ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ವಗ್ರಹದ ಅಂತ್ಯ

ಪೂರ್ವಗ್ರಹದ ಅಂತ್ಯ

ಪೂರ್ವಗ್ರಹದ ಅಂತ್ಯ

ನಮ್ಮಲ್ಲಿ ಪೂರ್ವಗ್ರಹದ ಪ್ರವೃತ್ತಿಗಳಿರುವುದನ್ನು ನಾವು ಗುರುತಿಸಬಲ್ಲೆವೋ? ಉದಾಹರಣೆಗೆ, ಒಬ್ಬ ವ್ಯಕ್ತಿಯ ಬಗ್ಗೆ ನಮಗೆ ಏನೂ ತಿಳಿಯದಿದ್ದರೂ ಅವನ ಮೈಬಣ್ಣ, ರಾಷ್ಟ್ರೀಯತೆ, ಬುಡಕಟ್ಟು, ಅಥವಾ ಕುಲವನ್ನು ನೋಡಿ, ಅವನು ಇಂಥದ್ದೇ ವ್ಯಕ್ತಿತ್ವವನ್ನು ಹೊಂದಿದ್ದಾನೆ ಎಂಬ ತೀರ್ಮಾನಕ್ಕೆ ನಾವು ಬರುತ್ತೇವೋ? ಅಥವಾ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಅಥವಾ ಅವಳ ವೈಯಕ್ತಿಕ ಗುಣಗಳಿಗಾಗಿ ನಾವು ಗಣ್ಯಮಾಡುತ್ತೇವೋ?

ಯೇಸುವಿನ ದಿನಗಳಲ್ಲಿ ಯೂದಾಯ ಮತ್ತು ಗಲಿಲಾಯದಲ್ಲಿ ವಾಸಿಸುತ್ತಿದ್ದ ಜನರಿಗೆ ಸಾಮಾನ್ಯವಾಗಿ ‘ಸಮಾರ್ಯದವರೊಂದಿಗೆ ಯಾವುದೇ ಬಳಿಕೆಯಿರಲಿಲ್ಲ.’ (ಯೋಹಾನ 4:⁠9) ಟಾಲ್ಮುಡ್‌ನಲ್ಲಿ ದಾಖಲಿಸಲ್ಪಟ್ಟ “ನಾನು ಎಂದಿಗೂ ಒಬ್ಬ ಸಮಾರ್ಯದವನನ್ನು ನೋಡುವುದೂ ಇಲ್ಲ” ಎಂಬ ನುಡಿಯು, ಅನೇಕ ಯೆಹೂದ್ಯರಿಗಿದ್ದ ಅನಿಸಿಕೆಯನ್ನು ವ್ಯಕ್ತಪಡಿಸಿತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಯೇಸುವಿನ ಅಪೊಸ್ತಲರು ಸಹ ಸಮಾರ್ಯದವರ ವಿರುದ್ಧ ನಿರ್ದಿಷ್ಟ ಮಟ್ಟದ ಪೂರ್ವಗ್ರಹವನ್ನು ಬೆಳೆಸಿಕೊಂಡಿದ್ದಿರಬಹುದು. ಒಂದು ಸಂದರ್ಭದಲ್ಲಿ ಸಮಾರ್ಯದವರ ಒಂದು ಹಳ್ಳಿಯು ಅವರನ್ನು ದಯೆಯಿಂದ ಸೇರಿಸಿಕೊಳ್ಳಲಿಲ್ಲ. ಆದುದರಿಂದ, ಪ್ರತಿಕ್ರಿಯೆ ತೋರಿಸದ ಈ ಜನರ ಮೇಲೆ ಬೆಂಕಿಬೀಳುವಂತೆ ತಾವು ಹೇಳಬೇಕೊ ಎಂದು ಯಾಕೋಬ ಯೋಹಾನರು ಕೇಳಿದರು. ಅವರನ್ನು ಗದರಿಸುವ ಮೂಲಕ ಅವರ ಮನೋಭಾವವು ಸರಿಯಾದದ್ದಲ್ಲ ಎಂಬುದನ್ನು ಯೇಸು ಅವರಿಗೆ ತೋರಿಸಿಕೊಟ್ಟನು.​—⁠ಲೂಕ 9:​52-56.

ಅನಂತರ, ಯೇಸು ಒಂದು ಸಾಮ್ಯವನ್ನು ಹೇಳಿದನು. ಯೆರೂಸಲೇಮಿನಿಂದ ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಆಕ್ರಮಣಕ್ಕೆ ಒಳಗಾದ ಒಬ್ಬ ಮನುಷ್ಯನ ಸಾಮ್ಯ ಅದಾಗಿತ್ತು. ಆ ದಾರಿಯಾಗಿ ಇಬ್ಬರು ಧಾರ್ಮಿಕ ಯೆಹೂದ್ಯರು ದಾಟಿಹೋದರೂ, ಅವರು ಅವನಿಗೆ ಸಹಾಯಮಾಡಲಿಲ್ಲ. ಆದರೆ ಒಬ್ಬ ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳನ್ನು ಕಟ್ಟಿದನು. ಅನಂತರ ಅವನು ತನ್ನ ಗಾಯಗಳಿಂದ ಗುಣಮುಖನಾಗುವ ತನಕ ಅವನನ್ನು ಆರೈಕೆಮಾಡುವುದಕ್ಕಾಗಿ ಏರ್ಪಾಡನ್ನು ಸಹ ಮಾಡಿದನು. ಈ ಸಮಾರ್ಯದವನು ತನ್ನನ್ನು ನಿಜವಾದ ನೆರೆಯವನನ್ನಾಗಿ ರುಜುಪಡಿಸಿದನು. (ಲೂಕ 10:​29-37) ತಮ್ಮಲ್ಲಿರುವ ಪೂರ್ವಗ್ರಹವು ಇತರರಲ್ಲಿದ್ದ ಒಳ್ಳೆಯ ಗುಣಗಳ ಕಡೆಗೆ ತಮ್ಮನ್ನು ಕರುಡುಗೊಳಿಸಿದೆ ಎಂಬುದನ್ನು ಯೇಸುವಿನ ಕೇಳುಗರು ಗ್ರಹಿಸುವಂತೆ ಅವನ ಸಾಮ್ಯವು ಅವರಿಗೆ ಸಹಾಯಮಾಡಿರಬಹುದು. ಕೆಲವು ವರುಷಗಳ ಅನಂತರ, ಯೋಹಾನನು ಸಮಾರ್ಯಕ್ಕೆ ಹಿಂದಿರುಗಿ ಅಲ್ಲಿನ ಅನೇಕ ಹಳ್ಳಿಗಳಲ್ಲಿ ಸಾರಿದನು. ಬಹುಶಃ ಇದರಲ್ಲಿ, ಒಮ್ಮೆ ಅವನು ನಾಶವಾಗಿ ಹೋಗಲಿ ಎಂದು ಆಶಿಸಿದ ಆ ಹಳ್ಳಿಯೂ ಸೇರಿರಬಹುದು.​—⁠ಅ. ಕೃತ್ಯಗಳು 8:​14-17, 25.

ಒಬ್ಬ ರೋಮನ್‌ ಶತಾಧಿಪತಿಯಾಗಿದ್ದ ಕೊರ್ನೇಲ್ಯನ ಬಳಿಗೆ ಹೋಗಿ ಯೇಸುವಿನ ಕುರಿತು ಮಾತಾಡುವಂತೆ ಒಬ್ಬ ದೇವದೂತನು ನಿರ್ದೇಶಿಸಿದಾಗ, ಅಪೊಸ್ತಲ ಪೇತ್ರನು ಸಹ ಪಕ್ಷಪಾತವಿಲ್ಲದೆ ಕ್ರಿಯೆಗೈಯಬೇಕಿತ್ತು. ಅಷ್ಟರ ತನಕ ಪೇತ್ರನಿಗೆ ಯೆಹೂದ್ಯೇತರರೊಂದಿಗೆ ವ್ಯವಹರಿಸುವ ಯಾವುದೇ ರೂಢಿಯಿರಲಿಲ್ಲ, ಮತ್ತು ಹೆಚ್ಚಿನ ಯೆಹೂದ್ಯರಿಗೆ ರೋಮನ್‌ ಸೈನಿಕರ ಬಗ್ಗೆ ಕಿಂಚಿತ್ತೂ ಪ್ರೀತಿಯಿರಲಿಲ್ಲ. (ಅ. ಕೃತ್ಯಗಳು 10:28) ಆದರೆ ಈ ವಿಷಯದಲ್ಲಿ ದೇವರ ನಿರ್ದೇಶನವನ್ನು ಪೇತ್ರನು ಕಂಡಾಗ ಅವನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”​—⁠ಅ. ಕೃತ್ಯಗಳು 10:​34, 35.

ಪೂರ್ವಗ್ರಹದ ವಿರುದ್ಧ ಹೋರಾಡಲು ಪ್ರೇರಣೆ

ಪೂರ್ವಗ್ರಹವು ಯೇಸು ಕಲಿಸಿಕೊಟ್ಟ ಈ ಒಂದು ಪ್ರಾಮುಖ್ಯ ಮೂಲತತ್ತ್ವವನ್ನು ಉಲ್ಲಂಘಿಸುತ್ತದೆ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ತಮ್ಮ ಜನ್ಮಸ್ಥಳ, ಮೈಬಣ್ಣ, ಅಥವಾ ಹಿನ್ನೆಲೆಯ ಕಾರಣದಿಂದಾಗಿ ಯಾರು ತಾನೇ ತುಚ್ಛೀಕರಿಸಲ್ಪಡಲು ಬಯಸುತ್ತಾರೆ? ಪೂರ್ವಗ್ರಹವು, ಯೆಹೋವನ ನಿಷ್ಪಕ್ಷಪಾತದ ಕುರಿತಾದ ಮಟ್ಟಗಳನ್ನು ಸಹ ಉಲ್ಲಂಘಿಸುತ್ತದೆ. ಯೆಹೋವನು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ”ದನು ಎಂದು ಬೈಬಲ್‌ ಕಲಿಸುತ್ತದೆ. (ಅ. ಕೃತ್ಯಗಳು 17:26) ಆದುದರಿಂದ, ಎಲ್ಲಾ ಮನುಷ್ಯರು ಸಹೋದರರಾಗಿದ್ದಾರೆ.

ಅಷ್ಟುಮಾತ್ರವಲ್ಲದೆ, ದೇವರು ಪ್ರತಿಯೊಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ತೀರ್ಪುಮಾಡುತ್ತಾನೆ. ಅವನ ಅಥವಾ ಅವಳ ಹೆತ್ತವರು ಇಲ್ಲವೆ ಪೂರ್ವಿಕರು ಏನು ಮಾಡಿದರೋ ಅದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನು ದಂಡನೆಗೆ ಗುರಿಮಾಡುವುದಿಲ್ಲ. (ಯೆಹೆಜ್ಕೇಲ 18:20; ರೋಮಾಪುರ 2:6) ಇನ್ನೊಂದು ರಾಷ್ಟ್ರವು ನಡೆಸುವ ದಬ್ಬಾಳಿಕೆಯು ಸಹ ಆ ರಾಷ್ಟ್ರಕ್ಕೆ ಸೇರಿದ, ಆದರೆ ಆ ಅನ್ಯಾಯಕ್ಕೆ ವೈಯಕ್ತಿಕವಾಗಿ ಜವಾಬ್ದಾರರಲ್ಲದ ವ್ಯಕ್ತಿಗಳನ್ನು ಹಗೆಮಾಡಲು ನಮಗೆ ಸಕಾರಣವನ್ನು ನೀಡುವುದಿಲ್ಲ. ಯೇಸು ತನ್ನ ಹಿಂಬಾಲಕರಿಗೆ, ಅವರು ‘ತಮ್ಮ ವೈರಿಗಳನ್ನು ಪ್ರೀತಿಸಿ, ಅವರನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸುವಂತೆ’ ಕಲಿಸಿದನು.​—⁠ಮತ್ತಾಯ 5:​44, 45.

ಇಂಥ ಬೋಧನೆಗಳ ಕಾರಣ ಪ್ರಥಮ ಶತಮಾನದ ಕ್ರೈಸ್ತರು, ಪೂರ್ವಗ್ರಹವನ್ನು ತೆಗೆದುಹಾಕಶಕ್ತರಾದರು ಮತ್ತು ಒಂದು ಅದ್ವಿತೀಯ ಅಂತಾರಾಷ್ಟ್ರೀಯ ಸಹೋದರತ್ವವಾದರು. ಅವರು ವಿಭಿನ್ನ ಸಂಸ್ಕೃತಿಗಳಿಂದ ಬಂದವರಾದರೂ ಒಬ್ಬರನ್ನೊಬ್ಬರು ಸಹೋದರ ಸಹೋದರಿಯರೆಂದು ಕರೆದರು ಮತ್ತು ಅಂತೆಯೇ ಪರಿಗಣಿಸಿದರು. (ಕೊಲೊಸ್ಸೆ 3:9-11; ಯಾಕೋಬ 2:5; 4:11) ಈ ರೀತಿಯ ಪರಿವರ್ತನೆಯನ್ನು ಸಾಧ್ಯಗೊಳಿಸಿದ ಮೂಲತತ್ತ್ವಗಳು ಇಂದು ಸಹ ಅದೇ ಪ್ರಯೋಜನಗಳನ್ನು ತರಬಲ್ಲವು.

ಇಂದು ಪೂರ್ವಗ್ರಹದ ವಿರುದ್ಧ ಹೋರಾಡುವುದು

ಹೆಚ್ಚುಕಡಿಮೆ ನಮ್ಮಲ್ಲಿ ಎಲ್ಲರಲ್ಲಿಯೂ ಪೂರ್ವಕಲ್ಪಿತ ವಿಚಾರಗಳಿರುತ್ತವೆ, ಆದರೆ ಇವೆಲ್ಲವು ಪೂರ್ವಗ್ರಹಕ್ಕೆ ನಡೆಸುತ್ತವೆ ಎಂದು ಇದರ ಅರ್ಥವಲ್ಲ. “ಸರಿಯಾದ ಮಾಹಿತಿ ಸಿಕ್ಕಿದ ಮೇಲೆಯೂ ವ್ಯಕ್ತಿಯೊಬ್ಬನು ತನ್ನ ಪೂರ್ವತೀರ್ಮಾನವನ್ನು ಬದಲಾಯಿಸದೆ ಅದಕ್ಕೇ ಅಂಟಿಕೊಂಡರೆ ಆಗ ಅದು ಪೂರ್ವಗ್ರಹವಾಗಿ ಬದಲಾಗುತ್ತದೆ,” ಎಂದು ಪೂರ್ವಗ್ರಹದ ಸ್ವಭಾವ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. ಅನೇಕವೇಳೆ, ಜನರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡರೆ ಪೂರ್ವಗ್ರಹವನ್ನು ತೆಗೆದುಹಾಕಸಾಧ್ಯವಿದೆ. ಆದರೆ ಅದೇ ಪುಸ್ತಕವು ತಿಳಿಸುವುದು, “ಜನರು ಒಟ್ಟಾಗಿ ವಿಷಯಗಳನ್ನು ಮಾಡುವಂತೆ ನಡೆಸುವಂಥ ಸಂಬಂಧವು ಮಾತ್ರ ಮನೋಭಾವಗಳಲ್ಲಿ ಬದಲಾವಣೆಯನ್ನು ಉಂಟುಮಾಡಶಕ್ತವಾಗಿರುತ್ತದೆ.”

ನೈಜಿರೀಯದ ಇಬೋ ಕುಲಕ್ಕೆ ಸೇರಿದ ಜಾನ್‌, ಹೌಸಾ ಕುಲದವರ ವಿರುದ್ಧ ಅವನಿಗಿದ್ದ ಪೂರ್ವಗ್ರಹವನ್ನು ತೆಗೆದುಹಾಕಶಕ್ತನಾದದ್ದು ಹೀಗೆಯೇ. ಅವನು ಹೇಳುವುದು: “ವಿಶ್ವವಿದ್ಯಾನಿಲಯದಲ್ಲಿ ನಾನು ಹೌಸಾ ಕುಲಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಭೇಟಿಯಾದೆ. ಅವರು ನನ್ನ ಸ್ನೇಹಿತರಾದರು ಮತ್ತು ಅವರಲ್ಲಿ ಉತ್ತಮ ನೀತಿತತ್ತ್ವಗಳಿದ್ದವು ಎಂದು ನಾನು ಕಂಡುಕೊಂಡೆ. ನಾನು ಮತ್ತು ಒಬ್ಬ ಹೌಸಾ ವಿದ್ಯಾರ್ಥಿಯು ಒಟ್ಟಾಗಿ ಒಂದು ಪ್ರಾಜೆಕ್ಟ್‌ನಲ್ಲಿ ಕೆಲಸಮಾಡಿದೆವು. ನಮ್ಮ ಮಧ್ಯೆ ಒಂದು ಅತ್ಯುತ್ತಮ ಸ್ನೇಹ ಸಂಬಂಧವಿತ್ತು; ಆದರೆ ಇದಕ್ಕಿಂತ ಮುಂಚೆ ನನ್ನೊಂದಿಗೆ ಕೆಲಸಮಾಡುತ್ತಿದ್ದವನು ಇಬೋ ವಿದ್ಯಾರ್ಥಿಯಾಗಿದ್ದರೂ, ಅವನು ತನ್ನ ಸ್ವಂತ ಜವಾಬ್ದಾರಿಯನ್ನು ನಿರ್ವಹಿಸುತ್ತಿರಲಿಲ್ಲ.”

ಪೂರ್ವಗ್ರಹದ ವಿರುದ್ಧ ಹೋರಾಡಲು ಒಂದು ಸಾಧನ

ಜಾತೀಯತೆಯ ವಿರುದ್ಧ ಯೂನೆಸ್ಕೊ (ಇಂಗ್ಲಿಷ್‌) ಎಂಬ ವರದಿಗನುಸಾರ “ಜಾತೀಯತೆ, ಭೇದಭಾವ, ಮತ್ತು ಸಮಾಜದಿಂದ ಬಹಿಷ್ಕಾರ ಮುಂತಾದ ವಿಷಯಗಳ ವಿರುದ್ಧ ಹೋರಾಡಲು ಶಿಕ್ಷಣವೇ ಅಮೂಲ್ಯ ಸಾಧನವಾಗಿರಬಲ್ಲದು.” ಈ ವಿಷಯದಲ್ಲಿ ಬೈಬಲ್‌ ಶಿಕ್ಷಣವು ಅತ್ಯುತ್ತಮವಾಗಿದೆ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. (ಯೆಶಾಯ 48:​17, 18) ಬೈಬಲಿನ ಬೋಧನೆಗಳನ್ನು ಜನರು ಅನ್ವಯಿಸುವಾಗ, ಸಂಶಯದ ಸ್ಥಳದಲ್ಲಿ ಗೌರವ ಇರುತ್ತದೆ, ಮತ್ತು ಹಗೆಯನ್ನು ಪ್ರೀತಿಯು ಆರಿಸುತ್ತದೆ.

ತಮ್ಮಲ್ಲಿರುವ ಪೂರ್ವಗ್ರಹವನ್ನು ತೆಗೆದುಹಾಕಲು ಬೈಬಲ್‌ ತಮಗೆ ಸಹಾಯಮಾಡುತ್ತಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ. ವಿಭಿನ್ನ ಸಂಸ್ಕೃತಿಗಳ ಮತ್ತು ಜನಾಂಗೀಯ ಜನರೊಂದಿಗೆ ಸೇರಿ ಕೆಲಸಮಾಡುವಂಥ ಪ್ರಚೋದನೆಯನ್ನು ಮತ್ತು ಸಂದರ್ಭವನ್ನು ಬೈಬಲ್‌ ಅವರಿಗೆ ನೀಡುತ್ತದೆ. ಈ ಲೇಖನಮಾಲೆಯ ಮೊದಲ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಕ್ರಿಸ್ಟೀನಾ, ಒಬ್ಬಾಕೆ ಯೆಹೋವನ ಸಾಕ್ಷಿಯಾಗಿದ್ದಾಳೆ. ಅವಳು ಹೇಳುವುದು: “ರಾಜ್ಯ ಸಭಾಗೃಹದಲ್ಲಿನ ನಮ್ಮ ಕೂಟಗಳು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ನನಗೆ ಅಲ್ಲಿ ಭದ್ರತೆಯ ಅನಿಸಿಕೆಯಾಗುತ್ತದೆ, ಏಕೆಂದರೆ ಅಲ್ಲಿ ಯಾರೂ ನನ್ನ ಕಡೆಗೆ ಪೂರ್ವಗ್ರಹವುಳ್ಳವರಾಗಿದ್ದಾರೆಂಬ ಭಾವನೆ ನನಗಾಗುವುದಿಲ್ಲ.”

ಜಾಸ್ಮಿನ್‌ ಎಂಬವಳು ಸಹ ಒಬ್ಬಾಕೆ ಯೆಹೋವನ ಸಾಕ್ಷಿಯಾಗಿದ್ದಾಳೆ. ಅವಳು ಕೇವಲ ಒಂಬತ್ತು ವರುಷ ಪ್ರಾಯದವಳಾಗಿದ್ದಾಗ ಮೊದಲ ಬಾರಿ ಜಾತೀಯತೆಯ ಸಮಸ್ಯೆಗೆ ಗುರಿಯಾದದ್ದನ್ನು ಜ್ಞಾಪಿಸಿಕೊಳ್ಳುತ್ತಾಳೆ. ಅವಳು ಹೇಳುವುದು: “ನನಗೆ ವಾರದಲ್ಲಿನ ಅತಿ ಸಂತೋಷಕರ ದಿವಸವೆಂದರೆ ಗುರುವಾರ, ಏಕೆಂದರೆ ಅಂದು ಸಾಯಂಕಾಲ ನಾನು ರಾಜ್ಯ ಸಭಾಗೃಹಕ್ಕೆ ಹೋಗುತ್ತೇನೆ. ಅಲ್ಲಿ ಜನರು ನನಗೆ ಪ್ರೀತಿಯನ್ನು ತೋರಿಸುತ್ತಾರೆ. ನಾನು ಕಡೆಗಣಿಸಲ್ಪಟ್ಟವಳಲ್ಲ, ಬದಲಾಗಿ ತುಂಬ ವಿಶೇಷ ವ್ಯಕ್ತಿಯಾಗಿದ್ದೇನೆ ಎಂಬ ಭಾವನೆಯನ್ನು ಅವರು ನನ್ನಲ್ಲಿ ಮೂಡಿಸುತ್ತಾರೆ.”

ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುವ ಸ್ವಯಂಸೇವಕ ಚಟುವಟಿಕೆಗಳು ಸಹ ವಿಭಿನ್ನ ಹಿನ್ನೆಲೆಗಳ ಜನರನ್ನು ಒಟ್ಟುಗೂಡಿಸುತ್ತವೆ. ಸೈಮನ್‌ನ ಕುಟುಂಬದವರು ಕೆರಿಬೀಯನ್‌ ದ್ವೀಪದಿಂದ ಬಂದವರಾಗಿದ್ದರೂ ಅವನು ಬ್ರಿಟನ್‌ನಲ್ಲಿ ಜನಿಸಿದನು. ಇಟ್ಟಿಗೆಗಾರನಾಗಿ ಐಹಿಕ ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಕೆಲಸಮಾಡುವಾಗ ಅವನು ಬಹಳಷ್ಟು ಪೂರ್ವಗ್ರಹವನ್ನು ಎದುರಿಸಿದ್ದಾನೆ. ಆದರೆ ಸ್ವಯಂಸೇವಕ ಪ್ರಾಜೆಕ್ಟ್‌ಗಳಲ್ಲಿ ತನ್ನ ಆಧ್ಯಾತ್ಮಿಕ ಸಹೋದರರೊಂದಿಗೆ ಕೆಲಸಮಾಡಿದ ವರ್ಷಗಳಲ್ಲಿ ಇದು ಸಂಭವಿಸಲಿಲ್ಲ. ಸೈಮನ್‌ ತಿಳಿಸುವುದು: “ಅನೇಕ ದೇಶಗಳಲ್ಲಿರುವ ಜೊತೆ ಸಾಕ್ಷಿಗಳೊಂದಿಗೆ ನಾನು ಕೆಲಸಮಾಡಿದೆ. ಆದರೆ, ನಾವು ಒಬ್ಬರು ಇನ್ನೊಬ್ಬರೊಂದಿಗೆ ಹೊಂದಿಕೊಂಡು ಹೋಗಲು ಕಲಿತೆವು. ನಾನು ಮಾಡಿಕೊಂಡ ಅತಿ ಆಪ್ತ ಸ್ನೇಹಿತರಲ್ಲಿ ಕೆಲವರು ಬೇರೆ ದೇಶಗಳವರು ಮತ್ತು ಬೇರೆ ಹಿನ್ನೆಲೆಗಳವರಾಗಿದ್ದರು.”

ಯೆಹೋವನ ಸಾಕ್ಷಿಗಳು ಸಹ ಅಪರಿಪೂರ್ಣ ಜನರಾಗಿದ್ದಾರೆ. ಆದುದರಿಂದ, ಅವರು ಸಹ ಪೂರ್ವಗ್ರಹದ ಪ್ರವೃತ್ತಿಯ ವಿರುದ್ಧ ಹೋರಾಡುತ್ತಾ ಇರಬೇಕಾಗಬಹುದು. ಆದರೆ, ದೇವರು ನಿಷ್ಪಕ್ಷಪಾತಿ ಎಂಬುದನ್ನು ತಿಳಿದಿರುವುದು ತಾನೇ ಹಾಗೆ ಮಾಡಲು ಅವರಿಗೆ ಒಂದು ಪ್ರಬಲ ಪ್ರಚೋದನೆಯನ್ನು ನೀಡುತ್ತದೆ.​—⁠ಎಫೆಸ 5:​1, 2.

ಪೂರ್ವಗ್ರಹದ ವಿರುದ್ಧ ಹೋರಾಡುವುದರಿಂದ ಬರುವ ಪ್ರತಿಫಲಗಳಾದರೊ ಅನೇಕ. ಇತರ ಹಿನ್ನೆಲೆಗಳ ಜನರೊಂದಿಗೆ ನಾವು ಬೆರೆಯುವಾಗ, ನಮ್ಮ ಜೀವಿತವು ಆಸಕ್ತಿಕರವಾಗುತ್ತದೆ. ಅಷ್ಟುಮಾತ್ರವಲ್ಲದೆ, ತನ್ನ ರಾಜ್ಯದ ಮೂಲಕ ದೇವರು ಬೇಗನೆ, ನೀತಿಯು ವಾಸವಾಗಿರುವ ಮಾನವ ಸಮಾಜವನ್ನು ಸ್ಥಾಪಿಸಲಿದ್ದಾನೆ. (2 ಪೇತ್ರ 3:13) ಆಗ ಪೂರ್ವಗ್ರಹವು ಸಂಪೂರ್ಣವಾಗಿ ಜಯಿಸಲ್ಪಡುವುದು. (g04 9/8)

[ಪುಟ 11ರಲ್ಲಿರುವ ಚೌಕ]

ನನ್ನಲ್ಲಿ ಪೂರ್ವಗ್ರಹ ಇದೆಯೊ?

ನಿಮಗರಿವಿಲ್ಲದೆಯೇ ನೀವು ಪೂರ್ವಗ್ರಹವನ್ನು ಇಟ್ಟುಕೊಂಡಿದ್ದೀರೊ ಎಂಬುದನ್ನು ಸ್ವತಃ ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ಪರೀಕ್ಷಿಸಿಕೊಳ್ಳಿರಿ:

1. ನಿರ್ದಿಷ್ಟ ಜನಾಂಗೀಯ ಹಿನ್ನೆಲೆ, ಸ್ಥಳ, ಅಥವಾ ರಾಷ್ಟ್ರದ ಜನರಲ್ಲಿ ಮೂರ್ಖತನ, ಸೋಮಾರಿತನ, ಅಥವಾ ಜಿಪುಣತೆ ಎಂಬ ಅಪ್ರಿಯ ಗುಣಗಳಿವೆ ಎಂದು ನಾನು ನೆನಸುತ್ತೇನೊ? (ಅನೇಕ ಜೋಕ್‌ಗಳು ಈ ರೀತಿಯ ಪೂರ್ವಗ್ರಹವನ್ನು ಉತ್ತೇಜಿಸುತ್ತವೆ.)

2. ನನ್ನ ಆರ್ಥಿಕ ಅಥವಾ ಸಾಮಾಜಿಕ ಸಮಸ್ಯೆಗಳಿಗಾಗಿ, ವಲಸೆಗಾರರನ್ನು ಅಥವಾ ಇನ್ನೊಂದು ಕುಲಕ್ಕೆ ಸೇರಿದ ಜನರನ್ನು ಆಪಾದಿಸುವ ಪ್ರವೃತ್ತಿ ನನಗಿದೆಯೋ?

3. ನನ್ನ ಪ್ರಾಂತದಲ್ಲಿರುವ ಜನರಿಗೆ ಇನ್ನೊಂದು ರಾಷ್ಟ್ರದ ಕಡೆಗಿರುವ ಐತಿಹಾಸಿಕ ವೈರತ್ವವು, ಆ ರಾಷ್ಟ್ರದ ಜನರ ಕಡೆಗೆ ನನ್ನಲ್ಲಿ ಹಗೆತನದ ಭಾವನೆಯನ್ನು ಹುಟ್ಟಿಸುವಂತೆ ನಾನು ಅನುಮತಿಸಿದ್ದೇನೋ?

4. ನಾನು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯ ಮೈಬಣ್ಣ, ಸಂಸ್ಕೃತಿ, ಅಥವಾ ಕುಲಸಂಬಂಧಿತ ಹಿನ್ನೆಲೆಯು ಏನೇ ಆಗಿರುವುದಾದರೂ, ಆ ವ್ಯಕ್ತಿಯನ್ನು ನಾನು ವೈಯಕ್ತಿಕವಾಗಿ ಪರಿಗಣಿಸುವ ಸಾಮರ್ಥ್ಯವುಳ್ಳವನಾಗಿದ್ದೇನೋ?

5. ನನ್ನ ಸ್ವಂತ ಸಾಂಸ್ಕೃತಿಕ ಹಿನ್ನೆಲೆಗಿಂತ ಭಿನ್ನವಾದ ಹಿನ್ನೆಲೆಯುಳ್ಳ ಜನರ ಕುರಿತು ತಿಳಿದುಕೊಳ್ಳಲು ಸಿಗುವ ಅವಕಾಶವನ್ನು ನಾನು ಉಪಯೋಗಿಸಿಕೊಳ್ಳುತ್ತೇನೋ? ಹೀಗೆ ಮಾಡಲು ನಾನು ಪ್ರಯತ್ನವನ್ನು ಮಾಡುತ್ತೇನೋ?

[ಪುಟ 8ರಲ್ಲಿರುವ ಚಿತ್ರ]

ಪೂರ್ವಗ್ರಹವನ್ನು ಹೇಗೆ ಜಯಿಸುವುದು ಎಂಬುದನ್ನು ಒಳ್ಳೇ ಸಮಾರ್ಯದವನ ಸಾಮ್ಯದಲ್ಲಿ ಯೇಸು ನಮಗೆ ಕಲಿಸಿಕೊಟ್ಟನು

[ಪುಟ 8ರಲ್ಲಿರುವ ಚಿತ್ರ]

ಕೊರ್ನೇಲ್ಯನ ಮನೆಯಲ್ಲಿ ಪೇತ್ರನು ಹೇಳಿದ್ದು: ‘ದೇವರು ಪಕ್ಷಪಾತಿಯಲ್ಲವೆಂಬುದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ’

[ಪುಟ 9ರಲ್ಲಿರುವ ಚಿತ್ರ]

ವಿಭಿನ್ನ ಹಿನ್ನೆಲೆಗಳ ಜನರನ್ನು ಬೈಬಲ್‌ ಬೋಧನೆಯು ಐಕ್ಯಗೊಳಿಸುತ್ತದೆ

[ಪುಟ 9ರಲ್ಲಿರುವ ಚಿತ್ರ]

ತಾವು ಕಲಿತ ವಿಷಯವನ್ನು ಯೆಹೋವನ ಸಾಕ್ಷಿಗಳು ಕಾರ್ಯರೂಪಕ್ಕೆ ಹಾಕುತ್ತಾರೆ

[ಪುಟ 10ರಲ್ಲಿರುವ ಚಿತ್ರ]

ಕ್ರಿಸ್ಟೀನಾ—“ರಾಜ್ಯ ಸಭಾಗೃಹದಲ್ಲಿನ ಕೂಟಗಳು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ”

[ಪುಟ 10ರಲ್ಲಿರುವ ಚಿತ್ರ]

ಜಾಸ್ಮಿನ್‌—“ಜನರು ನನಗೆ ಪ್ರೀತಿಯನ್ನು ತೋರಿಸುತ್ತಾರೆ. ನಾನು ಕಡೆಗಣಿಸಲ್ಪಟ್ಟವಳಲ್ಲ, ಬದಲಾಗಿ ವಿಶೇಷ ವ್ಯಕ್ತಿಯಾಗಿದ್ದೇನೆ ಎಂಬ ಭಾವನೆಯನ್ನು ಅವರು ನನ್ನಲ್ಲಿ ಮೂಡಿಸುತ್ತಾರೆ”

[ಪುಟ 10ರಲ್ಲಿರುವ ಚಿತ್ರಗಳು]

ಸೈಮನ್‌, ನಿರ್ಮಾಣ ಕಾರ್ಯದ ಒಬ್ಬ ಸ್ವಯಂಸೇವಕ—“ನಾವು ಒಬ್ಬರು ಇನ್ನೊಬ್ಬರೊಂದಿಗೆ ಹೊಂದಿಕೊಂಡು ಹೋಗಲು ಕಲಿತೆವು”