ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಿಗ್ಮಿಗಳಿಗೆ ಬೈಬಲ್‌ ಸತ್ಯವನ್ನು ತಲಪಿಸುವುದು

ಪಿಗ್ಮಿಗಳಿಗೆ ಬೈಬಲ್‌ ಸತ್ಯವನ್ನು ತಲಪಿಸುವುದು

ಪಿಗ್ಮಿಗಳಿಗೆ ಬೈಬಲ್‌ ಸತ್ಯವನ್ನು ತಲಪಿಸುವುದು

ಕ್ಯಾಮರೂನ್‌ನಲ್ಲಿರುವ ಎಚ್ಚರ! ಲೇಖಕರಿಂದ

ಲೋಕದಾದ್ಯಂತ 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ, ದೇವರ ರಾಜ್ಯದ ಸಂದೇಶದೊಂದಿಗೆ ಯೆಹೋವನ ಸಾಕ್ಷಿಗಳು “ಎಲ್ಲಾ ಮನುಷ್ಯ”ರನ್ನು ತಲಪಲು ಪ್ರಯತ್ನಿಸುತ್ತಾರೆ. (1 ತಿಮೊಥೆಯ 2:4; ಮತ್ತಾಯ 24:14) ಇವರಲ್ಲಿ ಆಫ್ರಿಕದ ಪಿಗ್ಮಿಗಳೂ ಸೇರಿದ್ದಾರೆ. ಇವರು ಸರಾಸರಿ ನಾಲ್ಕರಿಂದ ನಾಲ್ಕೂವರೆ ಅಡಿಗಳಷ್ಟು ಎತ್ತರವಿರುವ ಗಿಡ್ಡ ಜನರಾಗಿದ್ದಾರೆ. ಬಹುಮಟ್ಟಿಗೆ ಇವರು ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌, ಕಾಂಗೊ ಪ್ರಾಂತ, ಮತ್ತು ನೈರುತ್ಯ ಕ್ಯಾಮರೂನ್‌ನ ದಟ್ಟವಾದ ಕಾಡುಗಳಲ್ಲಿ ವಾಸಿಸುತ್ತಾರೆ.

ಪಿಗ್ಮಿಗಳು ಮತ್ತು ಸಂದರ್ಶಕರ ನಡುವೆ ಪ್ರಥಮ ದಾಖಲಿತ ಮುಖಾಮುಖಿ ಭೇಟಿ ನಡೆದದ್ದು, ಈಜಿಪ್ಟ್‌ನ ನೆಫೆರಿರ್‌ಕರೆ ಎಂಬ ಫರೋಹನು ನೈಲ್‌ ನದಿಯ ಮೂಲವನ್ನು ಕಂಡುಹಿಡಿಯಲಿಕ್ಕಾಗಿ ವಿಶೇಷ ಕಾರ್ಯಾಚರಣೆಯ ತಂಡವನ್ನು ಕಳುಹಿಸಿದಾಗಲೇ. ಆಫ್ರಿಕದ ಒಳನಾಡಿನ ಕಾಡುಗಳಲ್ಲಿ, ಗಿಡ್ಡಾಕೃತಿಯ ಜನರನ್ನು ಸಂಧಿಸಿದ್ದಾಗಿ ಆ ಕಾರ್ಯಾಚರಣೆಯ ತಂಡವು ವರದಿಸಿತು. ತದನಂತರದ ಗ್ರೀಕ್‌ ಬರಹಗಾರನಾದ ಹೋಮರ್‌ ಮತ್ತು ತತ್ತ್ವಜ್ಞಾನಿಯಾದ ಅರಿಸ್ಟಾಟಲ್‌ ಸಹ ಪಿಗ್ಮಿಗಳ ಬಗ್ಗೆ ತಿಳಿಸಿದರು. ಯೂರೋಪಿನವರು 16 ಮತ್ತು 17ನೆಯ ಶತಮಾನಗಳಲ್ಲಿ ಈ ಜನರ ಸಂಪರ್ಕಕ್ಕೆ ಬಂದರು.

ಆಧುನಿಕ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳು ಆಫ್ರಿಕದ ಕಾಡುಗಳಲ್ಲಿ ಸಾರುವ ಕೆಲಸವನ್ನು ಮಾಡುತ್ತಿದ್ದಾರೆ. ಪಿಗ್ಮಿಗಳು ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿರುವುದಾದರೂ, ಅವರಲ್ಲಿ ಆಸಕ್ತರನ್ನು ಪುನಃ ಭೇಟಿಯಾಗಲು ಮಾಡಲ್ಪಡುವ ಪ್ರಯತ್ನಗಳು ಅತ್ಯಧಿಕ ಮಟ್ಟಿಗೆ ಅಸಫಲವಾಗಿವೆ. ಪಿಗ್ಮಿಗಳ ಅಲೆಮಾರಿ ಜೀವನ ರೀತಿಯೇ ಇದಕ್ಕೆ ಕಾರಣವಾಗಿದೆ; ಅವರು ಕೆಲವಾರು ತಿಂಗಳುಗಳಿಗೊಮ್ಮೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿರುತ್ತಾರೆ.

ಪಿಗ್ಮಿಗಳು ಶಾಂತಶೀಲರೂ ನಾಚಿಕೆ ಸ್ವಭಾವದವರೂ ಆಗಿ ಪ್ರಸಿದ್ಧರಾಗಿದ್ದಾರೆ. ಆಫ್ರಿಕದಲ್ಲಿ ಇವರ ಜನಸಂಖ್ಯೆ 1,50,000ದಿಂದ 3,00,000ದ ನಡುವೆ ಇದೆ ಎಂದು ಅಂದಾಜುಮಾಡಲಾಗಿದೆ. ಸರಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಚರ್ಚುಗಳು, ವಿಶೇಷವಾಗಿ ಪಿಗ್ಮಿಗಳ ಉಪಯೋಗಕ್ಕಾಗಿಯೇ ಶಾಲೆಗಳನ್ನು ನಿರ್ಮಿಸಿವೆ ಮತ್ತು ಇವರ ಜೀವನ ಶೈಲಿಗೆ ಸೂಕ್ತವಾಗಿರುವ ಚಿಕ್ಕ ಮನೆಗಳನ್ನು ಕಟ್ಟಿವೆ. ಆದರೂ, ಒಂದೇ ಸ್ಥಳದಲ್ಲಿ ನೆಲೆಸುವಂತೆ ಇವರನ್ನು ಆಕರ್ಷಿಸಲು ಮಾಡಲ್ಪಟ್ಟಿರುವ ಅನೇಕ ಪ್ರಯತ್ನಗಳು ಬಹುಮಟ್ಟಿಗೆ ಅಸಫಲವಾಗಿವೆ.

ಕ್ಯಾಮರೂನ್‌ನಲ್ಲಿ ಇದಕ್ಕೆ ಒಂದು ಗಮನಾರ್ಹ ವ್ಯತ್ಯಾಸದೋಪಾದಿ, ಸಾನ್‌ವ್ಯಾ ಬಾಂಕೀ ಎಂಬ ವ್ಯಕ್ತಿಯು ಪ್ರಥಮ ಪಿಗ್ಮಿ ಸಾಕ್ಷಿಯಾಗಿ ಪರಿಣಮಿಸಿದ್ದಾನೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ * ಎಂಬ ಸಚಿತ್ರ ಪುಸ್ತಕವನ್ನು ಹಾಗೂ ಇತರ ಪ್ರಕಾಶನಗಳನ್ನು ಓದಿದ ಬಳಿಕ ಇವನು ಬೈಬಲ್‌ ಸಂದೇಶವನ್ನು ಸ್ವೀಕರಿಸಿದನು. ಇಸವಿ 2002ರಲ್ಲಿ ಸಾನ್‌ವ್ಯಾ ದೀಕ್ಷಾಸ್ನಾನವನ್ನು ಪಡೆದುಕೊಂಡನು, ಮತ್ತು ಈಗ ಅವನು ಒಬ್ಬ ಪಯನೀಯರನಾಗಿ​—⁠ಯೆಹೋವನ ಸಾಕ್ಷಿಗಳು ತಮ್ಮ ಪೂರ್ಣ ಸಮಯದ ಸೌವಾರ್ತಿಕರನ್ನು ಹೀಗೆ ಕರೆಯುತ್ತಾರೆ​—⁠ಸೇವೆಮಾಡುತ್ತಿದ್ದಾನೆ. ಈ ದೇಶದ ನೈರುತ್ಯ ಭಾಗದಲ್ಲಿರುವ ಬಾಂಗ್‌ ಎಂಬ ಚಿಕ್ಕ ಪಟ್ಟಣದ ಕ್ರೈಸ್ತ ಸಭೆಯಲ್ಲಿ ಅವನು ಒಬ್ಬ ಶುಶ್ರೂಷಾ ಸೇವಕನೂ ಆಗಿದ್ದಾನೆ. ಕ್ಯಾಮರೂನ್‌ನಲ್ಲಿರುವ ಇನ್ನೂ ಹೆಚ್ಚು ಪಿಗ್ಮಿಗಳು, “ಎಲ್ಲಾ ಮನುಷ್ಯ”ರನ್ನು ಪ್ರೀತಿಸುವಂಥ ಏಕಮಾತ್ರ ಸತ್ಯ ದೇವರಾಗಿರುವ ಯೆಹೋವನನ್ನು ಆರಾಧಿಸುವ ಆಯ್ಕೆಮಾಡುವರೋ ಎಂಬುದನ್ನು ಸಮಯವೇ ಹೇಳುವುದು. (g04 8/22)

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶನಮಾಡಲ್ಪಟ್ಟಿದ್ದರೂ ಈಗ ಮುದ್ರಿಸಲ್ಪಡುತ್ತಿಲ್ಲ.

[ಪುಟ 28ರಲ್ಲಿರುವ ಚಿತ್ರ]

ಕ್ಯಾಮರೂನ್‌ನಲ್ಲಿ ಪ್ರಥಮ ಪಿಗ್ಮಿ ಸಾಕ್ಷಿಯಾಗಿ ಪರಿಣಮಿಸಿರುವ ಸಾನ್‌ವ್ಯಾ ಬಾಂಕೀಯು ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವುದು