ಕಣ್ಣಿಗೆ ಕಾಣಿಸದ ವಸ್ತುಗಳು
ಕಣ್ಣಿಗೆ ಕಾಣಿಸದ ವಸ್ತುಗಳು
ಕಣ್ಣಿಗೆ ಕಾಣಿಸದ ಅತಿ ಸೂಕ್ಷ್ಮವಾದ ಧೂಳಿನ ಕಣಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಆದರೆ, ಸೂರ್ಯನ ಕಿರಣವು ಕಿಟಕಿಯ ಮೂಲಕ ಹರಿದಾಗ ಅಲ್ಲಿಯವರೆಗೂ ಕಣ್ಣಿಗೆ ಕಾಣದಿದ್ದ ಧೂಳಿನ ಕಣಗಳು ಇದ್ದಕ್ಕಿದ್ದಂತೆ ಕಾಣತೊಡಗುತ್ತವೆ. ಒಳಗೆ ತೂರಿಬರುವ ಬೆಳಕಿನ ಕಿರಣವು, ಧೂಳಿನ ಕಣಗಳು ಮಾನವನ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತವೆ.
ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಬಿಳಿಯಾಗಿ ಅಥವಾ ವರ್ಣರಹಿತವಾಗಿ ಕಾಣಿಸುವ ಬೆಳಕಿನ ಕುರಿತು ಇನ್ನೂ ಸ್ವಲ್ಪ ಯೋಚಿಸಿನೋಡಿ. ಉದಾಹರಣೆಗೆ, ನೀರಿನ ಹನಿಗಳಲ್ಲಿ ಸೂರ್ಯನ ಬೆಳಕು ಸರಿಯಾದ ಕೋನದಲ್ಲಿ ಹಾದುಹೋಗುವುದಾದರೆ ಏನಾಗುವುದು? ಆಗ ನೀರು ಅಶ್ರಗದಂತೆ (ತ್ರಿಕೋನಾಕೃತಿಯ ಹರಳು) ಕೆಲಸಮಾಡುತ್ತದೆ. ಮತ್ತು ಅದರಲ್ಲಿ ನಾವು ವರ್ಣರಂಜಿತವಾದ ಕಾಮನಬಿಲ್ಲಿನ ಬಣ್ಣಗಳನ್ನು ನೋಡುತ್ತೇವೆ!
ನಮ್ಮ ಕಣ್ಣಿಗೆ ಬಣ್ಣಬಣ್ಣವಾಗಿ ಕಾಣುವ ನಮ್ಮ ಸುತ್ತಮುತ್ತಲಿರುವ ವಸ್ತುಗಳು ವಾಸ್ತವದಲ್ಲಿ, ಬೆಳಕಿನ ವಿಭಿನ್ನ ಅಲೆಯಳತೆಗಳನ್ನು ಪ್ರತಿಬಿಂಬಿಸುತ್ತಿರುತ್ತವೆ. ಉದಾಹರಣೆಗೆ, ಹಸಿರು ಹುಲ್ಲನ್ನು ತೆಗೆದುಕೊಳ್ಳಿ. ಅದು ಸ್ವತಃ ಹಸಿರು ಬಣ್ಣವನ್ನು ಉತ್ಪಾದಿಸುವುದಿಲ್ಲ. ಬದಲಿಗೆ, ಬೆಳಕಿನಲ್ಲಿರುವ ಎಲ್ಲಾ ಅಲೆಯಳತೆಗಳನ್ನು ಹೀರಿಕೊಂಡು, ಹಸಿರು ಬಣ್ಣವನ್ನು ಮಾತ್ರ ನಮ್ಮ ಕಣ್ಣಿಗೆ ಪ್ರತಿಬಿಂಬಿಸುತ್ತದೆ. ಹೀಗೆ, ನಮ್ಮ ಕಣ್ಣಿಗೆ ಹುಲ್ಲು ಹಸಿರಾಗಿ ಕಾಣುತ್ತದೆ.
ಮಾನವ ನಿರ್ಮಿತ ಉಪಕರಣಗಳಿಂದ ನೋಡಲು ಸಾಧ್ಯವಾಗಿರುವುದು
ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಆವಿಷ್ಕಾರಗಳು, ಕಣ್ಣಿಗೆ ಕಾಣಿಸದ ಅನೇಕ ವಸ್ತುಗಳನ್ನು ನೋಡುವಂತೆ ಸಾಧ್ಯಮಾಡಿಕೊಟ್ಟಿವೆ. ಉದಾಹರಣೆಗೆ, ನಿರ್ಜೀವವಾಗಿ ತೋರುವ ನೀರಿನ ಒಂದು ಹನಿಯನ್ನು ಸಾಧಾರಣವಾದ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ನಾವು ನೋಡುವುದಾದರೆ, ತೇಲುತ್ತಿರುವ ಎಲ್ಲಾ ರೀತಿಯ ಜೀವಿಗಳು ಅದರಲ್ಲಿ ತುಂಬಿರುವುದನ್ನು ನಾವು ಕಾಣಬಹುದು. ಕೂದಲಿನ ಒಂದು ಎಳೆಯನ್ನು ತೆಗೆದುಕೊಳ್ಳುವುದಾದರೆ, ನಮ್ಮ ಕಣ್ಣಿಗೆ ನಯವಾಗಿಯೂ ನೇರವಾಗಿಯೂ ಇರುವಂತೆ ಕಾಣುತ್ತದೆ. ಆದರೆ ಅದೇ ಕೂದಲನ್ನು ಸೂಕ್ಷ್ಮದರ್ಶಕದಲ್ಲಿಟ್ಟು ನೋಡುವಾಗ, ಅದು ಒರಟಾಗಿಯೂ ಏರುತಗ್ಗುಳ್ಳದ್ದಾಗಿಯೂ ಕಾಣುತ್ತದೆ. ಹೆಚ್ಚು ಶಕ್ತಿಶಾಲಿಯಾಗಿರುವ ಸೂಕ್ಷ್ಮದರ್ಶಕಗಳು, ಒಂದು ವಸ್ತುವನ್ನು ಹತ್ತುಲಕ್ಷದಷ್ಟು ಹೆಚ್ಚಿಸಿ ತೋರಿಸಸಾಧ್ಯವಿದೆ. ಇದು, ಒಂದು ಅಂಚೆ ಚೀಟಿಯನ್ನು ಒಂದು ಚಿಕ್ಕ ದೇಶದ ಗಾತ್ರದಷ್ಟು ದೊಡ್ಡದಾಗಿ ಮಾಡಿತೋರಿಸುವುದಕ್ಕೆ ಸಮನವಾಗಿದೆ!
ಈಗ, ಅದಕ್ಕಿಂತಲೂ ಇನ್ನೂ ಹೆಚ್ಚು ಶಕ್ತಿಶಾಲಿಯಾಗಿರುವ ಸೂಕ್ಷ್ಮದರ್ಶಕಗಳನ್ನು ಉಪಯೋಗಿಸಿ, ಹೊರಮೇಲ್ಮೈಗಳಲ್ಲಿರುವ ಅಣುವಿನ ವಿನ್ಯಾಸವನ್ನು ತೋರಿಸುವ ಚಿತ್ರಗಳನ್ನು ಸಂಶೋಧಕರಿಗೆ ನೀಡಲಾಗುತ್ತಿದೆ. ಇದು, ಇತ್ತೀಚಿನ ವರೆಗೂ ಮಾನವ ಕಣ್ಣಿನಿಂದ ನೋಡಲು ಅಸಾಧ್ಯವಾದ ಚಿತ್ರಗಳನ್ನು ನೋಡುವ ಅವಕಾಶವನ್ನು ಅವರಿಗೆ ಒದಗಿಸಿದೆ.
ಆದರೆ ಮತ್ತೊಂದು ಕಡೆಯಲ್ಲಿ, ರಾತ್ರಿಯ ಸಮಯದಲ್ಲಿ ತಲೆಯನ್ನೆತ್ತಿ ನಾವು ಆಕಾಶದಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸಬಹುದು. ಆಗ ನಾವು ನಮ್ಮ ಕಣ್ಣುಗಳಿಂದ ಎಷ್ಟು ನಕ್ಷತ್ರಗಳನ್ನು ಎಣಿಸಬಹುದು? ಹೆಚ್ಚುಕಡಿಮೆ ಅಂದರೆ, ಕೆಲವು ಸಾವಿರಗಳಷ್ಟೇ. ಆದರೆ, ಸುಮಾರು 400 ವರ್ಷಗಳ ಹಿಂದೆ ಕಂಡುಹಿಡಿಯಲ್ಪಟ್ಟ ದೂರದರ್ಶಕದ ಸಹಾಯದಿಂದ, ಜನರು ಇಂದು ಅದಕ್ಕಿಂತಲೂ ಹೆಚ್ಚಿನ ನಕ್ಷತ್ರಗಳನ್ನು ನೋಡಲು ಶಕ್ತರಾಗಿದ್ದಾರೆ. ನಂತರ, 1920ರಲ್ಲಿ ಮೌಂಟ್ ವಿಲ್ಸನ್ ಆಬ್‌ಸರ್ವೇಟರಿಯಲ್ಲಿರುವ ಹೆಚ್ಚು ಶಕ್ತಿಶಾಲಿಯಾಗಿರುವ ದೂರದರ್ಶಕವು, ನಮ್ಮ ಆಕಾಶಗಂಗೆಗಿಂತ ಆಚೆ ಇನ್ನೂ ಹೆಚ್ಚಿನ ಆಕಾಶಗಂಗೆಗಳಿವೆ ಮತ್ತು ಅವುಗಳಲ್ಲೂ ಕೂಡ ಎಣಿಸಲಾಗದಷ್ಟು ನಕ್ಷತ್ರಗಳು ತುಂಬಿವೆ ಎಂಬುದನ್ನು ಹೊರಗೆಡಹಿತು. ಇಂದು, ಅತ್ಯಂತ ಸೂಕ್ಷ್ಮವಾದ ಮಾನವನಿರ್ಮಿತ ಉಪಕರಣಗಳನ್ನು ಉಪಯೋಗಿಸಿ ವಿಶ್ವವನ್ನು ಇಣುಕಿನೋಡಲಾಗುತ್ತಿದೆ. ಇದರ ಫಲವಾಗಿ, ನೂರಾರು ಕೋಟಿ ಆಕಾಶಗಂಗೆಗಳಿವೆ ಮತ್ತು ಅವುಗಳಲ್ಲಿ ಅನೇಕ ಆಕಾಶಗಂಗೆಗಳು ನೂರಾರು ಕೋಟಿ ನಕ್ಷತ್ರಗಳನ್ನು ಹೊಂದಿವೆ ಎಂದು ವಿಜ್ಞಾನಿಗಳು ಅಂದಾಜುಮಾಡಿದ್ದಾರೆ.
ದೂರದರ್ಶಕಗಳು, ಕೋಟ್ಯಂತರ ನಕ್ಷತ್ರಗಳಿರುವುದನ್ನು ತೋರಿಸಿರುವುದು ನಿಜವಾಗಿಯೂ ಬೆರಗುಗೊಳಿಸುವಂತಹ ವಿಷಯವಾಗಿದೆ. ಇವು ಆಕಾಶಗಂಗೆಗಳಂತೆ ಕಾಣುತ್ತವೆ. ಅವು ಹಾಗೆ ಕಾಣಲು ಕಾರಣವೇನೆಂದರೆ, ನಕ್ಷತ್ರಗಳು ಒಂದಕ್ಕೊಂದು ಹೆಚ್ಚು ಹತ್ತಿರವಾಗಿರುವಂತೆ ತೋರುತ್ತವೆ. ಆದರೆ, ವಾಸ್ತವದಲ್ಲಿ ಅವು ಒಂದಕ್ಕೊಂದು ಊಹೆಗೆ ಮೀರಿದಷ್ಟು ದೂರದಲ್ಲಿವೆ. ಅದೇ ರೀತಿಯಲ್ಲಿ, ನಮ್ಮ ಕಣ್ಣಿಗೆ ಘನವಸ್ತುಗಳಾಗಿ ಕಾಣುವ ವಸ್ತುಗಳು ವಾಸ್ತವದಲ್ಲಿ, ನಿರ್ವಾತ ಸ್ಥಳಗಳಿಂದ ರಚಿಸಲ್ಪಟ್ಟಿರುವ ಅಣುಗಳಾಗಿವೆ
ಎಂಬುದನ್ನು ಮಾನವರು ನೋಡುವಂತೆ ಹೆಚ್ಚು ಶಕ್ತಿಶಾಲಿಯಾದ ಸೂಕ್ಷ್ಮದರ್ಶಕಗಳು ಸಹಾಯಮಾಡಿವೆ.ಅತ್ಯಂತ ಸೂಕ್ಷ್ಮವಾದ ವಸ್ತುಗಳು
ಅತ್ಯಂತ ಸೂಕ್ಷ್ಮವಾದ ಧೂಳಿನ ಕಣವನ್ನು ಸಾಮಾನ್ಯವಾದ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡುವಾಗ, ಅದು ಹತ್ತು ಶತಕೋಟಿ ಅಣುಗಳಿಗಿಂತಲೂ ಹೆಚ್ಚು ಅಣುಗಳಿಂದ ಕೂಡಿರುವುದು ತಿಳಿದುಬರುತ್ತದೆ! ಆದರೂ, 1897ರಲ್ಲಿ ಪರಮಾಣುವಿನ ಸುತ್ತಲೂ ಸುತ್ತುತ್ತಿರುವ ಅತಿ ಚಿಕ್ಕ ಕಣಗಳಾದ ಇಲೆಕ್ಟ್ರಾನುಗಳನ್ನು ಕಂಡುಹಿಡಿಯಲಾಯಿತು. ಸ್ವಲ್ಪ ಸಮಯದೊಳಗಾಗಿ, ಪರಮಾಣುವಿನ ಕೇಂದ್ರವಾದ ನ್ಯೂಕ್ಲಿಯಸ್‌ನ ಕಕ್ಷೆಯಲ್ಲಿ ಸುತ್ತುತ್ತಿರುವ ಎಲೆಕ್ಟ್ರಾನುಗಳೊಂದಿಗೆ, ಸ್ವಲ್ಪ ದೊಡ್ಡ ಕಣಗಳಾದ ನ್ಯೂಟ್ರಾನ್ಸ್ ಮತ್ತು ಪ್ರೋಟಾನ್ಸ್‌ಗಳು ಕೂಡ ಸುತ್ತುತ್ತಿರುವುದನ್ನು ಕಂಡುಹಿಡಿಯಲಾಯಿತು. ಭೂಮಿಯಲ್ಲಿ ಸಹಜವಾಗಿಯೇ ದೊರಕುವ 88 ವಿವಿಧ ರೀತಿಯ ಅಣುಗಳು ಅಥವಾ ಘಟಕಾಂಶಗಳು ಗಾತ್ರದಲ್ಲಿ ಮೂಲತಃ ಒಂದೇ ಆಗಿವೆ. ಆದರೆ ಅವುಗಳ ತೂಕವು ಬೇರೆ ಬೇರೆಯಾಗಿವೆ. ಏಕೆಂದರೆ, ಪ್ರತಿಯೊಂದು ಪರಮಾಣುವು, ಈ ಮೂರು ಮೂಲ ಕಣಗಳನ್ನು ಪ್ರಗತಿಪರವಾಗಿ ಹೆಚ್ಚು ಸಂಖ್ಯೆಯಲ್ಲಿ ಹೊಂದಿರುತ್ತದೆ.
ಉದಾಹರಣೆಗೆ, ಜಲಜನಕದ ಪರಮಾಣುವನ್ನು ನೋಡುವುದಾದರೆ, ಅದರಲ್ಲಿರುವ ಒಂದೇ ಒಂದು ಇಲೆಕ್ಟ್ರಾನ್, ಪರಮಾಣುವಿನ ಕೇಂದ್ರದ ಸುತ್ತಲು ಇರುವ ನಿರ್ವಾತ ಸ್ಥಳದಲ್ಲಿ ಪ್ರತಿ ಹತ್ತುಲಕ್ಷ ಸೆಕೆಂಡಿಗೆ ನೂರಾರು ಕೋಟಿಗಳಷ್ಟು ಬಾರಿ ಸುತ್ತುತ್ತಿರುತ್ತದೆ. ಹೀಗೆ, ಅದು ಆ ಪರಮಾಣುವಿಗೆ ಆಕಾರವನ್ನು ಕೊಡುತ್ತಾ, ಅದೊಂದು ಘನವಸ್ತುವೋ ಎಂಬಂತೆ ವರ್ತಿಸುವಂತೆ ಮಾಡುತ್ತದೆ. ಒಂದು ಪ್ರೋಟಾನ್ ಅಥವಾ ನ್ಯೂಟ್ರಾನಿನ ದ್ರವ್ಯದ ಪರಿಮಾಣಕ್ಕೆ ಸರಿಸಮವಾಗಬೇಕಾದರೆ ಹೆಚ್ಚುಕಡಿಮೆ 1,840 ಇಲೆಕ್ಟ್ರಾನುಗಳು ಬೇಕಾಗಿರುತ್ತವೆ. ಪ್ರೋಟಾನ್ ಮತ್ತು ನ್ಯೂಟ್ರಾನುಗಳೆರಡನ್ನು ಇಡೀ ಪರಮಾಣುವಿನೊಂದಿಗೆ ಹೋಲಿಸಿನೋಡಿದರೆ, ಅವು ಪರಮಾಣುವಿಗಿಂತ ಸುಮಾರು 1,00,000ದಷ್ಟು ಚಿಕ್ಕದಾಗಿರುತ್ತವೆ!
ಒಂದು ಅಣು ಎಷ್ಟು ಬರಿದಾಗಿದೆ ಎಂಬುದನ್ನು ತಿಳಿದುಕೊಳ್ಳಲು, ಜಲಜನಕದ ಪರಮಾಣುವಿನ ನ್ಯೂಕ್ಲಿಯಸ್ ಅನ್ನು ಪರಮಾಣುವಿನ ಸುತ್ತಲು ಸುತ್ತುತ್ತಿರುವ ಇಲೆಕ್ಟ್ರಾನಿನೊಂದಿಗೆ ಕಲ್ಪನೆಮಾಡಿನೋಡಿ. ಆ ಪರಮಾಣುವಿನ ನ್ಯೂಕ್ಲಿಯಸ್, ಟೆನಿಸ್ ಬಾಲಿನಷ್ಟು ದೊಡ್ಡದಾಗಿರುವ ಒಂದೇ ಒಂದು ಪ್ರೋಟಾನನ್ನು ಹೊಂದಿದೆ ಎಂದಿಟ್ಟುಕೊಳ್ಳೋಣ. ಆಗ ಅದರ ಕಕ್ಷೆಯಲ್ಲಿ ಸುತ್ತುತ್ತಿರುವ ಇಲೆಕ್ಟ್ರಾನುಗಳು ಸುಮಾರು 3 ಕಿಲೊಮೀಟರುಗಳಷ್ಟು ದೂರದಲ್ಲಿರುತ್ತವೆ!
ಇಲೆಕ್ಟ್ರಾನನ್ನು ಕಂಡುಹಿಡಿದ ನೂರನೇ ವರ್ಷದ ಸಮಾರಂಭದಲ್ಲಿ ಒಂದು ವರದಿಯು ಹೇಳಿದ್ದು: “ಯಾರೂ ನೋಡಿರದ ಯಾವುದೋ ಒಂದು ವಸ್ತುವಿಗಾಗಿ ಅಂದರೆ, ಇಲೆಕ್ಟ್ರಾನಿಗಾಗಿ ಸಮಾರಂಭವನ್ನು ಆಚರಿಸುವುದರ ಕುರಿತು ಯೋಚಿಸುವವರು ಕೆಲವರು ಮಾತ್ರವೇ. ಆ ವಸ್ತುವಿಗೆ ಊಹೆಮಾಡಿನೋಡಬಹುದಾದ ಗಾತ್ರವಿಲ್ಲದಿದ್ದರೂ ತೂಕಮಾಡಿನೋಡಬಹುದಾದ ಭಾರವಿದೆ. ಅದು ವಿದ್ಯುತ್ ಪ್ರವಾಹವಾಗಿದ್ದು, ಅತ್ಯಂತ ಹೆಚ್ಚಿನ ವೇಗದಲ್ಲಿ ತಿರುಗುತ್ತಿರುತ್ತದೆ. . . . ಕಣ್ಣಿಗೆ ಕಾಣದ ಅನೇಕ ವಸ್ತುಗಳು ಅಸ್ತಿತ್ವದಲ್ಲಿವೆ ಎಂಬ ವಿಚಾರವನ್ನು ಇಂದು ಯಾರೂ ಪ್ರಶ್ನಿಸುವುದಿಲ್ಲ.”
ಇನ್ನೂ ಸೂಕ್ಷಾತಿಸೂಕ್ಷ್ಮವಾದ ವಸ್ತುಗಳು
ಅಣುವನ್ನು ವಿಭಜಿಸುವ ಯಂತ್ರಗಳು, ಭೌತದ್ರವ್ಯದಲ್ಲಿರುವ ಪರಮಾಣುಗಳು ಒಂದು ಇನ್ನೊಂದರ ಮೇಲೆ ಬೀಳಿಸುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಈ ಯಂತ್ರಗಳು ಅಣುವಿನ ಒಳಗಡೆಯಿರುವ ನ್ಯೂಕ್ಲಿಯಸ್‌ನ ದರ್ಶನವನ್ನು ಮಾಡುವ ಅವಕಾಶವನ್ನು ಇಂದು ವಿಜ್ಞಾನಿಗಳಿಗೆ ನೀಡಿವೆ. ಇದರ ಪರಿಣಾಮವಾಗಿ, ಅನೇಕ ಹೊಸ ದ್ರವ್ಯ ಪದಾರ್ಥಗಳನ್ನು ಕಂಡುಹಿಡಿಯಲಾಗಿದೆ. ಅವುಗಳಿಗೆ ಪೊಸಿಟ್ರಾನುಗಳು, ಫೋಟಾನುಗಳು, ಮೀಸಾನುಗಳು, ಕ್ವಾರ್‌ಕುಗಳು ಮತ್ತು ಗ್ಲೂಆನ್‌ಗಳು ಹೀಗೆ, ಹಲವಾರು ವಿಚಿತ್ರವಾದ ಹೆಸರುಗಳನ್ನು ಕೊಡಲಾಗಿದೆ. ಇವುಗಳನ್ನು ಅತ್ಯಂತ ಶಕ್ತಿಶಾಲಿಯಾಗಿರುವ ಸೂಕ್ಷ್ಮದರ್ಶಕಗಳಿಂದಲೂ ನೋಡಲು ಸಾಧ್ಯವಿಲ್ಲ. ಆದರೆ ಕ್ಲೌಡ್ ಚೇಂಬರ್ಸ್, ಬಬಲ್ ಚೇಂಬರ್ಸ್ ಹಾಗೂ ಸಿಂಟಿಲೇಷನ್ ಕೌಂಟರುಗಳೆಂಬ ಉಪಕರಣಗಳ ಸಹಾಯದಿಂದ ಅವುಗಳನ್ನು ನೋಡಬಹುದಾಗಿದೆ.
ಒಂದು ಕಾಲದಲ್ಲಿ ಕಣ್ಣಿಗೆ ಕಾಣಿಸದಿದ್ದವುಗಳನ್ನು ಸಂಶೋಧಕರು ಈಗ ನೋಡಶಕ್ತರಾಗಿದ್ದಾರೆ. ಅವರ ಈ ಸಂಶೋಧನೆಯು ಮುಂದುವರಿಯುತ್ತಿದ್ದಂತೆ, ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು ಅವರು ನಂಬುವ ನಾಲ್ಕು ಮುಖ್ಯ ಶಕ್ತಿಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಅವು ಗುರುತ್ವಶಕ್ತಿ, ಎಲೆಕ್ಟ್ರೋಮ್ಯಾಗ್ನಟಿಕ್ ಶಕ್ತಿ ಮತ್ತು “ದುರ್ಬಲ ಶಕ್ತಿ” ಹಾಗೂ “ಪ್ರಬಲವಾದ ಶಕ್ತಿ” ಎಂಬ ಇನ್ನೆರಡು ಉಪನ್ಯೂಕ್ಲಿಯರ್ ಶಕ್ತಿಗಳಾಗಿವೆ. “ಪ್ರತಿಯೊಂದರ ತತ್ವ” ಎಂಬುದಾಗಿ ಕೆಲವು ವಿಜ್ಞಾನಿಗಳು ಹೆಸರಿಸಿರುವುದರ ಕುರಿತು ಅನ್ವೇಷಣೆಯನ್ನು ಮಾಡುತ್ತಿದ್ದಾರೆ. ಅದು, ವಿಶ್ವದಲ್ಲಿ ಕಣ್ಣಿಗೆ ಕಾಣುವ ದೊಡ್ಡ ವಸ್ತುಗಳಿಂದ ಹಿಡಿದು, ಸೂಕ್ಷ್ಮವಾದ ವಸ್ತುಗಳ ವರೆಗೆ ಅರ್ಥಮಾಡಿಕೊಳ್ಳಬಹುದಾದ ವಿವರಣೆಯನ್ನು ಕೊಡುವುದು ಎಂಬುದಾಗಿ ಆಶಿಸುತ್ತಾರೆ.
ಕಣ್ಣಿಗೆ ಕಾಣಿಸದಿರುವ ವಸ್ತುಗಳನ್ನು ನೋಡುವಾಗ, ಅವುಗಳಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ? ತಾವು ಕಲಿತುಕೊಂಡಿರುವ ವಿಷಯಗಳ ಆಧಾರದ ಮೇಲೆ ಅನೇಕರು ಯಾವ ತೀರ್ಮಾನಕ್ಕೆ ಬಂದಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಮುಂದಿನ ಲೇಖನಗಳು ಕೊಡುವವು.
[ಪುಟ 3ರಲ್ಲಿರುವ ಚಿತ್ರಗಳು]
ನಿಕ್ಕಲ್ (ಮೇಲೆ) ಮತ್ತು ಪ್ಲಾಟಿನಮ್ ಪರಮಾಣುಗಳ ಚಿತ್ರಗಳು
[ಕೃಪೆ]
Courtesy IBM Corporation, Research Division, Almaden Research Center