“ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು”
ಹಿಂದಿನ ಕಾಲದಿಂದಲೂ ಯಜ್ಞಗಳನ್ನು ಅರ್ಪಿಸುವುದು ಸತ್ಯಾರಾಧನೆಯ ಪ್ರಮುಖ ಭಾಗವಾಗಿದೆ. ಇಸ್ರಾಯೇಲ್ಯರು ಪ್ರಾಣಿ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಕ್ರೈಸ್ತರು “ಸ್ತೋತ್ರಯಜ್ಞ”ಗಳನ್ನು ಅರ್ಪಿಸುತ್ತಾರೆ ಎನ್ನುವುದು ಪರಿಚಿತವಾದ ವಿಷಯ. ದೇವರಿಗೆ ಸಂತೋಷ ತರುವ ಇತರ ಯಜ್ಞಗಳೂ ಇವೆ. (ಇಬ್ರಿ. 13:15, 16) ಇಂಥ ಯಜ್ಞಗಳು ನಮಗೆ ಸಂತೋಷ ಮತ್ತು ಆಶೀರ್ವಾದವನ್ನು ತರುತ್ತವೆ. ಇದನ್ನು ಮುಂದಿನ ಉದಾಹರಣೆಗಳು ತೋರಿಸುತ್ತವೆ.
ಹನ್ನಳು ಹಿಂದಿನ ಕಾಲದಲ್ಲಿದ್ದ ಯೆಹೋವನ ನಂಬಿಗಸ್ತ ಸೇವಕಳಾಗಿದ್ದಳು. ಅವಳಿಗೆ ಒಬ್ಬ ಮಗನನ್ನು ಪಡೆಯುವ ಬಯಕೆಯಿತ್ತು. ಆದರೆ ಅವಳಿಗೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಯೆಹೋವನು ತನಗೊಬ್ಬ ಮಗನನ್ನು ಕೊಟ್ಟರೆ “ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು” ಎಂದು ದೇವರಿಗೆ ಪ್ರಾರ್ಥನೆಯಲ್ಲಿ ಹರಕೆ ಹೊತ್ತಳು. (1 ಸಮು. 1:10, 11) ಸಮಯಾನಂತರ ಹನ್ನಳು ಗರ್ಭಧರಿಸಿ ಗಂಡುಮಗುವನ್ನು ಪಡೆದಳು. ಅವನಿಗೆ ಸಮುವೇಲ ಎಂದು ಹೆಸರಿಟ್ಟಳು. ಸಮುವೇಲನು ಮೊಲೆಬಿಟ್ಟ ನಂತರ ಹನ್ನಳು ತನ್ನ ಹರಕೆಗೆ ತಕ್ಕಂತೆ ಅವನನ್ನು ದೇವಗುಡಾರಕ್ಕೆ ಕರೆದುಕೊಂಡು ಹೋದಳು. ಅವಳ ಸ್ವತ್ಯಾಗದ ಈ ಕಾಣಿಕೆಗಾಗಿ ಯೆಹೋವನು ಆಕೆಯನ್ನು ಆಶೀರ್ವದಿಸಿದನು. ನಂತರ ಅವಳಿಗೆ ಇನ್ನೂ ಐದು ಮಂದಿ ಮಕ್ಕಳಾದರು. ಮುಂದೆ ಸಮುವೇಲನು ಪ್ರವಾದಿಯಾದನು ಮತ್ತು ಬೈಬಲಿನ ಕೆಲವು ಪುಸ್ತಕಗಳನ್ನು ಬರೆದನು.—1 ಸಮು. 2:21.
ಹನ್ನ ಮತ್ತು ಸಮುವೇಲನಂತೆ, ಇಂದು ಕ್ರೈಸ್ತರಿಗೂ ತಮ್ಮ ಜೀವನವನ್ನು ಸೃಷ್ಟಿಕರ್ತನಿಗೆ ಸಮರ್ಪಿಸಿ ಆತನ ಸೇವೆಗಾಗಿ ಬಳಸುವ ಸುಯೋಗ ಇದೆ. ಯೆಹೋವನನ್ನು ಆರಾಧಿಸಲಿಕ್ಕಾಗಿ ನಾವು ಯಾವುದೇ ತ್ಯಾಗ ಮಾಡಿದರೂ ನಮಗೆ ತುಂಬ ಪ್ರತಿಫಲ ಸಿಗುತ್ತದೆಂದು ಯೇಸು ಮಾತು ಕೊಟ್ಟಿದ್ದಾನೆ.—ಮಾರ್ಕ 10:28-30.
ಮೊದಲನೇ ಶತಮಾನದಲ್ಲಿ, ದೊರ್ಕ ಎಂಬ ಕ್ರೈಸ್ತ ಸ್ತ್ರೀ ‘ಸತ್ಕ್ರಿಯೆಗಳು ಮತ್ತು ದಾನಧರ್ಮ’ಕ್ಕಾಗಿ ಹೆಸರುವಾಸಿಯಾಗಿದ್ದಳು. ಇದು ಇತರರಿಗೆ ಸಹಾಯ ಮಾಡಲು ಅವಳು ಮಾಡುತ್ತಿದ್ದ ತ್ಯಾಗವಾಗಿತ್ತು. ದುಃಖದ ಸಂಗತಿಯೇನೆಂದರೆ ಅವಳು “ಅಸ್ವಸ್ಥಳಾಗಿ ತೀರಿಕೊಂಡಳು.” ಆಗ ಅವಳ ಸಭೆಯವರು ಶೋಕದಲ್ಲಿ ಮುಳುಗಿದರು. ಅಲ್ಲಿನ ಶಿಷ್ಯರಿಗೆ ಪೇತ್ರನು ಅದೇ ಪಟ್ಟಣದಲ್ಲಿ ಇದ್ದಾನೆಂದು ತಿಳಿದಾಗ ಕೂಡಲೇ ಬರುವಂತೆ ಹೇಳಿಕಳುಹಿಸಿದರು. ಪೇತ್ರನು ಬಂದು ದೊರ್ಕಳನ್ನು ಪುನರುತ್ಥಾನಗೊಳಿಸಿದಾಗ ಅವರಿಗಾದ ಸಂತೋಷವನ್ನು ಊಹಿಸಿ. ಬೈಬಲಲ್ಲಿ ದಾಖಲಾಗಿರುವ ಪ್ರಕಾರ ಇದು ಅಪೊಸ್ತಲರು ಮಾಡಿದ ಮೊದಲನೇ ಪುನರುತ್ಥಾನ ಆಗಿದೆ. (ಅ. ಕಾ. 9:36-41) ದೊರ್ಕಳು ಮಾಡಿದ ತ್ಯಾಗಗಳನ್ನು ದೇವರು ಮರೆತಿರಲಿಲ್ಲ. (ಇಬ್ರಿ. 6:10) ಅವಳು ತೋರಿಸಿದ ಉದಾರತೆಯನ್ನು ದೇವರ ವಾಕ್ಯದಲ್ಲಿ ನಾವು ಅನುಕರಿಸಲಿಕ್ಕಾಗಿ ದಾಖಲಿಸಲಾಗಿದೆ.
ಅದೇ ರೀತಿಯಲ್ಲಿ ಅಪೊಸ್ತಲ ಪೌಲನು ಕೂಡ ಇತರರಿಗೆ ಸಮಯ ಮತ್ತು ಗಮನವನ್ನು ಉದಾರವಾಗಿ ಕೊಡುವುದರಲ್ಲಿ ಅತ್ಯುತ್ತಮ ಮಾದರಿಯಾಗಿದ್ದಾನೆ. ಕೊರಿಂಥದಲ್ಲಿದ್ದ ಕ್ರೈಸ್ತ ಸಹೋದರರಿಗೆ ಪೌಲನು ಬರೆದದ್ದು: “ನಾನಾದರೋ ನನ್ನನ್ನು ನಿಮ್ಮ ಪ್ರಾಣಗಳಿಗೋಸ್ಕರ ಅತಿ ಸಂತೋಷದಿಂದ ವಿನಿಯೋಗಿಸಿಕೊಳ್ಳುವೆನು, ಸಂಪೂರ್ಣವಾಗಿ ವಿನಿಯೋಗಿಸುವಂತೆ ಬಿಡುವೆನು.” (2 ಕೊರಿಂ. 12:15) ಸ್ವಂತ ಅನುಭವದಿಂದ ಪೌಲನು ಕಲಿತದ್ದೇನೆಂದರೆ ಬೇರೆಯವರ ಒಳಿತಿಗಾಗಿ ತ್ಯಾಗ ಮಾಡಿದರೆ ನಮಗೆ ತೃಪ್ತಿ ಸಿಗುತ್ತದೆ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಾಗಿ ಯೆಹೋವನ ಆಶೀರ್ವಾದ ಮತ್ತು ಅನುಗ್ರಹ ಸಿಗುತ್ತದೆ.—ಅ. ಕಾ. 20:24, 35.
ರಾಜ್ಯಕ್ಕೆ ಸಂಬಂಧಪಟ್ಟ ಕೆಲಸವನ್ನು ಬೆಂಬಲಿಸಲು ಮತ್ತು ಜೊತೆ ಸಾಕ್ಷಿಗಳಿಗೆ ಸಹಾಯಮಾಡಲು ನಮ್ಮ ಸಮಯ, ಶಕ್ತಿಯನ್ನು ಕೊಡುವಾಗ ಯೆಹೋವನಿಗೆ ಸಂತೋಷವಾಗುತ್ತದೆ. ಆದರೆ ಸಾರುವ ಚಟುವಟಿಕೆಯನ್ನು ಬೆಂಬಲಿಸಲು ಬೇರೆ ಮಾರ್ಗಗಳಿವೆಯಾ? ಇವೆ! ನಾವು ಪ್ರೀತಿಯಿಂದ ಕೆಲಸ ಮಾಡುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕೊಡುವ ದಾನಗಳ ಮುಖಾಂತರ ದೇವರನ್ನು ಸನ್ಮಾನಿಸಬಹುದು. ಈ ದಾನಗಳನ್ನು ಲೋಕದಾದ್ಯಂತ ಸಾರುವ ಕೆಲಸವನ್ನು ಹೆಚ್ಚಿಸಲಿಕ್ಕಾಗಿ ಬಳಸಲಾಗುತ್ತದೆ. ಈ ಕೆಲಸವನ್ನು ಹೆಚ್ಚಿಸುವುದರಲ್ಲಿ ಮಿಷನರಿಗಳು ಮತ್ತು ವಿಶೇಷ ಪೂರ್ಣ ಸಮಯದ ಬೇರೆ ಸೇವಕರು ಪಾಲ್ಗೊಳ್ಳುವುದರಿಂದ ಅವರನ್ನೂ ಈ ದಾನಗಳ ಮೂಲಕ ಬೆಂಬಲಿಸಲಾಗುತ್ತದೆ. ಇದರ ಜೊತೆಗೆ, ಸಾಹಿತ್ಯ ಹಾಗೂ ವಿಡಿಯೋಗಳನ್ನು ತಯಾರಿಸಲಿಕ್ಕಾಗಿ ಮತ್ತು ಭಾಷಾಂತರಿಸಲಿಕ್ಕಾಗಿ, ವಿಪತ್ತು ಪರಿಹಾರ ಯೋಜನೆಗಳಿಗಾಗಿ, ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ಈ ಸ್ವಯಂಪ್ರೇರಿತ ದಾನಗಳನ್ನು ಬಳಸಲಾಗುತ್ತದೆ. “ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು” (ಪವಿತ್ರ ಗ್ರಂಥ ಭಾಷಾಂತರ) ಎಂದು ಖಾತ್ರಿಯಿಂದಿರಬಲ್ಲೆವು. ಮಾತ್ರವಲ್ಲ, ನಾವು ಯೆಹೋವನಿಗೆ ನಮ್ಮ ಅಮೂಲ್ಯ ವಸ್ತುಗಳನ್ನು ಕೊಡುವಾಗ ಆತನನ್ನು ಸನ್ಮಾನಿಸುತ್ತಿದ್ದೇವೆ.—ಜ್ಞಾನೋ. 3:9; 22:9.
[ಪಾದಟಿಪ್ಪಣಿಗಳು]
^ ಪ್ಯಾರ. 10 ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.
^ ಪ್ಯಾರ. 12 ಭಾರತೀಯ ಪಾಸ್‌ಪೋರ್ಟ್ ಇರುವವರು www.jwindiagift.org. ವೆಬ್‌ಸೈಟ್ ಬಳಸಬಹುದು.
^ ಪ್ಯಾರ. 14 ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಶಾಖಾ ಕಚೇರಿಯನ್ನು ಸಂಪರ್ಕಿಸಿ.
^ ಪ್ಯಾರ. 21 ‘ನಿಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’ ಎಂಬ ಡಾಕ್ಯುಮೆಂಟ್ ಭಾರತದಲ್ಲಿ ಇಂಗ್ಲಿಷ್, ಕನ್ನಡ, ಗುಜರಾತಿ, ತಮಿಳು, ತೆಲುಗು, ಮರಾಠಿ, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಲಭ್ಯ.