಳು ಬಂದೇ ಬರುತ್ತೆ” ಅಂತ ಬೈಬಲ್ ಹೇಳುತ್ತೆ. (ಪ್ರಸಂ. 9:11, ಪವಿತ್ರ ಬೈಬಲ್—ಈಸಿ-ಟು-ರೀಡ್ ವರ್ಷನ್) ಹಾಗಾಗಿ “ಎಲ್ಲ ಜನ್ರಿಗೆ” ಬರೋ ಕಷ್ಟಗಳೂ ನಮಗೆ ಬರಬಹುದು. (1 ಕೊರಿಂ. 10:13) ಜೊತೆಗೆ ಯೇಸುವಿನ ಶಿಷ್ಯರಾಗಿ ಇರೋದ್ರಿಂದ ಕೆಲವು ಕಷ್ಟಗಳೂ ಬರಬಹುದು. ಅಂದ್ರೆ ಬೈಬಲ್ ನಿಯಮಗಳನ್ನ ಪಾಲಿಸೋದ್ರಿಂದ ಅವಮಾನ, ವಿರೋಧ, ಹಿಂಸೆನೂ ಬರಬಹುದು. (2 ತಿಮೊ. 3:12) ಆದ್ರೆ ಏನೇ ಕಷ್ಟ ಬಂದ್ರೂ ಯೆಹೋವ ನಿಮಗೆ ಸಹಾಯ ಮಾಡ್ತಾನೆ. ಯೋಸೇಫನಿಗೂ ಸಹಾಯ ಮಾಡಿದನು. ಹೇಗೆ ಅಂತ ನೋಡಿ.
5. ಪೋಟೀಫರನಿಗೆ ಏನು ಗೊತ್ತಿತ್ತು? (ಆದಿಕಾಂಡ 39:2-6)
5 ಆದಿಕಾಂಡ 39:2-6 ಓದಿ. ಯೋಸೇಫ ಕಷ್ಟಪಟ್ಟು ದುಡೀತಿದ್ದ. ಇದನ್ನ ಪೋಟೀಫರ ಗಮನಿಸಿದ. ಯಾವ ಕೆಲಸ ಕೊಟ್ರೂ ಯೋಸೇಫ ಚೆನ್ನಾಗಿ ಮಾಡ್ತಿದ್ದ. ಇದಕ್ಕೆಲ್ಲ ಕಾರಣ ಯೆಹೋವನೇ ಅಂತ ಪೋಟೀಫರನಿಗೆ ಗೊತ್ತಿತ್ತು. ಯೋಸೇಫ ಮಾಡ್ತಿದ್ದ ‘ಪ್ರತಿಯೊಂದು ಕೆಲಸವನ್ನ ಯೆಹೋವ ಆಶೀರ್ವದಿಸ್ತಾ ಇದ್ದಾನೆ’ ಅಂತ ಅವನು ಅರ್ಥ ಮಾಡಿಕೊಂಡ. b ಹಾಗಾಗಿ ಪೋಟೀಫರ ಯೋಸೇಫನನ್ನ ತನ್ನ ಮುಖ್ಯ ಸೇವಕನನ್ನಾಗಿ ಮಾಡಿಕೊಂಡ. ಆಮೇಲೆ ತನ್ನ ಇಡೀ ಮನೆಯನ್ನ ನೋಡಿಕೊಳ್ಳೋ ಜವಾಬ್ದಾರಿ ವಹಿಸಿಕೊಟ್ಟ. ಇದ್ರಿಂದ ಪೋಟೀಫರನಿಗೂ ಆಶೀರ್ವಾದ ಸಿಕ್ತು.
6. ಯೋಸೇಫನಿಗೆ ಹೇಗನಿಸಿರುತ್ತೆ?
6 ಇದನ್ನೆಲ್ಲ ನೋಡಿದಾಗ ಯೋಸೇಫನಿಗೆ ಹೇಗನಿಸಿರುತ್ತೆ? ‘ಹೇಗೂ ಒಳ್ಳೇ ಕೆಲಸ ಇದೆ, ಇಲ್ಲೇ ಇದ್ದುಬಿಡೋಣ’ ಅಂತ ಯೋಚಿಸಿದನಾ? ಇಲ್ಲ. ಅವನಿಗೆ ಒಳ್ಳೇ ಕೆಲಸನೇ ಸಿಕ್ಕಿತ್ತು. ಆದ್ರೆ ಅವನು ಇದ್ದಿದ್ದು ಸುಳ್ಳು ದೇವರುಗಳನ್ನ ಆರಾಧಿಸ್ತಿದ್ದ ಒಬ್ಬ ಅಧಿಕಾರಿಯ ಕೈಕೆಳಗೆ. ಹಾಗಾಗಿ ಅವನಿಗೆ ಪೋಟೀಫರನಿಂದ ಒಳ್ಳೇ ಹೆಸರಲ್ಲ, ಅವನಿಂದ ಬಿಡುಗಡೆ ಸಿಕ್ಕಿದ್ರೆ ಸಾಕು ಅಂತ ಅನಿಸಿರಬೇಕು. ತನ್ನ ಮೇಲೆ ಜೀವನೇ ಇಟ್ಟುಕೊಂಡಿರೋ ತನ್ನ ಅಪ್ಪನ ಹತ್ರ ಹೋಗೋಕೆ ಅವನು ಕಾಯ್ತಾ ಇದ್ದಿರಬೇಕು. ಹಾಗಂತ ಯೆಹೋವ ಪೋಟೀಫರನ ಮನಸ್ಸನ್ನ ಬದಲಾಯಿಸಿ ಯೋಸೇಫನಿಗೆ ಬಿಡುಗಡೆಯಾಗೋ ತರ ಮಾಡಲಿಲ್ಲ. ಅದೂ ಅಲ್ಲದೆ ಅವನಿಗೆ ಇನ್ನೂ ತುಂಬ ಕಷ್ಟಗಳು ಬಂತು.
ಪರಿಸ್ಥಿತಿ ಇನ್ನೂ ಹದಗೆಟ್ಟಾಗ
7. ಯೋಸೇಫನ ಪರಿಸ್ಥಿತಿ ಹೇಗೆ ಹದಗೆಟ್ಟಿತು? (ಆದಿಕಾಂಡ 39:14, 15)
7 ಆದಿಕಾಂಡ 39ನೇ ಅಧ್ಯಾಯದಲ್ಲಿ ಹೇಳೋ ಹಾಗೆ, ಪೋಟೀಫರನ ಹೆಂಡತಿ ಯೋಸೇಫನನ್ನ ನೋಡಿ ತುಂಬ ಆಸೆಪಡ್ತಿದ್ದಳು. ಅವಳು ಅವನನ್ನ ಬುಟ್ಟಿಗೆ ಹಾಕೊಳ್ಳೋಕೆ ಪ್ರಯತ್ನ ಮಾಡ್ತಿದ್ದಳು. ತನ್ನ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಳ್ಳೋಕೆ ಯಾವಾಗಲೂ ಒತ್ತಾಯ ಮಾಡ್ತಿದ್ದಳು. ಆಗೆಲ್ಲ ಯೋಸೇಫ ಅವಳಿಂದ ದೂರ ಹೋಗ್ತಿದ್ದ. ಅದಕ್ಕೆ ಅವಳಿಗೆ ತುಂಬ ಕೋಪ ಬಂತು. ಯೋಸೇಫ ತನ್ನನ್ನ ಅತ್ಯಾಚಾರ ಮಾಡೋಕೆ ಬಂದ ಅಂತ ಸುಳ್ಳಾರೋಪ ಹಾಕಿಬಿಟ್ಟಳು. (ಆದಿಕಾಂಡ 39:14, 15 ಓದಿ.) ಈ ಸುದ್ದಿ ಪೋಟೀಫರನ ಕಿವಿಗೆ ಬಿದ್ದಾಗ ಅವನು ಹಿಂದೆ ಮುಂದೆ ಯೋಚನೆ ಮಾಡದೆ ಯೋಸೇಫನನ್ನ ಜೈಲಿಗೆ ಹಾಕಿಬಿಟ್ಟ. ಇದ್ರಿಂದ ಯೋಸೇಫ ಸುಮಾರು ವರ್ಷ ಜೈಲಲ್ಲೇ ಇರಬೇಕಾಯ್ತು. (ಆದಿ. 39:19, 20) ಆ ಜೈಲ್ ಹೇಗಿತ್ತು? ಇದನ್ನ ವಿವರಿಸೋಕೆ ಯೋಸೇಫ, “ಗುಂಡಿ” ಅನ್ನೋ ಅರ್ಥ ಇರೋ ಹೀಬ್ರು ಪದವನ್ನ ಬಳಸಿದ್ದಾನೆ. ಇದ್ರಿಂದ ಏನು ಗೊತ್ತಾಗುತ್ತೆ? ಅವನ ಸುತ್ತಮುತ್ತ ಬರೀ ಕತ್ತಲೆ ತುಂಬಿಕೊಂಡಿದೆ, ಅವನ ಬದುಕೇ ಕತ್ತಲೆಯಲ್ಲಿದೆ ಅಂತ ಅವನಿಗೆ ಅನಿಸ್ತಿತ್ತು. ಅವನು ಜೀವನಪೂರ್ತಿ ಜೈಲಲ್ಲೇ ಕೊಳಿತಾ ಇರಬೇಕೇನೋ ಅಂತ ಅಂದ್ಕೊಂಡಿದ್ದ. (ಆದಿ. 40:15, ಪಾದಟಿಪ್ಪಣಿ) ಅಷ್ಟೇ ಅಲ್ಲ, ಅವನ ಕಾಲುಗಳಿಗೆ ಬೇಡಿಯನ್ನ ಹಾಕಿದ್ರು, ಕುತ್ತಿಗೆಗೆ ಸರಪಳಿಯನ್ನ ಕಟ್ಟಿದ್ರು ಅಂತ ಬೈಬಲ್ ಹೇಳುತ್ತೆ. (ಕೀರ್ತ. 105:17, 18) ಅಪ್ಪಟ ಕೆಲಸಗಾರ ಅಂತ ಹೆಸರಿದ್ದ ಯೋಸೇಫನಿಗೆ ಈಗ ಅತ್ಯಾಚಾರಿ ಅನ್ನೋ ಅಪವಾದ ಬಂತು.
8. ನಿಮ್ಮ ಕಷ್ಟ ಇನ್ನೂ ಜಾಸ್ತಿ ಆದಾಗ ಏನನ್ನ ಮರಿಬಾರದು?
8 ನೀವೂ ತುಂಬ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಾ? ಎಷ್ಟೇ ಪ್ರಾರ್ಥನೆ ಮಾಡಿದ್ರೂ ಇದು ಸರಿಹೋಗ್ತಾ ಇಲ್ವಲ್ಲಾ ಅಂತ ಅನಿಸ್ತಿದ್ಯಾ? ಹಾಗೆ ಅನಿಸೋದು ಸಹಜನೇ. ಯಾಕಂದ್ರೆ ಈ ಲೋಕ ಸೈತಾನನ ಕೈಯಲ್ಲಿ ಇರೋದ್ರಿಂದ ನಿಮಗೆ ಕಷ್ಟಗಳು ಬರದ ಹಾಗೆ ಯೆಹೋವ ತಡಿಯಲ್ಲ. (1 ಯೋಹಾ. 5:19) ಆದ್ರೆ ಒಂದು ಮಾತಂತೂ ನಿಜ. ನೀವು ಪಡ್ತಿರೋ ಕಷ್ಟ ಯೆಹೋವನಿಗೆ ಚೆನ್ನಾಗಿ ಅರ್ಥ ಆಗುತ್ತೆ. ಆತನಿಗೆ ನಿಮ್ಮ ಮೇಲೆ ಪ್ರೀತಿ, ಕಾಳಜಿ ಇದೆ. (ಮತ್ತಾ. 10:29-31; 1 ಪೇತ್ರ 5:6, 7) ಅದಕ್ಕೆ ಆತನು “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ಮಾತು ಕೊಟ್ಟಿದ್ದಾನೆ. (ಇಬ್ರಿ. 13:5) ನಿಮ್ಮ ಕಷ್ಟಗಳನ್ನ ತೆಗೆದುಹಾಕದೇ ಇದ್ರೂ ಅದನ್ನ ಸಹಿಸಿಕೊಳ್ಳೋಕೆ ಆತನು ಸಹಾಯ ಮಾಡ್ತಾನೆ. ಜೈಲಲ್ಲಿ ಇದ್ದಾಗ ಯೋಸೇಫನಿಗೂ ಸಹಾಯ ಮಾಡಿದನು. ಹೇಗೆ?
9. ಜೈಲಲ್ಲಿ ಇದ್ದಾಗ ಯೋಸೇಫನ ಜೊತೆ ಯೆಹೋವ ಇದ್ದನು ಅಂತ ನಾವು ಹೇಗೆ ಹೇಳಬಹುದು? (ಆದಿಕಾಂಡ 39:21-23)
9 ಆದಿಕಾಂಡ 39:21-23 ಓದಿ. ಯೋಸೇಫ ಜೈಲಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ಯೆಹೋವ ಅವನಿಗೆ ಸಹಾಯ ಮಾಡಿದನು, ಆಶೀರ್ವಾದ ಮಾಡಿದನು. ಹೇಗೆ? ಯೋಸೇಫ ಪೋಟೀಫರನ ಹತ್ರ ಒಳ್ಳೇ ಹೆಸರು ಮಾಡಿಕೊಂಡಿದ್ದ ತರ ಜೈಲಿನ ಮುಖ್ಯಾಧಿಕಾರಿಯ ಮನಸ್ಸನ್ನೂ ಗೆದ್ದ. ಹೀಗೆ ಆ ಅಧಿಕಾರಿ ಅವನಿಗೆ ಬೇರೆ ಕೈದಿಗಳನ್ನ ನೋಡಿಕೊಳ್ಳೋ ಜವಾಬ್ದಾರಿ ವಹಿಸಿದ. “ಯೋಸೇಫನ ಕೈಕೆಳಗಿದ್ದ ಯಾವುದೇ ವಿಷ್ಯದ ಬಗ್ಗೆ ಜೈಲಿನ ಮುಖ್ಯಾಧಿಕಾರಿಗೆ ಸ್ವಲ್ಪನೂ ಚಿಂತೆ ಇರಲಿಲ್ಲ” ಅಂತ ಬೈಬಲ್ ಹೇಳುತ್ತೆ. ಕೋಳ ಬಿದ್ದಿರೋ ಕೈಗಳಿಗೆ ಈ ತರ ಕೆಲಸ ಸಿಗುತ್ತೆ ಅಂತ ಯೋಸೇಫ ಅಂದುಕೊಂಡಿರಲಿಲ್ಲ. ಅತ್ಯಾಚಾರ ಮಾಡೋಕೆ ಪ್ರಯತ್ನಿಸಿದ ಅನ್ನೋ ಆರೋಪ ಇರೋ ಯೋಸೇಫನಿಗೆ ಇಷ್ಟು ದೊಡ್ಡ ಜವಾಬ್ದಾರಿ ಸಿಗೋಕೆ ಕಾರಣ ಏನು? ಇದಕ್ಕೆಲ್ಲ ಯೆಹೋವನೇ ಕಾರಣ. “ಯೆಹೋವ ಯೋಸೇಫನ ಜೊತೆ ಇದ್ದನು. ಅವನು ಮಾಡ್ತಿದ್ದ ಎಲ್ಲ ಕೆಲಸವನ್ನ ಯೆಹೋವ ಯಶಸ್ವಿ ಮಾಡ್ತಿದ್ದನು” ಅಂತ ಆದಿಕಾಂಡ 39:23 ಹೇಳುತ್ತೆ.
10. ಯೆಹೋವ ತನ್ನನ್ನ ಪೂರ್ತಿಯಾಗಿ ಆಶೀರ್ವದಿಸ್ತಿಲ್ಲ ಅಂತ ಯೋಸೇಫನಿಗೆ ಯಾಕೆ ಅನಿಸಿರಬೇಕು?
10 ಯೋಸೇಫನಿಗೆ ತನ್ನನ್ನ ಯೆಹೋವ ಪೂರ್ತಿಯಾಗಿ ಆಶೀರ್ವಾದ ಮಾಡ್ತಿಲ್ಲ ಅಂತ ಅನಿಸಿರಬೇಕು. ಯಾಕಂದ್ರೆ ಅವನ ಮೇಲಿದ್ದ ಅಪವಾದ ಹೋಗಿರಲಿಲ್ಲ. ಅವನಿನ್ನೂ ಜೈಲಲ್ಲೇ ಇದ್ದ. ಹಾಗಾಗಿ ಜವಾಬ್ದಾರಿ ಸಿಕ್ತು ಅಂತ ಜೈಲಲ್ಲೇ ಇರೋ ಆಸೆ ಅವನಿಗೆ ಇರಲಿಲ್ಲ. ಬದಲಿಗೆ ತನ್ನ ಮೇಲಿರೋ ಅಪವಾದ ಹೋಗಬೇಕು, ಜೈಲಿಂದ ಬಿಡುಗಡೆ ಆಗಬೇಕು ಅಂತ ಕಾಯ್ತಿದ್ದ. ಅದಕ್ಕೆ ಅವನು ಅಲ್ಲಿದ್ದ ಇನ್ನೊಬ್ಬ ಕೈದಿಗೆ ‘ಫರೋಹನ ಹತ್ರ ನನ್ನ ಬಗ್ಗೆ ಮಾತಾಡಿ ನನ್ನನ್ನ ಇಲ್ಲಿಂದ ಬಿಡಿಸು’ ಅಂತ ಹೇಳಿದ. (ಆದಿ. 40:14) ಆದ್ರೆ ಆ ಕೈದಿ ಫರೋಹನ ಹತ್ರ ಮಾತಾಡೋಕೆ ಮರೆತು ಹೋದ. ಇದ್ರಿಂದ ಯೋಸೇಫ ಇನ್ನೂ ಎರಡು ವರ್ಷ ಜೈಲಲ್ಲೇ ಇರಬೇಕಾಯ್ತು. (ಆದಿ. 40:23; 41:1, 14) ಅವಾಗಲೂ ಯೆಹೋವ ಯೋಸೇಫನ ಜೊತೆ ಇದ್ದು ಅವನನ್ನ ಆಶೀರ್ವಾದ ಮಾಡಿದನು. ಹೇಗೆ?
11. (ಎ) ಯೆಹೋವ ಯೋಸೇಫನಿಗೆ ಯಾವ ವಿಶೇಷ ಸಾಮರ್ಥ್ಯ ಕೊಟ್ಟನು? (ಬಿ) ಇದ್ರಿಂದ ಯೆಹೋವನ ಉದ್ದೇಶ ನೆರವೇರೋಕೆ ಹೇಗೆ ಸಹಾಯ ಆಯ್ತು?
11 ಯೋಸೇಫ ಜೈಲಲ್ಲಿ ಇದ್ದಾಗ ಯೆಹೋವ ದೇವರು ಈಜಿಪ್ಟಿನ ರಾಜನಿಗೆ ಎರಡು ಕನಸು ಬೀಳೋ ತರ ಮಾಡಿದನು. ಆ ಕನಸುಗಳು ಅವನನ್ನ ತುಂಬ ಕಾಡ್ತಿತ್ತು. ಅದಕ್ಕೆ ಅವನು ಅದರ ಅರ್ಥ ತಿಳುಕೊಳ್ಳೋಕೆ ತುಂಬ ಪ್ರಯತ್ನ ಪಟ್ಟ. ಆದ್ರೆ ಆ ಕನಸಿನ ಅರ್ಥವನ್ನ ಹೇಳೋ ಸಾಮರ್ಥ್ಯ ಯೋಸೇಫನಿಗೆ ಇದೆ ಅಂತ ರಾಜನಿಗೆ ಗೊತ್ತಾಯ್ತು. ಅದಕ್ಕೆ ಅವನು ಯೋಸೇಫನನ್ನ ಕರೆಸಿದ. ಯೋಸೇಫ ಯೆಹೋವನ ಸಹಾಯದಿಂದ ಕನಸಿನ ಅರ್ಥವನ್ನ ಹೇಳಿದ, ಒಳ್ಳೇ ಉಪಾಯವನ್ನೂ ಕೊಟ್ಟ. ಆಗ ಫರೋಹನಿಗೆ ತುಂಬ ಖುಷಿ ಆಯ್ತು. ಯೋಸೇಫನಿಗೆ ಯೆಹೋವ ದೇವರೇ ಸಹಾಯ ಮಾಡ್ತಿರೋದು ಅಂತ ಫರೋಹನಿಗೆ ಗೊತ್ತಾಯ್ತು. ಅದಕ್ಕೆ ಅವನು ಯೋಸೇಫನನ್ನ ಅಧಿಕಾರಿಯಾಗಿ ಮಾಡಿದ. ಅವನಿಗೆ ಇಡೀ ಈಜಿಪ್ಟಿಗೆ ಆಹಾರದ ವ್ಯವಸ್ಥೆಯನ್ನ ನೋಡಿಕೊಳ್ಳೋ ಜವಾಬ್ದಾರಿ ಸಿಕ್ತು. (ಆದಿ. 41:38, 41-44) ಸ್ವಲ್ಪ ಸಮಯ ಆದಮೇಲೆ ಅಲ್ಲಿ ಬರಗಾಲ ಬಂತು. ಆದ್ರೆ ಅದು ಬರೀ ಈಜಿಪ್ಟಲ್ಲಿ ಮಾತ್ರ ಅಲ್ಲ ಕಾನಾನ್ನಲ್ಲೂ ಬಂತು. ಅಲ್ಲಿ ಯೋಸೇಫನ ಕುಟುಂಬದವರು ವಾಸಿಸುತ್ತಿದ್ರು. ಈಗ ಅವನಿಗೆ ತನ್ನ ಕುಟುಂಬವನ್ನ, ಮೆಸ್ಸೀಯ ಹುಟ್ಟಬೇಕಾಗಿದ್ದ ಆ ವಂಶವನ್ನ ಕಾಪಾಡೋ ಶಕ್ತಿ ಇತ್ತು.
12. ಯೆಹೋವ ಹೇಗೆ ಯೋಸೇಫನನ್ನ ಆಶೀರ್ವದಿಸ್ತಾ ಬಂದನು?
12 ಯೋಸೇಫನ ಜೀವನದಲ್ಲಿ ನಡೆದಿರೋ ಘಟನೆಗಳನ್ನ ನೆನಸಿಕೊಂಡರೆ ಮೈ ಜುಮ್ ಅನಿಸುತ್ತೆ ಅಲ್ವಾ! ಒಬ್ಬ ಗುಲಾಮನಿಗೆ ಪೋಟೀಫರ ತನ್ನ ಇಡೀ ಮನೆ ಜವಾಬ್ದಾರಿಯನ್ನ ವಹಿಸಿಕೊಡೋ ತರ ಮಾಡಿದ್ದು ಯಾರು? ಜೈಲಲ್ಲಿದ್ದ ಒಬ್ಬ ಮಾಮೂಲಿ ಕೈದಿಗೆ ಆ ಜೈಲಿನ ಅಧಿಕಾರಿ ದಯೆ ತೋರಿಸೋ ತರ ಮಾಡಿದ್ದು ಯಾರು? ಫರೋಹನಿಗೆ ಕನಸು ಬೀಳೋ ತರ ಮಾಡಿದ್ದು ಯಾರು? ಆ ಕನಸಿನ ಅರ್ಥವನ್ನ ಹೇಳೋಕೆ ಯೋಸೇಫನಿಗೆ ಸಾಮರ್ಥ್ಯ ಕೊಟ್ಟಿದ್ದು ಯಾರು? ಅವನನ್ನ ಇಡೀ ಈಜಿಪ್ಟಿಗೆ ಅಧಿಕಾರಿಯಾಗಿ ಮಾಡೋಕೆ ಫರೋಹನಿಗೆ ಮನಸ್ಸು ಕೊಟ್ಟಿದ್ದು ಯಾರು? (ಆದಿ. 45:5) ಅದು ಬೇರೆ ಯಾರೂ ಅಲ್ಲ, ಯೆಹೋವ ದೇವರು! ಯೋಸೇಫ ಕೈ ಹಾಕಿದ ಎಲ್ಲ ಕೆಲಸವನ್ನ ಆಶೀರ್ವದಿಸಿದ್ದು ಆತನೇ. ನಾವು ಯೋಸೇಫನ ಜೀವನವನ್ನ ಹಿಂದೆ ತಿರುಗಿ ನೋಡಿದ್ರೆ ಒಂದು ವಿಷ್ಯ ಗೊತ್ತಾಗುತ್ತೆ. ಯೋಸೇಫನ ಅಣ್ಣಂದಿರು ಅವನನ್ನ ಕೊಲ್ಲೋಕೆ ನೋಡಿದ್ರು. ಆದ್ರೆ ಯೆಹೋವ ಅದನ್ನೇ ಅವಕಾಶವಾಗಿ ಬಳಸಿ ತನ್ನ ಉದ್ದೇಶ ಸಾಧಿಸಿದನು.
ನಿಮ್ಮನ್ನೂ ಯೆಹೋವ ಆಶೀರ್ವದಿಸ್ತಾ ಇದ್ದಾನೆ
13. ನಮಗೆ ಕಷ್ಟ ಬಂದಾಗ ಯೆಹೋವ ಏನು ಮಾಡಲ್ಲ? ವಿವರಿಸಿ.
13 ಯೋಸೇಫನ ಜೀವನದಿಂದ ನಮಗೇನು ಗೊತ್ತಾಗುತ್ತೆ? ನಮಗೆ ಬರೋ ಕಷ್ಟಗಳನ್ನ ಯೆಹೋವ ತೆಗೆದುಹಾಕಲ್ಲ. ನಮಗೆ ಬರೋ ಎಲ್ಲಾ ಕಷ್ಟಗಳಿಂದ ಕೊನೇಲಿ ನಮಗೆ ಒಳ್ಳೇದಾಗೋ ತರ ಮಾಡ್ತಾನೆ ಅಂತನೂ ಅರ್ಥ ಅಲ್ಲ. ಹಾಗಾಗಿ ಆಗೋದೆಲ್ಲ ಒಳ್ಳೇದಕ್ಕೆ ಅಂತ ನಾವು ನೆನಸಬಾರದು. ಯಾಕಂದ್ರೆ ಬೈಬಲ್ನಲ್ಲಿ ಎಲ್ಲೂ ಆ ತರ ಹೇಳಿಲ್ಲ. (ಪ್ರಸಂ. 8:9; 9:11) ಆದ್ರೆ ಒಂದಂತೂ ನಿಜ, ನಾವು ಪಡ್ತಿರೋ ಕಷ್ಟಗಳು ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ನಾವು ಆತನ ಸಹಾಯಕ್ಕಾಗಿ ಬೇಡಿಕೊಂಡಾಗ ಅದನ್ನ ಖಂಡಿತ ಕೇಳ್ತಾನೆ. (ಕೀರ್ತ. 34:15; 55:22; ಯೆಶಾ. 59:1) ಅಷ್ಟೇ ಅಲ್ಲ, ಆ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಶಕ್ತಿ ಕೊಡ್ತಾನೆ. ಹೇಗೆ?
14. ಕಷ್ಟ ಬಂದಾಗ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ?
14 ಯೆಹೋವ ದೇವರು ನಮಗೆ ಸಹಾಯ ಮಾಡೋ ಒಂದು ವಿಧ ಯಾವುದು? ಕಷ್ಟದಲ್ಲಿ ಇರುವಾಗ ನಮಗೆ ಸಾಂತ್ವನ, ಪ್ರೋತ್ಸಾಹ ಕೊಡ್ತಾನೆ. (2 ಕೊರಿಂ. 1:3, 4) ಸಹೋದರ ಈಜಿ಼ಜ಼್ ಅವರಿಗೂ ಯೆಹೋವ ಹೀಗೆ ಸಹಾಯ ಮಾಡಿದನು. ಟರ್ಕ್ಮೆನಿಸ್ತಾನ್ನಲ್ಲಿ ಇರೋ ಈಜಿ಼ಜ಼್ ಯೆಹೋವನ ಸಾಕ್ಷಿ ಆಗಿದ್ರಿಂದ ಅವರಿಗೆ 2 ವರ್ಷ ಜೈಲು ಶಿಕ್ಷೆ ಆಯ್ತು. ಆ ಸಹೋದರ ಹೇಳಿದ್ದು: “ಕೋರ್ಟ್ನಲ್ಲಿ ವಿಚಾರಣೆ ನಡಿಯೋ ಮುಂಚೆ ಒಬ್ಬ ಸಹೋದರ ಯೆಶಾಯ 30:15ನ್ನ ನನಗೆ ತೋರಿಸಿದ್ರು. ‘ಶಾಂತಿಯಿಂದ ಇದ್ದು ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ’ ಅಂತ ಅಲ್ಲಿತ್ತು. ಆ ವಚನ ಓದಿದ ಮೇಲೆ ನನಗೆ ಸಮಾಧಾನ ಆಯ್ತು. ಎಲ್ಲನೂ ಯೆಹೋವನ ಕೈಗೆ ಬಿಟ್ಟುಬಿಟ್ಟೆ. ಜೈಲಿಂದ ಬಿಡುಗಡೆ ಆಗೋ ತನಕ ಆ ವಚನ ನೆನಸಿಕೊಳ್ತಿದ್ದೆ. ಇದ್ರಿಂದ ನನಗೆ ತುಂಬ ಧೈರ್ಯ ಸಿಕ್ತಿತ್ತು.” ನಿಮಗೂ ಯಾವತ್ತಾದ್ರೂ ಯೆಹೋವ ಹೀಗೆ ಧೈರ್ಯ ತುಂಬಿದ್ದಾನಾ? ಸಮಾಧಾನ ಮಾಡಿದ್ದಾನಾ? ಅಂಥ ಕ್ಷಣಗಳು ನಿಮ್ಮ ಕಣ್ಮುಂದೆ ಬರ್ತಿದ್ಯಾ?
15-16. ಟೋರಿಯವರ ಅನುಭವದಿಂದ ನೀವೇನು ಕಲಿತ್ರಿ?
15 ಸಾಮಾನ್ಯವಾಗಿ ಒಂದು ಕಷ್ಟ ಪರಿಹಾರ ಆದಮೇಲೆ ಆ ಕಷ್ಟನ ಸಹಿಸಿಕೊಳ್ಳೋಕೆ ಯೆಹೋವ ಏನೆಲ್ಲ ಮಾಡಿದನು ಅಂತ ನಾವು ಯೋಚನೆ ಮಾಡ್ತೀವಿ. ಸಹೋದರಿ ಟೋರಿ ಕೂಡ ಇದನ್ನೇ ಮಾಡಿದ್ರು. ಅವರ ಮಗ ಮೇಸನ್ ಆರು ವರ್ಷ ಕ್ಯಾನ್ಸರ್ನಿಂದ ಕಷ್ಟ, ನೋವು ಅನುಭವಿಸಿ ತೀರಿಕೊಂಡ. ಆಗ ಟೋರಿಗೆ ಹೃದಯನೇ ಕಿತ್ತುಬಂದ ಹಾಗಾಯ್ತು. “ಇದಕ್ಕಿಂತ ದೊಡ್ಡ ಕಷ್ಟ ನನಗೆ ಯಾವತ್ತೂ ಬಂದಿಲ್ಲ. ಯಾವ ತಾಯಿಗೂ ಈ ತರ ಕಷ್ಟ ಬರಬಾರದು. ನಮಗೇನಾದ್ರೂ ಆದ್ರೆ ತಡ್ಕೊಳ್ತೀವಿ, ಆದ್ರೆ ನಮ್ಮ ಮಕ್ಕಳಿಗೆ ಏನಾದ್ರೂ ಆಯ್ತು ಅಂದ್ರೆ ಅದನ್ನ ಸಹಿಸ್ಕೊಳ್ಳೋಕೆ ಆಗಲ್ಲ” ಅಂತ ಟೋರಿ ಹೇಳ್ತಾರೆ.
16 ಟೋರಿ ನಿಜವಾಗಲೂ ತುಂಬ ಕಷ್ಟ ಅನುಭವಿಸಿದ್ರು. ಆಗ ಯೆಹೋವ ತನಗೆ ಹೇಗೆಲ್ಲಾ ಸಹಾಯ ಮಾಡಿದನು ಅನ್ನೋದನ್ನ ಆಮೇಲೆ ಅರ್ಥ ಮಾಡಿಕೊಂಡ್ರು. ಅವರು ಹೇಳಿದ್ದು: “ಮೇಸನ್ಗೆ ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ ಅವನನ್ನ ಯಾರೂ ನೋಡೋಕೆ ಆಗದೆ ಇರೋ ಪರಿಸ್ಥಿತಿಯಲ್ಲಿ ಇದ್ದ. ಆದ್ರೂ ನಮ್ಮ ಸಹೋದರ ಸಹೋದರಿಯರು ನಮ್ಮನ್ನ ಸಮಾಧಾನ ಮಾಡೋಕೆ, ನಮ್ಮ ಜೊತೆ ಇರೋಕೆ ತುಂಬ ದೂರ ದೂರದಿಂದ ಬರ್ತಿದ್ರು. 2 ಗಂಟೆಗಳು ಪ್ರಯಾಣ ಮಾಡಿ ಆಸ್ಪತ್ರೆಗೆ ಬರ್ತಿದ್ರು. ಯಾರಾದ್ರೂ ಒಬ್ರು ವೇಟಿಂಗ್ ರೂಮ್ನಲ್ಲಿ ಇರ್ತಿದ್ರು. ನಾವು ಕೇಳೋಕೆ ಮುಂಚೆನೇ ನಮಗೆ ಸಹಾಯ ಮಾಡೋಕೆ ಯಾವಾಗಲೂ ರೆಡಿ ಇರ್ತಿದ್ರು. ನಮಗೆ ಬೇಕಾಗಿರೋದನ್ನ ತಗೊಂಡು ಬರ್ತಿದ್ರು. ಯೆಹೋವ ಒಂದೊಂದು ಕ್ಷಣನೂ ನಮ್ಮ ಜೊತೆನೇ ಇದ್ರು. ಅದು ನನಗೆ ಇವಾಗ ಅರ್ಥ ಆಗ್ತಿದೆ” ಅಂತ ಟೋರಿ ಹೇಳ್ತಾರೆ. ಕಷ್ಟಗಳನ್ನ ತಾಳಿಕೊಳ್ಳೋಕೆ ಯೆಹೋವ ಮೇಸನ್ ಮತ್ತು ಟೋರಿಗೆ ಸಹಾಯ ಮಾಡಿದನು.—‘ ಸಮಯಕ್ಕೆ ಸರಿಯಾಗಿ ಯೆಹೋವ ಸಹಾಯ ಮಾಡಿದ್ದಾರೆ’ ಅನ್ನೋ ಚೌಕ ನೋಡಿ.
ಯೆಹೋವ ಹೇಗೆಲ್ಲ ಸಹಾಯ ಮಾಡ್ತಿದ್ದಾನೆ?
17-18. ನಾವು ಕಷ್ಟದಲ್ಲಿ ಇರುವಾಗ ಏನನ್ನ ಗಮನಿಸೋಕೆ ಮರಿಬಾರದು? ವಿವರಿಸಿ. (ಕೀರ್ತನೆ 40:5)
17 ಕೀರ್ತನೆ 40:5 ಓದಿ. ಬೆಟ್ಟ ಹತ್ತುವವರು ಅದರ ತುದಿಯನ್ನ ಮುಟ್ಟಬೇಕು ಅನ್ನೋ ಆಸೆಯಿಂದ ಅದನ್ನ ಹತ್ತುತ್ತಾರೆ. ಹತ್ತುವಾಗ ಮಧ್ಯಮಧ್ಯದಲ್ಲಿ ನಿಂತು ಪ್ರಕೃತಿ ಸೌಂದರ್ಯನ ಸವಿತಾರೆ. ಅದೇ ತರ ನೀವು ಕಷ್ಟ ಅನುಭವಿಸ್ತಾ ಇರುವಾಗಲೂ ಯೆಹೋವ ನಿಮ್ಮನ್ನ ಹೇಗೆ ಆಶೀರ್ವದಿಸ್ತಿದ್ದಾನೆ ಅನ್ನೋದನ್ನ ಸ್ವಲ್ಪ ನಿಂತು ಯೋಚನೆ ಮಾಡಿ. ಹಾಗಾಗಿ ಪ್ರತಿ ರಾತ್ರಿ ಮಲಗೋ ಮುಂಚೆ ‘ಇವತ್ತು ಯೆಹೋವ ನನಗೆ ಯಾವ ಆಶೀರ್ವಾದ ಕೊಟ್ಟನು? ನನ್ನ ಕಷ್ಟ ಪರಿಹಾರ ಆಗದೇ ಇದ್ರೂ ಅದನ್ನ ಸಹಿಸಿಕೊಳ್ಳೋಕೆ ಹೇಗೆ ಸಹಾಯ ಮಾಡ್ತಿದ್ದಾನೆ?’ ಅಂತ ಯೋಚನೆ ಮಾಡಿ. ಯೆಹೋವ ಖಂಡಿತ ನಿಮಗೆ ಏನಾದ್ರೂ ಒಂದು ಆಶೀರ್ವಾದ ಕೊಟ್ಟಿರುತ್ತಾನೆ. ಅದನ್ನ ಕಂಡುಹಿಡಿಯೋಕೆ ಪ್ರಯತ್ನ ಮಾಡಿ.
18 ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕು ಅಂತ ಪ್ರಾರ್ಥನೆ ಮಾಡೋದ್ರಲ್ಲಿ ತಪ್ಪಿಲ್ಲ. (ಫಿಲಿ. 4:6) ಆದ್ರೆ ನಿಮ್ಮ ಕಷ್ಟ ಪರಿಹಾರ ಆಗದೆ ಇದ್ದಾಗ ಯೆಹೋವನ ಆಶೀರ್ವಾದ ನಿಮ್ಮ ಮೇಲೆ ಇಲ್ಲ ಅಂತ ಅರ್ಥ ಅಲ್ಲ. ನೀವು ಕಷ್ಟದಲ್ಲಿ ಇರುವಾಗಲೂ ಯೆಹೋವ ನಿಮ್ಮನ್ನ ಆಶೀರ್ವದಿಸ್ತಾ ಇರ್ತಾನೆ. ಅದನ್ನ ನೀವು ಗಮನಿಸಿ. ಯಾಕಂದ್ರೆ ಕಷ್ಟದ ಸಮಯದಲ್ಲಿ ನಾನು ನಿಮಗೆ ಸಹಾಯ ಮಾಡ್ತೀನಿ, ಸಹಿಸಿಕೊಳ್ಳೋಕೆ ಶಕ್ತಿ ಕೊಡ್ತೀನಿ ಅಂತ ಯೆಹೋವನೇ ಮಾತುಕೊಟ್ಟಿದ್ದಾನೆ. ಇದನ್ನ ಮರಿಬಾರದು. ಹೀಗೆ ಮಾಡಿದಾಗ ಯೋಸೇಫನ ತರ ನಿಮಗೂ ಯೆಹೋವ ಹೇಗೆಲ್ಲಾ ಸಹಾಯ ಮಾಡ್ತಿದ್ದಾನೆ ಅಂತ ನಿಮ್ಮಿಂದ ಕಂಡುಹಿಡಿಯೋಕೆ ಆಗುತ್ತೆ.—ಆದಿ. 41:51, 52.
ಗೀತೆ 27 ಯೆಹೋವನ ಪಕ್ಷವಹಿಸು!
a ನಮಗೆ ಜೀವನದಲ್ಲಿ ಕಷ್ಟ ಬಂದಾಗ ಯೆಹೋವ ನಮ್ಮ ಕೈಬಿಟ್ಟಿದ್ದಾನೆ, ನಾವು ಆತನ ಆಶೀರ್ವಾದ ಕಳಕೊಂಡಿದ್ದೀವಿ ಅಂತ ನಮಗೆ ಅನಿಸಬಹುದು. ಆದ್ರೆ ನಮಗೆ ಕಷ್ಟ ಬಂದಿದೆ ಅಂದ ತಕ್ಷಣ ಯೆಹೋವ ನಮ್ಮ ಜೊತೆ ಇಲ್ಲ ಅಂತಲ್ಲ. ಅವಾಗಲೂ ಯೆಹೋವ ನಮ್ಮನ್ನ ಆಶೀರ್ವದಿಸ್ತಾ ಇರ್ತಾನೆ. ಅದಕ್ಕೆ ಯೋಸೇಫನ ಜೀವನ ಒಂದು ಉದಾಹರಣೆ.
b ಯೋಸೇಫನನ್ನ ಗುಲಾಮನಾಗಿ ಮಾರಿದ ಮೇಲೆ ಅವನ ಜೀವನದಲ್ಲಿ ಏನೇನು ನಡೀತು ಅನ್ನೋದರ ಬಗ್ಗೆ ಬೈಬಲ್ನಲ್ಲಿ ಕೆಲವೇ ವಚನಗಳಲ್ಲಿದೆ. ಆದ್ರೆ ಈ ಘಟನೆಗಳೆಲ್ಲ ಒಂದೆರಡು ವರ್ಷದಲ್ಲಿ ನಡೀಲಿಲ್ಲ. ತುಂಬ ವರ್ಷಗಳೇ ಹಿಡಿದಿರಬಹುದು.