ದೇವರ ಬಗ್ಗೆ ತಿಳಿದುಕೊಳ್ಳುವುದರಿಂದ ಏನು ಪ್ರಯೋಜನ?
ನಾವು ಹಿಂದಿನ ಲೇಖನಗಳಲ್ಲಿ ಸೃಷ್ಟಿಕರ್ತ ದೇವರು ಯಾರು ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಂಡೆವು. ದೇವರ ಹೆಸರು ಯೆಹೋವ ಮತ್ತು ಆತನ ಮುಖ್ಯ ಗುಣ ಪ್ರೀತಿ ಎಂದು ಬೈಬಲಿನಿಂದ ಕಲಿತೆವು. ಮಾನವರಿಗಾಗಿ ಆತನು ಏನೆಲ್ಲಾ ಮಾಡಿದ್ದಾನೆ ಮತ್ತು ಮಾಡಲಿದ್ದಾನೆ ಎಂದೂ ಕಲಿತೆವು. ದೇವರ ಬಗ್ಗೆ ಕಲಿಯಲು ಇನ್ನೂ ಅನೇಕ ವಿಷಯಗಳಿವೆ. ಆದರೆ, ಹೀಗೆ ಕಲಿಯುವುದರಿಂದ ಪ್ರಯೋಜನ ಏನು?
‘ನೀನು ಹುಡುಕುವದಾದರೆ ನಿನಗೆ ಸಿಕ್ಕುವೆನು’ ಎಂದು ಯೆಹೋವನೇ ಮಾತುಕೊಟ್ಟಿದ್ದಾನೆ. (1 ಪೂರ್ವಕಾಲವೃತ್ತಾಂತ 28:9) ದೇವರನ್ನು ಹುಡುಕುತ್ತಾ ಆತನ ಬಗ್ಗೆ ಕಲಿಯುವಾಗ ನಿಮಗೊಂದು ಅಮೂಲ್ಯ ಉಡುಗೊರೆ ಸಿಗುತ್ತದೆ. ಅದೇ ಯೆಹೋವನೊಂದಿಗಿನ ‘ಆಪ್ತ ಸ್ನೇಹ.’ (ಕೀರ್ತನೆ 25:14) ಇದರಿಂದ ನಿಮಗೇನು ಪ್ರಯೋಜನ?
ನಿಜ ಸಂತೋಷ. ಯೆಹೋವನು ‘ಸಂತೋಷದ ದೇವರು.’ (1 ತಿಮೊಥೆಯ 1:11) ಹಾಗಾಗಿ, ನಾವು ಆತನಿಗೆ ಆಪ್ತರಾಗಿ ಆತನನ್ನು ಅನುಕರಿಸುವುದಾದರೆ ನಿಜವಾಗಿಯೂ ಸಂತೋಷವಾಗಿರುತ್ತೇವೆ. ಇದರಿಂದ ನಾವು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಆರೋಗ್ಯವಾಗಿರುತ್ತೇವೆ. (ಕೀರ್ತನೆ 33:12) ಕೆಟ್ಟ ಜೀವನ ನಡೆಸದೆ ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಮತ್ತು ಇತರರೊಂದಿಗೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳಲು ಹೀಗೆ ಸಂತೋಷಕರ ಜೀವನ ನಡೆಸಲು ನಿಮ್ಮಿಂದ ಸಾಧ್ಯವಾಗುತ್ತದೆ. ಆಗ ನಿಮಗೆ ದಾವೀದನು ಹೇಳಿದ ಈ ಮಾತುಗಳು ನಿಜವೆಂದು ಅನಿಸುತ್ತದೆ: “ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ.”—ಕೀರ್ತನೆ 73:28.
ಕಾಳಜಿ ಮತ್ತು ಗಮನ. ಯೆಹೋವನು ತನ್ನ ಸೇವಕರಿಗೆ, “ನಿನ್ನನ್ನು ಕಟಾಕ್ಷಿಸಿ (ಗಮನಿಸಿ) ಆಲೋಚನೆಹೇಳುವೆನು” ಎಂದು ಮಾತು ಕೊಟ್ಟಿದ್ದಾನೆ. (ಕೀರ್ತನೆ 32:8) ಇದರರ್ಥ ಆತನು ತನ್ನ ಸೇವಕರಲ್ಲಿ ಒಬ್ಬೊಬ್ಬರಿಗೂ ಗಮನ ಕೊಡುತ್ತಾನೆ ಮತ್ತು ಅವರ ಕಾಳಜಿವಹಿಸುತ್ತಾ ಪ್ರತಿಯೊಬ್ಬರ ಅಗತ್ಯಗಳೇನೆಂದು ತಿಳಿದು ಅದನ್ನು ಪೂರೈಸುತ್ತಾನೆ. (ಕೀರ್ತನೆ 139:1, 2) ಯೆಹೋವನೊಂದಿಗೆ ಒಳ್ಳೇ ಸಂಬಂಧ ಬೆಳೆಸಿಕೊಂಡಾಗ, ಆತನು ಯಾವಾಗಲೂ ನಿಮ್ಮ ಜೊತೆ ಇದ್ದಾನೆಂಬ ಅನುಭವವಾಗುತ್ತದೆ.
ಸುಂದರ ಭವಿಷ್ಯ. ನೀವು ಈಗ ಸಂತೋಷ, ತೃಪ್ತಿಯಿಂದ ಜೀವಿಸಲು ಮಾತ್ರವಲ್ಲ ನಿಮ್ಮ ಕಲ್ಪನೆಗೂ ಮೀರಿದ ಭವ್ಯ ಭವಿಷ್ಯವನ್ನು ಪಡೆಯಲು ಯೆಹೋವನು ನಿಮಗೆ ಸಹಾಯ ಮಾಡುತ್ತಾನೆ. (ಯೆಶಾಯ 48:17, 18) ಬೈಬಲ್ ಹೀಗನ್ನುತ್ತದೆ: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾನ 17:3) ದೇವರು ಕೊಡುವ ಈ ನಿರೀಕ್ಷೆಯು ಲಂಗರಿನಂತಿದ್ದು, ನಾವು ಕಷ್ಟಕರ ದಿನಗಳಲ್ಲಿ ‘ನಿಶ್ಚಿತತೆಯಿಂದಿರಲು, ದೃಢವಾಗಿರಲು’ ಸಹಾಯ ಮಾಡುತ್ತದೆ.—ಇಬ್ರಿಯ 6:19.
ದೇವರ ಬಗ್ಗೆ ಹೆಚ್ಚನ್ನು ಕಲಿಯಲು, ಆತನೊಂದಿಗೆ ಆಪ್ತ ಬಂಧವನ್ನು ಬೆಳೆಸಿಕೊಳ್ಳಲು ನಮಗಿರುವ ಅನೇಕ ಕಾರಣಗಳಲ್ಲಿ ಇವು ಕೆಲವು. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಒಬ್ಬ ಯೆಹೋವನ ಸಾಕ್ಷಿಯನ್ನು ಸಂಪರ್ಕಿಸಿ ಇಲ್ಲವೆ, jw.org ವೆಬ್‌ಸೈಟನ್ನು ನೋಡಿ.