ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 48

“ನೀವೂ ಪವಿತ್ರರಾಗಿ ಇರಬೇಕು”

“ನೀವೂ ಪವಿತ್ರರಾಗಿ ಇರಬೇಕು”

“ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು.”—1 ಪೇತ್ರ 1:15.

ಗೀತೆ 29 ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು

ಕಿರುನೋಟ a

1. (ಎ) ಅಪೊಸ್ತಲ ಪೇತ್ರ ಆಗಿನ ಕ್ರೈಸ್ತರಿಗೆ ಯಾವ ಬುದ್ಧಿವಾದ ಕೊಟ್ಟ? (ಬಿ) ಆ ಬುದ್ಧಿವಾದ ಪಾಲಿಸೋದು ಕಷ್ಟ ಅಂತ ನಮಗ್ಯಾಕೆ ಅನಿಸುತ್ತೆ?

 ನಮಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ ಭೂಮಿಯಲ್ಲಿ ಇರೋ ನಿರೀಕ್ಷೆ ಇರಲಿ ಪೇತ್ರ ಕೊಟ್ಟ ಬುದ್ಧಿವಾದದಿಂದ ನಾವೆಲ್ರೂ ಪ್ರಯೋಜನ ಪಡೆದುಕೊಳ್ಳಬಹುದು. ಅವನು ಹೇಳಿದ್ದು: “ನಿಮ್ಮನ್ನ ಕರೆದಿರೋ ದೇವರು ಪವಿತ್ರನು. ಹಾಗಾಗಿ ಆತನ ತರ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು. ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ‘ನಾನು ಪವಿತ್ರನಾಗಿ ಇರೋದ್ರಿಂದ ನೀವೂ ಪವಿತ್ರರಾಗಿ ಇರಬೇಕು’ ಅಂತ ಬರೆದಿದೆ.” (1 ಪೇತ್ರ 1:15, 16) ಈ ಮಾತಿಂದ ನಮಗೇನು ಗೊತ್ತಾಗುತ್ತೆ? ಇಡೀ ವಿಶ್ವದಲ್ಲೇ ಯೆಹೋವ ಅತೀ ಪವಿತ್ರ. ಅಷ್ಟೇ ಅಲ್ಲ, ನಮ್ಮಿಂದಾನೂ ಪವಿತ್ರರಾಗಿ ಇರೋಕೆ ಆಗುತ್ತೆ ಮತ್ತು ಪವಿತ್ರರಾಗಿರಬೇಕು ಅಂತ ಗೊತ್ತಾಗುತ್ತೆ. ನಾವು ಅಪರಿಪೂರ್ಣರಾಗಿ ಇರೋದ್ರಿಂದ ಅದು ಕಷ್ಟ ಅಂತ ನಮಗನಿಸಬಹುದು, ಆದ್ರೆ ಪೇತ್ರನ ಉದಾಹರಣೆ ನೋಡಿ. ಅವನು ಎಷ್ಟೋ ತಪ್ಪುಗಳನ್ನ ಮಾಡಿದ. ಆದ್ರೆ ಆಮೇಲೆ ಅವನು ‘ನಡೆನುಡಿಯಲ್ಲಿ ಪವಿತ್ರನಾಗಿ’ ನಡಕೊಂಡ.

2. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ?

2 ಈ ಲೇಖನದಲ್ಲಿ ನಾವು ನಾಲ್ಕು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ. (1) ಪವಿತ್ರತೆ ಅಂದ್ರೇನು? (2) ಯೆಹೋವನ ಪವಿತ್ರತೆ ಬಗ್ಗೆ ಬೈಬಲ್‌ ಏನು ಹೇಳುತ್ತೆ? (3) ನಾವು ಎಲ್ಲಾ ವಿಷಯಗಳಲ್ಲಿ ಪವಿತ್ರರಾಗಿರೋದು ಹೇಗೆ? (4) ನಾವು ಪವಿತ್ರರಾಗಿರೋಕೆ ಯೆಹೋವನ ಜೊತೆ ನಮಗೆ ಯಾಕೆ ಒಳ್ಳೇ ಸಂಬಂಧ ಇರಬೇಕು?

ಪವಿತ್ರತೆ ಅಂದ್ರೇನು?

3. (ಎ) ಪವಿತ್ರರಾಗಿ ಇರುವವರು ಹೇಗಿರಬೇಕು ಅಂತ ಜನ ಅಂದ್ಕೊಳ್ತಾರೆ? (ಬಿ) ಪವಿತ್ರತೆ ಅಂದ್ರೇನು ಅಂತ ನಾವು ಎಲ್ಲಿಂದ ಕಲಿತೀವಿ?

3 ಪವಿತ್ರರಾಗಿ ಇರುವವರು ಅಂದ ತಕ್ಷಣ ಜನರ ಮನಸ್ಸಿಗೆ ಸಂತರು ಬರುತ್ತಾರೆ. ಅವರು ವಿಭಿನ್ನವಾದ ಬಟ್ಟೆ ಹಾಕಿಕೊಳ್ಳಬೇಕು, ಜಾಸ್ತಿ ನಗಬಾರದು ಅಂತ ಜನ ಅಂದ್ಕೊಳ್ತಾರೆ. ಆದ್ರೆ ಅದು ಹಾಗಲ್ಲ. ಪವಿತ್ರನಾಗಿರೋ ಯೆಹೋವ ‘ಖುಷಿಯಾಗಿರೋ ದೇವರು’ ಅಂತ ಬೈಬಲ್‌ ಹೇಳುತ್ತೆ. (1 ತಿಮೊ. 1:11) ಆತನನ್ನ ಆರಾಧಿಸೋ ಜನರೂ ಖುಷಿಯಾಗಿರುತ್ತಾರೆ ಅಂತ ಹೇಳುತ್ತೆ. (ಕೀರ್ತ. 144:15) ಅಷ್ಟೇ ಅಲ್ಲ, ಯೇಸುವಿನ ಕಾಲದಲ್ಲಿ ವಿಶೇಷವಾದ ಬಟ್ಟೆ ಹಾಕೊಂಡು ಜನರ ಮುಂದೆ ಒಳ್ಳೆಯವರ ತರ ನಾಟಕ ಆಡುವವರನ್ನ ಯೇಸು ಖಂಡಿಸಿದನು. (ಮತ್ತಾ. 6:1; ಮಾರ್ಕ 12:38) ಪವಿತ್ರತೆ ಅಂದ್ರೇನು ಅಂತ ಬೈಬಲ್‌ ಸ್ಪಷ್ಟವಾಗಿ ಹೇಳೋದ್ರಿಂದ ಸತ್ಯ ಕ್ರೈಸ್ತರಿಗೆ ಅದರ ಬಗ್ಗೆ ಚೆನ್ನಾಗಿ ಗೊತ್ತು. ಪ್ರೀತಿಯ ದೇವರು ತನ್ನ ಮಕ್ಕಳಿಂದ ಆಗದೇ ಇರೋದನ್ನ ಯಾವತ್ತೂ ಕೇಳಲ್ಲ. ಹಾಗಾಗಿ ಯೆಹೋವ ದೇವರು “ನೀವೂ ಪವಿತ್ರರಾಗಿ ಇರಬೇಕು” ಅಂತ ಹೇಳಿದ್ದಾರೆ ಅಂದಮೇಲೆ ನಮ್ಮಿಂದ ಪವಿತ್ರರಾಗಿ ಇರೋಕೆ ಆಗುತ್ತೆ ಅಂತ ಅರ್ಥ. ಹಾಗಾಗಿ ಪವಿತ್ರತೆ ಅಂದ್ರೇನು ಅಂತ ಈಗ ತಿಳಿದುಕೊಳ್ಳೋಣ.

4. “ಪವಿತ್ರತೆ” ಅಂದ್ರೇನು?

4 ಪವಿತ್ರತೆ ಅಂದ್ರೇನು? ಬೈಬಲ್‌ ಹೇಳೋ ಪ್ರಕಾರ “ಪವಿತ್ರತೆ” ಅಂದ್ರೆ ನೈತಿಕವಾಗಿ ಮತ್ತು ಧಾರ್ಮಿಕವಾಗಿ ಶುದ್ಧರಾಗಿರೋದು ಅಥವಾ ಪರಿಶುದ್ಧರಾಗಿರೋದು ಅಂತ ಅರ್ಥ. ಈ ಪದಕ್ಕೆ ದೇವರ ಸೇವೆಗೆ ಅಂತಾನೇ ಪ್ರತ್ಯೇಕವಾಗಿ ಇಡೋದು ಅನ್ನೋ ಅರ್ಥನೂ ಇದೆ. ನಾವು ನೈತಿಕವಾಗಿ ಶುದ್ಧರಾಗಿದ್ರೆ, ಯೆಹೋವ ಇಷ್ಟಪಡೋ ತರ ಆತನನ್ನ ಆರಾಧಿಸಿದ್ರೆ, ಆತನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಂಡ್ರೆ ಪವಿತ್ರರಾಗಿ ಇರ್ತೀವಿ. ನಾವು ಅಪರಿಪೂರ್ಣರಾಗಿದ್ರೂ ಅತೀ ಪವಿತ್ರನಾಗಿರೋ ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಆಗುತ್ತೆ ಅಂತ ಕೇಳಿದಾಗ ನಮಗೆ ಆಶ್ಚರ್ಯ ಆಗುತ್ತಲ್ವಾ?

“ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು”

5. ಯೆಹೋವ ದೇವರ ಬಗ್ಗೆ ದೇವದೂತರು ಹೇಳಿದ ಮಾತಿಂದ ನಮಗೇನು ಗೊತ್ತಾಗುತ್ತೆ?

5 ಯೆಹೋವ ದೇವರು ಎಲ್ಲ ವಿಷಯದಲ್ಲೂ ಪವಿತ್ರನಾಗಿದ್ದಾನೆ. ಇದು, ಸ್ವರ್ಗದಲ್ಲಿ ಆತನ ಸಿಂಹಾಸನದ ಹತ್ರ ಇರೋ ಸೆರಾಫಿಯರು ಹೇಳಿದ ಮಾತಿಂದ ನಮಗೆ ಗೊತ್ತಾಗುತ್ತೆ. “ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು” ಅಂತ ಅವರು ಹೇಳಿದ್ರು. (ಯೆಶಾ. 6:3) ಯೆಹೋವ ದೇವರ ಹತ್ರ ಆ ಸೆರಾಫಿಯರಿಗೆ ಒಳ್ಳೇ ಸಂಬಂಧ ಇರೋದ್ರಿಂದನೇ ಅವರೂ ಪವಿತ್ರರಾಗಿದ್ದಾರೆ. ದೇವದೂತರು ಪವಿತ್ರರಾಗಿರೋದ್ರಿಂದನೇ ಅವರು ಭೂಮಿಗೆ ಬಂದಾಗ ಆ ಜಾಗ ಪವಿತ್ರ ಆಗ್ತಿತ್ತು. ಅದಕ್ಕೇ ಮೋಶೆ ಕಾಲದಲ್ಲಿ ಉರಿಯೋ ಪೊದೆಯಲ್ಲಿ ದೇವದೂತ ಕಾಣಿಸಿಕೊಂಡಾಗ ಆ ಜಾಗ ಪವಿತ್ರ ಆಯ್ತು.—ವಿಮೋ. 3:2-5; ಯೆಹೋ. 5:15.

ಮಹಾ ಪುರೋಹಿತನ ಪೇಟದಲ್ಲಿ “ಯೆಹೋವ ಪವಿತ್ರನು” ಅಂತ ಕೆತ್ತನೆ ಮಾಡಿರೋ ಚಿನ್ನದ ಫಲಕವಿದೆ (ಪ್ಯಾರ 6-7 ನೋಡಿ)

6-7. (ಎ) ವಿಮೋಚನಕಾಂಡ 15:1, 11ರಲ್ಲಿ ಮೋಶೆ ಯೆಹೋವ ದೇವರ ಪವಿತ್ರತೆ ಬಗ್ಗೆ ಏನು ಹೇಳಿದ? (ಬಿ) ಯೆಹೋವ ಪವಿತ್ರ ಅಂತ ಇಸ್ರಾಯೇಲ್ಯರಿಗೆ ಯಾವಾಗೆಲ್ಲ ನೆನಪಿಗೆ ಬರುತ್ತಿತ್ತು? (ಮುಖಪುಟ ಚಿತ್ರ ನೋಡಿ.)

6 ಇಸ್ರಾಯೇಲ್ಯರನ್ನ ಕೆಂಪು ಸಮುದ್ರ ದಾಟಿಸಿದ ಮೇಲೆ ಯೆಹೋವ ಅತೀ ಪವಿತ್ರ ಅಂತ ಮೋಶೆ ಅವರಿಗೆ ಹೇಳಿದ. (ವಿಮೋಚನಕಾಂಡ 15:1, 11 ಓದಿ.) ಈಜಿಪ್ಟಿನ ಮತ್ತು ಕಾನಾನಿನ ದೇವರುಗಳನ್ನ ಆರಾಧಿಸುತ್ತಿದ್ದವರು ಒಂಚೂರು ಪವಿತ್ರರಾಗಿ ಇರಲಿಲ್ಲ. ಯಾಕಂದ್ರೆ ಅವರ ಆರಾಧನೆಯಲ್ಲಿ ಮಕ್ಕಳನ್ನ ಬಲಿ ಕೊಡೋದು, ಅಸಹ್ಯವಾದ ಲೈಂಗಿಕತೆ ಎಲ್ಲಾ ಸೇರಿತ್ತು. (ಯಾಜ. 18:3, 4, 21-24; ಧರ್ಮೋ. 18:9, 10) ಆದ್ರೆ ಯೆಹೋವ ಯಾವತ್ತೂ ತನ್ನ ಆರಾಧಕರಿಗೆ ಇಂಥ ಕೆಟ್ಟ ಕೆಲಸಗಳನ್ನ ಮಾಡೋಕೆ ಹೇಳಲಿಲ್ಲ. ಯಾಕಂದ್ರೆ ಯೆಹೋವನಲ್ಲಿ ಎಳ್ಳಷ್ಟೂ ಅಶುದ್ಧತೆ ಇಲ್ಲ. ಅದಕ್ಕೇ ಮಹಾಪುರೋಹಿತನ ಪೇಟದ ಚಿನ್ನದ ಫಲಕದಲ್ಲಿ, “ಯೆಹೋವ ಪವಿತ್ರನು” ಅಂತ ಕೆತ್ತಲಾಗಿತ್ತು.—ವಿಮೋ. 28:36-38.

7 ಆ ಫಲಕವನ್ನ ನೋಡಿದವರಿಗೆಲ್ಲ ಯೆಹೋವ ಅತೀ ಪವಿತ್ರ ಅಂತ ಗೊತ್ತಾಗ್ತಿತ್ತು. ಒಂದುವೇಳೆ ಒಬ್ಬ ಇಸ್ರಾಯೇಲ್ಯ ಮುಖ್ಯ ಪುರೋಹಿತನನ್ನ ನೋಡೇ ಇಲ್ಲಾಂದ್ರೆ ಅದರ ಅರ್ಥ ಯೆಹೋವ ಅತೀ ಪವಿತ್ರ ಅನ್ನೋ ವಿಷಯ ಅವನಿಗೆ ಗೊತ್ತಿಲ್ಲ ಅಂತಾನಾ? ಇಲ್ಲ. ಎಲ್ಲಾ ಇಸ್ರಾಯೇಲ್ಯರಿಗೆ ನಿಯಮ ಪುಸ್ತಕವನ್ನ ಓದುವಾಗ ಯೆಹೋವ ಪವಿತ್ರ ಅಂತ ಪ್ರತಿಯೊಬ್ಬರೂ ಕೇಳಿಸಿಕೊಂಡಿರುತ್ತಾರೆ. (ಧರ್ಮೋ. 31:9-12) ಅದನ್ನ ಓದಿ ಹೇಳುವಾಗ ನೀವೂ ಅಲ್ಲಿ ಇದ್ದಿದ್ರೆ ನಿಮಗೂ ಈ ಮಾತುಗಳು ಕೇಳಿಸಿರುತ್ತೆ. “ನಾನು ನಿಮ್ಮ ದೇವರಾದ ಯೆಹೋವ. ನಾನು ಪವಿತ್ರನಾಗಿ ಇರೋದ್ರಿಂದ . . . ನೀವು ಸಹ ಪವಿತ್ರರು ಆಗಿರಬೇಕು.” “ನೀವು ನನ್ನ ದೃಷ್ಟಿಯಲ್ಲಿ ಪವಿತ್ರರಾಗಿ ಇರಬೇಕು. ಯಾಕಂದ್ರೆ ಯೆಹೋವನಾದ ನಾನು ಪವಿತ್ರನಾಗಿದ್ದೀನಿ.”—ಯಾಜ. 11:44, 45; 20:7, 26.

8. ಒಂದನೇ ಪೇತ್ರ 1:14-16 ಮತ್ತು ಯಾಜಕಕಾಂಡ 19:2ರಿಂದ ನಾವೇನು ಕಲಿತೀವಿ?

8 ನಾವೀಗ ಯಾಜಕಕಾಂಡ 19:2ನ್ನ ನೋಡೋಣ. ಯೆಹೋವ ದೇವರು ಮೋಶೆ ಹತ್ರ “ಎಲ್ಲ ಇಸ್ರಾಯೇಲ್ಯರಿಗೆ ಈ ಮಾತನ್ನ ತಿಳಿಸು: ‘ನೀವು ಪವಿತ್ರರಾಗಿ ಇರಬೇಕು. ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ ಪವಿತ್ರನಾಗಿದ್ದೀನಿ.’” ಅಂತ ಹೇಳಿದನು. ಪೇತ್ರ ಈ ವಚನವನ್ನೇ ಮನಸ್ಸಲ್ಲಿಟ್ಟು ಆಗಿನ ಕ್ರೈಸ್ತರಿಗೆ ‘ನೀವೂ ಪವಿತ್ರರಾಗಿ ಇರಬೇಕು’ ಅಂತ ಹೇಳಿರಬೇಕು. (1 ಪೇತ್ರ 1:14-16 ಓದಿ.) ಇವತ್ತು ಮೋಶೆ ನಿಯಮ ಪುಸ್ತಕದಲ್ಲಿರೋ ಎಲ್ಲಾ ನಿಯಮಗಳೂ ನಮಗೆ ಅನ್ವಯ ಆಗಲ್ಲ. ಆದ್ರೆ ಯಾಜಕಕಾಂಡ 19:2ರಿಂದ ನಾವು ಒಂದು ವಿಷಯ ಕಲಿಯಬಹುದು ಅಂತ ಪೇತ್ರ ಹೇಳಿದ ಮಾತಿಂದ ಗೊತ್ತಾಗುತ್ತೆ. ಅದೇನಂದ್ರೆ ಯೆಹೋವ ಪವಿತ್ರ ಆಗಿದ್ದಾನೆ, ನಾವೂ ಆತನ ತರ ಪವಿತ್ರರಾಗಿರಬೇಕು. ಇದು ಅಭಿಷಿಕ್ತರಿಗಾಗಲಿ ಭೂಮಿಯಲ್ಲಿ ಜೀವಿಸೋ ನಿರೀಕ್ಷೆ ಇರುವವರಿಗಾಗಲಿ ಎಲ್ಲರಿಗೂ ಅನ್ವಯಿಸುತ್ತೆ.—1 ಪೇತ್ರ 1:4; 2 ಪೇತ್ರ 3:13.

‘ನಡೆನುಡಿಯಲ್ಲಿ ಪವಿತ್ರರಾಗಿರಿ’

9. ಯಾಜಕಕಾಂಡ 19ರಿಂದ ನಾವೇನು ಕಲಿತೀವಿ?

9 ನಮ್ಮ ದೇವರಾಗಿರೋ ಯೆಹೋವ ಪವಿತ್ರನಾಗಿ ಇರೋದ್ರಿಂದ ನಾವು ಪವಿತ್ರರಾಗಿರೋಕೆ ಏನು ಮಾಡಬೇಕು ಅಂತ ಕಲಿಯೋಕೆ ಇಷ್ಟಪಡ್ತೀವಿ. ಪವಿತ್ರರಾಗಿರೋಕೆ ನಾವೇನು ಮಾಡಬೇಕು ಅಂತ ಯೆಹೋವ ಬೈಬಲಲ್ಲಿ ಬರೆಸಿದ್ದಾನೆ. ಅದು ಯಾಜಕಕಾಂಡ 19ನೇ ಅಧ್ಯಾಯದಲ್ಲಿ ಇದೆ. ಈ ಅಧ್ಯಾಯದ ಬಗ್ಗೆ ಹೀಬ್ರು ಪಂಡಿತರಾದ ಮಾರ್ಕಸ್‌ ಕಾಲಿಷ್ಕ್‌ ಹೀಗಂತಾರೆ, “ಯಾಜಕಕಾಂಡ 19ರಲ್ಲಿರೋ ವಿಷಯಗಳಿಗೆ ವ್ಯಾಪಕ ಅರ್ಥವಿದೆ. ಬೇರೆಬೇರೆ ರೀತಿಯಲ್ಲಿ ಅದನ್ನ ಅನ್ವಯಿಸಿಕೊಳ್ಳಬಹುದು. ಈ ಅಧ್ಯಾಯ ಯಾಜಕಕಾಂಡ ಪುಸ್ತಕದಲ್ಲೇ ತುಂಬ ಮುಖ್ಯವಾದ ಅಧ್ಯಾಯ. ಅಷ್ಟೇ ಅಲ್ಲ, ಬೈಬಲಿನ ಮೊದಲ 5 ಪುಸ್ತಕಗಳಲ್ಲೂ ಇದು ತುಂಬ ಮುಖ್ಯವಾದ ಅಧ್ಯಾಯ ಆಗಿದೆ.” ಈಗ ನಾವು ಯಾಜಕಕಾಂಡ 19ರಲ್ಲಿರೋ ಕೆಲವು ವಚನಗಳ ಬಗ್ಗೆ ಚರ್ಚೆ ಮಾಡೋಣ. ಈ ಅಧ್ಯಾಯದ ಆರಂಭದಲ್ಲಿ “ನೀವು ಪವಿತ್ರರಾಗಿ ಇರಬೇಕು” ಅಂತ ಯೆಹೋವ ಹೇಳಿದ್ದಾನೆ. ಹಾಗಾಗಿ ಇದನ್ನ ಮನಸ್ಸಲ್ಲಿಟ್ಟು ನಾವು ಜೀವನದಲ್ಲಿ ಹೇಗೆಲ್ಲಾ ಪವಿತ್ರರಾಗಿರಬೇಕು ಅಂತ ಈಗ ಕಲಿಯೋಣ.

ಯಾಜಕಕಾಂಡ 19:3ರಲ್ಲಿರೋ ನಿಯಮದಿಂದ ನಾವೇನು ಕಲಿಯಬಹುದು? (ಪ್ಯಾರ 10-12 ನೋಡಿ) c

10-11. ಯಾಜಕಕಾಂಡ 19:3ರಲ್ಲಿ ಹೇಳಿರೋ ಪ್ರಕಾರ ನಾವೇನು ಮಾಡಬೇಕು ಮತ್ತು ಅದು ಯಾಕೆ ಪ್ರಾಮುಖ್ಯ?

10 ಯೆಹೋವ ಇಸ್ರಾಯೇಲ್ಯರಿಗೆ ಪವಿತ್ರರಾಗಿರಬೇಕು ಅಂತ ಹೇಳಿದ ಮೇಲೆ “ಪ್ರತಿಯೊಬ್ಬನು ಅಪ್ಪಅಮ್ಮಗೆ ಗೌರವ ಕೊಡಬೇಕು . . . ನಾನು ನಿಮ್ಮ ದೇವರಾದ ಯೆಹೋವ” ಅಂತನೂ ಹೇಳಿದನು.—ಯಾಜ. 19:2, 3.

11 ಅಪ್ಪ ಅಮ್ಮನನ್ನ ಗೌರವಿಸಬೇಕು ಅಂತ ಹೇಳಿದ ಮಾತನ್ನ ನಾವು ಪಾಲಿಸಲೇಬೇಕು. ಒಂದು ಸಲ ಯೇಸು ಹತ್ರ ಒಬ್ಬ ಬಂದು “ನನಗೆ ಶಾಶ್ವತ ಜೀವ ಸಿಗಬೇಕಾದ್ರೆ ಯಾವ ಒಳ್ಳೇ ಕೆಲಸ ಮಾಡಬೇಕು?” ಅಂತ ಕೇಳಿದ್ದನ್ನ ನೆನಪಿಸಿಕೊಳ್ಳಿ. ಆಗ ಯೇಸು ಕೊಟ್ಟ ಉತ್ತರದಲ್ಲಿ ಅಪ್ಪಅಮ್ಮನಿಗೆ ಗೌರವ ಕೊಡಬೇಕು ಅನ್ನೋದೂ ಇತ್ತು. (ಮತ್ತಾ. 19:16-19) ಅಷ್ಟೇ ಅಲ್ಲ, ಅಪ್ಪ-ಅಮ್ಮನ ನೋಡಿಕೊಳ್ಳೋ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದ ಫರಿಸಾಯರನ್ನ ಯೇಸು ಖಂಡಿಸಿದನು. ಯಾಕಂದ್ರೆ ಅವರು ‘ದೇವರ ಮಾತನ್ನ ತಳ್ಳಿಹಾಕಿದ್ರು.’ (ಮತ್ತಾ. 15:3-6) ಯಾಜಕಕಾಂಡ 19:3ರಲ್ಲಿ ಹೇಳಿರುವ ಮತ್ತು ಹತ್ತು ಆಜ್ಞೆಗಳಲ್ಲಿ 5ನೇ ಆಜ್ಞೆಯಾದ ಅಪ್ಪ-ಅಮ್ಮನ ಗೌರವಿಸಬೇಕು ಅನ್ನೋ ‘ದೇವರ ಮಾತನ್ನ’ ಅವರು ತಳ್ಳಿಹಾಕಿದ್ರು. (ವಿಮೋ. 20:12) “ನೀವು ಪವಿತ್ರರಾಗಿ ಇರಬೇಕು. ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ ಪವಿತ್ರನಾಗಿದ್ದೀನಿ” ಅಂತ ಹೇಳಿದ ಮೇಲೆ ಯಾಜಕಕಾಂಡ 19:3ರಲ್ಲಿ ಅಪ್ಪ ಅಮ್ಮಗೆ ಗೌರವ ಕೊಡಬೇಕು ಅಂತ ಯೆಹೋವ ಹೇಳಿದ್ದನ್ನ ನೆನಪಲ್ಲಿಡಿ.

12. ಯಾಜಕಕಾಂಡ 19:3ರಲ್ಲಿ ಕೊಟ್ಟಿರೋ ಆಜ್ಞೆಯನ್ನ ಹೇಗೆ ಪಾಲಿಸಬಹುದು?

12 ‘ನಾನು ನನ್ನ ಅಪ್ಪ-ಅಮ್ಮನ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀನಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಒಂದುವೇಳೆ ಇಲ್ಲಿ ತನಕ ನೀವು ಅವರನ್ನ ಚೆನ್ನಾಗಿ ನೋಡಿಕೊಂಡಿಲ್ಲಾಂದ್ರೆ ‘ನಾನು ಅಪ್ಪಅಮ್ಮನ ಚೆನ್ನಾಗಿ ನೋಡಿಕೊಳ್ಳಲೇ ಇಲ್ವಲ್ಲಾ’ ಅಂತ ಕೊರಗುತ್ತಾ ಇರಬೇಡಿ ಇನ್ಮುಂದೆ ಚೆನ್ನಾಗಿ ನೋಡಿಕೊಳ್ಳಿ. ನೀವು ಅವರ ಜೊತೆ ಜಾಸ್ತಿ ಸಮಯ ಕಳೆಯೋಕೆ, ಅವರಿಗೆ ಬೇಕಾದ ವಸ್ತುಗಳನ್ನ ತಂದುಕೊಡೋಕೆ, ಯೆಹೋವನನ್ನ ಅವರು ಪ್ರೀತಿಸ್ತಾ ಆತನ ಸೇವೆ ಮಾಡೋಕೆ ಏನು ಮಾಡಬಹುದು ಅಂತ ಯೋಚನೆ ಮಾಡಿ. ಅವರಿಗೆ ಪ್ರೋತ್ಸಾಹ ಕೊಡೋಕೆ, ಸಾಂತ್ವನ ಕೊಡೋಕೆ ನೀವೇನು ಮಾಡಬೇಕು ಅಂತ ಯೋಚಿಸಿ. ಇದನ್ನೆಲ್ಲಾ ನೀವು ಮಾಡಿದ್ರೆ ಯಾಜಕಕಾಂಡ 19:3ರಲ್ಲಿ ಕೊಟ್ಟಿರೋ ಆಜ್ಞೆಯನ್ನ ನೀವು ಪಾಲಿಸ್ತಾ ಇದ್ದೀರ ಅಂತ ಅರ್ಥ.

13. (ಎ) ಪವಿತ್ರರಾಗಿರೋಕೆ ಇನ್ನೂ ಏನು ಮಾಡಬೇಕು ಅಂತ ಯೆಹೋವ ಯಾಜಕಕಾಂಡ 19:3ರಲ್ಲಿ ಹೇಳಿದ್ದನು? (ಬಿ) ಲೂಕ 4:16-18ರಲ್ಲಿ ಯೇಸು ಮಾಡಿದ ವಿಷಯದಿಂದ ನಾವೇನು ಕಲಿಯಬಹುದು?

13 ಇಸ್ರಾಯೇಲ್ಯರು ಪವಿತ್ರರಾಗಿರೋಕೆ ಇನ್ನೂ ಒಂದು ವಿಷಯ ಮಾಡಬೇಕಿತ್ತು ಅಂತ ಯಾಜಕಕಾಂಡ 19:3 ಹೇಳುತ್ತೆ. ಅವರು ಸಬ್ಬತ್ತನ್ನು ಆಚರಿಸಬೇಕಿತ್ತು. ನಾವು ಮೋಶೆಯ ನಿಯಮ ಪುಸ್ತಕವನ್ನ ಪಾಲಿಸದೇ ಇರೋದ್ರಿಂದ ಸಬ್ಬತ್‌ ಆಚರಿಸಬೇಕಾಗಿಲ್ಲ. ಆದ್ರೆ ಸಬ್ಬತ್‌ ದಿನದಲ್ಲಿ ಇಸ್ರಾಯೇಲ್ಯರು ಏನು ಮಾಡುತ್ತಿದ್ರು, ಅದರಿಂದ ಅವರಿಗೆ ಏನೆಲ್ಲಾ ಪ್ರಯೋಜನ ಆಯ್ತು ಅಂತ ನೋಡುವಾಗ ನಾವು ತುಂಬ ವಿಷಯಗಳನ್ನ ಕಲಿಯಬಹುದು. ಅವರು ಆ ದಿನದಲ್ಲಿ ಯಾವ ಕೆಲಸನೂ ಮಾಡುತ್ತಿರಲಿಲ್ಲ. ಯೆಹೋವನ ಬಗ್ಗೆ ಕಲಿತುಕೊಳ್ಳೋಕೆ ಮತ್ತು ಯೆಹೋವ ದೇವರನ್ನ ಆರಾಧಿಸೋಕೇ ಆ ದಿನವನ್ನ ಇಡುತ್ತಿದ್ದರು. b ಯೇಸು ಕೂಡ ಸಬ್ಬತ್‌ ದಿನ ತನ್ನ ಊರಲ್ಲಿದ್ದ ಸಭಾಮಂದಿರಕ್ಕೆ ಹೋಗಿ ವಚನಗಳನ್ನ ಓದುತ್ತಿದ್ದ. (ವಿಮೋ. 31:12-15; ಲೂಕ 4:16-18 ಓದಿ.) ಯಾಜಕಕಾಂಡ 19:3ರಲ್ಲಿ “ಸಬ್ಬತ್‌ ಆಚರಿಸಬೇಕು” ಅಂತ ಯೆಹೋವ ಕೊಟ್ಟಿರೋ ಆಜ್ಞೆಯಿಂದ ನಾವೇನು ಕಲಿಯಬಹುದು? ನಾವು ಇಡೀ ದಿನ ಕೆಲಸ-ಕೆಲಸ ಅಂತ ಮುಳುಗಿರದೆ ಯೆಹೋವನನ್ನ ಆರಾಧಿಸೋಕೆ, ಆತನ ಬಗ್ಗೆ ಕಲಿಯೋಕೆ ಸಮಯ ಮಾಡಿಕೊಳ್ಳಬೇಕು. ಒಂದುವೇಳೆ ನೀವು ಸಮಯ ಕೊಡುತ್ತಿಲ್ಲ ಅಂತ ನಿಮಗೆ ಅನಿಸಿದ್ರೆ ನಿಮ್ಮ ಶೆಡ್ಯೂಲ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಆಗ ನಿಮ್ಮ ಮತ್ತು ಯೆಹೋವನ ಸಂಬಂಧ ಗಟ್ಟಿಯಾಗಿರುತ್ತೆ. ಇದು ನೀವು ಪವಿತ್ರರಾಗಿರೋಕೆ ತುಂಬ ಮುಖ್ಯ.

ಯೆಹೋವನ ಜೊತೆಗಿರೋ ಸಂಬಂಧನ ಗಟ್ಟಿಮಾಡಿಕೊಳ್ಳಿ

14. ಯಾಜಕಕಾಂಡ 19ನೇ ಅಧ್ಯಾಯದಲ್ಲಿ ಯಾವ ಮುಖ್ಯವಾದ ಸತ್ಯ ತುಂಬ ಸಲ ಇದೆ?

14 ಯಾಜಕಕಾಂಡ 19ನೇ ಅಧ್ಯಾಯದಲ್ಲಿ ಒಂದು ಮುಖ್ಯವಾದ ಸತ್ಯ ತುಂಬ ಸಲ ಇದೆ. ಅದು ನಾವು ಪವಿತ್ರರಾಗಿರೋಕೆ ಸಹಾಯಮಾಡುತ್ತೆ. ಈ ಅಧ್ಯಾಯದಲ್ಲಿ “ನಾನು ನಿಮ್ಮ ದೇವರಾದ ಯೆಹೋವ,” “ನಾನು ಯೆಹೋವ” ಅಂತ 16 ಸಲ ಇದೆ. 4ನೇ ವಚನ ಕೂಡ “ನಾನು ನಿಮ್ಮ ದೇವರಾದ ಯೆಹೋವ” ಅಂತಾನೇ ಕೊನೆ ಆಗುತ್ತೆ. ಇದನ್ನ ನೋಡುವಾಗ ಯೆಹೋವ ಕೊಟ್ಟಿದ್ದ ಹತ್ತು ಆಜ್ಞೆಗಳಲ್ಲಿ ಮೊದಲನೇ ಆಜ್ಞೆ ನೆನಪಿಗೆ ಬರುತ್ತೆ. ಅದು “ನಾನು ನಿಮ್ಮ ದೇವರಾದ ಯೆಹೋವ . . . ನನ್ನನ್ನ ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು” ಅಂತ ಇದೆ. (ವಿಮೋ. 20:2, 3) ಹಾಗಾಗಿ ನಮ್ಮ ಜೀವನದಲ್ಲಿ ಯೆಹೋವನೇ ಮುಖ್ಯ ಆಗಿರಬೇಕು. ಬೇರೆ ಯಾರೇ ಆಗಲಿ, ಯಾವ ವಸ್ತು ಆಗಲಿ ಮುಖ್ಯ ಆಗಬಾರದು. ಆಗ ಮಾತ್ರ ನಾವು ಪವಿತ್ರರಾಗಿರೋಕೆ ಆಗುತ್ತೆ. ಅಷ್ಟೇ ಅಲ್ಲ, ನಾವು ಯೆಹೋವನ ಸಾಕ್ಷಿಗಳು. ಇದರಲ್ಲಿ ಯೆಹೋವನ ಹೆಸರು ಇರೋದ್ರಿಂದ ಆ ಹೆಸರಿಗೆ ಕಳಂಕ ತರೋ ಯಾವ ಕೆಲಸನೂ ನಾವು ಮಾಡಬಾರದು.—ಯಾಜ. 19:12; ಯೆಶಾ. 57:15.

15. ಯಾಜಕಕಾಂಡ 19:5-8, 21, 22ರಿಂದ ನಾವೇನು ಕಲಿಬಹುದು?

15 ಇಸ್ರಾಯೇಲ್ಯರು ಯೆಹೋವನೇ ತಮ್ಮ ದೇವರು ಅಂತ ಒಪ್ಪಿಕೊಂಡಿದ್ದಾರೆ ಅಂತ ಹೇಗೆ ತೋರಿಸಬೇಕಿತ್ತು? ಯೆಹೋವ ಕೊಟ್ಟಿದ್ದ ಎಲ್ಲಾ ನಿಯಮಗಳನ್ನ ಅವರು ಪಾಲಿಸಬೇಕಿತ್ತು. ಯಾಕಂದ್ರೆ “ನೀವು ನನ್ನ ತೀರ್ಪುಗಳನ್ನ ಒಪ್ಕೊಳ್ಳಬೇಕು, ನನ್ನ ನಿಯಮಗಳನ್ನ ಪಾಲಿಸಬೇಕು, ಅದ್ರಲ್ಲಿ ಇರೋ ತರ ಮಾಡಬೇಕು. ನಾನು ನಿಮ್ಮ ದೇವರಾದ ಯೆಹೋವ” ಅಂತ ಯಾಜಕಕಾಂಡ 18:4ರಲ್ಲಿ ಯೆಹೋವ ಹೇಳಿದ್ದಾನೆ. ಅಂಥ ಕೆಲವು “ನಿಯಮಗಳನ್ನ” ಯಾಜಕಕಾಂಡ 19ನೇ ಅಧ್ಯಾಯದಲ್ಲಿ ನೋಡಬಹುದು. ಉದಾಹರಣೆಗೆ, ವಚನ 5-8, 21, 22ರಲ್ಲಿ ಪ್ರಾಣಿ ಬಲಿಯನ್ನ ಹೇಗೆ ಕೊಡಬೇಕು ಅಂಥ ಯೆಹೋವ ವಿವರವಾಗಿ ಹೇಳಿದ್ದನು. ಆತ ಹೇಳಿದ ರೀತಿಯಲ್ಲೇ ಪ್ರಾಣಿ ಬಲಿಯನ್ನ ಇಸ್ರಾಯೇಲ್ಯರು ಕೊಡಬೇಕಿತ್ತು. ಆಗ ಮಾತ್ರ ಅದು ಪವಿತ್ರ ಆಗ್ತಿತ್ತು. ಇದ್ರಿಂದ ನಾವೇನು ಕಲಿಬಹುದು? ಇಬ್ರಿಯ 13:15 ಹೇಳೋ ತರ ನಾವು ಯೆಹೋವನಿಗೆ ಸ್ತುತಿ ಅನ್ನೋ ಬಲಿಯನ್ನ ಕೊಡುವಾಗ ಆತನಿಗೆ ಇಷ್ಟ ಆಗೋ ತರಾನೇ ಕೊಡಬೇಕು.

16. ಯಾಜಕಕಾಂಡ 19:19ರಿಂದ ನಾವೇನು ಕಲಿಯಬಹುದು?

16 ನಾವು ಪವಿತ್ರರಾಗಿರಬೇಕಂದ್ರೆ ಈ ಲೋಕದ ಜನರ ತರ ನಾವಿಲ್ಲ ಅಂತ ತೋರಿಸಿಕೊಡಬೇಕು. ಆದ್ರೆ ಕೆಲವೊಮ್ಮೆ, ಇದು ನಮಗೆ ಕಷ್ಟ ಆಗಬಹುದು. ಯಾಕಂದ್ರೆ ನಮ್ಮ ಕ್ಲಾಸ್‌ಮೇಟ್ಸ್‌, ನಮ್ಮ ಜೊತೆ ಕೆಲಸ ಮಾಡುವವರು, ಸಂಬಂಧಿಕರು ಯೆಹೋವ ದೇವರಿಗೆ ಇಷ್ಟ ಇಲ್ಲದಿರೋ ಕೆಲಸ ಮಾಡೋಕೆ ಒತ್ತಾಯ ಮಾಡಬಹುದು. ಆಗ ನಾವು ಯೆಹೋವನ ಪರವಾಗಿ ನಿಂತುಕೊಳ್ಳಬೇಕು. ಹೀಗೆ ಮಾಡೋಕೆ ನಮಗೆ ಯಾವುದು ಸಹಾಯಮಾಡುತ್ತೆ? ಯಾಜಕಕಾಂಡ 19:19ರಲ್ಲಿರೋ ತತ್ವ ಸಹಾಯಮಾಡುತ್ತೆ. ಅಲ್ಲಿ ಹೀಗಿದೆ: “ಎರಡು ತರದ ನೂಲುಗಳನ್ನ ಸೇರಿಸಿ ತಯಾರಿಸಿದ ಬಟ್ಟೆನ ಹಾಕೊಳ್ಳಬಾರದು.” ಇಸ್ರಾಯೇಲ್ಯರು ಈ ನಿಯಮ ಪಾಲಿಸ್ತಿದ್ದಾಗ ಅವರು ಬೇರೆ ದೇಶದವರ ತರ ಅಲ್ಲ ಅನ್ನೋದು ಎದ್ದುಕಾಣಿಸ್ತಿತ್ತು. ಈ ನಿಯಮನ ನಾವು ಇವತ್ತು ಪಾಲಿಸಲ್ಲ. ಕಾಟನ್‌, ಪಾಲಿಸ್ಟರ್‌ ಮಿಕ್ಸ್‌ ಆಗಿರೋ ಬಟ್ಟೆಗಳನ್ನ ಹಾಕೊಳ್ಳುತ್ತೀವಿ. ಆದ್ರೆ ನಾವು ಈ ನಿಯಮದಲ್ಲಿರೋ ತತ್ವನ ಪಾಲಿಸ್ತೀವಿ. ಬೈಬಲಿಗೆ ವಿರುದ್ಧವಾಗಿರೋ ಆಚಾರ-ವಿಚಾರಗಳನ್ನ ನಾವು ಮಾಡಲ್ಲ. ನಮ್ಮ ಸ್ಕೂಲ್‌ಮೇಟ್ಸ್‌, ನಮ್ಮ ಜೊತೆ ಕೆಲಸಮಾಡೋರು, ಸಂಬಂಧಿಕರು ಅವನ್ನೆಲ್ಲಾ ಆಚರಿಸಿದ್ರೂ ನಾವು ಅದನ್ನ ಆಚರಿಸಲ್ಲ. ಇದರರ್ಥ ಅವರ ಮೇಲೆ ಪ್ರೀತಿ ಇಲ್ಲ ಅಂತಲ್ಲ. ನಾವು ಅವರನ್ನ ಪ್ರೀತಿಸ್ತೀವಿ. ಆದ್ರೆ ಯೆಹೋವನಿಗೆ ಇಷ್ಟ ಇಲ್ಲದಿರೋ ಆಚಾರ-ವಿಚಾರಗಳು ಬಂದಾಗ ನಾವು ಲೋಕದವರ ತರ ಇಲ್ಲ ಅಂತ ತೋರಿಸ್ತೀವಿ. ಪವಿತ್ರ ಅನ್ನೋ ಪದಕ್ಕೆ ದೇವರ ಸೇವೆಗಂತಾನೇ ಪ್ರತ್ಯೇಕವಾಗಿಡೋದು ಅನ್ನೋ ಅರ್ಥನೂ ಇದೆ ಅಂತ ನಾವು ಕಲಿತ್ವಿ ಅಲ್ವಾ? ಹಾಗಾಗಿ ನಾವು ಪವಿತ್ರರಾಗಿರಬೇಕು ಅಂದ್ರೆ ಲೋಕದ ಜನರಿಗಿಂತ ನಾವು ಪ್ರತ್ಯೇಕವಾಗಿದ್ದೀವಿ ಅಂತ ತೋರಿಸಿಕೊಡಬೇಕು.—2 ಕೊರಿಂ. 6:14-16; 1 ಪೇತ್ರ 4:3, 4.

ಯಾಜಕಕಾಂಡ 19:23-25ರಲ್ಲಿ ಇರೋ ಮಾತುಗಳಿಂದ ಇಸ್ರಾಯೇಲ್ಯರು ಏನು ಕಲಿತರು? ನೀವೇನು ಕಲಿತ್ರಿ? (ಪ್ಯಾರ 17-18 ನೋಡಿ) d

17-18. ಯಾಜಕಕಾಂಡ 19:23-25ರಲ್ಲಿ ನಾವು ಯಾವ ಮುಖ್ಯ ಪಾಠವನ್ನ ಕಲಿತ್ವಿ?

17 “ನಾನು ನಿಮ್ಮ ದೇವರಾದ ಯೆಹೋವ” ಅನ್ನೋ ಮಾತು, ಇಸ್ರಾಯೇಲ್ಯರಿಗೆ ಅವರ ಜೀವನದಲ್ಲಿ ಯೆಹೋವನೇ ಮುಖ್ಯ ಅಂತ ತೋರಿಸಿಕೊಡೋಕೆ ಸಹಾಯಮಾಡ್ತು. ಅದಕ್ಕೊಂದು ಉದಾಹರಣೆ ಯಾಜಕಕಾಂಡ 19:23-25ರಲ್ಲಿದೆ. (ಓದಿ.) ಇಸ್ರಾಯೇಲ್ಯರು ಕಾನಾನ್‌ ದೇಶಕ್ಕೆ ಹೋದ ಮೇಲೆ ಅಲ್ಲಿ ಹಣ್ಣಿನ ಮರಗಳನ್ನ ನೆಟ್ಟರೆ, ಅದರ ಹಣ್ಣುಗಳನ್ನ ಅವರು ಮೂರು ವರ್ಷ ತಿನ್ನೋ ಹಾಗಿರಲಿಲ್ಲ. ನಾಲ್ಕನೇ ವರ್ಷದಲ್ಲಿ ಹಣ್ಣುಗಳನ್ನ ಪವಿತ್ರ ಡೇರೆಗೆ ಅರ್ಪಿಸಬೇಕಿತ್ತು. ಐದನೇ ವರ್ಷದಲ್ಲಿ ತಿನ್ನಬಹುದಿತ್ತು. ಈ ನಿಯಮದಿಂದ ಅವರು, ತಮ್ಮಿಷ್ಟ ಅಲ್ಲ ಯೆಹೋವನ ಇಷ್ಟನೇ ಮುಖ್ಯ ಅಂತ ಅರ್ಥಮಾಡಿಕೊಂಡರು. ಇದ್ರಿಂದ ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಟ್ಟರೆ, ತಮಗೆ ಬೇಕಾಗಿರೋದನ್ನೆಲ್ಲಾ ಯೆಹೋವ ಕೊಟ್ಟೆ ಕೊಡ್ತಾನೆ ಅಂತ ನಂಬಿಕೆ ಇಡೋಕೆ ಕಲಿತರು. ಆ ನಾಲ್ಕು ವರ್ಷ ಇಸ್ರಾಯೇಲ್ಯರಿಗೆ ಬೇಕಾದಷ್ಟು ಆಹಾರ ಕೊಟ್ಟು ಅವರನ್ನ ಯೆಹೋವ ಚೆನ್ನಾಗಿ ನೋಡಿಕೊಂಡನು. ಅಷ್ಟೇ ಅಲ್ಲ, ಈ ನಿಯಮದಿಂದ ಪವಿತ್ರ ಡೇರೆಗೆ ಧಾರಾಳ ಮನಸ್ಸಿಂದ ಉಡುಗೊರೆ ಕೊಡಬೇಕು ಅನ್ನೋ ಪಾಠವನ್ನೂ ಕಲಿಸಿದನು.

18 ಯಾಜಕಕಾಂಡ 19:23-25ರಲ್ಲಿರೋ ಈ ನಿಯಮ ನಮಗೆ ಯೇಸು ಬೆಟ್ಟದ ಭಾಷಣದಲ್ಲಿ ಹೇಳಿರೋ ಮಾತುಗಳನ್ನ ನೆನಪಿಸುತ್ತೆ. ಯೇಸು ಅಲ್ಲಿ “ಏನು ತಿನ್ನಬೇಕು, ಏನು ಕುಡಿಬೇಕು . . . ಅಂತ ಯಾವತ್ತೂ ಚಿಂತೆಮಾಡಬೇಡಿ.” “ನಿಮಗೆ ಇವೆಲ್ಲ ಬೇಕು ಅಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಚೆನ್ನಾಗಿ ಗೊತ್ತು” ಅಂತ ಹೇಳಿದನು. ದೇವರು ಹಕ್ಕಿಗಳನ್ನ ಹೇಗೆ ಚೆನ್ನಾಗಿ ನೋಡಿಕೊಳ್ತಾನೋ ಹಾಗೆ ನಮ್ಮನ್ನೂ ಚೆನ್ನಾಗಿ ನೋಡಿಕೊಳ್ತಾನೆ. (ಮತ್ತಾ. 6:25, 26, 32) ಹಾಗಾಗಿ ನಮಗೆ ಬೇಕಾಗಿರೋದನ್ನ ಯೆಹೋವ ಕೊಟ್ಟೆ ಕೊಡ್ತಾನೆ ಅಂತ ನಂಬ್ತೀವಿ. ಅಷ್ಟೇ ಅಲ್ಲ, ಬೇರೆಯವರಿಗೆ ಗೊತ್ತಾಗದ ಹಾಗೆ ಕಷ್ಟದಲ್ಲಿರೋರಿಗೆ ‘ಸಹಾಯನೂ ಮಾಡ್ತೀವಿ.’ ಸಭೆಯ ಖರ್ಚುವೆಚ್ಚಗಳಿಗಾಗಿ ಕಾಣಿಕೆನೂ ಹಾಕ್ತೀವಿ. ಈ ರೀತಿ ನಾವು ಧಾರಾಳ ಮನಸ್ಸು ತೋರಿಸೋದನ್ನ ಯೆಹೋವ ನೋಡಿ ಖಂಡಿತ ನಮ್ಮನ್ನ ಮೆಚ್ಚಿ ಆಶೀರ್ವದಿಸ್ತಾನೆ. (ಮತ್ತಾ. 6:2-4) ನಾವು ಧಾರಾಳ ಮನಸ್ಸು ತೋರಿಸುವಾಗ ಯಾಜಕಕಾಂಡ 19:23-25ರಿಂದ ಕಲಿತಿರೋ ಪಾಠಗಳನ್ನ ಪಾಲಿಸ್ತಿದ್ದೀವಿ ಅಂತ ತೋರಿಸ್ತೀವಿ.

19. ಯಾಜಕಕಾಂಡ 19ನೇ ಅಧ್ಯಾಯದಿಂದ ನೀವೇನು ಕಲಿತ್ರಿ?

19 ಈ ಲೇಖನದಲ್ಲಿ ಯಾಜಕಕಾಂಡ 19ನೇ ಅಧ್ಯಾಯದಲ್ಲಿರೋ ಕೆಲವು ವಚನಗಳನ್ನ ಚರ್ಚೆ ಮಾಡುತ್ತಾ ನಾವು ಪವಿತ್ರರಾಗಿರೋದು ಹೇಗೆ ಅಂತ ಕಲಿತ್ವಿ. ಯೆಹೋವ ಪವಿತ್ರನಾಗಿರೋ ತರಾನೇ ‘ನಾವೂ ನಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು.’ (1 ಪೇತ್ರ 1:15) ನಮ್ಮ ಈ ಒಳ್ಳೇ ನಡತೆಯನ್ನ ಗಮನಿಸಿ ಲೋಕದ ಜನರು ಯೆಹೋವ ದೇವರನ್ನ ಹೊಗಳಿದ್ದಾರೆ. (1 ಪೇತ್ರ 2:12) ಯಾಜಕಕಾಂಡ 19ನೇ ಅಧ್ಯಾಯದಲ್ಲಿ ಇನ್ನೂ ಕೆಲವು ಪಾಠಗಳಿವೆ. ಅದನ್ನ ನಾವು ಮುಂದಿನ ಲೇಖನದಲ್ಲಿ ಕಲಿಯೋಣ. ಇನ್ನೂ ಯಾವೆಲ್ಲಾ ವಿಷಯಗಳಲ್ಲಿ ನಾವು “ಪವಿತ್ರರಾಗಿ ಇರಬೇಕು” ಅಂತ ನೋಡೋಣ.

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”

a ಯೆಹೋವ ದೇವರಂದ್ರೆ ನಮಗೆ ತುಂಬ ಇಷ್ಟ ಅದಕ್ಕೇ ಆತನು ಏನು ಹೇಳಿದ್ರೂ ನಾವದನ್ನ ಮಾಡ್ತೀವಿ. ತಾನು ಪವಿತ್ರನಾಗಿರೋದ್ರಿಂದ ‘ನೀವೂ ಪವಿತ್ರರಾಗಿ ಇರಬೇಕು’ ಅಂತ ಯೆಹೋವ ಹೇಳ್ತಾನೆ. ಆದ್ರೆ ಅಪರಿಪೂರ್ಣರಾಗಿರುವ ನಾವು ಪವಿತ್ರರಾಗೋಕೆ ಆಗುತ್ತಾ? ಆಗುತ್ತೆ, ಹೇಗೆ? ಆಗಿನ ಕಾಲದ ಕ್ರೈಸ್ತರಿಗೆ ಪೇತ್ರ ಕೊಟ್ಟ ಬುದ್ಧಿವಾದದ ಬಗ್ಗೆ ಮತ್ತು ಯೆಹೋವ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳ ಬಗ್ಗೆ ಚೆನ್ನಾಗಿ ಕಲಿಯೋದ್ರಿಂದ ನಾವು ಎಲ್ಲಾ ವಿಷಯಗಳಲ್ಲೂ ಪವಿತ್ರರಾಗಿರೋಕೆ ಆಗುತ್ತೆ.

b ಸಬ್ಬತ್‌ ಬಗ್ಗೆ ಮತ್ತು ಅದರಿಂದ ನಾವು ಯಾವ್ಯಾವ ವಿಷಯಗಳನ್ನ ಕಲಿಯಬಹುದು ಅಂತ ತಿಳುಕೊಳ್ಳೋಕೆ ಡಿಸೆಂಬರ್‌ 2019ರ ಕಾವಲಿನಬುರುಜುವಿನ “ಕೆಲಸಕ್ಕೂ ವಿಶ್ರಾಂತಿಗೂ ‘ತಕ್ಕ ಸಮಯವುಂಟು’” ಅನ್ನೋ ಲೇಖನ ನೋಡಿ.

c ಚಿತ್ರ ವಿವರಣೆ: ವಯಸ್ಸಾದ ಹೆತ್ತವರ ಜೊತೆ ಮಗ ಸಮಯ ಕಳೆಯುತ್ತಿದ್ದಾನೆ. ಅವರನ್ನ ನೋಡೋಕೆ ಹೆಂಡತಿ, ಮಗಳನ್ನ ಕರಕೊಂಡು ಬಂದಿದ್ದಾನೆ. ಅವರ ಜೊತೆ ಆಗಾಗ ಮಾತಾಡ್ತಾ ಇದ್ದಾನೆ.

d ಚಿತ್ರ ವಿವರಣೆ: ಒಬ್ಬ ಇಸ್ರಾಯೇಲ್ಯ ರೈತ ತಾನು ನೆಟ್ಟಿರೋ ಮರದಲ್ಲಿ ಬಿಟ್ಟಿರೋ ಹಣ್ಣುಗಳನ್ನ ನೋಡ್ತಿದ್ದಾನೆ.