ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 9

ಗೀತೆ 10 “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

ಯೆಹೋವನಿಗೆ ಸಮರ್ಪಣೆ ಮಾಡ್ಕೊಳ್ಳೋಕೆ ನೀವು ರೆಡಿನಾ?

ಯೆಹೋವನಿಗೆ ಸಮರ್ಪಣೆ ಮಾಡ್ಕೊಳ್ಳೋಕೆ ನೀವು ರೆಡಿನಾ?

“ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿ ಆತನ ಋಣನ ನಾನು ಹೇಗೆ ತೀರಿಸಲಿ?”ಕೀರ್ತ. 116:12.

ಈ ಲೇಖನದಲ್ಲಿ ಏನಿದೆ?

ಸಮರ್ಪಣೆ ಮಾಡ್ಕೊಂಡು, ದೀಕ್ಷಾಸ್ನಾನ ತಗೊಬೇಕು ಅನ್ನೋ ಆಸೆ ಬರಬೇಕಂದ್ರೆ ನೀವು ಯೆಹೋವನಿಗೆ ಇನ್ನೂ ಹತ್ರ ಆಗಬೇಕು. ಅದಕ್ಕೆ ಈ ಲೇಖನ ಸಹಾಯ ಮಾಡುತ್ತೆ.

1-2. ದೀಕ್ಷಾಸ್ನಾನ ತಗೊಳ್ಳೋ ಮುಂಚೆ ಏನು ಮಾಡಬೇಕು?

 ಕಳೆದ ಐದು ವರ್ಷಗಳಿಂದ ಲಕ್ಷಾಂತರ ಜನ್ರು ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಗಳಾಗಿದ್ದಾರೆ. ಅವ್ರಲ್ಲಿ ಎಷ್ಟೋ ಜನ ಒಂದನೇ ಶತಮಾನದಲ್ಲಿದ್ದ ತಿಮೊತಿ ತರ “ಚಿಕ್ಕಂದಿನಿಂದ” ಸತ್ಯದಲ್ಲಿ ಬೆಳೆದಿದ್ದಾರೆ. (2 ತಿಮೊ. 3:14, 15, ಪಾದಟಿಪ್ಪಣಿ) ಇನ್ನು ಕೆಲವರು ದೊಡ್ಡವರಾದ ಮೇಲೆ ಯೆಹೋವನ ಬಗ್ಗೆ ಕಲ್ತಿದ್ದಾರೆ. ನಿಮಗೆ ಗೊತ್ತಾ? ಒಬ್ಬ ಸ್ತ್ರೀ 97ನೇ ವಯಸ್ಸಲ್ಲಿ ಬೈಬಲ್‌ ಕಲಿತು ದೀಕ್ಷಾಸ್ನಾನ ತಗೊಂಡಿದ್ದಾರೆ!

2 ನಿಮ್ಮಲ್ಲಿ ಕೆಲವ್ರನ್ನ ಚಿಕ್ಕವಯಸ್ಸಿಂದಾನೇ ಅಪ್ಪಅಮ್ಮ ಸತ್ಯದಲ್ಲಿ ಬೆಳೆಸಿರಬಹುದು ಅಥವಾ ನಿಮ್ಮಲ್ಲಿ ಕೆಲವರು ಈಗ ಬೈಬಲ್‌ ಕಲಿತಾ ಇರಬಹುದು. ನೀವು ಒಂದುವೇಳೆ ದೀಕ್ಷಾಸ್ನಾನ ತಗೊಬೇಕು ಅನ್ನೋ ಗುರಿ ಇಟ್ಟಿದ್ರೆ ಅದು ಒಳ್ಳೇದೇ. ಆದ್ರೆ ದೀಕ್ಷಾಸ್ನಾನ ತಗೊಳ್ಳೋ ಮುಂಚೆ ಯೆಹೋವ ದೇವರಿಗೆ ನಿಮ್ಮನ್ನ ಸಮರ್ಪಿಸ್ಕೊಬೇಕು. ಹಾಗಾಗಿ ಸಮರ್ಪಣೆ ಅಂದ್ರೆ ಏನು ಅಂತ ನಾವು ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಯೆಹೋವನಿಗೆ ನಿಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ಪಡ್ಕೊಳ್ಳೋಕೆ ಯಾಕೆ ಹಿಂಜರಿಬೇಕಾಗಿಲ್ಲ ಅನ್ನೋದನ್ನೂ ನೋಡೋಣ.

ಸಮರ್ಪಣೆ ಅಂದ್ರೇನು?

3. ಯೆಹೋವನಿಗೆ ಸಮರ್ಪಿಸ್ಕೊಂಡವ್ರ ಬಗ್ಗೆ ಬೈಬಲಲ್ಲಿರೋ ಉದಾಹರಣೆ ಕೊಡಿ.

3 ಬೈಬಲ್‌ ಕಾಲದಲ್ಲಿ ಯಾರೆಲ್ಲ ಯೆಹೋವನಿಗೆ ಸಮರ್ಪಿಸ್ಕೊಂಡಿದ್ರೋ ಅವ್ರನ್ನ ಯೆಹೋವ ಒಂದು ವಿಶೇಷ ನೇಮಕ ಮಾಡೋಕೆ ಆರಿಸಿಕೊಳ್ತಿದ್ದನು. ಯೆಹೋವ ಇಸ್ರಾಯೇಲ್ಯರನ್ನ ತನ್ನ ಜನ್ರಾಗಿ ಆರಿಸ್ಕೊಂಡಿದ್ದನು. ಅವ್ರಲ್ಲಿ ಕೆಲವರು ವಿಶೇಷ ಸೇವೆ ಮಾಡೋಕೆ ಯೆಹೋವನಿಗೆ ತಮ್ಮನ್ನ ಸಮರ್ಪಿಸ್ಕೊಂಡಿದ್ರು. ಉದಾಹರಣೆಗೆ ಆರೋನ. ಅವನ ತಲೆ ಮೇಲೆ ಒಂದು ವಿಶೇಷ ಪೇಟ ಇತ್ತು. ಆ ಪೇಟದ ಮುಂದುಗಡೆ ಪಳಪಳ ಹೊಳೆಯೋ ಚಿನ್ನದ ಫಲಕ ಇತ್ತು. ಅದು “ಸಮರ್ಪಣೆಯ ಪವಿತ್ರ ಚಿಹ್ನೆ” ಆಗಿತ್ತು. ಆ ಫಲಕ ಆರೋನ ತನ್ನನ್ನ ಮಹಾ ಪುರೋಹಿತನಾಗಿ ವಿಶೇಷ ಸೇವೆ ಮಾಡೋಕೆ ಸಮರ್ಪಿಸ್ಕೊಂಡಿದ್ದಾನೆ ಅಂತ ತೋರಿಸ್ತಿತ್ತು. (ಯಾಜ. 8:9) ಇವನಷ್ಟೇ ಅಲ್ಲ ನಾಜೀರರೂ ಯೆಹೋವನಿಗೆ ಸಮರ್ಪಿಸ್ಕೊಂಡು ವಿಶೇಷ ಸೇವೆ ಮಾಡ್ತಿದ್ರು. “ನಾಜೀರ” ಅನ್ನೋ ಪದ ನಾಜೀರ್‌ ಅನ್ನೋ ಹೀಬ್ರು ಪದದಿಂದ ಬಂದಿದೆ. ಈ ಪದಕ್ಕೆ “ಅದಕ್ಕಂತಾನೇ ಇರೋನು” ಮತ್ತು “ಮೀಸಲು” ಅನ್ನೋ ಅರ್ಥ ಇದೆ. ಮೋಶೆಯ ನಿಯಮ ಪುಸ್ತಕದಲ್ಲಿ ನಾಜೀರರಿಗಂತಾನೇ ಕೆಲವು ನಿಯಮಗಳಿತ್ತು. ಅದನ್ನ ಅವರು ಪಾಲಿಸಲೇಬೇಕಿತ್ತು.—ಅರ. 6:2-8.

4. (ಎ) ಯೆಹೋವನಿಗೆ ಸಮರ್ಪಿಸ್ಕೊಂಡಾಗ ನಿಮಗೆ ಯಾವುದು ಮುಖ್ಯ ಆಗಿರುತ್ತೆ? (ಬಿ) ಯೇಸು ಹೇಳಿದ ಮಾತಿನ ಅರ್ಥ ಏನು? (ಚಿತ್ರನೂ ನೋಡಿ.)

4 ನೀವು ಯೆಹೋವನಿಗೆ ಸಮರ್ಪಿಸ್ಕೊಂಡಾಗ, ಇನ್ಮುಂದೆ ಯೇಸುವಿನ ಶಿಷ್ಯರಾಗಿ ಇರ್ತಿರ, ಯೆಹೋವನಿಗೆ ಏನಿಷ್ಟಾನೋ ಅದನ್ನ ಮಾಡೋದೇ ನಿಮ್ಮ ಜೀವನದಲ್ಲಿ ಮುಖ್ಯ ಆಗಿರುತ್ತೆ. ಇದಿಷ್ಟೇ ಸಾಕಾ? ಯೇಸು ತನ್ನ ಶಿಷ್ಯರಿಗೆ, “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ ಹೊತ್ತು ನನ್ನ ಹಿಂದೆನೇ ಬರಲಿ” ಅಂತ ಹೇಳಿದನು. (ಮತ್ತಾ. 16:24) ಅಂದ್ರೆ ನಾವು ನಮ್ಮನ್ನ ಯೆಹೋವನಿಗೆ ಸಮರ್ಪಿಸ್ಕೊಂಡಾಗ, ಆತನಿಗೆ ಇಷ್ಟ ಆಗದೇ ಇರೋ ಯಾವ ಕೆಲಸನೂ ಮಾಡಬಾರದು. (2 ಕೊರಿಂ. 5:14, 15) ಲೈಂಗಿಕ ಅನೈತಿಕತೆಯಂಥ “ಪಾಪದಿಂದ ತುಂಬಿರೋ ದೇಹದ” ಕೆಲಸಗಳನ್ನೂ ಮಾಡಬಾರದು. (ಗಲಾ. 5:19-21; 1 ಕೊರಿಂ. 6:18) ಇದನ್ನೆಲ್ಲ ಪಾಲಿಸೋಕೆ ಕಷ್ಟ ಅಂತ ಅನಿಸುತ್ತಾ? ನಿಮಗೆ ಯೆಹೋವನ ಮೇಲೆ ಪ್ರೀತಿ ಇದ್ರೆ ಮತ್ತು ಆತನು ಕೊಡೋ ನಿಯಮಗಳು ನಿಮ್ಮ ಒಳ್ಳೇದಕ್ಕೇ ಅಂತ ನಂಬಿಕೆ ಇದ್ರೆ ಕಷ್ಟ ಅನಿಸಲ್ಲ. (ಕೀರ್ತ. 119:97; ಯೆಶಾ. 48:17, 18) ಇದ್ರ ಬಗ್ಗೆ ನಿಕೋಲಸ್‌ ಅನ್ನೋ ಸಹೋದರ ಹೀಗೆ ಹೇಳ್ತಾರೆ: “ಯೆಹೋವನ ನೀತಿ ನಿಯಮಗಳು ನಿಮಗೆ ಏನಿಷ್ಟಾನೋ ಅದನ್ನ ಮಾಡೋಕೆ ಬಿಡದಿರೋ ಜೈಲಿನ ಕಂಬಿಗಳ ತರ ಇದ್ಯಾ? ಅಥವಾ ನಿಮ್ಮ ಜೀವ ಕಾಪಾಡೋ ಸಿಂಹದ ಬೋನಿನ ತರ ಇದ್ಯಾ?”

ಯೆಹೋವನ ನೀತಿ ನಿಯಮಗಳು ನಿಮಗೆ ಏನಿಷ್ಟಾನೋ ಅದನ್ನ ಮಾಡೋಕೆ ಬಿಡದೆ ಇರೋ ಜೈಲಿನ ಕಂಬಿಗಳ ತರ ಇದ್ಯಾ? ಅಥವಾ ನಿಮ್ಮ ಜೀವ ಕಾಪಾಡೋ ಸಿಂಹದ ಬೋನಿನ ತರ ಇದ್ಯಾ? (ಪ್ಯಾರ 4 ನೋಡಿ)


5. (ಎ) ನೀವು ಯೆಹೋವನಿಗೆ ಹೇಗೆ ಸಮರ್ಪಿಸ್ಕೊಳ್ತೀರಾ? (ಬಿ) ಸಮರ್ಪಣೆಗೂ, ದೀಕ್ಷಾಸ್ನಾನಕ್ಕೂ ಏನು ವ್ಯತ್ಯಾಸ? (ಚಿತ್ರನೂ ನೋಡಿ.)

5 ನೀವು ಯೆಹೋವನಿಗೆ ಹೇಗೆ ಸಮರ್ಪಿಸ್ಕೊಳ್ತೀರಾ? ನೀವು ಪ್ರಾರ್ಥನೆಯಲ್ಲಿ ಯೆಹೋವನಿಗೆ, ‘ಇನ್ಮುಂದೆ ನಿನ್ನನ್ನೇ ಆರಾಧಿಸ್ತೀನಿ, ಯಾವಾಗ್ಲೂ ನಿನಗೆ ಮೊದಲನೇ ಸ್ಥಾನ ಕೊಡ್ತೀನಿ’ ಅಂತ ಮಾತು ಕೊಡ್ತೀರ. ಅಷ್ಟೇ ಅಲ್ಲ, “ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಮತ್ತು ಪೂರ್ಣ ಶಕ್ತಿಯಿಂದ” ಪ್ರೀತಿಸ್ತಾ ಇರ್ತಿನಿ ಅಂತ ಹೇಳ್ತೀರ. (ಮಾರ್ಕ 12:30) ನೀವು ಮಾಡ್ಕೊಳ್ಳೋ ಸಮರ್ಪಣೆ ನಿಮಗೆ ಮತ್ತು ಯೆಹೋವನಿಗೆ ಮಾತ್ರ ಗೊತ್ತಿರುತ್ತೆ. ಆದ್ರೆ ದೀಕ್ಷಾಸ್ನಾನ ತಗೊಂಡಾಗ ಎಲ್ರಿಗೂ ಗೊತ್ತಾಗುತ್ತೆ. ಸಮರ್ಪಣೆಯಲ್ಲಿ ನೀವು ಕೊಟ್ಟ ಮಾತನ್ನ ಹಗುರವಾಗಿ ತಗೊಬಾರದು. ಅದನ್ನ ಕೊನೇ ತನಕ ಉಳಿಸ್ಕೊಬೇಕು, ಯೆಹೋವನೂ ನಿಮ್ಮಿಂದ ಅದನ್ನೇ ಬಯಸ್ತಾನೆ.—ಪ್ರಸಂ. 5:4, 5.

ನೀವು ಪ್ರಾರ್ಥನೆಯಲ್ಲಿ ಯೆಹೋವನಿಗೆ, ‘ಇನ್ಮುಂದೆ ನಿನ್ನನ್ನೇ ಆರಾಧಿಸ್ತೀನಿ, ಯಾವಾಗ್ಲೂ ನಿನಗೆ ಮೊದಲನೇ ಸ್ಥಾನ ಕೊಡ್ತೀನಿ’ ಅಂತ ಮಾತು ಕೊಡೋದೇ ಸಮರ್ಪಣೆ (ಪ್ಯಾರ 5 ನೋಡಿ)


ನಾವ್ಯಾಕೆ ನಮ್ಮನ್ನ ಯೆಹೋವನಿಗೆ ಸಮರ್ಪಿಸ್ಕೊಬೇಕು?

6. ನಾವ್ಯಾಕೆ ನಮ್ಮನ್ನ ಯೆಹೋವನಿಗೆ ಸಮರ್ಪಿಸ್ಕೊಳ್ತೀವಿ?

6 ಯೆಹೋವನ ಮೇಲೆ ನಿಮಗೆ ಪ್ರೀತಿ ಇರೋದ್ರಿಂದಾನೇ ನೀವು ಆತನಿಗೆ ನಿಮ್ಮನ್ನ ಸಮರ್ಪಿಸ್ಕೊಳ್ತೀರ. ನಿಮಗೆ ಆತನ ಮೇಲಿರೋ ಪ್ರೀತಿ ಕುರುಡು ಪ್ರೀತಿಯಲ್ಲ. ಆ ಪ್ರೀತಿ ಆತನ ಬಗ್ಗೆ ಮತ್ತು ಆತನ ಉದ್ದೇಶಗಳ ಬಗ್ಗೆ “ಸರಿಯಾಗಿ” ತಿಳ್ಕೊಂಡಿದ್ರಿಂದ ಬಂದಿದೆ. (ಕೊಲೊ. 1:9) ಈ ರೀತಿ ಯೆಹೋವನ ಬಗ್ಗೆ ತಿಳ್ಕೊಂಡಾಗ ಯೆಹೋವ ನಿಜವಾಗ್ಲೂ ಇದ್ದಾನೆ, ಬೈಬಲನ್ನ ಬರೆಸಿರೋದು ಆತನೇ ಮತ್ತು ತನ್ನ ಸಂಘಟನೆಯಿಂದ ತನ್ನ ಉದ್ದೇಶಗಳನ್ನ ನೆರವೇರಿಸ್ತಿದ್ದಾನೆ ಅಂತ ನಿಮಗೆ ಚೆನ್ನಾಗಿ ಮನವರಿಕೆ ಆಯ್ತು.

7. ಸಮರ್ಪಣೆ ಮಾಡ್ಕೊಳ್ಳೋದಕ್ಕಿಂತ ಮುಂಚೆ ನಾವೇನು ಮಾಡಬೇಕು?

7 ಯೆಹೋವನಿಗೆ ಸಮರ್ಪಣೆ ಮಾಡ್ಕೊಳ್ಳೋರು ಬೈಬಲಲ್ಲಿರೋ ಮುಖ್ಯವಾದ ವಿಷ್ಯಗಳನ್ನ ತಿಳ್ಕೊಂಡಿರಬೇಕು. ಅದ್ರಲ್ಲಿರೋ ನಿಯಮಗಳನ್ನ ಪಾಲಿಸಬೇಕು. ಅವರು ಕಲ್ತಿದ್ದನ್ನ ಬೇರೆಯವ್ರಿಗೆ ಹೇಳೋಕೆ ತಮ್ಮಿಂದ ಆದಷ್ಟು ಪ್ರಯತ್ನ ಮಾಡಬೇಕು. (ಮತ್ತಾ. 28:19, 20) ಇದೆಲ್ಲಕ್ಕಿಂತ ಮುಖ್ಯವಾಗಿ ಅವ್ರಿಗೆ ಯೆಹೋವನ ಮೇಲೆ ಜಾಸ್ತಿ ಪ್ರೀತಿ ಇರಬೇಕು ಮತ್ತು ಆತನೊಬ್ಬನನ್ನೇ ಆರಾಧಿಸಬೇಕು ಅನ್ನೋ ಆಸೆನೂ ಇರಬೇಕು. ನಿಮಗೂ ಯೆಹೋವನ ಮೇಲೆ ಪ್ರೀತಿ ಇದ್ರೆ ಸಮರ್ಪಣೆ ಮಾಡ್ಕೊಳ್ಳೋಕೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ನೀವಾಗೇ ಮುಂದೆ ಬರ್ತೀರ. ಅಪ್ಪ ಅಮ್ಮನ್ನ, ಬೈಬಲ್‌ ಕಲಿಸೋರನ್ನ ಖುಷಿಪಡಿಸಬೇಕು ಅಂತಾನೋ ಅಥವಾ ನಿಮ್ಮ ಫ್ರೆಂಡ್ಸ್‌ ದೀಕ್ಷಾಸ್ನಾನ ತಗೊಳ್ತಿದ್ದಾರೆ ಅಂತಾನೋ ದೀಕ್ಷಾಸ್ನಾನ ತಗೊಳಲ್ಲ.

8. ಯೆಹೋವನಿಗೆ ಋಣಿಗಳಾಗಿದ್ರೆ ಸಮರ್ಪಣೆ ಮಾಡ್ಕೊಳ್ಳೋಕೆ ಹೇಗೆ ಸಹಾಯ ಆಗುತ್ತೆ? (ಕೀರ್ತನೆ 116:12-14)

8 ಯೆಹೋವ ನಿಮಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಯೋಚ್ನೆ ಮಾಡುವಾಗ, ಆತನಿಗೆ ನಿಮ್ಮನ್ನ ಸಮರ್ಪಿಸ್ಕೊಬೇಕು ಅನ್ನೋ ಆಸೆ ಬರುತ್ತೆ. (ಕೀರ್ತನೆ 116:12-14 ಓದಿ.) “ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ” ಕೊಟ್ಟಿರೋದು ಯೆಹೋವನೇ ಅಂತ ಬೈಬಲ್‌ ಹೇಳುತ್ತೆ. (ಯಾಕೋ. 1:17) ಯೆಹೋವ ಕೊಟ್ಟಿರೋದ್ರಲ್ಲೇ ದೊಡ್ಡ ಗಿಫ್ಟ್‌ ಯಾವುದು ಗೊತ್ತಾ? ಯೇಸು ಕ್ರಿಸ್ತನ ಬಿಡುಗಡೆ ಬೆಲೆ. ಆ ಬಿಡುಗಡೆ ಬೆಲೆಯಿಂದ ನಿಮಗೆ ಯೆಹೋವನ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಬೆಳೆಸ್ಕೊಳ್ಳೋಕೆ ಆಗಿದೆ, ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಸಿಕ್ಕಿದೆ. (1 ಯೋಹಾ. 4:9, 10, 19) ಯೆಹೋವ ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ನೆನಸ್ಕೊಂಡಾಗ ನಿಮ್ಮನ್ನ ಆತನಿಗೆ ಸಮರ್ಪಿಸ್ಕೊಳ್ಳೋಕೆ ಮುಂದೆ ಬರ್ತೀರ. (ಧರ್ಮೋ. 16:17; 2 ಕೊರಿಂ. 5:15) ನೀವು ಇನ್ನೂ ಯಾವ ವಿಷ್ಯಗಳಿಗೆಲ್ಲ ಯೆಹೋವನಿಗೆ ಋಣಿಗಳಾಗಿ ಇರಬಹುದು? ಅದನ್ನ ತಿಳ್ಕೊಳ್ಳೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪಾಠ 46ರ ಉಪಶೀರ್ಷಿಕೆ 4ರಲ್ಲಿ ಯೆಹೋವನಿಗೆ ನಿಮ್ಮಲ್ಲಿರುವ ಅಮೂಲ್ಯ ಉಡುಗೊರೆಗಳನ್ನು ಕೊಡಿ ಅನ್ನೋ ಮೂರು ನಿಮಿಷದ ವಿಡಿಯೋ ನೋಡಿ.

ಸಮರ್ಪಣೆ ಮಾಡ್ಕೊಳ್ಳೋಕೆ, ದೀಕ್ಷಾಸ್ನಾನ ತಗೊಳ್ಳೋಕೆ ನೀವು ರೆಡಿನಾ?

9. ಬೇರೆಯವರು ಸಮರ್ಪಣೆ ಮಾಡ್ಕೊಳ್ತಿದ್ದಾರೆ ಅಂತ ನಾವ್ಯಾಕೆ ಮಾಡ್ಕೊಬಾರದು?

9 ಕೆಲವೊಮ್ಮೆ ನಿಮಗೆ ‘ಸಮರ್ಪಣೆ ಮಾಡ್ಕೊಳ್ಳೋಕೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ನಾನಿನ್ನೂ ರೆಡಿ ಇಲ್ಲ’ ಅಂತ ಅನಿಸಬಹುದು. ಯಾಕಂದ್ರೆ ನಿಮಗೆ ಇನ್ನೂ ಕೆಲವು ಬದಲಾವಣೆಗಳನ್ನ ಮಾಡ್ಕೊಬೇಕು, ನಂಬಿಕೆ ಜಾಸ್ತಿ ಮಾಡ್ಕೊಬೇಕು ಅನ್ನೋ ಭಾವನೆ ಇರಬಹುದು. (ಕೊಲೊ. 2:6, 7) ಆದ್ರೆ ಎಲ್ರೂ ಒಂದೇ ತರ ಇರಲ್ಲ ಅನ್ನೋದನ್ನ ನೆನಪಿಡಿ. ಎಲ್ರಿಗೂ ಒಂದೇ ವಯಸ್ಸಲ್ಲಿ ಯೆಹೋವನಿಗೆ ಸಮರ್ಪಿಸ್ಕೊಂಡು, ದೀಕ್ಷಾಸ್ನಾನ ತಗೊಳ್ಳೋಕೆ ಆಗಲ್ಲ. ಕೆಲವ್ರಿಗೆ ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ ಸಮಯ ಹಿಡಿಯುತ್ತೆ. ಹಾಗಾಗಿ ಬೇರೆಯವ್ರ ಜೊತೆ ನಿಮ್ಮನ್ನ ಹೋಲಿಸ್ಕೊಬೇಡಿ. ನೀವು ಯಾವುದ್ರಲ್ಲಿ ಬದಲಾವಣೆ ಮಾಡ್ಕೊಬೇಕು ಅಂತ ಯೋಚಿಸಿ, ಆ ಬದಲಾವಣೆ ಮಾಡ್ಕೊಳ್ಳಿ.—ಗಲಾ. 6:4, 5.

10. ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಇಲ್ಲ ಅನಿಸಿದ್ರೂ ಏನು ಮಾಡಬೇಕು? (“ ಸತ್ಯದಲ್ಲಿ ಬೆಳೆದಿರುವವ್ರಿಗೆ ಸಹಾಯ” ಅನ್ನೋ ಚೌಕ ನೋಡಿ.)

10 ನೀವಿನ್ನೂ ಸಮರ್ಪಣೆ ಮಾಡ್ಕೊಳ್ಳೋಕೆ ರೆಡಿ ಇಲ್ಲ ಅಂತ ಅನಿಸಿದ್ರೂ ಆ ಗುರಿ ಬಿಟ್ಟುಬಿಡಬೇಡಿ. ‘ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಸಹಾಯ ಮಾಡಪ್ಪಾ’ ಅಂತ ಯೆಹೋವನಿಗೆ ಪ್ರಾರ್ಥಿಸಿ. (ಫಿಲಿ. 2:13; 3:16) ಆ ಪ್ರಾರ್ಥನೆಗಳನ್ನ ಯೆಹೋವ ಕೇಳಿಸ್ಕೊಳ್ತಾನೆ, ಖಂಡಿತ ಉತ್ರ ಕೊಡ್ತಾನೆ.—1 ಯೋಹಾ. 5:14.

ಕೆಲವರು ಯಾಕೆ ಹಿಂಜರಿತಾರೆ?

11. ಯೆಹೋವನಿಗೆ ನಿಯತ್ತಾಗಿರೋಕೆ ಆತನು ನಮಗೆ ಹೇಗೆ ಸಹಾಯ ಮಾಡ್ತಾನೆ?

11 ಕೆಲವರು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಇದ್ರೂ ಹಿಂಜರಿತಾರೆ. ಯಾಕಂದ್ರೆ ‘ನಾನೆಲ್ಲಿ ಮುಂದೆ ದೊಡ್ಡ ತಪ್ಪು ಮಾಡಿಬಿಡ್ತಿನೋ, ಬಹಿಷ್ಕಾರ ಆಗಿಬಿಡುತ್ತೋ’ ಅನ್ನೋ ಭಯ ಅವ್ರಿಗಿರಬಹುದು. ಆದ್ರೆ ನೀವು ಭಯ ಪಡಬೇಡಿ. ‘ತನ್ನನ್ನ ಆರಾಧಿಸುವವರು ಹೇಗಿರಬೇಕೋ ಹಾಗೆ ನಡ್ಕೊಳ್ಳೋಕೆ ಮತ್ತು ತನ್ನನ್ನ ಖುಷಿಪಡಿಸೋಕೆ’ ಯೆಹೋವನೇ ನಿಮಗೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಕೊಲೊ. 1:10) ಯಾವಾಗ್ಲೂ ಸರಿಯಾಗಿರೋದನ್ನೇ ಮಾಡೋಕೆ, ತನಗೆ ನಿಯತ್ತಾಗಿರೋಕೆ ಯೆಹೋವ ನಿಮಗೆ ಶಕ್ತಿನೂ ಕೊಡ್ತಾನೆ. ಆತನು ಈಗಾಗ್ಲೆ ತುಂಬ ಜನ್ರಿಗೆ ಸಹಾಯ ಮಾಡಿದ್ದಾನೆ. (1 ಕೊರಿಂ. 10:13) ಅದಕ್ಕೇ ಬಹಿಷ್ಕಾರ ಆಗುವವ್ರ ಸಂಖ್ಯೆನೂ ಕಮ್ಮಿ ಇದೆ.

12. ನಾವು ದೊಡ್ಡ ತಪ್ಪು ಮಾಡ್ದೇ ಇರೋ ತರ ಹೇಗೆ ನೋಡ್ಕೋಬಹುದು?

12 ನಾವೆಲ್ರೂ ಅಪರಿಪೂರ್ಣರಾಗಿರೋದ್ರಿಂದ ನಮ್ಮ ಮನಸ್ಸಿಗೆ ಕೆಟ್ಟ ವಿಷ್ಯಗಳು ಬರೋದು ಸಹಜನೇ. (ಯಾಕೋ. 1:14) ಆದ್ರೆ ಅದನ್ನ ಮಾಡೋದು ಬಿಡೋದು ನಿಮಗೆ ಬಿಟ್ಟಿದ್ದು. ಯಾಕಂದ್ರೆ ನಿಮ್ಮ ಜೀವನ ಹೇಗಿರಬೇಕು, ಏನು ಮಾಡಬೇಕು ಅನ್ನೋದು ನಿಮ್ಮ ಕೈಯಲ್ಲಿದೆ. ಕೆಲವರು ತಮ್ಮ ಮನಸ್ಸಿಗೆ ಕೆಟ್ಟ ಆಸೆಗಳು ಬಂದಾಗ ‘ನಾವೇನೂ ಮಾಡಕ್ಕಾಗಲ್ಲ’ ಅಂತ ಹೇಳ್ತಾರೆ. ಆದ್ರೆ, ನೀವು ಆ ಆಸೆಗಳನ್ನ ಹತೋಟಿಯಲ್ಲಿ ಇಟ್ಕೊಬಹುದು. ಆ ಆಸೆಗಳು ಬಂದ್ರೂ ತಪ್ಪು ಮಾಡ್ದೇ ಇರೋ ಹಾಗೆ ನೋಡ್ಕೋಬಹುದು. ಅದಕ್ಕೆ ನೀವು ಇನ್ನೂ ಕೆಲವು ವಿಷ್ಯಗಳನ್ನ ಮಾಡಬಹುದು. ದಿನಾ ಪ್ರಾರ್ಥನೆ ಮಾಡಿ, ದೇವರ ವಾಕ್ಯ ಓದಿ, ಸಿಹಿಸುದ್ದಿ ಸಾರ್ತಾ ಇರಿ ಮತ್ತು ಕೂಟಗಳಿಗೂ ಹೋಗಿ. ಇದನ್ನೆಲ್ಲ ಮಾಡಿದಾಗ ಸಮರ್ಪಣೆಯ ಸಮಯದಲ್ಲಿ ನೀವು ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಸಹಾಯ ಆಗುತ್ತೆ. ಅದಷ್ಟೇ ಅಲ್ಲ ಯೆಹೋವ ಕೂಡ ನಿಮಗೆ ಸಹಾಯ ಮಾಡ್ತಾನೆ ಅನ್ನೋದನ್ನ ಮರಿಬೇಡಿ.—ಗಲಾ. 5:16.

13. ಯೋಸೇಫನಿಂದ ನಾವೇನು ಕಲಿಬಹುದು?

13 ಕೆಟ್ಟ ಆಸೆಗಳು ಬರುವಾಗ ಏನು ಮಾಡಬೇಕು ಅಂತ ಈಗಿಂದಾನೇ ತಯಾರಾಗಿದ್ರೆ, ನಾವು ಸಮರ್ಪಣೆಯಲ್ಲಿ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಆಗುತ್ತೆ. ಈ ತರ ಮಾಡಿದ ತುಂಬ ಜನ್ರ ಬಗ್ಗೆ ಬೈಬಲಲ್ಲಿ ಇದೆ. ಅವರು ಅಪರಿಪೂರ್ಣರಾಗಿದ್ರೂ ತಪ್ಪು ಮಾಡೋಕೆ ಹೋಗ್ಲಿಲ್ಲ. ಇದಕ್ಕೊಂದು ಒಳ್ಳೆ ಉದಾಹರಣೆ ಯೋಸೇಫ. ಪೋಟೀಫರನ ಹೆಂಡ್ತಿ ಅವನಿಗೆ ಲೈಂಗಿಕ ಅನೈತಿಕತೆ ಮಾಡೋಕೆ ತುಂಬ ಒತ್ತಾಯ ಮಾಡ್ತಾ ಇದ್ದಳು. ಆದ್ರೆ ಯೋಸೇಫ “ಅದಕ್ಕೆ ಒಪ್ಪದೆ . . . ‘ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ’” ಅಂತ ಹೇಳಿದ. (ಆದಿ. 39:8-10) ತಪ್ಪಾದ ಆಸೆಗಳು ಬಂದಾಗ ಏನು ಮಾಡಬೇಕು ಅಂತ ಯೋಸೇಫನಿಗೆ ಮುಂಚೆನೇ ಗೊತ್ತಿತ್ತು. ಅದಕ್ಕೇ ಪೋಟೀಫರನ ಹೆಂಡತಿ ಒತ್ತಾಯ ಮಾಡಿದಾಗ, ಅವನು ದೇವರ ವಿರುದ್ಧ ತಪ್ಪು ಮಾಡೋಕೆ ಹೋಗಲಿಲ್ಲ, ಸರಿಯಾಗಿ ಇರೋದನ್ನೇ ಮಾಡಿದ.

14. ಕೆಟ್ಟ ಆಸೆಗಳಿಗೆ ಬಲಿ ಆಗದೆ ಇರೋಕೆ ಏನು ಮಾಡಬೇಕು?

14 ಯೋಸೇಫನ ತರ ಇರೋಕೆ ನಾವೇನು ಮಾಡಬೇಕು? ಕೆಟ್ಟ ಆಸೆಗಳು ಬಂದಾಗ ಏನು ಮಾಡಬೇಕು ಅಂತ ಈಗ್ಲೇ ಯೋಚ್ನೆ ಮಾಡಬೇಕು. ಯೆಹೋವನಿಗೆ ಇಷ್ಟ ಇಲ್ಲದೆ ಇರೋದನ್ನ ಯಾರಾದ್ರೂ ಮಾಡೋಕೆ ಹೇಳಿದ್ರೆ, ‘ಮಾಡಲ್ಲ’ ಅಂತ ಹೇಳಿ. ಅದ್ರ ಬಗ್ಗೆ ಯೋಚ್ನೆ ಮಾಡೋಕೂ ಹೋಗಬೇಡಿ. (ಕೀರ್ತ. 97:10; 119:165) ಆಗ ಕೆಟ್ಟ ಆಸೆಗಳಿಗೆ ಬಲಿಯಾಗಿ ತಪ್ಪು ಮಾಡೋಕೆ ಹೋಗಲ್ಲ. ಯಾಕಂದ್ರೆ ಏನು ಮಾಡಬೇಕು ಅಂತ ನಮಗೆ ಮುಂಚೆನೇ ಗೊತ್ತಿರುತ್ತೆ.

15. ನಾವು ಯೆಹೋವನನ್ನ ಶ್ರದ್ಧೆಯಿಂದ ಆರಾಧಿಸ್ತಿದ್ದೀವಿ ಅಂತ ಹೇಗೆ ತೋರಿಸ್ಕೊಡಬಹುದು? (ಇಬ್ರಿಯ 11:6)

15 ಬೈಬಲಲ್ಲಿ ಇರೋದು ಸತ್ಯ ಅಂತ ನಿಮಗೆ ಈಗಾಗ್ಲೇ ಮನವರಿಕೆ ಆಗಿರಬಹುದು. ಅಷ್ಟೇ ಅಲ್ಲ, ಯೆಹೋವನ ಸೇವೆ ಮಾಡಬೇಕು ಅನ್ನೋ ಆಸೆನೂ ಇರಬಹುದು. ಆದ್ರೂ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ಹಿಂಜರಿತಿದ್ದೀರಾ? ಹಾಗಿದ್ರೆ ದಾವೀದನ ತರ “ದೇವರೇ, ನನ್ನನ್ನ ಪರಿಶೋಧಿಸಿ ನನ್ನ ಮನಸ್ಸನ್ನ ತಿಳ್ಕೊ. ನನ್ನನ್ನ ಪರೀಕ್ಷಿಸಿ ನನ್ನ ಚಿಂತೆಗಳನ್ನ ಅರ್ಥ ಮಾಡ್ಕೊ. ಕೆಟ್ಟ ದಾರಿಗೆ ನಡಿಸೋ ವಿಷ್ಯ ಏನಾದ್ರೂ ನನ್ನಲ್ಲಿ ಇದ್ಯಾ ಅಂತ ನೋಡು, ಶಾಶ್ವತವಾಗಿ ಉಳಿಯೋ ದಾರಿಯಲ್ಲಿ ನನ್ನನ್ನ ನಡಿಸು” ಅಂತ ಪ್ರಾರ್ಥಿಸಿ. (ಕೀರ್ತ. 139:23, 24) ಯಾಕಂದ್ರೆ ಯೆಹೋವ ತನ್ನನ್ನ “ಶ್ರದ್ಧೆಯಿಂದ ಆರಾಧಿಸೋರನ್ನ” ಆಶೀರ್ವದಿಸ್ತಾನೆ. ಹಾಗಾಗಿ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ನಿಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದಾಗ ಯೆಹೋವನನ್ನ ಶ್ರದ್ಧೆಯಿಂದ ಆರಾಧಿಸ್ತಿದ್ದೀರ ಅಂತ ತೋರಿಸ್ಕೊಡ್ತೀರ.—ಇಬ್ರಿಯ 11:6 ಓದಿ.

ದೇವರಿಗೆ ಹತ್ರ ಆಗ್ತಾ ಇರಿ

16-17. ಸತ್ಯದಲ್ಲಿ ಬೆಳೆದಿರುವವ್ರನ್ನ ಯೆಹೋವ ಹೇಗೆ ತನ್ನ ಕಡೆ ಸೆಳ್ಕೊತಾನೆ? (ಯೋಹಾನ 6:44)

16 ‘ನನ್ನ ಅಪ್ಪ ಕರೆಯದೆ ಯಾರೂ ನನ್ನ ಹತ್ರ ಬರೋಕೆ ಆಗಲ್ಲ’ ಅಂತ ಯೇಸು ಹೇಳಿದನು. (ಯೋಹಾನ 6:44 ಓದಿ.) ಅಂದ್ರೆ ಯೆಹೋವ ಪ್ರತಿಯೊಬ್ರಲ್ಲೂ ಏನೋ ಒಂದು ಒಳ್ಳೇದನ್ನ ನೋಡಿ ತನ್ನ ಕಡೆಗೆ ಸೆಳೆದಿದ್ದಾನೆ. ಆತನು ನಮ್ಮನ್ನ “ತನ್ನ ವಿಶೇಷ ಸೊತ್ತಾಗಿ” ಅಥವಾ “ಅಮೂಲ್ಯ ಆಸ್ತಿಯಾಗಿ” ನೋಡ್ತಿದ್ದಾನೆ. (ಧರ್ಮೋ. 7:6 ಮತ್ತು ಪಾದಟಿಪ್ಪಣಿ) ಅದ್ರಲ್ಲಿ ನೀವೂ ಒಬ್ರಾಗಿದ್ದೀರ ಅಂತ ಕೇಳಿದಾಗ ಎಷ್ಟು ಖುಷಿ ಆಗುತ್ತೆ ಅಲ್ವಾ!

17 ನಿಮ್ಮಲ್ಲಿ ಕೆಲವರು ಸತ್ಯದಲ್ಲೇ ಬೆಳೆದಿರಬಹುದು. ಹಾಗಾಗಿ ನಿಮಗೆ ‘ನನ್ನ ಅಪ್ಪಅಮ್ಮ ಯೆಹೋವನ ಸಾಕ್ಷಿಗಳಾಗಿರೋದ್ರಿಂದ ನಾನು ಯೆಹೋವನ ಸೇವೆ ಮಾಡ್ತಿದ್ದೀನಿ ಅಷ್ಟೇ. ನನ್ನನ್ನ ಆತನು ಸೆಳೆದಿಲ್ಲ’ ಅಂತ ಅನಿಸಬಹುದು. ಆದ್ರೆ, “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಯಾಕೋ. 4:8; 1 ಪೂರ್ವ. 28:9) ಯೆಹೋವನಿಗೆ ಹತ್ರ ಆಗೋಕೆ ನೀವು ಮೊದಲನೇ ಹೆಜ್ಜೆ ತಗೊಂಡ್ರೆ, ಆತನೂ ನಿಮಗೆ ಹತ್ರ ಆಗೋಕೆ ಮುಂದೆ ಬರ್ತಾನೆ. ಯೆಹೋವ ನಿಮ್ಮನ್ನ ಒಂದು ಗುಂಪಲ್ಲಿರೋ ಯಾರೋ ಒಬ್ಬ ವ್ಯಕ್ತಿ ಅನ್ನೋ ತರ ನೋಡಲ್ಲ. ನಿಮ್ಮಲ್ಲಿ ಪ್ರತಿಯೊಬ್ರನ್ನೂ ಆತನು ಗಮನಿಸ್ತಾನೆ ಮತ್ತು ತನ್ನ ಕಡೆಗೆ ಸೆಳಿತಾನೆ. ಹಾಗಾಗಿ ಯಾಕೋಬ 4:8ರಲ್ಲಿ ಹೇಳೋ ಹಾಗೆ ನೀವು ಯೆಹೋವನಿಗೆ ಹತ್ರ ಆಗಿ, ಆಗ ಆತನು ನಿಮಗೆ ಹತ್ರ ಆಗ್ತಾನೆ.—2 ಥೆಸಲೊನೀಕ 2:13 ಹೋಲಿಸಿ.

18. ಮುಂದಿನ ಲೇಖನದಲ್ಲಿ ಏನು ಕಲಿತೀವಿ? (ಕೀರ್ತನೆ 40:8)

18 ಯೇಸು ಕೂಡ ಯೆಹೋವನಿಗೆ ಏನಿಷ್ಟಾನೋ ಅದನ್ನ ಮಾಡೋಕೆ ತನ್ನನ್ನೇ ಅರ್ಪಿಸ್ಕೊಂಡನು. ನೀವೂ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡಾಗ ಯೇಸು ತರ ಇದ್ದೀರ ಅಂತ ತೋರಿಸ್ಕೊಡ್ತೀರ. (ಕೀರ್ತನೆ 40:8 ಓದಿ; ಇಬ್ರಿ. 10:7) ಹಾಗಾಗಿ ಮುಂದಿನ ಲೇಖನದಲ್ಲಿ ದೀಕ್ಷಾಸ್ನಾನ ಆದ್ಮೇಲೂ ಯೆಹೋವನ ಸೇವೆ ಮಾಡ್ತಾ ಇರೋಕೆ ಯಾವುದು ಸಹಾಯ ಮಾಡುತ್ತೆ ಅಂತ ನೋಡೋಣ.

ನೀವೇನು ಹೇಳ್ತೀರಾ?

  • ಸಮರ್ಪಣೆ ಅಂದ್ರೆ ಏನು?

  • ಯೆಹೋವನಿಗೆ ಋಣಿಗಳಾಗಿದ್ರೆ ಸಮರ್ಪಣೆ ಮಾಡ್ಕೊಳ್ಳೋಕೆ ಹೇಗೆ ಸಹಾಯ ಆಗುತ್ತೆ?

  • ದೊಡ್ಡ ತಪ್ಪು ಮಾಡ್ದೇ ಇರೋಕೆ ಯಾವುದು ಸಹಾಯ ಮಾಡುತ್ತೆ?

ಗೀತೆ 60 ಆತನು ನಿನ್ನನ್ನು ಬಲಪಡಿಸುವನು