ಸದಾ ಜನಪ್ರಿಯವಾಗಿರುವ ಈರುಳ್ಳಿ
ಸದಾ ಜನಪ್ರಿಯವಾಗಿರುವ ಈರುಳ್ಳಿ
ಮೆಕ್ಸಿಕೋದಲ್ಲಿರುವ ಎಚ್ಚರ! ಲೇಖಕರಿಂದ
ಈರುಳ್ಳಿ ಇಲ್ಲದಿರುವ ಅಡಿಗೆಮನೆ ಎಲ್ಲಾದರೂ ಉಂಟೇ? ಈ ಬಹೂಪಯೋಗಿ ತರಕಾರಿಯನ್ನು ಯಾವುದರಲ್ಲಿಯೂ ಉಪಯೋಗಿಸಬಹುದು—ಸೂಪ್ಗಳಲ್ಲಿ, ಸಲಾಡ್ಗಳಲ್ಲಿ, ಮುಖ್ಯ ಭಕ್ಷ್ಯಗಳಲ್ಲಿ, ಔಷಧದ ತಯಾರಿಕೆಗಳಲ್ಲಿ ಇತ್ಯಾದಿ. ಅದು ನಮ್ಮನ್ನು ಸ್ವಲ್ಪ ಅಳುವಂತೆಯೂ ಮಾಡಬಲ್ಲದು.
‘ಗೋಲ್ಡನ್ ಅನ್ಯನ್,’ ‘ಬ್ರೈಡ್ಸ್ ಅನ್ಯನ್’ ಮತ್ತು ‘ಆರ್ನಮೆಂಟಲ್ ಗಾರ್ಲಿಕ್’ ಎಂಬ ಸುಂದರವಾದ ಹೂಬಿಡುವ ಗಿಡಗಳ ಜಾತಿಗೆ ಸೇರಿರುವ ಈರುಳ್ಳಿ ಗಿಡವು ಸಹ ಸುಂದರವಾದ ಹೂವುಗಳನ್ನು ಬಿಡುತ್ತದೆ. ಆದರೆ ಜಗತ್ತಿನ ಕಾರ್ಯತಃ ಪ್ರತಿಯೊಂದು ಅಡಿಗೆಮನೆಯಲ್ಲಿ ಕಾಣಸಿಗುವಂಥ ಈರುಳ್ಳಿಯು ಒಂದು ಗೆಡ್ಡೆಯಾಗಿದೆ, ಮೂಲತಃ ಉಬ್ಬಿರುವ ಎಲೆ ಕವಚಗಳುಳ್ಳ ನೆಲದಡಿಯಲ್ಲಿ ಬೆಳೆಯುವ ಮೊಗ್ಗು.
ಈ ತರಕಾರಿಯು, ಮನುಷ್ಯನು ಬೆಳೆಸಿರುವಂಥ ಅತಿ ಹಳೆಯಕಾಲದ ಬೆಳೆಗಳಲ್ಲಿ ಒಂದಾಗಿದೆ. ಇದರ ಬಳಕೆಯು ಎಷ್ಟು ವ್ಯಾಪಕವಾಗಿತ್ತೆಂಬುದನ್ನು ಬೈಬಲ್ ದಾಖಲೆಯ ಮೂಲಕ ಪತ್ತೆಹಚ್ಚಸಾಧ್ಯವಿದೆ. ಅದರ ಪ್ರಕಾರ, ಸುಮಾರು ಸಾ.ಶ.ಪೂ. 1513ರಷ್ಟಕ್ಕೆ ಇಸ್ರಾಯೇಲಿನ ಜನರು, ಐಗುಪ್ತದಲ್ಲಿ ದಾಸತ್ವದಲ್ಲಿದ್ದಾಗ ತಿಂದಿದ್ದಂಥ ಈರುಳ್ಳಿಗಾಗಿ ಹಾತೊರೆಯುತ್ತಿದ್ದರು.—ಅರಣ್ಯಕಾಂಡ 11:5.
ಆದರೆ ಈರುಳ್ಳಿಯು ವಿಭಿನ್ನ ಸಂಸ್ಕೃತಿಗಳ ಜನರ ನಾಲಗೆಗಳಿಗೆ ರುಚಿಸುವಷ್ಟು ಖ್ಯಾತಿಯನ್ನು ನೀಡಿರುವಂಥ ಸಂಗತಿ ಯಾವುದು? ಅದರಲ್ಲಿರುವ ಗಂಧಕ ಪದಾರ್ಥಗಳೇ. ಇದರಿಂದಾಗಿ ಅದಕ್ಕೆ ಒಂದು ವಿಶಿಷ್ಟ ತೆರದ ಸುವಾಸನೆ ಮತ್ತು ಖಾರ ರುಚಿಯಿದೆ. ಮತ್ತು ಅದರ ಗಂಧಕಾಮ್ಲವೇ, ಎಲ್ಲರಿಗೂ ತಿಳಿದಿರುವ ಆ ಕಣ್ಣೀರುಗಳನ್ನು ಬರಿಸುವ ಪದಾರ್ಥವಾಗಿದೆ.
ಬರೀ ರಸಭಕ್ಷ್ಯ ಮಾತ್ರವಲ್ಲ
ಈರುಳ್ಳಿಗಳು ಮಾನವಕುಲದ ಆರೋಗ್ಯಕ್ಕೆ ಉಪಯುಕ್ತವಾಗಿವೆ. ಅವುಗಳಲ್ಲಿ, ಕ್ಯಾಲ್ಸಿಯಂ, ಫಾಸ್ಫೋರಸ್ ಮತ್ತು ಅಸ್ಕಾರ್ಬಿಕ್ ಆಮ್ಲ ಇಲ್ಲವೆ ವಿಟಮಿನ್ ‘ಸಿ’ಯಂಥ ಪೌಷ್ಠಿಕಾಂಶಗಳಿವೆ. ವಿಶೇಷವಾಗಿ, ಈರುಳ್ಳಿಗಿರುವ ಔಷಧೀಯ ಗುಣಗಳಿಗಾಗಿ ಅದನ್ನು ಇತಿಹಾಸದಾದ್ಯಂತ ಗಣ್ಯಮಾಡಲಾಗಿದೆ. ಈಗಲೂ ಅದನ್ನು ಶೀತ, ಕಂಠಕುಹರದ ಉರಿಯೂತ, ಅಪಧಮನಿಕಾಠಿನ್ಯ, ಪರಿಧಮನಿಯ ಹೃದ್ರೋಗ, ಮಧುಮೇಹ ಮತ್ತು ಆಸ್ತಮಾದಂಥ ಕಾಯಿಲೆಗಳಿಗಾಗಿ ಉಪಯೋಗಿಸಲಾಗುತ್ತದೆ. ಈರುಳ್ಳಿಯು ಪೂತಿನಾಶಕ, ಕಾಲೆಸ್ಟರಾಲ್-ವಿರೋಧಿ, ಉರಿಯೂತ-ವಿರೋಧಿ, ರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುವುದನ್ನು ತಡೆಯುವ ಮತ್ತು ಕ್ಯಾನ್ಸರ್-ವಿರೋಧಿ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಈರುಳ್ಳಿಯು ಬಿಳಿ, ಹಳದಿ, ಕಂದುಬಣ್ಣ, ಹಸಿರು, ಕೆಂಪು, ಕೆನ್ನೀಲಿ ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಸಿಗುತ್ತದೆ. ನೀವು ಈರುಳ್ಳಿಯನ್ನು ಫ್ರೆಷ್ ಆಗಿ ತಿನ್ನಬಹುದು, ಬೇಯಿಸಿ, ಕ್ಯಾನ್ಮಾಡಿಸಿ, ಉಪ್ಪಿನಕಾಯಿ ಮಾಡಿ, ಒಣಗಿಸಿ, ಪುಡಿಮಾಡಿ ತಿನ್ನಬಹುದು, ಅಥವಾ ಬಿಲ್ಲೆಗಳ ಇಲ್ಲವೆ ಕ್ಯೂಬ್ ರೂಪದಲ್ಲಿಯೂ ತಿನ್ನಬಹುದು. ಈರುಳ್ಳಿಯು ನೀವು ಸ್ವಲ್ಪ ಕಣ್ಣೀರನ್ನು ಸುರಿಸುವಂತೆ ಮಾಡಬಹುದಾದರೂ ಒಂದು ಅದ್ಭುತ ತರಕಾರಿಯಾಗಿದೆ ಅಲ್ಲವೇ? (g04 11/8)