ನಾನು ಒಂದು ಕ್ರೆಡಿಟ್ ಕಾರ್ಡನ್ನು ತೆಗೆದುಕೊಳ್ಳಬೇಕೋ?
ಯುವ ಜನರು ಪ್ರಶ್ನಿಸುವುದು . . .
ನಾನು ಒಂದು ಕ್ರೆಡಿಟ್ ಕಾರ್ಡನ್ನು ತೆಗೆದುಕೊಳ್ಳಬೇಕೋ?
“ನಾನು 16 ವರ್ಷ ಪ್ರಾಯದವಳಾಗಿದ್ದಾಗ ಅಂಚೆಯ ಮೂಲಕ ನನಗೆ ಮೊದಲ ಕ್ರೆಡಿಟ್ ಕಾರ್ಡಿನ ನೀಡಿಕೆಯನ್ನು ಮಾಡಲಾಯಿತು . . . ನಾನು 18 ವರ್ಷದವಳಾಗಿದ್ದಾಗ ನನ್ನ ಸಾಲವು ಸುಮಾರು 60,000 ಡಾಲರ್ ಆಗಿತ್ತು.”—ಕ್ರಿಸ್ಟಿನ್.
ಮೊದಮೊದಲು, ಕ್ರಿಸ್ಟಿನ್ ತನ್ನ ಕ್ರೆಡಿಟ್ ಕಾರ್ಡನ್ನು ಕೇವಲ ತುರ್ತು ವಸ್ತುಗಳನ್ನು ಖರೀದಿಸಲು ಮತ್ತು ಅಪರೂಪಕ್ಕೊಮ್ಮೆ, ತಾನು ಖರೀದಿಸಲು ಬಯಸಿದರೂ ನಗದು ಹಣವನ್ನು ಕೊಡಲು ಸಾಧ್ಯವಿಲ್ಲದಿದ್ದ ವಸ್ತುಗಳಿಗಾಗಿ ಉಪಯೋಗಿಸಲು ಯೋಜಿಸಿದಳು. ಆದರೆ ಕೆಲವೇ ದಿನಗಳಲ್ಲಿ, ವಿಷಯಗಳು ಅವಳ ಕೈಮೀರಿ ಹೋದವು. “ನಾನು ನಿಯಂತ್ರಣವಿಲ್ಲದೆ ಖರೀದಿಮಾಡಲು ಆರಂಭಿಸಿದೆ ಮತ್ತು ಕ್ಯಾಟಲಾಗಿನಿಂದ ವಸ್ತುಗಳನ್ನು ಆರಿಸಿ, ಹುಚ್ಚು ಹಿಡಿದವಳಂತೆ ಆರ್ಡರ್ ಕೊಡುತ್ತಾ ಹೋದೆ. ನನಗೆ ಇಷ್ಟವಿರದಿರುವ ವಸ್ತುಗಳನ್ನು ಸಹ ನಾನು ಖರೀದಿಸಿದೆ,” ಎಂದು ಕ್ರಿಸ್ಟಿನ್ ಒಪ್ಪಿಕೊಳ್ಳುತ್ತಾಳೆ. ಆದರೆ ಈಗ ಕ್ರಿಸ್ಟಿನಳಿಗೆ ಕ್ರೆಡಿಟ್ ಕಾರ್ಡುಗಳ ಬಗ್ಗೆ ಬೇರೆಯೇ ದೃಷ್ಟಿಕೋನವಿದೆ. “ಆ ಚಿಕ್ಕ ಪ್ಲ್ಯಾಸ್ಟಿಕ್ ಕಾರ್ಡು ನನ್ನ ಜೀವಿತವನ್ನು ಅಸ್ಥವ್ಯಸ್ಥಗೊಳಿಸಬಹುದೆಂಬ ಕಲ್ಪನೆಯೇ ನನ್ನ ಮನಸ್ಸಿಗೆ ಹೊಳೆದಿರಲಿಲ್ಲ,” ಎಂದು ಅವಳು ಹೇಳುತ್ತಾಳೆ.—ಟೀನ್ ಮ್ಯಾಗಸಿನ್.
ಕ್ರಿಸ್ಟಿನಳ ಅನುಭವವು ಅಪರೂಪದ ಸಂಗತಿಯೇನಲ್ಲ. ಆ ಚಿಕ್ಕ ಪ್ಲ್ಯಾಸ್ಟಿಕ್ ತುಂಡಾಗಿರುವ ಕ್ರೆಡಿಟ್ ಕಾರ್ಡನ್ನು ಉಪಯೋಗಿಸುತ್ತಾ ಬಹಳಷ್ಟು ಯುವ ಜನರು ಆರ್ಥಿಕ ಗಂಡಾಂತರದ ಜಾರುವ ದಾರಿಯಲ್ಲಿ ಸಾಗುತ್ತಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ, ಕಂಪೆನಿಗಳು ಯುವ ಜನರನ್ನು ತಮ್ಮ ವಿಶೇಷ ಗುರಿಹಲಗೆಯನ್ನಾಗಿ ಮಾಡಿವೆ. ಅತ್ಯುತ್ಸಾಹದಿಂದ ದುಂದುವೆಚ್ಚಮಾಡುವ ಅನೇಕರಿಗೆ ಕ್ರೆಡಿಟ್ ಕಾರ್ಡುಗಳು, ಜೇನ್ ಬ್ರಾಯಂಟ್ ಕ್ವಿನ್ ಕರೆದಂತೆ, “ಒಂದು ಆರ್ಥಿಕ ಅಮಲೌಷಧ”ವಾಗಸಾಧ್ಯವಿದೆ ಎಂದು ಆ ಕಂಪೆನಿಗಳಿಗೆ ಪ್ರಾಯಶಃ ಗೊತ್ತಿದೆ. “ಅವರು ಅದನ್ನು ಎಷ್ಟು ಹೆಚ್ಚು ಉಪಯೋಗಿಸುತ್ತಾರೋ, ಅದನ್ನು ನಿಲ್ಲಿಸುವುದು ಅಷ್ಟೇ ಹೆಚ್ಚು ಕಷ್ಟವಾಗುತ್ತಾ ಹೋಗುತ್ತದೆ” ಎಂದು ಅವರು ಹೇಳುತ್ತಾರೆ.
ಕ್ರೆಡಿಟ್ ಕಾರ್ಡನ್ನು ತೆಗೆದುಕೊಳ್ಳುವುದು, ತುರ್ತುಪರಿಸ್ಥಿತಿ ಏಳುವಾಗ ಅಥವಾ ಹಣವನ್ನು ನಿಮ್ಮೊಂದಿಗೆ ಒಯ್ಯುವುದು ವಿವೇಕಯುತವಾಗಿರದಿದ್ದಾಗ ಪ್ರಯೋಜನಕಾರಿಯಾಗಿದೆ ಎಂಬುದು ನಿಜ. ಕ್ರೆಡಿಟ್ ಕಾರ್ಡುಗಳು ಅಮೆರಿಕದಲ್ಲಿ ಅಷ್ಟೊಂದು ಜನಪ್ರಿಯವಾಗಿರಲು ಮತ್ತು ಇತರ ದೇಶಗಳು ಅದರ ಮಾದರಿಯನ್ನು ಅನುಸರಿಸುತ್ತಿರಲು ಅದು ಒಂದು ಕಾರಣವಾಗಿದೆ. ಅದನ್ನು ಜಾಗ್ರತೆಯಿಂದ ಉಪಯೋಗಿಸದೆ ಇದ್ದಲ್ಲಿ, ಒಂದು ಕ್ರೆಡಿಟ್ ಕಾರ್ಡು ಅದನ್ನು ಉಪಯೋಗಿಸುತ್ತಿರುವ ವ್ಯಕ್ತಿಯನ್ನು ಕತ್ತಿನ ವರೆಗೆ ಸಾಲದಲ್ಲಿ ಮುಳುಗಿಸಿ ಅವನು ಅದರಿಂದ ಸುಲಭವಾಗಿ ಮೇಲೆ ಬರದಂತೆ ಮಾಡಬಲ್ಲದು. ಹೀಗೆ ಟೊರಾಂಟೋ ಗ್ಲೋಬ್ ಆ್ಯಂಡ್ ಮೇಲ್ ಎಂಬ ವಾರ್ತಾಪತ್ರಿಕೆಯಲ್ಲಿ ಪ್ರಕಾಶಿಸಲಾದ ವರದಿಯು, “ಸಾಲದಲ್ಲಿ ಮುಳುಗಿದ 20ರಿಂದ 23 ವರ್ಷ ಪ್ರಾಯದ ಯುವ ಜನರು ಸಹಾಯಕ್ಕಾಗಿ ಟೊರಾಂಟೋದಲ್ಲಿರುವ ಸಾಲ ಸಲಹಾ ಸೇವಾಸಂಸ್ಥೆಗೆ ಮೊರೆಹೊಕ್ಕಿದ್ದವರ ಸಂಖ್ಯೆಯಲ್ಲಿ” ಮೂರು ಪಟ್ಟು ಅಭಿವೃದ್ಧಿಯನ್ನು ಗಮನಿಸಿತು. ವರದಿಯು ಗಮನಿಸಿದ್ದೇನೆಂದರೆ, ಅನೇಕರು 25,000 ಡಾಲರ್‌ಗಳಷ್ಟು ಹಣವನ್ನು ಕೊಡಲಿಕ್ಕಿತ್ತು ಮತ್ತು ಕ್ರೆಡಿಟ್ ಕಾರ್ಡಿನ ಬಿಲ್ಲುಗಳು ಆ ಸಾಲಕ್ಕೆ ಮುಖ್ಯ ಕಾರಣಗಳಾಗಿದ್ದವು.
ನಿಮ್ಮ ಬಳಿ ಒಂದು ಕ್ರೆಡಿಟ್ ಕಾರ್ಡು ಇರಬೇಕೋ? ನಿಮ್ಮ ಹೆತ್ತವರು ನಿರ್ಣಯಿಸಬೇಕಾದ ವಿಷಯವು ಇದಾಗಿದೆ. ನೀವು ಸ್ವಲ್ಪ ಸಮಯದ ವರೆಗೆ ಕಾಯಬೇಕೆಂದು ಅವರು ಯೋಚಿಸುವುದಾದರೆ ತಾಳ್ಮೆಯಿಂದಿರಿ. ಹಣವನ್ನು ಖರ್ಚುಮಾಡುವ ಅಭ್ಯಾಸಗಳಲ್ಲಿ ನೀವು ವಿವೇಕಿಗಳಾಗಿ ಕಂಡುಬರುವುದಾದರೆ, ನಿಮ್ಮ ಹೆತ್ತವರು ಬಲುಬೇಗನೇ ನಿಮಗೆ ಹೆಚ್ಚಿನ ಆರ್ಥಿಕ ಜವಾಬ್ದಾರಿಗಳನ್ನು ಕೊಡಬಹುದು. (ಲೂಕ 16:10ನ್ನು ಹೋಲಿಸಿರಿ.) ಈ ಮಧ್ಯೆ, ವಾಹನವನ್ನು ಚಲಾಯಿಸುವುದರಲ್ಲಿರುವಂತೆ, ಒಂದು ಕ್ರೆಡಿಟ್ ಕಾರ್ಡನ್ನು ಉಪಯೋಗಿಸುವುದರಲ್ಲಿ ಪ್ರತಿಫಲಗಳು ಮತ್ತು ಅಪಾಯಗಳೆರಡೂ ಇವೆಯೆಂಬುದನ್ನು ನೀವು ತಿಳಿದುಕೊಳ್ಳಬೇಕು.
ವೆಚ್ಚವನ್ನು ಲೆಕ್ಕಿಸುವುದು
ಕ್ರೆಡಿಟ್ ಕಾರ್ಡನ್ನು ಉಪಯೋಗಿಸಿ ಖರೀದಿಸುವುದು, ಮೂಲಭೂತವಾಗಿ ಹಣವನ್ನು ಸಾಲವಾಗಿ ತೆಗೆದುಕೊಳ್ಳುವುದಕ್ಕೆ ಸಮಾನವಾಗಿದೆ. ಸಾಲ ತೆಗೆದುಕೊಳ್ಳುವ ಎಲ್ಲ ಸಂದರ್ಭಗಳಲ್ಲಿ ಸತ್ಯವಾಗಿರುವಂತೆ, ಸಾಲವಾಗಿ ಜ್ಞಾನೋಕ್ತಿ 22:7) ಆದರೆ ಒಂದು ಕ್ರೆಡಿಟ್ ಕಾರ್ಡಿನಿಂದ ಖರೀದಿಸಲಾದ ವಸ್ತುಗಳಿಗೆ ನೀವು ಹೇಗೆ ಹಣವನ್ನು ಕೊಡುತ್ತೀರಿ?
ನೀವು ಪಡೆದುಕೊಂಡದ್ದನ್ನು ಹಿಂದಿರುಗಿಸಲೇಬೇಕು. (ಸಾಮಾನ್ಯವಾಗಿ, ಪ್ರತಿ ತಿಂಗಳ ಕೊನೆಯಲ್ಲಿ ಒಂದು ಮುದ್ರಿತ ಸ್ಟೇಟ್ಮೆಂಟ್ ಅನ್ನು ನಿಮಗೆ ಕಳುಹಿಸಲಾಗುತ್ತದೆ ಮತ್ತು ಅದು ಕಾರ್ಡನ್ನು ಉಪಯೋಗಿಸಿ ಮಾಡಲಾಗಿರುವ ಖರೀದಿಗಳನ್ನು ಮಾತ್ರವಲ್ಲ, ನೀವು ಹಿಂದೆ ಕೊಡಬೇಕಾಗಿರುವ ಒಟ್ಟು ಹಣವನ್ನು ಸಹ ತೋರಿಸುತ್ತದೆ. ನೀವು ಎಷ್ಟು ಹಣವನ್ನು ತಕ್ಷಣವೇ ಕೊಡುವಂತೆ ನಿರೀಕ್ಷಿಸಲಾಗುತ್ತದೆಂಬುದನ್ನು ಸಹ ಆ ಸ್ಟೇಟ್ಮೆಂಟ್ ತೋರಿಸುತ್ತದೆ. ಸಾಮಾನ್ಯವಾಗಿ ಈ ಮೊತ್ತವು ಅತಿ ಕಡಿಮೆಯಾಗಿರುತ್ತದೆ. ಆದುದರಿಂದ ನೀವು ಹೀಗೆ ಯೋಚಿಸಬಹುದು, ‘ಇದು ಅಷ್ಟೇನೂ ದೊಡ್ಡ ವಿಷಯವಲ್ಲ. ನಾನು ಪ್ರತಿ ತಿಂಗಳು ಅವಶ್ಯವಿರುವ ಕನಿಷ್ಠ ಮೊತ್ತವನ್ನು ಕಟ್ಟುತ್ತಾ ಬರುವುದಾದರೆ, ಸ್ವಲ್ಪ ಸಮಯದೊಳಗೆಯೇ ನನ್ನ ಸಾಲವು ತೀರುವುದು.’ ಆದರೆ ಸಮಸ್ಯೆಯೇನೆಂದರೆ, ಸಾವಕಾಶ ರಿಯಾಯಿತಿ ದಿನದ (ಗ್ರೇಸ್ ಪೀರಿಯಡ್) ನಂತರ, ನೀವು ಕೊಡಲಿಕ್ಕಿರುವ ಬಾಕಿ ಹಣದ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ, ಮತ್ತು ಕ್ರೆಡಿಟ್ ಕಾರ್ಡಿನ ಮೇಲೆ ವಿಧಿಸಲಾಗುವ ಈ ರೀತಿಯ ಬಡ್ಡಿಯು ಬಹಳ ಹೆಚ್ಚಾಗಿರಬಲ್ಲದು. *
ಜೋಸೆಫ್‌ನ ಸನ್ನಿವೇಶವನ್ನು ಪರಿಗಣಿಸಿರಿ. ಅವನ ಒಂದು ತಿಂಗಳಿನ ಸ್ಟೇಟ್ಮೆಂಟಿನಲ್ಲಿ ಸುಮಾರು 1,000 ಡಾಲರ್‌ಗಳಷ್ಟು ಬಾಕಿಯಿತ್ತು. ಈ ಬಾಕಿ ಹಣದಲ್ಲಿ ಜೋಸೆಫನಿಗೆ ಕೇವಲ ಕನಿಷ್ಠ ಮೊತ್ತದ 20 ಡಾಲರ್‌ಗಳನ್ನು ಮಾತ್ರವೇ ಪಾವತಿಮಾಡಲಿಕ್ಕಿತ್ತು ಎಂಬುದು ನಿಜ. ಆದರೆ ಸ್ಟೇಟ್ಮೆಂಟನ್ನು ಹೆಚ್ಚು ಗಮನಕೊಟ್ಟು ನೋಡಿದಾಗ, ಆ ತಿಂಗಳ ಬಾಕಿ ಉಳಿದ ಹಣದ ಮೇಲೆ ಸುಮಾರು 17 ಡಾಲರ್‌ಗಳಷ್ಟು ಬಡ್ಡಿ ಹಾಕಲಾಗಿರುವುದನ್ನು ಜೋಸೆಫ್ ಕಂಡುಹಿಡಿದನು! ಇದರ ಅರ್ಥ ಜೋಸೆಫ್ ಕನಿಷ್ಠ 20 ಡಾಲರುಗಳನ್ನು ಪಾವತಿಮಾಡುವುದಾದರೂ, ಅವನ 1,000 ಡಾಲರುಗಳ ಸಾಲದಲ್ಲಿ ಕೇವಲ 3 ಡಾಲರ್‌ಗಳಷ್ಟು ಕಡಿಮೆಯಾಗುತ್ತಿತ್ತು!
ಬಾಕಿಯಿರುವ ಹಣದಲ್ಲಿ ಕನಿಷ್ಠ ಮೊತ್ತವನ್ನು ಕಟ್ಟುವುದಾದರೆ ಒಂದು ಕ್ರೆಡಿಟ್ ಬಿಲ್ಲನ್ನು ನಿವಾರಿಸಲು ಎಷ್ಟು ಸಮಯ ಹಿಡಿಯುತ್ತದೆ? ಒಂದು ಊಹಾತ್ಮಕ ದೃಷ್ಟಾಂತವನ್ನು ಉಲ್ಲೇಖಿಸುತ್ತಾ, ಫೆಡರಲ್ ಟ್ರೇಡ್ ಕಮಿಷನ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಎಂಬ ಎರಡು ಕ್ರೆಡಿಟ್ ಕಾರ್ಡ್ ಸಂಸ್ಥೆಗಳಿಂದ ಪ್ರಕಾಶಿಸಲಾದ ಪುಸ್ತಿಕೆಯು ಗಮನಿಸುವುದು: “ನಿಮಗೆ 2,000 ಡಾಲರ್‌ಗಳಷ್ಟು ಬಾಕಿ ಸಾಲವಿರುವುದಾದರೆ, ಮತ್ತು ಇದಕ್ಕೆ 18.5% ಬಡ್ಡಿ ಹಾಗೂ ತಿಂಗಳಿಗೆ ಕನಿಷ್ಠ ಮೊತ್ತದ ಹಣವನ್ನು ಕಟ್ಟಿಲಿಕ್ಕಿರುವುದಾದರೆ, ಸಾಲವನ್ನು ಪೂರ್ತಿಯಾಗಿ ತೀರಿಸಲು 11 ವರ್ಷಗಳಿಗಿಂತಲೂ ಹೆಚ್ಚು ಸಮಯ ತಗಲುವುದು ಮತ್ತು ಕೇವಲ ಬಡ್ಡಿಯೇ 1,934 ಡಾಲರ್‌ಗಳಷ್ಟಾಗುವುದು. ಹೀಗೆ ಇದು ಮೂಲ ಖರೀದಿಯ ಒಟ್ಟು ಮೊತ್ತಕ್ಕಿಂತಲೂ ಹೆಚ್ಚುಕಡಿಮೆ ಇಮ್ಮಡಿಯಾಗುವುದು.”
ನೀವು ನೋಡಿದಂತೆ, ಜಾಗರೂಕರಾಗಿರದೇ ಇರುವಲ್ಲಿ, ಒಂದು ಕ್ರೆಡಿಟ್ ಕಾರ್ಡು ನಿಮ್ಮನ್ನು ತೀರ ಆಳವಾದ ಆರ್ಥಿಕ ಪಾಶದೊಳಗೆ ಸಿಲುಕಿಸಬಲ್ಲದು. “ನಾನು ವಾಸ್ತವದಲ್ಲಿ ಪ್ರತಿಯೊಂದು ವಸ್ತುವಿಗೆ ಸುಮಾರು ಎರಡರಷ್ಟು ಹಣವನ್ನು ಕೊಡುತ್ತಿದ್ದೆ,” ಎಂದು ಕ್ರಿಸ್ಟಿನ್ ಹೇಳುತ್ತಾಳೆ. “ಹಣಕಟ್ಟುವ ಸಮಸ್ಯೆಗಳನ್ನು ನಾನು ಎದುರಿಸಿದಾಗ, ತಡವಾಗಿ ಹಣಕಟ್ಟುವುದಕ್ಕಾಗಿ ಹೆಚ್ಚಿಗೆ ಹಣವನ್ನು ಸಾಲಗಾರರು ತೆಗೆದುಕೊಳ್ಳುತ್ತಿದ್ದರು. ಏನು ಮಾಡಬೇಕೆಂದು ನನಗೆ ತೋಚಲೇ ಇಲ್ಲ.”
ಕ್ರೆಡಿಟ್ ಕಾರ್ಡಿನ ಜವಾಬ್ದಾರಿಯುತ ಉಪಯೋಗ
“ಈಗ ಖರೀದಿಸಿರಿ, ಅನಂತರ ಹಣ ಕಟ್ಟಿರಿ” ಎಂಬ ಧೋರಣೆಯಿಂದ ಖರೀದಿಸುವುದು ಅಪಾಯಕಾರಿಯಾಗಿರಸಾಧ್ಯವಿದೆ ಎಂಬುದನ್ನು ಕ್ರಿಸ್ಟಿನ್ ಕಹಿ ಅನುಭವದಿಂದ ಕಲಿತುಕೊಂಡಳು. ಸಾಲಗಳು ತೀರ ವೇಗದಲ್ಲಿ ಬೆಳೆಯಸಾಧ್ಯವಿದೆ ಮತ್ತು ನೀವು ಅದನ್ನು ತಿಳಿದುಕೊಳ್ಳುವ ಮೊದಲು, ಪ್ರತಿ ತಿಂಗಳು ನೀವು ಪಾವತಿಮಾಡುವ ಕನಿಷ್ಠ ಮೊತ್ತದ ಹಣವು ಕೇವಲ ನಿಮ್ಮ ಬಡ್ಡಿ ದರಗಳನ್ನು ಮಾತ್ರವೇ ತೀರಿಸುತ್ತಿರಬಹುದು. ಇಂತಹ
ಆರ್ಥಿಕ ಪಾಶದೊಳಗೆ ಬೀಳುವುದನ್ನು ತಪ್ಪಿಸಲು, ಕಾರ್ಡನ್ನು ಜವಾಬ್ದಾರಿಯುತವಾಗಿ ಉಪಯೋಗಿಸುವವರು ಏನನ್ನು ಮಾಡುತ್ತಾರೆ?● ಅವರು ತಮ್ಮ ಖರೀದಿಗಳ ಸರಿಯಾದ ಲೆಕ್ಕವನ್ನು ಇಟ್ಟುಕೊಳ್ಳುತ್ತಾರೆ ಮತ್ತು ತಾವು ಖರೀದಿಸಿದ ವಸ್ತುಗಳಿಗೆ ಮಾತ್ರವೇ ಹಣವನ್ನು ಕಟ್ಟುತ್ತಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಅವರು ತಮ್ಮ ತಿಂಗಳ ಸ್ಟೇಟ್ಮೆಂಟನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಾರೆ.
● ಅವರು ತಮ್ಮ ಬಿಲ್ಲುಗಳನ್ನು ತಡಮಾಡದೆ ಕಟ್ಟುತ್ತಾರೆ ಯಾಕೆಂದರೆ ಭವಿಷ್ಯತ್ತಿನಲ್ಲಿ ಪ್ರಾಯಶಃ ಕೆಲಸಕ್ಕೆ ಅಥವಾ ವಿಮೆಗೆ ಅರ್ಜಿಯನ್ನು ಹಾಕುವಲ್ಲಿ ಅಥವಾ ಒಂದು ಕಾರು ಅಥವಾ ಒಂದು ಮನೆಗೆ ಸಾಲವನ್ನು ಕೇಳುವ ಸಂದರ್ಭದಲ್ಲಿ, ಉತ್ತಮವಾಗಿ ಸಾಲವನ್ನು ತೀರಿಸುವ ವ್ಯಕ್ತಿಯಾಗಿ ದಾಖಲೆ ಇರುವುದು ಸ್ವತಃ ತಮಗೆ ಪ್ರಯೋಜನಕಾರಿ ಎಂಬುದನ್ನು ಅವರು ಮನಗಾಣುತ್ತಾರೆ.
● ಸಾಧ್ಯವಿರುವುದಾದರೆ, ಹಿಂದಕ್ಕೆ ಕೊಡಲಿಕ್ಕಿರುವ ಹಣವನ್ನು ಪೂರ್ತಿಯಾಗಿ ಕಟ್ಟಿ ಹೀಗೆ ಬಾಕಿಯಿರುವ ಹಣದ ಮೇಲೆ ಬಡ್ಡಿ ಬೀಳುವುದನ್ನು ತಡೆಯುವರು.
● ಅವರು ತಮ್ಮ ಕ್ರೆಡಿಟ್ ಕಾರ್ಡ್ ನಂಬರನ್ನು ಅಥವಾ ಅದರ ಅವಧಿಯು ತೀರುವ ತಾರೀಖನ್ನು ಫೋನಿನ ಮೂಲಕ ಯಾರಿಗೂ ತಿಳಿಸುವುದಿಲ್ಲ. ಆದರೆ ತಾವು ವ್ಯವಹರಿಸುವ ವ್ಯಕ್ತಿ ಅಥವಾ ಕಂಪೆನಿಯ ಪರಿಚಯ ಅವರಿಗೆ ಇರುವುದಾದರೆ, ಆಗ ಮಾತ್ರ ಅವರದನ್ನು ತಿಳಿಸುತ್ತಾರೆ.
● ಅವರು ತಮ್ಮ ಕ್ರೆಡಿಟ್ ಕಾರ್ಡನ್ನು ಯಾರಿಗೂ, ತಮ್ಮ ಮಿತ್ರನಿಗೂ ಸಾಲವಾಗಿ ಎಂದೂ ಕೊಡುವುದಿಲ್ಲ. ಎಷ್ಟೆಂದರೂ, ಕಾರ್ಡು ದುರುಪಯೋಗಿಸಲ್ಪಟ್ಟರೆ ಕಾರ್ಡನ್ನು ಉಪಯೋಗಿಸುವ ಮಾಲೀಕನೇ ತನ್ನ ಉತ್ತಮ ಹೆಸರನ್ನು ಹಾಳುಮಾಡಿಕೊಳ್ಳುವನು.
● ಅವರು ತಮ್ಮ ಕ್ರೆಡಿಟ್ ಕಾರ್ಡನ್ನು ಒಂದು ಬ್ಯಾಂಕ್ ಕಾರ್ಡು ಎಂಬಂತೆ ತಕ್ಷಣವೇ ಹಣವನ್ನು ಪಡೆದುಕೊಳ್ಳುವ ಮಾಧ್ಯಮವಾಗಿ ಉಪಯೋಗಿಸುವುದರಿಂದ ದೂರವಿರುವರು. ಖರೀದಿಗಾಗಿರುವ ಹಣಕ್ಕಿಂತಲೂ ಮುಂಗಡವಾಗಿ ಪಡೆದುಕೊಂಡಿರುವ ನಗದು ಹಣಕ್ಕೆ ಹೆಚ್ಚಿನ ಬಡ್ಡಿ ದರವಿರುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ.
● ಅವರು ತಮಗೆ ಸಿಗುವ ಪ್ರತಿಯೊಂದು ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ತುಂಬಿಸಿ ಕಳುಹಿಸುವುದಿಲ್ಲ. ಹೆಚ್ಚಿನ ಯುವ ಜನರಿಗೆ, ಒಂದು ಕಾರ್ಡು ಮಾತ್ರ ಸಾಕು.
● ಒಂದು ಖರೀದಿಯನ್ನು ಮಾಡುತ್ತಿರುವಾಗ, ಅವರು ನೋಟುಗಳನ್ನು ಅಥವಾ ನಾಣ್ಯಗಳನ್ನು ಉಪಯೋಗಿಸದೇ ಇದ್ದರೂ, ಈಗಲೂ ನಿಜವಾದ ಹಣವನ್ನು ಖರ್ಚುಮಾಡುತ್ತಿದ್ದೇವೆ ಎಂಬ ಪೂರ್ಣ ಅರಿವಿನೊಂದಿಗೆ, ತಮ್ಮ ಕ್ರೆಡಿಟ್ ಕಾರ್ಡನ್ನು ಬಹಳ ಎಚ್ಚರಿಕೆಯಿಂದ ಉಪಯೋಗಿಸುತ್ತಾರೆ.
ಪ್ರಯೋಜನಗಳಲ್ಲಿ ಆನಂದಿಸುವುದು
ನಿಮ್ಮ ಬಳಿ ಈಗಲೇ ಒಂದು ಕ್ರೆಡಿಟ್ ಕಾರ್ಡು ಇರಲಿ ಅಥವಾ ಹತ್ತಿರದ ಭವಿಷ್ಯತ್ತಿನಲ್ಲಿ ಅದನ್ನು ಪಡೆದುಕೊಳ್ಳಲು ನೀವು ಯೋಚಿಸುತ್ತಿರಲಿ, ಪ್ರಯೋಜನಗಳು ಮತ್ತು ಅಪಾಯಗಳು ಇವೆರಡರ ಕುರಿತು ಸಂಪೂರ್ಣವಾಗಿ ಪರಿಚಿತರಾಗಿರಿ. ಈ ಕೆಳಗಿನ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಿರಿ: ನನಗೆ ಒಂದು ಕ್ರೆಡಿಟ್ ಕಾರ್ಡಿನ ಆವಶ್ಯಕತೆಯಿದೆಯೆಂದು ಏಕೆ ಅನಿಸುತ್ತದೆ? ಪ್ರಾಪಂಚಿಕ ವಸ್ತುಗಳನ್ನು ಪಡೆದುಕೊಳ್ಳಲಿಕ್ಕಾಗಿ, ಹೊಸತಾಗಿ ಬಂದಿರುವ ಫ್ಯಾಷನ್‌ಗಾಗಿ, ನನ್ನ ಸ್ನೇಹಿತರನ್ನು ಪ್ರಭಾವಿಸಲಿಕ್ಕಾಗಿ ನನಗದು ಬೇಕೊ? ಕ್ರೈಸ್ತ ಅಪೊಸ್ತಲ ಪೌಲನು ಯಾವುದನ್ನು “ಅನ್ನ ವಸ್ತ್ರಗಳು” ಎಂದು ಕರೆದನೋ ಆ ಮೂಲಭೂತ ವಸ್ತುಗಳಲ್ಲಿ ಹೆಚ್ಚು ಸಂತೃಪ್ತನಾಗಿರಲು ನಾನು ಕಲಿತುಕೊಳ್ಳಬೇಕೋ? (1 ತಿಮೊಥೆಯ 6:8) ಕ್ರೆಡಿಟ್ ಕಾರ್ಡ್ ಸಾಲಗಳು, ಜೀವಿತದ ಹೆಚ್ಚು ಪ್ರಾಮುಖ್ಯವಾದ ವಿಷಯಗಳು ನನ್ನ ದೃಷ್ಟಿಯಿಂದ ಮರೆಯಾಗುವಂತೆ ಕಾರಣವಾಗುವ ವೇದನಾಮಯ ಆರ್ಥಿಕ ಹೊರೆಗೆ ನಡಿಸುವವೋ?—ಮತ್ತಾಯ 6:33; ಫಿಲಿಪ್ಪಿ 1:8-11.
ಈ ಪ್ರಶ್ನೆಗಳ ಕುರಿತು ಚಿಂತಿಸಿರಿ ಮತ್ತು ನಿಮ್ಮ ಹೆತ್ತವರೊಂದಿಗೆ ಅದರ ಕುರಿತು ಚರ್ಚಿಸಿರಿ. ಹೀಗೆ ಮಾಡುವುದಾದರೆ, ನಿಮ್ಮ ಬಳಿ ಕ್ರೆಡಿಟ್ ಕಾರ್ಡು ಇರಲಿ, ಇಲ್ಲದಿರಲಿ, ಅನೇಕರು ತಮ್ಮ ಮೇಲೆ ಬರಮಾಡಿಕೊಂಡಿರುವ ಹಣಕಾಸಿನ ಮನೋವ್ಯಥೆಯಿಂದ ನೀವು ದೂರವಿರುವಿರಿ.—ಜ್ಞಾನೋಕ್ತಿ 22:3.
[ಪಾದಟಿಪ್ಪಣಿಗಳು]
^ ಒಂದು ನಿರ್ದಿಷ್ಟ ಕ್ರೆಡಿಟ್ ಕಾರ್ಡ್ ಕಂಪೆನಿಯು ವಿಧಿಸಿರುವ ಬಡ್ಡಿಯನ್ನು, ಅರ್ಜಿಯಲ್ಲಿ ಅಥವಾ ತಿಂಗಳ ಸ್ಟೇಟ್ಮೆಂಟಿನಲ್ಲಿ ತೋರಿಸಲಾಗಿರುವ ವಾರ್ಷಿಕ ಶೇಕಡ ದರ (ಎಪಿಆರ್)ವನ್ನು ನೋಡುವ ಮೂಲಕ ಕಂಡುಹಿಡಿಯಬಹುದು.
[ಪುಟ 24ರಲ್ಲಿರುವ ಚೌಕ]
ಹೆತ್ತವರ ಸಮ್ಮತಿಯ ಮಹತ್ವ
ಒಂದು ಅರ್ಜಿಯನ್ನು ಅಂಚೆಯ ಮೂಲಕ ಪಡೆದಾಗ ತಮ್ಮ ಸ್ವಂತ ಕ್ರೆಡಿಟ್ ಕಾರ್ಡನ್ನು ತೆಗೆದುಕೊಳ್ಳುವ ಅವಕಾಶವು ಮೊದಲ ಬಾರಿ ಅನೇಕ ಯುವ ಜನರಿಗೆ ಒದಗಿ ಬರುತ್ತದೆ. ಕೆಲವರು, ಸ್ವಲ್ಪ ಸಮಯಾವಧಿಯಲ್ಲೇ ಅನೇಕ ಅರ್ಜಿಗಳನ್ನು ಪಡೆದುಕೊಳ್ಳುತ್ತಾರೆ. “ಕ್ರೆಡಿಟ್ ಕಾರ್ಡನ್ನು ನೀಡುವ ಕಂಪೆನಿಗಳು ಅದನ್ನು ಯುವ ಜನರ ಕೈಗಳಿಗೆ ಕೊಡಲು ತೀವ್ರ ಸ್ಪರ್ಧೆಯನ್ನು ನಡೆಸುತ್ತಾರೆ, ಯಾಕೆಂದರೆ ನಾವು ಆರಂಭದಲ್ಲಿ ಆಯ್ಕೆಮಾಡುವ ಕಾರ್ಡನ್ನೇ ಯಾವಾಗಲೂ ಉಪಯೋಗಿಸುವ ಪ್ರವೃತ್ತಿಯುಳ್ಳವರಾಗಿದ್ದೇವೆಂದು ಸಮೀಕ್ಷೆಗಳು ತೋರಿಸುತ್ತವೆ,” ಎಂದು ಜೇನ್ ಬ್ರಾಯಂಟ್ ಕ್ವಿನ್ ವಿವರಿಸುತ್ತಾರೆ.
ಈಗಾಗಲೇ ಕ್ರೆಡಿಟ್ ಕಾರ್ಡನ್ನು ಹೊಂದಿರುವ ಒಬ್ಬ ಹೆತ್ತವರಾಗಲಿ, ಇನ್ನೊಬ್ಬ ಪ್ರೌಢ ವ್ಯಕ್ತಿಯಾಗಲಿ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡಿನ ಅರ್ಜಿಯ ಮೇಲೆ ಸಹಿಯನ್ನು ಹಾಕಬೇಕಾಗುತ್ತದೆ. ಹೀಗೆ, ಮಾಡಲಾಗುವ ಖರೀದಿಗಳಿಗೆ ಹಣವು ಪಾವತಿಮಾಡಲ್ಪಡುವುದೆಂಬ ಸ್ವಲ್ಪ ಭರವಸೆಯು ಕಾರ್ಡನ್ನು ನೀಡುವ ಕಂಪೆನಿಗೆ ದೊರೆಯುತ್ತದೆ. ದುಃಖಕರವಾಗಿ, ಅನೇಕ ಯುವ ಜನರು ಈ ಹೆಜ್ಜೆಯನ್ನು ತಪ್ಪಿಸಿಕೊಳ್ಳಲು ಮೋಸಮಾಡುತ್ತಾರೆ. ಒಬ್ಬ ಯುವತಿಯು ಆಕೆಯ ಅಜ್ಜಿಗೆ ತಿಳಿಸದೆ, ಅವರ ಹೆಸರನ್ನು ಮುಖ್ಯ ಅರ್ಜಿದಾರರಾಗಿ ಮತ್ತು ತನ್ನ ಸ್ವಂತ ಹೆಸರನ್ನು ಜಂಟಿ ಅರ್ಜಿದಾರಳಾಗಿ ಕೊಟ್ಟಳು. ಹತ್ತಾರು ಸಾವಿರ ಡಾಲರುಗಳಷ್ಟು ಹಣ ಸಂದಾಯ ಮಾಡಲಿಕ್ಕಿತ್ತೆಂದು ತಿಳಿದುಬಂದಾಗ ಅವಳ ಅಜ್ಜಿಗಾದ ಆಶ್ಚರ್ಯವನ್ನು ಸ್ವಲ್ಪ ಊಹಿಸಿಕೊಳ್ಳಿರಿ!
ಹೆತ್ತವರಲ್ಲಿ ಒಬ್ಬರ ಅಥವಾ ಇನ್ನೊಬ್ಬ ವ್ಯಕ್ತಿಯ ಸುಳ್ಳು ಸಹಿಯನ್ನು ಕ್ರೆಡಿಟ್ ಕಾರ್ಡಿನ ಅರ್ಜಿಯ ಮೇಲೆ ಹಾಕುವುದು ಅಪ್ರಾಮಾಣಿಕತೆಯಾಗಿದೆ ಮತ್ತು ಅಪ್ರಾಮಾಣಿಕತೆಯನ್ನು ಯೆಹೋವನು ಖಂಡಿಸುತ್ತಾನೆ. (ಜ್ಞಾನೋಕ್ತಿ 11:1; ಇಬ್ರಿಯ 13:18) ಆದುದರಿಂದ ನಿಮಗೆ ಒಂದು ಕ್ರೆಡಿಟ್ ಕಾರ್ಡು ಬೇಕಾಗಿರುವುದಾದರೆ, ಅದರ ಬಗ್ಗೆ ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ. ಅವರ ಸಮ್ಮತಿಯನ್ನು ಪಡೆದುಕೊಳ್ಳುವುದು ನಿಮ್ಮ ದೀರ್ಘಾವಧಿಯ ಜೀವಿತದಲ್ಲಿ ನಿಮಗೆ ತುಂಬ ಸಹಾಯಕಾರಿಯಾಗಿರುವುದು. ನಿಮ್ಮ ಹೆತ್ತವರಿಗೆ ಸಾಲಗಳನ್ನು ಸಂಪೂರ್ಣವಾಗಿ ತೀರಿಸುವುದರಲ್ಲಿ ಪ್ರಾಯಶಃ ಅನುಭವವಿದ್ದಿರಬಹುದು ಮತ್ತು ನಿಮಗೆ ಅವರು ಸ್ವಸ್ಥವಾದ ಸಲಹೆಯನ್ನು ಕೊಡಲು ಶಕ್ತರಾಗಿರುವರು. ಆದುದರಿಂದ ಅವರೊಂದಿಗೆ ಮಾತಾಡಿರಿ ಮತ್ತು ಒಂದು ಕ್ರೆಡಿಟ್ ಕಾರ್ಡನ್ನು ತೆಗೆದುಕೊಳ್ಳಲು ಯಾವುದೇ ಅಪ್ರಾಮಾಣಿಕ ಮಾರ್ಗಕ್ಕಿಳಿಯಬೇಡಿರಿ.
[ಪುಟ 23ರಲ್ಲಿರುವ ಚಿತ್ರ]
ಕ್ರೆಡಿಟ್ ಕಾರ್ಡನ್ನು ತಿಳಿಗೇಡಿತನದಿಂದ ಉಪಯೋಗಿಸುವುದು ಆರ್ಥಿಕ ವಿಪತ್ತಿಗೆ ನಡಿಸಸಾಧ್ಯವಿದೆ