ಅಧ್ಯಯನ ಲೇಖನ 8
“ಮನಸ್ಸಿಗೆ ಖುಷಿ” ಕೊಡೋ ಸಲಹೆ
“ಎಣ್ಣೆ, ಧೂಪದಿಂದ ಹೃದಯಕ್ಕೆ ಉಲ್ಲಾಸ, ಪ್ರಾಮಾಣಿಕ ಸಲಹೆಯಿಂದ ಸಿಗೋ ಸಿಹಿಯಾದ ಸ್ನೇಹದಿಂದ ಮನಸ್ಸಿಗೆ ಖುಷಿ.”—ಜ್ಞಾನೋ. 27:9.
ಗೀತೆ 42 “ನೀವು ಬಲಹೀನರಿಗೆ ನೆರವು ನೀಡಬೇಕು”
ಕಿರುನೋಟ *
1-2. ಸಲಹೆ ಕೊಡೋದರ ಬಗ್ಗೆ ಒಬ್ಬ ಹಿರಿಯ ಯಾವ ಪಾಠ ಕಲಿತರು?
ಒಬ್ಬ ಸಹೋದರಿ ತುಂಬ ದಿನಗಳಿಂದ ಕೂಟಕ್ಕೆ ಬರೋದನ್ನ ತಪ್ಪಿಸುತ್ತಿದ್ದರು. ಅದಕ್ಕೆ ಇಬ್ಬರು ಹಿರಿಯರು ಅವರನ್ನ ಭೇಟಿ ಮಾಡೋಕೆ ಅವರ ಮನೆಗೆ ಹೋದ್ರು. ಅವರು ಆ ಸಹೋದರಿಗೆ ಕೂಟಕ್ಕೆ ಬರೋದು ಯಾಕೆ ಪ್ರಾಮುಖ್ಯ ಅಂತ ಬೈಬಲಿಂದ ವಚನಗಳನ್ನ ತೋರಿಸಿದ್ರು. ಇದ್ರಿಂದ ಸಹೋದರಿಗೆ ಪ್ರೋತ್ಸಾಹ ಸಿಕ್ಕಿದೆ ಅಂತ ಅವರು ಅಂದ್ಕೊಂಡ್ರು. ಆದ್ರೆ ಆ ಹಿರಿಯರು ಇನ್ನೇನು ಹೋಗುವಾಗ ಆ ಸಹೋದರಿ ‘ನಾನೇನು ಅನುಭವಿಸ್ತಿದ್ದೀನಿ ಅಂತ ಕೊನೆಗೂ ನಿಮಗೆ ಗೊತ್ತಾಗಲಿಲ್ಲ’ ಅಂದ್ರು. ಆ ಹಿರಿಯರು ಕೂಟಕ್ಕೆ ಯಾಕೆ ಬರಬೇಕು ಅಂತ ಹೇಳಿದ್ರೇ ಹೊರತು ಅವರಿಗ್ಯಾಕೆ ಬರೋಕೆ ಆಗ್ತಿಲ್ಲ ಅನ್ನೋದನ್ನ ಕೇಳಲಿಲ್ಲ. ಹಾಗಾಗಿ ಅವರು ಕೊಟ್ಟ ಸಲಹೆಯಿಂದ ಯಾವ ಪ್ರಯೋಜನನೂ ಆಗಲಿಲ್ಲ.
2 ಹಿಂದೆ ನಡೆದಿದ್ದನ್ನ ನೆನಪಿಸಿಕೊಂಡು ಆ ಹಿರಿಯ ಹೇಳಿದ್ದು, “ಮೊದಮೊದಲು ಆ ಸಹೋದರಿ ಬಗ್ಗೆ ‘ಏನಪ್ಪಾ ಇವರು ಹೀಗೆ ಮಾತಾಡಿಬಿಟ್ರು!’ ಅನಿಸ್ತು. ಆದ್ರೆ ಆಮೇಲೆ ತಪ್ಪು ನಂದೇ ಅಂತ ಗೊತ್ತಾಯ್ತು. ಅವರು ಹೇಗಿದ್ದಾರೆ ಅವರಿಗೆ ಏನಾದ್ರು ಸಹಾಯ ಬೇಕಾ ಅಂತ ಕೇಳೋ ಬದಲು ಬರೀ ವಚನಗಳನ್ನ ತೋರಿಸಿ ಬಂದೆ.” ಈ ಘಟನೆಯಿಂದ ಆ ಹಿರಿಯ ತುಂಬ ಪಾಠ ಕಲಿತರು. ಈಗ ಅವರು ಎಲ್ಲರನ್ನೂ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಾರೆ.
3. ಸಭೆಯಲ್ಲಿ ಹಿರಿಯರು ಮಾತ್ರ ಸಲಹೆ ಕೊಡಬೇಕಾ? ವಿವರಿಸಿ.
3 ಸಭೆಯವರಿಗೆ ಸಲಹೆ ಕೊಡೋ ಜವಾಬ್ದಾರಿ ಹಿರಿಯರಿಗೆ ಇರೋದಾದ್ರೂ ಕೆಲವೊಮ್ಮೆ ಬೇರೆಯವರೂ ಸಲಹೆ ಕೊಡಬೇಕಾದ ಸನ್ನಿವೇಶ ಬರಬಹುದು. ಉದಾಹರಣೆಗೆ, ಒಬ್ಬ ಸಹೋದರ ಅಥವಾ ಸಹೋದರಿ ತಮ್ಮ ಸ್ನೇಹಿತರಿಗೆ ಬೈಬಲಿಂದ ಸಲಹೆ ಕೊಡ್ತಾರೆ. (ಕೀರ್ತ. 141:5; ಜ್ಞಾನೋ. 25:12) ‘ಯುವ ಸಹೋದರಿಯರಿಗೆ’ ವಯಸ್ಸಾದ ಸಹೋದರಿಯರು ತೀತ 2:3-5ರಲ್ಲಿರೋ ವಿಷಯಗಳ ಬಗ್ಗೆ ಸಲಹೆ ಕೊಡಬೇಕಾಗುತ್ತೆ. ಅಪ್ಪ-ಅಮ್ಮ, ಮಕ್ಕಳಿಗೆ ಬುದ್ಧಿವಾದ ಹೇಳಬೇಕಾಗುತ್ತೆ. ಹಾಗಾಗಿ ಈ ಲೇಖನ ಬರೀ ಹಿರಿಯರಿಗೆ ಅಲ್ಲ ನಮ್ಮೆಲ್ಲರಿಗೂ ಸಹಾಯ ಮಾಡುತ್ತೆ. ನಾವೂ ಬೇರೆಯವರ “ಮನಸ್ಸಿಗೆ ಖುಷಿ” ಆಗೋ ತರ ಸಲಹೆ ಕೊಡೋದು ಹೇಗೆ ಅಂತ ಕಲಿಸುತ್ತೆ.—ಜ್ಞಾನೋ. 27:9.
4. ನಾವು ಈ ಲೇಖನದಲ್ಲಿ ಏನು ಕಲಿತೀವಿ?
4 ನಾವು ಈ ಲೇಖನದಲ್ಲಿ ಸಲಹೆ ಕೊಡೋದ್ರ ಬಗ್ಗೆ 4 ವಿಷಯಗಳನ್ನ ನೋಡೋಣ. (1) ನಾವು ಯಾಕೆ ಸಲಹೆ ಕೊಡಬೇಕು? (2) ಎಲ್ಲದಕ್ಕೂ ಸಲಹೆ ಕೊಡಲೇಬೇಕಾ? (3) ಯಾರು ಸಲಹೆ ಕೊಡಬೇಕು? (4) ಬೇರೆಯವರಿಗೆ ಸಹಾಯ ಆಗೋ ತರ ಸಲಹೆ ಕೊಡೋದು ಹೇಗೆ?
ನಾವು ಯಾಕೆ ಸಲಹೆ ಕೊಡಬೇಕು?
5. ಹಿರಿಯರು ಸಲಹೆ ಕೊಡೋಕೆ ಮುಂಚೆ ಏನು ಮಾಡಬೇಕು ಮತ್ತು ಯಾಕೆ? (1 ಕೊರಿಂಥ 13:4, 7)
5 ಹಿರಿಯರಿಗೆ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿಯಿದೆ. ಅದಕ್ಕೇ ಯಾರಾದ್ರೂ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಅಂತ ಗೊತ್ತಾದ ತಕ್ಷಣ ಅವರಿಗೆ ಸಲಹೆ ಕೊಡ್ತಾರೆ. (ಗಲಾ. 6:1) ಅವರು ಈ ತರ ಸಲಹೆ ಕೊಡೋಕೆ ಮುಂಚೆ “ಪ್ರೀತಿ ಇರುವವನು ತಾಳ್ಮೆ ಮತ್ತು ದಯೆ ತೋರಿಸ್ತಾನೆ . . . ಎಲ್ಲವನ್ನ ಸಹಿಸ್ಕೊಳ್ತಾನೆ, ಎಲ್ಲವನ್ನ ನಂಬ್ತಾನೆ, ಎಲ್ಲವನ್ನ ನಿರೀಕ್ಷಿಸ್ತಾನೆ, ಎಲ್ಲವನ್ನ ತಾಳ್ಕೊಳ್ತಾನೆ” ಅನ್ನೋ ಪೌಲನ ಮಾತನ್ನ ನೆನಪಲ್ಲಿ ಇಟ್ಟುಕೊಳ್ಳಬೇಕು. (1 ಕೊರಿಂಥ 13:4, 7 ಓದಿ.) ಅವರು ಈ ವಚನಗಳ ಬಗ್ಗೆ ಯೋಚನೆ ಮಾಡುವಾಗ ‘ನನಗೆ ಸಹೋದರರ ಮೇಲೆ ಪ್ರೀತಿ ಇರೋದ್ರಿಂದನೇ ಸಲಹೆ ಕೊಡ್ತಿದ್ದೀನಾ?’ ಅಂತ ತಿಳಿದುಕೊಳ್ಳೋಕೆ ಆಗುತ್ತೆ. ಒಬ್ಬ ವ್ಯಕ್ತಿಗೆ, ಹಿರಿಯರು ತನ್ನನ್ನ ಪ್ರೀತಿಸ್ತಾರೆ ಅಂತ ಗೊತ್ತಾದಾಗ ಅವರು ಕೊಟ್ಟ ಸಲಹೆಯನ್ನ ಕೇಳಿ ಪಾಲಿಸ್ತಾನೆ.—ರೋಮ. 12:10.
6. ಪೌಲನಿಂದ ಹಿರಿಯರು ಏನು ಕಲಿಬಹುದು?
6 ಹಿರಿಯರು ಪೌಲನ ತರ ಇರಬೇಕು. ಉದಾಹರಣೆಗೆ, ಥೆಸಲೋನಿಕ ಸಭೆಯಲ್ಲಿದ್ದ ಸಹೋದರ ಸಹೋದರಿಯರಿಗೆ ಸಲಹೆ ಕೊಡಬೇಕಿದ್ದಾಗ ಪೌಲ ಪತ್ರ ಬರೆದ. ಆದ್ರೆ ಸಲಹೆ ಕೊಡೋಕೆ ಮುಂಚೆ ಅವರು ನಂಬಿಗಸ್ತಿಕೆಯಿಂದ ಮಾಡ್ತಿರೋ ಸೇವೆ ಬಗ್ಗೆ, ಅವರು ಪಡುತ್ತಿರೋ ಶ್ರಮದ ಬಗ್ಗೆ ಮತ್ತು ಕಷ್ಟಗಳನ್ನ ಸಹಿಸಿಕೊಳ್ತಿರೋದರ ಬಗ್ಗೆ ಹೊಗಳಿದ. ಹಿಂಸೆ ಇರೋದ್ರಿಂದ ಜೀವನ ಮಾಡೋಕೆ ಅವರಿಗೆ ಎಷ್ಟು ಕಷ್ಟ ಆಗ್ತಿದೆ, ಅವರ ಪರಿಸ್ಥಿತಿ ಹೇಗಿದೆ ಅಂತ ಅವನು ಅರ್ಥ ಮಾಡಿಕೊಂಡಿದ್ದಾನೆ ಅಂತನೂ ಬರೆದ. (1 ಥೆಸ. 1:3; 2 ಥೆಸ. 1:4) ಅಷ್ಟೇ ಅಲ್ಲ, ಆ ಸಹೋದರರು ಬೇರೆ ಕ್ರೈಸ್ತರಿಗೂ ಮಾದರಿಯಾಗಿದ್ದಾರೆ ಅಂತನೂ ಹೇಳಿದ. (1 ಥೆಸ. 1:8, 9) ಈ ಪತ್ರ ಓದಿದಾಗ ಸಹೋದರರಿಗೆ ಎಷ್ಟು ಖುಷಿಯಾಗಿರಬೇಕು ಅಲ್ವಾ! ಪೌಲ ಅವರನ್ನ ತುಂಬ ಪ್ರೀತಿಸ್ತಾನೆ ಅಂತ ಅವರಿಗೆ ಗೊತ್ತಾಯ್ತು. ಹಾಗಾಗಿ ಅವರು ಪೌಲ ಕೊಟ್ಟ ಸಲಹೆಯನ್ನ ಕೇಳಿ ಪಾಲಿಸಿದ್ರು.—1 ಥೆಸ. 4:1, 3-5, 11; 2 ಥೆಸ. 3:11, 12.
7. ಸಲಹೆ ಕೊಟ್ಟಾಗ ಕೆಲವರು ಯಾಕೆ ಬೇಜಾರು ಮಾಡಿಕೊಳ್ತಾರೆ?
7 ಸಲಹೆ ಕೊಡೋ ರೀತಿ ಸರಿಯಿಲ್ಲ ಅಂದ್ರೆ ಏನಾಗಬಹುದು? ಇದರ ಬಗ್ಗೆ ಅನುಭವ ಇರೋ ಒಬ್ಬ ಹಿರಿಯ ಹೇಳಿದ್ದು, “ಸಲಹೆ ಕೊಟ್ಟಾಗ ಕೆಲವರಿಗೆ ಬೇಜಾರಾಗುತ್ತೆ. ಯಾಕಂದ್ರೆ ಆ ಸಲಹೆ ತಪ್ಪಾಗಿತ್ತು ಅಂತ ಅಲ್ಲ, ಅದನ್ನ ಕೊಟ್ಟ ರೀತಿ ಸರಿ ಇರಲಿಲ್ಲ ಅಂತ.” ಇದ್ರಿಂದ ನಮಗೇನು ಗೊತ್ತಾಗುತ್ತೆ? ಬೇರೆಯವರಿಗೆ ಸಲಹೆ ಕೊಡುವಾಗ ಅದನ್ನ ಪ್ರೀತಿಯಿಂದ ಕೊಡಬೇಕು, ಕೋಪದಿಂದ ಅಲ್ಲ.
ಎಲ್ಲದಕ್ಕೂ ಸಲಹೆ ಕೊಡಲೇಬೇಕಾ?
8. ಸಲಹೆ ಕೊಡೋಕೆ ಮುಂಚೆ ಒಬ್ಬ ಹಿರಿಯ ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?
8 ಹಿರಿಯರು ಹಿಂದೆಮುಂದೆ ಯೋಚನೆ ಮಾಡದೆ ಸಲಹೆ ಕೊಡಬಾರದು. ಸಲಹೆ ಕೊಡೋಕೆ ಮುಂಚೆ ಈ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು, ‘ಈ ಸಲಹೆಯನ್ನ ಕೊಡಲೇಬೇಕಾ? ಅವರು ಮಾಡ್ತಿರೋದು ನಿಜವಾಗಲೂ ತಪ್ಪಾ? ಅವರು ಬೈಬಲ್ ನಿಯಮನ ಮುರಿಯುತ್ತಿದ್ದಾರಾ ಅಥವಾ ನನಗೆ ಮಾತ್ರ ಅದು ತಪ್ಪು ಅನಿಸ್ತಿದ್ಯಾ?’ ಹಿರಿಯರು ಈ ತರ ಯೋಚಿಸಿದಾಗ “ದುಡುಕಿ” ಮಾತಾಡೋಕೆ ಹೋಗಲ್ಲ. (ಜ್ಞಾನೋ. 29:20) ಒಂದುವೇಳೆ ಸಲಹೆಯನ್ನ ಕೊಡಬೇಕಾ ಬೇಡ್ವಾ ಅಂತ ಒಬ್ಬ ಹಿರಿಯನಿಗೆ ಗೊತ್ತಾಗದಿದ್ರೆ ಅವನು ಇನ್ನೊಬ್ಬ ಹಿರಿಯನ ಹತ್ರ ಹೋಗಿ ಮಾತಾಡಬಹುದು. ‘ಆ ವ್ಯಕ್ತಿ ಮಾಡ್ತಿರೋದು ನಿಜವಾಗಲೂ ತಪ್ಪಾ? ಅವನಿಗೆ ಸಲಹೆ ಕೊಡಬೇಕು ಅಂತ ನಿಮಗೂ ಅನಿಸ್ತಿದ್ಯಾ’ ಅಂತ ಅವರ ಹತ್ರ ಕೇಳಬಹುದು.—2 ತಿಮೊ. 3:16, 17.
9. ಬಟ್ಟೆ ಹಾಕಿಕೊಳ್ಳೋದು ಮತ್ತು ತಲೆ ಬಾಚಿಕೊಳ್ಳೋ ವಿಷಯದಲ್ಲಿ ಸಲಹೆ ಕೊಡೋದ್ರ ಬಗ್ಗೆ ಪೌಲನಿಂದ ನಾವೇನು ಕಲಿಯಬಹುದು? (1 ತಿಮೊತಿ 2:9, 10)
9 ಒಬ್ಬ ಸಹೋದರ ಅಥವಾ ಸಹೋದರಿ ಹಾಕಿಕೊಂಡಿರೋ ಬಟ್ಟೆ ಅಥವಾ ತಲೆ ಬಾಚಿಕೊಂಡಿರೋ ರೀತಿ ಸರಿಯಿಲ್ಲ ಅಂತ ಒಬ್ಬ ಹಿರಿಯನಿಗೆ ಅನಿಸಬಹುದು. ಆಗ ಆ ಹಿರಿಯ ‘ಅವರು ಮಾಡ್ತಿರೋದು ತಪ್ಪು ಅಂತ ಬೈಬಲಲ್ಲಿ ಹೇಳುತ್ತಾ?’ ಅಂತ ಅವರನ್ನೇ ಕೇಳಿಕೊಳ್ಳಬೇಕು. ಒಂದುವೇಳೆ ಆ ಹಿರಿಯನಿಗೆ ತಾನು ಅಂದುಕೊಂಡಿರುವುದರ ಬಗ್ಗೆ ಸಂಶಯ ಇದ್ರೆ ಬೇರೆ ಹಿರಿಯರ ಹತ್ರ ಅಥವಾ ಅನುಭವ ಇರೋ ಸಹೋದರರ ಹತ್ರ ಕೇಳಬಹುದು. ಆಮೇಲೆ ಅವರಿಬ್ಬರು ಪೌಲ ಕೊಟ್ಟ ಸಲಹೆ ಬಗ್ಗೆ ಚರ್ಚೆ ಮಾಡಬಹುದು. (1 ತಿಮೊತಿ 2:9, 10 ಓದಿ.) ಕ್ರೈಸ್ತರು ಇಂಥ ಬಟ್ಟೆಯನ್ನೇ ಹಾಕೊಬೇಕು, ಇಂಥ ಬಟ್ಟೆ ಹಾಕೊಬಾರದು ಅಂತ ಪೌಲ ಒಂದು ದೊಡ್ಡ ಪಟ್ಟಿ ಕೊಡಲಿಲ್ಲ. ಯಾಕಂದ್ರೆ ಕ್ರೈಸ್ತರು ತಮಗೆ ಇಷ್ಟ ಬಂದ ಬಟ್ಟೆಯನ್ನ ಹಾಕಿಕೊಳ್ಳಬಹುದು ಆದ್ರೆ ಯೆಹೋವ ದೇವರ ಹೆಸರಿಗೆ ಕಳಂಕ ಬರದೇ ಇರೋ ತರ ಅವರು ನೋಡಿಕೊಳ್ಳಬೇಕು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದೇ ತರ ಈಗಿರೋ ಹಿರಿಯರು ಈ ವಿಷಯಗಳ ಬಗ್ಗೆ ಸಲಹೆ ಕೊಡೋಕೆ ಮುಂಚೆ ಪೌಲನ ತರಾನೇ ಯೋಚನೆ ಮಾಡಬೇಕು.
10. ನಾವೇನನ್ನ ನೆನಪಲ್ಲಿಡಬೇಕು?
10 ಒಂದು ವಿಷಯದ ಬಗ್ಗೆ ಒಬ್ಬೊಬ್ಬರು ಒಂದೊಂದು ಥರ ಯೋಚನೆ ಮಾಡ್ತಾರೆ. ಆದ್ರೆ ಇಬ್ಬರ ಯೋಚನೆನೂ ಸರಿಯಾಗಿ ಇರಬಹುದು ಅನ್ನೋದನ್ನ ನಾವು ನೆನಪಲ್ಲಿಡಬೇಕು. ನಮಗೆ ಸರಿ ಅನಿಸಿದ್ದನ್ನೇ ಅವರು ಮಾಡಬೇಕು ಅಂತಾಗಲಿ ಅಥವಾ ‘ಹೀಗೆ ಮಾಡಿ ಹಾಗೆ ಮಾಡಿ’ ಅಂತಾಗಲಿ ನಾವು ಯಾರಿಗೂ ಹೇಳಬಾರದು.—ರೋಮ. 14:10.
ಯಾರು ಸಲಹೆ ಕೊಡಬೇಕು?
11-12. ಸಲಹೆ ಕೊಡೋಕೆ ಮುಂಚೆ ಹಿರಿಯರು ಯಾವ ಪ್ರಶ್ನೆ ಕೇಳಿಕೊಳ್ಳಬೇಕು ಮತ್ತು ಯಾಕೆ?
11 ಒಬ್ಬ ವ್ಯಕ್ತಿಗೆ ಸಲಹೆ ಕೊಡಬೇಕು ಅಂತ ಗೊತ್ತಾದ ಮೇಲೆ ಯಾರು ಕೊಡಬೇಕು ಅನ್ನೋ ಪ್ರಶ್ನೆ ಬರುತ್ತೆ. ಮಕ್ಕಳಿಗೆ ಅಥವಾ ಮದುವೆಯಾದ ಸಹೋದರಿಗೆ ಸಲಹೆ ಕೊಡೋ ಮುಂಚೆ ಹಿರಿಯರು ಆ ಕುಟುಂಬದ ಯಜಮಾನನ ಹತ್ರ ಮಾತಾಡಬೇಕು. ಆಗ ಆ ಯಜಮಾನ ‘ನಾನು ಅವರ ಹತ್ರ ಮಾತಾಡ್ತೀನಿ’ ಅಂತ ಹೇಳಬಹುದು * ಅಥವಾ ‘ನೀವು ಸಲಹೆ ಕೊಡುವಾಗ ನಾನೂ ಅಲ್ಲಿ ಇರುತ್ತೀನಿ’ ಅಂತ ಕೇಳಿಕೊಳ್ಳಬಹುದು. ನಾವು ಪ್ಯಾರ 3ರಲ್ಲಿ ನೋಡಿದ ತರ ಯುವ ಸಹೋದರಿಯರಿಗೆ ವಯಸ್ಸಾದ ಸಹೋದರಿಯರು ಸಲಹೆ ಕೊಟ್ರೆ ಚೆನ್ನಾಗಿರುತ್ತೆ.
12 ಸಲಹೆ ಕೊಡೋ ಮುಂಚೆ ಹಿರಿಯರು ಇನ್ನೊಂದು ವಿಷಯವನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಒಬ್ಬ ಹಿರಿಯ ಸಲಹೆ ಕೊಡೋ ಮುಂಚೆ ‘ಈ ವ್ಯಕ್ತಿ ಹತ್ರ ನಾನು ಹೋಗಿ ಮಾತಾಡಿದ್ರೆ ಚೆನ್ನಾಗಿರುತ್ತಾ ಅಥವಾ ಬೇರೆ ಹಿರಿಯರು ಮಾತಾಡಿದ್ರೆ ಚೆನ್ನಾಗಿರುತ್ತಾ?’ ಅಂತ ತನ್ನನ್ನೇ ಕೇಳಿಕೊಳ್ಳಬೇಕು. ಯಾಕೆ? ಉದಾಹರಣೆಗೆ ಒಬ್ಬ ವ್ಯಕ್ತಿಗೆ ತಾನು ಯಾವುದಕ್ಕೂ ಲಾಯಕ್ಕಿಲ್ಲ ಅನ್ನೋ ಭಾವನೆ ಕಾಡ್ತಿದ್ರೆ ಅವನ ತರದ ಸಮಸ್ಯೆಯನ್ನೇ ಅನುಭವಿಸಿರೋ ಒಬ್ಬ ಹಿರಿಯ ಅವನ ಹತ್ರ ಮಾತಾಡಿದ್ರೆ ಚೆನ್ನಾಗಿರುತ್ತೆ. ಯಾಕಂದ್ರೆ ಆ ವ್ಯಕ್ತಿಯ ಪರಿಸ್ಥಿತಿ ಏನು ಅಂತ ಆ ಹಿರಿಯನಿಗೆ ಚೆನ್ನಾಗಿ ಅರ್ಥ ಆಗುತ್ತೆ. ಆಗ ಆ ವ್ಯಕ್ತಿಗೆ ಆ ಭಾವನೆಯಿಂದ ಹೊರಗೆ ಬರೋಕೆ ಆಗುತ್ತೆ. ಆದ್ರೆ ಹಿರಿಯರಲ್ಲಿ ಯಾರೂ ಅಂಥ ಸಮಸ್ಯೆಯನ್ನ ಅನುಭವಿಸಿಲ್ಲ ಅಂದ್ರೆ ಏನು ಮಾಡೋದು? ಸಹೋದರ ಸಹೋದರಿಯರನ್ನ ಹುರಿದುಂಬಿಸುವ, ಧೈರ್ಯ ತುಂಬುವ ಜವಾಬ್ದಾರಿ ಎಲ್ಲಾ ಹಿರಿಯರಿಗೂ ಇದೆ ಅನ್ನೋದನ್ನ ಅವರು ನೆನಪಲ್ಲಿಡಬೇಕು. ಹಾಗಾಗಿ ಸಹೋದರ ಸಹೋದರಿಯರಿಗೆ ಸಲಹೆ ಬೇಕಾದಾಗ ಯಾವ ಹಿರಿಯರು ಬೇಕಾದ್ರೂ ಸಲಹೆ ಕೊಡಬಹುದು.
ಬೇರೆಯವರಿಗೆ ಸಹಾಯ ಆಗೋ ತರ ಸಲಹೆ ಕೊಡೋದು ಹೇಗೆ?
13-14. ಹಿರಿಯರು ಯಾಕೆ ಚೆನ್ನಾಗಿ ಕೇಳಿಸಿಕೊಳ್ಳಬೇಕು?
13 ಚೆನ್ನಾಗಿ ಕೇಳಿಸಿಕೊಳ್ಳಿ. ಹಿರಿಯರು ಒಬ್ಬ ಸಹೋದರನಿಗೆ ಸಲಹೆ ಕೊಡೋ ಮುಂಚೆ ‘ಅವನು ಯಾವ ಪರಿಸ್ಥಿತಿಯಲ್ಲಿದ್ದಾನೆ? ಅವನ ಜೀವನದಲ್ಲಿ ಏನು ನಡಿತಿದೆ? ಅವನಿಗೆ ಏನಾದ್ರೂ ಕಷ್ಟ ಇದೆಯಾ? ನಾನೀಗ ಅವನಿಗೆ ಯಾವ ಸಹಾಯ ಮಾಡಿದ್ರೆ ಚೆನ್ನಾಗಿರುತ್ತೆ? ಅಂತ ಕೇಳಿಕೊಳ್ಳೋದು ಒಳ್ಳೇದು.
14 “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ” ಅಂತ ಯಾಕೋಬ 1:19 ಹೇಳುತ್ತೆ. ತಮಗೆ ಸಹೋದರ ಸಹೋದರಿಯರ ಬಗ್ಗೆ ಎಲ್ಲಾ ಗೊತ್ತು ಅಂತ ಹಿರಿಯರು ಅಂದ್ಕೊಳ್ಳಬಾರದು. ಯಾಕಂದ್ರೆ “ನಿಜ ಏನಂತ ಅರ್ಥ ಮಾಡ್ಕೊಳ್ಳದೆ ಉತ್ತರ ಕೊಡುವವನು ಮೂರ್ಖ, ಅದ್ರಿಂದ ಅವನಿಗೆ ಅವಮಾನ ಆಗುತ್ತೆ” ಅಂತ ಜ್ಞಾನೋಕ್ತಿ 18:13 ಹೇಳುತ್ತೆ. ಹಾಗಾಗಿ ಹಿರಿಯರು ಸಲಹೆ ಕೊಡೋ ಮುಂಚೆ ಸಲಹೆ ಪಡೆದುಕೊಳ್ತಿರೋ ವ್ಯಕ್ತಿ ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ಳಬೇಕು. ಈ ಲೇಖನದ ಆರಂಭದಲ್ಲಿ ನೋಡಿದ ಹಾಗೆ, ಆ ಹಿರಿಯ ಸಲಹೆ ಕೊಡುವಾಗ ಸಹೋದರಿ ಹತ್ರ ಏನು ಮಾತಾಡಬೇಕು ಅಂತ ಅಂದ್ಕೊಂಡು ಹೋಗಿದ್ರೋ ಅದನ್ನ ಮಾತ್ರ ಹೇಳಿದ್ರು. ಆದ್ರೆ ಅವರು ಆ ಸಹೋದರಿ ಹತ್ರ ‘ನೀವು ಹೇಗಿದ್ದೀರಾ? ಏನಾದ್ರೂ ಸಹಾಯ ಬೇಕಾ?’ ಅಂತ ಕೇಳಿದ್ರೆ ಚೆನ್ನಾಗಿರುತ್ತಿತ್ತು ಅಂತ ಆಮೇಲೆ ಅರ್ಥ ಮಾಡಿಕೊಂಡ್ರು. ಹಾಗಾಗಿ ಹಿರಿಯರು ಸಹೋದರ ಸಹೋದರಿಯರ ಪರಿಸ್ಥಿತಿಯನ್ನ ಚೆನ್ನಾಗಿ ಅರ್ಥಮಾಡಿಕೊಂಡ್ರೆ ಅವರಿಗೆ ಬೇಕಾದ ಸಹಾಯ ಮಾಡೋಕೆ ಆಗುತ್ತೆ.
15. ಜ್ಞಾನೋಕ್ತಿ 27:23ರಲ್ಲಿರೋ ತತ್ವವನ್ನ ಹಿರಿಯರು ಹೇಗೆ ಪಾಲಿಸಬಹುದು?
15 ಸಹೋದರ ಸಹೋದರಿಯರನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ನಾವೀಗಾಗಲೇ ಕಲಿತ ಹಾಗೆ ಸಲಹೆ ಕೊಡುವಾಗ ಬರಿ ವಚನಗಳನ್ನ ತೋರಿಸಿ, ‘ಹಾಗೆ ಮಾಡಿ ಹೀಗೆ ಮಾಡಿ’ ಅಂತ ಹೇಳಿದ್ರೆ ಸಾಕಾಗಲ್ಲ. ನಾವು ಸಲಹೆ ಕೊಡುವಾಗ, ನಾವು ಅವರನ್ನ ತುಂಬ ಪ್ರೀತಿಸ್ತೀವಿ, ಅವರನ್ನ ಅರ್ಥ ಮಾಡಿಕೊಳ್ತೀವಿ, ಅವರಿಗೆ ಸಹಾಯ ಮಾಡೋಕೆ ಇಷ್ಟ ಪಡ್ತೀವಿ ಅಂತ ಅವರಿಗೆ ಗೊತ್ತಾಗಬೇಕು. (ಜ್ಞಾನೋಕ್ತಿ 27:23 ಓದಿ.) ಅದಕ್ಕೆ ಹಿರಿಯರು ಸಹೋದರ ಸಹೋದರಿಯರ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಪ್ರಯತ್ನ ಮಾಡಬೇಕು.
16. ಹಿರಿಯರು ಯಾವಾಗ ಸುಲಭವಾಗಿ ಸಲಹೆ ಕೊಡೋಕೆ ಆಗುತ್ತೆ?
16 ಯಾರಾದ್ರೂ ತಪ್ಪು ಮಾಡಿದಾಗ ಸಲಹೆ ಕೊಡೋಕೆ ಮಾತ್ರ ಹಿರಿಯರು ಹೋಗಿ ಅವರ ಹತ್ರ ಮಾತಾಡ್ತಾರೆ ಅಂತ ಸಹೋದರ ಸಹೋದರಿಯರಿಗೆ ಯಾವತ್ತೂ ಅನಿಸಬಾರದು. ಅದಕ್ಕೆ ಹಿರಿಯರು ಆಗಾಗ ಎಲ್ಲರ ಜೊತೆ ಬೆರೆಯಬೇಕು. ಅದರಲ್ಲೂ ಸಹೋದರ ಸಹೋದರಿಯರಿಗೆ ಕಷ್ಟ ಬಂದಾಗ ಅವರ ಜೊತೆ ಚೆನ್ನಾಗಿ ಮಾತಾಡಬೇಕು. ಅನುಭವ ಇರೋ ಒಬ್ಬ ಹಿರಿಯ ಹೇಳಿದ್ದು, “ನಾವು ಹೀಗೆಲ್ಲ ಮಾಡೋದ್ರಿಂದ ನಾವು ಅವರ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಆಗುತ್ತೆ ಮತ್ತು ಸಲಹೆ ಕೊಡೋಕೂ ಸುಲಭ ಆಗುತ್ತೆ” ಅಷ್ಟೇ ಅಲ್ಲ, ಸಲಹೆ ಪಡೆದುಕೊಳ್ಳುವವರಿಗೂ ಬೇಜಾರಾಗಲ್ಲ.
17. ಹಿರಿಯರು ಸಲಹೆ ಕೊಡುವಾಗ ಯಾಕೆ ಪ್ರೀತಿ ಮತ್ತು ತಾಳ್ಮೆ ತೋರಿಸಬೇಕು?
17 ಪ್ರೀತಿ ಮತ್ತು ತಾಳ್ಮೆ ತೋರಿಸಿ. ಹಿರಿಯರು ಸಲಹೆ ಕೊಟ್ಟಾಗ ಕೆಲವರಿಗೆ ಮೊದಮೊದಲು ಇಷ್ಟ ಆಗಲ್ಲ. ಅವರು ಅದನ್ನ ಒಪ್ಪಿಕೊಳ್ಳಲ್ಲ. ಹಾಗಂತ ಹಿರಿಯರು ಕೋಪಿಸಿಕೊಳ್ಳಬಾರದು. ಪ್ರೀತಿ ಮತ್ತು ತಾಳ್ಮೆಯನ್ನ ಇನ್ನೂ ಜಾಸ್ತಿ ತೋರಿಸಬೇಕು. ಯೇಸು “ಜಜ್ಜಿದ ದಂಟನ್ನ ಮುರಿದು ಹಾಕಲ್ಲ, ಆರಿಹೋಗೋ ದೀಪವನ್ನ ಆರಿಸಲ್ಲ” ಅಂತ ಒಂದು ಭವಿಷ್ಯವಾಣಿ ಹೇಳಿತ್ತು. (ಮತ್ತಾ. 12:20) ಹಿರಿಯರು ಯೇಸು ತರ ಇರಬೇಕು. ಅವರು ಯೆಹೋವ ಹತ್ರ ಪ್ರಾರ್ಥನೆ ಮಾಡುವಾಗ ‘ಆ ಸಲಹೆಯನ್ನ ಯಾಕೆ ಕೊಡ್ತಿದ್ದಾರೆ ಅಂತ ಅರ್ಥಮಾಡಿಕೊಳ್ಳೋಕೆ ಆ ವ್ಯಕ್ತಿಗೆ ಸಹಾಯ ಮಾಡಪ್ಪಾ’ ಅಂತ ಬೇಡಿಕೊಳ್ಳಬೇಕು. ಹಿರಿಯರು ಸಲಹೆ ಕೊಡುವಾಗ ಪ್ರೀತಿ ಮತ್ತು ತಾಳ್ಮೆಯಿಂದ ಮಾತಾಡಿದ್ರೆ ಸಲಹೆ ಪಡೆದುಕೊಳ್ಳುತ್ತಿರೋ ವ್ಯಕ್ತಿಗೆ ಅದನ್ನ ಪಾಲಿಸೋಕೆ ಸುಲಭ ಆಗುತ್ತೆ. ಆದ್ರೆ ಸಲಹೆಯನ್ನ ಯಾವಾಗಲೂ ಬೈಬಲಿಂದನೇ ಕೊಡಬೇಕು.
18. (ಎ) ಸಲಹೆ ಕೊಡೋದ್ರ ಬಗ್ಗೆ ಹಿರಿಯರು ಏನನ್ನ ಮನಸ್ಸಲ್ಲಿ ಇಟ್ಕೊಬೇಕು? (ಬಿ) ಚೌಕದಲ್ಲಿ ಕೊಟ್ಟಿರೋ ಚಿತ್ರದಲ್ಲಿ ಅಪ್ಪ-ಅಮ್ಮ ಏನು ಮಾತಾಡಿಕೊಳ್ತಿದ್ದಾರೆ?
18 ನಿಮ್ಮ ತಪ್ಪಿಂದ ಪಾಠ ಕಲಿಯಿರಿ. ನಾವು ಅಪರಿಪೂರ್ಣರಾಗಿ ಇರೋದ್ರಿಂದ ಈ ಲೇಖನದಲ್ಲಿ ಕೊಟ್ಟಿರೋ ಎಲ್ಲಾ ಸಲಹೆಗಳನ್ನ ಪಾಲಿಸೋಕೆ ಕಷ್ಟ ಆಗಬಹುದು. (ಯಾಕೋ. 3:2) ಕೆಲವೊಮ್ಮೆ ತಪ್ಪೂ ಆಗಬಹುದು. ಆದ್ರೆ ಆ ತಪ್ಪಿಂದ ನಾವು ಪಾಠ ಕಲಿಯಬೇಕು. ಯಾವಾಗ ನಮ್ಮ ಸಹೋದರ ಸಹೋದರಿಯರು ನಾವು ಅವರನ್ನ ತುಂಬ ಪ್ರೀತಿಸ್ತೀವಿ ಅಂತ ಅರ್ಥ ಮಾಡಿಕೊಳ್ತಾರೋ ಆಗ ಒಂದುವೇಳೆ ನಾವು ಅವರ ಮನಸ್ಸು ನೋಯಿಸಿಬಿಟ್ರೂ ಅವರು ನಮ್ಮನ್ನ ಖಂಡಿತ ಕ್ಷಮಿಸ್ತಾರೆ.—“ ಅಪ್ಪ-ಅಮ್ಮಂದಿರಿಗೆ ಕಿವಿಮಾತು” ಅನ್ನೋ ಚೌಕ ನೋಡಿ.
ನಾವೇನು ಕಲಿತ್ವಿ?
19. ನಮ್ಮ ಸಹೋದರ ಸಹೋದರಿಯರ ಮನಸ್ಸಿಗೆ ಖುಷಿಯಾಗಬೇಕು ಅಂದ್ರೆ ನಾವೇನು ಮಾಡಬೇಕು?
19 ಸಲಹೆ ಕೊಡೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಹಿರಿಯರೂ ಅಪರಿಪೂರ್ಣರೇ ಸಹೋದರ ಸಹೋದರಿಯರೂ ಅಪರಿಪೂರ್ಣರೇ. ಹಾಗಾಗಿ ಈ ಲೇಖನದಲ್ಲಿ ಕಲಿತ ಹಾಗೆ ಸಲಹೆ ಕೊಡೋ ಮುಂಚೆ ನಾನು ಯಾಕೆ ಸಲಹೆ ಕೊಡಬೇಕು? ಎಲ್ಲದಕ್ಕೂ ಸಲಹೆ ಕೊಡಲೇಬೇಕಾ? ಈ ವ್ಯಕ್ತಿಗೆ ನಾನು ಸಲಹೆ ಕೊಟ್ರೆ ಚೆನ್ನಾಗಿರುತ್ತಾ ಅಥವಾ ಬೇರೆಯವರು ಕೊಟ್ರೆ ಚೆನ್ನಾಗಿರುತ್ತಾ? ಅಂತ ಯೋಚನೆ ಮಾಡಬೇಕು. ಅಷ್ಟೇ ಅಲ್ಲ, ಸಲಹೆ ಕೊಡುವಾಗ ಅವರ ಪರಿಸ್ಥಿತಿ ಹೇಗಿದೆ ಅಂತ ಅವರ ಹತ್ರ ಕೇಳಬೇಕು. ಅವರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ಳಬೇಕು. ಅವರಿಗೆ ಏನು ಅನಿಸ್ತಿದೆ ಅಂತ ಅರ್ಥ ಮಾಡ್ಕೊಬೇಕು ಮತ್ತು ಅವರ ಜೊತೆ ಸ್ನೇಹ ಬೆಳೆಸಿಕೊಳ್ಳಬೇಕು. ಯಾಕಂದ್ರೆ ನಾವು ಸಲಹೆ ಕೊಡೋದು ನಮ್ಮ ಸಹೋದರ ಸಹೋದರಿಯರಿಗೆ ಬರೀ ಒಳ್ಳೇದಾಗಲಿ ಅಂತ ಅಲ್ಲ ಅವರ “ಮನಸ್ಸಿಗೆ ಖುಷಿ” ಆಗಲಿ ಅಂತ.—ಜ್ಞಾನೋ. 27:9.
ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು
^ ಪ್ಯಾರ. 5 ಸಲಹೆ ಕೊಡೋದು ಅಷ್ಟು ಸುಲಭ ಅಲ್ಲ. ಆದ್ರೆ ನೀವು ಯಾರಿಗಾದ್ರು ಸಲಹೆ ಕೊಟ್ರೆ ಅದನ್ನ ಅವರಿಗೆ ಬೇಜಾರಾಗದೆ ಇರೋ ತರ, ಹುರಿದುಂಬಿಸೋ ಹಾಗೆ ಕೊಡೋದು ಹೇಗೆ, ಅದ್ರಲ್ಲೂ ಹಿರಿಯರು ಸಲಹೆ ಕೊಡುವಾಗ ಸಹೋದರ ಸಹೋದರಿಯರು ಅದನ್ನ ಇಷ್ಟಪಟ್ಟು ಪಾಲಿಸೋ ತರ ಹೇಗೆ ಕೊಡೋದು ಅಂತ ಈ ಲೇಖನದಲ್ಲಿ ನೋಡೋಣ.
^ ಪ್ಯಾರ. 11 ಫೆಬ್ರವರಿ 2021ರ ಕಾವಲಿನಬುರುಜುವಿನ “ಸಭೆಯಲ್ಲಿ ಹಿರಿಯರಿಗಿರೋ ಅಧಿಕಾರ” ಅನ್ನೋ ಲೇಖನ ನೋಡಿ.