ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಆನೆಗಳು ಮತ್ತು ಮೋಡಗಳು

ಒಂದು ಮೋಡವು ಎಷ್ಟು ತೂಕವುಳ್ಳದ್ದಾಗಿರುತ್ತದೆ? ಒಂದು ರಾಶಿಮೇಘದಲ್ಲಿ ಸುಮಾರು 550 ಟನ್ನುಗಳಷ್ಟು ನೀರು ಇರಬಲ್ಲದು ಎಂದು ‘ಎಬಿಸಿ ನ್ಯೂಸ್‌’ ವಾರ್ತಾಪತ್ರವು ವರದಿಸುತ್ತದೆ. “ಅಥವಾ ನೀವು ಅದನ್ನು ಇನ್ನಷ್ಟು ಅರ್ಥಭರಿತವಾಗಿರಬಹುದಾದ ರೀತಿಯಲ್ಲಿ ವ್ಯಕ್ತಪಡಿಸಲು ಬಯಸುವಲ್ಲಿ . . . ಆನೆಗಳನ್ನು ಮನಸ್ಸಿಗೆ ತಂದುಕೊಳ್ಳಿರಿ” ಎಂದು ಪೆಗೀ ಲಮೋನ್‌ ಎಂಬ ಪವನಶಾಸ್ತ್ರಜ್ಞರು ತಿಳಿಸುತ್ತಾರೆ. ಒಂದು ಆನೆಯು ಸುಮಾರು ಆರು ಟನ್ನುಗಳಷ್ಟು ಭಾರವಾಗಿದೆ ಎಂದು ನಾವು ಊಹಿಸಿಕೊಳ್ಳುವಲ್ಲಿ, ನಿರ್ದಿಷ್ಟವಾದ ಒಂದೇ ಒಂದು ರಾಶಿಮೇಘದಲ್ಲಿರುವ ನೀರು 100 ಆನೆಗಳಷ್ಟು ತೂಕವುಳ್ಳದ್ದಾಗಿರುವುದು. ಈ ಎಲ್ಲಾ ನೀರು ಚಿಕ್ಕ ಚಿಕ್ಕ ಹನಿಗಳೋಪಾದಿ ವಾತಾವರಣದಲ್ಲಿ ತಡೆಹಿಡಿಯಲ್ಪಟ್ಟಿದ್ದು, ಭೂಮಿಯ ಮೇಲಿರುವ ಹೆಚ್ಚು ಬೆಚ್ಚಗಿನ ವಾಯುವಿನಲ್ಲಿ ತೇಲಾಡುತ್ತಿರುತ್ತದೆ. ಹತ್ತಿಯಂತೆ ಉಬ್ಬಿರುವ ರಾಶಿಮೇಘಕ್ಕೆ ವ್ಯತಿರಿಕ್ತವಾಗಿ, ಒಂದು ದೊಡ್ಡ ಬಿರುಗಾಳಿ ಮೋಡವು 2,00,000 ಆನೆಗಳಷ್ಟು ಭಾರದ ನೀರನ್ನು ತನ್ನಲ್ಲಿ ತಡೆದಿಟ್ಟುಕೊಂಡಿರುತ್ತದೆ. ಒಂದು ಚಂಡಮಾರುತದ ಮೋಡವು ಎಷ್ಟು ತೂಕವುಳ್ಳದ್ದಾಗಿರುತ್ತದೆ? ಲಮೋನ್‌ರವರು ಒಂದು ಚಂಡಮಾರುತದ ಮೋಡದ ಒಂದೇ ಒಂದು ಘನ ಮೀಟರಿನಲ್ಲಿರುವ ನೀರಿನ ತೂಕವನ್ನು ಅಂದಾಜುಮಾಡಿ, ಆ ಸಂಖ್ಯೆಯನ್ನು ಚಂಡಮಾರುತದ ಒಟ್ಟು ಘನಮಾನದೊಂದಿಗೆ ಗುಣಿಸಿದರು. ಫಲಿತಾಂಶವೇನು? ನಾಲ್ಕು ಕೋಟಿ ಆನೆಗಳಿಗೆ ತುಲನಾತ್ಮಕವಾದ ಭಾರವೇ. “ಇದರ ಅರ್ಥ, ಒಂದು ಚಂಡಮಾರುತದ ಮೋಡದಲ್ಲಿರುವ ನೀರು, ಈ ಭೂಗ್ರಹದಲ್ಲಿರುವ ಎಲ್ಲಾ ಆನೆಗಳಿಗಿಂತಲೂ ಹೆಚ್ಚು ಭಾರವಾಗಿರುತ್ತದೆ, ಇಷ್ಟರ ತನಕ ಜೀವಿಸಿದ್ದಿರಬಹುದಾದ ಎಲ್ಲಾ ಆನೆಗಳಿಗಿಂತಲೂ ಹೆಚ್ಚು ಭಾರವಾಗಿರಬಹುದು” ಎಂದು ಆ ವರದಿಯು ತಿಳಿಸುತ್ತದೆ. (g04 7/22)

ನಿಮ್ಮ ಹಲ್ಲುಗಳನ್ನು ಯಾವಾಗ ಉಜ್ಜಬೇಕು?

ಆಮ್ಲ ಪಾನೀಯಗಳನ್ನು ಕುಡಿದ ಬಳಿಕ ಅಥವಾ ಆಮ್ಲೀಯ ಆಹಾರವನ್ನು ಸೇವಿಸಿದ ನಂತರ ತತ್‌ಕ್ಷಣವೇ ನಿಮ್ಮ ಹಲ್ಲುಗಳನ್ನು ಉಜ್ಜುವುದು ಇನ್ಯಾಮಲ್‌ (ಗಾಜುಲೇಪ) ಅನ್ನು ಹಾಳುಮಾಡಸಾಧ್ಯವಿದೆ ಎಂದು, ಮೆಕ್ಸಿಕೊ ಸಿಟಿಯ ಮಿಲನ್ಯೋ ಎಂಬ ವಾರ್ತಾಪತ್ರಿಕೆಯು ತಿಳಿಸುತ್ತದೆ. ಗೂಟ್ಟಿಂಗನ್‌ನ ಜರ್ಮನ್‌ ವಿಶ್ವವಿದ್ಯಾನಿಲಯದಲ್ಲಿ ನಡೆಸಲ್ಪಟ್ಟ ಒಂದು ಅಧ್ಯಯನದ ಕುರಿತಾಗಿ ವರದಿಸುತ್ತಾ ಆ ವಾರ್ತಾಪತ್ರಿಕೆಯು, ಆಮ್ಲೀಯ ಆಹಾರಗಳು “ಹಲ್ಲಿನ ಇನ್ಯಾಮಲ್‌ ಅನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತವೆ” ಎಂದು ಎಚ್ಚರಿಸಿತು. ಆದುದರಿಂದ, ಊಟಮಾಡಿದ ಕೂಡಲೆ ಹಲ್ಲುಗಳನ್ನು ಉಜ್ಜುವುದು ತುಂಬ ಹಾನಿಕರವಾಗಿರಸಾಧ್ಯವಿದೆ. ಅದಕ್ಕೆ ಬದಲಾಗಿ, “ಹಲ್ಲುಗಳು ತಮ್ಮ ಬಲವನ್ನು ಪುನಃ ಪಡೆದುಕೊಳ್ಳುವಂತೆ ಕೆಲವು ನಿಮಿಷ ಕಾಯುವುದು ಸೂಕ್ತವಾದದ್ದಾಗಿದೆ.” (g04 7/22)

ಹದಿಹರೆಯದವರ ಜೂಜಾಟ

‘ಮಗಿಲ್‌ ವಿಶ್ವವಿದ್ಯಾನಿಲಯದ ಯುವ ಜನರ ಜೂಜಾಟಕ್ಕಾಗಿರುವ ಅಂತಾರಾಷ್ಟ್ರೀಯ ಕೇಂದ್ರ’ಕ್ಕನುಸಾರ, “ಕೆನಡದ 12ರಿಂದ 17ರ ಪ್ರಾಯದ ಯುವ ಜನರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸುಖಾನುಭೋಗಕ್ಕಾಗಿ ಜೂಜಾಡುವವರಾಗಿ ಪರಿಗಣಿಸಲ್ಪಟ್ಟಿದ್ದಾರೆ, 10%ದಿಂದ 15% ಮಂದಿ ಗಂಭೀರವಾದ ಜೂಜಾಟದ ಸಮಸ್ಯೆಯನ್ನು ಬೆಳೆಸಿಕೊಳ್ಳುವ ಅಪಾಯದಲ್ಲಿದ್ದಾರೆ ಮತ್ತು 4%ದಿಂದ 6% ಮಂದಿ ‘ವಿಕೃತ ಜೂಜುಕೋರ’ರಾಗಿದ್ದಾರೆ” ಎಂದು ಟೊರಾಂಟೊದ ನ್ಯಾಷನಲ್‌ ಪೋಸ್ಟ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಅನೇಕವೇಳೆ ಈ ಆಕರ್ಷಣೆಯು ಬಾಲ್ಯಾವಸ್ಥೆಯ ಆರಂಭದಲ್ಲೇ, ಅಂದರೆ ಕೆಲವು ಮಕ್ಕಳು ಲಾಟರಿ ಟಿಕೆಟ್‌ಗಳನ್ನು ಉಡುಗೊರೆಗಳಾಗಿ ಪಡೆದುಕೊಳ್ಳುವಾಗ ಅಥವಾ ಕಂಪ್ಯೂಟರ್‌ನಲ್ಲಿ ಬಾಜಿಕಟ್ಟಲಿಕ್ಕಾಗಿ ಇಂಟರ್‌ನೆಟ್ಟನ್ನು ಉಪಯೋಗಿಸುವಾಗ ಪ್ರಾರಂಭಗೊಳ್ಳುತ್ತದೆ. ಇದರ ಫಲಿತಾಂಶವೇನೆಂದರೆ, ಈಗ ಕೆನಡದ ಹದಿಪ್ರಾಯದವರಲ್ಲಿ ಹೆಚ್ಚೆಚ್ಚು ಮಂದಿ ಧೂಮಪಾನ ಅಥವಾ ಅಮಲೌಷಧದ ದುರುಪಯೋಗಗಳಂಥ ಇತರ ವ್ಯಸನದಾಯಕ ವರ್ತನೆಗಳಿಗಿಂತಲೂ ಜೂಜಾಟದಲ್ಲಿ ಒಳಗೂಡುತ್ತಿದ್ದಾರೆ ಎಂದು ಸಂಶೋಧಕರು ಹೇಳುತ್ತಾರೆ. ವಾಸ್ತವದಲ್ಲಿ, “ಸಾಮಾನ್ಯ ವಯಸ್ಕ ಜನಸಂಖ್ಯೆಗಿಂತಲೂ, 18ರಿಂದ 24ರ ಪ್ರಾಯದ ಯುವ ವಯಸ್ಕರು ಜೂಜಾಟದ ಸಮಸ್ಯೆಯನ್ನು ಬೆಳೆಸಿಕೊಳ್ಳುವ ಸಂಭವನೀಯತೆ ಎರಡರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ” ಎಂದು ಪೋಸ್ಟ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. ಕೆನಡದ ಪ್ರೌಢಶಾಲೆಗಳಲ್ಲಿನ ಜೂಜಾಟವನ್ನು ತಡೆಗಟ್ಟುವ ಕಾರ್ಯಕ್ರಮಗಳು, ಈ ಸಮಸ್ಯೆಯನ್ನು ನಿಗ್ರಹಿಸುವುದರಲ್ಲಿ ಪರಿಣಾಮಕಾರಿಯಾಗುವವು ಎಂದು ಶಿಕ್ಷಕರು ನಿರೀಕ್ಷಿಸುತ್ತಿದ್ದಾರೆ. (g04 7/8)

ಕ್ಯಾಥೊಲಿಕ್‌ ಪಾದ್ರಿಗಳು ಮತ್ತು ಬೈಬಲ್‌ ಜ್ಞಾನ

“ಪಾದ್ರಿಗಳು ಬೈಬಲಿನೊಂದಿಗೆ ಎಷ್ಟರ ಮಟ್ಟಿಗೆ ಚಿರಪರಿಚಿತರಾಗಿದ್ದಾರೆ?” ಈ ಪ್ರಶ್ನೆಯು, ಸ್ವತಃ ಒಬ್ಬ ಪಾದ್ರಿಯೂ ಟ್ಯೂರಿನ್‌ ಡೈಆಸಿಸನ್‌ ಆಫೀಸ್‌ ಫಾರ್‌ ಕ್ಯಾಟಿಕಿಸಮ್‌ನ ನಿರ್ದೇಶಕರೂ ಆಗಿರುವ ಆಂಡ್ರೇಆ ಫೋಂಟಾನಾ ಎಂಬವರಿಂದ ಕೇಳಲ್ಪಟ್ಟಿತು. ಫೋಂಟಾನಾ ಅವರು ಇಟಲಿಯ ಆವೇನೈರ್‌ ಎಂಬ ವಾರ್ತಾಪತ್ರಿಕೆಯಲ್ಲಿ ಬರೆಯುತ್ತಾ, “ಒಬ್ಬ ಚರ್ಚ್‌ ಸದಸ್ಯನು [ತಮ್ಮ] ಬಳಿಗೆ ಬಂದು, ಬಿಷಪನ ಅಧಿಕಾರದಲ್ಲಿರುವ ಚರ್ಚುಗಳಲ್ಲಿ ಯಾವುದೇ ಬೈಬಲ್‌ ಅಧ್ಯಯನ ಕೋರ್ಸುಗಳು ನಡೆಯುತ್ತವೋ ಎಂದು ಕೇಳಿದಾಗ” ಈ ಪ್ರಶ್ನೆಯು ತಮ್ಮ ಮನಸ್ಸಿಗೆ ಬಂತು ಎಂದು ಹೇಳಿದರು. ಆ ಚರ್ಚ್‌ ಸದಸ್ಯನು ಯಾವ ಚರ್ಚಿಗೆ ಹೋಗುತ್ತಿದ್ದನೋ ಅಲ್ಲಿ “ಪವಿತ್ರ ಶಾಸ್ತ್ರದ ಬಗ್ಗೆ ಎಂದೂ ಪ್ರಸ್ತಾಪವೇ ಮಾಡಲಾಗುತ್ತಿರಲಿಲ್ಲ.” ಇದಕ್ಕೆ ಉತ್ತರವಾಗಿ ಫೋಂಟಾನಾ ಅವರು ಬರೆದುದು: “ನಿಜ ಹೇಳಬೇಕೆಂದರೆ, [ಪಾದ್ರಿಗಳು] ಹಾಜರಾಗುವ ಸೆಮಿನೆರಿ ಕೋರ್ಸುಗಳು ಮುಗಿದ ಬಳಿಕ, ಬೈಬಲ್‌ ಅಧ್ಯಯನವನ್ನು ಮುಂದುವರಿಸುವವರು ಕೆಲವರು ಮಾತ್ರ ಎಂಬುದು ದುಃಖಕರ ಸಂಗತಿಯಾಗಿದೆ. . . . ಚರ್ಚ್‌ಗಳಿಗೆ ಹೋಗುವವರಲ್ಲಿ ಅನೇಕರಿಗೆ ಬೈಬಲ್‌ ವಚನದ ಕುರಿತು ಕೇಳಿಸಿಕೊಳ್ಳಲು ಮತ್ತು ಅದಕ್ಕೆ ಸಮೀಪವಾಗಲು ಸಿಗುವ ಅವಕಾಶ ಭಾನುವಾರದ ಧರ್ಮಪ್ರವಚನಗಳು ನಡೆಯುವ ಏಕಮಾತ್ರ ಸಮಯವೇ ಆಗಿದೆ.” “ಹೆಚ್ಚನ್ನು ಕಲಿಯಲಿಕ್ಕಾಗಿ ಅವನು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಮಾಡುತ್ತಿದ್ದನು” ಎಂದು ಆ ಚರ್ಚ್‌ ಸದಸ್ಯನು ಹೇಳಿದ್ದನು. (g04 7/8)

“ಮೃತ ಸಮುದ್ರವು ಮೃತಿಹೊಂದುತ್ತಿದೆ”

“ಮೃತ ಸಮುದ್ರವು ಮೃತಿಹೊಂದುತ್ತಿದೆ, ಮತ್ತು ಅತ್ಯಂತ ದೊಡ್ಡದಾದ ಯಂತ್ರವಿಜ್ಞಾನದ ಪ್ರಯತ್ನವು ಮಾತ್ರ ಅದನ್ನು ಸಂರಕ್ಷಿಸಬಲ್ಲದು” ಎಂದು ಅಸೋಸಿಯೇಟೆಡ್‌ ಪ್ರೆಸ್‌ನ ಸುದ್ದಿಯು ತಿಳಿಸಿತು. ಈ ಸಮುದ್ರದಲ್ಲಿರುವ ಅತ್ಯಧಿಕ ಪ್ರಮಾಣದ ಲವಣಾಂಶವು ಜಲಜೀವಿಗಳು ಇದರಲ್ಲಿ ಜೀವಿಸುವುದನ್ನು ಅಸಾಧ್ಯವನ್ನಾಗಿ ಮಾಡುವುದರಿಂದ ಇದಕ್ಕೆ ಮೃತ ಸಮುದ್ರ ಎಂಬ ಹೆಸರು ಬಂದಿದೆ. ಇದರ ನೀರಿನ ಮೇಲ್ಮೈಯು ಭೂಮಿಯಲ್ಲೇ ಅತ್ಯಂತ ತಗ್ಗಾದದ್ದಾಗಿದೆ, ಅಂದರೆ ಸಮುದ್ರ ಮಟ್ಟಕ್ಕಿಂತ 400 ಮೀಟರ್‌ ಕೆಳಗಿದೆ. ಈ ಸಮುದ್ರವು 80 ಕಿಲೊಮೀಟರುಗಳಷ್ಟು ಉದ್ದವಾಗಿದ್ದು, 18 ಕಿಲೊಮೀಟರುಗಳಷ್ಟು ಅಗಲವಾಗಿದೆ. “ಸಾವಿರಾರು ವರ್ಷಗಳಿಂದಲೂ, ಮೃತ ಸಮುದ್ರದ ನೀರಿನ [ಪ್ರಮುಖ] ಉಗಮವಾಗಿರುವ ಜೋರ್ಡನ್‌ ನದಿಯಿಂದಾಗಿ, [ಅತಿ ಹೆಚ್ಚು ಬಾಷ್ಪೀಕರಣ ಹಾಗೂ ಶೇಖರವಾಗುವ ನೀರಿನ ನಡುವಣ] ಸಮತೂಕವು ಕಾಪಾಡಿಕೊಳ್ಳಲ್ಪಟ್ಟಿತ್ತು” ಎಂದು ಆ ಲೇಖನವು ಹೇಳುತ್ತದೆ. “ಇತ್ತೀಚಿನ ದಶಕಗಳಲ್ಲಿಯಾದರೋ, ಇಸ್ರೇಲ್‌ ಮತ್ತು ಜೋರ್ಡನ್‌ ದೇಶಗಳನ್ನು ವಿಭಾಗಿಸುವಂಥ ಕಿರಿದಾದ ನದಿಯ ಉದ್ದಕ್ಕೂ ಇರುವ ಕೃಷಿ ಪ್ರದೇಶದ ವಿಸ್ತಾರವಾದ ಕೊಯ್ಲು ದಾರಿಗಳಿಗೆ ನೀರುಹಾಯಿಸಲಿಕ್ಕಾಗಿ, ಈ ಎರಡೂ ದೇಶಗಳು ಜೋರ್ಡನ್‌ ನದಿಯಿಂದ ನೀರನ್ನು ಬಳಸಿಕೊಳ್ಳುತ್ತಿವೆ; ಇದರಿಂದಾಗಿ ಮೃತ ಸಮುದ್ರವು ನೀರಿನ ಶೇಖರಣೆಯಿಂದ ವಂಚಿತವಾಗುತ್ತಿದೆ.” ಈ ವಿಷಯದಲ್ಲಿ ಯಾವುದೇ ಸೂಕ್ತಕ್ರಮವನ್ನು ಕೈಗೊಳ್ಳದಿರುವಲ್ಲಿ, ಒಂದು ವರ್ಷಕ್ಕೆ ನೀರಿನ ಮಟ್ಟವು ಸುಮಾರು ಮೂರು ಅಡಿಗಳಷ್ಟು ಕಡಿಮೆಯಾಗುತ್ತಾ ಹೋಗುವುದು, ಮತ್ತು ಇದರಿಂದಾಗಿ ಸುತ್ತಲೂ ಇರುವ ಪ್ರದೇಶ, ಅದರ ವನ್ಯಜೀವಿಗಳು ಮತ್ತು ಸಸ್ಯಸಂಕುಲಕ್ಕೆ ವಿನಾಶಕರ ಪರಿಣಾಮಗಳು ಸಂಭವಿಸುವವು ಎಂದು ಒಂದು ಇಸ್ರೇಲಿ ಅಧ್ಯಯನವು ತಿಳಿಸುತ್ತದೆ. ಈಗಾಗಲೇ ಉಂಟಾಗಿರುವ ಐದು ವರ್ಷಗಳ ಬರವು, ಮೃತ ಸಮುದ್ರದ ವಿಪತ್ಕಾರಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ. (g04 7/8)

ನಿಮ್ಮ ಕಟಿಂಗ್‌ ಬೋರ್ಡನ್ನು ಸ್ವಚ್ಛವಾಗಿಡಿರಿ!

ಯಾವುದು ಸುರಕ್ಷಿತ​—⁠ಮರದ ಕಟಿಂಗ್‌ ಬೋರ್ಡೊ (ತರಕಾರಿ ಅಥವಾ ಮಾಂಸವನ್ನು ಕತ್ತರಿಸುವ ಮಣೆ) ಅಥವಾ ಪ್ಲ್ಯಾಸ್ಟಿಕ್‌ ಕಟಿಂಗ್‌ ಬೋರ್ಡೊ? “ಎಷ್ಟರ ತನಕ ನೀವು ಅವುಗಳನ್ನು ತುಂಬ ಸ್ವಚ್ಛವಾಗಿಡುತ್ತೀರೋ ಅಷ್ಟರ ತನಕ ಎರಡೂ ರೀತಿಯ ಬೋರ್ಡುಗಳು ಸುರಕ್ಷಿತವಾಗಿವೆ” ಎಂದು ಯುಸಿ ಬರ್‌ಕ್ಲಿ ವೆಲ್‌ನೆಸ್‌ ಲೆಟರ್‌ ತಿಳಿಸುತ್ತದೆ. “ಹಸಿ ಮಾಂಸವನ್ನು ಅಥವಾ ಕೋಳಿಯನ್ನು ಕತ್ತರಿಸಲಿಕ್ಕಾಗಿ ನೀವು ಮರದ ಬೋರ್ಡನ್ನು ಉಪಯೋಗಿಸಲಿ ಅಥವಾ ಪ್ಲ್ಯಾಸ್ಟಿಕ್‌ ಬೋರ್ಡನ್ನು ಉಪಯೋಗಿಸಲಿ, ಬಳಕೆಯ ನಂತರ ಆ ಬೋರ್ಡನ್ನು ಬಿಸಿಯಾದ ಸೋಪ್‌ ನೀರಿನಿಂದ ಚೆನ್ನಾಗಿ ಉಜ್ಜಿತೊಳೆಯಿರಿ.” ಬೋರ್ಡ್‌ನ ಮೇಲೆ ವಿಪರೀತ ಕಚ್ಚು ಗುರುತುಗಳಿರುವಲ್ಲಿ ಅಥವಾ ಅದರ ಮೇಲೆ ಜಿಡ್ಡಿನ ಅಂಶವಿರುವಲ್ಲಿ, ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹೆಚ್ಚಿನ ಎಚ್ಚರವಹಿಸಿರಿ. “ನೀವು ಸಾರಗುಂದಿಸಿದ ಬ್ಲೀಚ್‌ ದ್ರಾವಣವನ್ನು (ಒಂದು ಲೀಟರ್‌ನಷ್ಟು ನೀರಿನಲ್ಲಿ 5 ಮಿಲಿಲೀಟರ್‌ನಷ್ಟು ಬ್ಲೀಚ್‌) ಉಪಯೋಗಿಸುವ ಮೂಲಕವೂ ಬೋರ್ಡನ್ನು ಕ್ರಿಮಿಶುದ್ಧಿಗೊಳಿಸಸಾಧ್ಯವಿದೆ” ಎಂದು ವೆಲ್‌ನೆಸ್‌ ಲೆಟರ್‌ ತಿಳಿಸುತ್ತದೆ. ತದ್ರೀತಿಯಲ್ಲಿ ಕೈಗಳನ್ನು ಮತ್ತು ಚಾಕುಗಳನ್ನು ಸಹ ಚೆನ್ನಾಗಿ ಉಜ್ಜಿತೊಳೆಯಬೇಕು ಮತ್ತು ಒರೆಸಬೇಕು. (g04 7/22)

ಲೋಕದ ಹೊಲಸು ಕೇರಿಗಳು ಉಲ್ಬಣಗೊಳ್ಳುತ್ತಿವೆ

ಲಂಡನ್‌ನ ದ ಗಾರ್ಡಿಯನ್‌ ವಾರ್ತಾಪತ್ರಿಕೆಯು, ಯು.ಎನ್‌. ವರದಿಯೊಂದನ್ನು ಉಲ್ಲೇಖಿಸುತ್ತಾ, ಸದ್ಯದ ಪ್ರಮಾಣವು ಮುಂದುವರಿಯುವಲ್ಲಿ, “30 ವರ್ಷಗಳೊಳಗೆ ಲೋಕದಲ್ಲಿರುವ ಮೂವರಲ್ಲಿ ಒಬ್ಬರು ಹೊಲಸು ಕೇರಿಗಳಲ್ಲಿ ವಾಸಿಸುವರು” ಎಂದು ತಿಳಿಸುತ್ತದೆ. ವಿಷಾದಕರವಾಗಿಯೇ, “ಈಗಾಗಲೇ 94 ಕೋಟಿ ಜನರು​—⁠ಲೋಕದ ಜನಸಂಖ್ಯೆಯ ಸುಮಾರು ಆರನೇ ಒಂದು ಭಾಗದಷ್ಟು ಮಂದಿ​—⁠ಹೊಲಸಾದ, ಅನಾರೋಗ್ಯಭರಿತ ಪ್ರದೇಶಗಳಲ್ಲಿ, ನೀರು, ನೈರ್ಮಲ್ಯ ವ್ಯವಸ್ಥೆ, ಸಾರ್ವಜನಿಕ ಸೌಕರ್ಯಗಳು ಅಥವಾ ಕಾನೂನಿನ ಭದ್ರತೆಯಿಲ್ಲದೆ ವಾಸಿಸುತ್ತಿದ್ದಾರೆ.” ಕೆನ್ಯದ ನೈರೋಬಿಯ ಕೇಬೇರಾ ಜಿಲ್ಲೆಯಲ್ಲಿ, ಸುಮಾರು 6,00,000 ಹೊಲಸು ಕೇರಿ ನಿವಾಸಿಗಳಿದ್ದಾರೆ. ಯು.ಎನ್‌. ಮಾನವ ವಸಾಹತುಗಳ ಕಾರ್ಯಕ್ರಮ ಯು.ಎನ್‌. ಇರುನೆಲೆಯ ನಿರ್ದೇಶಕರಾಗಿರುವ ಆ್ಯನಾ ಟೇಬೈಯೂಕಾರವರು ಹೇಳುವುದು: “ವಿಪರೀತ ಅಸಮತೆ ಹಾಗೂ ನಿರುದ್ಯೋಗವು ಜನರನ್ನು ಸಮಾಜವಿರೋಧಿ ನಡವಳಿಕೆಗೆ ನಡಿಸುತ್ತದೆ. ಹೊಲಸು ಕೇರಿಗಳು, ಎಲ್ಲ ದುಷ್ಟ ಘಟಕಗಳು ಒಟ್ಟುಗೂಡಿರುವ, ಶಾಂತಿ ಮತ್ತು ಭದ್ರತೆಗಳು ಅಪರೂಪವಾಗಿರುವ, ಮತ್ತು ಯುವ ಜನರನ್ನು ಸ್ವಲ್ಪವೂ ಸಂರಕ್ಷಿಸಲಾಗದಂಥ ಸ್ಥಳಗಳಾಗಿವೆ.” (g04 9/8)

ಕಲಿಕೆಗೆ ವಯಸ್ಸಿನ ಮಿತಿಯಿದೆಯೋ?

“ಆರು ವರ್ಷದ ಮಕ್ಕಳು [‘ಕೆನ್ಯದ ರಿಫ್ಟ್‌ ವ್ಯಾಲಿ ಪ್ರಾವಿನ್ಸ್‌’ನ ಪ್ರಾಥಮಿಕ ಶಾಲೆಯೊಂದರಲ್ಲಿ] ಪಾಠವನ್ನು ಕಲಿತುಕೊಳ್ಳುತ್ತಿರುವಾಗ, ಒಬ್ಬ ವಿದ್ಯಾರ್ಥಿಯು ಮಾತ್ರ ಬೇರೆಲ್ಲರಿಗಿಂತಲೂ ಎದ್ದುಕಾಣುತ್ತಾನೆ” ಎಂದು ನೈರೋಬಿಯ ಡೈಲಿ ನೇಷನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಈ ವಿದ್ಯಾರ್ಥಿಯು 84 ವರ್ಷ ಪ್ರಾಯದ ಒಬ್ಬ ವೃದ್ಧನಾಗಿದ್ದು, “ತಾನು ಬೈಬಲನ್ನು ಓದಸಾಧ್ಯವಾಗುವಂತೆ” ಇತ್ತೀಚಿಗೆ ಮೊದಲನೆಯ ತರಗತಿಗೆ ಸೇರಿಕೊಂಡಿದ್ದಾರೆ. ಇವರಿಗಿಂತ ಕೆಲವಾರು ತರಗತಿ ಮುಂದಿರುವಂಥ ಮೊಮ್ಮಕ್ಕಳಿದ್ದಾರೆ, ಆದರೂ ಇವರು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. “ಜನರು ನನಗೆ ಬೈಬಲಿನಲ್ಲಿರುವ ವಿಷಯಗಳನ್ನು ಹೇಳುತ್ತಿರುತ್ತಾರೆ, ಆದರೆ ಅವರು ಹೇಳುವುದು ಸತ್ಯವೊ ಅಲ್ಲವೊ ಎಂಬುದು ನನಗೆ ಗೊತ್ತಿಲ್ಲ, ಮತ್ತು ಸ್ವತಃ ನಾನೇ ‘ಪವಿತ್ರ ಪುಸ್ತಕ’ವನ್ನು ಓದಿ ಅದರಲ್ಲೇನಿದೆ ಎಂಬುದನ್ನು ಕಂಡುಕೊಳ್ಳಲು ಬಯಸುತ್ತೇನೆ” ಎಂದು ಆ ವ್ಯಕ್ತಿ ನೇಷನ್‌ ವಾರ್ತಾಪತ್ರಿಕೆಗೆ ತಿಳಿಸಿದರು. ಶಾಲೆಯ ಸಮವಸ್ತ್ರವನ್ನು ಧರಿಸಿಕೊಂಡು, ಅಗತ್ಯವಿರುವ ಎಲ್ಲಾ ಪಠ್ಯಪುಸ್ತಕಗಳನ್ನು ಮತ್ತು ಇತರ ವಸ್ತುಗಳೊಂದಿಗೆ ಸಜ್ಜಾಗಿ ಇವರು ಶಾಲೆಯ ಕಟ್ಟುನಿಟ್ಟಾದ ನಿಯಮಗಳಿಗೆ ತಮ್ಮಿಂದಾದಷ್ಟು ಮಟ್ಟಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೂ, ಕೆಲವೊಂದು ವಿಷಯಗಳಲ್ಲಿ ಅವರಿಗೆ ವಿನಾಯಿತಿಯು ನೀಡಲ್ಪಟ್ಟಿದೆ. ಬೇರೆ ವಿದ್ಯಾರ್ಥಿಗಳು ವ್ಯಾಯಾಮ ಮಾಡುತ್ತಿರುವಾಗ ಮತ್ತು ಓಡಾಡಿ ಆಟವಾಡುತ್ತಿರುವಾಗ, ಅವರಿಗೆ “ನಿಧಾನವಾಗಿ ತಮ್ಮ ಸ್ನಾಯುಗಳನ್ನು ಚಾಚುವ ಅನುಮತಿಯು ಕೊಡಲ್ಪಟ್ಟಿದೆ.” (g04 9/22)