ಸೃಷ್ಟಿಕರ್ತ ದೇವರು ಯಾರು?
ಅನೇಕರು ತಾವು ದೇವರನ್ನು ನಂಬುತ್ತೇವೆ ಎಂದು ಹೇಳುತ್ತಾರೆ. ಆದರೆ ದೇವರು ಯಾರೆಂದು ಕೇಳಿದರೆ ಬೇರೆ ಬೇರೆ ಉತ್ತರಗಳನ್ನು ಕೊಡುತ್ತಾರೆ. ಕೆಲವರು, ಜನರು ತಪ್ಪು ಮಾಡಿದರೆ ಕಠೋರವಾಗಿ ಶಿಕ್ಷೆ ನೀಡುವ ಕ್ರೂರ ನ್ಯಾಯಾಧಿಪತಿ ಎನ್ನುತ್ತಾರೆ. ಇನ್ನು ಕೆಲವರು, ನಾವೇನೇ ಮಾಡಿದರೂ ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ಕ್ಷಮಿಸುತ್ತಾನೆ ಎನ್ನುತ್ತಾರೆ. ಇತರರು ದೇವರು ನಮ್ಮಿಂದ ತುಂಬ ದೂರದಲ್ಲಿದ್ದಾನೆ, ಅವನಿಗೆ ನಮ್ಮ ಬಗ್ಗೆ ಆಸಕ್ತಿನೇ ಇಲ್ಲ ಎಂದು ಹೇಳುತ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುವುದರಿಂದ ಅನೇಕರು ದೇವರ ಬಗ್ಗೆ ತಿಳಿದುಕೊಳ್ಳುವುದು ಅಸಾಧ್ಯ ಅಂತ ನೆನಸುತ್ತಾರೆ.
ದೇವರನ್ನು ತಿಳಿಯುವುದು ಅಷ್ಟು ಪ್ರಾಮುಖ್ಯವೋ? ಹೌದು, ದೇವರ ಬಗ್ಗೆ ತಿಳಿದಿರುವುದು ನಿಮ್ಮ ಜೀವನಕ್ಕೆ ಅರ್ಥ ಮತ್ತು ಉದ್ದೇಶವನ್ನು ಕೊಡುತ್ತದೆ. (ಅಪೊಸ್ತಲರ ಕಾರ್ಯಗಳು 17:26-28) ದೇವರಿಗೆ ನೀವು ಎಷ್ಟು ಆಪ್ತರಾಗುತ್ತೀರೋ ಆತನು ನಿಮ್ಮನ್ನು ಅಷ್ಟೇ ಹೆಚ್ಚು ಪ್ರೀತಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ. (ಯಾಕೋಬ 4:8) ಅದೆಲ್ಲದಕ್ಕಿಂತ ಹೆಚ್ಚಾಗಿ, ದೇವರ ಬಗ್ಗೆ ನಿಷ್ಕೃಷ್ಟವಾಗಿ ತಿಳಿದಿರುವುದು ಸಾವೇ ಇಲ್ಲದ ಜೀವನವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.—ಯೋಹಾನ 17:3.
ದೇವರನ್ನು ತಿಳಿಯುವುದು ಹೇಗೆ? ನಿಮ್ಮ ಆಪ್ತ ಸ್ನೇಹಿತನ ಬಗ್ಗೆ ಸ್ವಲ್ಪ ಯೋಚಿಸಿ. ನೀವು ಹೇಗೆ ಅಷ್ಟು ಆಪ್ತರಾದಿರಿ? ಬಹುಶಃ ನೀವು ಮೊದಲು ಅವನ ಹೆಸರು, ಆಮೇಲೆ ಅವನ ವ್ಯಕ್ತಿತ್ವ, ಅವನಿಗೆ ಇಷ್ಟವಾಗುವ ಮತ್ತು ಇಷ್ಟವಾಗದಿರುವ ವಿಷಯಗಳನ್ನು ತಿಳಿದುಕೊಂಡಿರಬಹುದು. ಆಮೇಲೆ, ಅವನು ಏನೆಲ್ಲಾ ಮಾಡಿದ್ದಾನೆ, ಭವಿಷ್ಯದ ಬಗ್ಗೆ ಅವನಿಗಿರುವ ಆಸೆ-ಆಕಾಂಕ್ಷೆಗಳೇನು ಎಂಬ ವಿಷಯಗಳನ್ನೂ ತಿಳಿದುಕೊಂಡಿರುತ್ತೀರಿ. ಹೀಗೆ ನೀವು ಅವನ ಬಗ್ಗೆ ಕಲಿತಾಗ ಅವನಿಗೆ ಆಪ್ತರಾಗಿರುತ್ತೀರಿ.
ಅದೇ ರೀತಿ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೂಲಕ ದೇವರ ಬಗ್ಗೆ ತಿಳಿದುಕೊಳ್ಳಬಹುದು:
ಈ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ತರ ಪಡೆದುಕೊಳ್ಳಲು ಈ ಪತ್ರಿಕೆಯು ಸಹಾಯ ಮಾಡುತ್ತದೆ. ಇದರಲ್ಲಿರುವ ಲೇಖನಗಳು ದೇವರು ಯಾರು ಎಂಬುದನ್ನು ಮಾತ್ರವಲ್ಲ, ನೀವು ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡರೆ ಆತನು ನಿಮಗಾಗಿ ಏನು ಮಾಡುತ್ತಾನೆ ಎಂದೂ ತಿಳಿಸುತ್ತವೆ.