ಪೂರ್ವಗ್ರಹದ ಕಾರಣಗಳು
ಪೂರ್ವಗ್ರಹದ ಕಾರಣಗಳು
ಪೂರ್ವಗ್ರಹಕ್ಕೆ ಅನೇಕ ಕಾರಣಗಳಿರಬಹುದು. ಹಾಗಿದ್ದರೂ, ರುಜುವಾಗಿರುವ ಎರಡು ಕಾರಣಗಳು ಯಾವವೆಂದರೆ, (1) ಆರೋಪವನ್ನು ಹೊರಿಸಲಿಕ್ಕಾಗಿ ಯಾವುದಾದರೊಂದು ಬಲಿಪಶುವನ್ನು ಕಂಡುಹಿಡಿಯುವ ಇಚ್ಛೆ, ಮತ್ತು (2) ಹಿಂದೆ ಸಂಭವಿಸಿದ ಅನ್ಯಾಯಗಳ ಕಾರಣ ಉಂಟಾದ ಕ್ರೋಧ.
ಹಿಂದಿನ ಲೇಖನದಲ್ಲಿ ಗಮನಿಸಲಾದಂತೆ, ಒಂದು ವಿಪತ್ತು ಸಂಭವಿಸುವಾಗ ಅದಕ್ಕಾಗಿ ಆರೋಪ ಹೊರಿಸಲು ಅನೇಕವೇಳೆ ಜನರು ಯಾರಾದರೊಬ್ಬರನ್ನು ಹುಡುಕುತ್ತಾರೆ. ಗಣ್ಯ ವ್ಯಕ್ತಿಗಳು ಒಂದು ಅಲ್ಪಸಂಖ್ಯಾತ ಗುಂಪಿನ ಕುರಿತು ಪದೇಪದೇ ಆರೋಪ ಹೊರಿಸುವಾಗ, ಅದನ್ನು ಜನರು ಅಂಗೀಕರಿಸುತ್ತಾರೆ ಮತ್ತು ಈ ಮೂಲಕ ಪೂರ್ವಗ್ರಹವು ಹುಟ್ಟುತ್ತದೆ. ಒಂದು ಸಾಮಾನ್ಯ ಉದಾಹರಣೆಯನ್ನು ಉಲ್ಲೇಖಿಸಬೇಕಾದರೆ, ಪಾಶ್ಚಾತ್ಯ ದೇಶಗಳಲ್ಲಿ ಆರ್ಥಿಕ ಮಟ್ಟವು ಕುಸಿದಾಗ ವಲಸೆಗಾರ ಕಾರ್ಮಿಕರೇ ನಿರುದ್ಯೋಗಕ್ಕೆ ಕಾರಣರೆಂದು ಪದೇಪದೇ ದೂರಲಾಗುತ್ತದೆ. ಆದರೆ ವಾಸ್ತವದಲ್ಲಿ ಆ ವಲಸೆಗಾರರು, ಅನೇಕವೇಳೆ ಹೆಚ್ಚಿನ ಸ್ಥಳಿಕ ಜನರು ನಿರಾಕರಿಸುವಂಥ ಕೆಲಸಗಳನ್ನು ಮಾಡುತ್ತಿರುತ್ತಾರೆ.
ಆದರೆ ಎಲ್ಲಾ ಪೂರ್ವಗ್ರಹವು, ಆರೋಪವನ್ನು ಹೊರಿಸಲಿಕ್ಕಾಗಿ ಒಂದು ಬಲಿಪಶುವಿನ ಹುಡುಕಾಟದಿಂದ ಉಂಟಾಗುವುದಿಲ್ಲ. ಇದಕ್ಕೆ, ಪೂರ್ವದಲ್ಲಿ ಸಂಭವಿಸಿದ ಘಟನೆಗಳು ಕಾರಣವಾಗಿರಬಹುದು. “ಗುಲಾಮ ವ್ಯಾಪಾರವು ಜಾತೀಯತೆಯನ್ನು ಮತ್ತು ಕರಿಯರ ಕಡೆಗಿನ ಸಾಂಸ್ಕೃತಿಕ ಕೀಳ್ಭಾವನೆಯನ್ನು ಉಂಟುಮಾಡಿದೆ ಎಂದು ಹೇಳುವುದು ಒಂದು ಅತಿಶಯೋಕ್ತಿಯಲ್ಲ,” ಎಂದು ಜಾತೀಯತೆಯ ವಿರುದ್ಧ ಯೂನೆಸ್ಕೊ ಎಂಬ ವರದಿ ಹೇಳುತ್ತದೆ. ಗುಲಾಮರ ವ್ಯಾಪಾರಿಗಳು, ಆಫ್ರಿಕದವರು ಕೀಳ್ಮಟ್ಟದ ಜನರು ಎಂದು ಹೇಳುವ ಮೂಲಕ ಮನುಷ್ಯರನ್ನು ವ್ಯಾಪಾರಮಾಡುವ ತಮ್ಮ ನಾಚಿಕೆಗೇಡು ಕೃತ್ಯವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದರು. ನಿರಾಧಾರವುಳ್ಳ ಈ ಪೂರ್ವಗ್ರಹವು ಕಾಲಕ್ರಮೇಣ ಇತರ ಜನರಲ್ಲಿಯೂ ಹರಡಿತು ಮತ್ತು ಇಂದೂ ಅಸ್ತಿತ್ವದಲ್ಲಿದೆ.
ಲೋಕದ ಸುತ್ತಲೂ ಪೂರ್ವಕಾಲಗಳಲ್ಲಿ ನಡೆದಿರುವ ಇದೇ ರೀತಿಯ ದಬ್ಬಾಳಿಕೆ ಮತ್ತು ಅನ್ಯಾಯವು, ಪೂರ್ವಗ್ರಹವನ್ನು ಇನ್ನೂ ಅಸ್ತಿತ್ವದಲ್ಲಿಟ್ಟಿದೆ. ಐರ್ಲಂಡ್ನಲ್ಲಿ ಕ್ಯಾಥೊಲಿಕರ ಮತ್ತು ಪ್ರಾಟೆಸ್ಟಂಟರ ಮಧ್ಯೆ ಇದ್ದ ವೈರತ್ವವು, ಇಂಗ್ಲೆಂಡಿನ ದೊರೆಗಳು ಕ್ಯಾಥೊಲಿಕರನ್ನು ಹಿಂಸಿಸಿ ಗಡೀಪಾರುಮಾಡಿದ ಸಮಯದಿಂದ ಅಂದರೆ 16ನೇ ಶತಮಾನದಷ್ಟು ಹಿಂದೆ ಆರಂಭಗೊಂಡಿತ್ತು. ಧಾರ್ಮಿಕಯುದ್ಧಗಳ ಸಮಯದಲ್ಲಿ ಕ್ರೈಸ್ತರೆನಿಸಿಕೊಳ್ಳುವವರು ಮುಸ್ಲಿಮರ ಮೇಲೆ ನಡೆಸಿದ ಅತ್ಯಾಚಾರಗಳು, ಇಂದು ಸಹ ಮಧ್ಯ ಪೂರ್ವ ದೇಶಗಳಲ್ಲಿರುವ ಮುಸ್ಲಿಮರಲ್ಲಿ ದ್ವೇಷದ ಭಾವನೆಗಳನ್ನು ಕೆರಳಿಸುತ್ತವೆ. ಬಾಲ್ಕನ್ನಲ್ಲಿ ಸರ್ಬಿಯನರು ಮತ್ತು ಕ್ರೊಏಷಿಯನರ ವೈರತ್ವವು, ಎರಡನೇ ಲೋಕ ಯುದ್ಧದ ಸಮಯದಲ್ಲಿ ಜನಸಾಮಾನ್ಯರ ಹತ್ಯಾಕಾಂಡಗಳಿಂದಾಗಿ ಉದ್ರೇಕಿಸಲ್ಪಟ್ಟಿತು. ಈ ಎಲ್ಲಾ ಉದಾಹರಣೆಗಳು ತೋರಿಸುವಂತೆ, ಎರಡು ಗುಂಪುಗಳ ನಡುವಣ ವೈರತ್ವದ ಇತಿಹಾಸವಿರುವುದಾದರೆ, ಅದು ಪೂರ್ವಗ್ರಹವನ್ನು ಹೆಚ್ಚಿಸಬಲ್ಲದು.
ಅಜ್ಞಾನದ ಬೆಳವಣಿಗೆ
ಚಿಕ್ಕ ಮಗು ಯಾವುದೇ ಪೂರ್ವಗ್ರಹವನ್ನು ಬೆಳೆಸಿಕೊಳ್ಳುವುದಿಲ್ಲ. ಬದಲಾಗಿ, ಅನೇಕವೇಳೆ ಒಂದು ಮಗು ಇನ್ನೊಂದು ಕುಲಕ್ಕೆ ಸೇರಿದ ಮಗುವಿನೊಂದಿಗೆ ಯಾವುದೇ ಹಿಂಜರಿಕೆಯಿಲ್ಲದೆ ಆಟವಾಡುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಆದರೆ, ಮಗುವು ಸುಮಾರು 10 ಅಥವಾ 11 ವರ್ಷ ಪ್ರಾಯಕ್ಕೆ ತಲಪುವಷ್ಟರಲ್ಲಿ, ಇನ್ನೊಂದು ಕುಲ, ಬುಡಕಟ್ಟು, ಅಥವಾ ಧರ್ಮದ ಜನರನ್ನು ತ್ಯಜಿಸಲಾರಂಭಿಸಬಹುದು. ಏಕೆಂದರೆ ತನ್ನ ಬೆಳೆಯುವ ಪ್ರಾಯದಲ್ಲಿ ಅವನು ಅನೇಕ ದೃಷ್ಟಿಕೋನಗಳನ್ನು ಪಡೆದುಕೊಳ್ಳುತ್ತಾನೆ ಮತ್ತು ಇವು ಅವನ ಮನಸ್ಸಿನಲ್ಲಿ ಜೀವನಪರ್ಯಂತ ಉಳಿಯಬಹುದು.
ಈ ಮಾಹಿತಿಯನ್ನು ಅವನು ಹೇಗೆ ಕಲಿತುಕೊಳ್ಳುತ್ತಾನೆ? ಒಂದು ಮಗುವು ನಕಾರಾತ್ಮಕ ಮನೋಭಾವಗಳನ್ನು—ಮಾತುಗಳಲ್ಲಿ ಮತ್ತು ಕ್ರಿಯೆಗಳಲ್ಲಿ ವ್ಯಕ್ತವಾಗುವ ಮನೋಭಾವಗಳು—ಮೊದಲಾಗಿ ತನ್ನ ಹೆತ್ತವರಿಂದ ಮತ್ತು ಅನಂತರ ತನ್ನ ಸ್ನೇಹಿತರು ಅಥವಾ ಅಧ್ಯಾಪಕರಿಂದ ಕಲಿತುಕೊಳ್ಳುತ್ತದೆ. ತದನಂತರ ನೆರೆಯವರು, ವಾರ್ತಾಪತ್ರಿಕೆ, ರೇಡಿಯೊ, ಅಥವಾ ಟೆಲಿವಿಷನ್ ಮುಂತಾದವುಗಳು ಸಹ ಅವನನ್ನು ಪ್ರಭಾವಿಸಬಹುದು. ತಾನು ಹೇಸುವ ಜನರ ಗುಂಪುಗಳ ಕುರಿತು ಅವನಿಗೆ ತೀರಾ ಕಡಿಮೆ ತಿಳಿದಿರಬಹುದು ಅಥವಾ ಏನೂ ತಿಳಿಯದೇ ಇರಬಹುದು, ಆದರೆ ಅವನು ವಯಸ್ಕನಾಗುವುದರೊಳಗೆ ಅವರು ಕೀಳಾದವರು ಮತ್ತು ಭರವಸೆಗೆ ಯೋಗ್ಯರಲ್ಲ ಎಂಬ ಭಾವನೆಯನ್ನು ಬೆಳೆಸಿಕೊಳ್ಳಸಾಧ್ಯವಿದೆ. ಅವನು ಅವರನ್ನು ಹಗೆಮಾಡಲೂ ಆರಂಭಿಸಬಹುದು.
ಅನೇಕ ದೇಶಗಳಲ್ಲಿ, ಸಂಚಾರ ಸೌಲಭ್ಯಗಳು ಮತ್ತು ವ್ಯಾಪಾರ ವ್ಯವಹಾರಗಳು ಇಂದು ಹೆಚ್ಚಾಗಿರುವುದರಿಂದ,
ವಿವಿಧ ಸಂಸ್ಕೃತಿಗಳ ಮತ್ತು ಜಾತಿಗಳ ಜನರ ಗುಂಪುಗಳ ಮಧ್ಯೆ ಸಂಪರ್ಕವು ಹೆಚ್ಚಾಗಿದೆ. ಹಾಗಿದ್ದರೂ, ಈಗಾಗಲೇ ಮನಸ್ಸಿನಲ್ಲಿ ಪೂರ್ವಗ್ರಹವನ್ನು ಆಳವಾಗಿ ಬೇರೂರಿಸಿಕೊಂಡಿರುವ ವ್ಯಕ್ತಿಯು ತನ್ನ ಪೂರ್ವಕಲ್ಪಿತ ವಿಚಾರಗಳನ್ನೇ ಭದ್ರವಾಗಿ ಹಿಡಿದುಕೊಳ್ಳುತ್ತಾನೆ. ಒಂದು ಗುಂಪಿಗೆ ಸೇರಿದ ಸಾವಿರಾರು ಅಥವಾ ಲಕ್ಷಾಂತರ ಜನರ ಬಗ್ಗೆ ‘ಅವರೆಲ್ಲರೂ ಹೀಗೆಯೇ’ ಎಂಬ ಅಭಿಪ್ರಾಯವನ್ನು ತಾಳಬಹುದು. ಅವರೆಲ್ಲರಲ್ಲಿಯೂ ನಿರ್ದಿಷ್ಟ ಕೆಟ್ಟ ಗುಣಗಳಿವೆ ಎಂದು ಅವನು ಕಲ್ಪಿಸಿಕೊಳ್ಳಬಹುದು. ಆ ಗುಂಪಿಗೆ ಸೇರಿದ ಕೇವಲ ಒಬ್ಬ ವ್ಯಕ್ತಿಯಿಂದ ಯಾವುದೇ ನಕಾರಾತ್ಮಕ ಅನುಭವವಾಗುವುದಾದರೂ, ಅವನ ಪೂರ್ವಗ್ರಹವು ಸ್ಥಿರವಾಗುವುದಕ್ಕೆ ಅದಷ್ಟೇ ಸಾಕು. ಆದರೆ ಯಾವುದೇ ಸಕಾರಾತ್ಮಕ ಅನುಭವಗಳಾಗುವುದಾದರೆ, ಅದು ಗಣ್ಯಮಾಡಲ್ಪಡುವುದಿಲ್ಲ.ಪೂರ್ವಕಲ್ಪಿತ ಭಾವನೆಯಿಂದ ಹೊರಬರುವುದು
ಪೂರ್ವಗ್ರಹವನ್ನು ಹೆಚ್ಚಿನ ಜನರು ಮೂಲತಃ ಖಂಡಿಸುವುದಾದರೂ, ಅದರ ಪ್ರಭಾವದಿಂದ ಸಂಪೂರ್ಣವಾಗಿ ಹೊರಬಂದಿರುವವರು ಕೇವಲ ಕೊಂಚ ಮಂದಿಯೇ. ವಾಸ್ತವದಲ್ಲಿ, ಪೂರ್ವಗ್ರಹಪೀಡಿತರಾಗಿರುವ ಅನೇಕರು ತಾವು ಪೂರ್ವಗ್ರಹವುಳ್ಳವರಲ್ಲ ಎಂದು ವಾದಿಸುತ್ತಾರೆ. ಇನ್ನು ಕೆಲವರು, ಜನರು ಪೂರ್ವಾಗ್ರಹಿಗಳಾಗಿದ್ದರೂ ಅದನ್ನು ತಮ್ಮಲ್ಲಿಯೇ ಇಟ್ಟುಕೊಂಡರೆ ಏನೂ ತೊಂದರೆ ಇಲ್ಲ ಎಂದು ಹೇಳುತ್ತಾರೆ. ಆದರೆ, ಪೂರ್ವಗ್ರಹದಿಂದ ನಿಜವಾಗಿಯೂ ತೊಂದರೆ ಇದೆ, ಏಕೆಂದರೆ ಅದು ಜನರಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಅವರನ್ನು ವಿಭಾಗಿಸುತ್ತದೆ. ಪೂರ್ವಗ್ರಹವು ಅಜ್ಞಾನದ ಮಗುವಾಗಿದ್ದರೆ, ಹಗೆಯು ಅದರ ಮೊಮ್ಮಗು. ಗ್ರಂಥಕರ್ತರಾದ ಚಾರ್ಲ್ಸ್ ಕೇಲೆಬ್ ಕೋಲ್ಟೆನ್ (1780?-1832) ತಿಳಿಸಿದ್ದು: “ನಾವು ಕೆಲವು ಜನರನ್ನು ಹಗೆಮಾಡುತ್ತೇವೆ, ಏಕೆಂದರೆ ನಮಗೆ ಅವರ ಬಗ್ಗೆ ತಿಳಿದಿಲ್ಲ; ಮತ್ತು ಮುಂದೆಂದೂ ನಾವು ಅವರ ಬಗ್ಗೆ ತಿಳಿದುಕೊಳ್ಳುವುದೂ ಇಲ್ಲ, ಏಕೆಂದರೆ ನಾವು ಅವರನ್ನು ಹಗೆಮಾಡುತ್ತೇವೆ.” ಆದರೆ, ಪೂರ್ವಗ್ರಹವನ್ನು ಬೆಳೆಸಿಕೊಳ್ಳಲು ಸಾಧ್ಯವಿದ್ದರೆ, ಅದನ್ನು ತೆಗೆದುಹಾಕಲು ಸಹ ಸಾಧ್ಯವಿದೆ. ಹೇಗೆ? (g04 9/8)
[ಪುಟ 7ರಲ್ಲಿರುವ ಚೌಕ]
ಧರ್ಮ ಯಾವುದಕ್ಕೆ ಪ್ರೇರಣೆ ನೀಡುತ್ತದೆ—ಸಹಿಷ್ಣುತೆಗೊ ಪೂರ್ವಗ್ರಹಕ್ಕೊ?
ಪೂರ್ವಗ್ರಹದ ಸ್ವಭಾವ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಗೋರ್ಡನ್ ಡಬ್ಲ್ಯೂ. ಆಲ್ಪೋರ್ಟ್ ಹೇಳುವುದು, “ಚರ್ಚಿನ ಸದಸ್ಯರಲ್ಲದವರಿಗಿಂತ ಚರ್ಚಿನ ಸದಸ್ಯರೇ ಹೆಚ್ಚು ಪೂರ್ವಾಗ್ರಹಿಗಳಾಗಿದ್ದಾರೆ ಎಂದು ತೋರುತ್ತದೆ.” ಇದು ಆಶ್ಚರ್ಯದ ಸಂಗತಿಯಲ್ಲ ಏಕೆಂದರೆ ಅನೇಕವೇಳೆ ಧರ್ಮವು ಪೂರ್ವಗ್ರಹಕ್ಕೆ ಪರಿಹಾರವಾಗುವ ಬದಲು ಅದಕ್ಕೆ ಕಾರಣವಾಗಿದೆ.ಉದಾಹರಣೆಗೆ, ಷೇಮ್-ವಂಶ ವಿರೋಧವನ್ನು ಶತಮಾನಗಳಿಂದ ಪಾದ್ರಿವರ್ಗದವರು ಪ್ರಚೋದಿಸಿದರು. ಕ್ರೈಸ್ತತ್ವದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ ಹಿಟ್ಲರನು ಒಮ್ಮೆ ಹೇಳಿದ್ದು: “ಯೆಹೂದ್ಯರ ವಿಷಯದಲ್ಲಾದರೊ, 1500 ವರುಷಗಳಿಂದ ಕ್ಯಾಥೊಲಿಕ್ ಚರ್ಚು ಪಾಲಿಸಿದ್ದಂಥ ಕಾರ್ಯನೀತಿಯನ್ನೇ ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ.”
ಬಾಲ್ಕನ್ನಲ್ಲಿ ನಡೆಸಲ್ಪಟ್ಟ ಘೋರ ಕೃತ್ಯಗಳ ಸಮಯದಲ್ಲಿ, ಇತರ ಧರ್ಮಕ್ಕೆ ಸೇರಿದವರಾಗಿದ್ದ ನೆರೆಯವರ ಕಡೆಗೆ ಸಹಿಷ್ಣುತೆ ಮತ್ತು ಗೌರವದ ಭಾವವನ್ನು ಜನರಲ್ಲಿ ಹುಟ್ಟಿಸಲು ಆರ್ತಡಾಕ್ಸ್ ಮತ್ತು ಕ್ಯಾಥೊಲಿಕ್ ಬೋಧನೆಗಳಿಗೆ ಸಾಧ್ಯವಿರಲಿಲ್ಲವೆಂಬಂತೆ ತೋರಿಬಂತು.
ಅದೇ ರೀತಿಯಲ್ಲಿ ರುಆಂಡದಲ್ಲಿ, ಚರ್ಚಿನ ಸದಸ್ಯರು ತಮ್ಮ ಜೊತೆ ವಿಶ್ವಾಸಿಗಳನ್ನು ಕೊಂದರು. ನ್ಯಾಷನಲ್ ಕ್ಯಾಥೊಲಿಕ್ ರಿಪೊರ್ಟರ್ ತಿಳಿಸಿದ್ದೇನೆಂದರೆ, ಅಲ್ಲಿ ನಡೆದ ಹೋರಾಟವು “ಒಂದು ನಿಜವಾದ ಸಾಮೂಹಿಕ ಹತ್ಯೆಯಾಗಿತ್ತು. ದುಃಖಕರವಾಗಿ, ಅದಕ್ಕೆ ಕ್ಯಾಥೊಲಿಕರು ಸಹ ಜವಾಬ್ದಾರರಾಗಿದ್ದರು.”
ಕ್ಯಾಥೊಲಿಕ್ ಚರ್ಚು ತನ್ನ ಅಸಹಿಷ್ಣುತೆಯ ದಾಖಲೆಗೆ ಪ್ರಖ್ಯಾತವಾಗಿದೆ. ಇಸವಿ 2000ದಲ್ಲಿ ಎರಡನೇ ಪೋಪ್ ಜಾನ್ ಪಾಲ್ರವರು, “ಗತಕಾಲದಲ್ಲಿ ದಾರಿತಪ್ಪಿಹೋದಂಥ ಸಂದರ್ಭಗಳಿಗಾಗಿ” ರೋಮ್ನಲ್ಲಿ ನಡೆಸಲ್ಪಟ್ಟ ಒಂದು ಸಾರ್ವಜನಿಕ ಮಾಸ್ನಲ್ಲಿ ಕ್ಷಮೆಯಾಚಿಸಿದರು. ಈ ಸಮಾರಂಭದ ಸಂದರ್ಭದಲ್ಲಿ, ವಿಶೇಷವಾಗಿ “ಯೆಹೂದ್ಯರ, ಹೆಂಗಸರ, ಮೂಲನಿವಾಸಿಗಳ, ವಲಸೆಗಾರರ, ಬಡವರ ಮತ್ತು ಅಜನಿತ ಶಿಶುಗಳ ಕಡೆಗೆ ಧರ್ಮವು ತೋರಿಸಿದ ಅಸಹಿಷ್ಣುತೆ ಹಾಗೂ ಅನ್ಯಾಯದ” ಕುರಿತು ತಿಳಿಸಲಾಯಿತು.
[ಪುಟ 6ರಲ್ಲಿರುವ ಚಿತ್ರ]
ಮೇಲೆ: ಬಾಸ್ನಿಯ ಮತ್ತು ಹೆರ್ಸಗೋವಿನದ ನಿರಾಶ್ರಿತರ ಶಿಬಿರ, ಅಕ್ಟೋಬರ್ 20, 1995
ಆಂತರಿಕ ಯುದ್ಧದ ಅಂತ್ಯಕ್ಕಾಗಿ ಕಾಯುತ್ತಿರುವ ಬಾಸ್ನಿಯದ ಇಬ್ಬರು ಸರ್ಬ್ ನಿರಾಶ್ರಿತರು
[ಕೃಪೆ]
Photo by Scott Peterson/Liaison
[ಪುಟ 7ರಲ್ಲಿರುವ ಚಿತ್ರ]
ಹಗೆಮಾಡಲು ಕಲಿಸಲ್ಪಡುವುದು
ಒಂದು ಮಗುವು ನಕಾರಾತ್ಮಕ ಮನೋಭಾವಗಳನ್ನು ತನ್ನ ಹೆತ್ತವರು, ಟೆಲಿವಿಷನ್ ಮತ್ತು ಇತರ ಮೂಲಗಳಿಂದ ಕಲಿತುಕೊಳ್ಳಸಾಧ್ಯವಿದೆ