ಟೊಮಾಟೊ ಬಹೂಪಯೋಗಿ “ತರಕಾರಿ”
ಟೊಮಾಟೊ ಬಹೂಪಯೋಗಿ “ತರಕಾರಿ”
ಬ್ರಿಟನ್ನ ಎಚ್ಚರ! ಲೇಖಕರಿಂದ
“ಟೊಮಾಟೊಗಳಿಲ್ಲದಿದ್ದರೆ ನನಗೆ ಅಡಿಗೆಮಾಡಲಿಕ್ಕೇ ಆಗುವುದಿಲ್ಲ!” ಎಂದು ಇಟಲಿಯ ಗೃಹಿಣಿಯೊಬ್ಬಳು ಉದ್ಗರಿಸುತ್ತಾಳೆ. ಲೋಕದಾದ್ಯಂತ ಇರುವ ಇತರ ಅಸಂಖ್ಯಾತ ಅಡಿಗೆಗಾರರ ಅನಿಸಿಕೆಯೂ ಇದೇ ಆಗಿದೆ. ವಾಸ್ತವದಲ್ಲಿ, ಅನೇಕ ಸಂಸ್ಕೃತಿಗಳ ಪಾಕವಿಧಾನಗಳಲ್ಲಿ ಟೊಮಾಟೊ ಒಂದು ಪದಾರ್ಥವಾಗಿದೆ. ಮನೆಯಲ್ಲಿ ಚಿಕ್ಕ ಕೈತೋಟವಿರುವವರು ಬೇರೆ ಯಾವುದೇ ಆಹಾರಕ್ಕಿಂತಲೂ ಇದನ್ನು ಹೆಚ್ಚಾಗಿ ಬೆಳೆಸುತ್ತಾರೆ. ಆದರೆ ಇದು ಹಣ್ಣೊ ತರಕಾರಿಯೊ?
ಸಸ್ಯಶಾಸ್ತ್ರಕ್ಕನುಸಾರ ಟೊಮಾಟೊ ಒಂದು ಹಣ್ಣು, ಏಕೆಂದರೆ ಇದು ಬೀಜಗಳಿರುವ ಒಂದು ಕಾಯಿಯಾಗಿದೆ. ಆದರೆ, ಬಹುತೇಕ ಜನರು ಇದನ್ನು ಒಂದು ತರಕಾರಿಯಾಗಿ ಪರಿಗಣಿಸುತ್ತಾರೆ, ಏಕೆಂದರೆ ಇದನ್ನು ಸಾಮಾನ್ಯವಾಗಿ ಊಟದ ಮುಖ್ಯ ಭಕ್ಷ್ಯದೊಂದಿಗೆ ಸೇವಿಸಲಾಗುತ್ತದೆ. ಈ ರುಚಿಕರ ಆಹಾರಪದಾರ್ಥಕ್ಕೆ ಚಿತ್ತಾಕರ್ಷಕವಾದ ಚರಿತ್ರೆಯಿದೆ.
ಆಸಕ್ತಿಕರ ಚರಿತ್ರೆ
ಮೆಕ್ಸಿಕೊದಲ್ಲಿ ಆ್ಯಸ್ಟೆಕರು ಆಹಾರಕ್ಕಾಗಿ ಟೊಮಾಟೊ ಕೃಷಿಯನ್ನು ಆರಂಭಿಸಿದರು. 16ನೆಯ ಶತಮಾನದ ಆದಿಭಾಗದಲ್ಲಿ ಅಲ್ಲಿಂದ ಹಿಂದಿರುಗುತ್ತಿದ್ದ ಸ್ಪ್ಯಾನಿಷ್ ವಿಜಯಿಗಳು ಅದನ್ನು ಸ್ಪೆಯ್ನ್ಗೆ ಕೊಂಡೊಯ್ದರು ಮತ್ತು ಟೊಮಾಟ್ಲ್ ಎಂಬ ನಾವಾಟಲ್ ಪದವನ್ನು ಬಳಸಿಕೊಂಡು, ಅದಕ್ಕೆ ಟೊಮಾಟೆ ಎಂದು ಹೆಸರಿಟ್ಟರು. ತದನಂತರ ಸ್ವಲ್ಪದರಲ್ಲೇ ಇಟಲಿ, ಉತ್ತರ ಆಫ್ರಿಕ ಮತ್ತು ಮಧ್ಯಪೂರ್ವದಲ್ಲಿದ್ದ ಸ್ಪ್ಯಾನಿಷ್ ಸಮುದಾಯಗಳು ಈ ಹೊಸ ಆಹಾರಪದಾರ್ಥವನ್ನು ಸವಿಯುತ್ತಿದ್ದರು.
ಆ ಶತಮಾನದ ಬಳಿಕ ಟೊಮಾಟೊ ಹಣ್ಣು ಉತ್ತರ ಯೂರೋಪನ್ನು ತಲಪಿತು. ಆರಂಭದಲ್ಲಿ ಇದನ್ನು ವಿಷಪೂರಿತ ಸಸ್ಯವಾಗಿ ಪರಿಗಣಿಸಲಾಯಿತು ಮತ್ತು ತೋಟದಲ್ಲಿ ಅಲಂಕಾರಕ್ಕಾಗಿ ಒಂದು ಕುರುಚಲು ಗಿಡದೋಪಾದಿ ಬೆಳೆಸಲಾಯಿತು. ಇದು ನೈಟ್ಷೇಡ್ ಸಸ್ಯಜಾತಿಗೆ ಸೇರಿದಂಥದ್ದಾಗಿದ್ದು, ಕಟುವಾದ ಪರಿಮಳವಿರುವ ಎಲೆಗಳು ಮತ್ತು ವಿಷಪೂರಿತ ಕಾಂಡಗಳುಳ್ಳದ್ದಾಗಿದ್ದರೂ, ಅದರ ಹಣ್ಣು ಮಾತ್ರ ಸಂಪೂರ್ಣ ಹಾನಿರಹಿತವಾದದ್ದಾಗಿ ಕಂಡುಬಂತು.
ಯೂರೋಪಿಗೆ ತರಲ್ಪಟ್ಟ ಮೊದಲ ಟೊಮಾಟೊಗಳು ಹಳದಿ ಬಣ್ಣದವುಗಳಾಗಿದ್ದಿರುವುದು ಸಂಭವನೀಯ, ಏಕೆಂದರೆ ಇಟಲಿಯ ಜನರು ಅದನ್ನು ಪೊಮೊಡೊರೊ (ಹೊಂಬಣ್ಣದ ಆ್ಯಪ್ಲ್) ಎಂದು ಕರೆದರು. ಆಂಗ್ಲರು ಇದನ್ನು ಟೊಮಾಟೆ ಎಂದು ಮತ್ತು ಸಮಯಾನಂತರ ಟೊಮಾಟೊ ಎಂದು ಕರೆದರು, ಆದರೆ “ಲವ್ ಆ್ಯಪ್ಲ್” ಎಂಬ ಹೆಸರು ಸಹ ಹೆಚ್ಚು ಜನಪ್ರಿಯವಾಯಿತು. ಯೂರೋಪಿನಿಂದ ಟೊಮಾಟೊ ಹಣ್ಣು ವಲಸೆಗಾರರ ಮೂಲಕ ಅಟ್ಲಾಂಟಿಕ್ ಮಾರ್ಗವಾಗಿ ಉತ್ತರ ಅಮೆರಿಕಕ್ಕೆ ಹಿಂದೆ ತರಲ್ಪಟ್ಟಿತು; ಅಲ್ಲಿ ಕಾಲಕ್ರಮೇಣ ಅದು 19ನೆಯ ಶತಮಾನದಷ್ಟಕ್ಕೆ ತುಂಬ ಅಮೂಲ್ಯವಾಗಿ ಪರಿಗಣಿಸಲ್ಪಡುತ್ತಿದ್ದ ಆಹಾರಪದಾರ್ಥವಾಗಿ ಪರಿಣಮಿಸಿತು.
ಅಸಾಮಾನ್ಯ ವೈವಿಧ್ಯತೆ ಮತ್ತು ಜನಪ್ರಿಯತೆ
ಟೊಮಾಟೊಗಳ ಬಣ್ಣ ಯಾವುದು ಎಂದು ಕೇಳಿನೋಡಿ, ಅದಕ್ಕೆ “ಕೆಂಪು ಬಣ್ಣ” ಎಂಬ ಉತ್ತರ ಸಿಗುವುದು ಸಂಭವನೀಯ. ಆದರೆ ಅವು ಹಳದಿ, ಕಿತ್ತಳೆ, ಗುಲಾಬಿ, ನೇರಳೆ, ಕಂದು, ಬಿಳಿ ಅಥವಾ ಹಸಿರು, ಮತ್ತು ಕೆಲವು ಪಟ್ಟೆಯಿರುವ ವೈವಿಧ್ಯಮಯ ಬಣ್ಣದವುಗಳೂ ಆಗಿರಸಾಧ್ಯವಿದೆ ಎಂಬುದು ನಿಮಗೆ ಗೊತ್ತಿತ್ತೋ? ಎಲ್ಲಾ ರೀತಿಯ ಟೊಮಾಟೊಗಳೂ ಗುಂಡಾಕಾರದವುಗಳಾಗಿರುವುದಿಲ್ಲ. ಕೆಲವು ಚಪ್ಪಟೆಯಾಗಿರುತ್ತವೆ ಅಥವಾ ಅಂಡಾಕಾರವಾಗಿರುತ್ತವೆ. ಅವು ಬಟಾಣಿ ಕಾಳಿನಷ್ಟು ಚಿಕ್ಕದಾಗಿರಬಹುದು ಅಥವಾ ಒಬ್ಬ ಮನುಷ್ಯನ ಮುಷ್ಟಿಯಷ್ಟು ದೊಡ್ಡದಾಗಿರಬಹುದು.
ಈ ಜನಪ್ರಿಯ ಆಹಾರವು ಉತ್ತರದಲ್ಲಿ ಐಸ್ಲೆಂಡ್ನಷ್ಟು ದೂರ ಮತ್ತು ದಕ್ಷಿಣದಲ್ಲಿ ನ್ಯೂ ಸೀಲೆಂಡ್ನಷ್ಟು ದೂರದಲ್ಲಿ ಬೆಳೆಸಲ್ಪಡುತ್ತದೆ. ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಐರೋಪ್ಯ ದೇಶಗಳು ಇವುಗಳನ್ನು ಹೆಚ್ಚಾಗಿ ಉತ್ಪಾದಿಸುತ್ತವೆ. ಹೆಚ್ಚು ಶೀತಲ ಹವಾಗುಣವಿರುವ ಪ್ರದೇಶಗಳು ಹಸಿರುಮನೆ ಉತ್ಪಾದನೆಯ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ನಿರಾರ್ದ್ರ ಪ್ರದೇಶಗಳು ಜಲಕೃಷಿಯ ತಾಂತ್ರಿಕತೆಯ—ಅಂದರೆ ಕೇವಲ ಜಲೀಯ ದ್ರಾವಣದಲ್ಲಿ ಸಸ್ಯಗಳನ್ನು ಬೆಳೆಸುವ ವಿಧಾನ—ಮೂಲಕ ಈ ಬೆಳೆಯನ್ನು ಬೆಳೆಸುತ್ತವೆ.
ಟೊಮಾಟೊ ಹಣ್ಣನ್ನು ಬೆಳೆಸುವುದು, ಹವ್ಯಾಸಿ ತೋಟಗಾರನ ಅಚ್ಚುಮೆಚ್ಚಿನ ಕೃಷಿಯಾಗಿಯೇ ಉಳಿದಿದೆ. ಇದನ್ನು ಬೆಳೆಸುವುದು ತುಂಬ ಸುಲಭ ಮತ್ತು ಒಂದು ಚಿಕ್ಕ ಕುಟುಂಬಕ್ಕೆ ಬೇಕಾದಷ್ಟು ಟೊಮಾಟೊಗಳನ್ನು ಒದಗಿಸಲು ಕೆಲವೇ ಸಸ್ಯಗಳು ಸಾಕು. ಸ್ಥಳದ ಅಭಾವವಿರುವಲ್ಲಿ, ಒಳಾಂಗಣದಲ್ಲಿ ಮತ್ತು ಕಿಟಕಿ ಕಟ್ಟಿನಲ್ಲಿ ಬೆಳೆಸಸಾಧ್ಯವಿರುವಂಥ ಜಾತಿಯ ಟೊಮಾಟೊ ಸಸ್ಯಗಳನ್ನು ಪಡೆಯಲು ಪ್ರಯತ್ನಿಸಿರಿ.
ಸಲಹೆಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ
ಶೀತಲ ತಾಪಮಾನವು ಟೊಮಾಟೊಗಳ ಸುವಾಸನೆಯನ್ನು ಹಾಳುಮಾಡಿಬಿಡುತ್ತದೆ, ಆದುದರಿಂದ ಅವುಗಳನ್ನು ಫ್ರಿಜ್ನಲ್ಲಿ ಶೇಖರಿಸಿಡಬೇಡಿ. ಇವುಗಳನ್ನು ಹೆಚ್ಚು ಬೇಗನೆ ಹಣ್ಣುಮಾಡಬೇಕಾದರೆ, ಹಣ್ಣಾದ ಒಂದು ಟೊಮಾಟೊ ಅಥವಾ ಬಾಳೆಹಣ್ಣು ಇರುವ ಒಂದು ಪಾತ್ರೆಯಲ್ಲಿ ಹಾಕಿ ಸೂರ್ಯನ ಬೆಳಕು ಬೀಳುವಂಥ ಕಿಟಕಿಯ ಬಳಿ ಇಡಸಾಧ್ಯವಿದೆ ಇಲ್ಲವೆ ಬ್ರೌನ್ ಪೇಪರ್ನ ಚೀಲದಲ್ಲಿ ಮುಚ್ಚಿಟ್ಟು ಕೊಠಡಿಯ ತಾಪಮಾನದಲ್ಲಿ ಕೆಲವು ದಿವಸಗಳ ವರೆಗೆ ಇಡಸಾಧ್ಯವಿದೆ.
ಟೊಮಾಟೊ ನಿಮ್ಮ ಆರೋಗ್ಯಕ್ಕೆ ಒಳ್ಳೇದು. ಅವುಗಳಲ್ಲಿ ಎ, ಸಿ ಮತ್ತು ಇ ಜೀವಸತ್ವಗಳಿವೆ ಹಾಗೂ ಪೊಟಾಷಿಯಮ್, ಕ್ಯಾಲ್ಸಿಯಮ್ ಮತ್ತು ಖನಿಜ ಲವಣಗಳು ಇವೆ. ಇವು, ಕ್ಯಾನ್ಸರ್ ಮತ್ತು ಹೃದ್ರೋಗದಂಥ ಕೆಲವೊಂದು ಅಸ್ವಸ್ಥತೆಗಳ ಅಪಾಯವನ್ನು ಕಡಿಮೆಮಾಡುತ್ತದೆಂದು ಹೇಳಲಾಗುವ ಒಂದು ಪ್ರಬಲ ಆಮ್ಲನಿರೋಧಕ ವಸ್ತುವಾಗಿರುವ ಲೈಕೊಪೀನ್ನ ಅತ್ಯುತ್ತಮ ಆಗರವಾಗಿವೆ ಎಂಬುದನ್ನು ಸಹ ಸಂಶೋಧಕರು ಕಂಡುಹಿಡಿಯುತ್ತಿದ್ದಾರೆ. ಟೊಮಾಟೊಗಳು 93ರಿಂದ 95 ಪ್ರತಿಶತ ನೀರನ್ನು ಒಳಗೂಡಿವೆ, ಮತ್ತು ತೂಕದ ಬಗ್ಗೆ ಜಾಗ್ರತೆ ವಹಿಸುತ್ತಿರುವವರಿಗೆ ಇವುಗಳಲ್ಲಿ ತುಂಬ ಕಡಿಮೆ ಕ್ಯಾಲೊರಿಗಳಿವೆ ಎಂಬುದನ್ನು ಕೇಳಿ ಸಂತೋಷವಾಗಬಹುದು.
ಸ್ವಾದಿಷ್ಟಕರವಾದ ಬಹೂಪಯೋಗಿ ಹಣ್ಣು
ನೀವು ಟೊಮಾಟೊಗಳನ್ನು ಕೊಳ್ಳುವಾಗ ಯಾವ ರೀತಿಯ ಹಣ್ಣುಗಳನ್ನು ಆರಿಸಿಕೊಳ್ಳುತ್ತೀರಿ? ಎಲ್ಲರಿಗೂ ಗೊತ್ತಿರುವ ಕೆಂಪು ಟೊಮಾಟೊ ಅಂದರೆ ಅತ್ಯುತ್ಕೃಷ್ಟ ರೀತಿಯ ಟೊಮಾಟೊಗಳು ಸ್ಯಾಲಡ್ಗಳಿಗೆ, ಸೂಪ್ಗಳಿಗೆ ಮತ್ತು ಸಾಸ್ಗಳಿಗೆ ಸೂಕ್ತವಾದವುಗಳಾಗಿವೆ. ಚಿಕ್ಕ ಗಾತ್ರದ ಕೆಂಪು, ಕಿತ್ತಳೆ ಮತ್ತು ಹಳದಿ ಚೆರಿ ಟೊಮಾಟೊಗಳು ತುಂಬ ಸಿಹಿಯಾಗಿರುವುದರಿಂದ ಅವುಗಳಲ್ಲಿ ಸಕ್ಕರೆ ಅಂಶವು ಹೆಚ್ಚಾಗಿರುತ್ತದೆ ಮತ್ತು ಅವು ಹಸಿಯಾಗಿಯೇ ತಿನ್ನಲು ಚೆನ್ನಾಗಿರುತ್ತವೆ. ನೀವು ಪೀಟ್ಸವನ್ನೊ ಪಾಸ್ಟವನ್ನೊ ಮಾಡುತ್ತಿರುವಲ್ಲಿ, ಗಟ್ಟಿಯಾದ ಮಾಂಸಲ ಒಳಭಾಗವಿರುವ ಅಂಡಾಕಾರದ ಪ್ಲಮ್ ಟೊಮಾಟೊಗಳನ್ನು ಆಯ್ಕೆಮಾಡುವುದು ಒಳ್ಳೇದು. ದನದ ಮಾಂಸದಂತಿರುವ—ಇದರ ದಟ್ಟವಾದ ಮಾಂಸಲ ರಚನೆಯಿಂದಾಗಿ ಹೀಗೆ ಕರೆಯಲಾಗುತ್ತದೆ—ಟೊಮಾಟೊಗಳು ಸ್ಟಫಿಂಗ್ ಅಥವಾ ಬೇಕಿಂಗ್ಗೆ ಹೇಳಿಮಾಡಿಸಿದಂತಿವೆ. ಕೆಲವೊಮ್ಮೆ ವಿಶಿಷ್ಟವಾದ ಪಟ್ಟೆಗಳನ್ನು ಹೊಂದಿರುವ ಹಸಿರು ಟೊಮಾಟೊಗಳನ್ನು ರುಚಿಗಾಗಿ ಬಳಸುವ ಪದಾರ್ಥವಾಗಿ ಉಪಯೋಗಿಸಸಾಧ್ಯವಿದೆ. ರುಚಿಕರವಾದ ತರಕಾರಿಗಳು, ಮೊಟ್ಟೆ, ಪಾಸ್ಟ, ಮಾಂಸ ಮತ್ತು ಮೀನಿನ ಬೇರೆ ಬೇರೆ ಪದಾಥಗಳಿಗೆ ಟೊಮಾಟೊಗಳು ತಮ್ಮ ವಿಶಿಷ್ಟ ಸ್ವಾದ ಹಾಗೂ ವರ್ಣದಿಂದ ಮೆರುಗು ನೀಡುತ್ತವೆ. ನಿಮಗೆ ತಾಜಾ ಟೊಮಾಟೊಗಳು ದೊರಕದಿರುವಲ್ಲಿ, ನಿಮ್ಮ ಸ್ಥಳಿಕ ಅಂಗಡಿಗಳಲ್ಲಿ ಸಂಸ್ಕರಿಸಲ್ಪಟ್ಟ ಟೊಮಾಟೊ ಉತ್ಪನ್ನಗಳಂತೂ ಖಂಡಿತ ಸಿಗುವವು.
ಅಡಿಗೆಮಾಡುವ ಪ್ರತಿಯೊಬ್ಬ ವ್ಯಕ್ತಿಯ ಬಳಿ ಅವನದ್ದೇ ಆದ ಅಥವಾ ಅವಳದ್ದೇ ಆದ ಪಾಕವಿಧಾನಗಳಿರುತ್ತವೆ, ಆದರೆ ಇಲ್ಲಿ ಕೆಲವು ಸಲಹೆಗಳು ಕೊಡಲ್ಪಟ್ಟಿವೆ, ನೀವು ಇವುಗಳನ್ನು ಪ್ರಯತ್ನಿಸಿ ನೋಡಬಹುದು.
1. ಹಸಿವನ್ನು ಹೆಚ್ಚಿಸುವ (ಅಪಿಟೈಸರ್) ಪದಾರ್ಥವನ್ನು ತಯಾರಿಸಲಿಕ್ಕಾಗಿ, ಟೊಮಾಟೊ, ಮಾಟ್ಸರೆಲ ಚೀಸ್ ಮತ್ತು ಆವಕಾಡೊ ಹಣ್ಣುಗಳ ಹೋಳುಗಳನ್ನು ಒಂದರಮೇಲೆ ಇನ್ನೊಂದಾಗಿ ಇಡಿರಿ. ಅದರ ಮೇಲೆ ಆಲಿವ್ ಎಣ್ಣೆಯ ಸಾಸ್ ಅನ್ನು ಮತ್ತು ಕಾಳುಮೆಣಸಿನ ಪುಡಿಯನ್ನು ಸಿಂಪಡಿಸಿ, ತುಳಸಿ ಎಲೆಗಳಿಂದ ಅಂದವಾಗಿ ಅಲಂಕರಿಸಿ.
2. ಟೊಮಾಟೊ, ಸೌತೇಕಾಯಿ ಮತ್ತು ಫೆಟ ಚೀಸನ್ನು ಚಿಕ್ಕ ತುಂಡುಗಳಾಗಿ ಮಾಡಿ, ಅದಕ್ಕೆ ಕಪ್ಪು ಆಲಿವ್ ಹಣ್ಣುಗಳು ಮತ್ತು ಕತ್ತರಿಸಿದ ಕೆಂಪು ಈರುಳ್ಳಿಯನ್ನು ಸೇರಿಸಿ ಗ್ರೀಕ್ ಸ್ಯಾಲಡ್ ಅನ್ನು ಮಾಡಿ. ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ, ಆಲಿವ್ ಎಣ್ಣೆ ಮತ್ತು ನಿಂಬೆ ರಸದ ಸಾಸ್ನೊಂದಿಗೆ ಬಡಿಸಿ.
3. ಆಗ ತಾನೇ ಕತ್ತರಿಸಿದ ಟೊಮಾಟೊಗಳು, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತೊಂಬರಿ ಸೊಪ್ಪಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಮೆಕ್ಸಿಕನ್ ಸಾಲ್ಸವನ್ನು ತಯಾರಿಸಿ.
4. ಪಾಸ್ಟಕ್ಕಾಗಿ ಸರಳವಾದರೂ ರುಚಿಕರವಾದ ಟೊಮಾಟೊ ಸಾಸ್ ಅನ್ನು ತಯಾರಿಸಲಿಕ್ಕಾಗಿ, ಒಂದು ಕ್ಯಾನ್ ಕತ್ತರಿಸಿದ ಟೊಮಾಟೊವನ್ನು ಬಾಣಲೆಯಲ್ಲಿ ಹಾಕಿ, ಅದಕ್ಕೆ ಒಂದು ಚಿಟಿಕೆ ಸಕ್ಕರೆ (ಅಥವಾ ಕೆಚಪ್), ಸ್ವಲ್ಪ ಆಲೀವ್ ಎಣ್ಣೆ, ಸಣ್ಣ ಚೂರುಗಳಾಗಿ ಕತ್ತರಿಸಿದ ಒಂದು ಬೆಳ್ಳುಳ್ಳಿ ಎಸಳು, ಮತ್ತು ತುಳಸಿ, ಬೇ ಗಿಡದ ಎಲೆಯಂಥ ಕೆಲವು ಮೂಲಿಕೆಗಳು ಅಥವಾ ಆರಿಗಾನೋ ಸೊಪ್ಪು ಹಾಗೂ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿರಿ. ಈ ಮಿಶ್ರಣವನ್ನು ಬೇಯಿಸಿ, ಸುಮಾರು 20 ನಿಮಿಷಗಳ ತನಕ ಅಂದರೆ ಸಾಸ್ ಗಟ್ಟಿಯಾಗುವ ವರೆಗೆ ಸಣ್ಣ ಉರಿಯಲ್ಲಿ ಕುದಿಸಿರಿ. ಬೇಯಿಸಲ್ಪಟ್ಟ ಮತ್ತು ಬಸಿಯಲ್ಪಟ್ಟ ಪಾಸ್ಟದ ಮೇಲೆ ಈ ಸಾಸ್ ಅನ್ನು ಹಾಕಿ.
ನಮ್ಮ ಉಪಯೋಗಕ್ಕಾಗಿ ಸೃಷ್ಟಿಸಲ್ಪಟ್ಟಿರುವ ಅದ್ಭುತಕರವಾದ ವಿವಿಧ ಆಹಾರಗಳಲ್ಲಿ ಬಹೂಪಯೋಗಿ ಟೊಮಾಟೊ ಹಣ್ಣು ಒಂದು ಉದಾಹರಣೆಯಾಗಿದೆ. (g05 3/8)