ವಿಕಾಸವಾದ ತರ್ಕಬದ್ಧವಾಗಿದೆಯೇ?
ವಿಕಾಸವಾದ ತರ್ಕಬದ್ಧವಾಗಿದೆಯೇ?
ಇಂದು ವಿಕಾಸವಾದಿಗಳು, ವಿಕಾಸವಾದವು ವಾಸ್ತವವಾದದ್ದೆಂದು ಹೇಳುತ್ತಾರೆ. ಆದರೂ, ಅನೇಕವೇಳೆ ಅವರು ಮಾಡುವ ಈ ರೀತಿಯ ಪ್ರತಿಪಾದನೆಗಳು ಎಷ್ಟರ ಮಟ್ಟಿಗೆ ತರ್ಕಬದ್ಧವಾಗಿವೆ ಎಂಬುದನ್ನು ನೋಡಲು ಈ ಮುಂದಿನ ಉದಾಹರಣೆಯನ್ನು ಗಮನಿಸಿ.
ಜೇಡರ ಹುಳುಗಳು ಉತ್ಪತ್ತಿಮಾಡುವ ರೇಷ್ಮೆಯ ಬಲೆಯು ಅತ್ಯಂತ ಗಡುಸಾದ ಪದಾರ್ಥಗಳಲ್ಲಿ ಒಂದಾಗಿದೆ. ನ್ಯೂ ಸೈಯನ್ಟಿಸ್ಟ್ ಎಂಬ ಪತ್ರಿಕೆಗನುಸಾರ, “ಜೇಡರ ಹುಳುವಿನ ರೇಷ್ಮೆಯ ಬಲೆಯ ಪ್ರತಿಯೊಂದು ಎಳೆಯು 40 ಪ್ರತಿಶತದಷ್ಟು ಹೆಚ್ಚು ಉದ್ದ ಹಿಗ್ಗುತ್ತದೆ. ಮತ್ತು ತುಂಡಾಗದೆ, ಸ್ಟೀಲಿನಂತೆ ನೂರು ಪಟ್ಟಿನಷ್ಟು ಶಕ್ತಿಯನ್ನು ಹೀರಿಕೊಳ್ಳಬಲ್ಲದು.” ಅಸಾಮಾನ್ಯವಾಗಿರುವ ಈ ರೇಷ್ಮೆಯ ಬಲೆಯು ಹೇಗೆ ಉತ್ಪಾದಿಸಲ್ಪಡುತ್ತದೆ? ವಿಸ್ಕೋಸ್ ಎಂಬ ಸಸಾರಜನಕದ ಅಂಟುದ್ರವ್ಯವೇ ಅದಕ್ಕೆ ಕಾರಣವಾಗಿದೆ. ಈ ದ್ರಾವಣವು ಜೇಡರ ಹುಳುವಿನ ಅತ್ಯಂತ ಸೂಕ್ಷ್ಮವಾದ ನಾಳಗಳಲ್ಲಿ ಹರಿಯುತ್ತದೆ. ಈ ಸಸಾರಜನಕದ ದ್ರಾವಣದಲ್ಲಿರುವ ಅಣುಗಳು ಪುನರ್ಜೋಡಿಸಲ್ಪಟ್ಟು ಘನವಾದ ದಾರವಾಗಿ ಪರಿವರ್ತಿಸಲ್ಪಡುತ್ತವೆ ಎಂದು ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ.
ನ್ಯೂ ಸೈಯನ್ಟಿಸ್ಟ್ ಎಂಬ ಪತ್ರಿಕೆಯು ಅದನ್ನು ಹೀಗೆ ಮುಕ್ತಾಯಗೊಳಿಸುತ್ತದೆ: “ಒಬ್ಬ ಅತ್ಯಂತ ಕುಶಲ ರಸಾಯನ ವಿಜ್ಞಾನಿಗಿಂತ ಎಷ್ಟೋ ಮಿಗಿಲಾಗಿರುವ ತಂತ್ರಗಳನ್ನು ಜೇಡರ ಹುಳು ಸ್ವಾಭಾವಿಕವಾಗಿ ವಿಕಸಿಸಿಕೊಂಡಿದೆ.” ಮನುಷ್ಯನು ಇನ್ನೂ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗದಷ್ಟು ಮಟ್ಟಿಗೆ ಜೇಡರಹುಳು ಸಂಕೀರ್ಣವಾದ ತಂತ್ರಗಳನ್ನು ವಿಕಸಿಸಿಕೊಂಡಿದೆ ಎಂದು ಹೇಳಿದರೆ, ಅದನ್ನು ನಿಮಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿದೆಯೇ?
ದ ವಾಲ್ಸ್ಟ್ರೀಟ್ ಜರ್ನಲ್ ಎಂಬ ವಾರ್ತಾಪತ್ರಿಕೆಯ ಒಂದು ಲೇಖನದಲ್ಲಿ, ಕ್ಯಾಲಿಫೋರ್ನಿಯಾದ ಕಾನೂನು ಪ್ರೊಫೆಸರ್ ಆಗಿರುವ ಫಿಲಿಪ್ ಈ. ಜಾನ್ಸನ್ ಎಂಬುವವರು ಹೇಳಿದ್ದೇನೆಂದರೆ, ವಿಕಾಸವಾದವನ್ನು ರುಜುಪಡಿಸಲು ಸಾಕಷ್ಟು ಪುರಾವೆಗಳಿಲ್ಲವಾದರೂ ಅದರ ಕುರಿತು ಪ್ರಶ್ನಿಸುವವರನ್ನು ವಿಕಾಸವಾದದ ಬೆಂಬಲಿಗರು ಈಗಲೂ ಕುಚೋದ್ಯಮಾಡುತ್ತಾರೆ. ಆ ಲೇಖನವು ಹೇಳಿಕೆ ನೀಡಿದ್ದು: “ಪುರಾವೆಗಳು ವಿಕಾಸವಾದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವುದರಿಂದ, ವಿಕಾಸವಾದವನ್ನು ರುಜುಪಡಿಸಲು ಕಷ್ಟವಾಗುತ್ತಿದೆ. ಆದರೆ, ಅದರ ಪ್ರತಿಪಾದಕರು ಅದರ ಬಗ್ಗೆ ಮುಕ್ತವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ಏಕೆಂದರೆ, ಲೋಕವ್ಯಾಪಕವಾಗಿ ಅವರು ಹಬ್ಬಿಸಿರುವ ವಿಕಾಸವಾದದ ಅಭಿಪ್ರಾಯವನ್ನು ಅದು ಬುಡಮೇಲು ಮಾಡಲೂಬಹುದು.”
ವಿಕಾಸವಾದವು ತರ್ಕಬದ್ಧವಾಗಿಲ್ಲದಿರುವುದಕ್ಕೆ ಇನ್ನೊಂದು ಉದಾಹರಣೆಯು ಗಿಡಗಳ ಸಂಬಂಧದಲ್ಲಿದೆ. ಮೊರಾಕೋ ದೇಶದಲ್ಲಿ ಸಂಶೋಧನೆಯನ್ನು ಮಾಡುತ್ತಿರುವ ವಿಜ್ಞಾನಿಗಳು 150 ಆರ್ಕಿಯೋಪ್ಟರಿಸ್ ಎಂಬ ಗಿಡಗಳ ಅವಶೇಷಗಳನ್ನು ಭೂಮಿಯಿಂದ ಅಗೆದು ತೆಗೆದಿದ್ದಾರೆ. ಅದರ ಕುರಿತು ದ ಡೆಯ್ಲಿ ಟೆಲಿಗ್ರಾಫ್ ಎಂಬ ವಾರ್ತಾಪತ್ರಿಕೆಯು ತಿಳಿಸುವುದೇನೆಂದರೆ, “ಇದುವರೆಗೂ ಕಂಡುಹಿಡಿಯಲ್ಪಟ್ಟಿರುವ ಪ್ರಪ್ರಥಮವಾದ ಬೀಜವಿರುವ ಗಿಡಗಳಿಗೆ ಇದು ತುಂಬ ಹತ್ತಿರದ ಸಂಬಂಧಿಯಾಗಿದೆ. ಹಾಗೂ ಇಂದಿರುವ ಬಹುತೇಕ ಮರಗಳಿಗೆ ಇದು ಮೂಲಪಿತೃವಾಗಿದೆ.” ಈ ವಾರ್ತಾಪತ್ರಿಕೆಯಲ್ಲಿ ವಿಜ್ಞಾನದ ವಿಷಯಗಳನ್ನು ಬರೆಯುವ ಸಂಪಾದಕನು ಹೇಳುವುದೇನೆಂದರೆ, ಈ ಗಿಡವು “ಎಲೆಗಳನ್ನೂ ಕಾಂಡಗಳನ್ನೂ ಕಂಡುಹಿಡಿಯುವ ಮೂಲಕ ಆಧುನಿಕ ಲೋಕಕ್ಕೆ ಮೆರುಗು ನೀಡಲು ಸಹಾಯಮಾಡಿದೆ.” ಇಲ್ಲಿ, “ಕಂಡುಹಿಡಿಯುವುದು” ಎಂದರೆ “ಆಲೋಚಿಸುವ ಮೂಲಕ ಯೋಜಿಸುವುದಾಗಿದೆ.” ಆಲೋಚಿಸುವ ಮತ್ತು ಕಂಡುಹಿಡಿಯುವ ಸಾಮರ್ಥ್ಯವನ್ನು ಒಂದು ಗಿಡಕ್ಕೆ ಕೊಡುವುದು ತರ್ಕಬದ್ಧವಾಗಿದೆಯೋ?
ಆದ್ದರಿಂದಲೇ, ಮಾನವರಲ್ಲೇ ಅತ್ಯಂತ ವಿವೇಕಿಯಾದ ಸೊಲೊಮೋನನು, ನಾವು ನಮ್ಮ ಸ್ವಂತ ಬುದ್ಧಿಯಿಂದ ಯೋಚಿಸಬೇಕಾದರೆ, ನಮ್ಮ “ಆಲೋಚನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕೆಂದು,” (NW) ನಮಗೆ ಬುದ್ಧಿಹೇಳುತ್ತಾನೆ. ಇದನ್ನು ಮಾಡುವ ಆವಶ್ಯಕತೆಯು ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂಬುದರಲ್ಲಿ ಸಂಶಯವೇ ಇಲ್ಲ.—ಜ್ಞಾನೋಕ್ತಿ 5:2.