ಅಧ್ಯಯನ ಲೇಖನ 38
“ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು”
“ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು.”—ಮತ್ತಾ. 11:28.
ಗೀತೆ 84 “ನನಗೆ ಮನಸ್ಸುಂಟು”
ಕಿರುನೋಟ *
1. ಮತ್ತಾಯ 11:28-30ರ ಪ್ರಕಾರ ಯೇಸು ಏನೆಂದು ಮಾತು ಕೊಟ್ಟನು?
ಯೇಸು ಒಮ್ಮೆ ತನಗೆ ಕಿವಿಗೊಡುತ್ತಿದ್ದ ಜನರಿಗೆ ಹೀಗೆ ಮಾತು ಕೊಟ್ಟನು: “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು.” (ಮತ್ತಾಯ 11:28-30 ಓದಿ.) ಆತನು ಕೊಟ್ಟ ಆ ಮಾತು ಸುಳ್ಳು ಆಶ್ವಾಸನೆ ಆಗಿರಲಿಲ್ಲ. ಉದಾಹರಣೆಗೆ, ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಸ್ತ್ರೀಗೆ ಆತನು ಏನು ಮಾಡಿದನೆಂದು ನೋಡಿ.
2. ಕಾಯಿಲೆಯಿಂದ ಬಳಲುತ್ತಿದ್ದ ಸ್ತ್ರೀಗೆ ಯೇಸು ಏನು ಮಾಡಿದನು?
2 ಆ ಸ್ತ್ರೀಗೆ ಸಹಾಯ ಬೇಕೇ ಬೇಕಿತ್ತು. ಆಕೆ ತನ್ನ ಕಾಯಿಲೆ ಗುಣ ಆಗಲಿಕ್ಕಾಗಿ ಅನೇಕ ವೈದ್ಯರ ಹತ್ತಿರ ಹೋಗಿದ್ದಳು. ಹೀಗೆ 12 ವರ್ಷ ಕಳೆದರೂ ಕಾಯಿಲೆ ಮಾತ್ರ ಗುಣ ಆಗಿರಲಿಲ್ಲ. ಧರ್ಮಶಾಸ್ತ್ರದ ನಿಯಮದ ಪ್ರಕಾರ ಅವಳು ಅಶುದ್ಧಳಾಗಿದ್ದಳು. (ಯಾಜ. 15:25) ಕೊನೆಗೂ ಅವಳು, ಯೇಸು ಕಾಯಿಲೆ ಇರುವವರನ್ನು ವಾಸಿಮಾಡುತ್ತಾನೆ ಅಂತ ಕೇಳಿಸಿಕೊಂಡಳು. ತಡಮಾಡದೇ ಆತನನ್ನು ಹುಡುಕುತ್ತಾ ಹೋದಳು. ಆತನು ಸಿಕ್ಕಿದಾಗ ಅವಳು ಆತನ ಅಂಗಿಯ ಅಂಚನ್ನು ಮುಟ್ಟಿದಳು. ಕೂಡಲೇ ಅವಳ ಕಾಯಿಲೆ ಗುಣ ಆಯ್ತು! ಯೇಸು ಅವಳನ್ನು ಗುಣ ಮಾಡಿದ್ದು ಮಾತ್ರ ಅಲ್ಲ, ಅವಳ ಜೊತೆ ಗೌರವ, ಪ್ರೀತಿಯಿಂದ ನಡಕೊಂಡನು. ಉದಾಹರಣೆಗೆ, ಅವಳ ಜೊತೆ ಮಾತಾಡುವಾಗ ಪ್ರೀತಿ, ಗೌರವದಿಂದ “ಮಗಳೇ” ಎಂದನು. ಆಗ ಆ ಸ್ತ್ರೀಗೆ ಎಷ್ಟು ಚೈತನ್ಯ-ಬಲ ಸಿಕ್ಕಿರಬಹುದಲ್ವಾ!—ಲೂಕ 8:43-48.
3. ಯಾವ ಪ್ರಶ್ನೆಗಳಿಗೆ ನಾವು ಉತ್ತರ ತಿಳಿಯಲಿದ್ದೇವೆ?
3 ಆ ಸ್ತ್ರೀಯೇ ಯೇಸುವಿನ ಹತ್ತಿರ ಹೋಗಿದ್ದಳು. ಅಂದರೆ ಅಲ್ಲಿಗೆ ಹೋಗಲು ಅವಳು ಮೊದಲ ಹೆಜ್ಜೆ ತಗೊಂಡಳು ಅಥವಾ ಪ್ರಯತ್ನ ಹಾಕಿದಳು. ಅವಳಂತೆ ನಾವು ಸಹ ಯೇಸುವಿನ ಹತ್ತಿರ ಹೋಗಲು ಪ್ರಯತ್ನ ಹಾಕಬೇಕು. ನಮ್ಮೀ ಕಾಲದಲ್ಲಿ ಯೇಸು ತನ್ನ ‘ಹತ್ತಿರ ಬರುವವರ’ ಕಾಯಿಲೆಗಳನ್ನು ಅದ್ಭುತವಾಗಿ ಗುಣ ಮಾಡಲ್ಲ. ಆದರೆ, “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು” ಎಂದು ಈಗಲೂ ಆಮಂತ್ರಿಸುತ್ತಿದ್ದಾನೆ. ನಾವು ಯೇಸುವಿನ ಹತ್ತಿರ ಹೋಗುವುದು ಹೇಗೆ? ‘ನನ್ನ
ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ’ ಎಂದು ಯೇಸು ಹೇಳಿದ ಮಾತಿನ ಅರ್ಥವೇನು? ಯೇಸುವಿನಿಂದ ನಾವೇನು ಕಲಿಯಬಹುದು? ಆತನು ನಮಗೆ ಕೊಟ್ಟ ಕೆಲಸ ಚೈತನ್ಯ ನೀಡುತ್ತದೆ ಎಂದು ಹೇಗೆ ಹೇಳಬಹುದು? ಯೇಸುವಿನ ನೊಗದಡಿಯಲ್ಲಿದ್ದು ಚೈತನ್ಯ ಪಡೆಯುತ್ತಾ ಇರುವುದು ಹೇಗೆ? ಈ ಐದು ಪ್ರಶ್ನೆಗಳಿಗೆ ನಾವು ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ.“ನನ್ನ ಬಳಿಗೆ ಬನ್ನಿರಿ”
4-5. ಯೇಸುವಿನ ಹತ್ತಿರ ಹೋಗುವ ಕೆಲವು ವಿಧಗಳು ಯಾವುವು?
4 ಯೇಸುವಿನ ಹತ್ತಿರ ಹೋಗುವ ಒಂದು ವಿಧ ಆತನು ಹೇಳಿದ ಮತ್ತು ಮಾಡಿದ ವಿಷಯಗಳ ಬಗ್ಗೆ ನಮ್ಮಿಂದಾಗುವಷ್ಟು ಕಲಿಯುವುದೇ ಆಗಿದೆ. (ಲೂಕ 1:1-4) ಇದನ್ನು ನಮಗೋಸ್ಕರ ಬೇರೆಯವರು ಮಾಡಲು ಸಾಧ್ಯವಿಲ್ಲ. ಆತನ ಬಗ್ಗೆ ನಾವೇ ಕಲಿಯಬೇಕು. ಅಷ್ಟೇ ಅಲ್ಲ, ದೀಕ್ಷಾಸ್ನಾನ ಪಡೆದು ಕ್ರಿಸ್ತನ ಶಿಷ್ಯರಾಗುವ ಮೂಲಕ ಸಹ ನಾವು ಯೇಸುವಿನ ಹತ್ತಿರ ಹೋಗಬಹುದು.
5 ಯೇಸುವಿನ ಹತ್ತಿರ ಹೋಗುವ ಇನ್ನೊಂದು ವಿಧ ನಮಗೆ ಸಹಾಯ ಬೇಕಿದ್ದಾಗ ಹಿರಿಯರಿಂದ ಅದನ್ನು ಕೇಳಿ ಪಡೆಯುವುದೇ ಆಗಿದೆ. ಯೇಸು ತನ್ನ ಕುರಿಗಳನ್ನು ಪರಿಪಾಲಿಸಲು “ಮನುಷ್ಯರಲ್ಲಿ ದಾನಗಳನ್ನು” ಉಪಯೋಗಿಸುತ್ತಾನೆ. (ಎಫೆ. 4:7, 8, 11; ಯೋಹಾ. 21:16; 1 ಪೇತ್ರ 5:1-3) ಆದ್ದರಿಂದ ನಾವೇ ಮುಂದೆ ಹೋಗಿ ಸಹಾಯವನ್ನು ಕೇಳಬೇಕು. ಹಿರಿಯರೇ ನಮ್ಮ ಮನಸ್ಸನ್ನು ಅರ್ಥಮಾಡಿಕೊಂಡು ನಮ್ಮ ಅಗತ್ಯಗಳನ್ನು ತಿಳಿದುಕೊಳ್ಳಬೇಕು ಎಂದು ನಾವು ನಿರೀಕ್ಷಿಸಬಾರದು. ಜುಲ್ಯನ್ ಎಂಬ ಸಹೋದರನ ಉದಾಹರಣೆ ನೋಡಿ. “ಆರೋಗ್ಯ ಸಮಸ್ಯೆಯಿಂದಾಗಿ ನಾನು ಬೆತೆಲ್ ಬಿಡಬೇಕಾಯಿತು. ಆಗ ನನ್ನ ಸ್ನೇಹಿತನೊಬ್ಬ ನನಗೆ, ‘ಪರಿಪಾಲನಾ ಭೇಟಿ ಮಾಡುವಂತೆ ಹಿರಿಯರ ಹತ್ತಿರ ಕೇಳು’ ಅಂತ ಹೇಳಿದನು. ನನಗೇನೂ ಅದರ ಅಗತ್ಯ ಇಲ್ಲ ಅಂತ ಮೊದಲು ನೆನಸಿದೆ. ಆದರೆ ನಂತರ ಹಿರಿಯರ ಹತ್ತಿರ ಸಹಾಯ ಕೇಳಿದೆ. ಆ ಪರಿಪಾಲನಾ ಭೇಟಿ ನನಗೆ ಸಿಕ್ಕಿರುವ ಉಡುಗೊರೆಗಳಲ್ಲೇ ಅತ್ಯುತ್ತಮ ಉಡುಗೊರೆ ಆಗಿತ್ತು” ಎನ್ನುತ್ತಾರೆ ಆ ಸಹೋದರ. ಜುಲ್ಯನ್ರನ್ನು ಭೇಟಿ ಮಾಡಿದ ಸಹೋದರರಂಥ ನಿಷ್ಠಾವಂತ ಹಿರಿಯರು ‘ಕ್ರಿಸ್ತನ ಮನಸ್ಸನ್ನು’ ನಾವು ತಿಳಿಯಲು ಅಂದರೆ ಆತನಂತೆ ಯೋಚಿಸಲು ಮತ್ತು ನಡಕೊಳ್ಳಲು ಸಹಾಯ ಮಾಡುತ್ತಾರೆ. (1 ಕೊರಿಂ. 2:16; 1 ಪೇತ್ರ 2:21) ಅವರು ಮಾಡುವ ಇಂಥ ಸಹಾಯ ನಿಜವಾಗಿಯೂ ಒಂದು ಅತ್ಯುತ್ತಮ ಉಡುಗೊರೆಯೇ ಆಗಿದೆ.
‘ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ’
6. ‘ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ’ ಎಂಬ ಯೇಸುವಿನ ಮಾತಿನ ಅರ್ಥ ಏನಾಗಿರಬಹುದು?
6 ‘ನನ್ನ ನೊಗವನ್ನು * ನಿಮ್ಮ ಮೇಲೆ ತೆಗೆದುಕೊಳ್ಳಿ’ ಎಂಬ ಯೇಸುವಿನ ಮಾತಿನ ಅರ್ಥ ‘ನನ್ನ ಅಧಿಕಾರಕ್ಕೆ ತಲೆಬಾಗಿ’ ಎಂದಾಗಿರಬಹುದು. ಇಲ್ಲವೆ ‘ನನ್ನ ಜೊತೆ ನೊಗದಡಿಗೆ ಬಾ, ಇಬ್ಬರೂ ಸೇರಿ ಯೆಹೋವನಿಗಾಗಿ ಕೆಲಸ ಮಾಡೋಣ’ ಎಂದಾಗಿರಬಹುದು. ಇವೆರಡರಲ್ಲಿ ನಿಜವಾದ ಅರ್ಥ ಯಾವುದೇ ಆಗಿದ್ದರೂ ನಾವು ಕೆಲಸ ಮಾಡಬೇಕೆನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
7. (ಎ) ಮತ್ತಾಯ 28:18-20ರ ಪ್ರಕಾರ ಯೇಸು ನಮಗೆ ಯಾವ ಕೆಲಸ ಕೊಟ್ಟಿದ್ದಾನೆ? (ಬಿ) ನಾವು ಯಾವ ಖಾತ್ರಿಯಿಂದ ಇರಬಹುದು?
7 ನಾವು ನಮ್ಮ ಜೀವನವನ್ನೇ ಯೆಹೋವನಿಗೆ ಸಮರ್ಪಿಸಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ಯೇಸು ತನ್ನ ಬಳಿಗೆ ಬರುವಂತೆ ಕೊಟ್ಟಿರುವ ಆಮಂತ್ರಣವನ್ನು ಸ್ವೀಕರಿಸಬಹುದು. ಯೇಸು ಈ ಆಮಂತ್ರಣವನ್ನು ಎಲ್ಲರಿಗೂ ಕೊಟ್ಟಿದ್ದಾನೆ. ಯೆಹೋವನ ಸೇವೆ ಮಾಡಲು ನಿಜವಾಗಿಯೂ ಬಯಸುವ ಯಾರನ್ನೂ ಯೇಸು ತಿರಸ್ಕರಿಸುವುದಿಲ್ಲ. (ಯೋಹಾ. 6:37, 38) ಯೆಹೋವನು ಯೇಸುವಿಗೆ ಕೊಟ್ಟ ಕೆಲಸದಲ್ಲಿ ಭಾಗವಹಿಸುವ ಅವಕಾಶ ಕ್ರಿಸ್ತನ ಎಲ್ಲಾ ಹಿಂಬಾಲಕರಿಗೂ ಕೊಡಲಾಗಿದೆ. ಯೇಸು ಯಾವಾಗಲೂ ನಮ್ಮ ಜೊತೆ ಇದ್ದು ಆ ಕೆಲಸವನ್ನು ಮಾಡಲು ಸಹಾಯ ನೀಡುತ್ತಾನೆ ಎಂದು ನಾವು ಖಾತ್ರಿಯಿಂದಿರಬಹುದು.—ಮತ್ತಾಯ 28:18-20 ಓದಿ.
“ನನ್ನಿಂದ ಕಲಿಯಿರಿ”
8-9. (ಎ) ಯೇಸುವಿನ ಹತ್ತಿರಕ್ಕೆ ದೀನ ಜನರು ಯಾಕೆ ಸೆಳೆಯಲ್ಪಟ್ಟರು? (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
8 ದೀನ ಜನರು ಯೇಸುವಿನ ಹತ್ತಿರಕ್ಕೆ ಸೆಳೆಯಲ್ಪಟ್ಟರು. (ಮತ್ತಾ. 19:13, 14; ಲೂಕ 7:37, 38) ಯಾಕೆ? ಇದನ್ನು ತಿಳಿಯಲಿಕ್ಕಾಗಿ ಯೇಸು ಮತ್ತು ಫರಿಸಾಯರ ಮಧ್ಯೆ ಏನೆಲ್ಲಾ ವ್ಯತ್ಯಾಸ ಇತ್ತೆಂದು ಯೋಚಿಸಿ. ಆ ಧಾರ್ಮಿಕ ಮುಖಂಡರು ಪ್ರೀತಿನೇ ಇಲ್ಲದವರೂ ಅಹಂಕಾರಿಗಳೂ ಆಗಿದ್ದರು. (ಮತ್ತಾ. 12:9-14) ಯೇಸು ಪ್ರೀತಿಯ ದೀನ ವ್ಯಕ್ತಿಯಾಗಿದ್ದನು. ಫರಿಸಾಯರು ದೊಡ್ಡ ಸ್ಥಾನ ಪಡೆಯಲು ಹಾತೊರೆಯುವವರೂ, ಸಮಾಜದಲ್ಲಿ ತಮಗಿರುವ ಸ್ಥಾನವನ್ನು ತುಂಬ ಇಷ್ಟಪಡುವವರೂ ಆಗಿದ್ದರು. ಯೇಸು ದೊಡ್ಡ ಸ್ಥಾನಕ್ಕಾಗಿ ಹಾತೊರೆಯಬೇಡಿ, ದೀನರಾಗಿದ್ದು ಇತರರ ಸೇವೆ ಮಾಡಿ ಎಂದು ತನ್ನ ಶಿಷ್ಯರಿಗೆ ಕಲಿಸಿದನು. (ಮತ್ತಾ. 23:2, 6-11) ಫರಿಸಾಯರು ಇತರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು. ಅವರ ಮಾತಿಗೆ ಕಿವಿಗೊಡದಿದ್ದರೆ ಏನಾಗುತ್ತೋ ಎಂದು ಜನರು ಭಯಪಡುತ್ತಿದ್ದರು. (ಯೋಹಾ. 9:13, 22) ಯೇಸು ಜನರೊಂದಿಗೆ ಪ್ರೀತಿಯಿಂದ ನಡಕೊಳ್ಳುತ್ತಾ, ದಯೆಯಿಂದ ಮಾತಾಡುವ ಮೂಲಕ ಅವರಿಗೆ ಚೈತನ್ಯ ನೀಡಿದನು.
9 ಯೇಸುವಿನ ಈ ಮಾದರಿಯನ್ನು ನೀವು ಅನುಕರಿಸುತ್ತಿದ್ದೀರಾ? ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಬೇರೆಯವರು ನನ್ನ ಬಗ್ಗೆ ಏನು ಹೇಳುತ್ತಾರೆ? ನನಗೆ ಬೇಗ ಕೋಪ ಬರಲ್ಲ, ನಾನೊಬ್ಬ ದೀನ ವ್ಯಕ್ತಿ ಅಂತಾರಾ? ಬೇರೆಯವರಿಗಾಗಿ ನಾನು ಜನ ಕೀಳಾಗಿ ನೋಡುವ ಕೆಲಸವನ್ನೂ ಮಾಡುತ್ತೇನಾ? ನಾನು ಬೇರೆಯವರ ಜೊತೆ ದಯೆಯಿಂದ ನಡಕೊಳ್ಳುತ್ತೇನಾ?’
10. ಯೇಸು ಎಂಥ ವಾತಾವರಣ ಇರುವಂತೆ ನೋಡಿಕೊಂಡನು?
10 ಯೇಸು ತನ್ನ ಜೊತೆ ಕೆಲಸ ಮಾಡುವವರಿಗಾಗಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುವಂತೆ ನೋಡಿಕೊಂಡನು. ಅವರಿಗೆ ಸಂತೋಷದಿಂದ ತರಬೇತಿ ಕೊಟ್ಟನು. (ಲೂಕ 10:1, 19-21) ಆತನು ನಡಕೊಳ್ಳುವ ವಿಧ ಹೇಗಿರುತ್ತಿತ್ತೆಂದರೆ ಆತನ ಶಿಷ್ಯರು ಪ್ರಶ್ನೆ ಕೇಳಲು ಹಿಂಜರಿಯುತ್ತಿರಲಿಲ್ಲ. ಆತನು ಕೂಡ ಅವರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಬಯಸುತ್ತಿದ್ದನು. (ಮತ್ತಾ. 16:13-16) ಚೆನ್ನಾಗಿ ನೀರು ಹಾಯಿಸಲಾದ ತೋಟದ ಗಿಡಗಳಂತೆ ಶಿಷ್ಯರು ಆಧ್ಯಾತ್ಮಿಕವಾಗಿ ಬೆಳೆದರು. ಯೇಸು ಕಲಿಸಿದ ಪಾಠಗಳನ್ನು ಅನ್ವಯಿಸಿಕೊಂಡು ಒಳ್ಳೇ ಕೆಲಸಗಳೆಂಬ ಫಲವನ್ನು ಕೊಟ್ಟರು.
11. ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
11 ನೀವು ಅಧಿಕಾರದ ಸ್ಥಾನದಲ್ಲಿದ್ದೀರಾ? ಹಾಗಿದ್ದರೆ ಹೀಗೆ ಕೇಳಿಕೊಳ್ಳಿ: ‘ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ಇರುವವರ ಜೊತೆ ನಾನು ಹೇಗೆ ನಡಕೊಳ್ಳುತ್ತೇನೆ? ಶಾಂತಿಯ ವಾತಾವರಣ ಇರುವಂತೆ ನೋಡಿಕೊಳ್ಳುತ್ತೇನಾ? ನಾನು ನಡಕೊಳ್ಳುವ ರೀತಿ ಅವರು ನನ್ನ ಹತ್ತಿರ ಹಿಂಜರಿಯದೆ ಪ್ರಶ್ನೆ ಕೇಳುವ ತರ ಇದೆಯಾ? ಅವರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳಲು ಬಯಸುತ್ತೇನಾ?’ ನಾವ್ಯಾರೂ ಫರಿಸಾಯರಂತೆ ಇರಬಾರದು. ಅವರು ಪ್ರಶ್ನೆ ಕೇಳಿದವರ ಮೇಲೆ ಕಿಡಿಕಾರಿದರು. ತಮ್ಮ ಮಾತಿಗೆ ವಿರುದ್ಧವಾದ ಅಭಿಪ್ರಾಯ ಹೇಳಿದವರನ್ನು ಹಿಂಸಿಸಿದರು.—ಮಾರ್ಕ 3:1-6; ಯೋಹಾ. 9:29-34.
‘ನೀವು ಚೈತನ್ಯವನ್ನು ಪಡೆದುಕೊಳ್ಳುವಿರಿ’
12-14. ಯೇಸು ನಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದರಿಂದ ಚೈತನ್ಯ ಸಿಗುತ್ತದೆ ಎಂದು ಹೇಗೆ ಹೇಳಬಹುದು?
12 ಯೇಸು ನಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದರಿಂದ ಚೈತನ್ಯ ಸಿಗುತ್ತದೆ ಎಂದು ಹೇಗೆ ಹೇಳಬಹುದು? ಇದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವನ್ನು ಈಗ ನೋಡೋಣ.
13 ನಮಗೆ ಅತ್ಯುತ್ತಮ ಮೇಲ್ವಿಚಾರಕರಿದ್ದಾರೆ. ಅತ್ಯುನ್ನತ ಸ್ಥಾನದಲ್ಲಿರುವ ಮೇಲ್ವಿಚಾರಕನಾದ ಯೆಹೋವನು ಗಣ್ಯತೆ ತೋರಿಸದ ಕ್ರೂರ ಅಧಿಕಾರಿಯಲ್ಲ. ತನ್ನ ಸೇವಕರು ಮಾಡುವ ಕೆಲಸವನ್ನು ತುಂಬ ಅಮೂಲ್ಯವಾಗಿ ನೋಡುತ್ತಾನೆ. (ಇಬ್ರಿ. 6:10) ಆತನು ನಮಗೆ ಕೊಟ್ಟಿರುವ ಕೆಲಸವನ್ನು ಮಾಡಲು ಬೇಕಾದ ಶಕ್ತಿಯನ್ನೂ ಕೊಡುತ್ತಾನೆ. (2 ಕೊರಿಂ. 4:7; ಗಲಾ. 6:5) ನಮ್ಮ ರಾಜನಾದ ಯೇಸು ತನ್ನ ಮಾದರಿಯ ಮೂಲಕ ನಮಗೆ ಕಲಿಸುತ್ತಾನೆ. (ಯೋಹಾ. 13:15) ನಮ್ಮನ್ನು ಪರಿಪಾಲಿಸುವ ಹಿರಿಯರು “ಮಹಾ ಕುರುಬನಾಗಿರುವ” ಯೇಸುವನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. (ಇಬ್ರಿ. 13:20; 1 ಪೇತ್ರ 5:2) ಅವರು ದಯೆ, ಧೈರ್ಯ ತೋರಿಸುತ್ತಾ, ಪ್ರೋತ್ಸಾಹ ಕೊಡಲು ತಮ್ಮಿಂದ ಆಗುವುದೆಲ್ಲಾ ಮಾಡುತ್ತಾರೆ. ಹೀಗೆ ನಮಗೆ ಕಲಿಸಿ ನಮ್ಮನ್ನು ಸಂರಕ್ಷಿಸುತ್ತಾರೆ.
14 ನಮಗೆ ಅತ್ಯುತ್ತಮ ಸ್ನೇಹಿತರಿದ್ದಾರೆ. ಲೋಕದಲ್ಲಿ ಬೇರೆ ಯಾರಿಗೂ ಇಷ್ಟೊಂದು ಪ್ರೀತಿಸುವ ಸ್ನೇಹಿತರಿಲ್ಲ, ಜೀವನದಲ್ಲಿ ಉದ್ದೇಶ ಇಲ್ಲ. ಇದರ ಬಗ್ಗೆ ಯೋಚಿಸಿ: ನಮ್ಮ ಜೊತೆ ದೇವರ ಕೆಲಸ ಮಾಡುವ ಜನರು ಅತ್ಯುತ್ತಮ ನೈತಿಕ ಮಟ್ಟಗಳಿಗನುಸಾರ ನಡೆಯುತ್ತಾರೆ. ಅಷ್ಟೇ ಅಲ್ಲ, ತಾವೇ ಎಲ್ಲರಿಗಿಂತ ಒಳ್ಳೆಯವರು ಎಂದು ಯೋಚಿಸಲ್ಲ. ಅವರಿಗೆ ತುಂಬ ಕೌಶಲಗಳಿವೆ. ಆದರೂ ಅವರು ಕೊಚ್ಚಿಕೊಳ್ಳಲ್ಲ. ಇತರರನ್ನು ತಮಗಿಂತ ಶ್ರೇಷ್ಠರೆಂದು ನೆನಸುತ್ತಾರೆ. ನಮ್ಮನ್ನು ಜೊತೆ ಕೆಲಸಗಾರರು ಎಂದು ಮಾತ್ರವಲ್ಲ, ಸ್ನೇಹಿತರೆಂದು ನೋಡುತ್ತಾರೆ. ಅವರು ಎಂಥ ಸ್ನೇಹಿತರೆಂದರೆ ನಮಗೋಸ್ಕರ ಪ್ರಾಣ ಕೊಡಲೂ ಹಿಂಜರಿಯಲ್ಲ!
15. ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಮಗೆ ಹೇಗನಿಸಬೇಕು?
15 ನಮಗೆ ಅತ್ಯುತ್ತಮ ಕೆಲಸ ಇದೆ. ನಾವು ಜನರಿಗೆ ಯೆಹೋವನ ಕುರಿತು ಸತ್ಯವನ್ನು ಕಲಿಸುತ್ತೇವೆ ಮತ್ತು ಪಿಶಾಚನು ಹೇಳಿರುವ ಸುಳ್ಳುಗಳನ್ನು ಬಯಲುಪಡಿಸುತ್ತೇವೆ. (ಯೋಹಾ. 8:44) ಸೈತಾನನು ಮನುಷ್ಯರ ಮೇಲೆ ಅವರಿಂದ ಎತ್ತಲಿಕ್ಕಾಗದಷ್ಟು ಭಾರವಾದ ಹೊರೆಗಳನ್ನು ಹಾಕಿದ್ದಾನೆ. ಉದಾಹರಣೆಗೆ, ದೇವರು ನಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ ಮತ್ತು ನಾವು ಆತನ ಪ್ರೀತಿ ಪಡೆಯಲು ಅರ್ಹರಲ್ಲ ಎಂಬ ಸುಳ್ಳುಗಳನ್ನು ನಂಬಬೇಕು ಎನ್ನುವುದೇ ಸೈತಾನನ ಬಯಕೆ. ಇದರಿಂದ ಜನರು ನಿರುತ್ತೇಜನಗೊಳ್ಳುತ್ತಾರೆ. ಆದರೆ ಸತ್ಯ ಏನೆಂದರೆ, ನಾವು ಕ್ರಿಸ್ತನ ಹತ್ತಿರಕ್ಕೆ ಹೋಗುವುದಾದರೆ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತದೆ. ಮಾತ್ರವಲ್ಲ, ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರನ್ನೂ ತುಂಬಾ ಪ್ರೀತಿಸುತ್ತಾನೆ. (ರೋಮ. 8:32, 38, 39) ಜನರಿಗೆ ಯೆಹೋವನ ಮೇಲೆ ಆತುಕೊಳ್ಳಲು ಕಲಿಸಿ, ನಂತರ ಅವರ ಜೀವನ ಉತ್ತಮವಾಗುವುದನ್ನು ನೋಡುವಾಗ ನಮಗೆ ತುಂಬ ಸಂತೋಷವಾಗುತ್ತದೆ.
ಯೇಸುವಿನ ನೊಗದಡಿಯಲ್ಲಿದ್ದು ಚೈತನ್ಯ ಪಡೆಯುತ್ತಾ ಇರಿ
16. ಯೇಸು ನಮಗೆ ಹೊತ್ತುಕೊಳ್ಳುವಂತೆ ಹೇಳುವ ಹೊರೆಯು ನಾವು ಸಹಿಸಿಕೊಳ್ಳಬೇಕಾದ ಬೇರೆಲ್ಲಾ ಹೊರೆಗಳಿಗಿಂತ ಹೇಗೆ ಭಿನ್ನವಾಗಿದೆ?
16 ಯೇಸು ನಮಗೆ ಹೊತ್ತುಕೊಳ್ಳುವಂತೆ ಹೇಳುವ ಹೊರೆಯು ನಾವು ಸಹಿಸಿಕೊಳ್ಳಬೇಕಾದ ಬೇರೆಲ್ಲಾ ಹೊರೆಗಳಿಗಿಂತ ಭಿನ್ನವಾದದ್ದಾಗಿದೆ. ಉದಾಹರಣೆಗೆ, ಇಡೀ ದಿನ ಕೆಲಸ ಮಾಡಿ ಮನೆಗೆ ಬರುವಾಗ ಸುಸ್ತಾಗಬಹುದು, ಜೊತೆಗೆ ಸಂತೋಷನೂ ಕಳಕೊಳ್ಳಬಹುದು. ಆದರೆ, ಯೆಹೋವನ ಮತ್ತು ಯೇಸುವಿನ ಸೇವೆಮಾಡಿದಾಗ ನಮಗೆ ತುಂಬ ತೃಪ್ತಿ-ಸಂತೋಷ ಆಗುತ್ತದೆ. ಬೆಳಗಿಂದ ಕೆಲಸ ಮಾಡಿ ಸುಸ್ತಾಗುವುದರಿಂದ ಕೂಟಗಳಿಗೆ ಹೋಗೋಕೆ ತುಂಬ ಕಷ್ಟಪಡಬೇಕಾಗಬಹುದು. ಆದರೆ ಆ ಕೂಟ ಮುಗಿದು ಮನೆಗೆ ಹೋಗುವಾಗ ಚೈತನ್ಯ ಮತ್ತು ಬಲ ಸಿಕ್ಕಿರುತ್ತದೆ. ಸಾರುವಾಗ ಮತ್ತು ವೈಯಕ್ತಿಕ ಬೈಬಲ್ ಅಧ್ಯಯನ ಮಾಡುವಾಗಲೂ ಹೀಗೇ ಆಗುತ್ತದೆ. ಅದರಿಂದ ಸಿಗುವ ಪ್ರತಿಫಲಕ್ಕೆ ಹೋಲಿಸಿದರೆ ಅದನ್ನು ಮಾಡಲು ನಾವು ಹಾಕುವ ಪ್ರಯಾಸ ಏನೇನೂ ಅಲ್ಲ.
17. ನಾವು ಏನನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಯಾವ ವಿಷಯದಲ್ಲಿ ಎಚ್ಚರವಹಿಸಬೇಕು?
17 ನಮ್ಮ ಶಕ್ತಿಗೆ ಮಿತಿ ಇದೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹಾಗಾಗಿ, ನಮ್ಮ ಶಕ್ತಿಯನ್ನು ಯಾವುದಕ್ಕೆ ಉಪಯೋಗಿಸುತ್ತೇವೆ ಎನ್ನುವುದರ ಬಗ್ಗೆ ಎಚ್ಚರವಹಿಸಬೇಕು. ಉದಾಹರಣೆಗೆ, ಹಣ-ಆಸ್ತಿ ಮಾಡುವುದಕ್ಕೆ ನಾವು ನಮ್ಮ ಶಕ್ತಿಯನ್ನೆಲ್ಲಾ ಉಪಯೋಗಿಸಿಬಿಡಬಹುದು. ಒಬ್ಬ ಶ್ರೀಮಂತ ಯುವಕ ಯೇಸುವಿಗೆ, “ನಾನು ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕು?” ಎಂದು ಕೇಳಿದಾಗ ಯೇಸು ಏನು ಹೇಳಿದನೆಂದು ಗಮನಿಸಿ. ಆ ಯುವಕನು ಈಗಾಗಲೇ ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ನಡಕೊಂಡಿದ್ದನು. ಅವನು ಒಬ್ಬ ಒಳ್ಳೇ ವ್ಯಕ್ತಿಯಾಗಿದ್ದಿರಬೇಕು. ಆದ್ದರಿಂದಲೇ ಯೇಸುವಿಗೆ ‘ಅವನ ಮೇಲೆ ಪ್ರೀತಿ ಉಂಟಾಯಿತು’ ಎಂದು ಮಾರ್ಕನು ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ನಂತರ ಯೇಸು ಆ ಯುವಕನಿಗೆ ಒಂದು ಆಮಂತ್ರಣ ನೀಡಿದನು. “ಹೋಗು, ನಿನ್ನ ಬಳಿ ಇರುವುದನ್ನೆಲ್ಲ ಮಾರಿ . . . ಬಂದು ನನ್ನ ಹಿಂಬಾಲಕನಾಗು” ಎಂದನು. ಆಗ ಆ ಯುವಕನಿಗೆ ತುಂಬ ದುಃಖವಾಯಿತು. ಬಹುಶಃ ಅವನಿಗೆ ತನ್ನ ‘ಬಹಳ ಆಸ್ತಿಯನ್ನು’ ಕೊಟ್ಟುಬಿಡಲು ಕಷ್ಟವಾಯಿತು. (ಮಾರ್ಕ 10:17-22) ಹಾಗಾಗಿ, ಅವನು ಯೇಸುವಿನ ನೊಗವನ್ನು ತಿರಸ್ಕರಿಸಿ ‘ಐಶ್ವರ್ಯಕ್ಕೆ’ ದಾಸನಾಗಿ ಸೇವೆ ಮಾಡುವುದನ್ನು ಮುಂದುವರಿಸಿದನು. (ಮತ್ತಾ. 6:24) ಆ ಯುವಕನ ಪರಿಸ್ಥಿತಿಯಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?
18. ನಾವು ಆಗಿಂದಾಗ್ಗೆ ಏನು ಮಾಡಬೇಕು ಮತ್ತು ಯಾಕೆ?
18 ನಾವು ನಮ್ಮ ಜೀವನದಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡುತ್ತಿದ್ದೇವೆ ಎಂದು ಆಗಿಂದಾಗ್ಗೆ ಪರೀಕ್ಷಿಸಿಕೊಳ್ಳುವುದು ಒಳ್ಳೇದು. ಹೀಗೆ ಮಾಡುವುದರಿಂದ ನಾವು ನಮ್ಮ ಶಕ್ತಿಯನ್ನು ವಿವೇಕದಿಂದ ಸರಿಯಾಗಿ ಉಪಯೋಗಿಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಬಹುದು. ಮಾರ್ಕ್ ಎಂಬ ಯುವಕ ಹೀಗೆ ಹೇಳುತ್ತಾನೆ: “ನಾನು ಸರಳ ಜೀವನ ಮಾಡುತ್ತಿದ್ದೇನೆ ಅಂತ ತುಂಬ ವರ್ಷದಿಂದ ಅಂದುಕೊಂಡಿದ್ದೆ. ನಾನು ಪಯನೀಯರಿಂಗ್ ಮಾಡ್ತಿದ್ದೆ. ಆದರೆ ಯಾವಾಗಲೂ ಹಣದ ಬಗ್ಗೆ ಮತ್ತು ನನ್ನ ಜೀವನ ಆರಾಮವಾಗಿರೋಕೆ ಏನು ಮಾಡ್ಬೇಕು ಅನ್ನೋದ್ರ ಬಗ್ಗೆನೇ ಯೋಚಿಸ್ತಿದ್ದೆ. ನನ್ನ ಜೀವನ ಯಾಕಿಷ್ಟು ಕಷ್ಟವಾಗಿದೆ ಅಂತ ಯೋಚಿಸೋಕೆ ಆರಂಭಿಸಿದಾಗ ನನಗೆ ಒಂದು ವಿಷ್ಯ ಅರ್ಥ ಆಯ್ತು. ಅದೇನಂದ್ರೆ ನಾನು ನನಗೇನು ಬೇಕೋ ಅದಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದೆ ಮತ್ತು ಎಲ್ಲಾ ಮಾಡಿದ ಮೇಲೆ ಉಳಿದ ಸಮಯ-ಶಕ್ತಿನ ಯೆಹೋವನಿಗೆ ಕೊಡ್ತಿದ್ದೆ.” ಮಾರ್ಕ್ ತನ್ನ ಯೋಚನೆ ಮತ್ತು ಜೀವನ ರೀತಿನ ಬದಲಾಯಿಸಿಕೊಂಡ. ಯೆಹೋವನ ಸೇವೆಗೇ ತನ್ನ ಜೀವನ ಕೊಟ್ಟುಬಿಟ್ಟ. “ಈಗಲೂ ಕೆಲವೊಮ್ಮೆ ನನಗೆ ಹಣದ ಬಗ್ಗೆ ಚಿಂತೆ ಆಗುತ್ತೆ. ಆದ್ರೆ ಯೆಹೋವ ಮತ್ತು ಯೇಸುವಿನ ಸಹಾಯದಿಂದ ನಾನು ಈ ಸಮಸ್ಯೆನ ಎದುರಿಸಿದ್ದೀನಿ” ಎನ್ನುತ್ತಾನೆ ಮಾರ್ಕ್.
19. ಸರಿಯಾದ ದೃಷ್ಟಿಕೋನ ಇರುವುದು ಯಾಕೆ ಪ್ರಾಮುಖ್ಯ?
19 ನಾವು ಮೂರು ವಿಷಯಗಳನ್ನು ಮಾಡಿದರೆ ಯೇಸುವಿನ ನೊಗದಡಿ ಚೈತನ್ಯ ಪಡೆಯುತ್ತಾ ಇರಬಹುದು. ಮೊದಲನೇದಾಗಿ, ಸರಿಯಾದ ದೃಷ್ಟಿಕೋನ ಇರಬೇಕು. ನಾವು ಯೆಹೋವನ ಕೆಲಸ ಮಾಡುತ್ತಿರುವುದರಿಂದ ಅದನ್ನು ಆತನು ಲೂಕ 17:10) ನಾವು ಆತನ ಕೆಲಸವನ್ನು ನಮಗಿಷ್ಟವಾಗುವ ರೀತಿಯಲ್ಲಿ ಮಾಡುವುದಾದರೆ ನಮಗೇ ಕಷ್ಟವಾಗುತ್ತದೆ. ಎತ್ತು ಎಷ್ಟೇ ಬಲಿಷ್ಠವಾಗಿದ್ದರೂ ಧಣಿ ನಿಯಂತ್ರಣದಲ್ಲಿರುವ ನೊಗಕ್ಕೆ ವಿರುದ್ಧವಾಗಿ ತನಿಗಿಷ್ಟ ಬಂದ ಕಡೆ ಹೋದರೆ ಅದಕ್ಕೇ ನೋವಾಗುತ್ತೆ ಅಥವಾ ಸುಸ್ತಾಗುತ್ತೆ. ನಾವು ಯೆಹೋವನ ಮಾರ್ಗದರ್ಶನದ ಪ್ರಕಾರನೇ ನಡೆಯುತ್ತಾ ಇದ್ದರೆ ನಾವು ನೆನಸಿದ್ದಕ್ಕಿಂತ ಎಷ್ಟೋ ಹೆಚ್ಚು ಮಾಡಲು ಸಾಧ್ಯವಾಗುತ್ತೆ. ಯೆಹೋವನ ಚಿತ್ತ ನೆರವೇರದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ನೆನಪಲ್ಲಿಡಿ.—ರೋಮ. 8:31; 1 ಯೋಹಾ. 4:4.
ಹೇಳುವ ರೀತಿಯಲ್ಲೇ ಮಾಡಬೇಕು. ನಾವು ಕೆಲಸಗಾರರು ಮತ್ತು ಯೆಹೋವನು ನಮ್ಮ ಧಣಿ. (20. ಯೇಸುವಿನ ನೊಗದಡಿ ಬರುವುದರ ಉದ್ದೇಶ ಏನಾಗಿರಬೇಕು?
20 ಎರಡನೇದಾಗಿ, ಸರಿಯಾದ ಉದ್ದೇಶದಿಂದ ಕೆಲಸ ಮಾಡಬೇಕು. ನಮ್ಮ ಉದ್ದೇಶ ನಮ್ಮ ಪ್ರೀತಿಯ ತಂದೆಯಾದ ಯೆಹೋವನಿಗೆ ಮಹಿಮೆ, ಸ್ತುತಿ ತರುವುದೇ ಆಗಿದೆ. ಒಂದನೇ ಶತಮಾನದಲ್ಲಿ, ದುರಾಸೆ ಮತ್ತು ಸ್ವಾರ್ಥ ಉದ್ದೇಶದಿಂದ ಯೇಸುವಿನ ನೊಗದಡಿ ಬಂದವರು ಸಂತೋಷ ಕಳಕೊಂಡರು ಮತ್ತು ನಂತರ ಯೇಸುವಿನ ನೊಗವನ್ನು ಬಿಟ್ಟು ಹೋದರು. (ಯೋಹಾ. 6:25-27, 51, 60, 66; ಫಿಲಿ. 3:18, 19) ಆದರೆ ದೇವರ ಮೇಲೆ ಮತ್ತು ನೆರೆಯವರ ಮೇಲಿನ ನಿಸ್ವಾರ್ಥ ಪ್ರೀತಿಯಿಂದ ಬಂದವರು ಜೀವದಿಂದ ಇರುವವರೆಗೂ ಯೇಸುವಿನ ನೊಗವನ್ನು ಹೊತ್ತರು. ಅವರಿಗೆ ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಸೇವೆ ಮಾಡುವ ನಿರೀಕ್ಷೆ ಇತ್ತು. ಅವರಂತೆ ನಾವೂ ಸರಿಯಾದ ಉದ್ದೇಶದಿಂದ ಯೇಸುವಿನ ನೊಗವನ್ನು ಹೊತ್ತರೆ ಸಂತೋಷವಾಗಿರುತ್ತೇವೆ.
21. ಮತ್ತಾಯ 6:31-33ರ ಪ್ರಕಾರ ಯೆಹೋವನು ಏನು ಮಾಡುತ್ತಾನೆಂದು ನಾವು ನಿರೀಕ್ಷಿಸಬಹುದು?
21 ಮೂರನೇದಾಗಿ, ಯೆಹೋವನು ಸಹಾಯ ಮಾಡಲು ಸಿದ್ಧನಿರುತ್ತಾನೆ ಎಂಬ ನಿರೀಕ್ಷೆಯಿಂದಿರಿ. ನಾವು ಸ್ವತ್ಯಾಗದ ಮತ್ತು ಪ್ರಯಾಸದ ಜೀವನವನ್ನು ಆರಿಸಿಕೊಂಡಿದ್ದೇವೆ. ನಮಗೆ ಹಿಂಸೆ ಬರುತ್ತದೆ ಎಂದು ಯೇಸು ಎಚ್ಚರಿಸಿದ್ದಾನೆ. ಆದರೆ ನಮಗೆ ಬರುವ ಯಾವುದೇ ಸಮಸ್ಯೆಯನ್ನು ತಾಳಿಕೊಳ್ಳಲು ಬೇಕಾದ ಶಕ್ತಿಯನ್ನು ಯೆಹೋವನು ಕೊಡುತ್ತಾನೆಂದು ನಿರೀಕ್ಷಿಸಬಹುದು. ನಾವು ಹೆಚ್ಚೆಚ್ಚು ತಾಳಿಕೊಂಡಂತೆ ಹೆಚ್ಚೆಚ್ಚು ಶಕ್ತಿ ಪಡೆಯುತ್ತೇವೆ. (ಯಾಕೋ. 1:2-4) ಯೆಹೋವನು ನಮ್ಮ ಅಗತ್ಯಗಳನ್ನು ಪೂರೈಸುತ್ತಾನೆ, ಯೇಸು ನಮ್ಮನ್ನು ಪರಿಪಾಲಿಸುತ್ತಾನೆ ಮತ್ತು ಸಹೋದರ ಸಹೋದರಿಯರು ನಮಗೆ ಉತ್ತೇಜನ ನೀಡುತ್ತಾರೆ ಎಂದು ನಿರೀಕ್ಷಿಸಬಹುದು. (ಮತ್ತಾಯ 6:31-33 ಓದಿ; ಯೋಹಾ. 10:14; 1 ಥೆಸ. 5:11) ಇಷ್ಟೆಲ್ಲಾ ಇದ್ದ ಮೇಲೆ ನಮಗಿನ್ನೇನು ಬೇಕು?
22. ನಾವು ಯಾವ ವಿಷಯಕ್ಕಾಗಿ ಖುಷಿಪಡುತ್ತೇವೆ?
22 ಯೇಸು ವಾಸಿಮಾಡಿದ ಸ್ತ್ರೀ ಅದೇ ದಿನ ಚೈತನ್ಯ ಪಡೆದುಕೊಂಡಳು. ಆದರೆ ಅವಳು ಕ್ರಿಸ್ತನ ನಿಷ್ಠಾವಂತ ಶಿಷ್ಯಳಾಗಿ ಇದ್ದರೆ ಮಾತ್ರ ಶಾಶ್ವತ ಚೈತನ್ಯವನ್ನು ಪಡೆದಿರುತ್ತಾಳೆ. ಅವಳು ನಿಷ್ಠಾವಂತಳಾಗಿ ಇದ್ದಿರಬಹುದಾ? ಅವಳು ಯೇಸುವಿನ ನೊಗವನ್ನು ಹೊತ್ತಿದ್ದರೆ ಸ್ವರ್ಗದಲ್ಲಿ ಯೇಸುವಿನ ಜೊತೆ ಸೇವೆ ಮಾಡುವ ಸುಯೋಗ ಸಿಕ್ಕಿರುತ್ತದೆ! ಆ ಆಶೀರ್ವಾದದ ಮುಂದೆ ಆಕೆ ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಮಾಡಿರಬಹುದಾದ ಯಾವುದೇ ತ್ಯಾಗ ಲೆಕ್ಕಕ್ಕೇ ಬರುವುದಿಲ್ಲ. ನಮಗೆ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿರಲಿ, ಭೂಮಿಯಲ್ಲಿರುವ ನಿರೀಕ್ಷೆಯಿರಲಿ, “ನನ್ನ ಬಳಿಗೆ ಬನ್ನಿರಿ” ಎಂಬ ಯೇಸುವಿನ ಆಮಂತ್ರಣ ಸ್ವೀಕರಿಸಿದ್ದಕ್ಕೆ ಖಂಡಿತ ಖುಷಿಪಡುತ್ತೇವೆ.
ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು
^ ಪ್ಯಾರ. 5 ಯೇಸು ನಮ್ಮನ್ನು ತನ್ನ ಹತ್ತಿರ ಬರುವಂತೆ ಆಮಂತ್ರಿಸುತ್ತಿದ್ದಾನೆ. ನಾವು ಆತನ ಹತ್ತಿರ ಹೋಗಬೇಕೆಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿಯಲಿದ್ದೇವೆ. ಜೊತೆಗೆ, ಕ್ರಿಸ್ತನೊಂದಿಗೆ ಕೆಲಸ ಮಾಡುವುದರಿಂದ ನಮಗೆ ಹೇಗೆ ಚೈತನ್ಯ ಸಿಗುತ್ತದೆಂದೂ ಕಲಿಯಲಿದ್ದೇವೆ.
^ ಪ್ಯಾರ. 6 ನೊಗ ಅಂದರೆ ಬಂಡಿ ಅಥವಾ ನೇಗಿಲನ್ನು ಎಳೆಯಲು ಎತ್ತಿನ ಹೆಗಲ ಮೇಲಿಡುವ ಉದ್ದನೆಯ ಮರದ ದಿಂಡು.
^ ಪ್ಯಾರ. 61 ಚಿತ್ರ ವಿವರಣೆ: ಯೇಸು ಅನೇಕ ವಿಧಗಳಲ್ಲಿ ಇತರರಿಗೆ ಚೈತನ್ಯ ನೀಡಿದನು.
^ ಪ್ಯಾರ. 67 ಚಿತ್ರ ವಿವರಣೆ: ಅದೇ ರೀತಿ ಒಬ್ಬ ಸಹೋದರ ಅನೇಕ ವಿಧಗಳಲ್ಲಿ ಇತರರಿಗೆ ಚೈತನ್ಯ ನೀಡುತ್ತಿದ್ದಾನೆ.