ನನ್ನ ಗೆಳತಿಯು ನನ್ನ ಮನಸ್ಸನ್ನು ನೋಯಿಸಿದ್ದೇಕೆ?
ಯುವ ಜನರು ಪ್ರಶ್ನಿಸುವುದು . . .
ನನ್ನ ಗೆಳತಿಯು ನನ್ನ ಮನಸ್ಸನ್ನು ನೋಯಿಸಿದ್ದೇಕೆ?
“ನನಗೆ ಅನೇಕ ಮಂದಿ ಗೆಳತಿಯರಿದ್ದರು . . . ಸಮಯಾನಂತರ ನನ್ನ ಗೆಳತಿಯರು ಬೇರೆ ಹುಡುಗಿಯೊಂದಿಗೆ ಗೆಳೆತನಮಾಡಲು ಆರಂಭಿಸಿದರು ಮತ್ತು ನಾನು ಅವರ ಬಳಿಗೆ ಹೋದರೆ ಅವರು ಮಾತಾಡುವುದನ್ನೇ ನಿಲ್ಲಿಸಿಬಿಡುತ್ತಿದ್ದರು. . . . ತಮ್ಮ ಗುಂಪಿನಿಂದ ಅವರು ನನ್ನನ್ನು ಸಂಪೂರ್ಣವಾಗಿ ದೂರಮಾಡಿಬಿಟ್ಟರು. ಇದು ನನಗೆ ತುಂಬ ನೋವನ್ನುಂಟುಮಾಡಿತು.”—ಕ್ಯಾರನ್. *
ಆತ್ಮೀಯ ಗೆಳೆಯರ ನಡುವೆಯೂ ಹೀಗೆ ಸಂಭವಿಸಸಾಧ್ಯವಿದೆ. ಒಂದು ದಿನ ನೋಡಿದರೆ ಅವರು ತುಂಬ ಆತ್ಮೀಯರಾಗಿರುತ್ತಾರೆ; ಮಾರನೆಯ ದಿನ ಅವರ ಮಧ್ಯೆ ಮಾತೇ ನಿಂತುಹೋಗಿರುತ್ತದೆ. “ಒಬ್ಬ ಗೆಳತಿಯು, ನೀವು ಅವಳ ಮೇಲೆ ಆತುಕೊಂಡು, ಭರವಸೆಯಿಟ್ಟು, ಯಾವುದೇ ಸನ್ನಿವೇಶದಲ್ಲೂ ಸಹಾಯಕ್ಕಾಗಿ ಅವಳ ಕಡೆಗೆ ತಿರುಗುವಂಥವಳಾಗಿರಬೇಕು” ಎಂದು 17 ವರ್ಷ ಪ್ರಾಯದ ನೋರ ಹೇಳುತ್ತಾಳೆ. ಆದರೂ, ಕೆಲವೊಮ್ಮೆ ನಿಮ್ಮ ಆತ್ಮೀಯ ಗೆಳತಿಯು ನಿಮ್ಮ ವೈರಿಗಿಂತಲೂ ಹೀನವಾಗಿ ವರ್ತಿಸಲು ಆರಂಭಿಸಬಹುದು.
ಆಕ್ರಮಣಕ್ಕೆ ತುತ್ತಾಗಿರುವ ಸ್ನೇಹ
ಮಧುರ ಸ್ನೇಹವು ಕಹಿಯಾಗಿ ಮಾರ್ಪಡುವಂತೆ ಯಾವುದು ಮಾಡುತ್ತದೆ? ಮೇಘನ್ ಸ್ಯಾಂಡ್ರಳ ಆತ್ಮೀಯ ಸ್ನೇಹಿತೆಯಾಗಿದ್ದಳು; ಆದರೆ ಒಂದು ದಿನ ಮೇಘನ್ ಸ್ಯಾಂಡ್ರಳ ಅಚ್ಚುಮೆಚ್ಚಿನ ಬ್ಲೌಸ್‌ಗಳಲ್ಲಿ ಒಂದನ್ನು ತೆಗೆದುಕೊಂಡುಹೋದಾಗಿನಿಂದ ಸಮಸ್ಯೆ ಆರಂಭವಾಯಿತು. “ಅವಳು ಆ ಬ್ಲೌಸನ್ನು ಹಿಂದಿರುಗಿಸಿದಾಗ, ಅದು ತುಂಬ ಕೊಳಕಾಗಿತ್ತು ಮತ್ತು ಅದರ ತೋಳು ಸ್ವಲ್ಪ ಹರಿದಿತ್ತು. ಅದು ನನ್ನ ಕಣ್ಣಿಗೆ ಬೀಳುವುದಿಲ್ಲವೋ ಎಂಬಂತೆ ಅವಳು ಅದರ ಬಗ್ಗೆ ನನಗೆ ಏನೂ ಹೇಳಲಿಲ್ಲ” ಎಂದು ಸ್ಯಾಂಡ್ರ ಹೇಳುತ್ತಾಳೆ. ಮೇಘನಳ ಉದಾಸೀನಭಾವದ ಬಗ್ಗೆ ಸ್ಯಾಂಡ್ರಳಿಗೆ ಹೇಗನಿಸಿತು? ಸ್ಯಾಂಡ್ರ ಹೇಳಿದ್ದು: “ನನಗೆ ತಲೆಯೇ ಕೆಟ್ಟುಹೋಯಿತು, ನನ್ನ ವಸ್ತುಗಳ ಬಗ್ಗೆ . . . ಅಥವಾ ನನ್ನ ಭಾವನೆಗಳ ಬಗ್ಗೆ ಅವಳಿಗೆ ಕೊಂಚವೂ ಪರಿಗಣನೆಯಿಲ್ಲವೆಂದೆನಿಸಿತು.”
ನಿಮ್ಮ ಆತ್ಮೀಯ ಸ್ನೇಹಿತೆಯು ನಿಮಗೆ ಅವಮಾನವನ್ನುಂಟುಮಾಡುವಂತಹ ರೀತಿಯಲ್ಲಿ ಮಾತಾಡುವಾಗಲೂ ನಿಮಗೆ ತುಂಬ ನೋವುಂಟಾಗಬಹುದು. ಸಿಂಡಿಗೆ ಇದೇ ರೀತಿಯ ಅನುಭವವಾಯಿತು. ಬುಕ್ ರಿಪೋರ್ಟ್ ನೀಡಲಿಕ್ಕಾಗಿ ಇನ್ನೂ ಒಂದು ಪುಸ್ತಕವನ್ನು ತಾನು ಓದಿಲ್ಲ ಎಂದು ಅವಳು ತನ್ನ ಸಹಪಾಠಿಗಳ ಒಂದು ಗುಂಪಿಗೆ ಹೇಳಿದಾಗ, ಸಿಂಡಿಯ ಗೆಳತಿಯಾಗಿದ್ದ ಕೇಟ್ ಅವಳನ್ನು ಬಯ್ಯಲಾರಂಭಿಸಿದಳು. “ನನ್ನ ಗೆಳತಿಯರ ಗುಂಪಿನ ಮುಂದೆಯೇ ಅವಳು ನನಗೆ ಅವಮಾನಮಾಡಿದಳು. ನನಗೆ ಅವಳ ಮೇಲೆ ತುಂಬ ಸಿಟ್ಟು ಬಂತು. ಅಂದಿನಿಂದ ನಮ್ಮ ಗೆಳೆತನವು ಸಂಪೂರ್ಣವಾಗಿ ಬದಲಾಯಿತು” ಎಂದು ಸಿಂಡಿ ಜ್ಞಾಪಿಸಿಕೊಳ್ಳುತ್ತಾಳೆ.
ಗೆಳತಿಯೊಬ್ಬಳು ಹೊಸ ಸ್ನೇಹಿತೆಯರೊಂದಿಗೆ ಸಮಯವನ್ನು ಕಳೆಯಲು ಆರಂಭಿಸುವಾಗಲೂ ಗೆಳೆತನದ ಮಧ್ಯೆ ಬಿರುಕುಂಟಾಗುತ್ತದೆ. “ನನಗೆ ಒಬ್ಬ ಆತ್ಮೀಯ ಸ್ನೇಹಿತೆಯಿದ್ದಳು, ಆದರೆ ಸಮಯಾನಂತರ ಅವಳು ಇನ್ನೊಂದು ಗುಂಪಿನ ಸದಸ್ಯಳಾದಳು, ಮತ್ತು ನನ್ನನ್ನು ಅಲಕ್ಷಿಸಲಾರಂಭಿಸಿದಳು” ಎಂದು 13 ವರ್ಷ ಪ್ರಾಯದ ಬಾನೀ ಹೇಳುತ್ತಾಳೆ. ಅಥವಾ ನೀವು ಸ್ನೇಹಿತರ ಒಡನಾಟದ ಹಿಂದೆ ಯಾವುದೋ ಗುಪ್ತ ಹೇತುವಿರುವುದನ್ನು ನೀವು ನಿಧಾನವಾಗಿ ಕಂಡುಕೊಳ್ಳಬಹುದು. “ನಾನು ಮತ್ತು ಬಾಬಿ ನಿಜವಾಗಿಯೂ ತುಂಬ ಆತ್ಮೀಯ ಸ್ನೇಹಿತರಾಗಿದ್ದೆವು” ಎಂದು 13 ವರ್ಷ ಪ್ರಾಯದ ಜೋ ಹೇಳುತ್ತಾನೆ. “ನನ್ನ ವ್ಯಕ್ತಿತ್ವದ ಕಾರಣ ಅವನು ನನ್ನನ್ನು ತುಂಬ ಇಷ್ಟಪಡುತ್ತಾನೆ ಎಂದು ನಾನು ಭಾವಿಸಿದ್ದೆ, ಆದರೆ ನನ್ನ ಅಪ್ಪನವರು ಜಾಹೀರಾತು ಕಂಪೆನಿಯಲ್ಲಿ ಕೆಲಸಮಾಡುತ್ತಿರುವುದರಿಂದ ಕ್ರೀಡೆಗಳಿಗೆ ಹಾಗೂ ಗಾನಗೋಷ್ಠಿಗಳಿಗೆ ಹೋಗಲಿಕ್ಕಾಗಿ ಯಾವಾಗಲೂ ಟಿಕೆಟ್‌ಗಳು ಸುಲಭವಾಗಿ ಸಿಕ್ಕುತ್ತವೆ ಎಂಬ ಕಾರಣಕ್ಕಾಗಿ ಅವನು ನನ್ನನ್ನು ಇಷ್ಟಪಟ್ಟನೆಂಬುದು ನನಗೆ ತದನಂತರ ಗೊತ್ತಾಯಿತು.” ಈಗ ಜೋವಿನ ಅನಿಸಿಕೆ ಏನು? “ಇನ್ನೆಂದಿಗೂ ನಾನು ಬಾಬಿಯಲ್ಲಿ ಭರವಸೆಯಿಡಲಾರೆ!” ಎಂದು ಅವನು ಹೇಳುತ್ತಾನೆ.
ಕೆಲವೊಮ್ಮೆ ನೀವು ಗೋಪ್ಯವಾಗಿಡಲು ಬಯಸಿದಂತಹ ಮಾಹಿತಿಯನ್ನು ಒಬ್ಬ ಗೆಳತಿಯು ಇತರರಿಗೆ ಹೇಳಿಬಿಡಬಹುದು. ಉದಾಹರಣೆಗೆ, ತನ್ನ ಜೊತೆ ಕೆಲಸಮಾಡುತ್ತಿದ್ದ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯ ಬಗ್ಗೆ ಆ್ಯಲಿಸನ್ ತನ್ನ ಗೆಳತಿಯಾದ ಸೇರಳಿಗೆ ಹೇಳಿದ್ದಳು. ಮರುದಿನ ಸೇರ ಈ ಘಟನೆಯನ್ನು ಆ ವ್ಯಕ್ತಿಯ ಮುಂದೆಯೇ ಹೇಳಿಬಿಟ್ಟಳು. “ಅವಳು ಇಷ್ಟೊಂದು ಬಾಯಿಬಡುಕಿ ಎಂದು ನಾನು ಕನಸಿನಲ್ಲಿಯೂ ನೆನಸಿರಲಿಲ್ಲ! ನನಗೆ ತುಂಬ ಕೋಪಬಂತು” ಎಂದು ಆ್ಯಲಿಸನ್ ಹೇಳುತ್ತಾಳೆ. ತಾನೂ ತನ್ನ ಆತ್ಮೀಯ ಗೆಳತಿಯೂ ಸೇರಿಕೊಂಡು ಖಾಸಗಿಯಾಗಿ ಚರ್ಚಿಸಿದ್ದ ಒಂದು ಸಂಗತಿಯನ್ನು ಆ ಗೆಳತಿಯು ಇತರರ ಮುಂದೆ ಹೇಳಿಬಿಟ್ಟಾಗ, 16 ವರ್ಷ ಪ್ರಾಯದ ರೇಚಲ್‌ಗೂ ತದ್ರೀತಿಯ ಅನುಭವವಾಯಿತು. “ನನಗೆ ಅವಮಾನವೂ ದ್ರೋಹಬಗೆದ ಅನಿಸಿಕೆಯೂ ಆಯಿತು. ‘ಪುನಃ ಅವಳ ಮೇಲೆ ನಾನು ಹೇಗೆ ನಂಬಿಕೆಯಿಡಬಲ್ಲೆ?’ ಎಂದು ನನ್ನಷ್ಟಕ್ಕೇ ನಾನು ಆಲೋಚಿಸಿದೆ” ಎಂದು ರೇಚಲ್ ಹೇಳುತ್ತಾಳೆ.
ಸ್ನೇಹದಲ್ಲಿ ಪರಸ್ಪರ ಕಾಳಜಿ, ಭರವಸೆ, ಮತ್ತು ಗೌರವದ ಭಾವನೆಯು ಇರುವಲ್ಲಿ, ಒಂದು ಸ್ನೇಹವು ಭಾವನಾತ್ಮಕ ಬೆಂಬಲದ ಮೂಲವಾಗಿರಸಾಧ್ಯವಿದೆ. ಆದರೂ, ಆತ್ಮೀಯ ಸ್ನೇಹಗಳು ಸಹ ತೊಂದರೆಗಳಿಗೆ ಒಳಗಾಗಸಾಧ್ಯವಿದೆ. ಬೈಬಲು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುವುದು: “ಪರಸ್ಪರ ಕಚ್ಚಾಡಿಕೊಳ್ಳುವಂತಹ ಸ್ನೇಹಿತರೂ ಇದ್ದಾರೆ.” (ಜ್ಞಾನೋಕ್ತಿ 18:24, NW) ಕಾರಣವು ಏನೇ ಆಗಿರಲಿ, ಒಬ್ಬ ಗೆಳತಿಯು ನಿಮಗೆ ದ್ರೋಹಬಗೆದಿದ್ದಾಳೆ ಎಂಬ ಅನಿಸಿಕೆ ನಿಮಗಾಗುವಾಗ, ಇದು ನಿಮ್ಮ ಮೇಲೆ ಗಾಢವಾದ ಪರಿಣಾಮವನ್ನು ಬೀರಸಾಧ್ಯವಿದೆ. ಹೀಗೇಕೆ?
ಕೆಲವೊಮ್ಮೆ ಸ್ನೇಹವು ಮುಗ್ಗರಿಸಲು ಕಾರಣ
ಎಲ್ಲ ಮಾನವ ಸಂಬಂಧಗಳಲ್ಲಿ—ಯುವ ಜನರ ನಡುವೆಯಾಗಲಿ ವಯಸ್ಕರ ನಡುವೆಯಾಗಲಿ—ಸಮಸ್ಯೆಯು ಇದ್ದೇ ಇರುತ್ತದೆ. ಆದುದರಿಂದ, ಇದು ಕ್ರೈಸ್ತ ಶಿಷ್ಯನಾದ ಯಾಕೋಬನು ಬರೆದುದಕ್ಕೆ ಸರಿಯಾಗಿದೆ: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” (ಯಾಕೋಬ 3:2; 1 ಯೋಹಾನ 1:8) ಎಲ್ಲರೂ ತಪ್ಪುಮಾಡುತ್ತಾರಾದ್ದರಿಂದ, ಸ್ನೇಹಿತರು ಕೆಲವೊಮ್ಮೆ ನಿಮಗೆ ನೋವನ್ನುಂಟುಮಾಡುವಂತಹ ಕೆಲಸಗಳನ್ನು ಮಾಡುತ್ತಾರೆ ಅಥವಾ ದುಡುಕಿ ಮಾತಾಡಿಬಿಡುತ್ತಾರೆ ಎಂಬುದು ನಿರೀಕ್ಷಿಸತಕ್ಕ ಸಂಗತಿಯೇ. ಅದೇ ವ್ಯಕ್ತಿಗೆ ನೀವು ಸಹ ಈ ಹಿಂದೆ ನೋವನ್ನುಂಟುಮಾಡಿದ ಸಮಯವು ನಿಮಗೆ ಜ್ಞಾಪಕಬರಬಹುದು. (ಪ್ರಸಂಗಿ 7:22) “ನಾವೆಲ್ಲರೂ ಅಪರಿಪೂರ್ಣರಾಗಿದ್ದೇವೆ, ಮತ್ತು ಕೆಲವೊಮ್ಮೆ ಒಬ್ಬರು ಇನ್ನೊಬ್ಬರಿಗೆ ಕೋಪವನ್ನು ಉಂಟುಮಾಡುತ್ತೇವೆ” ಎಂದು 20 ವರ್ಷ ಪ್ರಾಯದ ಲೀಸಾ ಹೇಳುತ್ತಾಳೆ.
ಮಾನವ ಅಪರಿಪೂರ್ಣತೆ ಮಾತ್ರವಲ್ಲ, ಇನ್ನೂ ಅನೇಕ ಅಂಶಗಳು ಇದರಲ್ಲಿ ಒಳಗೂಡಸಾಧ್ಯವಿದೆ. ನೀವು ದೊಡ್ಡವರಾಗಿ ಪ್ರೌಢರಾಗುತ್ತಾ ಹೋಗುವಾಗ, ನಿಮ್ಮ ಅಭಿರುಚಿಗಳು ಹಾಗೂ ನಿಮ್ಮ ಸ್ನೇಹಿತರ ಅಭಿರುಚಿಗಳು ಬದಲಾಗುವ ಸಾಧ್ಯತೆಯಿರುತ್ತದೆ ಎಂಬುದು ನಿಮಗೆ ನೆನಪಿರಲಿ. ಹೀಗೆ, ಈ ಮುಂಚೆ ಒಂದೇ ರೀತಿಯ ಅಭಿರುಚಿಯಿದ್ದ ಇಬ್ಬರು ವ್ಯಕ್ತಿಗಳು, ಕಾಲಕ್ರಮೇಣ ತಮ್ಮ ಅಭಿರುಚಿಗಳು ಹಾಗೂ ಅಭಿಪ್ರಾಯಗಳು ಭಿನ್ನವಾಗುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ತನ್ನ ಆತ್ಮೀಯ ಸ್ನೇಹಿತೆಯ ಕುರಿತು ಒಬ್ಬ ಹದಿವಯಸ್ಕಳು ಪ್ರಲಾಪಿಸಿದ್ದು: “ನಾವು ಟೆಲಿಫೋನಿನಲ್ಲಿ ಪರಸ್ಪರ ಮಾತಾಡಿಕೊಳ್ಳುವುದು ತುಂಬ ಅಪರೂಪ ಮತ್ತು ಒಂದುವೇಳೆ ನಾವು ಮಾತಾಡಿದರೂ, ಒಂದು ವಿಚಾರದ ಕುರಿತು ಸಹಮತದಿಂದಿರುವುದು ತುಂಬ ವಿರಳ.”
ಈ ರೀತಿಯಲ್ಲಿ ಸ್ನೇಹವು ಕೊನೆಗೊಳ್ಳುತ್ತದೆ. ಆದರೆ ಕೆಲವರು ತಮ್ಮ ಸ್ನೇಹಿತರ ಮನಸ್ಸನ್ನು ಏಕೆ ನೋಯಿಸುತ್ತಾರೆ? ಕೆಲವೊಮ್ಮೆ ಈರ್ಷ್ಯೆಯೇ ಇದಕ್ಕೆ ಕಾರಣವಾಗಿರುತ್ತದೆ. ಉದಾಹರಣೆಗೆ, ನಿಮ್ಮ ಪ್ರತಿಭೆಗಳು ಅಥವಾ ಸಾಧನೆಗಳ ಕಾರಣ ನಿಮ್ಮ ಸ್ನೇಹಿತರು ನಿಮ್ಮ ಮೇಲೆ ಅಸಮಾಧಾನಪಡಲು ಆರಂಭಿಸಬಹುದು. (ಹೋಲಿಸಿರಿ ಆದಿಕಾಂಡ 37:4; 1 ಸಮುವೇಲ 18:7-9.) ಬೈಬಲು ಹೇಳುವಂತೆ, “ಹೊಟ್ಟೆಕಿಚ್ಚು ಎಲುಬಿಗೆ ಕ್ಷಯ.” (ಜ್ಞಾನೋಕ್ತಿ 14:30, NW) ಇದು ಅಸೂಯೆ ಮತ್ತು ಜಗಳವನ್ನು ಉಂಟುಮಾಡುತ್ತದೆ. ಕಾರಣವು ಏನೇ ಆಗಿರಲಿ, ಒಬ್ಬ ಗೆಳೆಯ ಅಥವಾ ಗೆಳತಿಯು ನಿಮ್ಮ ಮನಸ್ಸಿಗೆ ನೋವನ್ನುಂಟುಮಾಡುವಲ್ಲಿ ನೀವು ಏನು ಮಾಡಸಾಧ್ಯವಿದೆ?
ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು
“ಮೊದಲಾಗಿ ನಾನು ಆ ವ್ಯಕ್ತಿಯನ್ನು ಗಮನಿಸುತ್ತಿದ್ದೆ ಮತ್ತು ಅವನು ಅಥವಾ ಅವಳು ಉದ್ದೇಶಪೂರ್ವಕವಾಗಿ ಈ ತಪ್ಪನ್ನು ಮಾಡಿದ್ದಾರೋ ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೆ” ಎಂದು ರೇಚಲ್ ಹೇಳುತ್ತಾಳೆ. ಅವಮಾನಕರವಾದದ್ದೆಂದು ನೀವು ಭಾವಿಸುವಂತಹ ಯಾವುದೋ ಒಂದು ಮಾತು ಅಥವಾ ಕೃತ್ಯಕ್ಕೆ ನೀವು ಬಲಿಪಶುವಾಗಿದ್ದೀರಿ ಎಂದು ನಿಮಗನಿಸುವಾಗ, ಆ ಕ್ಷಣದ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ರಿಯೆ ತೋರಿಸಬೇಡಿ. ಅದಕ್ಕೆ ಬದಲಾಗಿ, ತಾಳ್ಮೆಯಿಂದ ಆ ವಿಚಾರದ ಕುರಿತು ಯೋಚಿಸಿರಿ. (ಜ್ಞಾನೋಕ್ತಿ 14:29) ನೀವು ಅವಮಾನಕರವೆಂದು ಭಾವಿಸಿದಂತಹ ವಿಚಾರದ ಕುರಿತು ದುಡುಕಿನಿಂದ ಪ್ರತಿಕ್ರಿಯಿಸುವುದು, ನಿಜವಾಗಿಯೂ ಸನ್ನಿವೇಶವನ್ನು ಉತ್ತಮಗೊಳಿಸುವುದೊ? ಎಲ್ಲ ವಿಷಯವನ್ನು ಪರಿಗಣಿಸಿದ ಬಳಿಕ, ಕೀರ್ತನೆ 4:4ರಲ್ಲಿರುವ ಬುದ್ಧಿವಾದವನ್ನು ನೀವು ಅನುಸರಿಸುವ ಆಯ್ಕೆಮಾಡಬಹುದು: “ಭಯಪಡಿರಿ, ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” ತದನಂತರ, ‘ಪ್ರೀತಿಯು ಬಹು ಪಾಪಗಳನ್ನು ಮುಚ್ಚುವಂತೆ’ ಬಿಡಲು ನೀವು ಆರಿಸಿಕೊಳ್ಳಬಹುದು.—1 ಪೇತ್ರ 4:8.
ಆದರೂ, ನೋವನ್ನುಂಟುಮಾಡಿರುವ ವರ್ತನೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂಬ ಅನಿಸಿಕೆ ನಿಮಗಿರುವಲ್ಲಿ ಆಗೇನು? ಹೀಗಿರುವಾಗ, ಆ ವ್ಯಕ್ತಿಯ ಬಳಿಗೆ ಹೋಗಿ ಮಾತಾಡುವುದು ಅತ್ಯುತ್ತಮವಾದ ಪರಿಹಾರವಾಗಿದೆ. “ನೀವಿಬ್ಬರೇ ಸೇರಿಕೊಂಡು ಏನು ಸಂಭವಿಸಿತು ಎಂಬುದನ್ನು ಮನಬಿಚ್ಚಿ ಮಾತಾಡಿರಿ” ಎಂದು 13 ವರ್ಷ ಪ್ರಾಯದ ಫ್ರ್ಯಾಂಕ್ ಹೇಳುತ್ತಾನೆ. “ಒಂದುವೇಳೆ ನೀವು ಮನಬಿಚ್ಚಿ ಮಾತಾಡದಿರುವಲ್ಲಿ, ನಿಮ್ಮ ಮನಸ್ಸಿನಲ್ಲಿ ಅಸಮಾಧಾನವಿರುವುದು.” 16 ವರ್ಷ ಪ್ರಾಯದ ಸೂಸನ್‌ಗೂ ಇದೇ ರೀತಿ ಅನಿಸಿತು. “ನಾನು ನಿನ್ನ ಮೇಲೆ ಭರವಸೆಯಿಟ್ಟಿದ್ದೆ, ಆದರೆ ನೀನು ನನಗೆ ನಿರಾಶೆಗೊಳಿಸಿದಿ ಎಂದು ಅವರಿಗೆ ಹೇಳಿಬಿಡುವುದೇ ಅತ್ಯುತ್ತಮವಾದ ಪರಿಹಾರವಾಗಿದೆ” ಎಂದು ಅವಳು ಹೇಳುತ್ತಾಳೆ. ಜ್ಯಾಕಲಿನ್ ಸಹ ಸಮಸ್ಯೆಯನ್ನು ವೈಯಕ್ತಿಕವಾಗಿ ಬಗೆಹರಿಸಲು ಇಷ್ಟಪಡುತ್ತಾಳೆ. “ಆ ವಿಚಾರದ ಕುರಿತು ಆ ವ್ಯಕ್ತಿಯೊಂದಿಗೇ ಮಾತಾಡಲು ನಾನು ಪ್ರಯತ್ನಿಸುತ್ತೇನೆ” ಎಂದು ಅವಳನ್ನುತ್ತಾಳೆ. “ಸಾಮಾನ್ಯವಾಗಿ ಆ ಗೆಳತಿ (ಗೆಳೆಯ) ನಿಮ್ಮ ಬಳಿ ಮನಬಿಚ್ಚಿ ಮಾತಾಡುತ್ತಾರೆ ಮತ್ತು ನೀವು ಆ ಕೂಡಲೆ ಸಮಸ್ಯೆಯನ್ನು ಬಗೆಹರಿಸಸಾಧ್ಯವಿದೆ.”
ಜ್ಞಾನೋಕ್ತಿ 15:18) ಆದುದರಿಂದ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವ ಮೊದಲು ನೀವು ಶಾಂತ ಸ್ಥಿತಿಗೆ ಬರುವ ತನಕ ಕಾಯಿರಿ. “ಆರಂಭದಲ್ಲಿ ನೀವು ಕೋಪದಿಂದ ಉದ್ರೇಕಗೊಂಡಿರುತ್ತೀರಿ, ಆದರೆ ನೀವು ಶಾಂತರಾಗಲು ಪ್ರಯತ್ನಿಸಬೇಕು. ಆ ಇನ್ನೊಬ್ಬ ವ್ಯಕ್ತಿಯ ಮೇಲಿನ ನಿಮ್ಮ ಕೋಪವು ಆರುವ ತನಕ ಕಾಯಿರಿ. ತದನಂತರ ನೀವು ಆ ವ್ಯಕ್ತಿಯ ಬಳಿಗೆ ಹೋಗಿ, ಕುಳಿತುಕೊಂಡು ಸಮಾಧಾನದಿಂದ ವಿಷಯಗಳನ್ನು ಚರ್ಚಿಸಸಾಧ್ಯವಿದೆ” ಎಂದು ಲೀಸಾ ಹೇಳುತ್ತಾಳೆ.
ಖಂಡಿತವಾಗಿಯೂ, ನೀವು ಕೋಪದ ಉದ್ರೇಕದಲ್ಲಿ ನಿಮ್ಮ ಸ್ನೇಹಿತರನ್ನು ಸಮೀಪಿಸಬಾರದು ಎಂಬ ವಿಷಯದಲ್ಲಿ ಜಾಗ್ರತೆಯಿಂದಿರತಕ್ಕದ್ದು. ಬೈಬಲು ಹೇಳುವುದು: “ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು; ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.” (“ಸಮಾಧಾನ” ಎಂಬುದು ಬಹು ಮುಖ್ಯವಾದ ಶಬ್ದವಾಗಿದೆ. ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಯನ್ನು ಬಾಯಿಗೆ ಬಂದಂತೆ ಬೈಯುವುದು ನಿಮ್ಮ ಗುರಿಯಾಗಿಲ್ಲ ಎಂಬುದು ನೆನಪಿರಲಿ. ಸ್ನೇಹಭಾವದಿಂದ ಸಮಸ್ಯೆಗಳನ್ನು ಬಗೆಹರಿಸುವುದು, ಹಾಗೂ ಸಾಧ್ಯವಿರುವಲ್ಲಿ ಸ್ನೇಹವನ್ನು ಪುನಃ ಆರಂಭಿಸುವುದು ನಿಮ್ಮ ಗುರಿಯಾಗಿದೆ. (ಕೀರ್ತನೆ 34:14) ಆದುದರಿಂದ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಿರಿ. “‘ನಾನು ನಿನ್ನ ಗೆಳತಿ ಮತ್ತು ನೀನು ನನ್ನ ಗೆಳತಿ; ಆದರೆ ಏನು ಸಂಭವಿಸಿತು ಎಂಬುದರ ಕುರಿತು ಮಾತಾಡಲು ನಾನು ಇಷ್ಟಪಡುತ್ತೇನೆ’ ಎಂದು ನೀವು ಹೇಳಸಾಧ್ಯವಿದೆ” ಎಂದು ಲೀಸಾ ಸಲಹೆ ನೀಡುತ್ತಾಳೆ. “ಅವಳ ವರ್ತನೆಯ ಹಿಂದಿರುವ ಕಾರಣವನ್ನು ನೀವು ತಿಳಿದುಕೊಳ್ಳುವ ಅಗತ್ಯವಿದೆ. ಆ ಕಾರಣವು ನಿಮಗೆ ಗೊತ್ತಾದರೆ, ಅದನ್ನು ಬಗೆಹರಿಸುವುದು ಸಾಮಾನ್ಯವಾಗಿ ಅಷ್ಟೇನೂ ಕಷ್ಟಕರವಾಗಿರುವುದಿಲ್ಲ.”
ಆ ವ್ಯಕ್ತಿಯ ಬಗ್ಗೆ ಹರಟೆಮಾತಾಡುವ ಮೂಲಕ ಮತ್ತು ಇತರರು ನಿಮ್ಮ ಪಕ್ಷವಹಿಸುವಂತೆ ಮಾಡುವ ಮೂಲಕ ಸೇಡುತೀರಿಸಿಕೊಳ್ಳಲು ಪ್ರಯತ್ನಿಸುವುದು ಖಂಡಿತವಾಗಿಯೂ ತಪ್ಪು. ಕ್ರೈಸ್ತ ಅಪೊಸ್ತಲ ಪೌಲನು ರೋಮಾಪುರದವರಿಗೆ ಬರೆದುದು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ.” (ರೋಮಾಪುರ 12:17) ನಮ್ಮ ಮನಸ್ಸಿಗೆ ಎಷ್ಟೇ ನೋವುಂಟಾಗಿರುವುದಾದರೂ, ಸೇಡುತೀರಿಸಿಕೊಳ್ಳುವುದು ಸಮಸ್ಯೆಯನ್ನು ಇನ್ನೂ ಹೆಚ್ಚು ಕೆಡಿಸುತ್ತದೆ ಎಂಬುದಂತೂ ನಿಜ. “ಸೇಡುತೀರಿಸಿಕೊಳ್ಳುವುದು ಯೋಗ್ಯವಾದ ಹೆಜ್ಜೆಯಲ್ಲ, ಏಕೆಂದರೆ ಹಾಗೆ ಮಾಡುವುದರಿಂದ ನೀವಿಬ್ಬರೂ ಎಂದಿಗೂ ಸ್ನೇಹಿತರಾಗಲಾರಿರಿ” ಎಂದು ನೋರ ಹೇಳುತ್ತಾಳೆ. ಇದಕ್ಕೆ ಬದಲಾಗಿ, ಸ್ನೇಹವನ್ನು ಸರಿಪಡಿಸಲಿಕ್ಕಾಗಿ ನಿಮ್ಮ ಕೈಲಾದುದನ್ನು ಮಾಡುವುದು, “ನೀವು ಒಬ್ಬ ಒಳ್ಳೇ ವ್ಯಕ್ತಿಯಾಗಿದ್ದೀರಿ ಎಂಬ ಭಾವನೆಯನ್ನು ಉಂಟುಮಾಡುತ್ತದೆ” ಎಂದು ಅವಳು ಹೇಳುತ್ತಾಳೆ.
ಆದರೆ ರಾಜಿಮಾಡಿಕೊಳ್ಳಲಿಕ್ಕಾಗಿ ನೀವು ಮಾಡುವ ಪ್ರಯತ್ನಗಳಿಗೆ ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಯು ಪ್ರತಿಕ್ರಿಯೆ ತೋರಿಸದಿರುವಲ್ಲಿ ಆಗೇನು? ಹಾಗಿರುವಾಗ, ಸ್ನೇಹಗಳು ಬೇರೆ ಬೇರೆ ರೀತಿಯಲ್ಲಿರುತ್ತವೆ ಎಂಬುದು ನೆನಪಿರಲಿ. “ಪ್ರತಿಯೊಬ್ಬ ಸ್ನೇಹಿತನು ಆತ್ಮೀಯ ಸ್ನೇಹಿತನಾಗಿರುವುದಿಲ್ಲ. ಆದುದರಿಂದ ನೀವು ಬೇರೆ ಬೇರೆ ರೀತಿಯ ಗೆಳೆತನವನ್ನು ಅನುಭವಿಸಲು ಕಲಿತುಕೊಳ್ಳಿರಿ” ಎಂದು ಕೌಟುಂಬಿಕ ಸಲಹೆಗಾರ್ತಿಯಾದ ಜೂಡಿತ್ ಮಕ್ಲೀಸ್ ಹೇಳುತ್ತಾರೆ. ಆದರೂ, ರಾಜಿಮಾಡಿಕೊಳ್ಳಲಿಕ್ಕಾಗಿ ನಿಮ್ಮಿಂದಾಗುವಷ್ಟು ಪ್ರಯತ್ನವನ್ನು ನೀವು ಮಾಡಿದ್ದೀರಿ ಎಂಬ ವಿಚಾರದಲ್ಲಿ ನೀವು ಸಾಂತ್ವನವನ್ನು ಕಂಡುಕೊಳ್ಳಸಾಧ್ಯವಿದೆ. ಅಪೊಸ್ತಲ ಪೌಲನು ಬರೆದುದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ಓರೆ ಅಕ್ಷರಗಳು ನಮ್ಮವು.)—ರೋಮಾಪುರ 12:18.
ಆತ್ಮೀಯ ಸ್ನೇಹಿತರಲ್ಲೂ ಅಸಮಾಧಾನದ ಬಿರುಗಾಳಿಯು ಬೀಸುತ್ತದೆ. ಆ ಬಿರುಗಾಳಿಯು ಇತರರ ಕುರಿತಾದ ನಿಮ್ಮ ದೃಷ್ಟಿಕೋನವನ್ನು ಅಥವಾ ನಿಮ್ಮ ಸ್ವಯೋಗ್ಯತೆಯನ್ನು ಹಾಳುಮಾಡುವಂತೆ ಅನುಮತಿಸದಿರುವ ಮೂಲಕ ನೀವು ಆ ಬಿರುಗಾಳಿಯನ್ನು ಎದುರಿಸಿ ನಿಲ್ಲಲು ಸಮರ್ಥರಾಗುವಲ್ಲಿ, ನೀವು ಒಬ್ಬ ಪ್ರೌಢ ವಯಸ್ಕರಾಗುವ ಪ್ರಗತಿಪಥದಲ್ಲಿದ್ದೀರಿ. ‘ಪರಸ್ಪರ ಕಚ್ಚಾಡಿಕೊಳ್ಳುವಂತಹ ಕೆಲವು ಸ್ನೇಹಿತರು’ ಇರಬಹುದಾದರೂ, “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂಬ ಆಶ್ವಾಸನೆಯನ್ನು ಬೈಬಲು ನಮಗೆ ಕೊಡುತ್ತದೆ.—ಜ್ಞಾನೋಕ್ತಿ 18:24.
[ಪಾದಟಿಪ್ಪಣಿ]
^ ಈ ಲೇಖನದಲ್ಲಿರುವ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 15ರಲ್ಲಿರುವ ಚಿತ್ರಗಳು]
ಏನು ಸಂಭವಿಸಿತು ಎಂಬುದರ ಕುರಿತು ಮಾತಾಡುವ ಮೂಲಕ ನೀವು ಒಂದು ಸ್ನೇಹವನ್ನು ಪುನಃ ಆರಂಭಿಸಬಹುದು