ಜೀವನ ಕಥೆ
ನಮಗೆ ‘ಯೆಹೋವನು ಮಹಾ ಉಪಕಾರಗಳನ್ನು ಮಾಡಿದ್ದಾನೆ’
ನಾವು ಪಶ್ಚಿಮ ಆಫ್ರಿಕದಲ್ಲಿರುವ ಗಬಾನ್ಗೆ ಬಂದು ಕೆಲವೇ ತಾಸಾಗಿತ್ತು. ನನ್ನ ಪತ್ನಿ ಡಾನಿಯೆಲ ಮತ್ತು ನಾನು ಲಾಡ್ಜ್ಗೆ ಬಂದು ಸೇರಿದ ಕೂಡಲೆ ಅಲ್ಲಿದ್ದ ರಿಸೆಪ್ಷನಿಸ್ಟ್ “ಸರ್, ದಯವಿಟ್ಟು ಗಡಿ ಪೊಲೀಸರಿಗೆ ಫೋನ್ ಮಾಡಿ” ಎಂದರು. ಗಬಾನ್ನಲ್ಲಿ ನಮ್ಮ ಕೆಲಸ 1970ನೇ ದಶಕದಲ್ಲಿ ನಿಷೇಧವಾಗಿತ್ತು.
ಡಾನಿಯೆಲ ತುಂಬ ಚುರುಕು. ತಕ್ಷಣ ಅವಳು ನನ್ನ ಕಿವಿಯಲ್ಲಿ, “ಪೊಲೀಸರಿಗೆ ಫೋನ್ ಮಾಡುವುದು ಬೇಡ, ಅವರೇ ಬಂದಿದ್ದಾರೆ” ಎಂದು ಪಿಸುಗುಟ್ಟಿದಳು. ನಮ್ಮ ಹಿಂದೆನೇ ಒಂದು ಗಾಡಿ ಲಾಡ್ಜ್ ಮುಂದೆ ಬಂದು ನಿಂತಿತು. ಕೆಲವೇ ನಿಮಿಷದಲ್ಲಿ ನಮ್ಮಿಬ್ಬರನ್ನು ಬಂಧಿಸಿದರು. ಆದರೆ ಡಾನಿಯೆಲ ಕೊಟ್ಟ ಎಚ್ಚರಿಕೆಯಿಂದ ಸಹಾಯವಾಯಿತು. ನಾನು ಅಲ್ಲಿದ್ದ ಒಬ್ಬ ಸಹೋದರನಿಗೆ ಕೆಲವು ಡಾಕ್ಯುಮೆಂಟುಗಳನ್ನು ಕೊಡಲು ಸ್ವಲ್ಪ ಸಮಯ ಸಿಕ್ಕಿತು.
ನಮ್ಮನ್ನು ಪೊಲೀಸ್ ಠಾಣೆಗೆ ಕರಕೊಂಡು ಹೋಗುತ್ತಿರುವಾಗ, ‘ನನ್ನ ಹೆಂಡತಿ ಎಷ್ಟು ಧೈರ್ಯಶಾಲಿ! ಯೆಹೋವನ ಬಗ್ಗೆ, ಆತನ ಸಂಘಟನೆ ಬಗ್ಗೆ ಎಷ್ಟು ಚಿಂತಿಸುತ್ತಾಳೆ! ಇಂಥ ಹೆಂಡತಿ ನನಗೆ ಸಿಕ್ಕಿರುವುದು ನಿಜವಾಗಲೂ ದೊಡ್ಡ ಆಶೀರ್ವಾದನೇ’ ಅಂತ ಯೋಚಿಸಿದೆ. ನಾವಿಬ್ಬರೂ ಈ ತರ ಎಷ್ಟೋ ಸಲ ಕೆಲವು ಸನ್ನಿವೇಶಗಳನ್ನು ಚಾಣಾಕ್ಷದಿಂದ ನಿಭಾಯಿಸಿದ್ದೇವೆ. ನಮ್ಮ ಸಾರುವ ಕೆಲಸ ನಿರ್ಬಂಧಿಸಲ್ಪಟ್ಟಿದ್ದ ದೇಶಗಳಿಗೆ ಭೇಟಿಕೊಡುವ ಅವಕಾಶ ನಮಗೆ ಹೇಗೆ ಸಿಕ್ಕಿತು ಅಂತ ಹೇಳುವುದಕ್ಕೆ ಮುಂಚೆ ನನ್ನ ಜೀವನದ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ.
ಮಹಾ ಉಪಕಾರಿಯಾದ ಯೆಹೋವ ನನ್ನ ಕಣ್ತೆರೆದ
ಉತ್ತರ ಫ್ರಾನ್ಸ್ನಲ್ಲಿರುವ ಸಣ್ಣ ಪಟ್ಟಣವಾದ ಕೃವಾದಲ್ಲಿ ನಾನು 1930ರಲ್ಲಿ ಹುಟ್ಟಿದೆ. ನನ್ನ ಕುಟುಂಬದವರು ಕಟ್ಟಾ ಕ್ಯಾಥೊಲಿಕರಾಗಿದ್ದರು. ನಾವೆಲ್ಲರೂ ಪ್ರತಿ ವಾರ ಚರ್ಚಿಗೆ ಹೋಗುತ್ತಿದ್ವಿ. ಅಪ್ಪ ಚರ್ಚಿಗೆ ಸಂಬಂಧಪಟ್ಟ ತುಂಬ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ನನಗೆ 14 ವರ್ಷ ಇದ್ದಾಗ ಚರ್ಚಿನಲ್ಲಿ ನಡೆಯುತ್ತಿದ್ದ ಕಪಟತನ ಬೆಳಕಿಗೆ ಬಂತು. ಇದರಿಂದ ನನ್ನ ಕಣ್ತೆರೆಯಿತು.
ಫ್ರಾನ್ಸ್ 2ನೇ ಲೋಕ ಯುದ್ಧದ ಸಮಯದಲ್ಲಿ ಜರ್ಮನಿ ಸೈನ್ಯದ ಹತೋಟಿಯಲ್ಲಿತ್ತು. ನಮ್ಮ ಪಾದ್ರಿ ತನ್ನ ಪ್ರಸಂಗಗಳಲ್ಲಿ ವೀಶೀಯಲ್ಲಿ ಸ್ಥಾಪನೆಯಾಗಿದ್ದ ನಾಜಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಹೇಳುತ್ತಿದ್ದನು. ಅವನ ಪ್ರಸಂಗಗಳನ್ನು ಕೇಳಿ ನಮಗೆ ತುಂಬ ಆಘಾತ ಆಗುತ್ತಿತ್ತು. ಫ್ರಾನ್ಸ್ನಲ್ಲಿದ್ದ ಅನೇಕರು ಮಾಡುತ್ತಿದ್ದಂತೆ ನಾವು ಸಹ ಕದ್ದುಮುಚ್ಚಿ ಬಿ.ಬಿ.ಸಿ. ರೇಡಿಯೋ ಕೇಳಿಸಿಕೊಳ್ಳುತ್ತಿದ್ವಿ. ಇದರಲ್ಲಿ ಮೈತ್ರಿ ಪಡೆಗಳು ಕೊಡುತ್ತಿದ್ದ ಸುದ್ದಿ ಸಿಗುತ್ತಿತ್ತು. 1944ರ ಸೆಪ್ಟೆಂಬರ್ ತಿಂಗಳಲ್ಲಿ ಆ ಪಾದ್ರಿ ಒಮ್ಮೆಲೆ ಉಲ್ಟಾ ಹೊಡೆದ. ಮೈತ್ರಿ ಪಡೆಗಳು ಮುನ್ನಡೆ ಸಾಧಿಸಿರುವುದನ್ನು ಕೊಂಡಾಡಲು ಒಂದು ಕೃತಜ್ಞತಾಸ್ತುತಿ ಸೇವೆಗಾಗಿ ಏರ್ಪಾಡು ಮಾಡಿದನು. ಈ ಕಪಟತನ ನೋಡಿ ದಂಗಾದೆ. ಪಾದ್ರಿಗಳ ಮೇಲಿದ್ದ ನಂಬಿಕೆ ಹಾಳಾಗಿಹೋಯಿತು.
ಯುದ್ಧ ಮುಗಿದ ಸ್ವಲ್ಪದರಲ್ಲೇ ಅಪ್ಪ ತೀರಿಕೊಂಡರು. ಅಕ್ಕನಿಗೆ ಆಗಲೇ ಮದುವೆಯಾಗಿ ಬೆಲ್ಜಿಯಂನಲ್ಲಿ ಇದ್ದಳು. ಆದ್ದರಿಂದ ಅಮ್ಮನ್ನ ನಾನೇ ನೋಡಿಕೊಳ್ಳಬೇಕು ಎಂದನಿಸಿತು. ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಈ ಕೆಲಸದಿಂದ ನನ್ನ ಜೀವನ ಚೆನ್ನಾಗಿರುತ್ತೆ ಅಂತ ಅನಿಸಿತು. ಆದರೆ ಫ್ಯಾಕ್ಟರಿಯ ಮಾಲೀಕ ಮತ್ತು ಅವರ ಮಕ್ಕಳು ಕಟ್ಟಾ ಕ್ಯಾಥೊಲಿಕರಾಗಿದ್ದರು. ಇದರಿಂದ ಒಂದು ಪರೀಕ್ಷೆ ಎದುರಿಸಬೇಕಿತ್ತು.
ಯೆಹೋವನ ಸಾಕ್ಷಿಯಾಗಿದ್ದ ಅಕ್ಕ ಸೀಮೋನ್ 1953ರಲ್ಲಿ ನಮ್ಮನ್ನು ನೋಡಲು ಬಂದಳು. ಅವಳು ತನ್ನ ಬೈಬಲನ್ನು ನಿಪುಣತೆಯಿಂದ ಬಳಸುತ್ತಾ ನರಕಾಗ್ನಿ, ತ್ರಿಯೇಕ ಮತ್ತು ಅಮರ ಆತ್ಮದ ಬಗ್ಗೆ
ಕ್ಯಾಥೊಲಿಕ್ ಚರ್ಚು ಬೋಧಿಸುತ್ತಿರುವುದು ಸುಳ್ಳು ಎಂದು ತೋರಿಸಿಕೊಟ್ಟಳು. ಅವಳು ಕ್ಯಾಥೊಲಿಕ್ ಬೈಬಲ್ ಬಳಸುತ್ತಿಲ್ಲ ಎಂದು ನಾನು ಆರಂಭದಲ್ಲಿ ವಾದ ಮಾಡಿದೆ. ಆದರೆ ಆಮೇಲೆ ಅವಳು ಹೇಳುತ್ತಿರುವುದು ಸತ್ಯ ಎಂದು ಅನಿಸಿತು. ನಂತರ ಅವಳು ನನಗೆ ಕೆಲವು ಹಳೇ ಕಾವಲಿನಬುರುಜು ಪತ್ರಿಕೆಗಳನ್ನು ತಂದು ಕೊಟ್ಟಳು. ಅದನ್ನು ರಾತ್ರಿ ತುಂಬ ಆಸಕ್ತಿಯಿಂದ ಓದುತ್ತಿದ್ದೆ. ಇದೇ ಸತ್ಯ ಎಂದು ನನಗೆ ಬೇಗ ಅರ್ಥವಾಯಿತು. ಆದರೆ ಯೆಹೋವನ ಪಕ್ಷ ವಹಿಸಿದರೆ ಕೆಲಸ ಕಳಕೊಳ್ಳಬೇಕಾಗುತ್ತದೆ ಎಂಬ ಭಯ ಇತ್ತು.ಕೆಲವು ತಿಂಗಳು ಬೈಬಲನ್ನು, ಕಾವಲಿನಬುರುಜು ಲೇಖನಗಳನ್ನು ನಾನೇ ಓದಿಕೊಳ್ಳುತ್ತಿದ್ದೆ. ಆಮೇಲೆ ಒಂದಿನ ರಾಜ್ಯ ಸಭಾಗೃಹಕ್ಕೆ ಹೋಗಲು ತೀರ್ಮಾನಿಸಿದೆ. ಅಲ್ಲಿದ್ದ ಪ್ರೀತಿಯ ವಾತಾವರಣ ತುಂಬ ಇಷ್ಟವಾಯಿತು. ಒಬ್ಬ ಅನುಭವಸ್ಥ ಸಹೋದರನೊಂದಿಗೆ ಆರು ತಿಂಗಳು ಬೈಬಲ್ ಅಧ್ಯಯನ ಮಾಡಿದ ಮೇಲೆ 1954ರ ಸೆಪ್ಟೆಂಬರ್ ತಿಂಗಳಲ್ಲಿ ದೀಕ್ಷಾಸ್ನಾನ ಪಡೆದೆ. ಇದಾಗಿ ಸ್ವಲ್ಪದರಲ್ಲೇ ಅಮ್ಮ, ತಂಗಿ ಕೂಡ ಸಾಕ್ಷಿಯಾದರು. ಇದರಿಂದ ತುಂಬ ಖುಷಿ ಆಯಿತು.
ಯೆಹೋವನ ಮೇಲೆ ಭರವಸೆ ಇಟ್ಟು ಮಾಡಿದ ಪೂರ್ಣ ಸಮಯದ ಸೇವೆ
1958ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಕೆಲವೇ ವಾರಗಳಿದ್ದಾಗ ಅಮ್ಮ ತೀರಿಕೊಂಡರು. ನನಗೆ ಆ ಅಧಿವೇಶನಕ್ಕೆ ಹಾಜರಾಗುವ ಸುಯೋಗ ಸಿಕ್ತು. ಅಧಿವೇಶನದಿಂದ ಬಂದಾಗ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ನನಗಿರಲಿಲ್ಲ. ಹಾಗಾಗಿ ಕೆಲಸ ಬಿಟ್ಟು ಪಯನೀಯರ್ ಸೇವೆ ಆರಂಭಿಸಿದೆ. ಆಗ ಹುರುಪಿನ ಪಯನೀಯರ್ ಆಗಿದ್ದ ಡಾನಿಯೆಲ ಡಲೀ ಜೊತೆ ನನಗೆ ನಿಶ್ಚಿತಾರ್ಥವಾಯಿತು. 1959ರ ಮೇ ತಿಂಗಳಲ್ಲಿ ನಮ್ಮ ಮದುವೆಯಾಯಿತು.
ಡಾನಿಯೆಲ ತನ್ನ ಮನೆಯಿಂದ ತುಂಬ ದೂರದಲ್ಲಿದ್ದ ಬ್ರಿಟನಿಯ ಗ್ರಾಮಾಂತರ ಪ್ರದೇಶದಲ್ಲಿ ಪೂರ್ಣ ಸಮಯದ ಸೇವೆ ಆರಂಭಿಸಿದ್ದಳು. ಹೆಚ್ಚು ಕ್ಯಾಥೊಲಿಕರೇ ಇದ್ದ ಆ ಪ್ರದೇಶದಲ್ಲಿ ಸಾರಲು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸೈಕಲಲ್ಲಿ ಓಡಾಡಲು ಅವಳಿಗೆ ಧೈರ್ಯ ಬೇಕಾಗಿತ್ತು. ನನ್ನಲ್ಲಿದ್ದಂತೆ ಅವಳಲ್ಲೂ ತುಂಬ ತುರ್ತುಪ್ರಜ್ಞೆ ಇತ್ತು. ಅಂತ್ಯ ತುಂಬ ಹತ್ತಿರ ಇದೆ ಅಂತ ನಮ್ಮಿಬ್ಬರಿಗೂ ಅನಿಸಿತು. (ಮತ್ತಾ. 25:13) ಅವಳ ಸ್ವತ್ಯಾಗ ಮನೋಭಾವದಿಂದಾಗಿ ನಾವು ಪೂರ್ಣ ಸಮಯದ ಸೇವೆಯಲ್ಲಿ ಉಳಿಯಲು ಸಾಧ್ಯವಾಯಿತು.
ಮದುವೆಯಾಗಿ ಸ್ವಲ್ಪದರಲ್ಲೇ ಸರ್ಕಿಟ್ ಕೆಲಸ ಮಾಡುವ ನೇಮಕ ಸಿಕ್ತು. ನಾವು ಭೇಟಿಕೊಟ್ಟ ಸಭೆಗಳವರು ಮಾಡಿದ ಸರಳವಾದ ಏರ್ಪಾಡುಗಳಿಗೆ ಹೊಂದಿಕೊಳ್ಳಬೇಕಿತ್ತು. ನಾವು ಭೇಟಿಮಾಡಿದ ಮೊದಲನೇ ಸಭೆಯಲ್ಲಿ ಕೇವಲ 14 ಪ್ರಚಾರಕರಿದ್ದರು. ಅವರ ಮನೆಯಲ್ಲಿ ಉಳುಕೊಳ್ಳಲು ನಮಗೆ ಜಾಗ ಇರಲಿಲ್ಲ. ಆದ್ದರಿಂದ ನಾವು ರಾಜ್ಯ ಸಭಾಗೃಹದ ವೇದಿಕೆಯ ಮೇಲೆ ಮಲಗಬೇಕಿತ್ತು. ಸ್ವಲ್ಪ ಕಷ್ಟ ಆಯಿತು, ಆದರೆ ಹಾಗೆ ಮಲಗುವುದು ಬೆನ್ನಿಗೆ ಒಳ್ಳೇದು ಅಂತಾರೆ!
ನಾವು ಬ್ಯುಸಿ ಇದ್ದರೂ ಡಾನಿಯೆಲ ಸಂಚರಣ ಕೆಲಸಕ್ಕೆ ಒಳ್ಳೇದಾಗಿ ಹೊಂದಿಕೊಂಡಳು. ಯಾವಾಗಾದರೂ ಅನಿರೀಕ್ಷಿತವಾಗಿ ಹಿರಿಯರ ಕೂಟ ಏರ್ಪಾಡಾದರೆ ಡಾನಿಯೆಲ ನಮ್ಮ ಚಿಕ್ಕ ಕಾರಲ್ಲಿ ಕಾಯಬೇಕಾಗಿತ್ತು. ಹೀಗೆ ಎಷ್ಟೋ ಸಲ ಆಗಿದೆ. ಆದರೆ ಅವಳು ಯಾವತ್ತೂ ಗೊಣಗಿಲ್ಲ. ಬರೀ ಎರಡು ವರ್ಷ ಸರ್ಕಿಟ್ ಕೆಲಸದಲ್ಲಿ ಇದ್ವಿ. ಗಂಡ-ಹೆಂಡತಿ ಮುಕ್ತವಾಗಿ ಮಾತಾಡಬೇಕು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಈ ಸಮಯದಲ್ಲಿ ಕಲಿತ್ವಿ.—ಪ್ರಸಂ. 4:9.
ಹೊಸ ಸೇವಾ ಸುಯೋಗಗಳು
1962ರಲ್ಲಿ ನಮ್ಮನ್ನು 37ನೇ ಗಿಲ್ಯಡ್ ಶಾಲೆಗೆ ಆಮಂತ್ರಿಸಲಾಯಿತು. ಇದು ಬ್ರೂಕ್ಲಿನ್ನಲ್ಲಿ 10 ತಿಂಗಳು ನಡೆಯಲಿತ್ತು. 100 ವಿದ್ಯಾರ್ಥಿಗಳಲ್ಲಿ 13 ದಂಪತಿ ಮಾತ್ರ ಇದ್ದರು. ನಮ್ಮಿಬ್ಬರಿಗೂ ಅವಕಾಶ ಸಿಕ್ಕಿದ್ದು ಒಂದು ಸುಯೋಗ ಅನಿಸಿತು. ನಂಬಿಕೆಯಲ್ಲಿ ಸ್ತಂಭಗಳಂತಿದ್ದ ಫ್ರೆಡ್ರಿಕ್ ಫ್ರಾನ್ಸ್, ಯುಲಿಸೀಸ್ ಗ್ಲಾಸ್, ಎ. ಹೆಚ್. ಮ್ಯಾಕ್ಮಿಲನ್ರಂಥ ಸಹೋದರರ ಜೊತೆ ಸಹವಾಸ ಮಾಡುವ ಅವಕಾಶ ಸಿಕ್ತು. ಆ ಸವಿನೆನಪುಗಳು ಇನ್ನೂ ಹಚ್ಚಹಸಿರಾಗಿವೆ.
ಶಾಲೆಯಲ್ಲಿ ನಾವು ಗಮನಕೊಡುವ ಕಲೆಯನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು. ಕೆಲವು ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಮೇಲೆ ನಮ್ಮನ್ನು ನ್ಯೂಯಾರ್ಕ್ ನಗರವನ್ನು ತೋರಿಸಲು ಕರಕೊಂಡು ಹೋಗುತ್ತಿದ್ದರು. ಆಮೇಲೆ ನಾವು ಏನು ನೋಡಿದ್ವಿ ಅಂತ ಸೋಮವಾರ ಬರೆಯಬೇಕಿತ್ತು. ಸುತ್ತಾಡಿ ಸುಸ್ತಾಗಿ ವಾಪಸ್
ಬರುತ್ತಿದ್ವಿ. ನಮಗೆ ನಗರವನ್ನು ತೋರಿಸುತ್ತಿದ್ದ ಬೆತೆಲ್ ಸದಸ್ಯ ಕೆಲವು ಪ್ರಶ್ನೆ ಕೇಳುತ್ತಿದ್ದ. ಇದರಿಂದ ಸೋಮವಾರ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸುಲಭ ಆಗುತ್ತಿತ್ತು. ಒಂದು ಶನಿವಾರ ಮಧ್ಯಾಹ್ನ ಪೂರ್ತಿ ನಾವು ನಗರದಲ್ಲಿ ಸುತ್ತಾಡಿದ್ವಿ. ಒಂದು ವೀಕ್ಷಣಾಲಯಕ್ಕೆ ಹೋಗಿ ಉಲ್ಕೆ ಮತ್ತು ಉಲ್ಕೆಯುಳಿಕೆಗಳ ಬಗ್ಗೆ ಕಲಿತ್ವಿ. ನೈಸರ್ಗಿಕ ಇತಿಹಾಸದ ಸಂಗ್ರಹಾಲಯಕ್ಕೆ ಹೋದಾಗ ಬೇರೆ ಬೇರೆ ರೀತಿಯ ಮೊಸಳೆಗಳ ಬಗ್ಗೆ ಕಲಿತ್ವಿ. ಇದೆಲ್ಲಾ ಮುಗಿಸಿ ವಾಪಸ್ ಬಂದಾಗ ನಗರವನ್ನು ತೋರಿಸಿದ್ದ ಸಹೋದರ ನಮಗೆ, “ಉಲ್ಕೆ ಮತ್ತು ಉಲ್ಕೆಯುಳಿಕೆ ಮಧ್ಯೆ ಏನು ವ್ಯತ್ಯಾಸ ಹೇಳಿ?” ಅಂತ ಕೇಳಿದನು. ಸೋತು ಸುಣ್ಣ ಆಗಿದ್ದ ಡಾನಿಯೆಲ ಅದಕ್ಕೆ, “ಉಲ್ಕೆಯುಳಿಕೆಗೆ ಹಲ್ಲು ಉದ್ದ ಇರುತ್ತೆ” ಅಂದುಬಿಟ್ಟಳು!ಶಾಲೆಯಾದ ಮೇಲೆ ನಮ್ಮನ್ನು ಫ್ರಾನ್ಸ್ ಶಾಖೆಗೆ ನೇಮಿಸಿದಾಗ ತುಂಬ ಆಶ್ಚರ್ಯ ಆಯಿತು. ಅಲ್ಲಿ 53 ವರ್ಷ ಒಟ್ಟಿಗೆ ಸೇವೆ ಮಾಡಿದ್ವಿ. 1976ರಲ್ಲಿ ನನ್ನನ್ನು ಶಾಖಾ ಸಮಿತಿಯ ಸಂಯೋಜಕನಾಗಿ ನೇಮಿಸಲಾಯಿತು. ಅದರ ಜೊತೆಗೆ ಸಾರುವ ಕೆಲಸಕ್ಕೆ ನಿಷೇಧ ಅಥವಾ ನಿರ್ಬಂಧ ಇದ್ದ ದೇಶಗಳಿಗೂ ಭೇಟಿಕೊಡಬೇಕಿತ್ತು. ಈ ಕಾರಣದಿಂದ ಆಫ್ರಿಕ ಮತ್ತು ಮಧ್ಯಪೂರ್ವದಲ್ಲಿದ್ದ ದೇಶಗಳಿಗೆ ಭೇಟಿಕೊಟ್ಟಿದ್ದೇನೆ. ಹೀಗೆ ನಾವು ಗಬಾನ್ಗೆ ಬಂದದ್ದು. ಅಲ್ಲೇ ನಮಗೆ ಆರಂಭದಲ್ಲಿ ಹೇಳಿದ ಅನುಭವ ಆಗಿದ್ದು. ನನಗೆ ಇಷ್ಟು ದೊಡ್ಡ ಜವಾಬ್ದಾರಿಗಳು ಸಿಗುತ್ತವೆ ಎಂದು ಯಾವತ್ತೂ ನೆನಸಿರಲಿಲ್ಲ. ಕೆಲವೊಮ್ಮೆ ನನ್ನಲ್ಲಿ ಅಷ್ಟು ಸಾಮರ್ಥ್ಯ ಇಲ್ಲ ಅನಿಸುತ್ತಿತ್ತು. ಆದರೆ ಯಾವುದೇ ನೇಮಕವನ್ನು ನಿಭಾಯಿಸಲು ಡಾನಿಯೆಲ ನನಗೆ ತುಂಬ ಸಹಾಯ ಮಾಡಿದಳು.
ದೊಡ್ಡ ಪರೀಕ್ಷೆ
ಆರಂಭದಿಂದಲೇ ನಮಗೆ ಬೆತೆಲ್ ಸೇವೆ ತುಂಬ ಇಷ್ಟವಾಗಿತ್ತು. ಗಿಲ್ಯಡ್ ಹೋಗೋ ಮುಂಚೆ ಡಾನಿಯೆಲ ಐದು ತಿಂಗಳಲ್ಲೇ ಇಂಗ್ಲಿಷ್ ಕಲಿತಿದ್ದಳು. ಇದರಿಂದ ಅವಳಿಗೆ ನಮ್ಮ ಪ್ರಕಾಶನಗಳನ್ನು ಭಾಷಾಂತರಿಸುವ ನೇಮಕ ಸಿಕ್ತು. ಇದನ್ನು ತುಂಬ ಚೆನ್ನಾಗಿ ಮಾಡುತ್ತಿದ್ದಳು. ಬೆತೆಲ್ ಕೆಲಸದಲ್ಲಿ ನಮಗೆ ತುಂಬ ತೃಪ್ತಿ ಸಿಗುತ್ತಿತ್ತು. ಸಭೆಯ ಚಟುವಟಿಕೆಗಳಲ್ಲಿ ತೊಡಗಿದಾಗ ನಮ್ಮ ಸಂತೋಷ ಹೆಚ್ಚಾಗುತ್ತಿತ್ತು. ನಾನು ಮತ್ತು ಡಾನಿಯೆಲ ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸಿ ರಾತ್ರಿ ತಡವಾಗಿ ಪ್ಯಾರಿಸ್ನ ಮೆಟ್ರೋ ರೈಲು ಹತ್ತಿ ಬರುತ್ತಿದ್ದದ್ದು ನನಗಿನ್ನೂ ನೆನಪಿದೆ. ತುಂಬ ಸುಸ್ತಾಗಿದ್ದರೂ ಸಂತೋಷವಾಗಿ ಹಿಂದೆ ಬರುತ್ತಿದ್ವಿ. ಆದರೆ ದಿಢೀರನೆ ಡಾನಿಯೆಲ ಆರೋಗ್ಯ ಹಾಳಾದಾಗ ಅವಳು ಬಯಸಿದಷ್ಟು ಸೇವೆ ಮಾಡಲು ಆಗಲಿಲ್ಲ.
1993ರಲ್ಲಿ ಡಾನಿಯೆಲಗೆ ಸ್ತನ ಕ್ಯಾನ್ಸರ್ ಇದೆ ಎಂದು ಗೊತ್ತಾಯಿತು. ಇದಕ್ಕೆ ಅವಳಿಗೆ ಕೊಡಲಾದ ಚಿಕಿತ್ಸೆ ತುಂಬ ಘೋರವಾಗಿತ್ತು. ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಅವಳನ್ನು ಹಿಂಡಿ ಹಿಪ್ಪೆ ಮಾಡಿಬಿಡ್ತು. 15 ವರ್ಷಗಳಾದ ಮೇಲೆ ಅವಳಿಗೆ ಪುನಃ ಕ್ಯಾನ್ಸರ್ ಬಂತು. ಇದು ಇನ್ನೂ ಭಯಂಕರವಾದ ಕ್ಯಾನ್ಸರ್ ಆಗಿತ್ತು. ಆದರೆ ಅವಳಿಗೆ ಭಾಷಾಂತರ ಕೆಲಸ ತುಂಬ ಇಷ್ಟ. ಅವಳ ಆರೋಗ್ಯ ಸುಧಾರಿಸಿದಾಗೆಲ್ಲಾ ಕೆಲಸಕ್ಕೆ ಓಡೋಡಿ ಬರುತ್ತಿದ್ದಳು.
ಡಾನಿಯೆಲಗೆ ಇಂಥ ಕಾಯಿಲೆ ಇದ್ದರೂ ನಾವು ಬೆತೆಲ್ ಬಿಟ್ಟು ಹೋಗುವುದರ ಬಗ್ಗೆ ಯೋಚನೆ ಮಾಡಲಿಲ್ಲ. ಆದರೆ ಬೆತೆಲಲ್ಲಿದ್ದು ಒಳ್ಳೇ ಆರೋಗ್ಯ ಇಲ್ಲ ಅಂದರೆ ಕೆಲವು ಸವಾಲುಗಳು ಎದುರಾಗುತ್ತವೆ. ಬೇರೆಯವರಿಗೆ ನಿಮ್ಮ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಗೊತ್ತಿಲ್ಲದೆ ಇದ್ದರಂತೂ ತುಂಬ ಕಷ್ಟ. (ಜ್ಞಾನೋ. 14:13) ಡಾನಿಯೆಲಗೆ 75ಕ್ಕಿಂತ ಹೆಚ್ಚು ಪ್ರಾಯವಾಗಿದ್ದರೂ ಅವಳ ಮುದ್ದಾದ ಮುಖ ಮತ್ತು ನಯನಾಜೂಕನ್ನು ನೋಡಿದಾಗ ಅವಳಿಗೆ ಆಗುತ್ತಿದ್ದ ನೋವು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಅವಳು ಯಾವತ್ತೂ ತನ್ನ ಬಗ್ಗೆಯೇ ನೆನಸಿಕೊಂಡು ಕೊರಗಿದವಳಲ್ಲ. ಬೇರೆಯವರಿಗೆ ಸಹಾಯ ಮಾಡುವುದರ ಮೇಲೆ ಗಮನ ಇಟ್ಟಿದ್ದಳು. ಕಷ್ಟದಲ್ಲಿರುವವರಿಗೆ ಕಿವಿಗೊಟ್ಟರೆ ಅವರಿಗೆ ತುಂಬ ಸಹಾಯ ಆಗುತ್ತದೆ ಎಂದು ನಂಬಿದ್ದಳು. (ಜ್ಞಾನೋ. 17:17) ಡಾನಿಯೆಲ ಯಾವತ್ತೂ ಸಲಹೆಗಾರಳಾಗಲು ಬಯಸಲಿಲ್ಲ. ಆದರೂ ಕ್ಯಾನ್ಸರ್ಗೆ ಹೆದರದಂತೆ ಎಷ್ಟೋ ಸಹೋದರಿಯರಿಗೆ ಸ್ವಂತ ಅನುಭವ ಹೇಳಿ ಧೈರ್ಯ ತುಂಬಿದ್ದಾಳೆ.
ನಾವು ಹೊಸ ಸವಾಲುಗಳನ್ನೂ ಎದುರಿಸಬೇಕಿತ್ತು. ಡಾನಿಯೆಲಗೆ ಇಡೀ ದಿನ ಕೆಲಸ ಮಾಡಲಿಕ್ಕಾಗಲಿಲ್ಲ. ಆದರೂ ನನಗೆ ಹೆಚ್ಚು ಬೆಂಬಲ ಕೊಟ್ಟಳು. ನನ್ನ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಲು ಸಹಾಯ ಮಾಡಿದಳು. ಇದರಿಂದ ನಾನು 37 ವರ್ಷ ಶಾಖಾ ಸಮಿತಿಯ ಸಂಯೋಜಕನಾಗಿರಲು ಸಾಧ್ಯವಾಯಿತು. ನಮ್ಮ ರೂಮಲ್ಲಿ ಜ್ಞಾನೋ. 18:22.
ಒಟ್ಟಿಗೆ ಮಧ್ಯಾಹ್ನದ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯಲು ಬೇಕಾದ ಏರ್ಪಾಡುಗಳನ್ನು ಮಾಡುತ್ತಿದ್ದಳು.—ಪ್ರತಿ ದಿನ ಮಾಡಿದ ಹೋರಾಟ
ಡಾನಿಯೆಲ ತುಂಬ ಆಶಾವಾದಿಯಾಗಿದ್ದಳು ಮತ್ತು ಬದುಕಲು ಇಷ್ಟಪಟ್ಟಳು. ಮೂರನೇ ಸಲ ಕ್ಯಾನ್ಸರ್ ಬಂದಾಗಂತೂ ಸಹಿಸಿಕೊಳ್ಳುವ ಶಕ್ತಿ ಅವಳಿಗಿರಲಿಲ್ಲ. ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಅವಳ ಶಕ್ತಿಯನ್ನೆಲ್ಲಾ ಹೀರಿಬಿಡುತ್ತಿತ್ತು. ಇದರಿಂದ ಕೆಲವೊಮ್ಮೆ ನಡಿಯಕ್ಕೂ ಆಗುತ್ತಿರಲಿಲ್ಲ. ನನ್ನ ಪ್ರೀತಿಯ ಹೆಂಡತಿ, ಒಳ್ಳೇ ಭಾಷಾಂತರಗಾರಳಾಗಿದ್ದ ನನ್ನ ಹೆಂಡತಿ ಪದಗಳಿಗಾಗಿ ತಡಕಾಡುವುದನ್ನು ನೋಡುವಾಗ ನನ್ನ ಹೃದಯ ಹಿಂಡಿದ ಹಾಗೆ ಆಗುತ್ತಿತ್ತು.
ನಮಗೆ ದಿಕ್ಕೇ ಕಾಣದಿದ್ದರೂ ಪ್ರಾರ್ಥಿಸುವುದನ್ನು ಬಿಟ್ಟುಬಿಡಲಿಲ್ಲ. ನಮ್ಮಿಂದ ತಾಳಕ್ಕಾಗದಷ್ಟು ಕಷ್ಟ ನಮ್ಮ ಮೇಲೆ ಬರಲು ಯೆಹೋವನು ಬಿಡಲ್ಲ ಎಂಬ ಭರವಸೆ ನಮಗಿತ್ತು. (1 ಕೊರಿಂ. 10:13) ಯೆಹೋವನು ತನ್ನ ವಾಕ್ಯದ ಮೂಲಕ, ಬೆತೆಲ್ನಲ್ಲಿರುವ ವೈದ್ಯಕೀಯ ಸಿಬ್ಬಂದಿಯ ಮೂಲಕ ಮತ್ತು ಸಹೋದರ-ಸಹೋದರಿಯರ ಮೂಲಕ ಕೊಟ್ಟ ಸಹಾಯವನ್ನು ನಾವು ಯಾವತ್ತೂ ಹಗುರವಾಗಿ ನೋಡಲಿಲ್ಲ.
ಸರಿಯಾದ ಚಿಕಿತ್ಸೆಯನ್ನು ಆರಿಸಿಕೊಳ್ಳಲು ಸಹಾಯ ಮಾಡುವಂತೆ ಯೆಹೋವನಿಗೆ ಆಗಾಗ ಕೇಳುತ್ತಿದ್ವಿ. ಯಾಕೆಂದರೆ ಒಂದು ಸಂದರ್ಭದಲ್ಲಿ ನಮಗೆ ದಿಕ್ಕೇ ಕಾಣಲಿಲ್ಲ. ಡಾನಿಯೆಲಗೆ ಕೀಮೋಥೆರಪಿ ಕೊಟ್ಟಾಗೆಲ್ಲಾ ಪ್ರಜ್ಞೆ ತಪ್ಪುತ್ತಿತ್ತು. ಯಾಕೆ ಹೀಗಾಗುತ್ತಿದೆ, ಯಾವ ಬದಲಿ ಚಿಕಿತ್ಸೆ ಕೊಡುವುದು ಎಂದು 23 ವರ್ಷಗಳಿಂದ ಡಾನಿಯೆಲಗೆ ಚಿಕಿತ್ಸೆ ಕೊಡುತ್ತಿದ್ದ ಡಾಕ್ಟರಿಗೇ ಗೊತ್ತಾಗಲಿಲ್ಲ. ಇನ್ನು ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ಆಗ ಡಾನಿಯೆಲಗೆ ಚಿಕಿತ್ಸೆ ಕೊಡಲು ಇನ್ನೊಬ್ಬ ಡಾಕ್ಟರ್ ಮುಂದೆ ಬಂದರು. ನಮ್ಮ ಚಿಂತೆಗಳನ್ನು ನಿಭಾಯಿಸಲು ಯೆಹೋವನೇ ದಾರಿ ತೋರಿಸಿದನು ಎಂದು ನಮಗನಿಸಿತು.
ನಾವು ಚಿಂತೆ ಮಾಡುವ ಬದಲು ಯೇಸುವಿನ ಸಲಹೆಯಂತೆ ನಡೆಯಲು ಕಲಿತ್ವಿ. ನಾಳೆ ಬಗ್ಗೆ ಚಿಂತೆಮಾಡುವುದನ್ನು ಬಿಟ್ಟು ಪ್ರತಿ ದಿನದ ಸವಾಲುಗಳನ್ನು ಒಂದೊಂದಾಗಿ ನಿಭಾಯಿಸೋಣ ಎಂದು ತೀರ್ಮಾನಿಸಿದ್ವಿ. (ಮತ್ತಾ. 6:34) ಸಕಾರಾತ್ಮಕವಾಗಿ ಯೋಚಿಸುವುದು, ಸ್ವಲ್ಪ ತಮಾಷೆ ಮಾಡುವುದು ಕೂಡ ಸಹಾಯ ಮಾಡಿತು. ಉದಾಹರಣೆಗೆ, ಡಾನಿಯೆಲಗೆ ಎರಡು ತಿಂಗಳು ಕೀಮೋಥೆರಪಿ ಕೊಡದಿದ್ದಾಗ ಮುಖದಲ್ಲಿ ತುಂಟನಗೆ ಬೀರಿ “ನನ್ನ ಜೀವನದಲ್ಲೇ ನಾನು ಇಷ್ಟು ಖುಷಿಯಾಗಿ ಇದ್ದಿದ್ದಿಲ್ಲ” ಎಂದಳು. (ಜ್ಞಾನೋ. 17:22) ತುಂಬ ನೋವು ಅನುಭವಿಸುತ್ತಾ ಇದ್ದರೂ ಅವಳು ಹೊಸ ರಾಜ್ಯ ಗೀತೆಗಳನ್ನು ಗಟ್ಟಿ ಧ್ವನಿಯಲ್ಲಿ ಹಾಡಿ ಕಲಿಯುತ್ತಿದ್ದಳು.
ಅವಳ ಸಕಾರಾತ್ಮಕ ಮನೋಭಾವ ನೋಡಿ ನನ್ನ ಇತಿಮಿತಿಗಳನ್ನು ನಿಭಾಯಿಸಲು ಕಲಿತೆ. ನಿಜ ಹೇಳಬೇಕೆಂದರೆ, ನಾವು ಮದುವೆಯಾಗಿ 57 ವರ್ಷಗಳಲ್ಲಿ ಅವಳು ನನ್ನ ಎಲ್ಲಾ ಅಗತ್ಯಗಳನ್ನು ನೋಡಿಕೊಂಡಳು. ಮೊಟ್ಟೆ ಫ್ರೈ ಮಾಡುವುದು ಹೇಗೆ ಅನ್ನುವುದನ್ನು ಸಹ ಅವಳು ನನಗೆ ತೋರಿಸಿಕೊಡಲಿಲ್ಲ. ಅವಳಿಗೆ ತುಂಬ ಹುಷಾರಿಲ್ಲದೆ ಇದ್ದಾಗ ನಾನು ಪಾತ್ರೆ ತೊಳೆಯುವುದು ಮತ್ತು ಬಟ್ಟೆ ಒಗೆಯುವುದು ಹೇಗೆ ಎಂದು ಕಲಿಯಬೇಕಿತ್ತು. ಸರಳವಾದ ಊಟ ತಯಾರಿ ಮಾಡುವುದು ಹೇಗೆ ಎಂದು ಸಹ ಕಲಿಯಬೇಕಿತ್ತು. ಇದನ್ನು ಕಲಿಯುತ್ತಾ ನಾನು ಕೆಲವು ಗಾಜಿನ ಲೋಟಗಳನ್ನು ಒಡೆದುಹಾಕಿದ್ದೇನೆ. ಆದರೆ ಅವಳ ಖುಷಿಗಾಗಿ ಈ ಕೆಲಸಗಳನ್ನು ಮಾಡಲು ನನಗೆ ಸಂತೋಷ ಆಗುತ್ತಿತ್ತು. *
ಯೆಹೋವನ ಮಹಾ ಉಪಕಾರವನ್ನು ಯಾವತ್ತೂ ಮರೆಯಲ್ಲ
ನಾನು ಜೀವನದಲ್ಲಿ ಎಷ್ಟೋ ಒಳ್ಳೇ ಪಾಠಗಳನ್ನು ಕಲಿತಿದ್ದೇನೆ. ಆರೋಗ್ಯ ಹಾಳಾದಾಗ ಮತ್ತು ವಯಸ್ಸಾದಾಗ ಬರುವ ಇತಿಮಿತಿಗಳು ನಮಗೆ ಕೆಲವು ಪಾಠಗಳನ್ನು ಕಲಿಸುತ್ತವೆ. ಮೊದಲನೇದಾಗಿ, ನಾವು ನಮ್ಮ ಮುತ್ತಿನಂಥ ಹೆಂಡತಿಗೆ ಪ್ರೀತಿ ತೋರಿಸಲು ಸಾಧ್ಯವಿಲ್ಲದಷ್ಟು ಬ್ಯುಸಿ ಆಗಬಾರದು. ನಮಗೆ ಪ್ರಿಯರಾದವರನ್ನು ನೋಡಿಕೊಳ್ಳಲು ಶಕ್ತಿ ಇರುವಾಗ ನಮ್ಮಿಂದಾದ ಎಲ್ಲವನ್ನೂ ಮಾಡಬೇಕು. (ಪ್ರಸಂ. 9:9) ಎರಡನೇದಾಗಿ, ಚಿಕ್ಕಪುಟ್ಟ ವಿಷಯಗಳ ಬಗ್ಗೆ ತುಂಬ ಚಿಂತಿಸಬಾರದು. ಇಲ್ಲ ಅಂದರೆ ದಿನಾ ಸಿಗುವ ಅನೇಕ ಆಶೀರ್ವಾದಗಳು ನಮ್ಮ ಕಣ್ಣಿಗೆ ಬೀಳದೆ ಹೋಗಿಬಿಡುತ್ತದೆ.—ಜ್ಞಾನೋ. 15:15.
ಪೂರ್ಣ ಸಮಯದ ಸೇವೆಯಲ್ಲಿ ಕಳೆದ ನಮ್ಮ ಜೀವನದ ಬಗ್ಗೆ ಯೋಚಿಸುವಾಗ, ನಾವು ನೆನಸಿದ್ದಕ್ಕಿಂತ ಹೆಚ್ಚಾಗಿ ಯೆಹೋವನು ಆಶೀರ್ವದಿಸಿದ್ದಾನೆ ಅನ್ನುವುದಂತೂ ಖಂಡಿತ. ಕೀರ್ತನೆಗಾರನು ಹೇಳಿದಂತೆ ನನಗೂ ಅನಿಸುತ್ತದೆ: ‘ಯೆಹೋವನು ನನಗೆ ಮಹಾ ಉಪಕಾರಗಳನ್ನು ಮಾಡಿದ್ದಾನೆ.’—ಕೀರ್ತ. 116:7.
^ ಪ್ಯಾರ. 32 ಈ ಲೇಖನ ತಯಾರಾಗುತ್ತಿರುವಾಗ ಸಹೋದರಿ ಡಾನಿಯೆಲ ಬೋಕಾರ್ಟ್ ತೀರಿಕೊಂಡರು. ಅವರಿಗೆ 78 ವರ್ಷ ಆಗಿತ್ತು.