ಆಸಕ್ತಿಕರವಾಗಿ ಆನಂದಕರವಾಗಿ ಬೈಬಲನ್ನು ಅಧ್ಯಯನ ಮಾಡುವುದು ಹೇಗೆ?
ಇಸ್ರಾಯೇಲ್ ಜನಾಂಗವನ್ನು ವಾಗ್ದತ್ತ ದೇಶಕ್ಕೆ ಕರಕೊಂಡು ಹೋಗುವ ದೊಡ್ಡ ಜವಾಬ್ದಾರಿ ಯೆಹೋಶುವನ ಹೆಗಲ ಮೇಲೆ ಇತ್ತು. ಇದೊಂದು ಕಠಿಣ ಸವಾಲಾಗಿತ್ತು. ಆದರೆ ಯೆಹೋವನು ಅವನಿಗೆ “ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು” ಎಂದು ಪ್ರೋತ್ಸಾಹಿಸಿ ಬಲಪಡಿಸಿದನು. ಒಂದುವೇಳೆ ಯೆಹೋಶುವನು ಧರ್ಮಶಾಸ್ತ್ರವನ್ನು ಓದಿ ಅದರಂತೆ ನಡೆದರೆ ಒಳ್ಳೇ ನಿರ್ಧಾರಗಳನ್ನು ಮಾಡಲು ಮತ್ತು ಯಶಸ್ಸನ್ನು ಪಡಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೆಹೋವನು ಹೇಳಿದನು.—ಯೆಹೋ. 1:7, 8.
ನಾವು ಜೀವಿಸುತ್ತಿರುವ ಸಮಯ “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು” ಆಗಿರುವುದರಿಂದ ನಮಗೂ ಕಷ್ಟಗಳು ಬರುತ್ತವೆ. (2 ತಿಮೊ. 3:1) ನಾವು ಯೆಹೋಶುವನಂತೆ ಯಶಸ್ಸನ್ನು ಪಡಕೊಳ್ಳಬೇಕೆಂದರೆ ಯೆಹೋವನು ಅವನಿಗೆ ಕೊಟ್ಟ ಸಲಹೆಯನ್ನು ನಾವೂ ಪಾಲಿಸಬೇಕು. ನಾವು ಪ್ರತಿದಿನ ಬೈಬಲನ್ನು ಓದಬೇಕು ಮತ್ತು ಕಲಿತದ್ದನ್ನು ಅನ್ವಯಿಸಿಕೊಂಡು ಒಳ್ಳೇ ನಿರ್ಧಾರಗಳನ್ನು ಮಾಡಬೇಕು.
ಆದರೆ ನಮ್ಮಲ್ಲಿ ಕೆಲವರಿಗೆ ಹೇಗೆ ಬೈಬಲ್ ಅಧ್ಯಯನ ಮಾಡಬೇಕು ಎಂದು ಗೊತ್ತಿಲ್ಲದೆ ಇರಬಹುದು ಅಥವಾ ಅದನ್ನು ಆನಂದಿಸದೇ ಇರಬಹುದು. ಆದರೂ ವೈಯಕ್ತಿಕ ಬೈಬಲ್ ಅಧ್ಯಯನ ತುಂಬ ಪ್ರಾಮುಖ್ಯ. ನಿಮ್ಮ ಅಧ್ಯಯನದಿಂದ ಪ್ರಯೋಜನ ಪಡಕೊಳ್ಳಲು ಮತ್ತು ಅದನ್ನು ಆನಂದಿಸಲು “ಇದನ್ನು ಮಾಡಿನೋಡಿ” ಎಂಬ ಚೌಕದಲ್ಲಿ ಕೊಟ್ಟಿರುವ ಸಲಹೆಗಳು ಸಹಾಯ ಮಾಡುತ್ತವೆ.
ಕೀರ್ತನೆಗಾರನು “ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ” ಎಂದು ಹಾಡಿದನು. (ಕೀರ್ತ. 19:8) ನೀವೂ ದೇವರ ವಾಕ್ಯದ ಅಧ್ಯಯನದಿಂದ ಸಂತೋಷ ಪಡಕೊಳ್ಳಬಹುದು. ನೀವು ಬೈಬಲನ್ನು ಓದುತ್ತಾ ಹೋದಂತೆ ಅನೇಕ ಅಮೂಲ್ಯ ವಿಷಯಗಳನ್ನು ಕಂಡುಕೊಳ್ಳುತ್ತೀರಿ.
ಯೆಹೋಶುವನಂತೆ ನಿಮಗೆ ಒಂದು ಜನಾಂಗವನ್ನು ನಡೆಸುವ ಜವಾಬ್ದಾರಿ ಇಲ್ಲದೇ ಇರಬಹುದು. ಆದರೆ ನಿಮಗೆ ನಿಮ್ಮದೇ ಆದಂಥ ಕೆಲವೊಂದು ಸಮಸ್ಯೆಗಳು ಇರುತ್ತವೆ. ಹಾಗಾಗಿ ಯೆಹೋಶುವನಂತೆ ದೇವರ ವಾಕ್ಯವನ್ನು ಅಧ್ಯಯನ ಮಾಡಿ ಮತ್ತು ಅದನ್ನು ಪಾಲಿಸಿ. ಹೀಗೆ ಮಾಡಿದರೆ ನೀವೂ ಒಳ್ಳೇ ನಿರ್ಧಾರ ಮಾಡುವಿರಿ ಮತ್ತು ಯಶಸ್ಸನ್ನು ಪಡಕೊಳ್ಳುವಿರಿ.