ದೇವರು ಏನು ಮಾಡುತ್ತಾನೆ?
ಆಪತ್ತಿಗಾದವನೇ ಸ್ನೇಹಿತ ಎಂದು ನಾವು ನಂಬುತ್ತೇವೆ. ಆದರೆ, ದೇವರು ನಮಗಾಗಿ ಏನೂ ಮಾಡುತ್ತಾ ಇಲ್ಲ, ಆದ್ದರಿಂದ ಆತನು ನಮ್ಮ ಸ್ನೇಹಿತನಲ್ಲ ಅಂತ ಅನೇಕರು ಹೇಳುತ್ತಾರೆ. ನಿಜಾಂಶವೇನೆಂದರೆ, ದೇವರು ನಮ್ಮ ಪ್ರಯೋಜನಕ್ಕಾಗಿ ತುಂಬ ಒಳ್ಳೇ ವಿಷಯಗಳನ್ನು ಮಾಡಿದ್ದಾನೆ. ಅಷ್ಟೇ ಅಲ್ಲ, ನಮ್ಮ ಕಷ್ಟಗಳನ್ನು ಬಲು ಬೇಗನೆ ತೆಗೆದು ಹಾಕುತ್ತಾನೆ. ದೇವರು ಏನೆಲ್ಲಾ ಮಾಡುತ್ತಾನೆ?
ಎಲ್ಲಾ ದುಷ್ಟತನವನ್ನು ತೆಗೆದುಹಾಕುತ್ತಾನೆ
ದೇವರು ದುಷ್ಟತನದ ಮೂಲವನ್ನೇ ನಾಶಮಾಡುವನು. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲ್ ತಿಳಿಸುತ್ತದೆ. (1 ಯೋಹಾನ 5:19) ಇದರರ್ಥ ದುಷ್ಟತನದ ಮೂಲ ಆ ಕೆಡುಕನು ಅಥವಾ ಸೈತಾನನಾಗಿದ್ದಾನೆ. ಅವನನ್ನೇ ಯೇಸು “ಈ ಲೋಕದ ಅಧಿಪತಿ” ಎಂದನು. (ಯೋಹಾನ 12:31) ಭೂಮಿಯಲ್ಲಿ ರಾರಾಜಿಸುತ್ತಿರುವ ಎಲ್ಲಾ ಕಷ್ಟಗಳಿಗೂ ಮೂಲ ಕಾರಣ ಸೈತಾನನೇ. ಇದನ್ನು ಸರಿಪಡಿಸಲು ದೇವರೇನು ಮಾಡುತ್ತಾನೆ?
ತನ್ನ ಪುತ್ರನಾದ ಯೇಸು ಕ್ರಿಸ್ತನ ಮೂಲಕ ದೇವರು ‘ಮರಣವನ್ನು ಉಂಟುಮಾಡಿದವನನ್ನು ಅಂದರೆ ಪಿಶಾಚನನ್ನು ಇಲ್ಲದಂತೆ ಮಾಡುವನು.’ (ಇಬ್ರಿಯ 2:14; 1 ಯೋಹಾನ 3:8) “ತನಗಿರುವ ಸಮಯಾವಧಿಯು ಸ್ವಲ್ಪ” ಎಂದು ಪಿಶಾಚನಿಗೆ ಗೊತ್ತಿದೆ ಅಂತ ಬೈಬಲ್ ಹೇಳುತ್ತದೆ. (ಪ್ರಕಟನೆ 12:12) ದೇವರು ಸೈತಾನನ ಜೊತೆಗೆ ದುಷ್ಟರೆಲ್ಲರನ್ನು ನಾಶಮಾಡುವನು.—ಕೀರ್ತನೆ 37:9; ಜ್ಞಾನೋಕ್ತಿ 2:22.
ಭೂಮಿಯನ್ನು ಸುಂದರ ಉದ್ಯಾನವನವಾಗಿ ಮಾರ್ಪಡಿಸುತ್ತಾನೆ
ಈ ಭೂಮಿಯಿಂದ ಎಲ್ಲಾ ದುಷ್ಟತನವನ್ನು ತೆಗೆದು ಹಾಕಿದ ನಂತರ ನಮ್ಮ ಸೃಷ್ಟಿಕರ್ತನು ಮಾನವಕುಲದ ಬಗ್ಗೆ ಮತ್ತು ಭೂಮಿಯ ಬಗ್ಗೆ ತನಗಿದ್ದ ಮೂಲ ಉದ್ದೇಶವನ್ನು ಪೂರೈಸುತ್ತಾನೆ. ನಾವು ಯಾವೆಲ್ಲಾ ವಿಷಯಗಳಿಗಾಗಿ ಎದುರುನೋಡಬಹುದು?
ಸದಾ ಸರ್ವದಾ ಶಾಂತಿ ಸಮಾಧಾನ. “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ಅಪರಿಮಿತ, ಆರೋಗ್ಯಕರ ಆಹಾರ. ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧವಾಗಿರುವುದು; ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರುವುದು.’—ಕೀರ್ತನೆ 72:16.
ಅಂದವಾದ ಮನೆಗಳು ಮತ್ತು ಇಷ್ಟವಾದ ಕೆಲಸ. “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. . . . ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”—ಯೆಶಾಯ 65:21, 22.
ಇಂತಹ ವಿಷಯಗಳನ್ನು ಅನುಭವಿಸಲು ನೀವು ಬಯಸುತ್ತೀರಾ? ಅದಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.
ಕಾಯಿಲೆ, ಮರಣವನ್ನು ತೆಗೆದುಹಾಕುತ್ತಾನೆ
ಕಾಯಿಲೆ, ಸಾವು ಎಲ್ಲರಿಗೂ ಬರುತ್ತದೆ. ಆದರೆ ಇದೆಲ್ಲಾ ಬೇಗನೆ ಬದಲಾಗುತ್ತದೆ. ಅದಕ್ಕಾಗಿಯೇ ಯೇಸು ಪ್ರಾಣ ಕೊಟ್ಟಿದ್ದು. ‘ಯೇಸುವಿನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಲು’ ದೇವರು ಶೀಘ್ರದಲ್ಲೇ ಏರ್ಪಾಡುಮಾಡುತ್ತಾನೆ. (ಯೋಹಾನ 3:16) ಅದರ ಪರಿಣಾಮ ಏನಾಗುತ್ತದೆ?
ಕಾಯಿಲೆಗಳು ನಿರ್ಮೂಲವಾಗುವವು. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.”—ಯೆಶಾಯ 33:24.
ಮರಣವೇ ಇಲ್ಲದೆ ಹೋಗುವುದು. “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.
ಜನರು ಸದಾಕಾಲ ಬದುಕುವರು. “ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ.”—ರೋಮನ್ನರಿಗೆ 6:23.
ತೀರಿಹೋದವರು ಪುನಃ ಜೀವಂತರಾಗುವರು. ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಅಪೊಸ್ತಲರ ಕಾರ್ಯಗಳು 24:15) ದೇವರ ವರದಾನವಾದ ವಿಮೋಚನಾ ಮೌಲ್ಯದಿಂದ ಅವರು ಪ್ರಯೋಜನ ಪಡೆಯುವರು.
ದೇವರು ಇದನ್ನೆಲ್ಲಾ ಹೇಗೆ ಮಾಡುತ್ತಾನೆ?
ಪರಿಪೂರ್ಣ ಸರಕಾರವನ್ನು ಸ್ಥಾಪಿಸುತ್ತಾನೆ
ಮಾನವರ ಬಗ್ಗೆ ಮತ್ತು ಭೂಮಿಯ ಬಗ್ಗೆ ತನಗಿರುವ ಉದ್ದೇಶಗಳನ್ನು ದೇವರು ಒಂದು ಸ್ವರ್ಗೀಯ ಸರಕಾರದ ಮೂಲಕ ಪೂರೈಸುತ್ತಾನೆ. ಆ ಸರಕಾರದ ಅಧಿಕಾರಿಯಾಗಿ ಆತನು ಯೇಸುವನ್ನು ನೇಮಿಸಿದ್ದಾನೆ. (ಕೀರ್ತನೆ 110:1, 2) ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸಿಕೊಟ್ಟಾಗ “ಸ್ವರ್ಗದಲ್ಲಿರುವ ನಮ್ಮ ತಂದೆಯೇ, . . . ನಿನ್ನ ರಾಜ್ಯವು ಬರಲಿ” ಅಂತ ಹೇಳಿದ್ದು ಈ ಸರಕಾರದ ಬಗ್ಗೆಯೇ.—ಮತ್ತಾಯ 6:9, 10.
ದೇವರ ರಾಜ್ಯವು ಭೂಮಿಯ ಮೇಲೆ ಆಳುತ್ತದೆ, ಎಲ್ಲಾ ಕಷ್ಟ-ಸಂಕಟಗಳಿಗೆ ಕೊನೆ ತರುತ್ತದೆ. ಮಾನವಕುಲಕ್ಕೆ ಸಿಗಬಹುದಾದ ಅತ್ಯುತ್ತಮ ಸರಕಾರ ಇದೊಂದೇ! ಆದುದರಿಂದಲೇ ಯೇಸು ಭೂಮಿಯಲ್ಲಿದ್ದಾಗ ಈ ‘ರಾಜ್ಯದ ಸುವಾರ್ತೆಯನ್ನು’ ಸಾರಲು ಕಠಿಣ ಪರಿಶ್ರಮ ಹಾಕಿದನು ಮತ್ತು ಇದನ್ನೇ ಮಾಡುವಂತೆ ಶಿಷ್ಯರಿಗೆ ಹೇಳಿದನು.—ಮತ್ತಾಯ 4:23; 24:14.
ಯೆಹೋವನು ಈ ಅದ್ಭುತ ವಿಷಯಗಳನ್ನೆಲ್ಲಾ ಮಾಡುತ್ತೇನೆ ಎಂದು ಮಾತು ಕೊಟ್ಟಿರುವುದು ನಮ್ಮ ಮೇಲಿನ ಅಪಾರ ಪ್ರೀತಿಯಿಂದಲೇ. ಇದು ನಮ್ಮನ್ನು ದೇವರ ಬಗ್ಗೆ ಇನ್ನೂ ಹೆಚ್ಚು ಕಲಿಯಲು ಮತ್ತು ಆತನ ಸ್ನೇಹಿತರಾಗಲು ಪ್ರೇರೇಪಿಸುತ್ತದೆ ಅಲ್ಲವೇ? ನೀವು ಹಾಗೆ ಮಾಡುವುದಾದರೆ ಯಾವ ಪ್ರಯೋಜನಗಳು ಸಿಗುತ್ತವೆ? ಮುಂದಿನ ಲೇಖನದಲ್ಲಿ ನೋಡೋಣ.
ದೇವರು ಏನೆಲ್ಲಾ ಮಾಡುತ್ತಾನೆ? ದೇವರು ಕಾಯಿಲೆ, ಮರಣವನ್ನು ತೆಗೆದುಹಾಕುತ್ತಾನೆ, ತನ್ನ ಸರಕಾರದ ಮೂಲಕ ಮಾನವರನ್ನು ಐಕ್ಯಗೊಳಿಸುತ್ತಾನೆ, ಮತ್ತು ಭೂಮಿಯನ್ನು ಉದ್ಯಾನವನವಾಗಿ ಮಾರ್ಪಡಿಸುತ್ತಾನೆ