ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಟ್ಟಿಯಾಗಿದ್ದರೂ ಮೃದುವಾಗಿದೆ

ಗಟ್ಟಿಯಾಗಿದ್ದರೂ ಮೃದುವಾಗಿದೆ

ಗಟ್ಟಿಯಾಗಿದ್ದರೂ ಮೃದುವಾಗಿದೆ

ಅದರ ಮುಖಾಂತರ ಪಿಯಾನೋಗಳು ಸಂಗೀತವನ್ನು ಹೊರಡಿಸುತ್ತವೆ, ಜೆಟ್‌ ವಿಮಾನಗಳು ಧ್ವನಿಯ ಝೇಂಕಾರವನ್ನು ಉತ್ಪಾದಿಸುತ್ತವೆ, ವಾಚುಗಳು ಟಿಕ್‌ಟಿಕ್‌ ಶಬ್ದವನ್ನು ಮಾಡುತ್ತವೆ, ಮೋಟಾರುವಾಹನಗಳು ಸದ್ದುಮಾಡುತ್ತವೆ, ಗಗನಚುಂಬಿ ಭವನಗಳು ಆಕಾಶವನ್ನು ಚುಂಬಿಸುತ್ತವೆ ಮತ್ತು ತೂಗುಸೇತುವೆಗಳು ತೂಗುತ್ತವೆ. ಅದೇನಾಗಿರಬಹುದು?

ಅದು ಉಕ್ಕೇ. ದೊಡ್ಡ ಪ್ರಮಾಣದ ಕಟ್ಟಡ ರಚನೆಯಲ್ಲಿ ಉಕ್ಕು ಅತ್ಯಗತ್ಯವಾದ ವಸ್ತುವಾಗಿದೆ. ಅದರಿಂದ ತಯಾರಿಸಲ್ಪಟ್ಟ ಬೃಹದಾಕಾರದ ನೌಕೆಗಳು, ಸಪ್ತ ಸಮುದ್ರಗಳನ್ನು ಸಂಚರಿಸುತ್ತವೆ. ಅದರಿಂದ ಮಾಡಲ್ಪಟ್ಟ ಕೊಳವೆಜಾಲಗಳು, ನೂರಾರು ಕಿಲೊಮೀಟರ್‌ಗಳಷ್ಟು ದೂರದ ಎಣ್ಣೆಬಾವಿಗಳಿಂದ ಎಣ್ಣೆ ಮತ್ತು ಗ್ಯಾಸನ್ನು ತರುತ್ತವೆ. ಆದರೆ ಬಹುಮುಖ ಸಾಮರ್ಥ್ಯವುಳ್ಳ ಈ ವಸ್ತು ನಮ್ಮ ದೈನಂದಿನ ಜೀವನದೊಂದಿಗೆ ಇನ್ನೂ ಒತ್ತಾಗಿ ಹೆಣೆಯಲ್ಪಟ್ಟಿದೆ. ಉದಾಹರಣೆಗೆ, ನೀವು ಯಾವುದರಲ್ಲಿ ಕೆಲಸಕ್ಕೆ ಹೋಗುತ್ತೀರೊ ಆ ಬಸ್ಸಿನ ಉಕ್ಕಿನ ಬೆಲ್ಟುಗಳುಳ್ಳ ಟಯರುಗಳನ್ನು ತೆಗೆದುಕೊಳ್ಳಿ. ಅಥವಾ ನಿಮ್ಮ ಕಟ್ಟಡದ ಲಿಫ್ಟನ್ನು ಎತ್ತುವ ಮತ್ತು ಕೆಳಗಿಳಿಸುವ ಉಕ್ಕಿನ ಹುರಿಗಳ ವಿಷಯವೇನು? ನಿಮ್ಮ ಕನ್ನಡಕದ ಕೀಲುಗಳು ಅಥವಾ ನೀವು ಚಹಾ ಕಲಕುವ ಉಕ್ಕಿನ ಚಮಚದ ಕುರಿತಾಗಿ ಏನು? ಹೌದು, ಈ ಬಾಳಿಕೆ ಬರುವ ಕೋಮಲವಾದ ಲೋಹವು ಸಾವಿರಾರು ವಿಧಗಳಲ್ಲಿ ಬಳಸಲ್ಪಡುತ್ತದೆ. ಅದನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಯಾವುದು ಅದನ್ನು ಅಷ್ಟು ಪ್ರಯೋಜನಾರ್ಹವಾಗಿ ಮಾಡುತ್ತದೆ?

ಇಂಗಾಲ ಮತ್ತು ಸ್ಫಟಿಕಗಳು

ಉಕ್ಕು ಮಿಶ್ರಲೋಹವಾಗಿದೆ ಅಥವಾ ಅದು ಪರಸ್ಪರ ಕ್ರಿಯೆಗೈಯುವ ಎರಡು ಅಸದೃಶ ವಸ್ತುಗಳಾದ ಕಬ್ಬಿಣ ಮತ್ತು ಇಂಗಾಲಗಳ ಮಿಶ್ರಣವಾಗಿದೆ. ಲೋಹಗಳ ದೃಷ್ಟಿಯಲ್ಲಿ, ಶುದ್ಧ ಕಬ್ಬಿಣವು ಮೆತುವಾಗಿರುವುದರಿಂದ ಅದು ಕಠಿನ ಕೆಲಸಗಳಿಗೆ ಯೋಗ್ಯವಾಗಿರುವುದಿಲ್ಲ. ಆದರೆ ಇಂಗಾಲವು ಲೋಹವಲ್ಲ. ಹೊಗೆಕೊಳವಿಯ ಮಸಿ ಮತ್ತು ವಜ್ರಗಳು ಈ ಪ್ರತ್ಯೇಕ ಘಟಕದ ವಿಭಿನ್ನ ರೂಪಗಳಾಗಿವೆ. ಆದರೆ ದ್ರವಿಸಿದ ಕಬ್ಬಿಣದೊಂದಿಗೆ ತುಸು ಇಂಗಾಲವನ್ನು ಬೆರೆಸುವಲ್ಲಿ, ಅದು ಇಂಗಾಲಕ್ಕಿಂತ ಎಷ್ಟೋ ಭಿನ್ನವಾದ ಮತ್ತು ಕಬ್ಬಿಣಕ್ಕಿಂತ ಎಷ್ಟೋ ಗಟ್ಟಿಯಾದ ವಸ್ತುವನ್ನು ಉಂಟುಮಾಡುತ್ತದೆ.

ಉಕ್ಕು ತಯಾರಿಕೆಗೆ ಕೀಲಿ ಕೈ ಸ್ಫಟಿಕವೆಂದು ಕರೆಯಲ್ಪಡುವ ವಸ್ತುವಾಗಿದೆ. ಕಬ್ಬಿಣವು ಸ್ಫಟಿಕಗಳಿಂದ ರಚಿತವಾಗಿದೆಯೆಂಬುದು ನಿಮಗೆ ತಿಳಿದಿತ್ತೊ? * ವಾಸ್ತವವಾಗಿ, ಎಲ್ಲ ಗಟ್ಟಿ ಲೋಹಗಳು ಸ್ಫಟಿಕದಿಂದ ಕೂಡಿದವುಗಳಾಗಿವೆ ಮತ್ತು ಈ ಸ್ಫಟಿಕಾತ್ಮಕ ರಚನೆ ಆ ಲೋಹಕ್ಕೆ ಕಾರ್ಯಾತ್ಮಕತೆ, ಕಳೆ ಮತ್ತು ಇತರ ಗುಣಲಕ್ಷಣಗಳನ್ನು ಕೊಡುತ್ತದೆ. ಆದರೆ ಕಬ್ಬಿಣ ಸ್ಫಟಿಕಗಳು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗುತ್ತವೆ.

ಉಕ್ಕಿನ ಮೇಲೆ ಪರಿಣಾಮ

ಉಕ್ಕು ತಯಾರಿಸಲ್ಪಡುವಾಗ ದ್ರವೀಕೃತ ಕಬ್ಬಿಣವನ್ನು ಇತರ ಘಟಕಾಂಶಗಳೊಂದಿಗೆ ಬೆರಸಲಾಗುತ್ತದೆ. ಈ ಮಿಶ್ರಣವು ಘನೀಭವಿಸುವಾಗ ಕಬ್ಬಿಣವು ಬೇರೆ ವಸ್ತುಗಳನ್ನು ಕರಗಿಸಿ, ಅಂದರೆ ಅವನ್ನು ಹೀರಿಕೊಂಡು ತನ್ನ ಸ್ಫಟಿಕರಚನೆಗಳಲ್ಲಿ ಅವನ್ನು ಇಟ್ಟುಕೊಳ್ಳುತ್ತದೆ. ಬೇರೆ ಲೋಹಗಳೂ ಇದೇ ರೀತಿ ವರ್ತಿಸುತ್ತವೆ. ಹಾಗಾದರೆ ಕಬ್ಬಿಣದ ವಿಶೇಷತೆಯೇನು?

ಕಬ್ಬಿಣದ ಅಸಾಮಾನ್ಯತೆಯೇನಂದರೆ, ಅದರ ಸ್ಫಟಿಕ ರಚನೆಯನ್ನು ಅದು ಇನ್ನೂ ಘನಸ್ಥಿತಿಯಲ್ಲಿರುವಾಗಲೇ ಬಿಸಿಮಾಡಿ ಬದಲಾಯಿಸಬಹುದು. ಅದರ ಈ ಗುಣವು ಕಬ್ಬಿಣದ ಸ್ಫಟಿಕಗಳನ್ನು, ಅವು ಒತ್ತೊತ್ತಾಗಿ ಇರುವುದರಿಂದ ಹೆಚ್ಚು ಸಡಿಲ ಸ್ಥಿತಿಗೆ ಮತ್ತು ಪುನಃ ಒತ್ತಾದ ಸ್ಥಿತಿಗೆ ಮಾರ್ಪಾಟು ಹೊಂದುವಂತೆ ಬಿಡುತ್ತದೆ. ನೀವು ಕೋಣೆಯಲ್ಲಿ ಕುಳಿತುಕೊಂಡಿರುವಾಗ, ಚೆನ್ನಾಗಿ ಕಟ್ಟಿರುವ ನಿಮ್ಮ ಮನೆಯ ಗೋಡೆಗಳು ಪಕ್ಕದಿಂದ ಪಕ್ಕಕ್ಕೆ ಮತ್ತು ನೆಲವು ಮೇಲಿಂದ ಕೆಳಕ್ಕೆ ಚಲಿಸುವುದನ್ನು ಊಹಿಸಿಕೊಳ್ಳಿರಿ. ಕಬ್ಬಿಣವನ್ನು ಹೆಚ್ಚು ಕಾಯಿಸಿದಾಗ, ಅಂದರೆ ಅದು ಕರಗಿಹೋಗುವಷ್ಟು ಕಾಯಿಸದೆ ಇದ್ದು ಮತ್ತೆ ಅದನ್ನು ತಣಿಸಿದಾಗ, ಅದರ ಸ್ಫಟಿಕಗಳೊಳಗೂ ಇಂತಹದೇ ಕ್ರಿಯೆ ನಡೆಯುತ್ತದೆ.

ಈ ಬದಲಾವಣೆಗಳು ನಡೆಯುವಾಗ ಇಂಗಾಲವು ಅಲ್ಲಿರುವಲ್ಲಿ, ಗಟ್ಟಿಯಾದ ಮಿಶ್ರಲೋಹವು ಮೃದುವಾಗಸಾಧ್ಯವಿದೆ ಮತ್ತು ಮೃದುವಾದದ್ದು ಗಟ್ಟಿಯಾದ ಲೋಹವಾಗಲೂ ಸಾಧ್ಯವಿದೆ. ಉಕ್ಕು ತಯಾರಕರು ಇದರ ಪ್ರಯೋಜನ ಪಡೆಯುತ್ತ ತಮ್ಮ ತಯಾರಿಕೆಯ ಗಡುಸುತನವನ್ನು ತಣ್ಣಗಾಗಿಸುವಿಕೆ, ಹದಕೊಡುವಿಕೆ ಮತ್ತು ಗಟ್ಟಿಗೊಳಿಸುವಿಕೆಗೆ ಹೊಂದಿಸಿಕೊಳ್ಳುತ್ತಾರೆ. * ಆದರೆ ಇನ್ನೂ ಹೆಚ್ಚಿನ ವಿಷಯಗಳಿವೆ.

ಮ್ಯಾಂಗನೀಸ್‌, ಮಲಿಬ್ಡನಮ್‌, ನಿಕಲ್‌, ವನೇಡಿಯಮ್‌, ಸಿಲಿಕನ್‌, ಸೀಸ, ಕ್ರೋಮಿಯಮ್‌, ಬೋರಾನ್‌, ಟಂಗ್‌ಸ್ಟನ್‌ ಅಥವಾ ಸಲ್ಫರ್‌ನಂತಹ ಬೇರೆ ಘಟಕಗಳನ್ನು ಉಕ್ಕಿಗೆ ಮಿಶ್ರಮಾಡುವಲ್ಲಿ, ಉಕ್ಕು ಗಟ್ಟಿಯೊ ಮೃದುವೊ ಆಗುವುದು ಮಾತ್ರವಲ್ಲ, ಅದು ಬಲಿಷ್ಠವೂ, ಗಡುಸೂ, ಎಳಕೆಯುಳ್ಳದೂ, ತುಕ್ಕು ನಿರೋಧಕವೂ, ಯಂತ್ರ ಬಳಕೆಗೆ ಯೋಗ್ಯವೂ, ನಮ್ಯವೂ, ಕಾಂತಗುಣವುಳ್ಳದ್ದೂ ಮತ್ತು ಕಾಂತಗುಣವಿಲ್ಲದ್ದೂ ಆಗುವುದು. ಈ ಪಟ್ಟಿಯು ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಬ್ರೆಡ್‌ಮಾಡುವವನು ವಿವಿಧ ರೀತಿಯ ಬ್ರೆಡ್‌ಗಳನ್ನು ಮಾಡಲು ಮಿಶ್ರಣಾಂಶಗಳನ್ನು ಮತ್ತು ಕುಲುಮೆಯ ಶಾಖವನ್ನು ಹೊಂದಿಸಿಕೊಳ್ಳುವಂತೆಯೇ, ಲೋಹ ತಯಾರಕರು ಲೋಹಾಂಶಗಳನ್ನು ಮತ್ತು ಶಾಖವನ್ನು ಹೆಚ್ಚುಕಡಮೆ ಮಾಡಿ, ಬಹುಮುಖ ಸಾಮರ್ಥ್ಯದಲ್ಲಿ ಸಾಟಿಯೇ ಇಲ್ಲದಷ್ಟು ವಿಭಿನ್ನ ರೀತಿಯ ಸಾವಿರಾರು ವಿಧದ ಉಕ್ಕನ್ನು ತಯಾರಿಸುತ್ತಾರೆ. ಉಕ್ಕಿನ ರೈಲುಪಟ್ಟಿಗಳು 12,000 ಟನ್ನಿನ ಮಾಲು ಟ್ರೇನುಗಳನ್ನು ಸುಭದ್ರವಾಗಿ ಹೊರುವಾಗ, ಸೂಜಿತಲೆಯ ಗಾತ್ರದ ಉಕ್ಕಿನ ಬೇರಿಂಗುಗಳು ವಾಚ್‌ನ ಬ್ಯಾಲೆನ್ಸ್‌ ವ್ಹೀಲನ್ನು ಎತ್ತಿಹಿಡಿಯುತ್ತವೆ.

ಉಕ್ಕನ್ನು ತಯಾರಿಸುವುದು—⁠ಹಳೆಯ ಮತ್ತು ಹೊಸ ರೀತಿ

ಶತಮಾನಗಳಿಗೆ ಮೊದಲು ಲೋಹಕರ್ಮಚಾರಿಗಳು ಕಬ್ಬಿಣವನ್ನು ಪಾತ್ರೆಗಳಾಗಿಯೂ ಆಯುಧಗಳಾಗಿಯೂ ರೂಪಿಸಿದರು. ಅದಿರನ್ನು ಕರಗಿಸಿ ತೆಗೆದ ಕಬ್ಬಿಣದಲ್ಲಿ (ಅದಿರು ಎಂದು ಕರೆಯಲ್ಪಡುವ ಲೋಹಗಳುಳ್ಳ ಬಂಡೆಗಳಿಂದ ಪ್ರತ್ಯೇಕಿಸಲ್ಪಟ್ಟ ಕಬ್ಬಿಣ) ಅದಕ್ಕೆ ಬಲ ಮತ್ತು ಗಡುಸನ್ನು ಕೊಡುವ ಕಲ್ಮಶಗಳಿವೆಯೆಂಬುದನ್ನು ಅವರು ಕಂಡುಹಿಡಿದರು. ಕಬ್ಬಿಣದ ಉಪಕರಣವನ್ನು ನೀರಿನಲ್ಲಿ ತಣ್ಣಗಾಗಿಸುವುದು ಅದನ್ನು ಹೆಚ್ಚು ಗಡುಸಾಗಿಮಾಡುತ್ತದೆಂದೂ ಅವರು ತಿಳಿದುಕೊಂಡರು. ಇಂದು ಬೃಹದಾಕಾರದ ಕುಲುಮೆಗಳು, ಕಮ್ಮಾರನ ಒಲೆಗಳ ಸ್ಥಾನದಲ್ಲಿಯೂ ದೊಡ್ಡ ಗಾತ್ರದ ರೋಲಿಂಗ್‌ ಮಿಲ್ಲುಗಳು ಅವನ ಸುತ್ತಿಗೆಯ ಮತ್ತು ಬಡಿಗಲ್ಲಿನ ಸ್ಥಾನದಲ್ಲಿಯೂ ಬಂದು ನಿಂತಿವೆ. ಆದರೆ ಆಧುನಿಕ ಸಂಸ್ಕರಣಕಾರರು ಹಳೆಯ ಕಾಲದ ಗಟ್ಟಿಮುಟ್ಟಾದ ಕಮ್ಮಾರರು ಅನುಸರಿಸುತ್ತಿದ್ದ ಮೂಲ ಹೆಜ್ಜೆಗಳನ್ನೇ ಅನುಸರಿಸುತ್ತಾರೆ. ಅವರು (1) ಕಬ್ಬಿಣವನ್ನು ಕರಗಿಸಿ, (2) ಮಿಶ್ರಣಾಂಶಗಳನ್ನು ಬೆರಕೆಮಾಡಿ, (3) ಉಕ್ಕನ್ನು ತಣ್ಣಗಾಗಿಸಿ, (4) ಅದನ್ನು ರೂಪಿಸಿ, ಶಾಖಕ್ಕೊಳಪಡಿಸುತ್ತಾರೆ.

ಜೊತೆಗಿರುವ ರೇಖಾಚೌಕದಲ್ಲಿ ಕೊಟ್ಟಿರುವ ಪ್ರಮಾಣಗಳನ್ನು ಗಮನಿಸಿ. ಆ ಸಂಖ್ಯೆಗಳು ದೊಡ್ಡದಾಗಿರುವುದಾದರೂ, ಒಂದು ಸ್ಟೀಲ್‌ ಮಿಲ್‌ ಒಂದೇ ದಿನದಲ್ಲಿ ಇದೆಲ್ಲವನ್ನೂ ಕಬಳಿಸಿಬಿಡಬಲ್ಲದು. ಈ ಕಾರ್ಖಾನೆ ಆವರಿಸಿರುವ ಪ್ರದೇಶ ತುಂಬ ದೊಡ್ಡದು. ಮತ್ತು ಅದರಲ್ಲಿ ಕಾರ್ಖಾನೆಯ ತಣಿಸಲಾಗದ ಹಸಿವೆಯನ್ನು ನೀಗಿಸಲು ಖನಿಜ ಪದಾರ್ಥಗಳ ಬೆಟ್ಟಗಳೇ ನಿಂತುಕೊಂಡಿವೆ.

ಅದ್ಭುತಕರವಾದ ಲೋಹವು ಅನೇಕ ರೂಪಗಳನ್ನು ತಾಳುತ್ತದೆ

ಉಕ್ಕಿನ ಉಪಯುಕ್ತತೆಯು ವಿಚಿತ್ರವಾದ ಸ್ಥಳಗಳಲ್ಲಿ ತೋರಿಬರುತ್ತದೆ. ದೊಡ್ಡ ಪಿಯಾನೋದ ಮುಚ್ಚಳದಡಿಯಲ್ಲಿ ಅದರ ಉಪಯುಕ್ತತೆ ಕಂಡುಬರುತ್ತದೆ. ಅದರಲ್ಲಿರುವ ಅತ್ಯಂತ ಬಲಿಷ್ಠವಾದ ಉಕ್ಕುಗಳಲ್ಲೊಂದರಿಂದ ಮಾಡಿದ ಸರಿಗೆಯು, ಮನೋಹರವಾದ ಸಂಗೀತವನ್ನು ಹೊರಡಿಸುತ್ತದೆ. ಹ್ಯಾಡ್‌ಫೀಲ್ಡ್‌ ಮ್ಯಾಂಗನೀಸ್‌ ಉಕ್ಕಿನಿಂದ, ಬಂಡೆಕಲ್ಲುಗಳನ್ನು ಜಜ್ಜುವ ಯಂತ್ರಗಳನ್ನು ಮಾಡಲಾಗುತ್ತದೆ ಮತ್ತು ಇದು ಬಂಡೆಕಲ್ಲನ್ನು ಜಜ್ಜುವ ಕೆಲಸವನ್ನು ಎಷ್ಟು ಶ್ರಮಪಟ್ಟು ಮಾಡುತ್ತದೊ ಅದರ ಉಕ್ಕು ಅಷ್ಟೇ ಹೆಚ್ಚು ಗಟ್ಟಿಯಾಗಿ ಪರಿಣಮಿಸುತ್ತದೆ. ಸ್ಟೇನ್‌ಲೆಸ್‌ ಸ್ಟೀಲ್‌ನಿಂದ ಶಸ್ತ್ರವೈದ್ಯರ ಚೂರಿಗಳು, ದ್ರಾಕ್ಷಾಮದ್ಯ ತೊಟ್ಟಿಗಳು, ಮತ್ತು ಐಸ್‌ಕ್ರೀಮ್‌ ಯಂತ್ರಗಳನ್ನು ರೂಪಿಸಲಾಗುತ್ತದೆ. ನಿಮ್ಮ ತಲೆಯಲ್ಲಿರುವ ಕೂದಲಿನಂತೆಯೇ, ಉಕ್ಕಿನ ಉಪಯೋಗಗಳು ನೀವು ಎಣಿಸಲಾರದಷ್ಟು ಅಸಂಖ್ಯಾತವಾಗಿವೆ.

ಪ್ರತಿ ವರುಷ ಸುಮಾರು 80,00,00,000 ಟನ್ನುಗಳಷ್ಟು ಉಕ್ಕನ್ನು ಲೋಕಾದ್ಯಂತವಾಗಿ ಉತ್ಪಾದಿಸಲಾಗುತ್ತದೆ. ಕಬ್ಬಿಣವಿಲ್ಲದಿರುತ್ತಿದ್ದಲ್ಲಿ ಒಂದು ಗ್ರ್ಯಾಮ್‌ ಉಕ್ಕೂ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಹೇಗೊ ಭೂಮಿಯಲ್ಲಿ ಕಬ್ಬಿಣವು ಅತ್ಯಂತ ಹೇರಳವಾದ ಘಟಕಾಂಶಗಳಲ್ಲಿ ಒಂದಾಗಿದೆ. ಕಲ್ಲಿದ್ದಲು ಮತ್ತು ಸುಣ್ಣದಕಲ್ಲು ಹೇರಳವಾಗಿ ದೊರೆಯುವುದರಿಂದ, ಉಕ್ಕು ಮುಂದಕ್ಕೆ ಬಹು ಸಮಯದ ವರೆಗೆ ನಮಗೆ ಲಭ್ಯವಿರುವಂತೆ ಕಾಣುತ್ತದೆ.

ಆದುದರಿಂದ, ನೀವು ಇನ್ನೊಮ್ಮೆ ಲೋಹದ ಸೂಜಿಯಿಂದ ಹೊಲಿಯುವಾಗ ಅಥವಾ ರಾಟೆ ಮತ್ತು ಹುರಿಯಿಂದ ಗಾಳ ಹಾಕುವಾಗ ಇಲ್ಲವೆ ಹೊಂದಿಸಿಕೊಳ್ಳುವ ತಿರುಪನ್ನು ಉಪಯೋಗಿಸುವಾಗ ಅಥವಾ ಉಕ್ಕಿನ ದಪ್ಪ ಸರಿಗೆಯ ಬೇಲಿಯ ಹೊರಬಾಗಿಲನ್ನು ತೆರೆಯುವಾಗ ಇಲ್ಲವೆ ಕಾರಿನಲ್ಲಿ ಪಯಣಿಸುವಾಗ ಅಥವಾ ಗದ್ದೆಯನ್ನು ನೇರ ಸಾಲುಗಳಲ್ಲಿ ಉಳುವಾಗ, ಅದನ್ನು ಸಾಧ್ಯಮಾಡುವ ಆ ಕಬ್ಬಿಣ ಮತ್ತು ಇಂಗಾಲದ ವಿಶೇಷ ಮಿಶ್ರಣದ ಕುರಿತು ಯೋಚಿಸಿರಿ.(g01 9/8)

[ಪಾದಟಿಪ್ಪಣಿಗಳು]

^ ಸ್ಫಟಿಕವು ಒಂದು ಘಟಕದ ಅಂಶ ಅಥವಾ ಅದರ ಘನಸ್ಥಿತಿಯಲ್ಲಿರುವ ಸಂಯೋಜನೆಯಾಗಿದೆ. ಇದರಲ್ಲಿ ಕ್ರಮವಾಗಿ ಪುನರಾವರ್ತಿಸುವ ಪರಮಾಣುಗಳ ವ್ಯವಸ್ಥೆಯಿದೆ.

^ ಉಚ್ಚ ಶಾಖದಿಂದ ಶೀಘ್ರವಾದ ತಣಿಸುವಿಕೆಯೇ ತಣ್ಣಗಾಗಿಸುವಿಕೆಯಾಗಿದೆ. ಹದಕೊಡುವಿಕೆ ಮತ್ತು ಗಟ್ಟಿಗೊಳಿಸುವಿಕೆಯಲ್ಲಿ ನಿಧಾನವಾಗಿ ತಣಿಸುವ ವಿಧಾನವು ಸೇರಿದೆ.

[ಪುಟ 23ರಲ್ಲಿರುವ ಚೌಕ]

ಹತ್ತು ಸಾವಿರ ಟನ್ನುಗಳಷ್ಟು ಉಕ್ಕನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು

6,500 ಟನ್ನುಗಳಷ್ಟು ಕಲ್ಲಿದ್ದಲು

13,000 ಟನ್ನುಗಳಷ್ಟು ಅದಿರು

2,000 ಟನ್ನುಗಳಷ್ಟು ಸುಣ್ಣದಕಲ್ಲು

2,500 ಟನ್ನುಗಳಷ್ಟು ಉಕ್ಕಿನ ಚೂರು

150,00,00,000 ಲೀಟರುಗಳಷ್ಟು ನೀರು

80,000 ಟನ್ನುಗಳಷ್ಟು ಗಾಳಿ

[ಪುಟ 24, 25ರಲ್ಲಿರುವ ಚೌಕ/ಚಿತ್ರಗಳು]

ಉಕ್ಕನ್ನು ತಯಾರಿಸುವ ವಿಧಾನ

ಸುಲಭವಾಗಿ ನೋಡಲಾಗುವಂತೆ ಕೆಲವು ವಿವರಗಳನ್ನು ಬಿಟ್ಟುಬಿಡಲಾಗಿದೆ

ಉಕ್ಕಿನ ತಯಾರಿಕೆಗೆ ಶಾಖವು ಅಗತ್ಯವಾಗಿದೆ. ಈಗ ಒಂದು ಉಷ್ಣತಾಮಾಪಕವನ್ನು ನಾವು ಗುರುತು ಹಲಗೆಯಾಗಿಟ್ಟುಕೊಂಡು, ಉಕ್ಕಿನ ಕೊನೆಯ ಹಂತದ ಮಾರ್ಗವನ್ನು ಹಿಂಬಾಲಿಸುತ್ತಾ ಹೋಗೋಣ.

1400°C. ದೊಡ್ಡ ಒಲೆಗಳು ವಾಯುಭದ್ರ ಕೋಷ್ಠಗಳಲ್ಲಿ ಕಲ್ಲಿದ್ದಲನ್ನು ಸುಟ್ಟು, ಆ ತುಂಡುಗಳನ್ನು ದಹಿಸದೇ ಅದರ ಅನಪೇಕ್ಷಿತ ವಸ್ತುಗಳು ಆವಿಯಾಗಿ ಹೋಗುವಂತೆ ಮಾಡುತ್ತವೆ. ಇದರ ಪರಿಣಾಮವಾಗಿ ಬರುವ ಮಸಿಯ ದೊಡ್ಡ ತುಂಡುಗಳನ್ನು ಕೋಕ್‌ ಎಂದು ಕರೆಯಲಾಗುತ್ತದೆ. ಇದು ಮುಂದಿನ ಕ್ರಮವಿಧಾನದಕ್ಕೆ ಬೇಕಾಗುವ ಶಾಖ ಮತ್ತು ಇಂಗಾಲವನ್ನು ಒದಗಿಸುತ್ತದೆ.

1650°C. ಕೋಕ್‌, ಕಬ್ಬಿಣದ ಅದಿರು ಮತ್ತು ಸುಣ್ಣದಕಲ್ಲು ಧಾರೆಧಾರೆಯಾಗಿ ಊದುಕುಲುಮೆಯಲ್ಲಿ ಬಿದ್ದು, ಅಲ್ಲಿ ಜ್ವಾಲೆಯ ಗೋಡೆಯನ್ನು ಮತ್ತು ವಿಪರೀತ ಕಾದ ಗಾಳಿಯನ್ನು ಸಂಧಿಸುತ್ತದೆ. ಆಗ ಕೋಕ್‌ ಸುಡುತ್ತದೆ ಮತ್ತು ಆ ತೀಕ್ಷ್ಣ ಕಾವಿನಲ್ಲಿ, ಅದಿರಿನಲ್ಲಿರುವ ಅನಪೇಕ್ಷಿತ ವಸ್ತು ಸುಣ್ಣದಕಲ್ಲಿನೊಂದಿಗೆ ಜೊತೆಗೂಡಿ, ಲೋಹದ ಕಿಟ್ಟ (ಸ್ಲ್ಯಾಗ್‌) ಎಂದು ಕರೆಯಲಾಗುವ ಉಪಪದಾರ್ಥವನ್ನು ರೂಪಿಸುತ್ತದೆ. ಈ ವಸ್ತುಗಳು ದ್ರವೀಕರಣಗೊಂಡು ಕುಲುಮೆಯ ಅಡಿಭಾಗದಲ್ಲಿ ನೆಲೆಸುತ್ತವೆ. ಆಗ ಕಬ್ಬಿಣದ ಮೇಲೆ ತೇಲುತ್ತಿರುವ ಸ್ಲ್ಯಾಗ್‌ ಅನ್ನು ಪಾತ್ರೆಯಲ್ಲಿ ಎಳೆದು ಹೊರತೆಗೆಯಲಾಗುತ್ತದೆ. ದ್ರವೀಕೃತ ಕಬ್ಬಿಣವನ್ನು ಪೀಪಾಯಿ ಬಂಡಿಗಳೊಳಗೆ ಸುರಿದಾಗ, ಇವು ತಮ್ಮ ಸುಡುತ್ತಿರುವ ಸರಕನ್ನು ಮುಂದಿನ ಸ್ಥಳಕ್ಕೆ ಕೊಂಡೊಯ್ಯುತ್ತವೆ.

1650°C. ಜಾಗರೂಕತೆಯಿಂದ ಬೇರ್ಪಡಿಸಿದ ತೊಂಬತ್ತು ಟನ್ನು ಲೋಹದ ಚೂರುಗಳನ್ನು, ಎತ್ತರದ ಬೇಸಿಕ್‌ ಆಕ್ಸಿಜನ್‌ ಫರ್ನೆಸ್‌ ಎಂಬ ಪೇರ್‌ ಹಣ್ಣಿನಾಕಾರದ ಪಾತ್ರೆಯೊಳಗೆ ಹಾಕಲಾಗುತ್ತದೆ. ಒಂದು ದೊಡ್ಡ ಸೌಟು ಆ ಸುಡುತ್ತಿರುವ ದ್ರವವನ್ನು ಆ ಲೋಹದ ಚೂರುಗಳ ಮೇಲೆ ಹೊಯ್ಯುವಾಗ ಮತ್ತು ಆ ಪಾತ್ರೆಯೊಳಗೆ ನೀರಿನಿಂದ ತಣಿಸಲ್ಪಟ್ಟ ಲ್ಯಾನ್ಸ್‌ ಎಂದು ಕರೆಯಲಾಗುವ ಲೋಹದ ಕೊಳವೆಯನ್ನು ಇಳಿಸುವಾಗ, ಅದು ಕಿಡಿಗಳನ್ನು ಹಾರಿಸುತ್ತ ಬೆಂಕಿಯನ್ನು ಹೊತ್ತಿಸುತ್ತದೆ. ಆ ಲ್ಯಾನ್ಸ್‌ನಿಂದ ಶುದ್ಧ ಆಮ್ಲಜನಕದ ಧ್ವನ್ಯತೀತ ಧಾರೆಯು ಎದ್ದು ಬರುವಾಗ, ಆ ಲೋಹವು ಸ್ಟೋವಿನ ಮೇಲೆ ಸೂಪ್‌ ಕುದಿಯುವಂತೆ ಕುದಿಯುತ್ತದೆ. ಆಗ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಒಂದು ತಾಸಿನೊಳಗೆ ಆ ಕುಲುಮೆ ತನ್ನ ಕೆಲಸವನ್ನು ಮುಗಿಸಿದಾಗ, ಹೀಟ್‌ ಎಂದು ಕರೆಯಲಾಗುವ ಆ 300 ಟನ್ನುಗಳಷ್ಟು ದ್ರವೀಕೃತ ಉಕ್ಕು, ರವಾನಿಸುವ ಪಾತ್ರೆಗಳೊಳಗೆ ಹೊಯ್ಯಲ್ಪಡುತ್ತದೆ. ಮಿಶ್ರಲೋಹಗಳನ್ನು ಇದಕ್ಕೆ ಕೂಡಿಸಲಾಗುತ್ತದೆ. ಈ ಅಗ್ನಿಮಯ ಪ್ರವಾಹವು ಎರಕಹೊಯ್ಯುವ ಯಂತ್ರಗಳೊಳಗೆ ಅಲೆಅಲೆಯಾಗಿ ಬೀಳುತ್ತದೆ. ಆಗ ಉಕ್ಕು ರೂಪುಗೊಳ್ಳತೊಡಗುತ್ತದೆ.

1200°C. ಕೆಂಪಗೆ ಕಾದಿರುವ ಈ ಉಕ್ಕನ್ನು ಅಪೇಕ್ಷಿತ ದಪ್ಪವನ್ನು ಹೊಂದುವ ತನಕ ರೋಲರ್‌ ಉರುಳೆಗಳ ಮಧ್ಯೆ ಗಟ್ಟಿಯಾಗಿ ಒತ್ತಲಾಗುತ್ತದೆ. ಈ ಶ್ರಮದ ಕಾರ್ಯವಿಧಾನವು ಆ ಲೋಹವನ್ನು ಎಷ್ಟು ಕಠಿನವಾಗಿಸುತ್ತದೆಂದರೆ, ಮುಂದಕ್ಕೆ ಅದಕ್ಕಿಂತ ಹೆಚ್ಚು ಅದನ್ನು ರೂಪಿಸಲು ಸಾಧ್ಯವಾಗುವುದಿಲ್ಲ.

ಕೋಣೆಯ ತಾಪಮಾನ. ಈಗ ಉಕ್ಕು ಎರಕಹೊಯ್ಯಲ್ಪಟ್ಟು, ಕತ್ತರಿಸಲ್ಪಟ್ಟು, ಬಿಸಿ ಒತ್ತಿಸಲ್ಪಟ್ಟು, ತಣ್ಣಗೆ ಒತ್ತಿಸಲ್ಪಡುವುದು ಮಾತ್ರವಲ್ಲ, ಅದನ್ನು ಆಮ್ಲ ದ್ರಾವಣದಿಂದ ಸಂಸ್ಕರಿಸಲಾಗುತ್ತದೆ ಸಹ. ಅದು ಪದೇ ಪದೇ ಕಾಯಿಸಲ್ಪಟ್ಟು, ತಣಿಸಲ್ಪಟ್ಟಿದೆ. ಕೊನೆಗೆ, ಆ ಉಷ್ಣತಾಮಾಪಕವನ್ನು ನಿಲ್ಲಿಸಲಾಗುತ್ತದೆ. ಆ ದ್ರವೀಕರಿಸಲ್ಪಟ್ಟ ಉಕ್ಕು ಅಥವಾ ಹೀಟ್‌ ಈಗ ಉಕ್ಕಿನ ತಗಡುಗಳ ಕಟ್ಟುಗಳಾಗಿ ಬದಲಾವಣೆ ಹೊಂದಿದೆ. ಲೋಹದ ಅಂಗಡಿಯೊಂದು ಅದನ್ನು ಬೇಗನೆ ಒಂದು ಆಫೀಸ್‌ ಕಟ್ಟಡ ಸಂಕೀರ್ಣದಲ್ಲಿ ನಾಳವ್ಯವಸ್ಥೆಯಾಗಿ ರೂಪಿಸಲಿಕ್ಕಿದೆ.

ಒಂದು ಉಕ್ಕಿನ ಕಾರ್ಖಾನೆಯ ಹೆಚ್ಚಿನ ಭಾಗಗಳು ಅದೇ ಲೋಹದಿಂದ ತಯಾರಿಸಲ್ಪಟ್ಟಿರುವುದರಿಂದ, ಅವು ತಮ್ಮ ಕೆಲಸವನ್ನು ಮಾಡುತ್ತಿರುವಾಗ ಏಕೆ ಕರಗುವುದಿಲ್ಲ? ಏಕೆಂದರೆ, ಆ ಕುಲುಮೆ, ಪೀಪಾಯಿ ಬಂಡಿ ಮತ್ತು ಸೌಟುಗಳ ಒಳಮೇಲ್ಮೈಗಳುದ್ದಕ್ಕೂ, ಕರಗಿಸಲು ಕಷ್ಟಸಾಧ್ಯವಾದ ಅಥವಾ ಶಾಖನಿರೋಧಕ ವಸ್ತುಗಳಿಂದ ಮಾಡಲ್ಪಟ್ಟಿರುವ ಇಟ್ಟಿಗೆಗಳಿರುತ್ತವೆ. ಈ ಒಂದು ಮೀಟರ್‌ ದಪ್ಪದ ಒಳಪದರವು, ಆ ಬೇಸಿಕ್‌ ಆಕ್ಸಿಜನ್‌ ಫರ್ನೆಸ್‌ ಅನ್ನು ರಕ್ಷಿಸುತ್ತದೆ. ಆದರೆ ಆ ಇಟ್ಟಿಗೆಗಳಿಗೂ ಅತಿರೇಕ ಶಾಖದಿಂದ ಹಾನಿಯಾಗುವ ಕಾರಣ, ಅವುಗಳನ್ನು ಕ್ರಮವಾಗಿ ಬದಲಾಯಿಸಬೇಕಾಗುತ್ತದೆ.

[ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

1.ಕಬ್ಬಿಣ ತಯಾರಿಕೆ

1400°C ಕಲ್ಲಿದ್ದಲು → ಕೋಕ್‌ ಒಲೆಗಳು

1650°C ಕಬ್ಬಿಣದ ಅದಿರು ಬ್ಲಾಸ್ಟ್‌

ಸುಣ್ಣದಕಲ್ಲು ಫರ್ನೆಸ್‌ (ಊದುಕುಲುಮೆ)

ಕರಗಿಸಿದ ಕಬ್ಬಿಣ

2. ಉಕ್ಕಿನ ತಯಾರಿಕೆ

1650°C ಉಕ್ಕಿನ ಚೂರುಗಳು → ಬೇಸಿಕ್‌

ಸುಣ್ಣ ಮತ್ತು ಸ್ರಾವಕ → ಆಕ್ಸಿಜನ್‌

ಆಮ್ಲಜನಕ → ಫರ್ನೆಸ್‌

3. ತಣ್ಣಗಾಗಿಸುವುದು

ನಿರಂತರವಾಗಿ ಎರಕಹೊಯ್ಯುವುದು

ತೊಲೆ ಕಬ್ಬಿಣ

ಲೋಹದ ಕಂಬಿ

ಸ್ಲ್ಯಾಬ್‌

4. ಒಪ್ಪಗೆಲಸ

1200°C ಸ್ಟೀಲ್‌ ರೋಲಿಂಗ್‌ (ಬಾರ್‌ಗಳು ಅಥವಾ ಬೀಮ್‌ಗಳು)

ಗ್ಯಾಲ್ವನೀಕರಣ

ತಣ್ಣಗಿರುವಾಗ ಮಟ್ಟಸಮಾಡುವುದು

ಕಾದಿರುವಾಗ ಮಟ್ಟಸಮಾಡುವುದು

ಕೋಣೆಯ ತಾಪಮಾನ

[ಚಿತ್ರ]

ಜನರ ಗಾತ್ರವನ್ನು ಗಮನಿಸಿ

[ಪುಟ 23ರಲ್ಲಿರುವ ಚಿತ್ರ ಕೃಪೆ]

ವಾಚನ್ನು ಬಿಟ್ಟು, 23-5 ನೆಯ ಪುಟಗಳಲ್ಲಿರುವ ಎಲ್ಲ ಫೋಟೋಗಳು: Courtesy of Bethlehem Steel