ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ?

ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ?

ಯುವ ಜನರು ಪ್ರಶ್ನಿಸುವುದು . . .

ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ?

“ನಾನು ಇನ್ನೂ ಕನ್ಯಾವಸ್ಥೆಯಲ್ಲಿರುವುದಕ್ಕಾಗಿ ನನಗೆ ವಿಚಿತ್ರವೆನಿಸುವಾಗ, ವಿವಾಹಪೂರ್ವ ಸಂಭೋಗವು ನಿಜವಾಗಿಯೂ ಅಷ್ಟು ಕೆಟ್ಟದ್ದಾಗಿದೆಯೋ ಎಂದು ನಾನು ಕೆಲವೊಮ್ಮೆ ಆಲೋಚಿಸುತ್ತೇನೆ.”​—⁠ಜೋರ್ಡನ್‌. *

ಕೆಲ್ಲೀ ಎಂಬವಳು ಹೇಳುವುದು: “ಲೈಂಗಿಕ ಸಂಬಂಧವನ್ನು ಅನುಭವಿಸಿ ನೋಡಬೇಕೆಂಬ ಪ್ರಚೋದನೆ ನನಗಾಗುತ್ತದೆ. ನಮ್ಮೆಲ್ಲರಿಗೂ ಈ ರೀತಿಯ ಸ್ವಾಭಾವಿಕ ಇಚ್ಛೆಯಿರುತ್ತದೆಂದು ನಾನು ನೆನಸುತ್ತೇನೆ.” ಅವಳು ಮುಂದುವರಿಸುವುದು: “ಎಲ್ಲಿ ನೋಡಿದರೂ ಎಲ್ಲಾ ವಿಷಯಗಳೂ ಕಾಮಾಭಿಮುಖವಾಗಿವೆ!”

ಜೋರ್ಡನ್‌ ಮತ್ತು ಕೆಲ್ಲೀಗೆ ಇರುವಂಥ ಅನಿಸಿಕೆಗಳೇ ನಿಮಗೂ ಇವೆಯೊ? ಈ ಮುಂಚೆ, ವಿವಾಹಪೂರ್ವ ಸಂಭೋಗವನ್ನು ವಿರೋಧಿಸುತ್ತಿದ್ದ ಸಂಪ್ರದಾಯಗಳು ಮತ್ತು ಮೌಲ್ಯಗಳು ಇಂದು ಇಲ್ಲದೆ ಹೋಗಿವೆ. (ಇಬ್ರಿಯ 13:⁠4) ವಿವಾಹಪೂರ್ವ ಸಂಭೋಗವು ಸ್ವೀಕಾರಾರ್ಹವಾದದ್ದು ಮಾತ್ರವಲ್ಲ ಅದು ಅವರಿಂದ ನಿರೀಕ್ಷಿಸಲಾಗುತ್ತದೆ ಎಂದು 15ರಿಂದ 24 ವರುಷ ಪ್ರಾಯದ ಹೆಚ್ಚಿನ ಗಂಡಸರು ಭಾವಿಸಿದರು ಎಂದು ಏಷ್ಯಾದ ದೇಶವೊಂದರಲ್ಲಿ ಮಾಡಲ್ಪಟ್ಟ ಸಮೀಕ್ಷೆಯು ಬಯಲುಪಡಿಸುತ್ತದೆ. ಲೋಕವ್ಯಾಪಕವಾಗಿ ಹೆಚ್ಚಿನ ಯುವ ಜನರು 19 ವರುಷ ಪ್ರಾಯವನ್ನು ತಲಪುವುದರ ಮುನ್ನವೇ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಇನ್ನು ಕೆಲವು ಯುವ ಜನರು ಲೈಂಗಿಕ ಸಂಭೋಗದಿಂದ ದೂರವಿರುತ್ತಾರೆ, ಆದರೆ ಲೈಂಗಿಕತೆಯ ಬದಲಿ ವಿಧಾನಗಳು ಎಂದು ಕರೆಯಲ್ಪಡುವ ವಿಷಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದರಲ್ಲಿ, ಒಬ್ಬರು ಇನ್ನೊಬ್ಬರ ಜನನೇಂದ್ರಿಯಗಳನ್ನು ಮುದ್ದಿಸುವುದೂ ಸೇರಿದೆ (ಕೆಲವೊಮ್ಮೆ ಇದನ್ನು ಪರಸ್ಪರ ಹಸ್ತಮೈಥುನ ಎಂದು ಕರೆಯಲಾಗುತ್ತದೆ). ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿನ ಒಂದು ಕಸಿವಿಸಿಗೊಳಿಸುವಂಥ ವರದಿಯು ತಿಳಿಸುವುದು, “ಮೌಖಿಕ ಸಂಭೋಗವು ಲೈಂಗಿಕ ಚಟುವಟಿಕೆಗೆ ನಡಿಸುವ ಒಂದು ಸರ್ವಸಾಮಾನ್ಯ ವಿಷಯವಾಗಿದೆ. ಇದು ಸಂಭೋಗಕ್ಕಿಂತ ಕಡಿಮೆ ಆಪ್ತತೆಯದ್ದು ಮತ್ತು ಕಡಿಮೆ ಅಪಾಯಕಾರಿಯಾದದ್ದಾಗಿದೆ . . . [ಹಾಗೂ] ಗರ್ಭದಾರಣೆಯನ್ನು ತಡೆಯಲು ಮತ್ತು ಕನ್ಯಾವಸ್ಥೆಯನ್ನು ಕಾಪಾಡಿಕೊಳ್ಳಲು ಒಂದು ಮಾರ್ಗವಾಗಿದೆ ಎಂದು ಅನೇಕ ಯುವ ಜನರು ಪರಿಗಣಿಸುತ್ತಾರೆ.”

ಆದರೆ ಕ್ರೈಸ್ತನೊಬ್ಬನು ವಿವಾಹಪೂರ್ವ ಸಂಭೋಗವನ್ನು ಹೇಗೆ ವೀಕ್ಷಿಸಬೇಕು? ಸಂಭೋಗರಹಿತ ಬದಲಿ ವಿಧಾನಗಳು ಎಂದು ಕರೆಯಲ್ಪಡುವ ವಿಷಯಗಳ ಕುರಿತಾಗಿ ಏನು? ಇವು ದೇವರಿಗೆ ಸ್ವೀಕಾರಾರ್ಹವಾಗಿವೆಯೋ? ಇವು ಅಪಾಯರಹಿತವಾಗಿವೆಯೋ? ಇವು ನಿಜವಾಗಿಯೂ ಒಬ್ಬ ವ್ಯಕ್ತಿಯ ಕನ್ಯಾವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತವೋ?

ಜಾರತ್ವದಲ್ಲಿ ಒಳಗೊಂಡಿರುವ ವಿಷಯಗಳು

ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಯುಕ್ತ ಉತ್ತರವು ಕೇವಲ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಂದ ಮಾತ್ರ ಬರಬಲ್ಲದು. ಆತನು ತನ್ನ ವಾಕ್ಯದಲ್ಲಿ, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ನಮಗೆ ಹೇಳುತ್ತಾನೆ. (1 ಕೊರಿಂಥ 6:18) ಇದರ ನಿಜವಾದ ಅರ್ಥವೇನು? “ಜಾರತ್ವ” ಎಂದು ತರ್ಜುಮೆಯಾಗಿರುವ ಗ್ರೀಕ್‌ ಪದವು ಕೇವಲ ಲೈಂಗಿಕ ಸಂಭೋಗಕ್ಕೆ ಸೀಮಿತವಾಗಿಲ್ಲ, ಬದಲಾಗಿ ಅದರಲ್ಲಿ ವಿವಿಧ ರೀತಿಯ ಅಸಹ್ಯ ಲೈಂಗಿಕ ಕೃತ್ಯಗಳು ಒಳಗೊಂಡಿವೆ. ಆದುದರಿಂದ, ಇಬ್ಬರು ಅವಿವಾಹಿತ ವ್ಯಕ್ತಿಗಳು ಮೌಖಿಕ ಸಂಭೋಗದಲ್ಲಿ ಒಳಗೂಡಿರುವುದಾದರೆ ಅಥವಾ ಪರಸ್ಪರ ಜನನೇಂದ್ರಿಯಗಳನ್ನು ಮುದ್ದಿಸಿರುವುದಾದರೆ, ಅವರು ಜಾರತ್ವದ ದೋಷಾರೋಪ ಹೊತ್ತವರಾಗುತ್ತಾರೆ.

ಆದರೆ ದೇವರ ದೃಷ್ಟಿಯಲ್ಲಿ ಅವರು ಇನ್ನೂ ಕನ್ಯೆಯರಾಗಿ ಪರಿಗಣಿಸಲ್ಪಡುವರೋ? ಬೈಬಲಿನಲ್ಲಿ “ಕನ್ಯೆ” ಎಂಬ ಪದವನ್ನು, ನೈತಿಕ ಶುದ್ಧತೆಯ ಸಂಕೇತವಾಗಿ ಉಪಯೋಗಿಸಲಾಗಿದೆ. (2 ಕೊರಿಂಥ 11:​2-6) ಆದರೆ ಇದನ್ನು ಶಾರೀರಿಕ ಅರ್ಥದಲ್ಲಿಯೂ ಉಪಯೋಗಿಸಲಾಗಿದೆ. ಯುವತಿಯಾದ ರೆಬೆಕ್ಕಳ ಕುರಿತು ಬೈಬಲ್‌ ತಿಳಿಸುತ್ತದೆ. ಅವಳು “ಇನ್ನೂ ಯಾವುದೇ ಪುರುಷನೊಂದಿಗೆ ಸಂಭೋಗವನ್ನು ಹೊಂದಿರದ ಕನ್ನಿಕೆ” ಆಗಿದ್ದಳೆಂದು ಅದು ಹೇಳುತ್ತದೆ. (ಆದಿಕಾಂಡ 24:​16, NW) ಆಸಕ್ತಿಕರವಾಗಿ, “ಸಂಗಮ” ಅಥವಾ ಸಂಭೋಗ ಎಂಬುದಕ್ಕಾಗಿರುವ ಮೂಲ ಹೀಬ್ರು ಪದವು, ಸಾಮಾನ್ಯ ಸ್ತ್ರೀಪುರುಷ ಸಂಭೋಗವಲ್ಲದೆ ಇತರ ಕೃತ್ಯಗಳನ್ನೂ ಒಳಗೂಡಿಸಿತು ಎಂಬುದು ವ್ಯಕ್ತ. (ಆದಿಕಾಂಡ 19:⁠5) ಆದುದರಿಂದ, ಬೈಬಲಿಗನುಸಾರ ಒಬ್ಬ ಯುವಕನು ಅಥವಾ ಯುವತಿಯು ಯಾವುದೇ ರೀತಿಯ ಜಾರತ್ವದಲ್ಲಿ ಒಳಗೊಂಡರೂ, ಅವನನ್ನು ಅಥವಾ ಅವಳನ್ನು ಕನ್ಯಾವಸ್ಥೆಯಲ್ಲಿರುವವರನ್ನಾಗಿ ಪರಿಗಣಿಸಸಾಧ್ಯವಿರಲಿಲ್ಲ.

ಕೇವಲ ಜಾರತ್ವಕ್ಕೆ ದೂರವಾಗಿ ಓಡಿಹೋಗುವಂತೆ ಉತ್ತೇಜಿಸುವುದಲ್ಲದೆ, ಜಾರತ್ವಕ್ಕೆ ನಡೆಸುವ ಎಲ್ಲಾ ರೀತಿಯ ಅಶುದ್ಧ ನಡತೆಯಿಂದಲೂ ಓಡಿಹೋಗುವಂತೆ ಬೈಬಲ್‌ ಕ್ರೈಸ್ತರನ್ನು ಉತ್ತೇಜಿಸುತ್ತದೆ. * (ಕೊಲೊಸ್ಸೆ 3:5) ಇಂಥ ರೀತಿಯ ನಿಲುವನ್ನು ತೆಗೆದುಕೊಂಡದಕ್ಕೆ ಇತರರು ನಿಮ್ಮನ್ನು ಕುಚೋದ್ಯಮಾಡಬಹುದು. ಕ್ರೈಸ್ತ ಯುವತಿಯಾದ ಕೆಲ್ಲೀ ಹೇಳುವುದು: “‘ನೀನು ಏನನ್ನು ಮಿಸ್‌ ಮಾಡುತ್ತಿದ್ದೀ ಎಂದು ನಿನಗೆ ಗೊತ್ತಿಲ್ಲ!’ ಎಂಬ ಮಾತನ್ನೇ ನಾನು ನನ್ನ ಹೈಸ್ಕೂಲ್‌ನ ವರ್ಷಗಳಾದ್ಯಂತ ಕೇಳಿಸಿಕೊಂಡೆ.” ಹಾಗಿದ್ದರೂ, ವಿವಾಹಪೂರ್ವ ಸಂಭೋಗವು ‘ಸ್ವಲ್ಪಕಾಲದ ಪಾಪಭೋಗ’ವಲ್ಲದೆ ಬೇರೇನಲ್ಲ. (ಇಬ್ರಿಯ 11:25) ಇದು ನಮಗೆ ಬಾಳುವ ಶಾರೀರಿಕ, ಭಾವನಾತ್ಮಕ, ಮತ್ತು ಆಧ್ಯಾತ್ಮಿಕ ಹಾನಿಯನ್ನು ಉಂಟುಮಾಡಬಲ್ಲದು.

ಗಂಭೀರವಾದ ಬೆದರಿಕೆಗಳು

ವಿವಾಹಪೂರ್ವ ಸಂಭೋಗವನ್ನು ಮಾಡುವಂತೆ ವಂಚಿಸಲ್ಪಟ್ಟ ಒಬ್ಬ ಯುವಕನನ್ನು ರಾಜ ಸೊಲೊಮೋನನು ಒಂದು ಸಂದರ್ಭದಲ್ಲಿ ಗಮನಿಸಿದ್ದಾಗಿ ಬೈಬಲ್‌ ತಿಳಿಸುತ್ತದೆ. ಸೊಲೊಮೋನನು ಆ ಯುವಕನನ್ನು ‘ವಧ್ಯಸ್ಥಾನಕ್ಕೆ ಹೋಗುವ ಹೋರಿಗೆ’ ಹೋಲಿಸುತ್ತಾನೆ. ವಧ್ಯಸ್ಥಾನಕ್ಕೆ ಕೊಂಡೊಯ್ಯಲ್ಪಡುವ ಹೋರಿಯು, ತನಗೆ ಏನು ಸಂಭವಿಸಲಿದೆ ಎಂಬುದರ ಕುರಿತಾಗಿ ಏನೂ ತಿಳಿಯದೆ ಇರುತ್ತದೆ. ವಿವಾಹಪೂರ್ವ ಸಂಭೋಗದಲ್ಲಿ ಭಾಗವಹಿಸುವ ಯುವ ಜನರು ಸಹ ಅನೇಕವೇಳೆ ಅದೇ ರೀತಿಯಾಗಿ ವರ್ತಿಸುತ್ತಾರೆ​—⁠ಅವರ ಕೃತ್ಯಗಳಿಗೆ ಗಂಭೀರವಾದ ಪರಿಣಾಮಗಳು ಫಲಿಸುವುದು ಎಂಬುದರ ಕುರಿತು ಅವರು ಕೊಂಚ ಅಥವಾ ಏನೂ ತಿಳಿಯದವರಾಗಿರುತ್ತಾರೆ! ಆ ಯುವಕನ ಕುರಿತು ಸೊಲೊಮೋನನು ಹೇಳಿದ್ದು: “ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ” ಇದ್ದಾನೆ. (ಜ್ಞಾನೋಕ್ತಿ 7:​22, 23) ಹೌದು, ನಿಮ್ಮ ‘ಪ್ರಾಣ,’ ಅಂದರೆ ನಿಮ್ಮ ಜೀವವು ಅಪಾಯದಲ್ಲಿದೆ.

ಉದಾಹರಣೆಗೆ, ಪ್ರತಿ ವರುಷ ಲಕ್ಷಾಂತರ ಯುವ ಜನರಿಗೆ ರತಿರವಾನಿತ ರೋಗ ತಗಲುತ್ತದೆ. ಲಿಡೀಯ ಎಂಬವಳು ತಿಳಿಸುವುದು: “ನನಗೆ ಹರ್ಪೀಸ್‌ ರೋಗವಿದೆ ಎಂದು ತಿಳಿದಾಗ, ಎಲ್ಲಿಯಾದರೂ ಓಡಿಹೋಗುವ ಎಂಬ ಅನಿಸಿಕೆಯಾಯಿತು. ಇದೊಂದು ವೇದನಾಮಯ ರೋಗವಾಗಿದೆ ಮತ್ತು ಇದು ಎಂದಿಗೂ ವಾಸಿಯಾಗುವುದಿಲ್ಲ.” ಲೋಕವ್ಯಾಪಕವಾಗಿ ಹೊಸದಾಗಿ ಏಚ್‌ಐವಿಯಿಂದ ಸೋಂಕಿತರಾಗುವವರಲ್ಲಿ (ದಿನಕ್ಕೆ 6,000 ಮಂದಿ) ಅರ್ಧಕ್ಕಿಂತಲೂ ಹೆಚ್ಚಿನವರು 15ರಿಂದ 24ರ ವಯೋಮಾನದವರಾಗಿದ್ದಾರೆ.

ವಿವಾಹಪೂರ್ವ ಸಂಭೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವಿಶೇಷವಾಗಿ ಹೆಂಗಸರು ಶೀಘ್ರವಾಗಿ ತುತ್ತಾಗುತ್ತಾರೆ. ವಾಸ್ತವದಲ್ಲಿ, ರತಿರವಾನಿತ ರೋಗದ (ಏಚ್‌ಐವಿಯು ಸಹ) ಗಂಡಾಂತರವು ಪುರುಷರಿಗಿಂತ ಹೆಚ್ಚಾಗಿ ಸ್ತ್ರೀಯರಿಗಿದೆ. ಒಬ್ಬ ಚಿಕ್ಕ ಹುಡುಗಿಯು ಗರ್ಭಿಣಿಯಾದರೆ, ಅವಳು ತನ್ನನ್ನೂ ಇನ್ನೂ ಜನಿಸದ ತನ್ನ ಮಗುವನ್ನೂ ಇನ್ನೂ ಹೆಚ್ಚಿನ ಗಂಡಾಂತರದಲ್ಲಿ ಹಾಕುತ್ತಾಳೆ. ಏಕೆ? ಏಕೆಂದರೆ ಒಂದು ಚಿಕ್ಕ ಹುಡುಗಿಯ ಶರೀರವು, ಸುರಕ್ಷಿತವಾಗಿ ಮಗುವನ್ನು ಹೆರಲು ಬೇಕಾಗಿರುವಷ್ಟರ ಮಟ್ಟಿಗೆ ಬೆಳವಣಿಗೆಯನ್ನು ಹೊಂದಿರಲಿಕ್ಕಿಲ್ಲ.

ಒಂದುವೇಳೆ ಹದಿಹರೆಯದ ತಾಯಿಯು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಂಡರೂ, ತಾಯ್ತನವು ತರುವ ಗಂಭೀರವಾದ ಜವಾಬ್ದಾರಿಗಳನ್ನು ಅವಳು ಎದುರಿಸಲೇಬೇಕಾಗುತ್ತದೆ. ತಮಗಾಗಿ ಮತ್ತು ತಮ್ಮ ನವಜನಿತ ಶಿಶುವಿನ ಹೊಟ್ಟೆಪಾಡಿಗಾಗಿ ದುಡಿಯುವುದು ತಾವು ನೆನಸಿದ್ದಕ್ಕಿಂತಲೂ ಎಷ್ಟೋ ಹೆಚ್ಚು ಕಷ್ಟಕರವಾದ ಕೆಲಸ ಎಂದು ಅನೇಕ ಹುಡುಗಿಯರು ಕಂಡುಕೊಳ್ಳುತ್ತಾರೆ.

ಇದಲ್ಲದೆ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಪರಿಣಾಮಗಳು ಸಹ ಇವೆ. ರಾಜ ದಾವೀದನ ಲೈಂಗಿಕ ಪಾಪವು, ದೇವರೊಂದಿಗಿನ ಅವನ ಸ್ನೇಹವನ್ನು ಗಂಡಾಂತರಕ್ಕೆ ಹಾಕಿತು ಮತ್ತು ಆಧ್ಯಾತಿಕ ನಾಶನದ ಅಂಚಿಗೆ ಅವನನ್ನು ಕೊಂಡೊಯ್ಯಿತು. (ಕೀರ್ತನೆ 51) ದಾವೀದನು ಆಧ್ಯಾತ್ಮಿಕವಾಗಿ ಚೇತರಿಸಿಕೊಂಡರೂ, ತನ್ನ ಉಳಿದ ಜೀವನಮಾನಕಾಲ ಅವನು ತನ್ನ ಪಾಪದ ದುಷ್ಪರಿಣಾಮಗಳನ್ನು ಅನುಭವಿಸಬೇಕಾಯಿತು.

ಇಂದು ಸಹ ಯುವ ಜನರು ಅದೇ ರೀತಿಯಲ್ಲಿ ಕಷ್ಟಾನುಭವಿಸುವ ಸಾಧ್ಯತೆಯಿದೆ. ಉದಾಹರಣೆಗೆ, ಶೆರೀ ಎಂಬವಳು ಕೇವಲ 17 ವರುಷ ಪ್ರಾಯದವಳಾಗಿದ್ದಾಗ ಒಬ್ಬ ಹುಡುಗನೊಂದಿಗೆ ಲೈಂಗಿಕ ಸಂಬಂಧದಲ್ಲಿ ಒಳಗೂಡಿದಳು. ಅವನು ಅವಳನ್ನು ಪ್ರೀತಿಸುತ್ತಾನೆ ಎಂದು ಅವಳು ನೆನಸಿದ್ದಳು. ಈಗ ವರುಷಗಳ ಅನಂತರ, ತನ್ನ ಕೃತ್ಯಕ್ಕಾಗಿ ಈಗಲೂ ಅವಳು ವಿಷಾದಿಸುತ್ತಿದ್ದಾಳೆ. ಅವಳು ವ್ಯಸನದಿಂದ ಹೇಳುವುದು: “ಬೈಬಲಿನ ಸತ್ಯವನ್ನು ನಾನು ಹಗುರವೆಂದೆಣಿಸಿ, ದುಷ್ಪರಿಣಾಮಗಳನ್ನು ಅನುಭವಿಸಿದೆ. ನಾನು ಯೆಹೋವನ ಅನುಗ್ರಹವನ್ನು ಕಳೆದುಕೊಂಡೆ ಮತ್ತು ಇದು ನಿಜವಾಗಿಯೂ ಧ್ವಂಸಕಾರಿ.” ಇದೇ ರೀತಿಯಲ್ಲಿ ಟ್ರಿಶ್‌ ಎಂಬ ಹೆಸರಿನ ಇನ್ನೊಬ್ಬ ಯುವತಿಯು ಹೇಳುವುದು: “ವಿವಾಹಪೂರ್ವ ಸಂಭೋಗವು ನನ್ನ ಜೀವನದ ಅತಿ ದೊಡ್ಡ ತಪ್ಪಾಗಿದೆ. ಪುನಃ ಒಮ್ಮೆ ನನ್ನ ಕನ್ಯಾವಸ್ಥೆಯನ್ನು ಪಡೆಯಲು ನಾನು ಏನು ಬೇಕಾದರೂ ಮಾಡಲು ಸಿದ್ಧಳಿದ್ದೇನೆ.” ಹೌದು, ಭಾವನಾತ್ಮಕ ಗಾಯಗಳು ಬಹಳ ವರುಷಗಳ ವರೆಗೆ ಉಳಿದು, ಒತ್ತಡ ಮತ್ತು ಮನೋವೇದನೆಯನ್ನು ಉಂಟುಮಾಡಬಲ್ಲವು.

ಸ್ವನಿಯಂತ್ರಣವನ್ನು ಕಲಿಯುವುದು

ಯುವ ಶ್ಯಾಂಡಿಯು ಒಂದು ಪ್ರಾಮುಖ್ಯ ಪ್ರಶ್ನೆಯನ್ನು ಎಬ್ಬಿಸುತ್ತಾಳೆ: “ವಿವಾಹವಾಗುವ ತನಕ ಲೈಂಗಿಕ ಆಸೆಗಳನ್ನು ಪೂರೈಸಬಾರದೆಂದಿರುವಾಗ, ದೇವರೇಕೆ ಯುವ ಜನರಲ್ಲಿ ಆ ಇಚ್ಛೆಯನ್ನು ಇಟ್ಟಿದ್ದಾನೆ?” “ಯೌವನದ ಪರಿಪಕ್ವತೆಯಲ್ಲಿ” ಇರುವಾಗ ಲೈಂಗಿಕ ಇಚ್ಛೆಗಳು ಅತಿ ಬಲವಾಗಿರುತ್ತವೆ ಎಂಬುದು ಸತ್ಯ ಸಂಗತಿಯಾಗಿದೆ. (1 ಕೊರಿಂಥ 7:​36, NW) ವಾಸ್ತವದಲ್ಲಿ, ಹದಿಹರೆಯದವರು ಯಾವುದೇ ಕಾರಣವಿಲ್ಲದೆ ತಟ್ಟನೆ ಲೈಂಗಿಕ ಉದ್ರೇಕವನ್ನು ಅನುಭವಿಸಬಹುದು. ಆದರೆ ಇದೇನು ಕೆಟ್ಟ ವಿಷಯವಲ್ಲ. ಜನನೇಂದ್ರಿಯ ವ್ಯವಸ್ಥೆಯ ಬೆಳವಣಿಗೆಯ ಸಮಯದಲ್ಲಿ ಇದೊಂದು ಸಾಮಾನ್ಯ ಸಂಗತಿ. *

ಲೈಂಗಿಕ ಸಂಬಂಧವು ಆನಂದಕರವಾಗಿರಬೇಕೆಂದು ಯೆಹೋವನು ಸಹ ಉದ್ದೇಶಿಸಿದ್ದಾನೆ ಎಂಬುದು ನಿಜ. ಇದು, ಭೂಮಿಯು ತುಂಬಬೇಕೆಂಬ ಮಾನವರಿಗಾಗಿನ ಆತನ ಆದಿ ಉದ್ದೇಶದೊಂದಿಗೆ ಹೊಂದಿಕೆಯಲ್ಲಿದೆ. (ಆದಿಕಾಂಡ 1:28) ಹಾಗಿದ್ದರೂ, ನಮ್ಮ ಜನನೇಂದ್ರಿಯಗಳನ್ನು ನಾವು ದುರುಪಯೋಗಿಸಬೇಕೆಂದು ದೇವರು ಎಂದಿಗೂ ಉದ್ದೇಶಿಸಿರಲಿಲ್ಲ. “ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು” ಎಂದು ಬೈಬಲ್‌ ಹೇಳುತ್ತದೆ. (1 ಥೆಸಲೋನಿಕ 4:4) ಉದ್ಭವಿಸಿ ಬರುವ ಪ್ರತಿಯೊಂದು ಲೈಂಗಿಕ ಇಚ್ಛೆಯನ್ನು ತೃಪ್ತಿಗೊಳಿಸುವುದು ಒಂದರ್ಥದಲ್ಲಿ, ಕೋಪಬಂದಾಗಲೆಲ್ಲಾ ಯಾರಾದರೊಬ್ಬರಿಗೆ ಗುದ್ದುವುದರಷ್ಟೇ ಮೂರ್ಖತನದ ವಿಷಯವಾಗಿದೆ.

ಲೈಂಗಿಕ ಸಂಬಂಧವು ದೇವರ ಉಡುಗೊರೆಯಾಗಿದೆ. ಸೂಕ್ತವಾದ ಸಮಯದಲ್ಲಿ, ಅಂದರೆ ಒಬ್ಬನು ವಿವಾಹವಾದ ಅನಂತರ ಆನಂದಿಸಬೇಕಾದ ಉಡುಗೊರೆಯಾಗಿದೆ. ವಿವಾಹಬಾಹ್ಯ ಲೈಂಗಿಕ ಸಂಬಂಧವನ್ನು ಆನಂದಿಸಲು ನಾವು ಪ್ರಯತ್ನಿಸುವಾಗ ದೇವರಿಗೆ ಹೇಗನಿಸುತ್ತದೆ? ನಿಮ್ಮ ಸ್ನೇಹಿತನಿಗೆ ನೀವೊಂದು ಉಡುಗೊರೆಯನ್ನು ಖರೀದಿಸಿದ್ದೀರೆಂದು ಭಾವಿಸಿ. ನೀವು ಅದನ್ನು ಅವನಿಗೆ ನೀಡುವ ಮುನ್ನವೇ ಅವನು ಅದನ್ನು ಕದಿಯುತ್ತಾನೆ! ನಿಮಗೆ ಬೇಸರವಾಗಲಿಕ್ಕಿಲ್ಲವೇ? ಹಾಗಿರುವಾಗ, ಒಬ್ಬ ವ್ಯಕ್ತಿಯು ವಿವಾಹಪೂರ್ವ ಸಂಭೋಗದಲ್ಲಿ ಭಾಗವಹಿಸಿ ದೇವರು ಒದಗಿಸಿರುವ ಆ ಉಡುಗೊರೆಯನ್ನು ದುರುಪಯೋಗಿಸುವಾಗ ಆತನಿಗೆ ಹೇಗನಿಸಬಹುದು ಎಂದು ಆಲೋಚಿಸಿರಿ.

ನಿಮ್ಮ ಲೈಂಗಿಕ ಭಾವನೆಗಳ ವಿಷಯದಲ್ಲಿ ನೀವೇನು ಮಾಡಬೇಕು? ಸರಳವಾಗಿ ಹೇಳಬೇಕಾದರೆ, ಅದನ್ನು ನಿಯಂತ್ರಿಸಲು ಕಲಿಯಿರಿ. ಯೆಹೋವನು “ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?” ಎಂಬುದನ್ನು ಯಾವಾಗಲು ನಿಮ್ಮ ಜ್ಞಾಪಕಕ್ಕೆ ತಂದುಕೊಳ್ಳಿರಿ. (ಕೀರ್ತನೆ 84:11) ಗೊರ್ಡನ್‌ ಎಂಬ ಯುವಕನು ತಿಳಿಸುವುದು: “ವಿವಾಹಪೂರ್ವ ಸಂಭೋಗವು ಅಷ್ಟೇನೂ ಕೆಟ್ಟದ್ದಾಗಿರಲಿಕ್ಕಿಲ್ಲ ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಬರುವುದನ್ನು ನಾನು ಕಾಣುವಾಗ, ಅದರಿಂದ ಉಂಟಾಗುವ ಕೆಟ್ಟದಾದ ಆಧ್ಯಾತ್ಮಿಕ ಪರಿಣಾಮಗಳನ್ನು ನಾನು ಆಲೋಚಿಸುತ್ತೇನೆ. ಯೆಹೋವನೊಂದಿಗಿನ ನನ್ನ ಸಂಬಂಧವನ್ನು ನಾನು ಕಳೆದುಕೊಳ್ಳುವಂತೆ ಮಾಡುವ ಯಾವುದೇ ಪಾಪವು ಆನಂದಕರವಾಗಿರಸಾಧ್ಯವಿಲ್ಲ ಎಂದು ನಾನು ಗ್ರಹಿಸುತ್ತೇನೆ.” ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದು ಸುಲಭವಾಗಿರಲಿಕ್ಕಿಲ್ಲ. ಆದರೆ ಯುವ ಆ್ಯಡ್ರೀಯನ್‌ ನಮಗೆ ಜ್ಞಾಪಕ ಹುಟ್ಟಿಸುವಂತೆ, “ಅದು ನಿಮಗೆ ಒಂದು ಶುದ್ಧ ಮನಸ್ಸಾಕ್ಷಿಯನ್ನು ಮತ್ತು ಯೆಹೋವನೊಂದಿಗಿನ ಒಂದು ಉತ್ತಮ ಸಂಬಂಧವನ್ನು ಒದಗಿಸುತ್ತದೆ. ಹಿಂದಿನ ಕೃತ್ಯಗಳಿಗಾಗಿ ಯಾವುದೇ ಅಪರಾಧಿ ಮನೋಭಾವವಿಲ್ಲದೆ, ನಾವು ಹೆಚ್ಚು ಪ್ರಾಮುಖ್ಯವಾದ ವಿಷಯಗಳ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಬಲ್ಲೆವು.”​—⁠ಕೀರ್ತನೆ 16:11.

ಎಲ್ಲಾ ರೀತಿಯ ‘ಹಾದರಕ್ಕೆ ದೂರವಾಗಿರಲು’ ನಿಮಗೆ ಅನೇಕ ಉತ್ತಮ ಕಾರಣಗಳಿವೆ. (1 ಥೆಸಲೋನಿಕ 4:3) ಇದು ಯಾವಾಗಲೂ ಸುಲಭವಾಗಿಲ್ಲ ಎಂಬುದು ಒಪ್ಪತಕ್ಕ ವಿಷಯ. ನೀವು ಹೇಗೆ “ನಿಮ್ಮ ಶುದ್ಧತೆಯನ್ನು ಕಾಪಾಡಿಕೊಳ್ಳಬಲ್ಲಿರಿ” ಎಂಬುದಕ್ಕಾಗಿನ ಪ್ರಾಯೋಗಿಕ ವಿಧಾನಗಳನ್ನು ಮುಂದಿನ ಒಂದು ಲೇಖನವು ಚರ್ಚಿಸಲಿದೆ.​—⁠1 ತಿಮೊಥೆಯ 5:22. (g04 7/22)

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಜಾರತ್ವ, ಅಶುದ್ಧತೆ, ಮತ್ತು ಸಡಿಲು ನಡತೆ ಈ ಮುಂತಾದ ವಿಷಯಗಳ ಕುರಿತು ಹೆಚ್ಚಿನ ಚರ್ಚೆಗಾಗಿ 1994, ಫೆಬ್ರವರಿ 8ರ ಎಚ್ಚರ! ಪತ್ರಿಕೆಯಲ್ಲಿನ “ಯುವ ಜನರು ಪ್ರಶ್ನಿಸುವುದು . . . ‘ಬಹು ದೂರ’ ಎಂದರೆ ಎಷ್ಟು ದೂರ?” ಎಂಬ ಲೇಖನವನ್ನು ನೋಡಿರಿ.

^ ನಮ್ಮ 1990, ಫೆಬ್ರವರಿ 8ರ (ಇಂಗ್ಲಿಷ್‌) ಸಂಚಿಕೆಯಲ್ಲಿ ಬಂದಿರುವ, “ಯುವ ಜನರು ಪ್ರಶ್ನಿಸುವುದು . . . ನನ್ನ ದೇಹಕ್ಕೆ ಹೀಗೇಕೆ ಸಂಭವಿಸುತ್ತಾ ಇದೆ?” ಎಂಬ ಲೇಖನವನ್ನು ನೋಡಿರಿ.

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯುವ ಪ್ರಾಯದ ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಜಾರತ್ವದಲ್ಲಿ ಒಳಗೊಂಡರೆ, ಅವನು ಅಥವಾ ಅವಳು ದೇವರ ದೃಷ್ಟಿಯಲ್ಲಿ ಕನ್ಯಾವಸ್ಥೆಯಲ್ಲಿರುವವರಾಗಿ ಪರಿಗಣಿಸಲ್ಪಡುವರೋ?

[ಪುಟ 17ರಲ್ಲಿರುವ ಚಿತ್ರ]

ವಿವಾಹಪೂರ್ವ ಸಂಭೋಗವು ದೇವಭಯವುಳ್ಳ ಒಬ್ಬ ಯುವ ವ್ಯಕ್ತಿಯ ಮನಸ್ಸಾಕ್ಷಿಯನ್ನು ಘಾಸಿಗೊಳಿಸಬಲ್ಲದು

[ಪುಟ 18ರಲ್ಲಿರುವ ಚಿತ್ರ]

ವಿವಾಹಪೂರ್ವ ಸಂಭೋಗದಲ್ಲಿ ಭಾಗವಹಿಸುವವರು ರತಿರವಾನಿತ ರೋಗಗಳಿಗೆ ತುತ್ತಾಗುವ ಗಂಡಾಂತರವಿದೆ