ಅಧ್ಯಯನ ಲೇಖನ 49
ಯಾಜಕಕಾಂಡ ಪುಸ್ತಕದಿಂದ ಇನ್ನೂ ಕೆಲವು ಪಾಠಗಳು
“ನೀವು ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಬೇಕು.”—ಯಾಜ. 19:18.
ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ
ಕಿರುನೋಟ a
1-2. (ಎ) ಹಿಂದಿನ ಲೇಖನದಲ್ಲಿ ಏನು ಕಲಿತ್ವಿ? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?
ಹಿಂದಿನ ಲೇಖನದಲ್ಲಿ ಯಾಜಕಕಾಂಡ 19ನೇ ಅಧ್ಯಾಯದಿಂದ ಕೆಲವು ಪಾಠಗಳನ್ನ ನಾವು ಕಲಿತ್ವಿ. 3ನೇ ವಚನದಲ್ಲಿ ಅಪ್ಪಅಮ್ಮನ ಗೌರವಿಸಬೇಕು ಅಂತ ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದನು. ಅದೇ ತರ ನಾವು ನಮ್ಮ ಅಪ್ಪ-ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು, ಅವರಿಗೆ ಬೇಕಾಗಿರೋದನ್ನ ತಂದುಕೊಡಬೇಕು, ಅವರಿಗೆ ಪ್ರೋತ್ಸಾಹ ಕೊಡಬೇಕು, ದೇವರ ಜೊತೆ ಒಳ್ಳೇ ಸಂಬಂಧನ ಕಾಪಾಡಿಕೊಳ್ಳೋಕೆ ಸಹಾಯಮಾಡಬೇಕು ಅಂತ ಕಲಿತ್ವಿ. ಅದೇ ವಚನದಲ್ಲಿ ಸಬ್ಬತ್ ಆಚರಿಸಬೇಕು ಅಂತ ದೇವರು ಇಸ್ರಾಯೇಲ್ಯರಿಗೆ ಹೇಳಿದ್ದನು. ನಾವಿವತ್ತು ಸಬ್ಬತ್ತನ್ನು ಆಚರಿಸಬೇಕಾಗಿಲ್ಲ. ಆದ್ರೆ ಅದರಲ್ಲಿರೋ ತತ್ವವನ್ನ ಪಾಲಿಸ್ತೀವಿ. ಅಂದ್ರೆ ಪ್ರತಿದಿನ ಯೆಹೋವ ದೇವರ ಆರಾಧನೆಗಾಗಿ ಸಮಯ ಮಾಡಿಕೊಳ್ತೀವಿ. ಹೀಗೆ ಯಾಜಕಕಾಂಡ 19:2 ಮತ್ತು 1 ಪೇತ್ರ 1:15 ಹೇಳೋ ತರ ಪವಿತ್ರರಾಗಿರೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡ್ತಿದ್ದೀವಿ ಅಂತ ತೋರಿಸ್ತೀವಿ.
2 ಯಾಜಕಕಾಂಡ 19ನೇ ಅಧ್ಯಾಯದಿಂದ ಇನ್ನೂ ಕೆಲವು ಪಾಠಗಳನ್ನ ಈ ಲೇಖನದಲ್ಲಿ ಕಲಿತೀವಿ. ಅಂಗವೈಕಲ್ಯತೆ ಇರುವವರ ಜೊತೆ ಹೇಗೆ ನಡಕೊಳ್ಳಬೇಕು, ವ್ಯಾಪಾರ ವ್ಯವಹಾರ ಮಾಡುವಾಗ ಪ್ರಾಮಾಣಿಕವಾಗಿ ಇರೋದು ಹೇಗೆ, ಬೇರೆಯವರನ್ನ ಪ್ರೀತಿಸೋದು ಹೇಗೆ ಅಂತ ನೋಡೋಣ. ಹೀಗೆ ಮಾಡಿದ್ರೆ ಯೆಹೋವ ದೇವರ ತರ ನಾವೂ ಪವಿತ್ರರಾಗಿರೋಕೆ ಆಗುತ್ತೆ.
ಅಂಗವೈಕಲ್ಯತೆ ಇರುವವರ ಜೊತೆ ಹೇಗೆ ನಡ್ಕೊಬೇಕು?
3-4. ಇಸ್ರಾಯೇಲ್ಯರು ಅಂಗವಿಕಲರ ಜೊತೆ ಹೇಗೆ ನಡ್ಕೊಬೇಕು ಅಂತ ಯಾಜಕಕಾಂಡ 19:14 ಹೇಳಿತ್ತು?
3 ಯಾಜಕಕಾಂಡ 19:14 ಓದಿ. ಅಂಗವೈಕಲ್ಯತೆ ಇರೋರಿಗೆ ಇಸ್ರಾಯೇಲ್ಯರು ದಯೆ ತೋರಿಸಬೇಕು ಅಂತ ಯೆಹೋವ ದೇವರು ಬಯಸಿದನು. ಅದಕ್ಕೆ ಕಿವುಡರಿಗೆ ಶಾಪ ಹಾಕಬಾರದು ಅಂತ ಆತನು ಅವರಿಗೆ ಹೇಳಿದನು. ಒಬ್ಬ ವ್ಯಕ್ತಿಗೆ ಬೆದರಿಕೆ ಹಾಕೋದು, ಅವನ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡೋದೂ ಶಾಪ ಹಾಕೋದ್ರಲ್ಲಿ ಸೇರಿದೆ. ಕಿವುಡನಿಗೆ ಶಾಪ ಹಾಕಿದ್ರೆ ಅವನಿಗೆ ಏನೂ ಕೇಳಿಸಲ್ಲ. ಹೀಗಿರುವಾಗ ವಾಪಸ್ ಅವನು ಏನೂ ಹೇಳೋಕೆ ಆಗಲ್ಲ.
4 14ನೇ ವಚನದಲ್ಲಿ ಮುಂದಕ್ಕೆ ಯೆಹೋವ ದೇವರು ಇಸ್ರಾಯೇಲ್ಯರಿಗೆ “ಕುರುಡರು ಎಡವಿ ಬೀಳೋ ತರ ಅವರು ನಡಿಯೋ ದಾರೀಲಿ ಏನೂ ಅಡ್ಡ ಇಡಬಾರದು” ಅಂತ ಹೇಳಿದನು. ಒಂದು ಪುಸ್ತಕ, “ಆಗಿನ ಕಾಲದ ಇಸ್ರಾಯೇಲಿನ ಸುತ್ತಮುತ್ತ ಇದ್ದ ಜನರು ಅಂಗವಿಕಲರನ್ನು ತುಂಬ ಕೀಳಾಗಿ ನೋಡುತ್ತಿದ್ದರು. ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದರು” ಅಂತ ಹೇಳುತ್ತೆ. ಆಗಿನ ಕಾಲದಲ್ಲಿ ಕೆಲವು ಕಲ್ಲೆದೆಯ ಜನರು ಕುರುಡರು ನಡೆಯುತ್ತಿದ್ದ ದಾರಿಯಲ್ಲಿ ಏನಾದ್ರೂ ಅಡ್ಡ ಇಟ್ಟು ಅವರನ್ನ ಬೀಳಿಸಿ ಮಜಾ ತಗೊಳ್ತಾ ಇದ್ದಿರಬೇಕು. ಆ ಜನರ ತರ ಇಸ್ರಾಯೇಲ್ಯರು ಕ್ರೂರಿಗಳಾಗಬಾರದು ಅಂತ ಯೆಹೋವ ಈ ಆಜ್ಞೆ ಕೊಟ್ಟನು. ಇದರಿಂದ ಅಂಗವಿಕಲರಿಗೆ ಕರುಣೆ ತೋರಿಸಬೇಕು ಅಂತ ಇಸ್ರಾಯೇಲ್ಯರಿಗೆ ಅರ್ಥ ಆಯ್ತು.
5. ಅಂಗವಿಕಲರಿಗೆ ನಾವು ಹೇಗೆ ಕರುಣೆ ತೋರಿಸಬಹುದು?
5 ಯೇಸು ಅಂಗವಿಕಲರಿಗೆ ತುಂಬ ಕರುಣೆ ತೋರಿಸಿದನು. “ಕುರುಡರಿಗೆ ಈಗ ಕಣ್ಣು ಕಾಣ್ತಿದೆ, ಕುಂಟರು ನಡಿತಿದ್ದಾರೆ, ಕುಷ್ಠರೋಗಿಗಳು ವಾಸಿ ಆಗ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸ್ತಿದೆ, ಸತ್ತವರಿಗೆ ಮತ್ತೆ ಜೀವ ಬಂದಿದೆ” ಅಂತ ಯೇಸು ಯೋಹಾನನಿಗೆ ಹೇಳಿದನು. ಯೇಸು ಮಾಡಿದ ಈ ಅದ್ಭುತಗಳನ್ನ ನೋಡಿದ ‘ಜನ್ರೆಲ್ಲ ದೇವರನ್ನ ಹೊಗಳಿದ್ರು.’ (ಲೂಕ 7:20-22; 18:43) ಕ್ರೈಸ್ತರು ಯೇಸು ತರಾನೇ ಅಂಗವಿಕಲರಿಗೆ ಕರುಣೆ ತೋರಿಸಬೇಕು. ಅದಕ್ಕೆ ನಾವು ಅಂಥ ಜನರಿಗೆ ದಯೆ ತೋರಿಸ್ತೀವಿ, ಅವರ ಜೊತೆ ಪ್ರೀತಿಯಿಂದ ನಡೆದುಕೊಳ್ತೀವಿ. ಯೆಹೋವ ದೇವರು ನಮಗೆ ಅದ್ಭುತಗಳನ್ನ ಮಾಡೋ ಶಕ್ತಿ ಕೊಟ್ಟಿಲ್ಲ ನಿಜ, ಆದ್ರೆ ಅಂಗವಿಕಲರು ಮುಂದೆ ಚೆನ್ನಾಗಿ ಆಗ್ತಾರೆ, ಅವರಿಗೆ ಒಳ್ಳೇ ಆರೋಗ್ಯ ಸಿಗುತ್ತೆ ಅಂತ ಅವರಿಗೆ ಸಿಹಿಸುದ್ದಿ ಹೇಳೋ ಅವಕಾಶವನ್ನ ನಮಗೆ ಕೊಟ್ಟಿದ್ದಾನೆ. ನಾವು ಈ ಸಿಹಿಸುದ್ದಿಯನ್ನ ಕಣ್ಣಿಲ್ಲದವರಿಗೂ, ಕಣ್ಣಿದ್ರೂ ದೇವರ ಬಗ್ಗೆ ಇರೋ ಸತ್ಯವನ್ನ ಕಾಣದೇ ಇರುವವರಿಗೂ ಸಾರಬಹುದು. (ಲೂಕ 4:18) ಈ ಸಿಹಿಸುದ್ದಿ ಕೇಳಿಸಿಕೊಂಡು ಈಗಾಗಲೇ ತುಂಬ ಜನ ಯೆಹೋವ ದೇವರನ್ನ ಹೊಗಳ್ತಿದ್ದಾರೆ.
ವ್ಯಾಪಾರ-ವ್ಯವಹಾರ ಮಾಡುವಾಗ ಪ್ರಾಮಾಣಿಕರಾಗಿರಿ
6. ಹತ್ತು ಆಜ್ಞೆಗಳನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಯಾಜಕಕಾಂಡ 19ನೇ ಅಧ್ಯಾಯ ಹೇಗೆ ಸಹಾಯಮಾಡುತ್ತೆ?
6 ಯಾಜಕಕಾಂಡ 19ನೇ ಅಧ್ಯಾಯದ ಕೆಲವು ವಚನಗಳಲ್ಲಿ ಹತ್ತು ಆಜ್ಞೆಗಳ ಬಗ್ಗೆ ಹೆಚ್ಚಿನ ವಿವರ ಇದೆ. ಉದಾಹರಣೆಗೆ ಎಂಟನೇ ಆಜ್ಞೆ ನೋಡಿ. ಅದು “ಕದಿಬಾರದು” ಅಂತ ಹೇಳುತ್ತೆ. (ವಿಮೋ. 20:15) ಇದನ್ನ ಕೇಳಿಸಿಕೊಂಡವರು ಬೇರೆಯವರ ವಸ್ತುನ ನಾನು ಕೇಳದೇ ತಗೊಂಡರೆ ಮಾತ್ರ ಕದ್ದ ಹಾಗೆ ಆಗುತ್ತೆ ಅಂತ ಅಂದುಕೊಳ್ಳಬಹುದು. ಆದ್ರೆ ಕಳ್ಳತನಕ್ಕೆ ಬೇರೆಬೇರೆ ರೂಪಗಳಿವೆ ಅಂತ ಯಾಜಕಕಾಂಡ 19ನೇ ಅಧ್ಯಾಯ ಓದಿದ್ರೆ ಗೊತ್ತಾಗುತ್ತೆ.
7. ಒಬ್ಬ ವ್ಯಾಪಾರಿ ಏನು ಮಾಡಿದ್ರೂ ಕಳ್ಳತನ ಮಾಡಿದ ಹಾಗೆ ಆಗ್ತಿತ್ತು?
7 ಒಬ್ಬ ಇಸ್ರಾಯೇಲ್ಯ ವ್ಯಾಪಾರಿ ಬೇರೆಯವರ ವಸ್ತುಗಳನ್ನ ನೇರವಾಗಿ ಕದಿಯದೇ ಇರಬಹುದು. ಆದ್ರೆ ಅವನು ವ್ಯಾಪಾರ-ವ್ಯವಹಾರ ಮಾಡುವಾಗ ಬೇರೆಯವರಿಗೆ ಮೋಸ ಮಾಡಿದ್ರೆ ಅದೂ ಕಳ್ಳತನ ಆಗ್ತಿತ್ತು. ಯಾಕಂದ್ರೆ ಯಾಜಕಕಾಂಡ 19:35, 36ರಲ್ಲಿ “ಅಳತೆ ಮಾಡುವಾಗ, ತೂಕ ಮಾಡುವಾಗ ಮೋಸ ಮಾಡಬಾರದು. ನೀವು ಉಪಯೋಗಿಸೋ ತಕ್ಕಡಿ, ತೂಕದ ಕಲ್ಲು, ಅಳೆಯೋ ಮಾಪಕಗಳು ಸರಿಯಾಗಿ ಇರಬೇಕು” ಅಂತ ಯೆಹೋವ ಹೇಳಿದನು. ಒಬ್ಬ ವ್ಯಾಪಾರಿ ತನ್ನ ಸ್ವಂತ ಲಾಭಕ್ಕೋಸ್ಕರ ಅಳತೆ, ತೂಕ ಮಾಡುವಾಗ ಮೋಸ ಮಾಡಿದ್ರೆ ಅದು ಕೂಡ ಕಳ್ಳತನ ಆಗ್ತಿತ್ತು. ಅದನ್ನ ಯಾಜಕಕಾಂಡ 19ನೇ ಅಧ್ಯಾಯದ ಇನ್ನೂ ಕೆಲವು ವಚನಗಳು ಸ್ಪಷ್ಟವಾಗಿ ತೋರಿಸುತ್ತವೆ.
8. (ಎ) ಎಂಟನೇ ಆಜ್ಞೆಯನ್ನ ಅರ್ಥಮಾಡಿಕೊಳ್ಳೋಕೆ ಯಾಜಕಕಾಂಡ 19:11-13ನೇ ವಚನಗಳು ಹೇಗೆ ಸಹಾಯಮಾಡ್ತು? (ಬಿ) ನಾವೇನು ಮಾಡಬೇಕು ಅಂತ ಇದರಿಂದ ಗೊತ್ತಾಗುತ್ತೆ?
8 ಯಾಜಕಕಾಂಡ 19:11-13 ಓದಿ. ಯಾಜಕಕಾಂಡ 19:11ನೇ ವಚನ “ನೀವು ಕದಿಬಾರದು” ಅಂತ ಶುರು ಆಗುತ್ತೆ. 13ನೇ ವಚನಕ್ಕೆ ಬಂದಾಗ “ನೀವು ಬೇರೆಯವರಿಗೆ ಮೋಸ ಮಾಡಬಾರದು” ಅಂತ ಹೇಳುತ್ತೆ. ವ್ಯಾಪಾರ-ವ್ಯವಹಾರ ಮಾಡುವಾಗ ಬೇರೆಯವರಿಗೆ ಮೋಸ ಮಾಡೋದೂ ಒಂದು ತರ ಕಳ್ಳತನ ಅಂತ ಇದರಿಂದ ಗೊತ್ತಾಗುತ್ತೆ. ಕದಿಬಾರದು ಅನ್ನೋ ಎಂಟನೇ ಆಜ್ಞೆಯ ಹಿಂದಿರೋ ತತ್ವವನ್ನ ತಮ್ಮ ಜೀವನದಲ್ಲಿ ಹೇಗೆಲ್ಲಾ ಪಾಲಿಸಬಹುದು ಅಂತ ಅರ್ಥಮಾಡಿಕೊಳ್ಳೋಕೆ ಯಾಜಕಕಾಂಡ 19ನೇ ಅಧ್ಯಾಯ ಯೆಹೂದ್ಯರಿಗೆ ಸಹಾಯಮಾಡಿತು. ಕದಿಯೋದು, ಮೋಸ ಮಾಡೋದೆಲ್ಲ ಯೆಹೋವನಿಗೆ ಇಷ್ಟ ಇಲ್ಲ ಅಂತ ಯಾಜಕಕಾಂಡ 19:11-13ರಲ್ಲಿ ಗೊತ್ತಾಗುತ್ತೆ. ಹಾಗಾಗಿ ‘ನಾನು ವ್ಯಾಪಾರ-ವ್ಯವಹಾರವನ್ನು, ಕೆಲಸವನ್ನು ಪ್ರಾಮಾಣಿಕವಾಗಿ ಮಾಡ್ತಿದ್ದೀನಾ? ಒಂದುವೇಳೆ ಪ್ರಾಮಾಣಿಕವಾಗಿ ಮಾಡ್ತಿಲ್ಲ ಅಂದ್ರೆ ಅದನ್ನ ಸರಿಮಾಡಿಕೊಳ್ಳಬೇಕಾ?’ ಅಂತ ನಮ್ಮನ್ನೇ ಕೇಳಿಕೊಳ್ಳಬೇಕು.
9. ಕೂಲಿ ಮಾಡುವವರಿಗೆ ಯಾಜಕಕಾಂಡ 19:13 ರಲ್ಲಿದ್ದ ನಿಯಮದಿಂದ ಯಾವ ಪ್ರಯೋಜನ ಆಗುತ್ತಿತ್ತು?
9 ಯಾಜಕಕಾಂಡ 19:13ರಿಂದ ಕ್ರೈಸ್ತರು ಇನ್ನೊಂದು ಪಾಠ ಕಲಿಬಹುದು. ಆ ವಚನ “ಕೂಲಿ ಮಾಡಿದವನಿಗೆ ಕೊಡಬೇಕಾದ ಸಂಬಳನ ಕೊಡದೇ ಮಾರನೇ ದಿನ ಬೆಳಿಗ್ಗೆ ತನಕ ನಿಮ್ಮ ಹತ್ರಾನೇ ಇಟ್ಕೊಬಾರದು” ಅಂತ ಕೊನೆಯಾಗುತ್ತೆ. ಆಗಿನ ಕಾಲದ ಹೆಚ್ಚಿನ ಇಸ್ರಾಯೇಲ್ಯರು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಆ ದಿನ ಸಂಜೆನೇ ಕೂಲಿ ಕೊಡಬೇಕಿತ್ತು. ಯಾಕಂದ್ರೆ ದಿನದ ಕೂಲಿ ಕೊಟ್ಟಿಲ್ಲ ಅಂದ್ರೆ ಆ ವ್ಯಕ್ತಿಯ ಮನೆಯವರೆಲ್ಲಾ ಬಹುಶಃ ಅವತ್ತಿನ ರಾತ್ರಿ ಉಪವಾಸ ಇರಬೇಕಿತ್ತು. “ಕಷ್ಟದಲ್ಲಿರೋ ವ್ಯಕ್ತಿಗೆ ಆ ಕೂಲಿಯಿಂದಾನೇ ಜೀವನ ನಡೀಬೇಕು” ಅಂತ ಯೆಹೋವ ಹೇಳಿದ್ದನು.—ಧರ್ಮೋ. 24:14, 15; ಮತ್ತಾ. 20:8.
10. ಯಾಜಕಕಾಂಡ 19:13ರಿಂದ ನಮಗೆ ಯಾವ ಪಾಠ ಇದೆ?
10 ಕೂಲಿ ಕೆಲಸ ಮಾಡೋ ಎಷ್ಟೋ ಜನರಿಗೆ ಇವತ್ತು ಎರಡು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಂಬಳ ಸಿಗುತ್ತೆ. ಅವರಿಗೆ ನ್ಯಾಯವಾಗಿ ಸಿಗಬೇಕಾದ ಸಂಬಳಕ್ಕಿಂತ ತುಂಬ ಕಡಿಮೆ ಸಂಬಳ ಸಿಗುತ್ತೆ. ಆದ್ರೂ ಹೊಟ್ಟೆಪಾಡಿಗೋಸ್ಕರ ಅವರು ಈ ಕೆಲಸವನ್ನ ಮಾಡ್ತಾ ಇರುತ್ತಾರೆ. ಅವರಿಗೆ ಎಷ್ಟು ಕಷ್ಟ ಇದೆ ಅಂತ ಮಾಲೀಕರಿಗೆ ಗೊತ್ತಿದ್ರೂ ಸರಿಯಾಗಿ ಸಂಬಳ ಕೊಡೋದೇ ಇಲ್ಲ. ಈ ಮಾಲೀಕರು ಒಂದರ್ಥದಲ್ಲಿ ‘ಕೂಲಿ ಮಾಡುವವರಿಗೆ ಕೊಡಬೇಕಾದ ಸಂಬಳನ ತಮ್ಮ ಹತ್ರಾನೇ ಇಟ್ಕೊಂಡ ಹಾಗೆ ಆಗುತ್ತೆ.’ ಆದ್ರೆ ಕ್ರೈಸ್ತರಾದ ನಾವು ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಂಡಿದ್ದರೆ ಅವರಿಗೆ ಸರಿಯಾಗಿ ಸಂಬಳ ಕೊಡಬೇಕು. ಯಾಜಕಕಾಂಡ 19:13ರ ತತ್ವವನ್ನ ಪಾಲಿಸಬೇಕು. ಯಾಜಕಕಾಂಡ 19ನೇ ಅಧ್ಯಾಯದಿಂದ ಇನ್ನೂ ಯಾವ ಪಾಠ ಕಲಿಯಬಹುದು?
ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಿ
11-12. ಯೇಸುವಿನ ಮಾತಿಂದ ನಮಗೇನು ಗೊತ್ತಾಗುತ್ತೆ? (ಯಾಜಕಕಾಂಡ 19:17, 18)
11 ನಾವು ಬೇರೆಯವರನ್ನು ಪ್ರೀತಿಸಬೇಕು ಅಂತಾನೂ ಯೆಹೋವ ಬಯಸುತ್ತಾನೆ. ಅದಕ್ಕೆ ಯಾಜಕಕಾಂಡ 19:17, 18ರಲ್ಲಿ (ಓದಿ.) “ನೀವು ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಬೇಕು” ಅಂತ ಹೇಳಿದ್ದಾನೆ. ಈ ಆಜ್ಞೆಯನ್ನ ನಾವು ಪಾಲಿಸಿದ್ರೆ ಯೆಹೋವ ದೇವರನ್ನ ಮೆಚ್ಚಿಸ್ತೀವಿ.
12 ಯಾಜಕಕಾಂಡ 19:18ರಲ್ಲಿರೋ ಆಜ್ಞೆ ಎಷ್ಟು ಮುಖ್ಯ ಅಂತ ಯೇಸುವಿನ ಮಾತಿನಿಂದ ಗೊತ್ತಾಗುತ್ತೆ. ಒಬ್ಬ ಫರಿಸಾಯ ಯೇಸುವಿನ ಹತ್ರ ಬಂದು “ನಿಯಮ ಪುಸ್ತಕದಲ್ಲಿ ಪ್ರಾಮುಖ್ಯ ಆಜ್ಞೆ ಯಾವುದು?” ಅಂತ ಕೇಳಿದ. ಅದಕ್ಕೆ ಯೇಸು “‘ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.’ ಇದೇ ಪ್ರಾಮುಖ್ಯವಾದ ಮತ್ತು ಮೊದಲು ಪಾಲಿಸಬೇಕಾದ ಆಜ್ಞೆ. ಇದೇ ತರ ಎರಡನೇ ಆಜ್ಞೆ ‘ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು’” ಅಂತ ಹೇಳಿದ. (ಮತ್ತಾ. 22:35-40) ಈ ಎರಡನೇ ಆಜ್ಞೆಯನ್ನ ಯೇಸು ಯಾಜಕಕಾಂಡ 19:18ರಿಂದ ಹೇಳಿದನು. ನಾವು ಬೇರೆಯವರನ್ನ ಹೇಗೆಲ್ಲಾ ಪ್ರೀತಿಸಬೇಕು ಅಂತ ಯಾಜಕಕಾಂಡ 19ನೇ ಅಧ್ಯಾಯದಿಂದ ಈಗ ಕಲಿಯೋಣ.
13. ಯಾಜಕಕಾಂಡ 19:18ರಲ್ಲಿರೋ ಬುದ್ಧಿವಾದವನ್ನ ಪಾಲಿಸೋದರ ಬಗ್ಗೆ ಯೋಸೇಫನಿಂದ ಏನು ಕಲಿಬಹುದು?
13 ನಾವು ಬೇರೆಯವರನ್ನ ಪ್ರೀತಿಸೋ ಒಂದು ವಿಧ ಯಾಜಕಕಾಂಡ 19:18ರಲ್ಲಿದೆ. ಅಲ್ಲಿ ಹೀಗಿದೆ: “ನೀವು ಯಾರಿಗೂ ಸೇಡು ತೀರಿಸಬಾರದು ಅಥವಾ ಯಾರ ಮೇಲೂ ದ್ವೇಷ ಸಾಧಿಸಬಾರದು.” ಇವತ್ತು ತುಂಬ ಜನ, ಕ್ಲಾಸ್‌ಮೇಟ್‌ಗಳ ಮೇಲೆ, ಜೊತೆ ಕೆಲಸ ಮಾಡೋರ ಮೇಲೆ, ಅಥವಾ ಅವರ ಕುಟುಂಬದವರ ಮೇಲೆ ತುಂಬ ವರ್ಷಗಳ ತನಕ ದ್ವೇಷ ಸಾಧಿಸ್ತಿರೋದನ್ನ ನೀವು ನೋಡಿರುತ್ತೀರ. ಯೋಸೇಫನ ಹತ್ತು ಅಣ್ಣಂದಿರು ಸಹ ಅವನ ಮೇಲೆ ದ್ವೇಷ ಸಾಧಿಸಿದ್ರಿಂದ ಅವನಿಗೆ ಕೆಟ್ಟದು ಮಾಡಿದ್ರು. (ಆದಿ. 37:2-8, 25-28) ಆದ್ರೆ ಯೋಸೇಫ ಅವನ ಅಣ್ಣಂದಿರ ತರ ಇರಲಿಲ್ಲ. ಅವನಿಗೆ ಅಧಿಕಾರ ಸಿಕ್ಕಿದಾಗ್ಲೂ ಅವರ ಮೇಲೆ ಸೇಡು ತೀರಿಸೋಕೆ ಹೋಗಲಿಲ್ಲ. ಮನಸ್ಸಲ್ಲಿ ದ್ವೇಷ ಇಟ್ಟುಕೊಳ್ಳದೆ ಕರುಣೆ ತೋರಿಸಿದ. ನಾವೇನು ಮಾಡಬೇಕು ಅಂತ ಯಾಜಕಕಾಂಡ 19:18 ಹೇಳಿತ್ತೋ ಅದನ್ನ ಯೋಸೇಫ ಅವತ್ತೇ ಮಾಡಿದ.—ಆದಿ. 50:19-21.
14. ಯಾಜಕಕಾಂಡ 19:18ರಲ್ಲಿ ತತ್ವವನ್ನ ನಾವು ಈಗಲೂ ಪಾಲಿಸಬೇಕು ಅಂತ ನಾವು ಹೇಗೆ ಹೇಳಬಹುದು?
14 ನಾವು ಯೆಹೋವ ದೇವರನ್ನ ಖುಷಿಪಡಿಸಬೇಕಂದ್ರೆ ಯೋಸೇಫನ ತರ ಇರಬೇಕು. ನಾವು ಬೇರೆಯವರ ಮೇಲೆ ದ್ವೇಷ ಸಾಧಿಸಬಾರದು, ಸೇಡು ತೀರಿಸೋಕೆ ಹೋಗಬಾರದು. ಯೇಸು ಹೇಳಿಕೊಟ್ಟ ಪ್ರಾರ್ಥನೆಯಲ್ಲೂ ಇದೇ ಇತ್ತು. ಅಲ್ಲಿ ಬೇರೆಯವರ ತಪ್ಪುಗಳನ್ನ ಕ್ಷಮಿಸಬೇಕು ಅಂತ ಆತನು ಕಲಿಸಿದನು. (ಮತ್ತಾ. 6:9, 12) ಅಪೊಸ್ತಲ ಪೌಲ ಕೂಡ ಆಗಿನ ಕ್ರೈಸ್ತರಿಗೆ “ಪ್ರಿಯರೇ, ಸೇಡು ತೀರಿಸಬೇಡಿ” ಅಂತ ಹೇಳಿದ. (ರೋಮ. 12:19) ಅಷ್ಟೇ ಅಲ್ಲ, “ಬೇರೆಯವರು ತಪ್ಪು ಮಾಡಿದ್ರೂ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ” ಅಂತನೂ ಹೇಳಿದ. (ಕೊಲೊ. 3:13) ಯೆಹೋವ ಕೊಟ್ಟಿರೋ ತತ್ವಗಳು ಯಾವತ್ತೂ ಬದಲಾಗಲ್ಲ. ಹಾಗಾಗಿ ಯಾಜಕಕಾಂಡ 19:18ರಲ್ಲಿ ಇರೋ ನಿಯಮದ ಹಿಂದಿರೋ ತತ್ವವನ್ನ ನಾವು ಪಾಲಿಸಬೇಕು.
15. ಬೇರೆಯವರ ತಪ್ಪನ್ನ ನಾವು ಯಾಕೆ ಕ್ಷಮಿಸಿ ಮರೆತುಬಿಡಬೇಕು? ಉದಾಹರಣೆ ಕೊಡಿ.
15 ನಾವು ಬೇರೆಯವರನ್ನ ಯಾಕೆ ಕ್ಷಮಿಸಬೇಕು? ಒಂದು ಉದಾಹರಣೆ ನೋಡಿ. ನೀವು ತರಕಾರಿ ಕಟ್ ಮಾಡ್ತಿದ್ದೀರ ಅಂದುಕೊಳ್ಳಿ. ಕಟ್ ಮಾಡುವಾಗ ಒಂದು ಚಿಕ್ಕ ಗಾಯವಾದ್ರೂ ತುಂಬ ನೋವಾಗುತ್ತೆ. ಆದ್ರೆ ಒಂದೆರಡು ದಿನ ಆದಮೇಲೆ ಅಲ್ಲಿ ಗಾಯ ಆಗಿತ್ತು ಅನ್ನೋದನ್ನೇ ಮರೆತುಬಿಡ್ತೀರ. ಅದೇ ತರ ನಿಮ್ಮ ಫ್ರೆಂಡ್ ಹೇಳಿದ ಯಾವುದೋ ಮಾತಿಂದಾನೋ ಅಥವಾ ಮಾಡಿದ ವಿಷಯದಿಂದಾನೋ ನಿಮಗೆ ನೋವಾಗಿಬಿಡುತ್ತೆ ಅಂದುಕೊಳ್ಳಿ. ಅದೇನು ದೊಡ್ಡ ವಿಷಯ ಅಲ್ಲ ಅಂತ ನಿಮಗೆ ಅನಿಸಿದ್ರೆ ನೀವು ಅದನ್ನ ಮರೆತುಬಿಡ್ತೀರ. ಈಗ ಮತ್ತೆ ಆ ಉದಾಹರಣೆಗೆ ಹೋಗೋಣ. ಈ ಸಾರಿ ನಿಮಗೆ ದೊಡ್ಡ ಗಾಯ ಆಗಿದೆ ಅಂದುಕೊಳ್ಳಿ. ಆಗ ಏನು ಮಾಡ್ತೀರ? ಡಾಕ್ಟರ್ ಹತ್ರ ಹೋಗಿ ಬ್ಯಾಂಡೇಜ್ ಕಟ್ಟಿಸಿಕೊಳ್ತೀರ. ಆದ್ರೆ ನೀವು ಆ ಗಾಯ ವಾಸಿಯಾಗೋಕೆ ಬಿಡದೇ ಕೆರೆಯುತ್ತಾ ಇದ್ರೆ ಆ ಗಾಯ ದೊಡ್ಡದಾಗುತ್ತೆ. ಅದೇ ತರ ಯಾರಾದ್ರೂ ನಿಮ್ಮ ಮನಸ್ಸಿಗೆ ತುಂಬ ನೋವು ಮಾಡಿದಾಗ ನೀವು ಅದರ ಬಗ್ಗೆನೇ ಯೋಚನೆ ಮಾಡುತ್ತಾ ಇದ್ರೆ ಆ ನೋವು ಇನ್ನೂ ಜಾಸ್ತಿ ಆಗುತ್ತೆ. ಯಾಜಕಕಾಂಡ 19:18ರಲ್ಲಿರೋ ಬುದ್ಧಿವಾದನ ಪಾಲಿಸೋದ್ರಿಂದ ಎಷ್ಟು ಒಳ್ಳೆದಾಗುತ್ತೆ ಅಲ್ವಾ?
16. (ಎ) ಇಸ್ರಾಯೇಲ್ಯರು ವಿದೇಶಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ಯೆಹೋವ ದೇವರು ಯಾಜಕಕಾಂಡ 19:33, 34ರಲ್ಲಿ ಹೇಳಿದನು? (ಬಿ) ಇದರಿಂದ ನಾವೇನು ಪಾಠ ಕಲಿಬಹುದು?
16 ಇಸ್ರಾಯೇಲ್ಯರು ಬರೀ ತಮ್ಮ ದೇಶದವರನ್ನಲ್ಲ, ಅವರ ಜೊತೆ ಇದ್ದ ವಿದೇಶಿಯರನ್ನೂ ಪ್ರೀತಿಸಬೇಕು ಅಂತ ಯೆಹೋವ ಹೇಳಿದ್ದನು. ಅದು ನಮಗೆ ಯಾಜಕಕಾಂಡ 19:33, 34ರಿಂದ ಗೊತ್ತಾಗುತ್ತೆ. (ಓದಿ.) ಅಲ್ಲಿ ಯೆಹೋವ ಇಸ್ರಾಯೇಲ್ಯರಿಗೆ, ವಿದೇಶಿಯರನ್ನ “ನಿಮ್ಮ ದೇಶದವರ” ತರಾನೇ ನೋಡ್ಕೊಬೇಕು ನೀವು ನಿಮ್ಮನ್ನ ಪ್ರೀತಿಸೋ ತರಾನೇ “ಅವರನ್ನೂ ಪ್ರೀತಿಸಬೇಕು” ಅಂತ ಹೇಳಿದ್ದಾರೆ. ಉದಾಹರಣೆಗೆ ಬಡವರಿಗೆ ಮಾತ್ರ ಅಲ್ಲ, ವಿದೇಶಿಯರಿಗೂ ಹಕ್ಕಲಾಯೋಕೆ ಇಸ್ರಾಯೇಲ್ಯರು ಬಿಟ್ಟುಕೊಡಬೇಕಿತ್ತು. (ಯಾಜ. 19:9, 10) ಯಾಜಕಕಾಂಡ 19:33, 34ರಲ್ಲಿರೋ ತತ್ವವನ್ನ ನಾವೂ ಪಾಲಿಸಬೇಕು. (ಲೂಕ 10:30-37) ಹೇಗೆ? ಲಕ್ಷಾಂತರ ಜನರು ಅವರ ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಬಂದಿರುತ್ತಾರೆ. ಅವರಲ್ಲಿ ಕೆಲವರು ನಿಮ್ಮ ಅಕ್ಕಪಕ್ಕದಲ್ಲೂ ಇರಬಹುದು. ಅಂಥವರ ಜೊತೆ ನೀವು ಪ್ರೀತಿ, ಗೌರವದಿಂದ ನಡೆದುಕೊಳ್ಳಬೇಕು.
ಒಂದು ಮುಖ್ಯವಾದ ಕೆಲಸ
17-18. (ಎ) ಯಾಜಕಕಾಂಡ 19:2 ಮತ್ತು 1 ಪೇತ್ರ 1:15ರಿಂದ ನಮಗೇನು ಗೊತ್ತಾಗುತ್ತೆ? (ಬಿ) ನಾವು ಯಾವ ಮುಖ್ಯವಾದ ಕೆಲಸ ಮಾಡಬೇಕು ಅಂತ ಪೇತ್ರ ಹೇಳಿದ?
17 ನಾವು ಪವಿತ್ರರಾಗಿರಬೇಕು ಅಂತ ಯೆಹೋವ ಬಯಸ್ತಾನೆ ಅನ್ನೋದು ಯಾಜಕಕಾಂಡ 19:2 ಮತ್ತು 1 ಪೇತ್ರ ಗೊತ್ತಾಗುತ್ತೆ. ಯೆಹೋವ ದೇವರನ್ನ ಮೆಚ್ಚಿಸಬೇಕಂದ್ರೆ ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ 1:15ರಿಂದಯಾಜಕಕಾಂಡ 19ನೇ ಅಧ್ಯಾಯದ ಕೆಲವು ವಚನಗಳಿಂದ ಕಲಿತ್ವಿ. b ಈ ವಚನಗಳಲ್ಲಿರೋ ತತ್ವವನ್ನ ನಾವೂ ಪಾಲಿಸಬೇಕು ಅಂತ ಯೆಹೋವ ಬಯಸ್ತಾನೆ ಅನ್ನೋದು ಪವಿತ್ರ ಗ್ರಂಥದ ಗ್ರೀಕ್ ಪುಸ್ತಕಗಳ ಕೆಲವು ವಚನಗಳಿಂದ ನಮಗೆ ಗೊತ್ತಾಯ್ತು. ಇವೆಲ್ಲದರ ಜೊತೆ ಪೇತ್ರ ಒಂದು ವಿಷಯ ಹೇಳ್ತಿದ್ದಾನೆ. ಅದೇನು ಗೊತ್ತಾ?
18 ನಾವು ಯೆಹೋವ ದೇವರನ್ನ ಆರಾಧನೆ ಮಾಡ್ತೀವಿ, ಎಲ್ಲರಿಗೂ ಒಳ್ಳೆದನ್ನೇ ಮಾಡ್ತೀವಿ. ಆದ್ರೆ ಇದರ ಜೊತೆ ಇನ್ನೂ ಒಂದು ವಿಷಯ ಮಾಡೋಕೆ ಪೇತ್ರ ಹೇಳಿದ್ದಾನೆ. ನಾವು ನಮ್ಮ ನಡೆನುಡಿಯಲ್ಲಿ ಪವಿತ್ರರಾಗಿರಬೇಕು ಅಂತ ಹೇಳೋಕೂ ಮುಂಚೆ ಒಂದು ಮುಖ್ಯವಾದ ಕೆಲಸಕ್ಕಾಗಿ “ನಿಮ್ಮ ಮನಸ್ಸನ್ನ ಪೂರ್ತಿ ಸಿದ್ಧಮಾಡ್ಕೊಳ್ಳಿ” ಅಂತ ಅವನು ಹೇಳಿದ. (1 ಪೇತ್ರ 1:13, 15) ಆ ಕೆಲಸ ಏನು ಗೊತ್ತಾ? ಅಭಿಷಿಕ್ತ ಕ್ರೈಸ್ತರು ‘ದೇವರ ಒಳ್ಳೇತನದ ಬಗ್ಗೆ ಎಲ್ಲಾ ಜನ್ರಿಗೆ ತಿಳಿಸ್ತಾರೆ’ ಅಂತ ಪೇತ್ರ ಹೇಳಿದ. (1 ಪೇತ್ರ 2:9) ಅವರ ಜೊತೆ ಈ ಕೆಲಸ ಮಾಡೋಕೆ ನಮಗೂ ಒಂದು ಅವಕಾಶ ಇದೆ. ನಾವು ಜನರಿಗೆ ಖುಷಿಖುಷಿಯಿಂದ ಸಿಹಿಸುದ್ದಿ ಸಾರುತ್ತೀವಿ ಮತ್ತು ಕಲಿಸ್ತೀವಿ. (ಮಾರ್ಕ 13:10) ಯಾಜಕಕಾಂಡ 19ನೇ ಅಧ್ಯಾಯದಲ್ಲಿರೋ ತತ್ವವನ್ನ ಪಾಲಿಸೋಕೆ ನಮ್ಮಿಂದಾದ ಎಲ್ಲವನ್ನ ಮಾಡುವಾಗ ನಾವು ದೇವರನ್ನ ಮತ್ತು ಜನರನ್ನ ಪ್ರೀತಿಸ್ತೀವಿ ಅಂತ ತೋರಿಸ್ತೀವಿ. ಅಷ್ಟೇ ಅಲ್ಲ, ನಮ್ಮ ‘ನಡೆನುಡಿಯಲ್ಲಿ ಪವಿತ್ರರಾಗಿ’ ಇರೋಕೆ ನಮಗೆ ಇಷ್ಟ ಇದೆ ಅಂತ ತೋರಿಸ್ತೀವಿ.
ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು
a ನಾವಿವತ್ತು ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಲ್ಲ. ಆದ್ರೆ ಇವತ್ತಿಗೂ ಅದರಲ್ಲಿರೋ ನಿಯಮಗಳು ನಾವೇನು ಮಾಡಬೇಕು, ಏನು ಮಾಡಬಾರದು ಅಂತ ಕಲಿಸಿಕೊಡುತ್ತೆ. ಆ ನಿಯಮಗಳನ್ನ ನಾವು ಚೆನ್ನಾಗಿ ತಿಳಿದುಕೊಂಡರೆ ನಾವು ಜನರಿಗೆ ಹೇಗೆ ಪ್ರೀತಿ ತೋರಿಸಬಹುದು, ದೇವರನ್ನ ಹೇಗೆ ಮೆಚ್ಚಿಸಬಹುದು ಅಂತ ಕಲಿಯೋಕೆ ಆಗುತ್ತೆ. ಹಾಗಾಗಿ ಈ ಲೇಖನದಲ್ಲಿ ಯಾಜಕಕಾಂಡ 19ನೇ ಅಧ್ಯಾಯದಿಂದ ಕೆಲವು ಪಾಠಗಳನ್ನ ಕಲಿಯೋಣ.
b ಭೇದಭಾವ ಮಾಡಬಾರದು, ಬೇರೆಯವರ ಹೆಸ್ರು ಹಾಳು ಮಾಡಬಾರದು, ರಕ್ತ ತಿನ್ನಬಾರದು, ಶಕುನ ನೋಡಬಾರದು, ಮಾಟಮಂತ್ರ ಮಾಡಬಾರದು, ಲೈಂಗಿಕ ಅನೈತಿಕತೆ ಮಾಡಬಾರದು ಅಂತ ಯಾಜಕಕಾಂಡ 19ನೇ ಅಧ್ಯಾಯದಲ್ಲಿದೆ. ಇವೆಲ್ಲದರ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡಿಲ್ಲ.—ಯಾಜ. 19:15, 16, 26-29, 31. ಈ ಪತ್ರಿಕೆಯ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನೂ ನೋಡಿ.