ವಾಚಕರಿಂದ ಪ್ರಶ್ನೆಗಳು
ಒಂದು ಅಪರಾಧ ನಡೆದಿದೆ ಎಂದು ಸಾಬೀತಾಗಬೇಕೆಂದರೆ ಕಡಿಮೆಪಕ್ಷ ಇಬ್ಬರು ಸಾಕ್ಷಿಗಳು ಇರಬೇಕು ಎಂದು ಬೈಬಲ್ ಹೇಳುತ್ತದೆ. (ಅರ. 35:30; ಧರ್ಮೋ. 17:6; 19:15; ಮತ್ತಾ. 18:16; 1 ತಿಮೊ. 5:19) ಆದರೆ ಧರ್ಮಶಾಸ್ತ್ರದ ಪ್ರಕಾರ, ಒಬ್ಬ ಪುರುಷನು ನಿಶ್ಚಿತಳಾದ ಹುಡುಗಿಯನ್ನು “ಅಡವಿಯಲ್ಲಿ” ಬಲಾತ್ಕಾರದಿಂದ ಸಂಗಮಿಸಿದರೆ, ಆಗ ಅವಳು ಕೂಗಿಕೊಂಡಿದ್ದರೆ ಅವಳು ನಿರಪರಾಧಿ ಎಂದು ಮತ್ತು ಅವನು ಅಪರಾಧಿ ಎಂದು ನಿರ್ಧರಿಸಲಾಗುತ್ತದೆ. ಈ ಘಟನೆಗೆ ಸಾಕ್ಷಿಗಳೇ ಇಲ್ಲದಿರುವಾಗ ಅವನನ್ನು ಅಪರಾಧಿ ಎಂದು ನಿರ್ಧರಿಸಿ ಅವಳನ್ನು ನಿರಪರಾಧಿ ಎಂದು ಯಾಕೆ ನಿರ್ಧರಿಸಲಾಗುತ್ತದೆ?
ಧರ್ಮೋಪದೇಶಕಾಂಡ 22:25-27 ರಲ್ಲಿ ಪುರುಷನು ಅಪರಾಧಿ ಎಂದು ರುಜುವಾಗಿರುವ ಸನ್ನಿವೇಶದ ಬಗ್ಗೆ ತಿಳಿಸಲಾಗಿದೆ. ಯಾವ ಸನ್ನಿವೇಶದಲ್ಲಿ ಸ್ತ್ರೀ ನಿರಪರಾಧಿ ಆಗಿರುತ್ತಾಳೆ ಎಂದು ಈ ನಿಯಮ ತಿಳಿಸುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಹಿಂದಿನ ಕೆಲವು ವಚನಗಳನ್ನು ನೋಡಿ.
ಧರ್ಮೋಪದೇಶಕಾಂಡ 22:23, 24 ರಲ್ಲಿ ಒಬ್ಬ ಪುರುಷನು ನಿಶ್ಚಿತಳಾದ ಹುಡುಗಿಯನ್ನು “ಊರೊಳಗೆ” ಸಂಗಮಿಸುವ ಸನ್ನಿವೇಶದ ಬಗ್ಗೆ ಇದೆ. ಇಲ್ಲಿ ಆ ಸ್ತ್ರೀಯನ್ನು ವಿವಾಹಿತಳೆಂದು ಪರಿಗಣಿಸಲಾಗುವುದರಿಂದ ಆ ಪುರುಷನನ್ನು ತಪ್ಪಿತಸ್ಥ ಎಂದು ನಿರ್ಧರಿಸಲಾಗುತ್ತದೆ. ಆ ಸ್ತ್ರೀಯು “ಊರಲ್ಲಿದ್ದು ಕೂಗಿಕೊಳ್ಳದೆಹೋಗಿರುತ್ತಾಳೆ.” ಒಂದು ವೇಳೆ ಅವಳು ಕೂಗಿಕೊಂಡಿದ್ದರೆ ಬೇರೆಯವರು ಅವಳ ಕೂಗನ್ನು ಕೇಳಿಸಿಕೊಂಡು ಸಹಾಯ ಮಾಡಲು ಬಂದಿರುತ್ತಿದ್ದರು. ಆದರೆ ಅವಳು ಕೂಗದೆ ಇದ್ದದರಿಂದ ಅವಳೂ ವ್ಯಭಿಚಾರ ಮಾಡಿದಂತೆಯೇ ಆಗುತ್ತದೆ. ಹಾಗಾಗಿ, ಇಲ್ಲಿ ಇಬ್ಬರನ್ನೂ ತಪ್ಪಿತಸ್ಥರೆಂದು ನಿರ್ಧರಿಸಲಾಗುತ್ತದೆ.
ನಂತರದ ವಚನಗಳಲ್ಲಿ ಭಿನ್ನವಾದ ಸನ್ನಿವೇಶವನ್ನು ಕೊಡಲಾಗಿದೆ. ಅದು ಹೀಗಿದೆ: “ಆದರೆ ಆ ಪುರುಷನು ನಿಶ್ಚಿತಳಾದ ಆ ಸ್ತ್ರೀಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಪುರುಷನಿಗೆ ಮಾತ್ರ ಮರಣಶಿಕ್ಷೆಯಾಗಬೇಕು. ಆ ಸ್ತ್ರೀಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣ ಶಿಕ್ಷೆಗೆ ಪಾತ್ರವಾದ ಅಪರಾಧವೇನೂ ಇಲ್ಲ. ಒಬ್ಬ ಮನುಷ್ಯನು ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವದು ಹೇಗೋ ಈ ಸಂಗತಿ ಹಾಗೆಯೇ ಆಯಿತು; ಆ ಸ್ತ್ರೀಯು ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ.”—ಧರ್ಮೋ. 22:25-27.
ಈ ಸನ್ನಿವೇಶದಲ್ಲಿ ಸ್ತ್ರೀಯು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ ಎಂದು ನ್ಯಾಯಾಧೀಶರು ನಿರ್ಧರಿಸುತ್ತಿದ್ದರು. ಹಾಗಾಗಿ, ಆಕೆ ವ್ಯಭಿಚಾರ ಮಾಡಿದಂತೆ ಆಗುತ್ತಿರಲಿಲ್ಲ. ಆದರೆ ಪುರುಷನು ನಿಶ್ಚಿತಳಾದ ಸ್ತ್ರೀಯನ್ನು ‘ಬಲಾತ್ಕಾರದಿಂದ ಸಂಗಮಿಸಿರುವುದರಿಂದ’ ಅವನು ಮಾನಭಂಗ ಮತ್ತು ವ್ಯಭಿಚಾರ ಮಾಡಿದ್ದಾನೆಂದು ನಿರ್ಧರಿಸಲಾಗುತ್ತಿತ್ತು.
ಈ ನಿಯಮವು ಇಲ್ಲಿ ಸ್ತ್ರೀಯು ನಿರಪರಾಧಿ ಎನ್ನುವುದನ್ನು ತೋರಿಸಿಕೊಡುತ್ತದೆ. ಅದೇ ಸಮಯದಲ್ಲಿ ಪುರುಷನು ತಪ್ಪಿತಸ್ಥ ಎಂದು ಹೇಳಿರುವುದು ಸಹ ಸರಿಯಾಗಿಯೇ ಇದೆ. ಇಂಥ ಸನ್ನಿವೇಶದಲ್ಲಿ ಆಗಿನ ನ್ಯಾಯಾಧೀಶರು ‘ಸೂಕ್ಷ್ಮವಾಗಿ ವಿಚಾರಣೆಯನ್ನು ಮಾಡಿರುತ್ತಾರೆ’ ಮತ್ತು ದೇವರು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ ಆತನ ನಿಯಮ ಹಾಗೂ ತತ್ವಗಳಿಗನುಸಾರ ನಿರ್ಣಯ ಮಾಡಿರುತ್ತಾರೆ ಎಂದು ನಾವು ಭರವಸೆ ಇಡಬಹುದು.—ಧರ್ಮೋ. 13:14; 17:4; ವಿಮೋ. 20:14.