ಜೀವದ ಬೆರಗುಗೊಳಿಸುವ ವಿನ್ಯಾಸಗಳನ್ನು ನಕಲುಮಾಡುವುದು
ಜೀವದ ಬೆರಗುಗೊಳಿಸುವ ವಿನ್ಯಾಸಗಳನ್ನು ನಕಲುಮಾಡುವುದು
ಚಿಕ್ಕ ಮಕ್ಕಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ತಮ್ಮ ತಲೆಗೆ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಪ್ರಾಯದ ಮಕ್ಕಳು ಮರದಿಂದ ಮತ್ತು ಸೈಕಲಿನಿಂದ ಕೆಳಕ್ಕೆ ಬೀಳುತ್ತಾರೆ. ಕ್ರೀಡಾ ಪಟುಗಳು ಆಟದ ಮೈದಾನದಲ್ಲಿ ಒಬ್ಬರಿಗೊಬ್ಬರು ಬಲವಾಗಿ ಢಿಕ್ಕಿಹೊಡೆದುಕೊಳ್ಳುತ್ತಾರೆ. ವಾಹನ ಚಲಾಯಿಸುವವರು ಅಸಂಖ್ಯಾತ ರಸ್ತೆ ಅಪಘಾತಗಳಿಗೆ ಈಡಾಗುತ್ತಾರೆ. ಹೀಗಿದ್ದರೂ, ಈ ರೀತಿಯಾಗಿ ಬೀಳುವುದು, ಗಾಯಮಾಡಿಕೊಳ್ಳುವುದು ಮತ್ತು ಢಿಕ್ಕಿಹೊಡೆದುಕೊಳ್ಳುವುದರ ಮಧ್ಯೆಯೂ, ನಾವು ಯಾವುದೇ ಗಂಭೀರವಾದ ಅಪಾಯವಿಲ್ಲದೆ ಪಾರಾಗುತ್ತೇವೆ. ತೀವ್ರವಾದ ಪೆಟ್ಟನ್ನು ಸಹಿಸಿಕೊಳ್ಳುವ ಮತ್ತು ಚೇತರಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವ ನಮ್ಮ ದೇಹಗಳನ್ನು ನಾವು ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ವಿಜ್ಞಾನಿಗಳು ಇದನ್ನು ತಿಳಿದುಕೊಳ್ಳಲು ಆರಂಭಿಸಿದಂತೆ, ನಮ್ಮ ಎಲುಬುಗಳಿಂದ ನಮ್ಮ ಚರ್ಮದ ವರೆಗೆ ನಾವು ನಿಜವಾಗಿಯೂ ಬೆರಗುಗೊಳಿಸುವ ವಿನ್ಯಾಸದ ಫಲವಾಗಿದ್ದೇವೆ.
ವಾಸ್ತವದಲ್ಲಿ, ದೇಹದ ತುಲನಾತ್ಮಕವಾದ ಕಡಿಮೆತೂಕದೊಂದಿಗೆ, ಅದಕ್ಕಿರುವ ಬಲ ಮತ್ತು ಸಹಿಸಿಕೊಳ್ಳುವ ಶಕ್ತಿಯ ಸಮ್ಮಿಲನವನ್ನು ಪ್ರಕೃತಿಯಲ್ಲೆಲ್ಲಾ ನೋಡಬಹುದಾಗಿದೆ. ಸಣ್ಣ ಸಸಿಗಳು, ಕಾಂಕ್ರೀಟ್ನಲ್ಲಿ ಮತ್ತು ಬಂಡೆಯಲ್ಲಿ ಒಡೆತಗಳನ್ನು ಉಂಟುಮಾಡಿ, ಈ ಒಡೆತಗಳು ಅಗಲವಾಗಿ ಬಿರಿದು ಆರೋಗ್ಯವಂತ ಮರಗಳಾಗಿ ಬೆಳೆಯುವಂತೆ ಮಾಡುತ್ತವೆ. ಈ ಮರಗಳು, ವಿದ್ಯುತ್ ಕಂಬಗಳನ್ನು ಬೀಳಿಸುವ ಮತ್ತು ಮನೆಗಳನ್ನು ಸಹ ಕಿತ್ತೆಸೆಯುವ ಶಕ್ತಿಯನ್ನು ಹೊಂದಿರುವ ಬಿರುಗಾಳಿಯನ್ನು ಸಹ ಎದುರಿಸಬಲ್ಲವು ಮತ್ತು ಮರಕುಟುಕ ಹಕ್ಕಿಗಳು ಮರದೊಳಗೆ ರಂಧ್ರವನ್ನು ಕೊರೆಯುತ್ತವೆ ಮತ್ತು ಅವು ಕೊರೆಯುವಾಗ ತಮ್ಮ ತಲೆಗಳನ್ನು ಎಷ್ಟು ಜೋರಾಗಿ ಹೊಡೆದುಕೊಳ್ಳುತ್ತವೆಂದರೆ, ಬೇರೆ ಯಾವುದೇ ಸಾಮಾನ್ಯ ಮಿದುಳು ನುಜ್ಜುಗುಜ್ಜಾಗುವುದಂತೂ ಖಂಡಿತ. ಮೊಸಳೆ ಮತ್ತು ಚೀನಾ ದೇಶದ ಮೊಸಳೆಯ (ಆ್ಯಲಿಗೇಟರ್) ಚರ್ಮಗಳು ಈಟಿ, ಬಾಣಗಳನ್ನು ಮತ್ತು ಗುಂಡುಗಳನ್ನು ಸಹ ಬಗ್ಗಿಸುತ್ತವೆ. (ಯೋಬ 41:1, 26ನ್ನು ಹೋಲಿಸಿರಿ.) ಇಂತಹ ಸಂಗತಿಗಳು ಸಾವಿರಾರು ವರ್ಷಗಳಿಂದ ಮನುಷ್ಯರನ್ನು ಆಶ್ಚರ್ಯಚಕಿತಗೊಳಿಸಿರುವುದು ಮಾತ್ರವಲ್ಲ ತಬ್ಬಿಬ್ಬುಗೊಳಿಸಿವೆ.
ಕಳೆದ 40 ವರ್ಷಗಳಿಂದಲೂ, ತಾಂತ್ರಿಕತೆಯಲ್ಲಾಗಿರುವ ಹೆಚ್ಚು ಪ್ರಗತಿಯಿಂದಾಗಿ, ವಿಜ್ಞಾನಿಗಳು ಜೀವಕೋಶದಲ್ಲಿ ಅಡಗಿರುವ ಇಂತಹ ವಿನ್ಯಾಸಗಳ ಹಿಂದಿರುವ ರಹಸ್ಯಗಳನ್ನು ಅಭ್ಯಾಸಿಸಲು ಶಕ್ತಿಯುತವಾದ ಹೊಸ ಉಪಕರಣಗಳನ್ನು ಉಪಯೋಗಿಸಲು ಸಾಧ್ಯವಾಗಿದೆ. ಬಹಳ ಸೂಕ್ಷ್ಮವಾಗಿ ನೋಡುವಾಗ, ವಿನ್ಯಾಸದ ಗುಣಮಟ್ಟವು ನಿಜವಾಗಿಯೂ ಉಸಿರು ಕಟ್ಟಿಸುವಂಥದ್ದಾಗಿದ್ದು, ಅದರ ಜಟಿಲತೆಯು ತತ್ತರಗೊಳಿಸುವಂತಿದೆ. ಹೀಗಿದ್ದರೂ, ವಿಜ್ಞಾನದ ಗುರಿಯು ಪ್ರಕೃತಿಯ ಗಮನಾರ್ಹ ವಸ್ತುಗಳ ಹಿಂದಿರುವ ರಹಸ್ಯಗಳನ್ನು ಭೇದಿಸುವುದು ಮಾತ್ರವೇ ಆಗಿರದೆ, ಕಡಿಮೆಪಕ್ಷ ಮೂಲತತ್ವಗಳಲ್ಲಿಯಾದರೋ ಅದರ ನಕಲನ್ನು ಮಾಡುವುದಾಗಿದೆ. ಈ ಕ್ಷೇತ್ರದಲ್ಲಿನ ಅಧ್ಯಯನವು ಎಷ್ಟು ಪ್ರಭಾವಶಾಲಿಯಾಯಿತೆಂದರೆ ಬಯೋಮಿಮೆಟಿಕ್ಸ್ ಎಂಬ ಹೊಸ ವಿಜ್ಞಾನದ ಕಂಡುಹಿಡಿಯುವಿಕೆಗೆ ಅದು ನಡೆಸಿದೆ. ಈ ಪದವು ಗ್ರೀಕ್ ಶಬ್ದವಾದ ಬಯೊಸ್ ಅಂದರೆ “ಜೀವ” ಮತ್ತು ಮಿಮೀಸಿಸ್ ಅಂದರೆ “ಅನುಕರಣೆ” ಎಂಬ ಅರ್ಥವುಳ್ಳ ಪದದಿಂದ ಬಂದಿದೆ.
ಬಯೋಮಿಮೆಟಿಕ್ಸ್ ಒಂದು ಉತ್ತಮ ಲೋಕದ ಭರವಸೆಯನ್ನು ಕೊಡುತ್ತದೆ
“ಜೀವವಿಜ್ಞಾನದ ವಿನ್ಯಾಸಗಳ [ಮತ್ತು] ಅವುಗಳ ಕಾರ್ಯವೈಖರಿಗಳ ಅಧ್ಯಯನವೇ ಬಯೋಮಿಮೆಟಿಕ್ಸ್ ಆಗಿದೆ,” ಎಂದು ಬಯೋಮಿಮೆಟಿಕ್ಸ್: ವಿನ್ಯಾಸ ಮತ್ತು ಪದಾರ್ಥಗಳ ಸಂಸ್ಕರಣೆ ಎಂಬ ಪುಸ್ತಕವು ವಿವರಿಸುತ್ತದೆ. ‘ಹೊಸ ವಿಚಾರಗಳನ್ನು ಕೆರಳಿಸುವುದು ಮತ್ತು ಈ ವಿಚಾರಗಳನ್ನು ಜೈವಿಕ ವ್ಯವಸ್ಥೆಯಲ್ಲಿ ಕಂಡುಬರುವ ತದ್ರೀತಿಯ ವ್ಯವಸ್ಥೆಯನ್ನು ರೂಪಿಸುವುದೇ’ ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ ಎಂದು ಆ ಪುಸ್ತಕವು ಕೂಡಿಸುತ್ತದೆ.
ವಿಜ್ಞಾನಿ ಸ್ಟೇಫನ್ ವ್ಯಾನ್ರೈಟ್ ಹೇಳುವುದೇನೆಂದರೆ, “ಬಯೋಮಿಮೆಟಿಕ್ಸ್ ಅಣುವಿಜ್ಞಾನವನ್ನು ಸಂಪೂರ್ಣವಾಗಿ ನುಂಗಿಬಿಡುವುದು. ಇದು, ಇಪ್ಪತ್ತೊಂದನೇ ಶತಮಾನದ ಅತಿ ದೊಡ್ಡ ಸವಾಲಾಗಿರುವ ಮತ್ತು ಪ್ರಮುಖ ಜೀವವಿಜ್ಞಾನದ ಅಧ್ಯಯನವನ್ನು ಸ್ಥಾನಪಲ್ಲಟಗೊಳಿಸುವುದು.” ಫ್ರೊಫೆಸರ್ ಮೆಮಟ್ ಸಾರಿಕೋಯಾ ಹೇಳುವುದು: “ನಾವು ಕಬ್ಬಿಣದ ಯುಗ ಮತ್ತು ಔದ್ಯೋಗಿಕ ಕ್ರಾಂತಿಗೆ ಸಮಾನವಾಗಿರುವ ಭೌತಿಕ ಕ್ರಾಂತಿಯ ಅಂಚಿನಲ್ಲಿದ್ದೇವೆ. ನಾವು ಭೌತಿಕ ವಸ್ತುಗಳ ಹೊಸ ಶಕಕ್ಕೆ ಕಾಲಿಡುತ್ತಿದ್ದೇವೆ. ಮುಂದಿನ ಶತಮಾನದೊಳಗೆ, ಬಯೋಮಿಮೆಟಿಕ್ಸ್ ನಾವು ಜೀವಿಸುವ ರೀತಿಯನ್ನೇ ಬದಲಾಯಿಸುವುದೆಂದು ನಾನು ನೆನಸುತ್ತೇನೆ.”
ನಿಜಾಂಶವೇನೆಂದರೆ, ನಾವು ಮುಂದೆ ನೋಡಲಿರುವಂತೆ, ಅದು ಈಗಾಗಲೇ ಲೋಕವನ್ನು ಬದಲಾಯಿಸಲು ಆರಂಭಿಸಿದೆ. ಆದರೆ ಅದನ್ನು ಪರೀಕ್ಷಿಸುವ ಮೊದಲು, ವಿಜ್ಞಾನಿಗಳು ಅಭ್ಯಾಸಿಸುವುದರಲ್ಲಿ ತಲ್ಲೀನರಾಗಿರುವ ಮತ್ತು ಇಂದಿನವರೆಗೂ ಮನುಷ್ಯನಿಗೆ ಅರ್ಥವಾಗದಿರುವ ಕೆಲವು ವಿಸ್ಮಯಗಳ ಕಡೆಗೆ ಸಂಕ್ಷಿಪ್ತ ನೋಟವನ್ನು ಹರಿಸೋಣ. “ವಿನ್ಯಾಸ” ಎಂಬ ಪದದ ಹಿಂದಿರುವ ವಿಚಾರಪ್ರೇರಕ ಮಹತ್ವಾರ್ಥವನ್ನು ನಾವು ಪರೀಕ್ಷಿಸಲಿರುವೆವು ಮತ್ತು ನಮ್ಮ ಸುತ್ತಮುತ್ತಲಿರುವ ಬೆರಗುಗೊಳಿಸುವ ವಿಶ್ವಕ್ಕೆ ಇವು ಹೇಗೆ ಅರ್ಥವನ್ನು ಕೊಡುತ್ತವೆಂಬುದನ್ನು ಸಹ ನೋಡಲಿರುವೆವು.