ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧಿಕ ರಕ್ತದೊತ್ತಡ ತಡೆಗಟ್ಟುವಿಕೆ ಮತ್ತು ನಿಯಂತ್ರಣ

ಅಧಿಕ ರಕ್ತದೊತ್ತಡ ತಡೆಗಟ್ಟುವಿಕೆ ಮತ್ತು ನಿಯಂತ್ರಣ

ಅಧಿಕ ರಕ್ತದೊತ್ತಡ ತಡೆಗಟ್ಟುವಿಕೆ ಮತ್ತು ನಿಯಂತ್ರಣ

ಬ್ರಸಿಲ್‌ನಲ್ಲಿರುವ ಎಚ್ಚರ! ಲೇಖಕರಿಂದ

ಮಾರಿಯನಳು ಗಾಬರಿಗೊಂಡಳು! ಏಕೆಂದರೆ ಆಕಸ್ಮಿಕವಾಗಿ ಅವಳ ಮೂಗಿನಿಂದ ರಕ್ತವು ಧಾರಾಕಾರವಾಗಿ ಹರಿಯಲಾರಂಭಿಸಿತ್ತು. “ನಾನು ಸತ್ತೇ ಹೋಗುವೆನೆಂದು ನೆನಸಿದೆ” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಅದು, ಅಧಿಕ ರಕ್ತದೊತ್ತಡದಿಂದ ಆಗಿರಬೇಕೆಂದು (ಅಪಧಮನಿಯ ಅಧಿಕ ರಕ್ತದೊತ್ತಡ) ಒಬ್ಬ ಡಾಕ್ಟರ್‌ ಮಾರಿಯನಳಿಗೆ ಹೇಳಿದರು. “ಆದರೆ ನನ್ನ ಆರೋಗ್ಯ ಚೆನ್ನಾಗಿದೆ” ಎಂದು ಮಾರಿಯನಳು ಉತ್ತರಿಸಿದಳು. “ಅನೇಕ ಜನರಿಗೆ ಯಾವುದೇ ರೋಗಲಕ್ಷಣಗಳಿಲ್ಲದಿರುವುದರಿಂದ, ತಮಗೆ ಅಧಿಕ ರಕ್ತದೊತ್ತಡವಿದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ” ಎಂದು ಆ ಡಾಕ್ಟರ್‌ ಪ್ರತ್ಯುತ್ತರಿಸಿದರು.

ನಿಮ್ಮ ರಕ್ತದೊತ್ತಡದ ಕುರಿತಾಗಿ ಏನು? ನಿಮ್ಮ ಸದ್ಯದ ಜೀವನ ಶೈಲಿಯು, ಭವಿಷ್ಯದಲ್ಲಿ ನಿಮಗೆ ಅಧಿಕ ರಕ್ತದೊತ್ತಡವನ್ನು ಉಂಟುಮಾಡಬಲ್ಲದೊ? ನಿಮ್ಮ ರಕ್ತದೊತ್ತಡವನ್ನು ಅಂಕೆಯಲ್ಲಿಡಲು ನೀವೇನು ಮಾಡಸಾಧ್ಯವಿದೆ? *

ರಕ್ತದೊತ್ತಡವು, ರಕ್ತನಾಳಗಳ ಮೇಲೆ ರಕ್ತವು ಹಾಕುವ ಒತ್ತಡವಾಗಿದೆ. ಉಬ್ಬಿಸಬಹುದಾದ ಒಂದು ರಬ್ಬರಿನ ಪಟ್ಟಿಯನ್ನು ಹಿಂದೋಳಿಗೆ ಸುತ್ತಿ, ಒತ್ತಡವನ್ನು ದಾಖಲಿಸುವಂಥ ಒಂದು ಉಪಕರಣಕ್ಕೆ ಜೋಡಿಸುವ ಮೂಲಕ ರಕ್ತದೊತ್ತಡವನ್ನು ಅಳೆಯಸಾಧ್ಯವಿದೆ. ಇದರಿಂದ ಎರಡು ಸೂಚ್ಯಂಕಗಳು ದೊರೆಯುತ್ತವೆ. ಉದಾಹರಣೆಗಾಗಿ, 120/80. ಮೊದಲನೆಯ ಸಂಖ್ಯೆಯನ್ನು, ಆಕುಂಚನ ರಕ್ತದೊತ್ತಡವೆಂದು ಕರೆಯಲಾಗುತ್ತದೆ. ಯಾಕೆಂದರೆ ಹೃದಯದ ಬಡಿತದ (ಕುಗ್ಗುವಿಕೆ) ಸಮಯದಲ್ಲಿರುವ ರಕ್ತದೊತ್ತಡವನ್ನು ಅದು ಸೂಚಿಸುತ್ತದೆ, ಮತ್ತು ಎರಡನೆಯ ಸಂಖ್ಯೆಯನ್ನು ವ್ಯಾಕೋಚನ ರಕ್ತದೊತ್ತಡವೆಂದು ಕರೆಯಲಾಗುತ್ತದೆ, ಏಕೆಂದರೆ ಅದು ಹೃದಯವು ಆರಾಮವಾಗಿರುವಾಗ (ಹಿಗ್ಗುವಿಕೆ) ರಕ್ತದೊತ್ತಡವು ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ. ರಕ್ತದೊತ್ತಡವನ್ನು ಪಾದರಸದ ಮಿಲಿಮೀಟರ್‌ಗಳಲ್ಲಿ ಅಳೆಯಲಾಗುತ್ತದೆ, ಮತ್ತು ಯಾರ ರಕ್ತದೊತ್ತಡವು 140/90ಕ್ಕಿಂತಲೂ ಹೆಚ್ಚಾಗಿದೆಯೊ ಅಂಥವರನ್ನು ವೈದ್ಯರು ಅಧಿಕ ರಕ್ತದೊತ್ತಡದ ವರ್ಗಕ್ಕೆ ಸೇರಿಸುತ್ತಾರೆ.

ರಕ್ತದೊತ್ತಡವನ್ನು ಏರಿಸುವ ಸಂಗತಿಗಳಾವುವು? ನೀವು ನಿಮ್ಮ ತೋಟಕ್ಕೆ ನೀರು ಹಾಯಿಸುತ್ತಿದ್ದೀರೆಂದು ನೆನಸಿರಿ. ನಲ್ಲಿಯನ್ನು ತೆರೆಯುವ ಮೂಲಕ ಇಲ್ಲವೆ ನೀರಿನ ನಳಿಕೆಯ ವ್ಯಾಸವನ್ನು ಕಡಿಮೆಗೊಳಿಸುವ ಮೂಲಕ ನೀವು ನೀರಿನ ಒತ್ತಡವನ್ನು ಹೆಚ್ಚಿಸಬಲ್ಲಿರಿ. ರಕ್ತದೊತ್ತಡದೊಂದಿಗೂ ಇದೇ ಸಂಭವಿಸುತ್ತದೆ: ರಕ್ತ ಪ್ರವಾಹದ ಪ್ರಮಾಣವನ್ನು ಏರಿಸುವುದರಿಂದ ಅಥವಾ ರಕ್ತನಾಳಗಳ ವ್ಯಾಸವನ್ನು ಕಡಿಮೆಗೊಳಿಸುವುದರಿಂದ ರಕ್ತದೊತ್ತಡವು ಹೆಚ್ಚುತ್ತದೆ. ಅಧಿಕ ರಕ್ತದೊತ್ತಡವು ಹೇಗೆ ಸಂಭವಿಸುತ್ತದೆ? ಇದರಲ್ಲಿ ಅನೇಕ ಅಂಶಗಳು ಒಳಗೂಡಿರುತ್ತವೆ.

ನೀವು ನಿಯಂತ್ರಿಸಲಾಗದಂಥ ಅಂಶಗಳು

ಒಬ್ಬ ವ್ಯಕ್ತಿಯ ಸಂಬಂಧಿಕರಿಗೆ ಅಧಿಕ ರಕ್ತದೊತ್ತಡವಿರುವಲ್ಲಿ, ಅವನೂ ಆ ವ್ಯಾಧಿಯಿಂದ ಬಳಲುವ ಸಂಭವನೀಯತೆಯು ಹೆಚ್ಚಾಗಿರುತ್ತದೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಬೇರೆ ಬೇರೆ ಅಂಡಗಳಿಂದ ಹುಟ್ಟಿರುವ ಅವಳಿಗಳಿಗಿಂತಲೂ, ಒಂದೇ ಅಂಡದಿಂದ ಹುಟ್ಟಿದ ಅವಳಿಗಳಿಗೆ ಅಧಿಕ ರಕ್ತದೊತ್ತಡವಿರುವ ಪ್ರಮಾಣಗಳು ಹೆಚ್ಚಾಗಿವೆಯೆಂಬುದನ್ನು ಅಂಕಿಸಂಖ್ಯೆಗಳು ತೋರಿಸುತ್ತವೆ. ಒಂದು ಸಮೀಕ್ಷೆಯು, “ಅಪಧಮನಿಯ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿರುವ ವಂಶವಾಹಿಗಳನ್ನು ಪತ್ತೆಹಚ್ಚುವುದನ್ನು” ಸೂಚಿಸುತ್ತದೆ. ಇದೆಲ್ಲವೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿರುವ ಆನುವಂಶಿಕ ಘಟಕದ ಅಸ್ತಿತ್ವವನ್ನು ದೃಢೀಕರಿಸುತ್ತದೆ. ಅಸಾಮಾನ್ಯವಾದ ಅಧಿಕ ರಕ್ತದೊತ್ತಡದ ಅಪಾಯವು, ವಯಸ್ಸಿನೊಂದಿಗೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಆಫ್ರಿಕದವರಾದ ಕರಿಯ ಪುರುಷರಲ್ಲಿ ಹೆಚ್ಚಾಗಿರುತ್ತದೆಂಬುದು ಜ್ಞಾತ ವಿಷಯವಾಗಿದೆ.

ನೀವು ನಿಯಂತ್ರಿಸಬಹುದಾದ ಅಂಶಗಳು

ನಿಮ್ಮ ಆಹಾರಪಥ್ಯವನ್ನು ಗಮನಿಸಿರಿ! ಉಪ್ಪು (ಸೋಡಿಯಮ್‌) ಕೆಲವು ಜನರಲ್ಲಿ, ವಿಶೇಷವಾಗಿ ಮಧುಮೇಹಿಗಳು ಮತ್ತು ವಿಪರೀತ ರಕ್ತದೊತ್ತಡವಿರುವವರಲ್ಲಿ, ವೃದ್ಧ ವ್ಯಕ್ತಿಗಳು ಮತ್ತು ಕೆಲವು ಕರಿಯ ಜನರಲ್ಲಿ ರಕ್ತದೊತ್ತಡವನ್ನು ಏರಿಸಬಲ್ಲದು. ರಕ್ತಪ್ರವಾಹದಲ್ಲಿ ಮಿತಿಮೀರಿದ ಕೊಬ್ಬು, ರಕ್ತನಾಳಗಳ ಒಳಭಾಗದ ಮೇಲೆ ಕೊಲೆಸ್ಟರಾಲ್‌ನ ಪೊರೆಯನ್ನು (ಅಪಧಮನಿಕಾಠಿಣ್ಯ) ಉಂಟುಮಾಡಬಲ್ಲದು. ಇದು ಆ ರಕ್ತನಾಳಗಳ ವ್ಯಾಸವನ್ನು ಕಡಿಮೆಗೊಳಿಸಿ, ರಕ್ತದೊತ್ತಡವನ್ನು ಹೆಚ್ಚಿಸುವುದು. ತಮಗಿರಬೇಕಾದ ದೇಹ ತೂಕಕ್ಕಿಂತ 30 ಪ್ರತಿಶತ ಹೆಚ್ಚು ತೂಕವುಳ್ಳ ಜನರಿಗೆ ಅಧಿಕ ರಕ್ತದೊತ್ತಡವಿರುವ ಸಾಧ್ಯತೆ ಹೆಚ್ಚು. ಪೊಟಾಸಿಯಮ್‌ ಮತ್ತು ಕ್ಯಾಲ್ಸಿಯಮ್‌ನ ಸೇವನೆಯನ್ನು ಹೆಚ್ಚಿಸುವುದು ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು.

ಅಪಧಮನಿಕಾಠಿಣ್ಯ, ಮಧುಮೇಹ, ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಹೆಚ್ಚಿನ ಅಪಾಯಕ್ಕೂ ಧೂಮಪಾನಕ್ಕೂ ಸಂಬಂಧವಿದೆ. ಹೀಗಿರುವುದರಿಂದ, ಧೂಮಪಾನ ಮತ್ತು ಅಧಿಕ ರಕ್ತದೊತ್ತಡವು, ಹೃದಯರಕ್ತನಾಳದ ರೋಗಗಳಿಗೆ ನಡೆಸಬಲ್ಲ ಒಂದು ಅಪಾಯಕಾರಿ ಮಿಶ್ರಣವಾಗಿದೆ. ಪುರಾವೆಯು ಪರಸ್ಪರ ವಿರೋಧದಲ್ಲಿದ್ದರೂ, ಕಾಫಿ, ಚಹಾ, ಮತ್ತು ಕೊಲಾ ಪಾನೀಯಗಳಲ್ಲಿರುವ ಕ್ಯಾಫೀನ್‌ ಹಾಗೂ ಭಾವನಾತ್ಮಕ ಮತ್ತು ಶಾರೀರಿಕ ಒತ್ತಡವು ಸಹ ಅಧಿಕ ರಕ್ತದೊತ್ತಡವನ್ನು ಏರಿಸಬಲ್ಲದು. ಇದಕ್ಕೆ ಕೂಡಿಸುತ್ತಾ, ಮದ್ಯಪಾನೀಯಗಳ ವಿಪರೀತ ಇಲ್ಲವೇ ದೀರ್ಘಕಾಲದ ಸೇವನೆ ಮತ್ತು ಶಾರೀರಿಕ ಚಟುವಟಿಕೆಯ ಕೊರತೆಯು ರಕ್ತದೊತ್ತಡವನ್ನು ಏರಿಸಬಲ್ಲದೆಂದು ವಿಜ್ಞಾನಿಗಳಿಗೆ ತಿಳಿದಿದೆ.

ಆರೋಗ್ಯಪೂರ್ಣ ಜೀವನ ಶೈಲಿ

ಅಧಿಕ ರಕ್ತದೊತ್ತಡವು ಆರಂಭವಾಗುವ ವರೆಗೂ ಕಾದು, ನಂತರ ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಒಂದು ದೊಡ್ಡ ತಪ್ಪಾಗಿರುವುದು. ಆರೋಗ್ಯಕರವಾದ ಜೀವನ ಶೈಲಿಯು, ಎಳೆಯ ಪ್ರಾಯದಲ್ಲೇ ಚಿಂತೆಯ ವಿಷಯವಾಗಿರಬೇಕು. ಈಗ ಆರೈಕೆಯನ್ನು ಮಾಡುವುದು, ಭವಿಷ್ಯದಲ್ಲಿ ಹೆಚ್ಚು ಉತ್ತಮ ಗುಣಮಟ್ಟದ ಜೀವನವನ್ನು ಫಲಿಸುವುದು.

ಅಧಿಕ ರಕ್ತದೊತ್ತಡದ ಕುರಿತಾದ ಬ್ರಸಿಲಿನ ಮೂರನೆಯ ಒಟ್ಟಭಿಪ್ರಾಯವು, ಅಪಧಮನಿಯ ರಕ್ತದೊತ್ತಡದಲ್ಲಿ ಇಳಿತವನ್ನು ತರುವ ಜೀವನ ಶೈಲಿಯ ಬದಲಾವಣೆಗಳನ್ನು ನಿರೂಪಿಸಿತು. ಅಧಿಕ ಇಲ್ಲವೇ ಸಾಮಾನ್ಯ ರಕ್ತದೊತ್ತಡವಿರುವ ಜನರಿಗೆ ಅವು ಸಹಾಯಕಾರಿ ಮಾರ್ಗದರ್ಶಕಗಳಾಗಿವೆ.

ಬೊಜ್ಜು ಮೈಯುಳ್ಳವರಿಗೆ, ಕಡಿಮೆ ಕ್ಯಾಲೊರಿಯುಳ್ಳ ಸಂತುಲಿತವಾದ ಆಹಾರಪಥ್ಯವನ್ನು ಸೇವಿಸುವಂತೆ, ಕ್ಷಿಪ್ರ ಮತ್ತು “ಚಮತ್ಕಾರಿಕ” ಆಹಾರಪಥ್ಯಗಳಿಂದ ದೂರವಿರುವಂತೆ ಹಾಗೂ ಅದೇ ಸಮಯದಲ್ಲಿ ಮಿತವಾದ ಶಾರೀರಿಕ ವ್ಯಾಯಾಮದ ಕಾರ್ಯಕ್ರಮವನ್ನು ಕಾಪಾಡಿಕೊಳ್ಳುವಂತೆ ಸಂಶೋಧಕರು ಶಿಫಾರಸ್ಸುಮಾಡುತ್ತಾರೆ. ದಿನವೊಂದಕ್ಕೆ ಆರು ಗ್ರಾಮ್‌ಗಳಿಗಿಂತ ಅಥವಾ ಒಂದು ಚಹಾ ಚಮಚಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸದಂತೆ ಅವರು ಸಲಹೆ ನೀಡುತ್ತಾರೆ. * ಇದನ್ನು ಕಾರ್ಯರೂಪಕ್ಕೆ ಹಾಕುವುದರ ಅರ್ಥ, ಆಹಾರದ ತಯಾರಿಯಲ್ಲಿ ಉಪ್ಪನ್ನು ಕನಿಷ್ಠ ಮಟ್ಟದಲ್ಲಿ ಉಪಯೋಗಿಸುವುದು, ಡಬ್ಬಿ ಆಹಾರಗಳು, ಶೀತಲೀಕರಿಸಲ್ಪಟ್ಟ ಮಾಂಸ (ಸಲಾಮಿ, ಹ್ಯಾಮ್‌, ಸಾಸೆಜ್‌ ಮುಂತಾದವುಗಳು) ಮತ್ತು ಹೊಗೆಯಾಡಿಸಲ್ಪಟ್ಟಿರುವ ಆಹಾರಗಳನ್ನೂ ಕಡಿಮೆಗೊಳಿಸುವುದೇ ಆಗಿದೆ. ಊಟದ ಸಮಯದಲ್ಲಿ ಹೆಚ್ಚು ಉಪ್ಪನ್ನು ಹಾಕದಿರುವುದು ಮತ್ತು ಸಂಸ್ಕರಿಸಲ್ಪಟ್ಟಿರುವ ಆಹಾರಗಳ ಪ್ಯಾಕೇಜ್‌ ಲೇಬಲನ್ನು ಚೆಕ್‌ ಮಾಡಿ ಎಷ್ಟು ಉಪ್ಪನ್ನು ಕೂಡಿಸಲಾಗಿದೆ ಎಂಬದನ್ನು ಪತ್ತೆಹಚ್ಚುವ ಮೂಲಕವೂ ಉಪ್ಪಿನ ಸೇವನೆಯನ್ನು ಕಡಿಮೆಗೊಳಿಸಸಾಧ್ಯವಿದೆ.

ಬ್ರಸಿಲಿನ ಆ ಒಟ್ಟಭಿಪ್ರಾಯವು, ಪೊಟಾಸಿಯಮ್‌ನ ಸೇವನೆಯನ್ನು ಹೆಚ್ಚಿಸುವಂತೆಯೂ ಸಲಹೆ ನೀಡಿದೆ, ಏಕೆಂದರೆ ಅದು “ರಕ್ತದೊತ್ತಡ ವಿರೋಧಿ ಪ್ರಭಾವವನ್ನು” ಬೀರಬಹುದು. ಹೀಗಿರುವುದರಿಂದ, ಆರೋಗ್ಯಪೂರ್ಣ ಆಹಾರಪಥ್ಯದಲ್ಲಿ “ಸೋಡಿಯಮ್‌ನ ಪ್ರಮಾಣವು ಕಡಿಮೆಯಿರುವ ಮತ್ತು ಪೊಟಾಸಿಯಮ್‌ನ ಪ್ರಮಾಣವು ಹೆಚ್ಚಾಗಿರುವ ಆಹಾರಗಳನ್ನು,” ಅಂದರೆ ಹುರುಳಿ, ಹಸಿರು ತರಕಾರಿಗಳು, ಬಾಳೆಹಣ್ಣುಗಳು, ಕರ್ಬೂಜಗಳು, ಕ್ಯಾರೆಟ್‌ಗಳು, ಬೀಟ್‌ಗೆಡ್ಡೆ, ಟೊಮೆಟೋಗಳು ಮತ್ತು ಕಿತ್ತಿಳೆಗಳನ್ನು ಸೇರಿಸಬೇಕು. ಮದ್ಯ ಸೇವನೆಯನ್ನೂ ಮಿತವಾದ ಮಟ್ಟದಲ್ಲಿಡುವುದು ಪ್ರಾಮುಖ್ಯವಾಗಿದೆ. ರಕ್ತದೊತ್ತಡವಿರುವ ಗಂಡಸರು ಒಂದು ದಿನಕ್ಕೆ 30 ಮಿಲಿಲೀಟರ್‌ಗಳಿಗಿಂತ ಹೆಚ್ಚು ಮದ್ಯವನ್ನು ಕುಡಿಯಬಾರದೆಂದು ಕೆಲವು ಸಂಶೋಧಕರು ಸೂಚಿಸುತ್ತಾರೆ; ಮತ್ತು ಸ್ತ್ರೀಯರು ಅಥವಾ ಕಡಿಮೆ ದೇಹ ತೂಕವುಳ್ಳವರು 15 ಮಿಲಿಲೀಟರ್‌ಗಿಂತ ಹೆಚ್ಚನ್ನು ಕುಡಿಯಬಾರದು. *

ಬ್ರಸಿಲಿನ ಆ ಒಟ್ಟಭಿಪ್ರಾಯವು ತೀರ್ಮಾನಿಸಿದ್ದೇನೆಂದರೆ, ಕ್ರಮವಾದ ಶಾರೀರಿಕ ವ್ಯಾಯಾಮವು ರಕ್ತದೊತ್ತಡವನ್ನು ಇಳಿಸುತ್ತದೆ ಮತ್ತು ಹೀಗೆ ಅಪಧಮನಿಯ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆಗೊಳಿಸುತ್ತದೆ. ವಾರದಲ್ಲಿ ಮೂರರಿಂದ ಐದು ಸಲ 30ರಿಂದ 45 ನಿಮಿಷಗಳ ವರೆಗೆ ನಡೆಯುವುದು, ಸೈಕಲ್‌ ಸವಾರಿ, ಮತ್ತು ಈಜಾಡುವುದರಂಥ ಮಿತವಾದ ಏರೋಬಿಕ್‌ ವ್ಯಾಯಾಮಗಳು ಉಪಯುಕ್ತವಾಗಿವೆ. * ಹೆಚ್ಚು ಆರೋಗ್ಯಭರಿತ ಜೀವನ ಶೈಲಿಯೊಂದಿಗೆ ಸಂಬಂಧಿಸಿರುವ ಇತರ ಅಂಶಗಳಲ್ಲಿ, ಧೂಮಪಾನಮಾಡುವುದನ್ನು ನಿಲ್ಲಿಸುವುದು, ರಕ್ತ ಕೊಬ್ಬನ್ನು (ಕೊಲೆಸ್ಟರಾಲ್‌ ಮತ್ತು ಟ್ರೈಗ್ಲೀಸರೈಡ್ಸ್‌) ಮತ್ತು ಮಧುಮೇಹವನ್ನು ನಿಯಂತ್ರಿಸುವುದು, ಕ್ಯಾಲ್ಸಿಯಮ್‌ ಮತ್ತು ಮ್ಯಾಗ್ನೀಸಿಯಮ್‌ನ ಸಾಕಷ್ಟು ಸೇವನೆ ಮತ್ತು ಶಾರೀರಿಕ ಹಾಗೂ ಭಾವನಾತ್ಮಕ ಒತ್ತಡವನ್ನು ನಿಯಂತ್ರಿಸುವುದು ಸೇರಿರುತ್ತದೆ. ಕೆಲವು ಔಷಧಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಉದಾಹರಣೆಗೆ, ಮೂಗು ಕಟ್ಟಿರುವುದನ್ನು ನಿವಾರಿಸುವ ಔಷಧಗಳು, ಸೋಡಿಯಮ್‌ನ ಉಚ್ಚ ಪ್ರಮಾಣವಿರುವ ಆಮ್ಲಹಾರಿಗಳು, ಹಸಿವು ತಗ್ಗಿಸುವ ಔಷಧಿಗಳು, ಮತ್ತು ಮೈಗ್ರೇನ್‌ ತಲೆನೋವುಗಳಿಗಾಗಿ ಕ್ಯಾಫೇನ್‌ ಉಳ್ಳ ನೋವು ನಿವಾರಕಗಳು ಇದರಲ್ಲಿ ಒಳಗೂಡಿವೆ.

ನಿಮಗೆ ಅಪಧಮನಿಯ ರಕ್ತದೊತ್ತಡವಿರುವಲ್ಲಿ, ನಿಮ್ಮ ವೈಯಕ್ತಿಕ ಅಗತ್ಯಗಳಿಗನುಸಾರ ನಿಮ್ಮ ಆಹಾರಪಥ್ಯ ಮತ್ತು ರೂಢಿಗಳ ಬಗ್ಗೆ ನಿಮಗೆ ಬುದ್ಧಿವಾದವನ್ನು ಕೊಡುವ ಅತ್ಯುತ್ತಮ ವ್ಯಕ್ತಿ ನಿಮ್ಮ ಡಾಕ್ಟರರಾಗಿದ್ದಾರೆ. ಆದರೆ ನಿಮ್ಮ ಸನ್ನಿವೇಶವು ಏನೇ ಆಗಿರಲಿ, ಯುವ ಪ್ರಾಯದಲ್ಲೇ ಒಂದು ಆರೋಗ್ಯಪೂರ್ಣ ಜೀವನ ಶೈಲಿಯನ್ನು ಇಟ್ಟುಕೊಳ್ಳುವುದು, ಕೇವಲ ಅಧಿಕ ರಕ್ತದೊತ್ತಡವಿರುವ ಸದಸ್ಯರಿಗೆ ಮಾತ್ರವಲ್ಲ, ಬದಲಾಗಿ ಕುಟುಂಬದ ಎಲ್ಲ ಸದಸ್ಯರಿಗೂ ಯಾವಾಗಲೂ ಉಪಯುಕ್ತವಾಗಿದೆ. ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ಮಾರಿಯನಳು ತನ್ನ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಲಾರಂಭಿಸಿದಳು. ಸದ್ಯದಲ್ಲಿ ಅವಳಿಗೆ ಔಷಧೋಪಚಾರ ನಡೆಯುತ್ತಾ ಇದೆ ಮತ್ತು ತನ್ನ ಆರೋಗ್ಯದ ಸಮಸ್ಯೆಯ ಎದುರಲ್ಲೂ ಸಾಧಾರಣವಾದ ಬದುಕನ್ನು ನಡೆಸುತ್ತಿದ್ದಾಳೆ. ನಿಮ್ಮ ಬಗ್ಗೆ ಏನು? ಎಲ್ಲ ಜನರಿಗೂ ಆರೋಗ್ಯಪೂರ್ಣ ಜೀವನವಿದ್ದು, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳ”ದಿರುವಂಥ ಸಮಯಕ್ಕಾಗಿ ನಾವು ಕಾಯುತ್ತಿರುವಾಗ, ನಿಮ್ಮ ರಕ್ತದೊತ್ತಡವನ್ನು ಅಂಕೆಯಲ್ಲಿಡಿರಿ!​—⁠ಯೆಶಾಯ 33:⁠24. (g02 4/8)

[ಪಾದಟಿಪ್ಪಣಿಗಳು]

^ ಎಚ್ಚರ! ಪತ್ರಿಕೆಯು ಯಾವುದೇ ನಿರ್ದಿಷ್ಟ ಚಿಕಿತ್ಸಾವಿಧಾನವನ್ನು ಅನುಮೋದಿಸುವುದಿಲ್ಲ, ಯಾಕೆಂದರೆ ಇದೊಂದು ವೈಯಕ್ತಿಕ ನಿರ್ಣಯವಾಗಿದೆ ಎಂಬುದನ್ನು ಅದು ಅಂಗೀಕರಿಸುತ್ತದೆ.

^ ನಿಮಗೆ ಅಪಧಮನಿಯ ಅಧಿಕ ರಕ್ತದೊತ್ತಡದಿಂದಾಗಿ ಇಲ್ಲವೆ ಹೃದಯ, ಪಿತ್ತಜನಕಾಂಗ ಇಲ್ಲವೆ ಮೂತ್ರಜನಕಾಂಗದ ರೋಗ ಇದ್ದು, ಔಷಧೋಪಚಾರವು ನಡೆಯುತ್ತಿರುವಲ್ಲಿ, ನೀವು ದಿನಾಲೂ ಎಷ್ಟು ಸೋಡಿಯಮ್‌ ಮತ್ತು ಪೊಟಾಸಿಯಮ್‌ ಅನ್ನು ತೆಗೆದುಕೊಳ್ಳಬೇಕೆಂಬುದರ ಬಗ್ಗೆ ನಿಮ್ಮ ವೈದ್ಯನ ಬಳಿ ವಿಚಾರಿಸಿ ನೋಡಿ.

^ ಮದ್ಯದ ಮೂವತ್ತು ಮಿಲಿಲೀಟರ್‌ಗಳು, ಬಟ್ಟಿಇಳಿಸಿ ತಯಾರಿಸಲ್ಪಟ್ಟಿರುವ ಪಾನೀಯಗಳ (ವಿಸ್ಕಿ, ವೊಡ್ಕಾ ಮತ್ತು ಇನ್ನಿತರವುಗಳು) 240 ಮಿಲಿಲೀಟರ್‌ ದ್ರಾಕ್ಷಾರಸ ಇಲ್ಲವೆ 720 ಮಿಲಿಲೀಟರ್‌ ಬಿಯರ್‌ಗೆ ಸಮಾನವಾಗಿವೆ.

^ ವೈಯಕ್ತಿಕ ವ್ಯಾಯಾಮ ಕಾರ್ಯಕ್ರಮದ ಅಗತ್ಯದ ಕುರಿತಾಗಿ ನಿಮ್ಮ ಡಾಕ್ಟರರೊಂದಿಗೆ ಚರ್ಚಿಸಿರಿ.

[ಪುಟ 16ರಲ್ಲಿರುವ ಚೌಕ]

ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡುವುದು

1. ಅಧಿಕ ರಕ್ತದೊತ್ತಡವನ್ನು ಅಂಕೆಯಲ್ಲಿಡಲು ಸಹಾಯಮಾಡಬಲ್ಲ ಕ್ರಮಗಳು

ದೇಹ ತೂಕವನ್ನು ಇಳಿಸಿರಿ

ಉಪ್ಪಿನ ಸೇವನೆಯನ್ನು ಕಡಿಮೆಗೊಳಿಸಿರಿ

ಪೊಟಾಸಿಯಮ್‌ಭರಿತ ಆಹಾರಗಳ ಸೇವನೆಯನ್ನು ಹೆಚ್ಚಿಸಿರಿ

ಮದ್ಯಪಾನೀಯಗಳ ಸೇವನೆಯನ್ನು ಕಡಿಮೆಗೊಳಿಸಿರಿ

ಕ್ರಮವಾಗಿ ವ್ಯಾಯಾಮ ಮಾಡಿರಿ

2. ರಕ್ತದೊತ್ತಡವನ್ನು ಅಂಕೆಯಲ್ಲಿಡಲು ಸಹಾಯಮಾಡಬಹುದಾದ ಇತರ ಕ್ರಮಗಳು

ಕ್ಯಾಲ್ಸಿಯಮ್‌ ಮತ್ತು ಮ್ಯಾಗ್ನೀಸಿಯಮ್‌ ಸಂಪೂರಕಗಳು

ನಾರುಭರಿತ ಸಸ್ಯಾಹಾರಿ ಆಹಾರಪಥ್ಯ

ಮಾನಸಿಕ ಒತ್ತಡ ವಿರೋಧಿ ಚಿಕಿತ್ಸೆ

3. ಸಂಬಂಧಿತ ಕ್ರಮಗಳು

ಧೂಮಪಾನವನ್ನು ನಿಲ್ಲಿಸಿರಿ

ಕೊಲೆಸ್ಟರಾಲ್‌ ಮಟ್ಟವನ್ನು ಅಂಕೆಯಲ್ಲಿಡಿ

ಮಧುಮೇಹವನ್ನು ನಿಯಂತ್ರಿಸಿರಿ

ರಕ್ತದೊತ್ತಡವನ್ನು ಏರಿಸಬಲ್ಲ ಔಷಧಗಳಿಂದ ದೂರವಿರಿ

[ಕೃಪೆ]

Adapted from the Third Brazilian Consensus on Arterial Hypertension​—Revista Brasileira de Clínica & Terapêutica.

[ಪುಟ 17ರಲ್ಲಿರುವ ಚಿತ್ರ]

ಕ್ರಮವಾದ ವ್ಯಾಯಾಮ ಮತ್ತು ಆರೋಗ್ಯಪೂರ್ಣ ಆಹಾರಪಥ್ಯವು, ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಹಾಯಮಾಡುವುದು