ಅಧ್ಯಯನ ಲೇಖನ 11
ಗೀತೆ 154 ತಾಳಿಕೊಳ್ಳುತ್ತಾ ಇರೋಣ
ಎಷ್ಟೇ ಕಷ್ಟಗಳು ಬಂದ್ರೂ ಯೆಹೋವನ ಸೇವೆ ಮಾಡೋಕಾಗುತ್ತೆ
“ನೀನು ನನ್ನ ಹೆಸ್ರಿಗೋಸ್ಕರ ಎಷ್ಟೋ ಸಹಿಸ್ಕೊಂಡಿದ್ದೀಯ.”—ಪ್ರಕ. 2:3.
ಈ ಲೇಖನದಲ್ಲಿ ಏನಿದೆ?
ನಮಗೆ ಎಷ್ಟೇ ನೋವಾದ್ರೂ ಅದನ್ನ ಸಹಿಸ್ಕೊಂಡು ಯೆಹೋವನ ಸೇವೆ ಮಾಡ್ತಾ ಇರೋಕೆ ಆಗುತ್ತೆ.
1. ನಾವು ಯೆಹೋವನ ಸಂಘಟನೆಯಲ್ಲಿ ಇರೋದ್ರಿಂದ ಯಾವೆಲ್ಲ ಆಶೀರ್ವಾದ ಸಿಗ್ತಿದೆ?
ನಾವು ಈ ಕೊನೇ ದಿನಗಳಲ್ಲಿ ಯೆಹೋವನ ಸಂಘಟನೆಯಲ್ಲಿ ಇರೋದು ಒಂದು ದೊಡ್ಡ ಆಶೀರ್ವಾದನೇ. ಈ ಲೋಕದ ಪರಿಸ್ಥಿತಿ ತುಂಬ ಕೆಟ್ಟು ಹೋಗ್ತಾ ಇದ್ರೂ ಯೆಹೋವ ನಮಗೆ ಸಹೋದರ ಸಹೋದರಿಯರ ಒಂದು ದೊಡ್ಡ ಕುಟುಂಬನೇ ಕೊಟ್ಟಿದ್ದಾನೆ. (ಕೀರ್ತ. 133:1) ಅಷ್ಟೇ ಅಲ್ಲ ನಮ್ಮ ಸ್ವಂತ ಕುಟುಂಬದವ್ರ ಜೊತೆ ಒಗ್ಗಟ್ಟಿಂದ ಇರೋಕೆ ಸಹಾಯ ಮಾಡ್ತಿದ್ದಾನೆ. (ಎಫೆ. 5:33–6:1) ಚಿಂತೆಯಿಂದ ಹೊರಗೆ ಬರೋಕೆ, ಮನಶ್ಶಾಂತಿ ಕಾಪಾಡ್ಕೊಳ್ಳೋಕೆ ನಮಗೆ ವಿವೇಕನೂ ಕೊಡ್ತಿದ್ದಾನೆ.
2. ನಾವು ಏನು ಮಾಡ್ತಾ ಇರಬೇಕು ಮತ್ತು ಯಾಕೆ?
2 ಯೆಹೋವನ ಸೇವೆ ಮಾಡ್ತಾ ಇರೋಕೆ ನಾವೂ ನಮ್ಮ ಕಡೆಯಿಂದ ಪ್ರಯತ್ನ ಹಾಕ್ತಾ ಇರಬೇಕು. ಯಾಕೆ? ಯಾಕಂದ್ರೆ ಎಲ್ರೂ ಅಪರಿಪೂರ್ಣರಾಗಿರೋದ್ರಿಂದ ಯಾರಾದ್ರೂ ನಮ್ಮ ಮನಸ್ಸನ್ನ ನೋಯಿಸಿಬಿಡಬಹುದು ಅಥವಾ ನಾವು ಮಾಡಿದ ತಪ್ಪಿಂದಾನೂ ನಮಗೆ ಬೇಜಾರಾಗಬಹುದು. ಅದ್ರಲ್ಲೂ ಮಾಡಿದ ತಪ್ಪನ್ನೇ ಮತ್ತೆಮತ್ತೆ ಮಾಡಿದಾಗ ಇನ್ನೂ ಬೇಜಾರಾಗುತ್ತೆ. ಹಾಗಾಗಿ (1) ಸಹೋದರ ಸಹೋದರಿಯರು ನಮ್ಮ ಮನಸ್ಸು ನೋಯಿಸಿದಾಗ, (2) ನಮ್ಮ ಸಂಗಾತಿ ನಮ್ಮ ಮನಸ್ಸು ನೋಯಿಸಿದಾಗ, (3) ನಮ್ಮ ತಪ್ಪಿಂದಾನೇ ನಮಗೆ ಬೇಜಾರಾದಾಗ ಯೆಹೋವನ ಸೇವೆ ಮಾಡ್ತಾ ಇರೋಕೆ ಏನು ಮಾಡಬೇಕು ಅಂತ ಈಗ ನೋಡೋಣ. ಈ ಮೂರೂ ಸನ್ನಿವೇಶ ನೋಡುವಾಗ ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರು ಏನು ಮಾಡಿದ್ರು ಅಂತನೂ ಕಲಿಯೋಣ.
ಸಹೋದರ ಸಹೋದರಿಯರು ನಿಮ್ಮ ಮನಸ್ಸು ನೋಯಿಸಿದಾಗ
3. ಯೆಹೋವನ ಸೇವಕರಿಗೆ ಕೆಲವೊಮ್ಮೆ ಹೇಗನಿಸುತ್ತೆ?
3 ಸಮಸ್ಯೆ. ನಾವೆಲ್ರೂ ಒಂದೇ ತರ ಇಲ್ಲ. ಹಾಗಾಗಿ ಕೆಲವರು ನಡ್ಕೊಳ್ಳೋ ರೀತಿಯಿಂದ ನಮಗೆ ಕಿರಿಕಿರಿ ಆಗಬಹುದು. ಅಷ್ಟೇ ಅಲ್ಲ ಕೆಲವರು ಮನಸ್ಸಿಗೆ ಗಾಯ ಆಗೋ ತರ ನಡ್ಕೊಬಹುದು. ಆಗಂತೂ ತುಂಬಾನೇ ಬೇಜಾರಾಗಿಬಿಡುತ್ತೆ. ಕೆಲವೊಮ್ಮೆ ಸಭೇಲಿರೋ ಹಿರಿಯರೂ ತಪ್ಪು ಮಾಡ್ತಾರೆ. ಇದನ್ನೆಲ್ಲ ನೋಡಿದಾಗ ‘ಇದು ನಿಜವಾಗಲೂ ಯೆಹೋವನ ಸಂಘಟನೆನಾ’ ಅಂತ ಅನಿಸಬಹುದು. ಹೀಗಾದಾಗ “ಹೆಗಲಿಗೆ ಹೆಗಲು ಕೊಟ್ಟು” ಯೆಹೋವನ ಸೇವೆ ಮಾಡೋ ಬದ್ಲು ಕೆಲವು ಸಹೋದರ ಸಹೋದರಿಯರು ತಮ್ಮ ಮನಸ್ಸು ನೋಯಿಸಿದವ್ರ ಜೊತೆ ಮಾತಾಡೋದನ್ನೇ ನಿಲ್ಲಿಸಿಬಿಡ್ತಾರೆ. ಇನ್ನು ಕೆಲವರು ಕೂಟಗಳಿಗೆ ಹೋಗೋದನ್ನೇ ಬಿಟ್ಟುಬಿಡ್ತಾರೆ. (ಚೆಫ. 3:9) ನಾವು ಈ ತರ ಮಾಡಬಾರದು ಅಲ್ವಾ? ಅಪೊಸ್ತಲ ಪೌಲನಿಗೂ ಬೇರೆಯವ್ರಿಂದ ನೋವಾಯ್ತು. ಆಗ ಅವನು ಏನು ಮಾಡಿದ ಅಂತ ನೋಡೋಣ.
4. ಪೌಲ ಏನೆಲ್ಲಾ ಸಹಿಸ್ಕೊಂಡ?
4 ಬೈಬಲಲ್ಲಿರೋ ಉದಾಹರಣೆ. ಸಹೋದರ ಸಹೋದರಿಯರೂ ತನ್ನ ತರನೇ ಅಪರಿಪೂರ್ಣರು ಅಂತ ಅಪೊಸ್ತಲ ಪೌಲ ಚೆನ್ನಾಗಿ ತಿಳ್ಕೊಂಡಿದ್ದ. ಉದಾಹರಣೆಗೆ, ಯೆರೂಸಲೇಮಲ್ಲಿದ್ದ ಕೆಲವು ಸಹೋದರ ಸಹೋದರಿಯರು ಪೌಲನನ್ನ ಮೊದಮೊದ್ಲು ನಂಬಲಿಲ್ಲ. (ಅ. ಕಾ. 9:26) ಅದಾಗಿ ಸ್ವಲ್ಪ ಸಮಯ ಆದ್ಮೇಲೆ ಬೇರೆ ಕೆಲವು ಸಹೋದರ ಸಹೋದರಿಯರು ಪೌಲನ ಬಗ್ಗೆ ತಪ್ಪುತಪ್ಪಾಗಿ ಮಾತಾಡಿ ಅವನ ಹೆಸ್ರು ಹಾಳುಮಾಡಿದ್ರು. (2 ಕೊರಿಂ. 10:10) ಸಭೇಲಿ ಒಬ್ಬ ಹಿರಿಯ, ತಪ್ಪು ತೀರ್ಮಾನ ತಗೊಂಡಿದ್ರಿಂದ ಸಭೆಯಲ್ಲಿ ಇರುವವ್ರಿಗೆ ಎಷ್ಟು ಬೇಜಾರಾಯ್ತು ಅಂತನೂ ಅವನು ನೋಡಿದ. (ಗಲಾ. 2:11, 12) ಅವನ ಆಪ್ತ ಸ್ನೇಹಿತನಾಗಿದ್ದ ಮಾರ್ಕ, ಒಂದುಸಲ ಅವನಿಗೆ ತುಂಬ ನೋವಾಗೋ ತರ ನಡ್ಕೊಂಡ. (ಅ. ಕಾ. 15:37, 38) ಪೌಲನಿಗೆ ಇಷ್ಟೆಲ್ಲಾ ನೋವಿದ್ರೂ ಅವನು ಸಹೋದರ ಸಹೋದರಿಯರ ಹತ್ರ ಮಾತಾಡೋದನ್ನ ನಿಲ್ಲಿಸಿಬಿಡಲಿಲ್ಲ. ಬದ್ಲಿಗೆ ಅವ್ರಲ್ಲಿರೋ ಒಳ್ಳೇದನ್ನೇ ನೋಡಿದ ಮತ್ತು ಯೆಹೋವನ ಸೇವೆ ಮಾಡ್ತಾನೇ ಇದ್ದ. ಪೌಲನಿಗೆ ಇದನ್ನೆಲ್ಲ ಸಹಿಸ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು?
5. ಸಹೋದರ ಸಹೋದರಿಯರ ಮೇಲೆ ಬೇಜಾರು ಮಾಡ್ಕೊಳ್ಳದೇ ಇರೋಕೆ ಪೌಲನಿಗೆ ಯಾವುದು ಸಹಾಯ ಮಾಡ್ತು? (ಕೊಲೊಸ್ಸೆ 3:13, 14) (ಚಿತ್ರನೂ ನೋಡಿ.)
5 ಪೌಲ ಸಹೋದರ ಸಹೋದರಿಯರನ್ನ ತುಂಬ ಪ್ರೀತಿಸ್ತಿದ್ದ. ಅದಕ್ಕೇ ಅವ್ರಲ್ಲಿರೋ ತಪ್ಪುಗಳನ್ನಲ್ಲ, ಒಳ್ಳೇ ಗುಣಗಳನ್ನ ನೋಡಿದ. ಅವನು ಕೊಲೊಸ್ಸೆ 3:13, 14ರಲ್ಲಿ ಬರೆದ ಹಾಗೇ ಅವ್ರ ಜೊತೆ ನಡ್ಕೊಂಡ. (ಓದಿ.) ಅವನು ಮೊದಲನೇ ಮಿಷನರಿ ಸೇವೆ ಮಾಡ್ತಿದ್ದಾಗ ಮಾರ್ಕ ಅವನನ್ನ ಬಿಟ್ಟುಹೋಗಿದ್ದ. ಹಾಗಂತ ಪೌಲ ಅವನ ಮೇಲೆ ಕೋಪ ಇಟ್ಕೊಂಡಿರಲಿಲ್ಲ, ಕ್ಷಮಿಸಿದ. ಅದು ನಮಗೆ ಹೇಗೆ ಗೊತ್ತು? ಅವನು ಕೊಲೊಸ್ಸೆ ಸಭೆಗೆ ಪತ್ರ ಬರೆದಾಗ ಮಾರ್ಕ ತನ್ನನ್ನ ‘ಸಂತೈಸಿದ’ ಅಂತ ಹೇಳಿದ. (ಕೊಲೊ. 4:10, 11, ಪಾದಟಿಪ್ಪಣಿ) ಅಷ್ಟೇ ಅಲ್ಲ ಪೌಲ ರೋಮ್‌ನ ಜೈಲಲ್ಲಿ ಇದ್ದಾಗ ಅವನಿಗೆ ಸಹಾಯ ಬೇಕಿತ್ತು. ಅದಕ್ಕೇ ಮಾರ್ಕನಿಗೆ ತನ್ನ ಹತ್ರ ಬರೋಕೆ ಹೇಳಿದ. (2 ತಿಮೊ. 4:11) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಪೌಲ ಸಹೋದರ ಸಹೋದರಿಯರ ಮೇಲೆ ಬೇಜಾರು ಇಟ್ಕೊಂಡಿರಲಿಲ್ಲ, ಅವ್ರನ್ನ ಕ್ಷಮಿಸಿದ ಅಂತ ಗೊತ್ತಾಗುತ್ತೆ. ನಾವೂ ಪೌಲನ ತರ ಇರೋಕೆ ಏನು ಮಾಡಬೇಕು?
6-7. ಸಹೋದರ ಸಹೋದರಿಯರು ನಮ್ಮ ಮನಸ್ಸಿಗೆ ನೋವಾಗೋ ತರ ನಡ್ಕೊಂಡ್ರೂ ಅವ್ರನ್ನ ಪ್ರೀತಿಸ್ತಾ ಇರೋಕೆ ಯಾವುದು ಸಹಾಯ ಮಾಡುತ್ತೆ? (1 ಯೋಹಾನ 4:7)
6 ಪಾಠ. ನಮಗೆ ಎಷ್ಟೇ ನೋವಾದ್ರೂ ಸಹೋದರ ಸಹೋದರಿಯರನ್ನ ಪ್ರೀತಿಸ್ತಾ ಇರಬೇಕು ಅಂತ ಯೆಹೋವ ಬಯಸ್ತಾನೆ. (1 ಯೋಹಾನ 4:7 ಓದಿ.) ಹಾಗಾದ್ರೆ ಯಾರಾದ್ರೂ ನಿಮ್ಮ ಮನಸ್ಸಿಗೆ ನೋವಾಗೋ ತರ ನಡ್ಕೊಂಡ್ರೆ ಅವರು ಬೇಕುಬೇಕಂತಾನೇ ಹಾಗೆ ಮಾಡಿದ್ರು ಅಂತ ಅಂದ್ಕೊಬೇಡಿ. ಅವರು ಅದನ್ನ ಗೊತ್ತಿಲ್ಲದೇ ಮಾಡಿರಬಹುದು. ಅವರು ಯೆಹೋವನಿಗೆ ಇಷ್ಟ ಆಗೋದನ್ನ ಮಾಡೋಕೆ ತುಂಬ ಪ್ರಯತ್ನ ಮಾಡ್ತಿದ್ದಾರೆ ಅನ್ನೋದನ್ನ ಮರಿಬೇಡಿ. (ಜ್ಞಾನೋ. 12:18) ಅವ್ರ ತರ ನಾವೂ ಎಷ್ಟೋ ಸಲ ತಪ್ಪುಗಳನ್ನ ಮಾಡ್ತೀವಿ. ಹಾಗಂತ ಯೆಹೋವ ನಮ್ಮ ಜೊತೆ ಇರೋ ಸ್ನೇಹ ಕಡಿದು ಹಾಕಲ್ಲ, ಕೋಪ ಇಟ್ಕೊಂಡಿರಲ್ಲ. ನಮ್ಮನ್ನ ಮನಸಾರೆ ಕ್ಷಮಿಸ್ತಾನೆ. (ಕೀರ್ತ. 103:9) ಅದಕ್ಕೇ ನಾವೂ ಯೆಹೋವನ ತರ ಬೇರೆಯವ್ರನ್ನ ಕ್ಷಮಿಸಬೇಕು.—ಎಫೆ. 4:32–5:1.
7 ಅಂತ್ಯ ಹತ್ರ ಆಗ್ತಾ ಇದ್ದ ಹಾಗೆ ನಾವು ನಮ್ಮ ಸಹೋದರ ಸಹೋದರಿಯರನ್ನ ಜಾಸ್ತಿ ಪ್ರೀತಿಸಬೇಕು. ಯಾಕಂದ್ರೆ ನಮಗೆ ಹಿಂಸೆ ಇನ್ನೂ ಹೆಚ್ಚಾಗ್ತಾ ಹೋಗುತ್ತೆ. ಕೆಲವೊಮ್ಮೆ ನಾವು ನಮ್ಮ ನಂಬಿಕೆಗೋಸ್ಕರ ಜೈಲಲ್ಲಿ ಇರಬೇಕಾಗಬಹುದು. ಆಗ ನಮ್ಮ ಸಹೋದರ ಸಹೋದರಿಯರ ಸಹಾಯ ಜಾಸ್ತಿ ಬೇಕಾಗಿರುತ್ತೆ. (ಜ್ಞಾನೋ. 17:17) ಸ್ಪೇನ್‌ನಲ್ಲಿ ಹಿರಿಯರಾಗಿರೋ ಜೋಸೆಫ್ a ಅನ್ನೋ ಸಹೋದರನ ಉದಾಹರಣೆ ನೋಡಿ. ನಂಬಿಕೆಗೋಸ್ಕರ ಅವರು ಮತ್ತು ಕೆಲವು ಸಹೋದರರು ಜೈಲಲ್ಲಿ ಇರಬೇಕಾಯ್ತು. ಇದ್ರ ಬಗ್ಗೆ ಜೋಸೆಫ್ ಏನು ಹೇಳ್ತಾರಂದ್ರೆ “ನಾವು ಜೈಲಲ್ಲಿ ಒಟ್ಟಿಗೆ ಇದ್ದಿದ್ರಿಂದ ಏನಾದ್ರೂ ಒಂದು ಸಮಸ್ಯೆ ಬಂದೇ ಬರ್ತಿತ್ತು. ಆದ್ರೆ ನಾವು ಒಬ್ರನ್ನೊಬ್ರು ಕ್ಷಮಿಸಿದ್ರಿಂದ ಒಗ್ಗಟ್ಟಾಗಿ ಇರೋಕಾಯ್ತು. ಯೆಹೋವನನ್ನ ಆರಾಧಿಸದೇ ಇರೋ ಜನ ನಮ್ಮ ಸುತ್ತಮುತ್ತ ಇದ್ರು. ಹಾಗಾಗಿ ತೊಂದ್ರೆ ಬಂದಾಗ ನಮ್ಮನ್ನ ನಾವು ಕಾಪಾಡ್ಕೊಳ್ಳೋಕೆ ಆಯ್ತು. ಒಂದುಸಲ ನನ್ನ ಕೈಗೆ ಏಟಾಗಿದ್ರಿಂದ ನನಗೆ ಯಾವ ಕೆಲಸನೂ ಮಾಡೋಕಾಗ್ತಿರಲಿಲ್ಲ. ಆಗ ಒಬ್ಬ ಸಹೋದರ ನನ್ನ ಬಟ್ಟೆ ಒಗೆದುಕೊಟ್ರು, ನನ್ನನ್ನ ಚೆನ್ನಾಗಿ ನೋಡ್ಕೊಂಡ್ರು. ಆ ಟೈಮಲ್ಲಿ ನನಗೆ ಅವ್ರ ಪ್ರೀತಿ, ಸಹಾಯ ಬೇಕಿತ್ತು.” ಇದ್ರಿಂದ ನಮಗೇನು ಗೊತ್ತಾಗುತ್ತೆ? ನಮ್ಮ ಸಹೋದರ ಸಹೋದರಿಯರು ನಮ್ಮ ಮನಸ್ಸಿಗೆ ಬೇಜಾರು ಮಾಡಿದ್ರೆ ತಕ್ಷಣ ಅವ್ರನ್ನ ಕ್ಷಮಿಸಬೇಕು, ಸಮಸ್ಯೆಯನ್ನ ಸರಿ ಮಾಡ್ಕೊಬೇಕು.
ನಿಮ್ಮ ಸಂಗಾತಿ ಮನಸ್ಸು ನೋಯಿಸಿದಾಗ
8. ಮದುವೆ ಆದವ್ರಿಗೆ ಯಾವ ತರ ಸಮಸ್ಯೆಗಳು ಬರುತ್ತೆ?
8 ಸಮಸ್ಯೆ. ಮದುವೆ ಜೀವನದಲ್ಲಿ ಸಮಸ್ಯೆಗಳು ಬರುತ್ತೆ. ಅದಕ್ಕೇ “ಮದುವೆ ಆದವ್ರಿಗೆ ಜೀವನದಲ್ಲಿ ಕಷ್ಟಸಂಕಟ ಇರುತ್ತೆ” ಅಂತ ಬೈಬಲೇ ಹೇಳುತ್ತೆ. (1 ಕೊರಿಂ. 7:28) ಯಾಕಂದ್ರೆ ಮದುವೆ ಆಗೋ ಇಬ್ರೂ ಅಪರಿಪೂರ್ಣರು. ಅಷ್ಟೇ ಅಲ್ಲ ಅವ್ರಿಬ್ರ ಇಷ್ಟಾ-ನಿಷ್ಟ, ಸ್ವಭಾವ, ನಡ್ಕೊಳ್ಳೋ ರೀತಿ ಇದೆಲ್ಲಾ ಬೇರೆಬೇರೆ ಆಗಿರುತ್ತೆ. ಅವರು ಬೇರೆಬೇರೆ ಸಂಸ್ಕೃತಿ ಹಿನ್ನೆಲೆಯಿಂದಾನೂ ಬಂದಿರುತ್ತಾರೆ. ಹೋಗ್ತಾಹೋಗ್ತಾ ಅವ್ರ ಸಂಗಾತಿ ತೋರಿಸೋ ಕೆಲವು ಗುಣಗಳಿಂದ ಅವ್ರ ಮದುವೆ ಜೀವನದಲ್ಲಿ ಸಮಸ್ಯೆಗಳು ಬರಬಹುದು. ಈ ಗುಣಗಳ ಬಗ್ಗೆ ಮದುವೆ ಆದ್ಮೇಲೆ ಅವ್ರಿಗೆ ಗೊತ್ತಾಗಿರಬಹುದು. ಆಗ ಅವರು ಆ ಸಮಸ್ಯೆ ಏನು ಅಂತ ಕಂಡುಹಿಡಿದು, ಅದನ್ನ ಸರಿಮಾಡೋ ಬದ್ಲು ಒಬ್ರ ಮೇಲೊಬ್ರು ತಪ್ಪು ಹೊರಿಸಬಹುದು. ಇದ್ರಿಂದಾಗಿ ಇನ್ನು ದೂರ ಇರೋದೇ ಒಳ್ಳೇದು, ವಿಚ್ಛೇದನ ತಗೊಳ್ಳೋದೇ ಒಳ್ಳೇದು ಅನ್ನೋ ತೀರ್ಮಾನಕ್ಕೆ ಬರಬಹುದು. ಆದ್ರೆ ಈ ತರ ಮಾಡೋದ್ರಿಂದ ಸಮಸ್ಯೆ ಸರಿಹೋಗುತ್ತಾ? b ಇಂಥ ಪರಿಸ್ಥಿತಿ ಬಂದಾಗ ಅಬೀಗೈಲ್ ಏನು ಮಾಡಿದಳು ಅಂತ ನೋಡೋಣ.
9. ಅಬೀಗೈಲ್‌ಗೆ ಯಾವ ಸಮಸ್ಯೆ ಬಂತು?
9 ಬೈಬಲಲ್ಲಿರೋ ಉದಾಹರಣೆ. ಅಬೀಗೈಲ್ ನಾಬಾಲನನ್ನ ಮದುವೆ ಆಗಿದ್ದಳು. ಅವನು ತುಂಬ ಒರಟು, ಕೆಟ್ಟದಾಗಿ ನಡ್ಕೊಳ್ತಿದ್ದ ಅಂತ ಬೈಬಲೇ ಹೇಳುತ್ತೆ. (1 ಸಮು. 25:3) ಹಾಗಾಗಿ ಅಂಥವನ ಜೊತೆ ಬಾಳೋಕೆ ಅಬೀಗೈಲ್‌ಗೆ ತುಂಬ ಕಷ್ಟ ಆಗಿರಬೇಕು. ನಾಬಾಲ ಒಂದುಸಲ ದಾವೀದನನ್ನ ಮತ್ತು ಅವನ ಕಡೆಯವ್ರನ್ನ ತುಂಬ ಅವಮಾನ ಮಾಡಿಬಿಟ್ಟ. ಅದಕ್ಕೇ ದಾವೀದ ಅವನನ್ನ ಸಾಯಿಸೋಕೆ ಹೊರಟ. (1 ಸಮು. 25:9-13) ಆಗ ಅಬೀಗೈಲ್ ನಾಬಾಲನನ್ನ ಬಿಟ್ಟು ಓಡಿಹೋಗಬಹುದಿತ್ತು. ಆದ್ರೂ ಅವಳು ದಾವೀದನ ಹತ್ರ ಹೋಗಿ ನಾಬಾಲನನ್ನ ಸಾಯಿಸಬೇಡ ಅಂತ ಕೇಳ್ಕೊಂಡಳು. (1 ಸಮು. 25:23-27) ಅವಳು ಯಾಕೆ ಹಾಗೆ ಮಾಡಿದಳು?
10. ನಾಬಾಲನ ಜೊತೆ ಬಾಳೋಕೆ ಕಷ್ಟ ಆದ್ರೂ ಅಬೀಗೈಲ್ ಯಾಕೆ ಅವನನ್ನ ಬಿಟ್ಟು ಹೋಗಲಿಲ್ಲ?
10 ಅಬೀಗೈಲ್‌ಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಆತನು ಮಾಡಿರೋ ಮದುವೆ ಏರ್ಪಾಡಿನ ಮೇಲೆ ತುಂಬ ಗೌರವ ಇತ್ತು. ಯೆಹೋವ ಆದಾಮನಿಗೆ ಹವ್ವಳನ್ನ ಹೆಂಡ್ತಿಯಾಗಿ ಕೊಟ್ಟಾಗ ಏನು ಹೇಳಿದನು ಅನ್ನೋದು ಅಬೀಗೈಲ್‌ಗೆ ಚೆನ್ನಾಗಿ ಗೊತ್ತಿತ್ತು. (ಆದಿ. 2:24) ಗಂಡ-ಹೆಂಡ್ತಿ ಸಂಬಂಧವನ್ನ ಯೆಹೋವ ಪವಿತ್ರವಾಗಿ ನೋಡ್ತಾನೆ ಅಂತಾನೂ ಅವಳು ಅರ್ಥಮಾಡ್ಕೊಂಡಿದ್ದಳು. ಅವಳಿಗೆ ಯೆಹೋವ ದೇವರನ್ನ ಮೆಚ್ಚಿಸಬೇಕು ಅನ್ನೋ ಮನಸ್ಸು ಇದ್ದಿದ್ರಿಂದ ತನ್ನ ಮನೆಯವ್ರನ್ನ, ತನ್ನ ಗಂಡನನ್ನ ಕಾಪಾಡೋಕೆ ಮುಂದೆ ಬಂದಳು. ತಕ್ಷಣ ದಾವೀದನ ಹತ್ರ ಓಡಿಹೋಗಿ ನಾಬಾಲನನ್ನ ಸಾಯಿಸಬೇಡ ಅಂತ ಕೇಳ್ಕೊಂಡಳು. ಮಾಡ್ದೇ ಇರೋ ತಪ್ಪಿಗೆ ಕ್ಷಮೆನೂ ಕೇಳಿದಳು. ತನ್ನ ಖುಷಿ ಬಗ್ಗೆ ಯೋಚ್ನೆ ಮಾಡದೇ ತನ್ನ ಕುಟುಂಬ ಉಳಿಸ್ಕೊಳ್ಳೋಕೆ ಅವಳು ಧೈರ್ಯ ತೋರಿಸಿದಳು. ಇದನ್ನ ನೋಡಿ ಯೆಹೋವ ಅವಳನ್ನ ತುಂಬ ಮೆಚ್ಕೊಂಡನು. ಹಾಗಾದ್ರೆ ಅಬೀಗೈಲಿಂದ ಗಂಡಂದಿರು ಮತ್ತು ಹೆಂಡ್ತಿಯರು ಏನು ಕಲಿಬಹುದು?
11. (ಎ) ಗಂಡ ಹೆಂಡ್ತಿ ಹೇಗಿರಬೇಕು ಅಂತ ಯೆಹೋವ ಇಷ್ಟ ಪಡ್ತಾನೆ? (ಎಫೆಸ 5:33) (ಬಿ) ಕಾರ್ಮೆನ್ ಸಹೋದರಿಯಿಂದ ನೀವೇನು ಕಲಿತ್ರಿ? (ಚಿತ್ರನೂ ನೋಡಿ.)
11 ಪಾಠ. ಸಂಗಾತಿ ಜೊತೆ ಜೀವನ ಮಾಡೋಕೆ ಕಷ್ಟ ಆದ್ರೂ ಗಂಡ-ಹೆಂಡ್ತಿ ಯಾವಾಗ್ಲೂ ಜೊತೆಯಾಗಿ ಇರಬೇಕು ಅಂತ ಯೆಹೋವ ಇಷ್ಟಪಡ್ತಾನೆ. ಹಾಗಾಗಿ ಕುಟುಂಬದಲ್ಲಿ ಏಷ್ಟೇ ಕಷ್ಟ ಇದ್ರೂ ಅದನ್ನ ಸರಿಮಾಡೋಕೆ ಪ್ರಯತ್ನ ಮಾಡ್ತಾ ಇರಿ. ಒಬ್ರಿಗೊಬ್ರು ಪ್ರೀತಿ, ಗೌರವ ತೋರಿಸ್ತಾ ಇರಿ. ನೀವು ಹೀಗೆ ಮಾಡಿದ್ರೆ ಯೆಹೋವ ದೇವರಿಗೆ ತುಂಬ ಖುಷಿಯಾಗುತ್ತೆ. (ಎಫೆಸ 5:33 ಓದಿ.) ಕಾರ್ಮೆನ್ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರು ಮದುವೆ ಆಗಿ 6 ವರ್ಷ ಆದ್ಮೇಲೆ ಬೈಬಲ್ ಕಲಿಯೋಕೆ ಶುರುಮಾಡಿದ್ರು. ಆಮೇಲೆ ದೀಕ್ಷಾಸ್ನಾನನೂ ತಗೊಂಡ್ರು. “ಇದು ನನ್ನ ಗಂಡನಿಗೆ ಒಂಚೂರೂ ಇಷ್ಟ ಆಗ್ಲಿಲ್ಲ. ನಾನು ಕೂಟಗಳಿಗೆ ಹೋಗ್ತಾ ಇದ್ದಿದ್ರಿಂದ ಅವ್ರಿಗೆ ಕೊಡಬೇಕಾದ ಸಮಯನೆಲ್ಲಾ ಯೆಹೋವನಿಗೆ ಕೊಡ್ತಿದ್ದೀನಿ ಅಂತ ಅವ್ರಿಗೆ ತುಂಬ ಕೋಪ ಬಂತು. ಇದ್ರಿಂದ ಅವರು ನನಗೆ ತುಂಬ ಅವಮಾನ ಮಾಡ್ತಿದ್ರು, ಬಿಟ್ಟುಹೋಗ್ತೀನಿ ಅಂತ ಹೆದರಿಸ್ತಿದ್ರು” ಅಂತ ಕಾರ್ಮೆನ್ ಹೇಳ್ತಾರೆ. ಕಷ್ಟ ಆದ್ರೂ 50 ವರ್ಷಗಳ ತನಕ ಎಲ್ಲಾನೂ ಸಹಿಸ್ಕೊಂಡು ಅವರು ತಮ್ಮ ಗಂಡನಿಗೆ ಪ್ರೀತಿ-ಗೌರವ ತೋರಿಸ್ತಿದ್ರು. “ಕೆಲವು ವರ್ಷಗಳಾದ್ಮೇಲೆ ನನ್ನ ಗಂಡ ಯಾಕೆ ಹೀಗೆ ಮಾಡ್ತಿದ್ದಾರೆ ಅಂತ ಅರ್ಥಮಾಡ್ಕೊಳ್ಳೋಕೆ ಶುರು ಮಾಡ್ದೆ. ಅವ್ರ ಜೊತೆ ಪ್ರೀತಿಯಿಂದ ಮಾತಾಡೋಕೆ ಶುರು ಮಾಡ್ದೆ. ಮದುವೆ ಬಂಧವನ್ನ ಯೆಹೋವ ದೇವರು ಪವಿತ್ರವಾಗಿ ನೋಡೋದ್ರಿಂದ ಅದನ್ನ ಉಳಿಸ್ಕೊಳ್ಳೋಕೆ ನನ್ನಿಂದ ಆಗೋದನ್ನೆಲ್ಲ ಮಾಡ್ದೆ. ನಾನು ಇದನ್ನೆಲ್ಲ ಮಾಡಿದ್ದು ಯೆಹೋವನ ಮೇಲಿರೋ ಪ್ರೀತಿಯಿಂದಾನೇ” ಅಂತ ಕಾರ್ಮೆನ್ ಹೇಳ್ತಾರೆ. c ನಿಮ್ಮ ಕುಟುಂಬದಲ್ಲೂ ಸಮಸ್ಯೆಗಳಾದಾಗ ಯೆಹೋವ ನಿಮಗೆ ಸಹಾಯ ಮಾಡ್ತಾನೆ, ಸಹಿಸ್ಕೊಳ್ಳೋಕೆ ಶಕ್ತಿ ಕೊಡ್ತಾನೆ ಅನ್ನೋದನ್ನ ನೆನಪಿಡಿ.
ನಮ್ಮ ತಪ್ಪಿಂದ ನಮಗೇ ಬೇಜಾರಾದಾಗ
12. ದೊಡ್ಡ ತಪ್ಪು ಮಾಡಿದಾಗ ನಮಗೆ ಹೇಗನಿಸುತ್ತೆ?
12 ಸಮಸ್ಯೆ. ನಾವೇನಾದ್ರೂ ಒಂದು ದೊಡ್ಡ ತಪ್ಪು ಮಾಡಿಬಿಟ್ರೆ ನಮಗೆ ತುಂಬ ಬೇಜಾರಾಗುತ್ತೆ. ‘ನಮ್ಮ ಹೃದಯ ಜಜ್ಜಿಹೋದ ಹಾಗೆ, ಮುರಿದು ಹೋದ ಹಾಗೆ’ ಅನಿಸಿಬಿಡುತ್ತೆ. (ಕೀರ್ತ. 51:17) ಸಹೋದರ ರಾಬರ್ಟ್‌ಗೂ ಹೀಗೇ ಆಯ್ತು. ಅವರು ಸಹಾಯಕ ಸೇವಕರಾಗಿದ್ರು. ಆ ಗುರಿ ಮುಟ್ಟೋಕೆ ಎಷ್ಟೋ ವರ್ಷದಿಂದ ಅವರು ಪ್ರಯತ್ನ ಹಾಕಿದ್ರು. ಆದ್ರೆ ಅವರು ಒಂದು ದೊಡ್ಡ ತಪ್ಪು ಮಾಡಿದಾಗ ಯೆಹೋವನಿಗೆ ದ್ರೋಹ ಮಾಡಿದ ಹಾಗೆ ಅವ್ರಿಗೆ ಅನಿಸ್ತು. “ನನ್ನ ಮನಸ್ಸಾಕ್ಷಿ ಚುಚ್ತಾ ಇತ್ತು, ನನ್ನ ಹೊಟ್ಟೆಲಿ ತುಂಬ ಸಂಕಟ ಆಗ್ತಿತ್ತು. ಜೋರಾಗಿ ಅಳ್ತಾ ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದೆ. ಆದ್ರೂ ಒಂದು ಕಡೆ ನಾನು ಯೆಹೋವ ದೇವರಿಗೆ ಮೋಸ ಮಾಡಿಬಿಟ್ಟೆನಲ್ಲಾ, ಇನ್ನು ದೇವರು ಯಾಕೆ ನನ್ನ ಪ್ರಾರ್ಥನೆ ಕೇಳ್ತಾನೆ ಅಂತನೂ ಅನಿಸ್ತಿತ್ತು” ಅಂತ ರಾಬರ್ಟ್ ಹೇಳ್ತಾರೆ. ನಾವೂ ಏನಾದ್ರು ಒಂದು ದೊಡ್ಡ ತಪ್ಪು ಮಾಡಿಬಿಟ್ರೆ ನಮ್ಮ ಮನಸ್ಸು ಒಡೆದು ಹೋಗಿ ಬಿಡುತ್ತೆ. ಯೆಹೋವ ನನ್ನ ಕೈಬಿಟ್ಟನು, ಆತನ ಸೇವೆ ಮಾಡಿ ಇನ್ನು ಯಾವ ಪ್ರಯೋಜನನೂ ಇಲ್ಲ ಅಂತ ಅನಿಸಿಬಿಡುತ್ತೆ. (ಕೀರ್ತ. 38:4) ಈ ತರ ಅನಿಸ್ತಿದ್ರೆ ನಾವು ಏನು ಮಾಡೋದು? ನಾವೀಗ ಬೈಬಲ್ ಕಾಲದಲ್ಲಿದ್ದ ಒಬ್ಬ ವ್ಯಕ್ತಿಯ ಉದಾಹರಣೆ ನೋಡೋಣ.
13. (ಎ) ಅಪೊಸ್ತಲ ಪೇತ್ರ ಯಾವ ತಪ್ಪುಗಳನ್ನ ಮಾಡಿದ? (ಬಿ) ಅದ್ರಿಂದ ಇನ್ನೂ ಯಾವ ದೊಡ್ಡ ತಪ್ಪು ಮಾಡಿದ?
13 ಬೈಬಲಲ್ಲಿರೋ ಉದಾಹರಣೆ. ಯೇಸು ಸಾಯೋ ಹಿಂದಿನ ರಾತ್ರಿ ಪೇತ್ರ ತುಂಬ ತಪ್ಪುಗಳನ್ನ ಮಾಡಿದ. ಇದ್ರಿಂದ ಅವನು ಒಂದು ದೊಡ್ಡ ತಪ್ಪನ್ನೇ ಮಾಡಿಬಿಟ್ಟ. ಎಲ್ಲಾ ಅಪೊಸ್ತಲರು ಯೇಸುನ ಬಿಟ್ಟು ಹೋದ್ರೂ ತಾನು ಮಾತ್ರ ಬಿಟ್ಟುಹೋಗಲ್ಲ ಅಂತ ಕೊಚ್ಕೊಂಡ. (ಮಾರ್ಕ 14:27-29) ಆಮೇಲೆ ಗೆತ್ಸೇಮನೆ ತೋಟದಲ್ಲಿ ಎಚ್ಚರವಾಗಿರೋಕೆ ಯೇಸು ಅವನಿಗೆ ಎಷ್ಟು ಸಲ ಹೇಳಿದ್ರೂ ನಿದ್ದೆ ಮಾಡಿಬಿಟ್ಟ. (ಮಾರ್ಕ 14:32, 37-41) ಅದಾದ್ಮೇಲೆ ಜನ್ರು ಯೇಸುನ ಹಿಡ್ಕೊಂಡು ಹೋಗೋಕೆ ಬಂದಾಗ ಅವನು ಓಡಿ ಹೋಗಿಬಿಟ್ಟ. (ಮಾರ್ಕ 14:50) ಇದ್ರಿಂದ ಏನಾಯ್ತು? ಕೊನೆಗೆ ಒಂದು ದೊಡ್ಡ ತಪ್ಪನ್ನೇ ಮಾಡಿಬಿಟ್ಟ. ಯೇಸು ಅಂದ್ರೆ ಯಾರು ಅಂತಾನೇ ಗೊತ್ತಿಲ್ಲ ಅಂತ ಮೂರು ಸಲ ಆಣೆ ಮಾಡಿ ಸುಳ್ಳು ಹೇಳಿದ. (ಮಾರ್ಕ 14:66-71) ತಾನು ಮಾಡಿದ್ದು ದೊಡ್ಡ ತಪ್ಪು ಅಂತ ಗೊತ್ತಾದಾಗ ಪೇತ್ರನಿಗೆ ಹೇಗನಿಸ್ತು? ಅವನು ತುಂಬ ಅತ್ತ, ಅವನ ಮನಸ್ಸು ನುಚ್ಚುನೂರಾಯ್ತು. (ಮಾರ್ಕ 14:72) ಯೇಸುನ ಕಂಬಕ್ಕೆ ಜಡಿತಿರುವಾಗ ಪೇತ್ರನಿಗೆ ಎಷ್ಟು ಸಂಕಟ ಆಗಿರಬೇಕು ಅಂತ ಸ್ವಲ್ಪ ಯೋಚ್ನೆ ಮಾಡಿ! ತಾನು ಯೇಸುವಿನ ಶಿಷ್ಯನಾಗೋಕೆ ಲಾಯಕ್ಕಿಲ್ಲ ಅಂತ ಅವನಿಗೆ ಅನಿಸಿರಬಹುದು.
14. ಯೆಹೋವನ ಸೇವೆ ಮಾಡ್ತಾ ಇರೋಕೆ ಪೇತ್ರನಿಗೆ ಯಾವುದು ಸಹಾಯ ಮಾಡ್ತು? (ಚಿತ್ರ ನೋಡಿ.)
14 ಇಷ್ಟೆಲ್ಲ ಆದ್ರೂ ಪೇತ್ರನಿಗೆ ಯೆಹೋವನ ಸೇವೆ ಮಾಡ್ತಾ ಇರೋಕೆ ಯಾವುದು ಸಹಾಯ ಮಾಡ್ತು? ತಾನು ಮಾಡಿದ ತಪ್ಪನ್ನ ನೆನಸ್ಕೊಂಡು ಒಬ್ಬನೇ ಕೂತ್ಕೊಳ್ಳಿಲ್ಲ. ಯೇಸುವಿನ ಶಿಷ್ಯರ ಹತ್ರ ಹೋದ. ಆಗ ಅವರು ಖಂಡಿತ ಅವನಿಗೆ ಸಮಾಧಾನ ಮಾಡಿರ್ತಾರೆ, ಧೈರ್ಯ ತುಂಬಿರ್ತಾರೆ. (ಲೂಕ 24:33) ಅಷ್ಟೇ ಅಲ್ಲ ಪೇತ್ರನಿಗೆ ಪ್ರೋತ್ಸಾಹ ಕೊಡೋಕಂತಾನೇ ಯೇಸು ಮತ್ತೆ ಜೀವ ಪಡ್ಕೊಂಡ ಮೇಲೆ ಅವನಿಗೆ ಕಾಣಿಸ್ಕೊಂಡನು. (ಲೂಕ 24:34; 1 ಕೊರಿಂ. 15:5) ಅವನು ಮಾಡಿದ ತಪ್ಪಿಗೆ ಯೇಸು ಅವನನ್ನ ಬೈಲಿಲ್ಲ, ಇನ್ನೂ ಜವಾಬ್ದಾರಿಗಳನ್ನ ವಹಿಸಿಕೊಟ್ಟ. (ಯೋಹಾ. 21:15-17) ಹೀಗೆ ಯೇಸು ಅವನನ್ನ ಎಷ್ಟು ಪ್ರೀತಿಸ್ತಾನೆ ಅಂತ ತೋರಿಸ್ಕೊಟ್ಟನು. ಪೇತ್ರನಿಗೆ ತಾನು ಮಾಡಿದ್ದು ಎಷ್ಟು ದೊಡ್ಡ ತಪ್ಪು ಅಂತ ಗೊತ್ತಿದ್ರೂ ಯೆಹೋವನ ಸೇವೆ ಮಾಡೋದನ್ನ ಬಿಡ್ಲಿಲ್ಲ. ಯಾಕಂದ್ರೆ ಯೇಸು ತನ್ನ ಕೈಬಿಟ್ಟಿಲ್ಲ, ತನ್ನ ಮೇಲೆ ನಂಬಿಕೆ ಇಟ್ಟಿದ್ದಾನೆ ಅಂತ ಅವನಿಗೆ ಗೊತ್ತಿತ್ತು. ಅಷ್ಟೇ ಅಲ್ಲ ಸಹೋದರ ಸಹೋದರಿಯರೂ ತನ್ನನ್ನ ಪ್ರೀತಿಸ್ತಾರೆ ಅಂತ ಅವನಿಗೆ ಗೊತ್ತಿತ್ತು. ಇದ್ರಿಂದ ನಮಗೇನು ಪಾಠ?
15. ನಾವು ಏನನ್ನ ಅರ್ಥ ಮಾಡ್ಕೊಬೇಕು ಅನ್ನೋದು ಯೆಹೋವನ ಆಸೆ? (ಕೀರ್ತನೆ 86:5; ರೋಮನ್ನರಿಗೆ 8:38, 39) (ಚಿತ್ರನೂ ನೋಡಿ.)
15 ಪಾಠ. ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ, ಕ್ಷಮಿಸೋಕೆ ರೆಡಿ ಇದ್ದಾನೆ ಅಂತ ನಾವು ತಿಳ್ಕೊಬೇಕು ಅನ್ನೋದೇ ಆತನ ಆಸೆ. (ಕೀರ್ತನೆ 86:5; ರೋಮನ್ನರಿಗೆ 8:38, 39 ಓದಿ.) ನಾವು ತಪ್ಪು ಮಾಡಿದಾಗ ನಮಗೆ ಬೇಜಾರಾಗುತ್ತೆ, ನಮ್ಮ ಮೇಲೆ ನಮಗೇ ಅಸಹ್ಯ ಅನಿಸುತ್ತೆ. ಈ ತರ ಅನಿಸೋದು ಸಹಜಾನೇ. ಹಾಗಂತ ಯೆಹೋವ ನಮ್ಮನ್ನ ಪ್ರೀತಿಸಲ್ಲ, ಕ್ಷಮಿಸಲ್ಲ ಅಂತ ನೆನಸಬಾರದು. ಅದ್ರ ಬದ್ಲಿಗೆ ಸಹಾಯ ಪಡ್ಕೊಳ್ಳೋಕೆ ಮುಂದೆ ಬರಬೇಕು. ನಾವು ಆಗ್ಲೇ ರಾಬರ್ಟ್ ಅನ್ನೋ ಸಹೋದರನ ಉದಾಹರಣೆ ನೋಡಿದ್ವಿ. ಅವರೂ ಇದನ್ನೇ ಮಾಡಿದ್ರು. “ತಪ್ಪಾದ ವಿಷ್ಯಗಳನ್ನ ಮಾಡೋಕೆ ಆಸೆ ಬಂದಾಗ ನಾನು ಯೆಹೋವನ ಸಹಾಯ ಕೇಳಬೇಕಿತ್ತು. ಎಲ್ಲಾ ನಾನೇ ಮಾಡ್ತೀನಿ ಅಂತ ಅಂದ್ಕೊಂಡಿದ್ರಿಂದ ದೊಡ್ಡ ತಪ್ಪು ಮಾಡಿಬಿಟ್ಟೆ” ಅಂತ ಅವರು ಹೇಳ್ತಾರೆ. ಆದ್ರೆ ಆಮೇಲೆ ರಾಬರ್ಟ್ ಹಿರಿಯರ ಸಹಾಯ ಪಡ್ಕೊಂಡ್ರು. “ನಾನು ಹಿರಿಯರ ಹತ್ರ ಮಾತಾಡಿದ್ದು ಒಳ್ಳೇದೇ ಆಯ್ತು. ಅವರು ನನ್ನ ಕೈಬಿಡಲಿಲ್ಲ, ಸಹಾಯ ಮಾಡಿದ್ರು. ಯೆಹೋವ ನನ್ನನ್ನ ತುಂಬ ಪ್ರೀತಿಸ್ತಾನೆ, ನನ್ನ ಕೈಹಿಡಿಯೋಕೆ ರೆಡಿ ಇದ್ದಾನೆ ಅಂತ ಅರ್ಥಮಾಡಿಸಿದ್ರು” ಅಂತ ರಾಬರ್ಟ್ ಹೇಳ್ತಾರೆ. ನಾವೂ ಈ ಸಹೋದರನ ತರ ಪಶ್ಚಾತ್ತಾಪಪಡಬೇಕು, ಸಹಾಯ ಪಡ್ಕೊಬೇಕು ಮತ್ತು ಮಾಡಿದ ತಪ್ಪನ್ನ ಮತ್ತೆ ಮಾಡದೇ ಇರೋಕೆ ಪ್ರಯತ್ನ ಮಾಡಬೇಕು. ಆಗ ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಮತ್ತು ಕ್ಷಮಿಸ್ತಾನೆ. (1 ಯೋಹಾ. 1:8, 9) ಇದನ್ನ ನಾವು ಅರ್ಥಮಾಡ್ಕೊಂಡಾಗ ತಪ್ಪು ಮಾಡಿದಾಗ್ಲೂ ತಿದ್ಕೊಂಡು ಯೆಹೋವನ ಸೇವೆ ಮಾಡ್ತಾ ಇರ್ತೀವಿ.
16. ನಾವು ಯೆಹೋವನ ಸೇವೆ ಮಾಡ್ತಾ ಇರೋಕೆ ಏನು ಮಾಡಬೇಕು?
16 ಈ ಕೊನೇ ದಿನಗಳಲ್ಲಿ ನಮಗೆ ತುಂಬ ಕಷ್ಟಗಳು ಬರ್ತಾ ಇದೆ. ಆದ್ರೂ ನಾವು ಯೆಹೋವನ ಸೇವೆಯನ್ನ ಬಿಡದೆ ಮಾಡ್ತಾ ಇದ್ದೀವಿ. ಇದನ್ನ ನೋಡೋವಾಗ ಆತನಿಗೆ ತುಂಬ ಖುಷಿಯಾಗುತ್ತೆ ಅಲ್ವಾ! ಎಷ್ಟೇ ಕಷ್ಟಗಳು ಬಂದ್ರೂ ಯೆಹೋವನ ಸಹಾಯ ಪಡ್ಕೊಂಡ್ರೆ ನಾವು ಅದನ್ನೆಲ್ಲ ಸಹಿಸ್ಕೊಳ್ಳೋಕೆ ಆಗುತ್ತೆ. ನಮ್ಮ ಸಹೋದರ ಸೋದರಿಯರು ನಮ್ಮ ಮನಸ್ಸು ನೋಯಿಸಿದ್ರೂ ಅವ್ರನ್ನ ನಾವು ಕ್ಷಮಿಸಬೇಕು. ಹೀಗೆ ಅವ್ರ ಮೇಲೆ ಪ್ರೀತಿ ಇದೆ ಅಂತ ತೋರಿಸಬೇಕು. ಮದುವೆ ಜೀವನದಲ್ಲಿ ಸಮಸ್ಯೆಗಳು ಬರುತ್ತೆ. ಆದ್ರೆ ಆ ಸಮಸ್ಯೆಗಳನ್ನ ಸರಿ ಮಾಡ್ಕೊಂಡ್ರೆ, ನಾವು ಯೆಹೋವನನ್ನ ಪ್ರೀತಿಸ್ತೀವಿ ಮತ್ತು ಆತನು ಮಾಡಿರೋ ಮದುವೆ ಏರ್ಪಾಡನ್ನ ಗೌರವಿಸ್ತೀವಿ ಅಂತ ತೋರಿಸ್ತೀವಿ. ಒಂದುವೇಳೆ ನಾವು ದೊಡ್ಡ ತಪ್ಪುಗಳನ್ನ ಮಾಡಿದ್ರೆ ಯೆಹೋವನ ಸಹಾಯ ಪಡ್ಕೊಬೇಕು. ಆತನು ನಮ್ಮನ್ನ ಪ್ರೀತಿಸ್ತಾನೆ, ಕ್ಷಮಿಸ್ತಾನೆ ಅಂತ ಅರ್ಥಮಾಡ್ಕೊಬೇಕು. ಆಗ ಆತನ ಸೇವೆ ಮಾಡ್ತಾ ಇರೋಕೆ ಆಗುತ್ತೆ. ಹಾಗಾಗಿ ನಾವು “ಒಳ್ಳೇದು ಮಾಡೋದನ್ನ ಬಿಡೋದು ಬೇಡ.” ಆಗ ಯೆಹೋವ ನಮ್ಮ ಮೇಲೆ ಆಶೀರ್ವಾದದ ಸುರಿಮಳೆನೇ ಸುರಿಸ್ತಾನೆ.—ಗಲಾ. 6:9.
ಈ ಸನ್ನಿವೇಶಗಳಲ್ಲಿ ಯೆಹೋವನ ಸೇವೆ ಮಾಡ್ತಾ ಇರೋಕೆ ಏನು ಮಾಡಬೇಕು?
-
ಸಹೋದರ ಸಹೋದರಿಯರು ನಮ್ಮ ಮನಸ್ಸು ನೋಯಿಸಿದಾಗ
-
ನಮ್ಮ ಸಂಗಾತಿ ನಮ್ಮ ಮನಸ್ಸು ನೋಯಿಸಿದಾಗ
-
ನಮ್ಮ ತಪ್ಪಿಂದ ನಮಗೇ ಬೇಜಾರಾದಾಗ
ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು
a ಕೆಲವ್ರ ಹೆಸ್ರು ಬದಲಾಗಿದೆ.
b ಗಂಡ ಹೆಂಡ್ತಿ ಒಬ್ರನೊಬ್ರು ಬಿಟ್ಟು ದೂರ ಇರೋದು ಒಳ್ಳೇದಲ್ಲ ಅಂತ ಬೈಬಲ್ ಹೇಳುತ್ತೆ. ಒಂದುವೇಳೆ ಅವರು ದೂರ ಇದ್ರೂ ಇನ್ನೊಂದು ಮದುವೆ ಮಾಡ್ಕೊಳ್ಳೋ ಹಾಗಿಲ್ಲ. ಆದ್ರೆ ಕೆಲವೊಂದು ಸನ್ನಿವೇಶಗಳಲ್ಲಿ ಕ್ರೈಸ್ತರಾಗಿರೋ ಗಂಡ ಹೆಂಡ್ತಿ ದೂರ ಇರೋಕೆ ಬಯಸ್ತಾರೆ. ಅದ್ರ ಬಗ್ಗೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿ “ಪ್ರತ್ಯೇಕವಾಸ” ಅನ್ನೋ 4ನೇ ಟಿಪ್ಪಣಿ ನೋಡಿ.
c jw.orgನಲ್ಲಿ ಸುಳ್ಳು ಶಾಂತಿಯಿಂದ ದೂರ ಇರಿ!—ಡ್ಯಾರೆಲ್ ಮತ್ತು ಡೆಬೋರ ಫ್ರೈಸಿಂಗರ್ ಅನ್ನೋ ವಿಡಿಯೋ ನೋಡಿ.