ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಷ್ಯಾದವರು ಆರಾಧನಾ ಸ್ವಾತಂತ್ರ್ಯವನ್ನು ಅತ್ಯಮೂಲ್ಯವೆಂದೆಣಿಸುತ್ತಾರೆ

ರಷ್ಯಾದವರು ಆರಾಧನಾ ಸ್ವಾತಂತ್ರ್ಯವನ್ನು ಅತ್ಯಮೂಲ್ಯವೆಂದೆಣಿಸುತ್ತಾರೆ

ರಷ್ಯಾದವರು ಆರಾಧನಾ ಸ್ವಾತಂತ್ರ್ಯವನ್ನು ಅತ್ಯಮೂಲ್ಯವೆಂದೆಣಿಸುತ್ತಾರೆ

ಸೋವಿಯಟ್‌ ಯೂನಿಯನ್‌ 1991ರಲ್ಲಿ ವಿಭಜನೆಯಾದಂದಿನಿಂದ, ಅಲ್ಲಿ ವಾಸಿಸುವ ಜನರು ದೇವರನ್ನು ಆರಾಧಿಸುವ ಮಹತ್ತಾದ ಸ್ವಾತಂತ್ರ್ಯದಲ್ಲಿ ಆನಂದಿಸಿದ್ದಾರೆ. ಇತರ ದೇಶಗಳಿಗೆ ವಲಸೆಹೋದವರಿಂದಲೂ ಈ ರೀತಿಯ ಸ್ವಾತಂತ್ರ್ಯವು ಅತ್ಯಮೂಲ್ಯವೆಂದೆಣಿಸಲ್ಪಟ್ಟಿದೆ.

ಹಿಂದಿನ ಸೋವಿಯಟ್‌ ಯೂನಿಯನ್‌ನಲ್ಲಿ ಜೀವಿಸುವ ಅನೇಕರಿಗೆ, ದೇವರನ್ನು ಆರಾಧಿಸಲು ಬಹಿರಂಗವಾಗಿ ಕೂಡಿಬರುವ ಸ್ವಾತಂತ್ರ್ಯವು ಗಣ್ಯಮಾಡಬಹುದಾದಂತಹ ಒಂದು ಹರ್ಷಭರಿತ ಸಂಗತಿಯಾಗಿತ್ತು, ಯಾಕೆಂದರೆ ಅಲ್ಲಿ ಅವರು ಅನೇಕ ದಶಕಗಳಿಂದ ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿತರಾಗಿದ್ದರು.

1917ರಲ್ಲಿ ಬಾಲ್ಷವಿಕ್‌ ಕ್ರಾಂತಿಯ ನಂತರ, ರಷ್ಯದಲ್ಲಿ ಬೈಬಲನ್ನು ಓದುವುದು ಅಪಾಯಕಾರಿಯಾಯಿತು ಮತ್ತು ಅಂತಹ ಸಮಯದಲ್ಲೂ ಬೈಬಲನ್ನು ಓದಲು ಆರಿಸಿಕೊಂಡ ಕೆಲವು ಜನರು ತಮ್ಮ ಸ್ವಾತಂತ್ರ್ಯವನ್ನು ಅಪಾಯಕ್ಕೊಡ್ಡಿಕೊಂಡರು. ಯೆಹೋವನ ಸಾಕ್ಷಿಗಳು ಇದಕ್ಕೆ ಹೊರತಾಗಿದ್ದರು. ನಿಜಾಂಶವೇನೆಂದರೆ, ಏಪ್ರಿಲ್‌ 16, 1956ರ ನ್ಯೂಸ್‌ವೀಕ್‌ ಪತ್ರಿಕೆಯು ಸುಮಾರು 44 ವರ್ಷಗಳ ಹಿಂದೆ ಪೂರ್ವ ಜರ್ಮನಿಯಲ್ಲಿದ್ದ ಒಬ್ಬ ಯುವಕನು ಹೀಗೆ ಹೇಳಿದ್ದನ್ನು ಉದ್ಧರಿಸಿತು: “ಯೆಹೋವನ ಸಾಕ್ಷಿಗಳನ್ನು ಬಿಟ್ಟರೆ ಬೇರೆ ಯಾರೂ ಬೈಬಲನ್ನು ಓದುವುದಿಲ್ಲ.” ಆದರೂ, ಬೈಬಲ್‌ ಅಭ್ಯಾಸದ ಕೂಟಗಳನ್ನು ನಡೆಸುತ್ತಿದ್ದುದ್ದಕ್ಕಾಗಿ ಮತ್ತು ಬೈಬಲಿನ ಸಂದೇಶವನ್ನು ಸಾರುತ್ತಿದ್ದ ಕಾರಣದಿಂದಾಗಿ ಸಾಕ್ಷಿಗಳು ಸೆರೆಮನೆಗೆ ಮತ್ತು ಕೂಟ ಶಿಬಿರಗಳಿಗೆ ಹಾಕಲ್ಪಟ್ಟರು. ಹೀಗಿದ್ದರೂ, ಕೆಳಗಿನ ಬಾಕ್ಸ್‌ ತೋರಿಸುವಂತೆ, ಅವರು ಎಲ್ಲೆಲ್ಲಿ ಹೋದರೋ ಅಲ್ಲಲ್ಲಿ ತಮ್ಮ ಬೈಬಲ್‌ ಆಧಾರಿತ ನಂಬಿಕೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು.

ಇಸವಿ 1991ರಲ್ಲಿ ಸೋವಿಯಟ್‌ ಯೂನಿಯನ್‌ ವಿಭಜನೆಯಾಗಲು ಪ್ರಾರಂಭಿಸಿದಾಗ, ಅಲ್ಲಿರುವ ಸಾಕ್ಷಿಗಳು ಬೈಬಲ್‌ ಉಪದೇಶದ ಕಾರ್ಯಕ್ರಮವೊಂದನ್ನು ಎತ್ತಿತೋರಿಸುವ ಏಳು ಅಧಿವೇಶನಗಳನ್ನು ನಡೆಸಿದರು. ಒಟ್ಟಿಗೆ, 74,252 ಮಂದಿ ಹಾಜರಾದರು. ಇಸವಿ 1993ರಲ್ಲಿ, ಅಂದರೆ ಕೇವಲ ಎರಡು ವರ್ಷಗಳ ನಂತರ, ಸೋವಿಯಟ್‌ ಯೂನಿಯನ್‌ನ ಮುಂಚಿನ 15 ಗಣರಾಜ್ಯಗಳ ಪೈಕಿ 4 ಸ್ಥಳಗಳಲ್ಲಿ ಇಂತಹ ಎಂಟು ಅಧಿವೇಶನಗಳು ನಡೆದು, ಅಲ್ಲಿ ಒಟ್ಟಿಗೆ 1,12,326 ಜನರು ಹಾಜರಾದರು. * ಇಂತಹ ಸಾವಿರಾರು ವ್ಯಕ್ತಿಗಳಲ್ಲಿ ಅನೇಕರು ಸೋವಿಯಟ್‌ ಸೆರೆಮನೆಗಳಲ್ಲಿ ಮತ್ತು ಕಾರ್ಮಿಕ ಶಿಬಿರಗಳಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದರು. ಯಾವುದೇ ಅಡೆತಡೆಯಿಲ್ಲದೆ ದೇವರನ್ನು ಆರಾಧಿಸುವ ತಮ್ಮ ಸ್ವಾತಂತ್ರ್ಯಕ್ಕಾಗಿ ಈ ನಂಬಿಗಸ್ತ ಕ್ರೈಸ್ತರು ಬಹಳ ಕೃತಜ್ಞರಾಗಿದ್ದರು.

ಇಸವಿ 1993ರಿಂದ ಪ್ರತಿ ವರ್ಷ, ಹಿಂದಿನ ಸೋವಿಯಟ್‌ ಗಣರಾಜ್ಯದ ಜನರು ತಮ್ಮ ಸ್ವದೇಶದಲ್ಲಿಯೇ ಕ್ರೈಸ್ತ ಒಟ್ಟುಗೂಡುವಿಕೆಗಳಲ್ಲಿ ಸ್ವತಂತ್ರವಾಗಿ ಹಾಜರಾಗುವ ಸುಯೋಗವನ್ನು ಅತ್ಯಮೂಲ್ಯವೆಂದೆಣಿಸಿದ್ದಾರೆ. ಉದಾಹರಣೆಗೆ, ಕಳೆದ ವರ್ಷ ಹಿಂದಿನ ಸೋವಿಯಟ್‌ ಗಣರಾಜ್ಯಗಳಲ್ಲಿ, 80 ಸ್ಥಳಗಳಲ್ಲಿ ನಡೆಸಲ್ಪಟ್ಟ “ದೇವರ ಪ್ರವಾದನ ವಾಕ್ಯ” ಎಂಬ ಜಿಲ್ಲಾ ಅಧಿವೇಶನದಲ್ಲಿ, ಒಟ್ಟು 2,82,333 ಮಂದಿ ಯೆಹೋವನ ಸಾಕ್ಷಿಗಳು ಹಾಗೂ ಅವರ ಮಿತ್ರರು ಒಂದುಗೂಡಿ ಆರಾಧಿಸುವುದರಲ್ಲಿ ಆನಂದಿಸಿದರು. ಮತ್ತು ಒಟ್ಟು 13,452 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು.

ಇದು ಆಶ್ಚರ್ಯಕರವಾಗಿ ತೋರಿಬರುವುದಾದರೂ, ಲೋಕದ ಬೇರೆ ದೇಶಗಳಲ್ಲೂ ರಷ್ಯನ್‌ ಭಾಷೆಯ ಅಧಿವೇಶನಗಳು ಕಳೆದ ವರ್ಷ ಜರುಗಿಸಲ್ಪಟ್ಟವು. ಹಿಂದಿನ ಸೋವಿಯಟ್‌ ಯೂನಿಯನ್‌ನ ಹೊರಗಿರುವ ದೇಶಗಳಲ್ಲಿ ನಡೆದ ಇಂತಹ ನಾಲ್ಕು ಒಟ್ಟುಗೂಡುವಿಕೆಗಳಲ್ಲಿ ಒಟ್ಟಿಗೆ 6,636 ಮಂದಿ ಹಾಜರಿದ್ದರು! ಈ ಅಧಿವೇಶನಗಳು ಎಲ್ಲಿ ಜರುಗಿಸಲ್ಪಟ್ಟವು? ರಷ್ಯನ್‌ ಭಾಷೆಯನ್ನು ಮಾತಾಡುವ ಇಷ್ಟೊಂದು ಜನರಿಗೆ ಬೈಬಲಿನಲ್ಲಿ ಏಕೆ ತೀವ್ರವಾದ ಆಸಕ್ತಿಯಿದೆ? ಈ ಎರಡನೇ ಪ್ರಶ್ನೆಯನ್ನು ನಾವು ಮೊದಲು ಸಂಕ್ಷಿಪ್ತವಾಗಿ ಪರಿಗಣಿಸೋಣ.

ಅವರು ಆತ್ಮಿಕ ಅಗತ್ಯತೆಯನ್ನು ಮನಗಾಣುತ್ತಾರೆ

ರಷ್ಯಕ್ಕೆ ಧಾರಾಳವಾಗಿ ಹರಿದುಬಂದ ಧಾರ್ಮಿಕ ಸಂಪ್ರದಾಯಗಳ ಇತಿಹಾಸವೊಂದಿದೆ. ಶತಮಾನಗಳ ಹಿಂದೆ ಕಟ್ಟಲ್ಪಟ್ಟಿದ್ದ ಅಲಂಕಾರಮಯ ಮುಖ್ಯಚರ್ಚುಗಳು ಕ್ರೈಸ್ತಪ್ರಪಂಚದಲ್ಲಿ ಬಹಳ ಜನಪ್ರಿಯವಾಗಿವೆ. ಹೀಗಿದ್ದರೂ, ರಷ್ಯನ್‌ ಆರ್ತೊಡಾಕ್ಸ್‌ ಚರ್ಚು ರೋಮನ್‌ ಕ್ಯಾತೋಲಿಕ್‌ ಚರ್ಚಿನಂತೆ, ಬೈಬಲಿನ ಕುರಿತು ಏನನ್ನೂ ಹೇಳದೆ ಜನರನ್ನು ಅಜ್ಞಾನದಲ್ಲಿ ಇಟ್ಟಿದೆ.

ಇತ್ತೀಚೆಗೆ ಪ್ರಕಾಶಿಸಲಾದ ರಷ್ಯನ್‌ ದುರಂತ—ಚರಿತ್ರೆಯ ಹೊರೆ (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುವುದು: “ಬೈಬಲು ರಷ್ಯನ್‌ ಪೂರ್ವ ಆರ್ತೊಡಾಕ್ಸ್‌ ಚರ್ಚಿನ ಮುಖ್ಯ ಭಾಗವಾಗಿ ಎಂದೂ ಇರಲಿಲ್ಲ.” ರಷ್ಯನ್‌ ಧಾರ್ಮಿಕ ವಿದ್ವಾಂಸರಾಗಿರುವ ಸೆರೆಜೈ ಇವೆನ್ಕೋ ಎಂಬುವರ ಪ್ರಕಾರ, ಇದರ ಫಲಿತಾಂಶವೇನೆಂದರೆ, “ಆರ್ತೊಡಾಕ್ಸ್‌ ವಿಶ್ವಾಸಿಗಳ ಬೈಬಲ್‌ ಜ್ಞಾನದ ಕೊರತೆಯು, ಅವಿಶ್ವಾಸಿಗಳಿಗಿಂತಲೂ ಹೆಚ್ಚಾಗಿ ಆರ್ತೊಡಾಕ್ಸ್‌ ಚರ್ಚಿನ ಅನೇಕರು ಮೂಢನಂಬಿಕೆಗಳು, ಇಂದ್ರಜಾಲ ಮತ್ತು ಮಂತ್ರವಿದ್ಯೆಯ ಪ್ರಭಾವಕ್ಕೆ ಸುಲಭವಾಗಿ ಒಳಗಾಗುವಂತೆ ಮುನ್ನಡಿಸಿದೆ.”

ಜನಪ್ರಿಯ ರಷ್ಯನ್‌ ಬರಹಗಾರರಾದ ಟಾಲ್‌ಸ್ಟಾಯ್‌ ತದ್ರೀತಿಯ ಅವಲೋಕನವನ್ನು ಮಾಡಿದರು. ಅವರು ಬರೆದುದು: “[ರಷ್ಯನ್‌ ಆರ್ತೊಡಾಕ್ಸ್‌] ಚರ್ಚಿನ ಬೋಧನೆಯು, ಕುತಂತ್ರದ ಮತ್ತು ಮೋಸದ ಸಿದ್ಧಾಂತವಾಗಿದೆಯೆಂಬುದರ ಕುರಿತು ನಾನು ಮನಗಾಣಿಸಲ್ಪಟ್ಟಿದ್ದೇನೆ ಮತ್ತು ಅದು ಆಚರಣೆಯಲ್ಲಿ ಕ್ರೈಸ್ತ ಬೋಧನೆಯ ಇಡೀ ಅರ್ಥವನ್ನು ಸಂಪೂರ್ಣವಾಗಿ ಮುಚ್ಚಿಬಿಡುವ ಅತಿಯಾದ ಮೂಢನಂಬಿಕೆ ಮತ್ತು ಮಾಟಮಂತ್ರದ ಸಂಗ್ರಹವಾಗಿದೆ.”

ಈ ಸನ್ನಿವೇಶವು ಸೋವಿಯಟ್‌ ಕಮ್ಯೂನಿಸಮ್‌ನ ಉದಯಿಸುವಿಕೆಗೆ ಸಾಕಷ್ಟು ಅವಕಾಶವನ್ನು ಕೊಟ್ಟಿತು ಮತ್ತು ಅದು ತನ್ನ ನಾಸ್ತಿಕ ಪ್ರಚಾರದಿಂದ ಮತ್ತು “ಧರ್ಮವು ಜನರ ಅಫೀಮು ಆಗಿದೆ” ಎಂಬ ಜನಪ್ರಿಯ ನುಡಿಯಿಂದ ಬೆಳೆಯತೊಡಗಿತು. ಆದರೂ, ಕಮ್ಯೂನಿಸಮ್‌ ತಾನೇ ಬೇಗನೇ ಒಂದು ಧರ್ಮದ ರೂಪವನ್ನು ಪಡೆಯಿತು ಮತ್ತು ಹೆಚ್ಚಾಗಿ ಕ್ರಾಂತಿಕಾರಿ ಧರ್ಮವಾಗಿ ಕರೆಯಲ್ಪಡತೊಡಗಿತು. ಆದರೆ ಕ್ರಾಂತಿಕಾರಿ ಧರ್ಮವು ಸಹ ಹೆಚ್ಚು ಕಾಲ ಬಾಳಲಿಲ್ಲ. ಸೋವಿಯಟ್‌ ರಾಜ್ಯವು 1991ರಲ್ಲಿ ಪತನಗೊಂಡಾಗ, ಮಿಲ್ಯಾಂತರ ಜನರು ಗಲಿಬಿಲಿಗೊಂಡರು ಮತ್ತು ಸಹಾಯಕ್ಕಾಗಿ ಯಾರ ಮೇಲೆ ಆತುಕೊಳ್ಳಬೇಕು ಎಂದು ಚಿಂತಿತರಾದರು. ಯೆಹೋವನ ಸಾಕ್ಷಿಗಳ ಉತ್ತೇಜನದಿಂದ, ರಷ್ಯದ ಸಾವಿರಾರು ಮಂದಿ ಬೈಬಲ್‌ನಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದರು.

ಒಂದು ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯ ಫಲಿತಾಂಶವಾಗಿ, ರಷ್ಯದವರು ಲೋಕದಲ್ಲೇ ಅತಿ ಅಕ್ಷರಸ್ಥ ಜನರಲ್ಲಿ ಒಬ್ಬರಾಗಿದ್ದರು. ಹೀಗೆ, ರಷ್ಯದ ಅನೇಕರು ಕೇವಲ ಬೈಬಲ್‌ ವಾಚಕರು ಮಾತ್ರವೇ ಆಗಿರದೆ ಅವರು ಅದರ ಬೋಧನೆಗಳನ್ನು ಸಹ ಪ್ರೀತಿಸುವವರಾದರು. ಅದೇ ಸಮಯದಲ್ಲಿ, ವಿಶೇಷವಾಗಿ 1990ಗಳ ದಶಕದ ಅವಧಿಯಲ್ಲಿ ಹಿಂದಿನ ಸೋವಿಯಟ್‌ ಯೂನಿಯನ್‌ನಿಂದ ನೂರಾರೂ ಸಾವಿರ ಸಂಖ್ಯೆಯಲ್ಲಿ ಜನರು ಇತರ ದೇಶಗಳಾದ ಜರ್ಮನಿ, ಗ್ರೀಸ್‌ ಮತ್ತು ಅಮೆರಿಕಕ್ಕೆ ವಲಸೆಹೋದರು. ಯಾವ ಫಲಿತಾಂಶಗಳು ಅವರಿಗೆ ಸಿಕ್ಕಿದವು?

ಜರ್ಮನಿಯಲ್ಲಿ ಆರಾಧಿಸಲು ಸ್ವತಂತ್ರರು

18 ಮತ್ತು 19ನೇ ಶತಮಾನಗಳಲ್ಲಿ, ಅನೇಕ ಜರ್ಮನರು ರಷ್ಯಕ್ಕೆ ಸ್ಥಳಾಂತರಿಸಿದರು. ರಷ್ಯದ ಅಧಿಕಾರಿಯಾಗಿ ತನ್ನ ಗಂಡನ ಉತ್ತರಾಧಿಕಾರಿಯಾಗಿ 1762ರಲ್ಲಿ ಅಧಿಕಾರ ವಹಿಸಿದ 15 ವರ್ಷ ಪ್ರಾಯದ ಸೋಫಿ ಇವರಲ್ಲಿ ಅತಿ ಜನಪ್ರಿಯಳಾಗಿದ್ದಳು. ಅವಳ ದೀರ್ಘ ಆಳ್ವಿಕೆಯ ಅವಧಿಯಲ್ಲಿ, ಮಹಾ ಕ್ಯಾತರಿನ್‌ ಎಂದು ಆಮೇಲೆ ಕರೆಯಲ್ಪಟ್ಟ ಸೋಫಿಯು ಜರ್ಮನ್‌ ರೈತರನ್ನು ರಷ್ಯದಲ್ಲಿ ವಾಸಿಸುವುದಕ್ಕೆ ಆಮಂತ್ರಿಸಿದಳು. ಆಮೇಲೆ, ಎರಡನೇ ಲೋಕ ಯುದ್ಧದಲ್ಲಿ ಜರ್ಮನಿಯು ಸೋವಿಯಟ್‌ ಯೂನಿಯನ್‌ನ ಮೇಲೆ ಆಕ್ರಮಣಮಾಡಿದಾಗ, ಇವರಲ್ಲಿದ್ದ ಅನೇಕ ಜರ್ಮನ್‌ ಪೀಳಿಗೆಯವರು ಸೈಬೀರಿಯಾಕ್ಕೆ ಮಾತ್ರವಲ್ಲ, ಸೋವಿಯಟ್‌ ಗಣರಾಜ್ಯಗಳಾಗಿರುವ ಕಸಕ್‌ಸ್ತಾನ್‌, ಕಿರ್ಗಿಸ್ತಾನ್‌ ಮತ್ತು ಉಸ್ಬೆಕಿಸ್ತಾನ್‌ಗೆ ಕಳುಹಿಸಲ್ಪಟ್ಟರು. ಇತ್ತೀಚೆಗೆ ರಷ್ಯನ್‌ ಭಾಷೆಯನ್ನಾಡುವ ಅನೇಕ ಜರ್ಮನರು ಮತ್ತು ಹಿಂದಿನ ಸೋವಿಯಟ್‌ ಯೂನಿಯನ್‌ನಿಂದ ಬಂದಿರುವ ಇತರರು ಉತ್ತಮ ಆರ್ಥಿಕ ಪರಿಸ್ಥಿತಿಗಳನ್ನು ಅನುಭವಿಸಲು ಜರ್ಮನಿಗೆ ಸ್ಥಳಾಂತರಿಸಿದರು.

ಇಸವಿ 1992ರ ಡಿಸೆಂಬರ್‌ನಲ್ಲಿ, ಜರ್ಮನಿಯಲ್ಲಿರುವ ರಷ್ಯನ್‌ ಮಾತಾಡುವ ಮೊದಲ ಸಭೆಯನ್ನು ಬರ್ಲಿನ್‌ನಲ್ಲಿ ರಚಿಸಲಾಯಿತು. ಕಳೆದ ವರ್ಷದೊಳಗೆ, ಜರ್ಮನಿಯಲ್ಲಿರುವ ರಷ್ಯನ್‌ ಭಾಷೆಯ ಮೂರು ಸರ್ಕಿಟ್‌ಗಳಲ್ಲಿ 52 ಸಭೆಗಳು ಮತ್ತು 43 ಸಣ್ಣ ಗುಂಪುಗಳು ರಚಿತವಾದವು. ಕೊಲೊನ್ನದಲ್ಲಿ ಜುಲೈ 30ರಿಂದ ಆಗಸ್ಟ್‌ 1ರ ವರೆಗೆ ರಷ್ಯನ್‌ ಭಾಷೆಯಲ್ಲಿ ನಡೆದ “ದೇವರ ಪ್ರವಾದನ ವಾಕ್ಯ” ಎಂಬ ಜಿಲ್ಲಾ ಅಧಿವೇಶನಕ್ಕೆ ಅತ್ಯುಚ್ಚ ಹಾಜರಿಯು 4,920 ಆಗಿತ್ತು ಮತ್ತು ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸೂಚಿಸುತ್ತಾ, 164 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಈ ಮುಂಚೆ ಅಂದರೆ ಏಪ್ರಿಲ್‌ 1ರಂದು, ಜರ್ಮನಿಯ ರಷ್ಯನ್‌ ಮಾತಾಡುವ ಸಭೆಗಳಲ್ಲಿ, ಯೇಸುವಿನ ಮರಣದ ಜ್ಞಾಪಕಾಚರಣೆಗೆ 6,175 ಮಂದಿ ಹಾಜರಿದ್ದರು.

ಅಮೆರಿಕದಲ್ಲಿರುವ ರಷ್ಯದವರು

ಹಿಂದಿನ ಸೋವಿಯಟ್‌ ಯೂನಿಯನ್‌ನಿಂದ ರಷ್ಯನ್‌ ಭಾಷೆಯನ್ನಾಡುವ ಜನರು ಅಮೆರಿಕದೊಳಗೂ ಪ್ರವೇಶಿಸಿದ್ದಾರೆ. ನ್ಯೂ ಯಾರ್ಕ್‌ ಟೈಮ್ಸ್‌ ವರದಿಸುವುದು: “ಇಸವಿ 1991 ಮತ್ತು 1996ರ ಮಧ್ಯೆ, ಬ್ರೂಕ್ಲಿನ್‌ನ ತೀವ್ರವಾಗಿ ಬೆಳೆಯುತ್ತಿರುವ ವಲಸೆಗಾರರ ಗುಂಪು ರಷ್ಯದವರದ್ದೇ ಆಗಿತ್ತು. ಅದೇ ಸಮಯಾವಧಿಯಲ್ಲಿ, ವಲಸೆ ಮತ್ತು ಪ್ರಜಾ ಹಕ್ಕು ಕೊಡುವ ಸೇವಾಸಂಸ್ಥೆಯು, ಹಿಂದಿನ ಸೋವಿಯಟ್‌ ಯೂನಿಯನ್‌ನಿಂದ 3,39,000ಕ್ಕಿಂತಲೂ ಹೆಚ್ಚಿನ ವಲಸಿಗರು ಅಮೆರಿಕವನ್ನು ಪ್ರವೇಶಿಸುವಂತೆ ಅನುಮತಿ ನೀಡಿತು.”

ತದನಂತರ, 1999ರ ಜನವರಿ ತಿಂಗಳ ಟೈಮ್ಸ್‌ ಪತ್ರಿಕೆಯು ಮತ್ತೂ ಹೇಳಿದ್ದೇನೆಂದರೆ, ಕಳೆದ ದಶಕದಲ್ಲಿ ಸುಮಾರು 4,00,000 ಯೆಹೂದ್ಯರು ಹಿಂದಿನ ಸೋವಿಯಟ್‌ ಯೂನಿಯನ್‌ನಿಂದ ನ್ಯೂ ಯಾರ್ಕ್‌ ಪಟ್ಟಣಕ್ಕೆ ಮತ್ತು ಸುತ್ತಮುತ್ತಲಿನ ಸ್ಥಳಕ್ಕೆ ವಲಸೆಬಂದಿದ್ದರು. ಅಷ್ಟುಮಾತ್ರವಲ್ಲ, ಸಾವಿರಾರು ಸಂಖ್ಯೆಯಲ್ಲಿ ರಷ್ಯದವರು ಇತ್ತೀಚೆಗಿನ ವರ್ಷಗಳಲ್ಲಿ ಅಮೆರಿಕದ ಇತರ ಭಾಗಗಳಲ್ಲಿ ನೆಲೆಸಿದ್ದಾರೆ. ಉದಾಹರಣೆಗೆ, ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಸುಮಾರು 35,000 ರಷ್ಯನ್‌ ವಲಸಿಗರು ಒಳಬಂದರು ಮತ್ತು ಹೀಗೆ ಈ ಕ್ಷೇತ್ರವು ನ್ಯೂ ಯಾರ್ಕ್‌ ಮತ್ತು ಲಾಸ್‌ ಏಂಜಲಿಸ್‌ನ ನಂತರ ಹಿಂದಿನ ಸೋವಿಯಟ್‌ ಯೂನಿಯನ್‌ನಿಂದ ಬಂದಿರುವ ವಲಸಿಗರಲ್ಲಿ ಮೂರನೇ ಅತಿ ದೊಡ್ಡ ಕೇಂದ್ರವಾಯಿತು. ರಷ್ಯನ್‌ ಮಾತಾಡುವ ಈ ಜನರು ಬೈಬಲನ್ನು ಅಭ್ಯಾಸಿಸುವ ಅವಕಾಶಕ್ಕೆ ಸಹ ಪ್ರತಿಕ್ರಿಯೆ ತೋರಿಸಿದ್ದಾರೆ ಮತ್ತು ಅವರಲ್ಲಿ ನೂರಾರು ವ್ಯಕ್ತಿಗಳು ಸತ್ಯ ದೇವರಾದ ಯೆಹೋವನ ಆರಾಧಕರಾಗಿದ್ದಾರೆ.

ಇತ್ತೀಚೆಗಿನ ಸಮಯಗಳಲ್ಲಿ, ಏಪ್ರಿಲ್‌ 1, 1994ರಂದು, ಯೆಹೋವನ ಸಾಕ್ಷಿಗಳ ಮೊದಲ ರಷ್ಯನ್‌ ಭಾಷೆಯ ಸಭೆಯು ಅಮೆರಿಕದ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಸ್ಥಾಪಿಸಲ್ಪಟ್ಟಿತು. ಕಾಲಕ್ರಮೇಣ ರಷ್ಯನ್‌ ಸಭೆಗಳು ಪೆನ್ಸಿಲ್ವೇನಿಯಾ, ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್‌ ರಾಜ್ಯಗಳಲ್ಲಿ ಆರಂಭಿಸಲ್ಪಟ್ಟವು. ಅಭ್ಯಾಸ ಗುಂಪುಗಳು ಸಹ ದೇಶದ ಅನೇಕ ಭಾಗಗಳಲ್ಲಿ ಆರಂಭಿಸಲ್ಪಟ್ಟವು.

ಅಮೆರಿಕದಲ್ಲಿಯೇ ಮೊದಲನೆಯದು

ಕಳೆದ ಆಗಸ್ಟ್‌ 20ರಿಂದ 22ರ ವರೆಗೆ ಅಮೆರಿಕ ಮತ್ತು ಕೆನಡದ ಎಲ್ಲ ಕಡೆಯಿಂದಲೂ ಒಟ್ಟಿಗೆ 670 ಮಂದಿ ನ್ಯೂ ಯಾರ್ಕ್‌ ಸಿಟಿಯಲ್ಲಿ ನಡೆದ ಮೊದಲ ರಷ್ಯನ್‌ ಭಾಷೆಯ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಿರುವುದನ್ನು ನೋಡುವುದು ರೋಮಾಂಚನಕಾರಿಯಾಗಿತ್ತು. ಎಲ್ಲ ಭಾಷಣಗಳು ರಷ್ಯನ್‌ ಭಾಷೆಯಲ್ಲಿ ಸಾದರಪಡಿಸಲ್ಪಟ್ಟವು ಮತ್ತು ಯಾಕೋಬ ಹಾಗೂ ಏಸಾವನ ಬೈಬಲ್‌ ದಾಖಲೆಯನ್ನು ಎತ್ತಿತೋರಿಸುವ ಪೂರ್ಣ ಪೋಷಾಕಿನ ಡ್ರಾಮವು ಕ್ಯಾಲಿಫೋರ್ನಿಯದ ಲಾಸ್‌ ಏಂಜಲಿಸ್‌ನಲ್ಲಿರುವ ರಷ್ಯನ್‌ ಸಭೆಯ ಸದಸ್ಯರಿಂದ ನಿರೂಪಿಸಲ್ಪಟ್ಟಿತು. ಇದು ನಿಜವಾಗಿಯೂ ಅಧಿವೇಶನದ ಎದ್ದುಕಾಣುವ ಅಂಶವಾಗಿತ್ತು.

ಅಧಿವೇಶನದ ಇನ್ನೊಂದು ಮುಖ್ಯ ಭಾಗವು, 14 ಮಂದಿಯ ದೀಕ್ಷಾಸ್ನಾನವಾಗಿತ್ತು ಮತ್ತು ಇವರೆಲ್ಲರ ಫೋಟೋವನ್ನು ಈ ಲೇಖನದಲ್ಲಿ ತೋರಿಸಲಾಗಿದೆ. ಇವರಲ್ಲಿ ಹಲವರು ಸುಮಾರು 4,000 ಕಿಲೊಮೀಟರಿನಷ್ಟು ದೀರ್ಘ ಪ್ರಯಾಣವನ್ನು ಮಾಡಿದ್ದರು, ಅಂದರೆ ನ್ಯೂ ಯಾರ್ಕ್‌ ಸಿಟಿಯಲ್ಲಿ ನಡೆಯುವ ಅಧಿವೇಶನದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿಕ್ಕಾಗಿ ಓರಿಗಾನ್‌ನ ಪೋರ್ಟ್‌ಲ್ಯಾಂಡ್‌, ಲಾಸ್‌ ಏಂಜಲಿಸ್‌, ಸಾನ್‌ ಫ್ರಾನ್ಸಿಸ್ಕೋ ಮತ್ತು ಕ್ಯಾಲಿಫೋರ್ನಿಯಾದಿಂದ ಬಂದಿದ್ದರು. ಈ 14 ಮಂದಿ ಈ ಮುಂಚೆ ಹಿಂದಿನ ಸೋವಿಯಟ್‌ ಗಣರಾಜ್ಯಗಳಾಗಿದ್ದ ಅರ್‌ಮೆನಿಯ, ಅಜೆರ್‌ಬೈಝನ್‌, ಬಲಾರಸ್‌, ಮಾಲ್ಡೋವ, ರಷ್ಯ ಮತ್ತು ಯೂಕ್ರೇನ್‌ನಲ್ಲಿ ವಾಸಿಸುತ್ತಿದ್ದರು. ದೇವರ ಜ್ಞಾನವನ್ನು ಮತ್ತು ಆತನನ್ನು ಆರಾಧಿಸುವ ಸ್ವಾತಂತ್ರ್ಯವನ್ನು ಅವರೆಷ್ಟು ಅತ್ಯಮೂಲ್ಯವೆಂದೆಣಿಸುತ್ತಾರೆ ಎಂಬುದನ್ನು ಅವರ ಅನುಭವಗಳು ತೋರಿಸುತ್ತವೆ.

ಸ್ವೆಟ್‌ಲಾನಾ (ಮೊದಲ ಸಾಲು, ಎಡದಿಂದ ಮೂರನೆಯವಳು) ಮಾಸ್ಕೋದಲ್ಲಿ ಬೆಳೆಸಲ್ಪಟ್ಟಿದ್ದಳು. 17ನೇ ವಯಸ್ಸಿನಲ್ಲಿ ತನಗಿಂತ ಎಷ್ಟೋ ಹೆಚ್ಚು ಪ್ರಾಯದವನಾಗಿದ್ದ ಜನಪ್ರಿಯ ಸಂಗೀತಗಾರನೊಂದಿಗೆ ಅವಳು ಮದುವೆಯಾದಳು ಮತ್ತು 1989ರಲ್ಲಿ ಅವರು ತಮ್ಮ ಪುಟ್ಟ ಗಂಡು ಮಗುವಿನೊಂದಿಗೆ ಅಮೆರಿಕಕ್ಕೆ ಬಂದರು. ಅವಳ ಗಂಡನು ವ್ಯಾಪಕವಾಗಿ ಪ್ರಯಾಣಮಾಡುತ್ತಿದ್ದನು ಮತ್ತು ಐದು ವರ್ಷಗಳ ನಂತರ ಅವರು ವಿಚ್ಛೇದನವನ್ನು ಪಡೆದುಕೊಂಡರು.

ಸ್ವೆಟ್‌ಲಾನಾಳು ಒಬ್ಬ ಸಾಕ್ಷಿ ಜೊತೆಕೆಲಸಗಾರಳನ್ನು ಭೇಟಿಯಾದಾಗ, ಯಾವುದನ್ನು “[ಅವಳ] ಜೀವಿತದ ಮೇಲೆ ಹತೋಟಿಯನ್ನು ಸಾಧಿಸುವ ಮತ್ತು [ಅವಳ] ಎಲ್ಲಾ ಹಣವನ್ನು ದೋಚಿಕೊಳ್ಳುವ ಒಂದು ಪಂಥ”ವೆಂದು ಅವಳ ಸ್ನೇಹಿತರು ಕರೆದರೋ ಅಂತಹ ಪಂಥಕ್ಕೆ ಸೇರಬಾರದೆಂಬ ಎಚ್ಚರಿಕೆಯನ್ನು ಅವರು ಅವಳಿಗೆ ಕೊಟ್ಟರು. ಆದರೂ, ಅವಳು ಬೈಬಲ್‌ ಏನನ್ನು ಕಲಿಸುತ್ತದೋ ಅದನ್ನು ಕಲಿಯಲು ಬಯಸಿದಳು. ದೇವರ ಹೆಸರನ್ನು ಬೈಬಲಿನಲ್ಲಿ ತೆರೆದು ತೋರಿಸಿದ್ದರ ಕುರಿತು ಅವಳು ಹೇಳುವುದು: “ಸಾಕ್ಷಿಗಳು ಮಾತ್ರವೇ ಅದನ್ನು ತಿಳಿಯಪಡಿಸುತ್ತಿದ್ದಾರೆ ಎಂಬುದನ್ನು ತಿಳಿದು ನಾನು ಬಹಳವಾಗಿ ಪ್ರಭಾವಿತಳಾದೆ.”

ಯುವಕನಾಗಿ, ಅಂಡ್ರೈ (ಹಿಂದುಗಡೆಯ ಸಾಲು, ಎಡದಿಂದ ಮೂರನೆಯವನು) ಒಬ್ಬ ಕ್ರೀಡಾಪಟುವಾಗುವುದಕ್ಕೆ ಪ್ರೌಢ ತರಬೇತಿಯನ್ನು ಪಡೆಯಲಿಕ್ಕಾಗಿ ಸೈಬೀರಿಯದಲ್ಲಿರುವ ತನ್ನ ಮನೆಯನ್ನು ಬಿಟ್ಟು ಇಂದಿನ ಸೆಂಟ್‌ ಪೀಟರ್ಸ್‌ಬರ್ಗ್‌ಗೆ ಬಂದನು. ಇದಾದ ಸ್ವಲ್ಪದರಲ್ಲೇ, ಸೋವಿಯಟ್‌ ಯೂನಿಯನ್‌ ವಿಭಜಿತಗೊಂಡಿತು ಮತ್ತು 1933ರಲ್ಲಿ, ಅಂಡ್ರೈ ತನ್ನ 22ನೆಯ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆಹೋದನು. ಅವನು ವಿವರಿಸುವುದು: “ನಾನು ದೇವರ ಕುರಿತು ಯೋಚಿಸಲು ಆರಂಭಿಸಿದೆ ಮತ್ತು ರಷ್ಯನ್‌ ಆರ್ತೊಡಾಕ್ಸ್‌ ಚರ್ಚಿಗೆ ಹೋಗಲು ಸಹ ಆರಂಭಿಸಿದೆ. ಒಮ್ಮೆ, ರಷ್ಯನ್‌ ಈಸ್ಟರ್‌ ಹಬ್ಬದ ಆಚರಣೆಯ ಸಮಯದಲ್ಲಿ, ದೇವರ ಕಡೆಗೆ ಸೆಳೆಯಲ್ಪಡಲಿಕ್ಕಾಗಿ ಪ್ರಯತ್ನಿಸುತ್ತಾ, ಇಡೀ ರಾತ್ರಿ ನಾನು ಚರ್ಚಿನಲ್ಲೇ ಉಳಿದೆ.”

ಈ ಸಮಯದಷ್ಟಕ್ಕೆ ಸ್ವೆಟ್‌ಲಾನಾ ಅಂಡ್ರೈ ಅನ್ನು ಭೇಟಿಯಾದಳು ಮತ್ತು ಅವಳ ಬೈಬಲ್‌ ಅಭ್ಯಾಸದಲ್ಲಿ ಅವಳೇನನ್ನು ಕಲಿಯುತ್ತಿದ್ದಾಳೆಂಬುದನ್ನು ಅವಳು ಅವನಿಗೆ ಹೇಳಿದಳು. ಅವನು ಅವಳೊಂದಿಗೆ ಯೆಹೋವನ ಸಾಕ್ಷಿಗಳ ಕೂಟವೊಂದಕ್ಕೆ ಜೊತೆಯಾಗಿ ಹೋಗಲು ಒಪ್ಪಿಕೊಂಡನು ಮತ್ತು ಇದಾದ ನಂತರ, ಅವನು ಸಹ ಒಂದು ಬೈಬಲ್‌ ಅಭ್ಯಾಸವನ್ನು ಸ್ವೀಕರಿಸಿದನು. ಜನವರಿ 1999ರಲ್ಲಿ, ಅವರಿಬ್ಬರೂ ಮದುವೆಯಾದರು. ಅಧಿವೇಶನದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡ ನಂತರ, ಅವರಿಬ್ಬರೂ ತುಂಬ ಸಂತೋಷದಿಂದಿದ್ದರು.

ಪಾವ್ಯಲ್‌ (ಹಿಂದುಗಡೆ ಸಾಲು, ಎಡದಿಂದ ನಾಲ್ಕನೆಯವನು) ಕಸಕ್‌ಸ್ತಾನ್‌ನ ಕಾರಾಗಂಡಿ ನಗರದ ಸಮೀಪದಲ್ಲಿಯೇ ಜನಿಸಿದನು, ಆದರೆ ನಂತರ ರಷ್ಯದ ನಾಲ್‌ಚಿಕ್‌ಗೆ ಸ್ಥಳಾಂತರಿಸಿದನು. ಈ ದೊಡ್ಡ ನಗರವು ಚೆಚನ್ಯ ಮತ್ತು ಡೆಗಿಸ್ತಾನ್‌ಗೆ ಹತ್ತಿರದಲ್ಲಿದ್ದು, ಇಲ್ಲಿ ಭಾರೀ ಕಾದಾಟಗಳು ನಡೆದಿದ್ದವು. ಆಗಸ್ಟ್‌ 1996ರಲ್ಲಿ ಪಾವ್ಯಲ್‌ನು ಸಾಕ್ಷಿಗಳನ್ನು ಮೊದಲು ಭೇಟಿಯಾಗಿದ್ದು ಇಲ್ಲಿಯೇ. ಆದರೂ ಅವನು ಮುಂದಿನ ತಿಂಗಳೇ ಸ್ಯಾನ್‌ ಫ್ರಾನ್ಸಿಸ್ಕೋಗೆ ವಲಸೆಹೋದನು. ಅಮಲೌಷಧ ಸೇವನೆಯಲ್ಲಿ ಒಳಗೂಡಿದ್ದ ಅವನು ಒಂದು ಹೆಣ್ಣುಮಗಳ ತಂದೆಯಾದನು, ಆದರೆ ಅವಳನ್ನು ಅವಳ ತಾಯಿಯೊಂದಿಗೆ ರಷ್ಯದಲ್ಲಿಯೇ ಬಿಟ್ಟುಬಂದಿದ್ದನು.

ಅಮೆರಿಕಕ್ಕೆ ಬಂದು ತಲುಪಿದ ಕೂಡಲೇ, ಪಾವ್ಯಲ್‌ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ, ಒಂದು ಬೈಬಲ್‌ ಅಭ್ಯಾಸವನ್ನು ಸ್ವೀಕರಿಸಿದನು. ಅವನು ತನ್ನ ಜೀವನವನ್ನು ಸರಿಪಡಿಸಿದನು ಮತ್ತು ಹೊಸದಾಗಿ ಕಂಡುಕೊಂಡಿದ್ದ ಅವನ ನಂಬಿಕೆಗಳ ಕುರಿತು ತನ್ನ ಮಗಳ ತಾಯಿಗೆ ಪತ್ರ ಬರೆದನು. ಈಗ ಅವಳು ಸಾಕ್ಷಿಗಳೊಂದಿಗೆ ಅಭ್ಯಾಸಿಸುತ್ತಿದ್ದಾಳೆ ಮತ್ತು ಅಮೆರಿಕಕ್ಕೆ ಹೋಗುವ ಯೋಜನೆಯನ್ನು ಸಹ ಮಾಡಿದ್ದಾಳೆ. ಹೀಗೆ ಅವಳು ಮತ್ತು ಪಾವ್ಯಲ್‌ ಮದುವೆಯಾಗಿ ಕ್ಯಾಲಿಫೋರ್ನಿಯಾದಲ್ಲಿಯೇ ತಮ್ಮ ಮಗಳೊಂದಿಗೆ ಒಟ್ಟಾಗಿ ಯೆಹೋವನನ್ನು ಸೇವಿಸಲು ಸಾಧ್ಯವಾಗುವುದು.

ಜಾರ್ಜ್‌ (ಹಿಂದುಗಡೆ ಸಾಲು, ಎಡದಿಂದ ಎರಡನೆಯವನು) ಮಾಸ್ಕೋದಲ್ಲಿ ಜನಿಸಿದನು ಮತ್ತು ಅಲ್ಲಿಯೇ ಬೆಳೆಸಲ್ಪಟ್ಟನು. ಅವನು 1996ರಲ್ಲಿ ಅಮೆರಿಕಕ್ಕೆ ಬಂದನು ಮತ್ತು ಮರುವರ್ಷವೇ ಮೂಲತಃ ಆಜೇರ್‌ಬೈಝನ್‌ನಿಂದ ಬಂದವಳಾಗಿದ್ದ ಫ್ಲೋರಾ ಎಂಬವಳನ್ನು ಮದುವೆಯಾದನು. ಜಾರ್ಜ್‌ ರಷ್ಯನ್‌ ಆರ್ತೊಡಾಕ್ಸ್‌ ಚರ್ಚಿಗೆ ಹಾಜರಾಗುತ್ತಿದ್ದನು, ಆದರೆ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಒಂದು ಪ್ರತಿಯನ್ನು ಓದಿದ ಮೇಲೆ ಅವನಿಗೆ ತ್ರಯೈಕ್ಯ ಬೋಧನೆಯ ಬಗ್ಗೆ ಪ್ರಶ್ನೆಗಳಿದ್ದವು. ವಾಚ್‌ ಟವರ್‌ ಸೊಸೈಟಿಗೆ ಬರೆದ ತನ್ನ ಪತ್ರಕ್ಕೆ ಉತ್ತರವಾಗಿ, ನೀವು ತ್ರಯೈಕ್ಯವನ್ನು ನಂಬಬೇಕೋ? ಎಂಬ ಬ್ರೋಷರನ್ನು ಅವನು ಪಡೆದುಕೊಂಡನು. 1998ರಲ್ಲಿ ಅವನು ಮತ್ತು ಫ್ಲೋರಾ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು. ಈಗ ಅವಳು ಸಹ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದಕ್ಕೆ ಯೋಜನೆಯನ್ನು ಮಾಡುತ್ತಿದ್ದಾಳೆ.

ಅಧಿವೇಶನದ ಇನ್ನೊಂದು ಮುಖ್ಯಾಂಶವು ಮಾಸ್ಕೋದಿಂದ ಕ್ರೈಸ್ತ ವಂದನೆಗಳನ್ನು ಸ್ವೀಕರಿಸುವುದಾಗಿತ್ತು. ಇಲ್ಲಿ ಅದೇ ವಾರಾಂತ್ಯದಲ್ಲಿ ನಡೆದ ಅವರ ಅಧಿವೇಶನಕ್ಕೆ 15,108 ಮಂದಿ ಹಾಜರಾಗಿದ್ದರು. ಅಲ್ಲಿ 600 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರೆಂಬ ಪ್ರಕಟನೆಯನ್ನು ಕೇಳಿಸಿಕೊಂಡಾಗ, ನ್ಯೂ ಯಾರ್ಕ್‌ ನಗರದಲ್ಲಿರುವ ಪ್ರತಿನಿಧಿಗಳು ಅದೆಷ್ಟು ರೋಮಾಂಚಿತಗೊಂಡರು! ಅಧಿವೇಶನದ ತಾರೀಖಿನ ವರೆಗಿನ ವಾರದಲ್ಲೆಲ್ಲಾ ಅಮೆರಿಕದಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕಾಣಬರುತ್ತಿದ್ದ ಭಯಸೂಚಕ ವಾರ್ತಾಪತ್ರಿಕೆಯ ಮತ್ತು ಟೆಲಿವಿಷನ್‌ ವರದಿಗಳ ವೀಕ್ಷಣೆಯಲ್ಲಿ ಇದು ವಿಶೇಷವಾಗಿ ರೋಮಾಂಚಕರವಾಗಿತ್ತು.

ಮಾಸ್ಕೋದಲ್ಲಿ ಏನು ಸಂಭವಿಸುತ್ತಿತ್ತು?

ಜುಲೈ 21, 1999ರಂದು, ಮಾಸ್ಕೋದ ಕೇಂದ್ರಭಾಗದ ಹತ್ತಿರದಲ್ಲಿಯೇ ಮತ್ತು ದೊಡ್ಡ ರಷ್ಯನ್‌ ಆರ್ತೊಡಾಕ್ಸ್‌ ಚರ್ಚಿನ ಬಲಭಾಗದಲ್ಲಿ ಇದ್ದ ಒಲಿಂಪಿಕ್‌ ಸ್ಟೇಡಿಯಮ್‌ನ ಉಪಯೋಗಕ್ಕಾಗಿ ಸಾಕ್ಷಿಗಳು ಒಂದು ಕರಾರಿಗೆ ಸಹಿಹಾಕಿದ್ದರು. ಆದರೆ ಅಧಿವೇಶನವು ಆರಂಭವಾಗುವ ಒಂದು ವಾರದ ಮುಂಚೆ, ಅಲ್ಲಿ ವಿರೋಧವು ಉಂಟಾಗಲಿದೆ ಎಂಬುದು ಸ್ಪಷ್ಟವಾಯಿತು. ಬುಧವಾರ ಆಗಸ್ಟ್‌ 18ರ ವರೆಗೆ ಸ್ಟೇಡಿಯಮ್‌ ಅನ್ನು ಉಪಯೋಗಿಸುವ ಅನುಮತಿಯು ದೊರಕಿರಲಿಲ್ಲ, ಆದರೆ ಬಾಡಿಗೆಯ ಹಣವನ್ನು ಸಾಕ್ಷಿಗಳು ಆಗಲೇ ಕಟ್ಟಿದ್ದರು. ಪುಟ 28ರಲ್ಲಿರುವ ಬಾಕ್ಸ್‌ ತೋರಿಸುವಂತೆ, ಯೆಹೋವನ ಸಾಕ್ಷಿಗಳು ರಷ್ಯದಲ್ಲಿರುವ ಧಾರ್ಮಿಕ ಸಂಸ್ಥಾಪನೆಯಾಗಿ ಕಾನೂನಿನ ಪ್ರಕಾರ ಮಾನ್ಯತೆಯನ್ನು ಪಡೆದಿದ್ದಾರೆಂದು ಅಧಿಕಾರಿಗಳಿಗೆ ಒತ್ತಿಹೇಳಲಾಯಿತು.

ಸುಮಾರು 15,000 ಅಧಿವೇಶನ ಪ್ರತಿನಿಧಿಗಳು ಶುಕ್ರವಾರ ಬೆಳಗ್ಗೆ ಅಧಿವೇಶನದ ಕಾರ್ಯಕ್ರಮಕ್ಕೆ ಹಾಜರಾಗಲಿಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದುದರಿಂದ, ಸಾಕ್ಷಿ ಪ್ರತಿನಿಧಿಗಳು ಕಾತುರರಾಗುತ್ತಿದ್ದರು. ಕೆಲವು ಪ್ರತಿನಿಧಿಗಳು ಎಷ್ಟೋ ಹೆಚ್ಚು ಕಿಲೊಮೀಟರ್‌ಗಳಷ್ಟು ದೂರದ ನಗರ ಮತ್ತು ಪಟ್ಟಣಗಳಿಂದ ಮಾಸ್ಕೋ ನಗರಕ್ಕೆ ಪ್ರಯಾಣಿಸುತ್ತಿದ್ದರು. ಕೊನೆಗೆ, ಕೆಲವು ತಾಸುಗಳ ಚರ್ಚೆಯ ನಂತರ, ಆಗಸ್ಟ್‌ 19, ಗುರುವಾರ ಸಂಜೆ 8 ಗಂಟೆಗೆ ಅಧಿವೇಶನವನ್ನು ಮುಂದುವರಿಸಬಹುದೆಂದು ಸ್ಟೇಡಿಯಮ್‌ನ ಆಡಳಿತವು ಸಾಕ್ಷಿ ಪ್ರತಿನಿಧಿಗಳಿಗೆ ತಿಳಿಸಲು ಸಂತೋಷಿಸಿತು. ನಗರದ ಆಡಳಿತವರ್ಗವು ಸಹ ಅಧಿವೇಶನವನ್ನು ನಡೆಸುವುದರಲ್ಲಿ ತಮಗೆ ಯಾವುದೇ ಆಕ್ಷೇಪಣೆ ಇಲ್ಲವೆಂದು ತಿಳಿಸಿತು.

ಮರುದಿನ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ಟೇಡಿಯಮ್‌ಗೆ ಬಂದರು. ಅವರ ಬರುವಿಕೆಯ ತಯಾರಿಯಲ್ಲಿ ಸಾಕ್ಷಿ ಸ್ವಯಂಸೇವಕರು ಇಡೀ ರಾತ್ರಿ ಕೆಲಸಮಾಡಿದ್ದರು. ಕಾರ್ಯಕ್ರಮದ ಮೊದಲ ದಿನ ಬೆಳಗ್ಗೆ, ಅಧಿವೇಶನವು ನಡೆಯುವುದಕ್ಕೆ ವಿರೋಧವಿದೆಯೆಂಬ ಸುದ್ದಿಯನ್ನು ಈ ಮುಂಚೆ ಕೇಳಿಸಿಕೊಂಡಿದ್ದ ಪ್ರೆಸ್‌ನ ಸದಸ್ಯರು ಸಹ ಹಾಜರಿದ್ದರು. ಅವರಲ್ಲಿ ಒಬ್ಬನು ಉದ್ಗರಿಸಿದ್ದು: “ಅಭಿನಂದನೆಗಳು! ನಿಮ್ಮ ಅಧಿವೇಶನವು ಸರಾಗವಾಗಿ ಮುಂದೆ ಸಾಗುತ್ತಿದೆ ಎಂಬ ವಿಚಾರದಿಂದ ನಾವು ಸಂತೋಷಿತರಾಗಿದ್ದೇವೆ.”

ಕ್ರಮಬದ್ಧವಾದ ನಡತೆಯ ಉದಾಹರಣೆ

ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ವಿವೇಕಯುತವಾಗಿದೆಯೆಂದು ಸ್ಟೇಡಿಯಮ್‌ನ ಆಡಳಿತವರ್ಗದವರು ನೆನಸಿದರು. ಹೀಗೆ, ವಿಮಾನನಿಲ್ದಾಣಗಳಲ್ಲಿ ಪ್ರಯಾಣಿಕರ ಶೋಧವನ್ನು ನಡೆಸಲಿಕ್ಕಾಗಿ ಉಪಯೋಗಿಸಲ್ಪಡುವಂತಹ ಲೋಹಪತ್ತೆಯ ಸಾಧನಗಳೊಂದಿಗೆ ಭದ್ರತಾ ಸಿಬ್ಬಂದಿಗಳು ಸ್ಟೇಡಿಯಮ್‌ನ ಎಲ್ಲ ಪ್ರವೇಶದ್ವಾರಗಳಲ್ಲಿ ನಿಂತಿದ್ದರು. ಸ್ಟೇಡಿಯಮ್‌ನ ಒಳಗಡೆಯೂ ಪೋಲಿಸರು ನಿಂತುಕೊಂಡಿದ್ದರು. ಒಂದು ಗಂಭೀರವಾದ ಬೆದರಿಕೆಯ ಮಧ್ಯೆಯೂ ಅಧಿವೇಶನವು ಕ್ರಮಬದ್ಧವಾದ ರೀತಿಯಲ್ಲಿ ಮುಂದುವರಿಯಿತು.

ಶನಿವಾರ ಮಧ್ಯಾಹ್ನದಂದು ಯಾರೋ ಒಬ್ಬರು ಫೋನ್‌ ಮಾಡಿ, ಸ್ಟೇಡಿಯಮ್‌ನೊಳಗೆ ಬಾಂಬು ಇಡಲಾಗಿದೆಯೆಂದು ತಿಳಿಸಿದರು. ಆ ದಿನದ ಕೊನೆಯ ಭಾಷಣದ ಮುಂಚಿನ ಭಾಗವು ಮುಗಿಯುವುದಕ್ಕೆ ಸ್ವಲ್ಪ ಮುಂಚೆ ಆ ಬೆದರಿಕೆಯನ್ನು ನಾವು ಪಡೆದುಕೊಂಡೆವು. ಹಾಗಾಗಿ, ಸ್ಟೇಡಿಯಮ್‌ನ ಆಡಳಿತವರ್ಗದವರ ವಿನಂತಿಯ ಮೇರೆಗೆ, ಸ್ಟೇಡಿಯಮ್‌ ಅನ್ನು ತತ್‌ಕ್ಷಣವೇ ಖಾಲಿಮಾಡಬೇಕೆಂಬ ಒಂದು ಚುಟುಕಾದ ಪ್ರಕಟನೆಯನ್ನು ಮಾಡಲಾಯಿತು. ಪ್ರತಿಯೊಬ್ಬರು ಇದನ್ನು ಕ್ರಮಬದ್ಧವಾದ ರೀತಿಯಲ್ಲಿ ಮಾಡಿದಾಗ, ಸ್ಟೇಡಿಯಮ್‌ನ ಅಧಿಕಾರಿಗಳು ಮತ್ತು ಪೋಲಿಸರು ಬೆರಗಾದರು. ಅವರು ಇಂತಹದ್ದನ್ನು ಎಂದೂ ನೋಡಿರಲಿಲ್ಲ! ಇದನ್ನು ಪೂರ್ವಾಭ್ಯಾಸ ಮಾಡಿದ್ದೀರೋ ಎಂದು ಅವರು ಕೇಳಿದರು.

ಅಲ್ಲಿ ಯಾವ ಬಾಂಬೂ ಸಿಕ್ಕಲಿಲ್ಲ ಮತ್ತು ಶನಿವಾರ ಯಾವ ಕಾರ್ಯಕ್ರಮವು ಸಾದರಪಡಿಸಲಿಕ್ಕಿತೋ ಆ ಭಾಗವನ್ನು ಮರುದಿನದ ಕಾರ್ಯಕ್ರಮದಲ್ಲಿ ಸೇರಿಸಲಾಯಿತು. ಸ್ಟೇಡಿಯಮ್‌ನ ಆಡಳಿತವರ್ಗವು ಅಧಿವೇಶನವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿತು.

ಗ್ರೀಸ್‌ ಮತ್ತು ಬೇರೆ ಕಡೆಗಳಲ್ಲಿ

ಆಗಸ್ಟ್‌ ತಿಂಗಳಿನ ಕೊನೆಯ ವಾರಾಂತ್ಯದಲ್ಲಿ ಮತ್ತು ಸೆಪ್ಟೆಂಬರ್‌ ತಿಂಗಳಿನ ಮೊದಲ ವಾರದಲ್ಲಿ, ರಷ್ಯನ್‌ ಭಾಷೆಯ ಜಿಲ್ಲಾ ಅಧಿವೇಶನಗಳು ಗ್ರೀಸ್‌ನಲ್ಲಿ ಸಹ ಜರುಗಿಸಲ್ಪಟ್ಟವು, ಅಂದರೆ ಮೊದಲು ಅಥೇನ್ಸ್‌ನಲ್ಲಿ ಮತ್ತು ಅನಂತರ ಥೆಸಲೊನೀಕದಲ್ಲಿ ನಡೆದವು. ಒಟ್ಟಿಗೆ 746 ಮಂದಿ ಹಾಜರಾದರು ಮತ್ತು 34 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಗ್ರೀಸ್‌ನಲ್ಲಿ ರಷ್ಯನ್‌ ಭಾಷೆಯ 8 ಸಭೆಗಳು ಮತ್ತು ಸೋವಿಯಟ್‌ ಯೂನಿಯನ್‌ನ ಹಿಂದಿನ ದಕ್ಷಿಣ ಗಣರಾಜ್ಯಗಳಿಂದ ಬಂದಿರುವ ವಲಸಿಗರಿಂದ ರಚಿಸಲ್ಪಟ್ಟ 17 ಚಿಕ್ಕ ಗುಂಪುಗಳು ಇವೆ. ಇಲ್ಲಿ ಕೂಟಗಳು ರಷ್ಯನ್‌ ಭಾಷೆಯಲ್ಲಿ ಮತ್ತು ವಲಸಿಗರಿಂದ ಮಾತಾಡಲಾಗುವ ಇತರ ಭಾಷೆಗಳಲ್ಲಿ ನಡೆಸಲ್ಪಡುತ್ತವೆ.

ಅಥೇನ್ಸ್‌ನಲ್ಲಿ ದೀಕ್ಷಾಸ್ನಾನ ಪಡೆದುಕೊಂಡವರಲ್ಲಿ ವಿಕ್ಟರನು ಒಬ್ಬನು. ಅವನು ನಾಸ್ತಿಕನಾಗಿದ್ದನು, ಆದರೆ ಆಗಸ್ಟ್‌ 1998ರಲ್ಲಿ ಅವನು ಅಥೇನ್ಸ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾದನು. ಇದೇ ಅಧಿವೇಶನದಲ್ಲಿ ಅವನ ಹೆಂಡತಿಯು ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಳು. ಹಾಜರಾದ ಪ್ರತಿನಿಧಿಗಳಿಂದ ತೋರಿಸಲಾದ ಪ್ರೀತಿಯಿಂದ ಅವನೆಷ್ಟು ಪ್ರಭಾವಿತನಾದನೆಂದರೆ, ಅವನು ಸಹ ಬೈಬಲನ್ನು ಅಭ್ಯಾಸಿಸಲು ಪ್ರೇರಿಸಲ್ಪಟ್ಟನು ಎಂದು ಅವನು ಹೇಳುತ್ತಾನೆ.

ಈಗೋರ್‌ ಹೆಸರಿನ ವ್ಯಕ್ತಿಯೊಬ್ಬನು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಒಂದು ಪ್ರತಿಯನ್ನು ಸ್ವೀಕರಿಸಿದನು ಮತ್ತು ಅದನ್ನು ಓದಿದ ಮೇಲೆ ತನ್ನ ಮನೆಯಲ್ಲಿದ್ದ ಧಾರ್ಮಿಕ ಮೂರ್ತಿಗಳನ್ನು ಬಿಸಾಡಿಬಿಟ್ಟನು. ಅವನು ತನ್ನನ್ನು ಒಬ್ಬ ಯೆಹೋವನ ಸಾಕ್ಷಿಯಾಗಿ ಪರಿಚಯಪಡಿಸಿಕೊಳ್ಳಲು ಸಹ ಆರಂಭಿಸಿದನು. ಸಾಕ್ಷಿಗಳು ತನ್ನನ್ನು ಭೇಟಿಮಾಡುವಂತೆ ಅಥೇನ್ಸ್‌ನಲ್ಲಿರುವ ಬ್ರಾಂಚ್‌ ಆಫೀಸಿಗೆ ಪತ್ರ ಬರೆದನು. ನವೆಂಬರ್‌ 1988ರಲ್ಲಿ ಸಾಕ್ಷಿಗಳು ಅವನನ್ನು ಭೇಟಿಮಾಡಿದ ನಂತರ, ಅವನು ತತ್‌ಕ್ಷಣವೇ ಸಭಾಕೂಟವನ್ನು ಮೊದಲ ಬಾರಿ ಹಾಜರಾದನು ಮತ್ತು ಅಂದಿನಿಂದ ಇಂದಿನ ವರೆಗೂ ಒಂದು ಕೂಟವನ್ನು ಸಹ ಅವನು ತಪ್ಪಿಸಿಕೊಳ್ಳಲಿಲ್ಲ. ಈಗ, ದೀಕ್ಷಾಸ್ನಾನದ ನಂತರ ಈಗೋರ್‌ನ ಗುರಿಯು, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕನಾಗುವುದಾಗಿದೆ.

ರಷ್ಯನ್‌ ಭಾಷೆಯನ್ನು ಮಾತಾಡುವ ಜನರು, ಇಲ್ಲಿ ನಾವು ತಿಳಿಸದೇ ಇರುವ ಲೋಕದ ಸುತ್ತಲಿನ ಇತರ ಅನೇಕ ದೇಶಗಳಿಗೆ ವಲಸೆಹೋಗಿದ್ದಾರೆ. ಇವರಲ್ಲಿ ಅನೇಕರು ಬೈಬಲನ್ನು ಅಭ್ಯಾಸಿಸುವ ಮತ್ತು ದೇವರನ್ನು ಆರಾಧಿಸಲು ಮುಕ್ತವಾಗಿ ಸೇರಿಬರುವ ತಮ್ಮ ಸ್ವಾತಂತ್ರ್ಯವನ್ನು ಬಹಳವಾಗಿ ಗಣ್ಯಮಾಡುತ್ತಾರೆ. ಅವರಿಗೆ ಈ ಸುಯೋಗವು ನೆಚ್ಚಿಕೊಳ್ಳಬಹುದಾದ ಆನಂದವಾಗಿದೆ!

[ಪಾದಟಿಪ್ಪಣಿಗಳು]

^ ಈಗ ಸ್ವಾತಂತ್ರ್ಯ ದೇಶಗಳಾಗಿರುವ ಈ ಕೆಳಗಿನವುಗಳು 15 ಗಣರಾಜ್ಯಗಳಾಗಿವೆ: ಅರ್‌ಮೇನಿಯ, ಅಸೇರ್‌ಬೈಜಾನ, ಉಸ್ಬೆಕಿಸ್ತಾನ್‌, ಎಸ್ಟೋನಿಯ, ಕಾಜಾಕ್‌ಸ್ತಾನ್‌, ಕಿರ್ಗಿಸ್ತಾನ್‌, ಜಾರ್ಜಿಯಾ, ಟರ್ಕ್‌ಮೆನಿಸ್ತಾನ್‌, ಟಜಿಕಿಸ್ತಾನ್‌, ಬೆಲಾರೂಸ್‌, ಮಾಲ್ಡೋವ, ಯೂಕ್ರೇನ್‌, ರಷ್ಯಾ, ಲ್ಯಾಟ್ವಿಯ, ಮತ್ತು ಲಿತುಏನ್ಯ.

[ಪುಟ 22ರಲ್ಲಿರುವ ಚೌಕ]

ಬೈಬಲನ್ನು ಪ್ರೀತಿಸುವ ರಷ್ಯಾದವರು

ರಷ್ಯಾದ ಒಬ್ಬ ಪ್ರತಿಷ್ಠಿತ ಧಾರ್ಮಿಕ ವಿದ್ವಾಂಸಕರು ಆಗಿರುವ ಪ್ರೊಫೆಸರ್‌ ಸೆರ್‌ಜೈ ಇವೆನ್ಕೋ ಎಂಬವರು, ಯೆಹೋವನ ಸಾಕ್ಷಿಗಳು ಬೈಬಲ್‌ ಅಭ್ಯಾಸಕ್ಕೆ ನಿಜವಾಗಿ ಸಮರ್ಪಿಸಲ್ಪಟ್ಟಿರುವ ಜನರಾಗಿದ್ದಾರೆಂದು ವರ್ಣಿಸಿದರು. ಓ ಲೈಯುಡ್ಯಾಕ್‌, ನಿಕೊಗ್ಡ ನ್ಯೆ ರಾಸ್‌ಸ್ಟೇಯುಷ್ಕಿಕ್ಷ್ಯಾ ಎಸ್‌ ಬೈಬ್ಲೇ (ತಮ್ಮ ಬೈಬಲುಗಳನ್ನು ಎಂದೂ ಬಿಟ್ಟಿರಲಾರದ ಜನರು) ಎಂಬ, ರಷ್ಯನ್‌ ಭಾಷೆಯಲ್ಲಿರುವ ತಮ್ಮ ಇತ್ತೀಚೆಗಿನ ಪುಸ್ತಕದಲ್ಲಿ ಸೋವಿಯಟ್‌ ಯೂನಿಯನ್‌ನಲ್ಲಿರುವ ಅವರ ಪುರಾತನ ಇತಿಹಾಸದ ಬಗ್ಗೆ ಅವರು ಬರೆದುದು: “ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಗಳಿಗೆ ನಿಷ್ಠಾವಂತರಾಗಿರುವುದರಿಂದ, ಸೆರೆಮನೆಯಲ್ಲಿ ಹಾಕಲ್ಪಟ್ಟಾಗಲೂ ಬೈಬಲನ್ನು ಉಪಯೋಗಿಸುವ ವಿಧಾನಗಳನ್ನು ಕಂಡುಹಿಡಿದಿದ್ದಾರೆ.” ಇದನ್ನು ದೃಷ್ಟಾಂತಿಸಲು, ಅವರು ಈ ಕೆಳಗಿನ ಅನುಭವಗಳನ್ನು ತಿಳಿಯಪಡಿಸುತ್ತಾರೆ.

“ಬೈಬಲ್‌ ಇಟ್ಟುಕೊಳ್ಳುವುದು ಕೈದಿಗಳಿಗೆ ನಿಷೇಧಿಸಲಾಗಿತ್ತು. ಹುಡುಕಾಟದ ಸಮಯದಲ್ಲಿ ಬೈಬಲುಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಉತ್ತರದ ಶಿಬಿರ ಕೂಟಗಳಲ್ಲೊಂದರಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಇಲೆಕ್ಟ್ರಿಷನ್‌ರೊಬ್ಬರು ಇದ್ದರು ಮತ್ತು ಅವರು ತೀರ ಹೆಚ್ಚು ಚಾಲಕಶಕ್ತಿ (ವೋಲ್ಟೇಜ್‌)ಯಿರುವ ವಿದ್ಯುತ್‌ ಪರಿವರ್ತಕ ಯೂನಿಟ್‌ನಲ್ಲಿ ತಮ್ಮ ಬೈಬಲ್‌ ಪುಸ್ತಕಗಳನ್ನು ಇಡುತ್ತಿದ್ದರು. ಬೈಬಲಿನ ಪ್ರತಿಯೊಂದು ಭಾಗವನ್ನು ನಿರ್ದಿಷ್ಟ ವಯರಿಗೆ ದಾರದಿಂದ ಕಟ್ಟಲಾಗಿತ್ತು ಮತ್ತು ವಿದ್ಯುತ್‌ ಶಾಕ್‌ ತಗಲದಂತಹ ರೀತಿಯಲ್ಲಿ ಪ್ರತಿಯೊಂದು ಪುಸ್ತಕವನ್ನು ಹೊರತೆಗೆಯಲು—ಉದಾಹರಣೆಗೆ, ಮತ್ತಾಯನ ಸುವಾರ್ತಾ ಪುಸ್ತಕ—ಯಾವ ದಾರವನ್ನು ಎಳೆಯಬೇಕು ಎಂಬುದು ಅವರಿಗೆ ಮಾತ್ರವೇ ತಿಳಿದಿತ್ತು. ಎಷ್ಟೇ ಹುಡುಕಾಡಿದರೂ, ಪಹರೆದಾರರು ಎಷ್ಟೇ ಕಷ್ಟಪಟ್ಟು ಸ್ಥಳವನ್ನು ಪರೀಕ್ಷಿಸಿದರೂ ಅವರ ಶ್ರಮವು ನಿಷ್ಫಲವಾಗುತ್ತಿದ್ದುದರಿಂದ ಈ ಅಪೂರ್ವ ಬೈಬಲ್‌ ಅನ್ನು ಹುಡುಕಿ ತೆಗೆಯಲು ಆಗಲೇ ಇಲ್ಲ.”c

[ಪುಟ 28ರಲ್ಲಿರುವ ಚೌಕ]

ಯೆಹೋವನ ಸಾಕ್ಷಿಗಳು ರಷ್ಯಾದಲ್ಲಿ ಪುನಃ ನೊಂದಾಯಿಸಲ್ಪಟ್ಟಿರುವುದು

ನೂರು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಯೆಹೋವನ ಸಾಕ್ಷಿಗಳು ರಷ್ಯಾದಲ್ಲಿ ರಾಜ್ಯದ ಸುವಾರ್ತೆಯನ್ನು ಸಕ್ರಿಯರಾಗಿ ಪ್ರಚುರಪಡಿಸುತ್ತಿದ್ದಾರೆ. ಹೀಗಿದ್ದರೂ, ಸರಕಾರವು ಹೇರಿರುವ ನಿರ್ಬಂಧಗಳ ಕಾರಣದಿಂದಾಗಿ, ಮಾರ್ಚ್‌ 27, 1991ರ ವರೆಗೆ ಸಾಕ್ಷಿಗಳಿಗೆ ಕಾನೂನಿನಿಂದ ಅಂಗೀಕಾರವು ಸಿಕ್ಕಿರಲಿಲ್ಲ. ಆ ಸಮಯದಲ್ಲಿ, ಅವರು ಆ್ಯಡ್‌ಮಿನಿಸ್ಟ್ರೇಟಿವ್‌ ಸೆಂಟರ್‌ ಆಫ್‌ ದ ರಿಲಿಜಿಯಸ್‌ ಆರ್ಗನೈಸೇಷನ್‌ ಆಫ್‌ ಜೆಹೋವಾಸ್‌ ವಿಟ್ನೆಸಸ್‌ ಇನ್‌ ದ ಯು.ಎಸ್‌.ಎಸ್‌.ಆರ್‌ ಎಂಬ ಹೆಸರಿನ ಕೆಳಗೆ ನೊಂದಾಯಿಸಲ್ಪಟ್ಟಿದ್ದರು.

ಸೆಪ್ಟೆಂಬರ್‌ 26, 1997ರಂದು, “ಮನಸ್ಸಾಕ್ಷಿ ಮತ್ತು ಧಾರ್ಮಿಕ ಸಂಸ್ಥಾಪನೆಗಳ ಸ್ವಾತಂತ್ರ್ಯ” ಎಂಬ ಕಾನೂನನ್ನು ಜಾರಿಗೆ ತರಲಾಯಿತು. ಈ ಹೊಸ ಕಾನೂನಿಗೆ ಲೋಕದ ಸುತ್ತಲಿನಿಂದ ವ್ಯಾಪಕವಾದ ಪತ್ರಿಕಾ ಪ್ರಚಾರವು ಸಿಕ್ಕಿತು. ಯಾಕೆ? ಯಾಕೆಂದರೆ ರಷ್ಯಾದಲ್ಲಿರುವ ಅಲ್ಪಸಂಖ್ಯಾತ ಧರ್ಮಗಳ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸುವ ಪ್ರಯತ್ನದಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆಯೆಂದು ಅನೇಕರು ನೆನಸಿದರು.

ಹೀಗೆ, 1991ರಲ್ಲಿ ಬಹಳ ಕಷ್ಟದಿಂದ ಯೆಹೋವನ ಸಾಕ್ಷಿಗಳ ನೋಂದಾವಣೆಯಾಯಿತಾದರೂ, ಮನಸ್ಸಾಕ್ಷಿಯ ಸ್ವಾತಂತ್ರ್ಯ ಎಂಬ ಶೀರ್ಷಿಕೆಯುಳ್ಳ ರಷ್ಯಾದ ಹೊಸ ಕಾನೂನು, ಸಾಕ್ಷಿಗಳು ಮತ್ತು ಇತರ ಧಾರ್ಮಿಕ ಸಂಸ್ಥಾಪನೆಗಳು ಪುನಃ ನೊಂದಾಯಿಸಬೇಕೆಂದು ಕೇಳಿಕೊಂಡಿತು. ಇದು ಅನೇಕ ಪ್ರಶ್ನೆಗಳನ್ನು ಎಬ್ಬಿಸಿತು. ರಷ್ಯಾದ ಅಧಿಕಾರಿಗಳು ಯೆಹೋವನ ಸಾಕ್ಷಿಗಳನ್ನು ಅದುಮಿಬಿಡುವ ಕಾರ್ಯನೀತಿಯನ್ನು ಪುನಃ ತರಲು ಬಯಸುತ್ತಿದ್ದಾರೆಂದು ಇದು ಸೂಚಿಸಿತೋ? ಅಥವಾ ಅದು ರಷ್ಯಾದ ಫೆಡರೇಶನ್‌ನ ಸಂವಿಧಾನದ ಕೆಳಗೆ ಖಾತ್ರಿಗೊಳಿಸಲ್ಪಟ್ಟಿರುವ ಆರಾಧನಾ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಸೂಚಿಸುತ್ತದೋ?

ಕ್ರಮೇಣವಾಗಿ ಉತ್ತರವು ಬರತೊಡಗಿತು. ಏಪ್ರಿಲ್‌ 29, 1999ರಂದು ರಷ್ಯಾದ ನ್ಯಾಯ ಮಂಡಲಿಯು “ಆ್ಯಡ್‌ಮಿನಿಸ್ಟ್ರೇಟಿವ್‌ ಸೆಂಟರ್‌ ಫಾರ್‌ ಜೆಹೋವಾಸ್‌ ವಿಟ್ನೆಸಸ್‌ ಇನ್‌ ರಷ್ಯ”ಕ್ಕೆ ನೊಂದಾವಣೆಯ ಪ್ರಮಾಣಪತ್ರವನ್ನು ಹೊರಡಿಸಿದಾಗ, ಕಾನೂನಿನ ಪ್ರಕಾರ ನ್ಯಾಯಬದ್ದ ಮನ್ನಣೆಯನ್ನು ಪಡೆದುಕೊಂಡದ್ದಕ್ಕಾಗಿ ಸಾಕ್ಷಿಗಳು ಅದೆಷ್ಟು ಸಂತೋಷಿತರಾಗಿದ್ದರು!

[ಪುಟ 23ರಲ್ಲಿರುವ ಚಿತ್ರ]

ರಷ್ಯನ್‌ ಭಾಷೆಯಲ್ಲಿ ಮೊದಲ ಜಿಲ್ಲಾ ಅಧಿವೇಶನವು ಅಮೆರಿಕದಲ್ಲಿ ನಡೆಯಿತು

[ಪುಟ 24ರಲ್ಲಿರುವ ಚಿತ್ರ]

ಲಾಸ್‌ ಏಂಜಲಿಸ್‌ನ ರಷ್ಯನ್‌ ಸಭೆಯಿಂದ ನ್ಯೂ ಯಾರ್ಕ್‌ನಲ್ಲಿ ಬೈಬಲ್‌ ಡ್ರಾಮಾವನ್ನು ಸಾದರಪಡಿಸಲಾಯಿತು

[ಪುಟ 25ರಲ್ಲಿರುವ ಚಿತ್ರ]

ನ್ಯೂ ಯಾರ್ಕ್‌ ನಗರದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡ ಈ 14 ಮಂದಿ, ಸೋವಿಯಟ್‌ ಯೂನಿಯನ್‌ನ ಹಿಂದಿನ ಆರು ಗಣರಾಜ್ಯಗಳಿಂದ ಬಂದವರಾಗಿದ್ದಾರೆ

[ಪುಟ 26, 27ರಲ್ಲಿರುವ ಚಿತ್ರ]

ಮಾಸ್ಕೋದ ಒಲಿಂಪಿಕ್‌ ಸ್ಟೇಡಿಯಮ್‌ನಲ್ಲಿ ಸುಮಾರು 15,000ಕ್ಕಿಂತಲೂ ಹೆಚ್ಚಿನ ಮಂದಿ ಹಾಜರಾದರು