ರಾಜತಂತ್ರವು ಲೋಕ ಶಾಂತಿಯನ್ನು ತರಬಲ್ಲದೋ?
ಬೈಬಲಿನ ದೃಷ್ಟಿಕೋನ
ರಾಜತಂತ್ರವು ಲೋಕ ಶಾಂತಿಯನ್ನು ತರಬಲ್ಲದೋ?
ಎಲ್ಲಾ ಯುದ್ಧಗಳಿಗೆ ಒಂದು ಅಂತ್ಯವನ್ನು ನೋಡಲು ನೀವು ಬಯಸುತ್ತೀರೋ? ಖಂಡಿತವಾಗಿಯೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘರ್ಷಣೆಗಳಿಗೆ ಯಾವುದಾದರೊಂದು ರಾಜತಾಂತ್ರಿಕ ಪರಿಹಾರವು ಇರಲೇಬೇಕು. ಲೋಕ ಮುಖಂಡರು ಒಗ್ಗಟ್ಟಿನಿಂದ ಕೆಲಸಮಾಡಿದರೆ ಸಾಕು ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸಸಾಧ್ಯವಿದೆ ಎಂದು ಅನೇಕರು ಭಾವಿಸುತ್ತಾರೆ. ಹಾಗಿದ್ದರೂ, ರಾಜತಂತ್ರದ ಪರಿಣಾಮಗಳಿಂದ ನೀವು ನಿರಾಶರಾಗಿರಬಹುದು. ಶತಮಾನಗಳಿಂದ ರಾಜತಂತ್ರಜ್ಞರು ಒಪ್ಪಂದಗಳನ್ನು ಸ್ಥಿರೀಕರಿಸಿ, ಠರಾವುಗಳನ್ನು ಸೂತ್ರೀಕರಿಸಿ, ಶೃಂಗಸಭೆಗಳನ್ನು ನಡಿಸಿದ್ದಾರೆ, ಆದರೆ ನಿರಂತರಕ್ಕಾಗಿ ಪರಿಹರಿಸಲ್ಪಟ್ಟ ಸಮಸ್ಯೆಗಳು ಕೇವಲ ಕೆಲವೆ.
ರಾಜತಂತ್ರ ಮತ್ತು ಶಾಂತಿಯ ಕುರಿತು ಬೈಬಲ್ ಬಹಳಷ್ಟನ್ನು ತಿಳಿಸುತ್ತದೆ. ಈ ಮುಂದಿನ ಪ್ರಶ್ನೆಗಳನ್ನು ಅದು ಉತ್ತರಿಸುತ್ತದೆ: ಯಾವ ಅಂಶಗಳು ಶಾಂತಿಯನ್ನು ಸ್ಥಾಪಿಸುವುದರಿಂದ ಇಂದು ರಾಜತಂತ್ರವನ್ನು ತಡೆಯುತ್ತಿವೆ? ಕ್ರೈಸ್ತರು ತಮ್ಮನ್ನು ರಾಜತಂತ್ರದಲ್ಲಿ ಒಳಪಡಿಸಿಕೊಳ್ಳಬೇಕೋ? ಕಟ್ಟಕಡೆಗೆ ನಿಜ ಶಾಂತಿಯು ಹೇಗೆ ಲಭಿಸುವುದು?
ಶಾಂತಿಯನ್ನು ಯಾವುದು ತಡೆಯುತ್ತಿದೆ?
ವ್ಯಕ್ತಿಯಿಂದ ವ್ಯಕ್ತಿಯ ಸಂಪರ್ಕ ಹೇಗೆ ಶಾಂತಿಗೆ ನಡಿಸಸಾಧ್ಯವಿದೆ ಎಂಬುದನ್ನು ಅನೇಕ ಬೈಬಲ್ ವೃತ್ತಾಂತಗಳು ದೃಷ್ಟಾಂತಿಸುತ್ತವೆ. ಉದಾಹರಣೆಗೆ, ಅಬೀಗೈಲಳು ತನ್ನ ಮನೆವಾರ್ತೆಯ ಮೇಲೆ ದಾವೀದನೂ ಅವನ ಸೇನೆಯೂ ಮುಯ್ಯಿತೀರಿಸದಂತೆ ಕೌಶಲದಿಂದ ಅವರ ಮನವೊಪ್ಪಿಸಿದಳು. (1 ಸಮುವೇಲ 25:18-35) ಬೇರೆ ಯಾವುದೇ ಉಪಾಯವಿಲ್ಲದೆ ಶಾಂತಿಗಾಗಿ ಒಪ್ಪಂದವನ್ನು ಕೇಳಿಕೊಳ್ಳಲು ರಾಯಭಾರಿಗಳನ್ನು ಕಳುಹಿಸಿದ ಒಬ್ಬ ಅರಸನ ದೃಷ್ಟಾಂತವನ್ನು ಯೇಸು ಕೊಟ್ಟನು. (ಲೂಕ 14:31, 32) ಹೌದು, ಕೆಲವು ರೀತಿಯ ರಾಜತಂತ್ರವು ಘರ್ಷಣೆಗಳನ್ನು ಬಗೆಹರಿಸಬಲ್ಲದೆಂದು ಬೈಬಲ್ ಒಪ್ಪಿಕೊಳ್ಳುತ್ತದೆ. ಹಾಗಾದರೆ, ಶಾಂತಿ ಒಕ್ಕೂಟಗಳು ಏಕೆ ಅನೇಕಬಾರಿ ಕಡಿಮೆ ಯಶಸ್ಸನ್ನು ಗಳಿಸುತ್ತವೆ?
ನಮ್ಮ ಸಮಯಗಳು ಸಮಸ್ಯೆಯಿಂದ ತುಂಬಿರುತ್ತವೆಂದು ಬೈಬಲ್ ನಿಷ್ಕೃಷ್ಟವಾಗಿ ಮುಂತಿಳಿಸುತ್ತದೆ. ಪಿಶಾಚನಾದ ಸೈತಾನನ ದುಷ್ಟ ಪ್ರಭಾವದ ಕಾರಣ, ಮನುಷ್ಯರು “ಸಮಾಧಾನವಾಗದವರೂ . . . ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ” ಆಗಿರುವರು. (2 ತಿಮೊಥೆಯ 3:3, 4; ಪ್ರಕಟನೆ 12:12) ಇದಕ್ಕೆ ಕೂಡಿಕೆಯಾಗಿ, ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯವು ‘ಯುದ್ಧಗಳಿಂದಲೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳಿಂದಲೂ’ ಗುರುತಿಸಲ್ಪಡುತ್ತದೆ ಎಂಬುದನ್ನು ಯೇಸು ಪ್ರವಾದಿಸಿದ್ದನು. (ಮಾರ್ಕ 13:7, 8) ಈ ವಿಷಯಗಳು ಈಗ ಹೆಚ್ಚೆಚ್ಚಾಗುತ್ತಾ ಇದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಹೀಗಿರುವಾಗ, ರಾಷ್ಟ್ರಗಳ ನಡುವಿನ ಶಾಂತಿಗಾಗಿನ ಪ್ರಯತ್ನಗಳು ಅನೇಕವೇಳೆ ನಿರರ್ಥಕವಾಗುವುದರಲ್ಲಿ ಆಶ್ಚರ್ಯವೇನಿದೆ?
ಈ ನಿಜತ್ವವನ್ನು ಸಹ ಪರಿಗಣಿಸಿರಿ: ತಿಕ್ಕಾಟಗಳನ್ನು ತಡೆಗಟ್ಟಲು ರಾಜತಂತ್ರಜ್ಞರು ಬಹಳಷ್ಟು ಕಠಿನ ಪ್ರಯತ್ನವನ್ನು ಮಾಡುತ್ತಿರಬಹುದಾದರೂ, ಪ್ರತಿಯೊಬ್ಬನ ಮುಖ್ಯ ಹೇತು ಅವನ ಸ್ವಂತ ರಾಷ್ಟ್ರದ ಪ್ರಯೋಜನಗಳನ್ನು ಹೆಚ್ಚಿಸುವುದೇ ಆಗಿದೆ. ಇದು ತಾನೇ, ರಾಜಕೀಯ ರಾಜತಂತ್ರದ ಅತಿ ಪ್ರಾಮುಖ್ಯ ಅಂಶವಾಗಿದೆ. ಇಂಥ ವಿಷಯಗಳಲ್ಲಿ ಕ್ರೈಸ್ತರು ತಮ್ಮನ್ನು ಒಳಪಡಿಸಿಕೊಳ್ಳಬೇಕೋ?
ಕ್ರೈಸ್ತರು ಮತ್ತು ರಾಜತಂತ್ರ
ಬೈಬಲ್ ಬುದ್ಧಿವಾದ ನೀಡುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ.” (ಕೀರ್ತನೆ 146:3) ಇದರ ಅರ್ಥವೇನೆಂದರೆ, ಲೋಕದ ರಾಜತಂತ್ರಜ್ಞರ ಹೇತುಗಳು ಏನೇ ಆಗಿರಲಿ, ನಿರಂತರವಾದ ಪರಿಹಾರಗಳನ್ನು ತರಲು ಅವರಿಗೆ ಸಾಮರ್ಥ್ಯವೂ ಇಲ್ಲ ಶಕ್ತಿಯೂ ಇಲ್ಲ.
ಯೇಸು ಪೊಂತ್ಯ ಪಿಲಾತನ ಮುಂದೆ ವಿಚಾರಣೆಗೊಳಗಾಗುತ್ತಿದ್ದಾಗ ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ಶಾಂತಿ ಯೋಜನೆಗಳು, ಅನೇಕವೇಳೆ ರಾಷ್ಟ್ರೀಯ ದ್ವೇಷ ಮತ್ತು ರಾಜಕೀಯ ಸ್ವಾರ್ಥದಿಂದ ಕಲುಷಿತಗೊಂಡಿರುತ್ತವೆ. ಆದುದರಿಂದ ಸತ್ಯ ಕ್ರೈಸ್ತರು ಈ ಲೋಕದ ಘರ್ಷಣೆಗಳಲ್ಲಿ ಮತ್ತು ಅದರ ರಾಜತಂತ್ರ ಪ್ರಯತ್ನಗಳಲ್ಲಿ ಒಳಗೂಡುವುದರಿಂದ ದೂರವಿರುತ್ತಾರೆ.
ಕ್ರೈಸ್ತರು ಲೋಕದ ವಿಚಾರಗಳಲ್ಲಿ ಭಾವಶೂನ್ಯರೂ ನಿರಾಸಕ್ತರೂ ಆಗಿದ್ದಾರೆಂದು ಇದರ ಅರ್ಥವೋ? ಮಾನವ ಕಷ್ಟಾನುಭವಗಳಿಗೆ ಅವರು ಅಸಂವೇದಿಗಳಾಗಿದ್ದಾರೋ? ಇಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಬೈಬಲ್ ದೇವರ ಸತ್ಯ ಆರಾಧಕರನ್ನು, ತಮ್ಮ ಸುತ್ತಲು ಸಂಭವಿಸುವ ಕೆಟ್ಟ ಸಂಗತಿಗಳಿಗಾಗಿ “ನರಳಿ ಗೋಳಾಡುತ್ತಿರುವ” ವ್ಯಕ್ತಿಗಳೋಪಾದಿ ವರ್ಣಿಸುತ್ತದೆ. (ಯೆಹೆಜ್ಕೇಲ 9:4) ಕ್ರೈಸ್ತರು, ದೇವರು ವಾಗ್ದಾನಿಸಿರುವ ಪ್ರಕಾರ ಶಾಂತಿಯನ್ನು ತರಲು ಆತನ ಮೇಲೆ ಆತುಕೊಳ್ಳುತ್ತಾರೆ. ಶಾಂತಿ ಎಂದರೆ ಯುದ್ಧರಾಹಿತ್ಯ ಎಂಬುದು ನಿಮ್ಮ ಅಭಿಪ್ರಾಯವೋ? ದೇವರ ರಾಜ್ಯವು ನಿಶ್ಚಯವಾಗಿಯೂ ಅದನ್ನು ನೆರವೇರಿಸುವುದು. (ಕೀರ್ತನೆ 46:8, 9) ಆದರೆ ಅದಕ್ಕೆ ಕೂಡಿಕೆಯಾಗಿ, ಭೂಮಿಯ ಎಲ್ಲಾ ನಿವಾಸಿಗಳ ಸಂಪೂರ್ಣ ಭದ್ರತೆ ಮತ್ತು ಸುಕ್ಷೇಮವನ್ನು ಅದು ಖಾತ್ರಿಪಡಿಸುತ್ತದೆ. (ಮೀಕ 4:3, 4; ಪ್ರಕಟನೆ 21:3, 4) ಅಂಥ ಶ್ರೇಷ್ಠ ಮಟ್ಟದ ಶಾಂತಿಯು, ರಾಜತಂತ್ರದಿಂದಾಗಲಿ ಅಥವಾ ಮಾನವನ “ಶಾಂತಿಕಾಪಾಡುವ” ಸಂಘಟನೆಗಳ ಪ್ರಯತ್ನಗಳಿಂದಾಗಲಿ ಎಂದಿಗೂ ಲಭಿಸಸಾಧ್ಯವಿಲ್ಲ.
ಶಾಂತಿಯನ್ನು ಸ್ಥಾಪಿಸಲು ಮಾನವ ರಾಜತಂತ್ರದಲ್ಲಿ ಭರವಸೆಯಿಡುವುದು ಕೇವಲ ನಿರಾಶೆಗೆ ನಡೆಸಬಲ್ಲದು ಎಂಬುದನ್ನು ಬೈಬಲ್ ಪ್ರವಾದನೆ ಮತ್ತು ಗತಕಾಲದ ಅನುಭವ ಸ್ಪಷ್ಟವಾಗಿ ಸೂಚಿಸುತ್ತದೆ. ಶಾಂತಿಗಾಗಿ ಯೇಸು ಕ್ರಿಸ್ತನ ಮೇಲೆ ನಿರೀಕ್ಷೆಯನ್ನಿಟ್ಟು ದೇವರ ರಾಜ್ಯವನ್ನು ಬೆಂಬಲಿಸುವವರು, ನಿಜ ಶಾಂತಿಗಾಗಿನ ತಮ್ಮ ಇಚ್ಛೆಯು ನೆರವೇರುವುದನ್ನು ನೋಡುವರು. ಅಷ್ಟುಮಾತ್ರವಲ್ಲದೆ, ಅದನ್ನು ಅವರು ನಿತ್ಯನಿರಂತರ ಅನುಭವಿಸುವರು!—ಕೀರ್ತನೆ 37:11, 29. (g04 1/8)
[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]
ಲೋಕದ ರಾಜತಂತ್ರಜ್ಞರ ಹೇತುಗಳು ಏನೇ ಆಗಿರಲಿ, ನಿರಂತರವಾದ ಪರಿಹಾರಗಳನ್ನು ತರಲು ಅವರಿಗೆ ಸಾಮರ್ಥ್ಯವೂ ಇಲ್ಲ ಶಕ್ತಿಯೂ ಇಲ್ಲ
[ಪುಟ 12ರಲ್ಲಿರುವ ಚಿತ್ರ ಕೃಪೆ]
ಕೆಳಗೆ: Photo by Stephen Chernin/Getty Images