ಜನಪ್ರಿಯ ಪದ್ಧತಿಗಳ ಕುರಿತು ಒಂದು ಸಮತೂಕ ನೋಟ
ಬೈಬಲಿನ ದೃಷ್ಟಿಕೋನ
ಜನಪ್ರಿಯ ಪದ್ಧತಿಗಳ ಕುರಿತು ಒಂದು ಸಮತೂಕ ನೋಟ
“ಒಂದಲ್ಲ ಒಂದು ಸಮಯದಲ್ಲಿ ಮತ್ತು ಒಂದಲ್ಲ ಒಂದು ಸ್ಥಳದಲ್ಲಿ ಖಂಡನೆಗೊಳಗಾಗದೇ ಇರುವಂಥ ಆಚರಣೆಯು ಇಲ್ಲವೇ ಇಲ್ಲ. ಆದರೆ ಅದೇ ಆಚರಣೆಯು ಮತ್ತೊಂದು ಸಮಯದಲ್ಲಿ ಮತ್ತು ಸ್ಥಳದಲ್ಲಿ ಕರ್ತವ್ಯವಾಗಿ ಹೊರಿಸಲ್ಪಟ್ಟಿತ್ತು.”
ಈ ಅವಲೋಕನದೊಂದಿಗೆ, ವಿಲ್ಯಮ್ ಲೆಕ್ಕಿ ಎಂಬ ಐರಿಷ್ ಚರಿತ್ರೆಗಾರನು ಜನರ ಚಂಚಲ ಸ್ವಭಾವವನ್ನು ಸಾರಾಂಶಿಸುತ್ತಾನೆ. ಶತಮಾನಗಳಿಂದಲೂ ಬಂದಿರುವ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೂ ಕೂಡ ಅವನ ಹೇಳಿಕೆಯು ಅನ್ವಯವಾಗಬಹುದು. ನಿಶ್ಚಯವಾಗಿಯೂ, ಒಂದು ಸಮಯದಲ್ಲಿ ದೈನಂದಿನ ಜೀವನದ ಬಹುಮುಖ್ಯ ಅಂಗವಾಗಿ ವೀಕ್ಷಿಸಲ್ಪಡುತ್ತಿದ್ದ ಅನೇಕ ಪದ್ಧತಿಗಳು, ಕಾಲಾನಂತರ ಖಂಡನೆಗೊಳಗಾದವು. ಆದರೆ ಇದು ಆಶ್ಚರ್ಯಗೊಳಿಸುವಂಥ ವಿಷಯವೇನಲ್ಲ, ಏಕೆಂದರೆ ಕ್ರೈಸ್ತ ಅಪೊಸ್ತಲ ಪೌಲನು ಗಮನಿಸಿದಂತೆ, “ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.”—1 ಕೊರಿಂಥ 7:31.
ಹೌದು, ಮಾನವ ಸಮಾಜವು ಯಾವಾಗಲೂ ಪರಿವರ್ತನೆಯಾಗುತ್ತಾ ಬಂದಿದೆ. ಇದು ಅನೇಕವೇಳೆ ಜನರ ಪ್ರವೃತ್ತಿಗಳಲ್ಲಿ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಗುತ್ತಿರುವ ಬಹಳಷ್ಟು ಬದಲಾಣೆಗಳಲ್ಲಿ ಕಾಣಸಿಗುತ್ತದೆ. ಆದರೆ, ಕ್ರೈಸ್ತರು “ಲೋಕದವರಲ್ಲ” ಅಂದರೆ, ದೇವರಿಂದ ವಿಮುಖರಾಗಿರುವ ಮಾನವ ಸಮಾಜದಿಂದ ಅವರು ಪ್ರತ್ಯೇಕರಾಗಿರುತ್ತಾರೆ. ಆದರೂ, ಕ್ರೈಸ್ತರು ‘ಲೋಕದಲ್ಲಿದ್ದಾರೆ’ ಎಂದು ಬೈಬಲ್ ಅಂಗೀಕರಿಸುತ್ತದೆ ಮತ್ತು ಇದು ಅವರು ಪ್ರತ್ಯೇಕವಾದಿಗಳಾಗಿ ಜೀವಿಸುವಂತೆ ಆದೇಶವನ್ನು ನೀಡುವುದಿಲ್ಲ. ಆದುದರಿಂದ, ಪದ್ಧತಿಗಳ ಕುರಿತು ಒಂದು ಸಮತೂಕ ನೋಟವನ್ನು ಹೊಂದಿರುವುದು ಬಹಳ ಪ್ರಾಮುಖ್ಯ.—ಯೋಹಾನ 17:11, 14-16; 2 ಕೊರಿಂಥ 6:14-17; ಎಫೆಸ 4:17-19; 2 ಪೇತ್ರ 2:20.
ಪದ್ಧತಿಗಳು ಎಂದರೇನು?
ಒಂದು ನಿರ್ದಿಷ್ಟ ಸ್ಥಳ ಇಲ್ಲವೇ ವರ್ಗಕ್ಕೆ ಸೇರಿದ ಜನರಲ್ಲಿ ಸಾಮಾನ್ಯವಾಗಿರುವ ಹಾಗೂ ಸಾಮಾಜಿಕ ಜೀವನಕ್ಕೆ ಅನ್ವಯಿಸುವ ರೂಢಿಗಳೇ ಪದ್ಧತಿಗಳಾಗಿವೆ. ಊಟದ ಸಮಯದಲ್ಲಿ ತೋರಿಸುವ ಸಭ್ಯತೆಗಳು ಹಾಗೂ ಶಿಷ್ಟಾಚಾರಗಳಂತಹ ಕೆಲವು ಪದ್ಧತಿಗಳನ್ನು, ಗುಂಪುಗೂಡಿ ಮಾಡುವ ಕಾರ್ಯಕಲಾಪಗಳಲ್ಲಿ ಜನರ ನಡತೆಯನ್ನು ಶಿಸ್ತುಗೊಳಿಸುವುದಕ್ಕಾಗಿ ಸೃಷ್ಟಿಮಾಡಿರಬಹುದು. ಇವು, ಒಬ್ಬರಿಗೊಬ್ಬರು ಗೌರವದಿಂದ ನಡೆದುಕೊಳ್ಳುವಂತೆ ಹಾಗೂ ನಾಗರಿಕರಂತೆ ವರ್ತಿಸಲು ಸಹಾಯಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ, ಸಾಮಾಜಿಕ ಸಭ್ಯತೆಗಳನ್ನು ಎಣ್ಣೆಗೆ ಹೋಲಿಸಬಹುದು. ಇವು ಮಾನವ ಸಂಬಂಧಗಳೆಂಬ ಚಕ್ರಗಳು ಸರಾಗವಾಗಿ ಚಲಿಸುವಂತೆ ಸಾಧ್ಯಮಾಡುತ್ತವೆ.
ಪದ್ಧತಿಗಳು ಧರ್ಮದಿಂದ ಹೆಚ್ಚು ಆಳವಾಗಿ ಪ್ರಭಾವಿಸಲ್ಪಟ್ಟಿವೆ. ವಾಸ್ತವದಲ್ಲಿ, ಅನೇಕ ಪದ್ಧತಿಗಳು ಹಳೇಕಾಲದ ಮೂಢನಂಬಿಕೆಗಳಿಂದ ಮತ್ತು ಬೈಬಲನ್ನು ಅನುಸರಿಸದಿದ್ದ ಧರ್ಮಗಳಿಂದ ಹುಟ್ಟಿ ಬಂದವು. ಉದಾಹರಣೆಗೆ, ವಿಯೋಗದಲ್ಲಿರುವವರಿಗೆ ಹೂಗುಚ್ಛಗಳನ್ನು ಕೊಡುವುದು ಮೂಲತಃ ಧಾರ್ಮಿಕ ಮೂಢನಂಬಿಕೆಯಿಂದ ಬಂದಿರಬಹುದು. * ಅದರೊಂದಿಗೆ, ಅನೇಕವೇಳೆ ಗಂಡುಮಗುವಿಗೆ ಸಂಬಂಧಿಸಲ್ಪಟ್ಟ ನೀಲಿ ಬಣ್ಣವು ದೆವ್ವಗಳನ್ನು ಹೆದರಿಸುವುಕ್ಕಾಗಿಯೆಂದು ನೆನಸಲಾಗಿತ್ತು. ಕಣ್ಕಪ್ಪು (ಮಸ್ಕಾರವು) ಕೆಟ್ಟಕಣ್ಣಿನಿಂದ ರಕ್ಷಣೆಯನ್ನು ನೀಡಲು ನೆರವಾಗುವುದಾದರೆ, ಲಿಪ್‌ಸ್ಟಿಕ್ ಹೆಂಗಸಿನ ಬಾಯಿಯ ಮೂಲಕ ದೆವ್ವಗಳು ಒಳಗೆ ನುಸುಳಿ ಅವಳನ್ನು ಹಿಡಿಯದಂತೆ ತಡೆಯುವುದಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಆಕಳಿಸುವಾಗ ಬಾಯನ್ನು ಮುಚ್ಚುವಂತಹ ಅಲ್ಪವಾದ ಒಂದು ಪದ್ಧತಿಯೂ ಕೂಡ, ಅಗಲವಾಗಿ ಬಾಯಿತೆರೆದಿರುವ ಸಮಯದಲ್ಲಿ ವ್ಯಕ್ತಿಯ ಆತ್ಮವು ಬಾಯಿಯ ಮೂಲಕ ತಪ್ಪಿಸಿಕೊಂಡು ಹೋಗಿಬಿಡಬಹುದೆಂಬ ಕಲ್ಪನೆಯಿಂದ ಬಂದಿರಬಹುದು. ಹೀಗಿದ್ದರೂ, ವರ್ಷಗಳು ದಾಟಿದಂತೆ, ಧರ್ಮದೊಂದಿಗೆ ಸಂಬಂಧಿಸಿರುವಂತಹ ವಿಷಯಗಳು ಕಣ್ಮರೆಯಾಗಿವೆ ಮತ್ತು ಇಂದು ಈ ರೂಢಿಗಳು ಮತ್ತು ಪದ್ಧತಿಗಳು ಯಾವುದೇ ಧಾರ್ಮಿಕ ಮಹತ್ವವನ್ನು ಹೊಂದಿರುವುದಿಲ್ಲ.
ಕ್ರೈಸ್ತರಿಗಿರುವ ಚಿಂತೆ
ಒಂದು ನಿರ್ದಿಷ್ಟ ಪದ್ಧತಿಯನ್ನು ಅನುಸರಿಬೇಕೋ ಬೇಡವೋ ಎಂಬುದನ್ನು ಒಬ್ಬ ಕ್ರೈಸ್ತನು ನಿರ್ಣಯಿಸಬೇಕಾದಾಗ, ಅವನ ಮುಖ್ಯ ಚಿಂತೆಯು, ಈ ವಿಷಯದ ಕುರಿತು ಬೈಬಲಿನಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ದೃಷ್ಟಿಕೋನವೇನು ಎಂಬುದೇ ಆಗಿರಬೇಕು. ಹಿಂದೆ, ಕೆಲವು ಸಮುದಾಯಗಳು ಸಹಿಸಿಕೊಳ್ಳುತ್ತಿದ್ದಂತಹ ಕೆಲವು ರೂಢಿಗಳನ್ನು ದೇವರು ಖಂಡಿಸಿದ್ದನು. ಇವುಗಳಲ್ಲಿ ಶಿಶುಬಲಿ, ರಕ್ತದ ದುರುಪಯೋಗ ಮತ್ತು ಹಲವಾರು ಲೈಂಗಿಕ ಆಚರಣೆಗಳು ಸೇರಿದ್ದವು. (ಯಾಜಕಕಾಂಡ 17:13, 14; 18:1-30; ಧರ್ಮೋಪದೇಶಕಾಂಡ 18:10) ತದ್ರೀತಿಯಲ್ಲಿ, ಇಂದು ಸರ್ವಸಾಮಾನ್ಯವಾಗಿರುವ ಕೆಲವು ಪದ್ಧತಿಗಳು, ಬೈಬಲ್ ಮೂಲತತ್ವಗಳಿಗೆ ಯಾವುದೇ ರೀತಿಯಲ್ಲಿ ಹೊಂದಾಣಿಕೆಯಲ್ಲಿಲ್ಲ. ಇವುಗಳಲ್ಲಿ ಕೆಲವು, ಕ್ರಿಸ್‌ಮಸ್ ಮತ್ತು ಈಸ್ಟರ್‌ನಂಥ ಬೈಬಲಿಗೆ ಸಂಬಂಧಿಸಿರದ ಧಾರ್ಮಿಕ ರಜಾದಿನಗಳು ಇಲ್ಲವೇ ಪ್ರೇತವ್ಯವಹಾರಗಳಿಗೆ ಸಂಬಂಧಿಸಿರುವಂತಹ ಮೂಢನಂಬಿಕೆಗಳ ಆಚರಣೆಗಳಾಗಿವೆ.
ಒಂದು ಸಮಯದಲ್ಲಿ ಸಂದೇಹಾಸ್ಪದ ರೂಢಿಗಳಿಗೆ ಸಂಬಂಧಿಸಿರುವಂಥದ್ದಾಗಿದ್ದು, ಆದರೆ ಈಗ ಅವು ಕೇವಲ ಸಾಮಾಜಿಕ ಶಿಷ್ಟಾಚಾರಗಳಾಗಿ ವೀಕ್ಷಿಸಲ್ಪಡುವ ಪದ್ಧತಿಗಳ ಕುರಿತೇನು? ಉದಾಹರಣೆಗೆ, ಜನಪ್ರಿಯವಾಗಿರುವ ಅನೇಕ ವಿವಾಹ ಪದ್ಧತಿಗಳಲ್ಲಿ ಒಳಗೂಡಿರುವ, ಉಂಗುರಗಳನ್ನು ಬದಲಾಯಿಸಿಕೊಳ್ಳುವುದು ಮತ್ತು ಕೇಕನ್ನು ತಿನ್ನುವಂಥವುಗಳು ವಿಧರ್ಮಿ ಮೂಲಗಳಿಂದ ಬಂದವುಗಳಾಗಿರಬಹುದು. ಹಾಗಾದರೆ, ಇಂಥ ಪದ್ಧತಿಗಳನ್ನು ಆಚರಿಸುವುದರಿಂದ ಕ್ರೈಸ್ತರು ನಿಷೇಧಿಸಲ್ಪಟ್ಟಿದ್ದಾರೆ ಎಂಬುದು ಇದರ ಅರ್ಥವೋ? ಸಮುದಾಯದಲ್ಲಿರುವ ಪ್ರತಿಯೊಂದು ಪದ್ಧತಿಗೆ ಎಲ್ಲೋ ಒಂದು ಕಡೆ ಇಲ್ಲವೇ ಯಾವುದಾದರೂ ಒಂದು ಸಮಯದಲ್ಲಿ ನಕಾರಾತ್ಮಕ ಅರ್ಥಗಳಿತ್ತೋ ಎಂದು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯ ಕ್ರೈಸ್ತರಿಗಿದೆಯೋ?
“ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು” ಎಂದು ಅಪೊಸ್ತಲ ಪೌಲನು ಸೂಚಿಸುತ್ತಾನೆ. (2 ಕೊರಿಂಥ 3:17; ಯಾಕೋಬ 1:25) ಈ ಬಿಡುಗಡೆಯನ್ನು ಸ್ವಾರ್ಥದಾಶೆಗಳಿಗಾಗಿ ಅಲ್ಲ, ಬದಲಾಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಭೇದವನ್ನು ಅರಿಯಲು ನಮ್ಮ ಬುದ್ಧಿಶಕ್ತಿಯನ್ನು ತರಬೇತುಗೊಳಿಸಲಿಕ್ಕಾಗಿ ಉಪಯೋಗಿಸಬೇಕು. (ಗಲಾತ್ಯ 5:13; ಇಬ್ರಿಯ 5:14; 1 ಪೇತ್ರ 2:16) ಆದುದರಿಂದ, ಯಾವ ವಿಷಯಗಳಲ್ಲಿ ಬೈಬಲ್ ಮೂಲತತ್ವಗಳ ಉಲ್ಲಂಘನೆಯು ಸ್ಪಷ್ಟವಾಗಿರುವುದಿಲ್ಲವೋ ಆ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಕಟ್ಟುನಿಟ್ಟಾದ ನಿಯಮಗಳನ್ನು ಸೃಷ್ಟಿಸುವುದಿಲ್ಲ. ಅದಕ್ಕೆ ಬದಲಾಗಿ, ಪ್ರತಿಯೊಬ್ಬ ಕ್ರೈಸ್ತನು ಸದ್ಯದ ಸನ್ನಿವೇಶಗಳನ್ನು ತೂಗಿನೋಡಿ, ವೈಯಕ್ತಿಕ ತೀರ್ಮಾನವನ್ನು ಮಾಡಬೇಕು.
ಇತರರ ಹಿತಕ್ಕಾಗಿ ಚಿಂತಿಸಿರಿ
ಬೈಬಲ್ ಬೋಧನೆಗಳನ್ನು ಉಲ್ಲಂಘಿಸದಿರುವ ವರೆಗೂ ನಿರ್ದಿಷ್ಟ ಪದ್ಧತಿಯಲ್ಲಿ ಭಾಗವಹಿಸುವುದು ಯಾವಾಗಲೂ ಯೋಗ್ಯವಾಗಿರುವುದು ಎಂಬುದು ಇದರ ಅರ್ಥವೋ? ಇಲ್ಲ. (ಗಲಾತ್ಯ 5:13) ಒಬ್ಬ ಕ್ರೈಸ್ತನು ತನ್ನ ಸ್ವಪ್ರಯೋಜನಕ್ಕಾಗಿ ಚಿಂತಿಸದೆ ಇತರರ ‘ಪ್ರಯೋಜನಕ್ಕಾಗಿ ಚಿಂತಿಸುವಂತೆ’ ಪೌಲನು ಸೂಚಿಸಿದನು. ಅವನು ‘ಎಲ್ಲವನ್ನೂ ದೇವರ ಘನತೆಗಾಗಿ ಮಾಡಬೇಕು’ ಮತ್ತು ಇತರರು ಎಡವುವುದಕ್ಕೆ ಕಾರಣನಾಗಿರಬಾರದು. (1 ಕೊರಿಂಥ 10:31-33) ಆದುದರಿಂದ, ದೇವರ ಅಂಗೀಕಾರವನ್ನು ಪಡೆದುಕೊಳ್ಳಲು ಹಂಬಲಿಸುವ ವ್ಯಕ್ತಿಯೊಬ್ಬನು ತನ್ನನ್ನು ತಾನೇ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ಈ ಪದ್ಧತಿಯನ್ನು ಇತರರು ಹೇಗೆ ವೀಕ್ಷಿಸುತ್ತಾರೆ? ಸಮುದಾಯವು ಈ ಪದ್ಧತಿಗೆ ಆಕ್ಷೇಪಣೆಯನ್ನುಂಟುಮಾಡುವ ಅರ್ಥವನ್ನು ಕೊಡುತ್ತದೋ? ನನ್ನ ಭಾಗವಹಿಸುವಿಕೆಯು, ದೇವರಿಗೆ ಅಪ್ರಸನ್ನಗೊಳಿಸುವ ಆಚರಣೆಗಳು ಇಲ್ಲವೇ ವಿಚಾರಗಳೊಂದಿಗೆ ನಾನು ಸಹಮತದಲ್ಲಿದ್ದೇನೆಂಬ ಅರ್ಥವನ್ನು ಕೊಡುತ್ತದೋ?—1 ಕೊರಿಂಥ 9:19, 23; 10:23, 24.
ಸಾಮಾನ್ಯವಾಗಿ ಯಾರೂ ಆಕ್ಷೇಪಣೆಯನ್ನು ವ್ಯಕ್ತಪಡಿಸದಿದ್ದರೂ, ಬೈಬಲ್ ಮೂಲತತ್ವಗಳಿಗೆ ವಿರುದ್ಧವಾಗಿರುವಂಥ ರೀತಿಯಲ್ಲಿ ಕೆಲವು ಪದ್ಧತಿಗಳು ಸ್ಥಳಿಕವಾಗಿ ಆಚರಿಸಲ್ಪಡಬಹುದು. ಉದಾಹರಣೆಗೆ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹೂಗುಚ್ಛಗಳನ್ನು ಕೊಡುವುದು ಬೈಬಲ್ ಬೋಧನೆಗಳಿಗೆ ವಿರುದ್ಧವಾಗಿರುವಂಥ ವಿಶೇಷ ಅರ್ಥವನ್ನು ಕೊಡಬಹುದು. ಆದುದರಿಂದ, ಒಬ್ಬ ಕ್ರೈಸ್ತನು ಯಾವ ವಿಷಯದ ಕುರಿತು ಹೆಚ್ಚು ಚಿಂತಿತನಾಗಿರಬೇಕು? ಒಂದು ನಿರ್ದಿಷ್ಟ ಪದ್ಧತಿಯ ಮೂಲವನ್ನು ಪರೀಕ್ಷಿಸಲು ಒಳ್ಳೇ ಕಾರಣವಿರಬಹುದಾದರೂ, ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಜೀವಿಸುತ್ತಿರುವ ಸ್ಥಳದಲ್ಲಿರುವ ಜನರು ಆ ಸಮಯದಲ್ಲಿ ಆ ಪದ್ಧತಿಯನ್ನು ಹೇಗೆ ವೀಕ್ಷಿಸುತ್ತಾರೆ ಎಂಬುದನ್ನು ಪರಿಗಣಿಸುವುದು ಇನ್ನೂ ಹೆಚ್ಚು ಪ್ರಾಮುಖ್ಯವಾಗಿರುವುದು. ಒಂದು ವೇಳೆ ಒಂದು ಪದ್ಧತಿಯು ವರ್ಷದ ನಿರ್ದಿಷ್ಟ ಸಮಯಾವಧಿಯಲ್ಲಿ ಇಲ್ಲವೇ ಕೆಲವು ಸನ್ನಿವೇಶಗಳಲ್ಲಿ ಅಶಾಸ್ತ್ರೀಯ ಇಲ್ಲವೇ ನಕಾರಾತ್ಮಕ ಅರ್ಥವನ್ನು ಕೊಡುವಲ್ಲಿ, ಕ್ರೈಸ್ತರು ಅಂಥ ಪದ್ಧತಿಯನ್ನು ಆ ಸಮಯದಲ್ಲಿ ಆಚರಿಸದಿರುವುದು ವಿವೇಕಯುತವಾಗಿರುವುದು.
ನಿಷ್ಕೃಷ್ಟ ಜ್ಞಾನ ಮತ್ತು ವಿವೇಕದೊಂದಿಗೆ ಕ್ರೈಸ್ತರು ತಮ್ಮ ಪ್ರೀತಿಯಲ್ಲಿ ಹೆಚ್ಚುತ್ತಾ ಹೋಗುವಂತೆ ಪೌಲನು ಪ್ರಾರ್ಥಿಸಿದನು. ಜನಪ್ರಿಯ ಪದ್ಧತಿಗಳ ಕುರಿತು ಸಮತೂಕವಾದ ದೃಷ್ಟಿಕೋನವನ್ನು ಇಟ್ಟುಕೊಳ್ಳುವ ಮೂಲಕ ಕ್ರೈಸ್ತರು “ಉತ್ತಮ ಕಾರ್ಯಗಳು ಯಾವವೆಂದು ವಿವೇಚಿಸುವವರಾ”ಗುವರು. (ಫಿಲಿಪ್ಪಿ 1:9, 10) ಅದೇ ಸಮಯದಲ್ಲಿ, ಅವರು ತಮ್ಮ ‘ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗುವಂತೆ’ ನಡೆದುಕೊಳ್ಳುವರು.—ಫಿಲಿಪ್ಪಿ 4:5.
[ಪಾದಟಿಪ್ಪಣಿಗಳು]
^ ಕೆಲವು ಮಾನವಶಾಸ್ತ್ರಜ್ಞರಿಗನುಸಾರ, ಸತ್ತವರು ಜೀವಿಸುತ್ತಿರುವವರನ್ನು ಬೆನ್ನುಹತ್ತದಿರಲು ಕೆಲವೊಂದು ಸಮಯಗಳಲ್ಲಿ ಹೂಗುಚ್ಛಗಳನ್ನು ಅರ್ಪಿಸಲಾಗುತ್ತಿತ್ತು.
[ಪುಟ 26ರಲ್ಲಿರುವ ಚಿತ್ರಗಳು]
ಆಕಳಿಸುವಾಗ ಬಾಯನ್ನು ಮುಚ್ಚುವುದು ಮತ್ತು ವಿಯೋಗದಲ್ಲಿರುವವರಿಗೆ ಹೂಗುಚ್ಛಗಳನ್ನು ಕೊಡುವಂಥ ಕೆಲವು ಹಳೇ ಪದ್ಧತಿಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿವೆ